ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಮತ್ತೆ ಹಿಂಡೆನ್‌ಬರ್ಗ್‌ ಕಂಪನ
ಆಳ–ಅಗಲ | ಮತ್ತೆ ಹಿಂಡೆನ್‌ಬರ್ಗ್‌ ಕಂಪನ
ಅದಾನಿ ಸಮೂಹ–ಸೆಬಿ ಅಧ್ಯಕ್ಷೆ ನಂಟು; ಧವಲ್ ದಂಪತಿ ವಿರುದ್ಧ ಹಲವು ಆರೋಪ
Published 13 ಆಗಸ್ಟ್ 2024, 0:23 IST
Last Updated 13 ಆಗಸ್ಟ್ 2024, 0:23 IST
ಅಕ್ಷರ ಗಾತ್ರ

ಅದಾನಿ ಸಮೂಹ ವಹಿವಾಟು ನಡೆಸುತ್ತಿದ್ದ ಬರ್ಮುಡಾ/ಮಾರಿಷಸ್‌ನ ‘ಶೆಲ್‌’ ಕಂಪನಿಗಳಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ಧವಲ್ ಪಾಲುದಾರಿಕೆ ಹೊಂದಿದ್ದಾರೆ ಎಂಬುದು ಹಿಂಡೆನ್‌ಬರ್ಗ್‌ ರಿಸರ್ಚ್‌ ಕಂಪನಿ ಮಾಡಿರುವ ಹೊಸ ಆರೋಪ. ಇದೇ ಕಾರಣಕ್ಕೆ 2023ರ ಜನವರಿಯಲ್ಲಿ ಅದಾನಿ ಸಮೂಹದ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಪ್ರಕಟವಾದ ತನ್ನ ವರದಿಯ ಬಗ್ಗೆ ಸೆಬಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅದು ಹೇಳಿದೆ.  

ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ಬರ್ಮಡಾದ ‘ಗ್ಲೋಬಲ್ ಡೈನಮಿಕ್ ಆಪರ್ಚುನಿಟೀಸ್ ಫಂಡ್’ನಲ್ಲಿ (ಜಿಡಿಒಎಫ್‌) ಹೂಡಿಕೆ ಮಾಡಿದ್ದು, ಅದು ಮತ್ತೆ ಮಾರಿಷನ್‌ನ ‘ಐಪಿಇ ಪ್ಲಸ್‌ ಫಂಡ್‌ ಒನ್‌’ನಲ್ಲಿ ಹೂಡಿಕೆ ಮಾಡಿದೆ. ಆ ಬರ್ಮುಡಾ ಮತ್ತು ಮಾರಿಷಸ್ ವ್ಯವಹಾರಗಳಲ್ಲಿ ಮಾಧವಿ ಬುಚ್ ಮತ್ತು ಅವರ ಪತಿ ಪಾಲು  ಹೊಂದಿದ್ದಾರೆ’ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿದೆ.

ವರದಿಯ ಪ್ರಕಾರ, ಮಾಧವಿ ಮತ್ತು ಅವರ ಪತಿ ಧವಲ್ ಮೊದಲು ಸಿಂಗಪುರದಲ್ಲಿ ಐಪಿಇ ಪ್ಲಸ್ ಫಂಡ್ ಒನ್‌ನಲ್ಲಿ 2015ರ ಜೂನ್ 5ರಂದು ಖಾತೆ ತೆರೆದರು. ಹೂಡಿಕೆಯ ಮೂಲ ಉಲ್ಲೇಖಿಸುವಾಗ ದಂಪತಿಯ ‘ಸಂಬಳ’ ಎಂದು ದೃಢೀಕೃತ ಘೋಷಣೆಯಲ್ಲಿ ತಿಳಿಸಿರುವುದಾಗಿ ವರದಿಯಲ್ಲಿದೆ. ದಂಪತಿಯ ಹೂಡಿಕೆಯ ನಿವ್ವಳ ಮೌಲ್ಯ ₹84 ಕೋಟಿ ಎಂದು  ದಾಖಲಿಸಲಾಗಿತ್ತು. 

ವಿನೋದ್ ಅದಾನಿ ನಿಯಂತ್ರಣದ ಬರ್ಮುಡಾ ಮತ್ತು ಮಾರಿಷಸ್‌ನ ಹೂಡಿಕೆಗಳನ್ನು ರೌಂಡ್ ಟ್ರಿಪ್ ಫಂಡ್‌ಗಳಿಗೆ ಮತ್ತು ಷೇರು ಬೆಲೆಯನ್ನು ಹೆಚ್ಚಿಸಲು ಬಳಸಲಾಗಿದೆ ಎಂದು ಕೂಡ ಹಿಂಡೆನ್‌ಬರ್ಗ್ ಆರೋಪಿಸಿದೆ.

ಮಾಧವಿ ಬುಚ್ ಅವರು ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಆಯ್ಕೆಯಾಗಿದ್ದು 2017ರ ಏಪ್ರಿಲ್‌ನಲ್ಲಿ. ಅದಕ್ಕೆ ಕೆಲವೇ ವಾರಗಳ ಮುಂಚೆ, ಅಂದರೆ 2017ರ ಮಾರ್ಚ್‌ನಲ್ಲಿ, ಮಾಧವಿ ಅವರ ಪತಿ ಧವಲ್ ಬುಚ್ ಅವರು ಮಾರಿಷಸ್‌ನ ಕಂಪನಿಗೆ ಪತ್ರ ಬರೆದು, ತಮ್ಮ ಪತ್ನಿಯ ಖಾತೆಯಲ್ಲಿರುವ ಹಣವನ್ನೂ ತಮ್ಮ ಖಾತೆಗೆ ವರ್ಗಾಯಿಸುವಂತೆ ವಿನಂತಿಸಿಕೊಂಡಿದ್ದರು. ಇನ್ನು ಮುಂದೆ ತಾವು ಏಕಾಂಗಿಯಾಗಿ ಖಾತೆ ನಿರ್ವಹಣೆ ಮಾಡುವುದಾಗಿಯೂ ಅವರು ತಿಳಿಸಿದ್ದರು ಎಂದು ಉಲ್ಲೇಖಿಸಿರುವ ಹಿಂಡೆನ್‌ಬರ್ಗ್, ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಬಿಡುಗಡೆ ಮಾಡಿದೆ. 2018ರ ಫೆಬ್ರುವರಿ 25ರಂದು, ಸೆಬಿಯ ಪೂರ್ಣಾವಧಿ ಸದಸ್ಯರಾಗಿ
ರುವಾಗಲೇ, ಮಾಧವಿ ಬುಚ್ ಅವರು ಎಲ್ಲ ಷೇರುಗಳನ್ನು ವಾಪಸ್ ಪಡೆಯಲು ತಮ್ಮ ವೈಯಕ್ತಿಕ ಇ–ಮೇಲ್ ಮೂಲಕ ಗಂಡನ ಹೆಸರಿನಲ್ಲಿ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.

2013ರಲ್ಲಿ ಅಗೋರ ಪಾರ್ಟ್‌ನರ್ಸ್‌ ಎನ್ನುವ ವ್ಯಾಪಾರಿ ಮತ್ತು ನಿರ್ವಹಣಾ ಕನ್ಸಲ್ಟೆನ್ಸಿ ಕಂಪನಿ ಸಿಂಗಪುರದಲ್ಲಿ ನೋಂದಣಿಯಾಯಿತು. ಅದರ ಶೇ 100ರಷ್ಟು ಷೇರುಗಳ ಒಡೆತನ (ಸಂಪೂರ್ಣ ಮಾಲೀಕತ್ವ) ಮಾಧವಿ ಬುಚ್ ಅವರದ್ದಾಗಿತ್ತು. 2017ರಲ್ಲಿ ಸೆಬಿಯ ಪೂರ್ಣಾವಧಿ ಸದಸ್ಯರಾದ ಮಾಧವಿ, 2022ರ ಮಾರ್ಚ್ 1ರಂದು ಅದರ ಅಧ್ಯಕ್ಷರಾದರು. ಆದರೂ ಮಾರ್ಚ್ 16ರವರೆಗೆ ಅವರು ಅಗೋರ ಪಾರ್ಟ್‌ನರ್ಸ್‌ನ ಸಂಪೂರ್ಣ ಮಾಲೀಕತ್ವ ಹೊಂದಿದ್ದರು. ನಂತರ ಹಿತಾಸಕ್ತಿ ಸಂಘರ್ಷದ ಪ್ರಶ್ನೆ ಉದ್ಭವವಾಗಬಹುದು ಎಂದು, ಅಗೋರ ಪಾರ್ಟ್‌ನರ್ಸ್‌ ಮಾಲೀಕತ್ವವನ್ನು ಪತಿಗೆ ವರ್ಗಾಯಿಸಿದ್ದರು. ಇದಲ್ಲದೇ ಹಣಕಾಸು ನಿರ್ವಹಣೆ, ಮಾರುಕಟ್ಟೆ, ರಿಯಲ್ ಎಸ್ಟೇಟ್ ಇದ್ಯಾವುದರ ಅನುಭವವೂ ಇಲ್ಲದಿದ್ದ ಧವಲ್ ಬುಚ್ ಅವರು ಪ್ರಮುಖ ರಿಯಲ್ ಎಸ್ಟೇಟ್ ಇನ್‌ವೆಸ್ಟ್‌ಮೆಂಟ್ ಟ್ರಸ್ಟ್ (ಆರ್‌ಇಐಟಿ) ಆದ ಬ್ಲ್ಯಾಕ್‌ಸ್ಟೋನ್‌ನ ಹಿರಿಯ ಸಲಹೆಗಾರರಾಗಿ 2019ರಲ್ಲಿ ನೇಮಕಗೊಂಡರು. ಆಗ ಮಾಧವಿ ಬುಚ್ ಅವರು ಸೆಬಿಯ ಪೂರ್ಣಾವಧಿ ಸದಸ್ಯರಾಗಿದ್ದರು. ಧವಲ್ ಅವರ ಅವಧಿಯಲ್ಲಿ ಬ್ಲ್ಯಾಕ್‌ಸ್ಟೋನ್‌ನ ಪ್ರಸ್ತುತಿಗಳಾದ ಮೈಂಡ್ ಸ್ಪೇಸ್ ಮತ್ತು ನೆಕ್ಸಸ್ ಸೆಲೆಕ್ಟ್ ಟ್ರಸ್ಟ್‌ಗಳಿಗೆ ಆರಂಭಿಕ ಸಾರ್ವಜನಿಕ ಹೂಡಿಕೆಗೆ (ಐಪಿಒ) ಸೆಬಿಯ ಅನುಮೋದನೆ ಸಿಕ್ಕಿತು. ಅಲ್ಲದೆ ಅವರ ಅವಧಿಯಲ್ಲಿ ಆರ್‌ಇಐಟಿಯ ಪ್ರಮುಖ ನಿಯಮಗಳಿಗೆ ತಿದ್ದುಪಡಿ ತರಲಾಯಿತು. ಮಾಧವಿ ಅವರು ತಮ್ಮ ಸೆಬಿಯ ಅಧ್ಯಕ್ಷ ಸ್ಥಾನ ಬಳಸಿಕೊಂಡು ಬ್ಲ್ಯಾಕ್‌ಸ್ಟೋನ್‌ಗೆ ಹಲವು ರೀತಿ ನೆರವಾಗಿದ್ದಾರೆ ಎಂದು ಹಿಂಡೆನ್‌ಬರ್ಗ್ ವರದಿ ತಿಳಿಸಿದೆ.

ಮಾಧವಿ ಬುಚ್ ಅವರು ಅಗೋರ ಅಡ್ವೈಸರಿ ಎನ್ನುವ ಭಾರತದ ಕನ್ಸಲ್ಟೆನ್ಸಿ ಬ್ಯುಸಿನೆಸ್‌ನಲ್ಲಿ ಶೇ 99ರ ಷೇರುಗಳನ್ನು ಹೊಂದಿದ್ದು, ಅವರ ಪತಿ ಅದರ ನಿರ್ದೇಶಕರಾಗಿದ್ದಾರೆ. 2022ರಲ್ಲಿ ಆ ಕನ್ಸಲ್ಟೆನ್ಸಿಯು ₹2.19 ಕೋಟಿ ಆದಾಯ ಘೋಷಿಸಿದ್ದು, ಅದು ಅವರ ಸೆಬಿಯ ಸಂಬಳಕ್ಕಿಂತ 4.4 ಪಟ್ಟು ಹೆಚ್ಚು ಮೊತ್ತವಾಗಿದೆ ಎಂದು ಅದು ಆರೋಪಿಸಿದೆ.

ಹಿಂದೆ ಅದಾನಿ ಸಮೂಹದ ಷೇರು ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಅದಾನಿ ಸಮೂಹದ ಷೇರುದಾರರಿಗೆ ವಿದೇಶದಲ್ಲಿ ಸಹಾಯ ಮಾಡಿದವರು ಯಾರೆಂಬುದನ್ನು ಸೆಬಿ ತನ್ನ ತನಿಖೆಯಲ್ಲಿ ಪತ್ತೆ ಹಚ್ಚದಿದ್ದ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಸೆಳೆದಿತ್ತು. ಅದನ್ನು ಉಲ್ಲೇಖಿಸಿರುವ ಹಿಂಡೆನ್‌ಬರ್ಗ್ ವರದಿಯು, ಸೆಬಿ ಸರಿಯಾದ ರೀತಿಯಲ್ಲಿ ತನಿಖೆ ಮಾಡಿದ್ದರೆ, ಅದರ ಅಧ್ಯಕ್ಷರೇ ಸಿಕ್ಕಿಬೀಳುತ್ತಿದ್ದರು. ಹಾಗಾಗಿ ಇದರಲ್ಲಿ ಅಚ್ಚರಿಪಡುವಂಥದ್ದು ಏನೂ ಇಲ್ಲ ಎಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT