2025ರಲ್ಲಿ ಸುಪ್ರೀಂ ಕೋರ್ಟ್ ಸಿವಿಲ್, ಸೇವಾ ವಲಯ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ತೀರ್ಪುಗಳನ್ನು ನೀಡಿದೆ. ರಾಜ್ಯಗಳ ಮಸೂದೆಗಳನ್ನು ರಾಜ್ಯಪಾಲರು ಅಂಗೀಕರಿಸುವುದು, ವಕ್ಫ್ ಕಾಯ್ದೆ ತಿದ್ದುಪಡಿ, ಬೀದಿ ನಾಯಿಗಳಿಗೆ ಸಂಬಂಧಿಸಿದ ಆದೇಶಗಳು ಈ ಪೈಕಿ ಸೇರಿವೆ.

ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರಿಗೆ ಕಾಲಮಿತಿ ನಿಗದಿ ಮಾಡುವಂತಿಲ್ಲ ಎಂದು ತಮಿಳುನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2025ರ ನ.20ರಂದು ಮಹತ್ವದ ತೀರ್ಪು ನೀಡಿತ್ತು. ಆದರೆ, ಸಂವಿಧಾನದ 200ನೇ ವಿಧಿಯಡಿ ನೀಡಲಾಗಿರುವ ಅಧಿಕಾರ ಮೀರಿ ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕದೆಯೂ ಇರುವಂತಿಲ್ಲ ಎಂದು ಆಗಿನ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ಐವರು ಸದಸ್ಯರ ಪೀಠವು ಸರ್ವಾನುಮತದ ತೀರ್ಪು ನೀಡಿತ್ತು.

ಮತ್ತೊಂದು ಮುಖ್ಯ ಆದೇಶ ವಕ್ಫ್ ಕಾಯ್ದೆಗೆ ಸಂಬಂಧಿಸಿದ್ದು. ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷ ಅನುಸರಿಸಿದ ವ್ಯಕ್ತಿ ಮಾತ್ರ ಆಸ್ತಿಯನ್ನು ವಕ್ಫ್ಗೆ ದಾನ ನೀಡಬಹುದು ಎಂಬ ಷರತ್ತು ಸೇರಿದಂತೆ ವಕ್ಫ್ (ತಿದ್ದುಪಡಿ) ಕಾಯ್ದೆ–2025ರ ಕೆಲವು ಪ್ರಮುಖ ಅಂಶಗಳಿಗೆ ಸುಪ್ರೀಂ ಕೋರ್ಟ್ (ಸೆಪ್ಟೆಂಬರ್ 15) ತಡೆ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು. ಆದರೆ, ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

ಶಾಸಕರ ಉಚ್ಚಾಟನೆಗೆ ಸಂಬಂಧಿಸಿದ ತೀರ್ಪೊಂದು ಈ ವರ್ಷ ಹೊರಬಿದ್ದಿದೆ. ಬಿಹಾರ ವಿಧಾನ ಪರಿಷತ್ನಲ್ಲಿ ಆರ್ಜೆಡಿ ಸದಸ್ಯ ಸುನಿಲ್ಕುಮಾರ್ ಸಿಂಗ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಘೋಷಣೆ ಕೂಗಿದ್ದ ನಡವಳಿಕೆಯನ್ನು ‘ಒಪ್ಪಲಾಗದು’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು (ಫೆಬ್ರುವರಿ 25). ಆದರೆ ಅಶಿಸ್ತಿನ ಕಾರಣ ನೀಡಿ ಅವರನ್ನು ಸದನದಿಂದ ಉಚ್ಚಾಟಿಸಿದ್ದ ಕ್ರಮವನ್ನು ‘ಕಠಿಣ ಮತ್ತು ವಿಪರೀತ’ ಎಂದು ಹೇಳಿ, ಉಚ್ಚಾಟನೆಯನ್ನು ರದ್ದುಗೊಳಿಸಿತ್ತು.

ಅಖಿಲ ಭಾರತೀಯ ನ್ಯಾಯಾಧೀಶರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮಹತ್ವದ ತೀರ್ಪು ಪ್ರಕಟಿಸಿತ್ತು. ‘ಕಾನೂನು ಪದವೀಧರರು ನ್ಯಾಯಾಧೀಶರಾಗಬೇಕು ಎಂದಾದರೆ, ಕಡ್ಡಾಯವಾಗಿ ಕನಿಷ್ಠ ಮೂರು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು’ ಎಂದು ಸುಪ್ರೀಂ ಕೋರ್ಟ್ ಮೇ 20ರಂದು ತೀರ್ಪು ನೀಡಿತ್ತು.

ಇತರ ಮುಖ್ಯ ತೀರ್ಪುಗಳು

* ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಲೋಧಿ ಪ್ರಾಪರ್ಟಿ ಕಂ.ಲಿ. ಪ್ರಕರಣ; ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುವಂತೆಯೇ ಹಾನಿಗೆ ಪರಿಹಾರವನ್ನು ವಿಧಿಸುವ ಅಧಿಕಾರವನ್ನೂ ಹೊಂದಿವೆ (2025 ಆ.4)

* ಊರ್ಮಿಳಾ ದೀಕ್ಷಿತ್ ಮತ್ತು ಸುನಿಲ್ ಶರಣ್ ದೀಕ್ಷಿತ್ ಪ್ರಕರಣ: ಹಿರಿಯ ನಾಗರಿಕರಿಂದ ಆಸ್ತಿ ಪಡೆದ ಮಕ್ಕಳು ಅವರ ಆರೈಕೆ ಮಾಡದಿದ್ದರೆ, ಆಸ್ತಿ ವರ್ಗಾವಣೆ ರದ್ದುಗೊಳಿಸಲು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯು (2007) ನ್ಯಾಯಮಂಡಳಿಗಳಿಗೆ ಅಧಿಕಾರ ನೀಡುತ್ತದೆ (2025 ಜ.2)

* ಓಂಪ್ರಕಾಶ್ ಮತ್ತು ಕೇಂದ್ರ ಸರ್ಕಾರದ ಪ್ರಕರಣ: ಬಾಲನ್ಯಾಯ ಕಾಯ್ದೆಯ ಅಡಿ ಸಂಘರ್ಷಕ್ಕೆ ಒಳಪಟ್ಟ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್, ನ್ಯಾಯನಿರ್ಣಯ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಬಾಲಕನ ವಯಸ್ಸು ನಿರ್ಧರಿಸುವಲ್ಲಿ ದೋಷಗಳಾಗಬಾರದು; ಶಿಕ್ಷೆಗಿಂತ ಪುನರ್ವಸತಿಗೆ ಒತ್ತು ನೀಡಬೇಕು ಎಂದಿತ್ತು (2025 ಜ.8)

ಬೀದಿ ನಾಯಿ ನಿಯಂತ್ರಣ: ಮೂರು ಆದೇಶ

ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಅವಧಿಯಲ್ಲಿ ಮೂರು ಬಗೆಯ ಆದೇಶಗಳನ್ನು ನೀಡಿದೆ. ಮೊದಲು, ಬೀದಿ ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಂದ ತೊಲಗಿಸಿ, ಆಶ್ರಯ ಕೇಂದ್ರಗಳಿಗೆ ಸಾಗಿಸಬೇಕು ಎಂದು ಆದೇಶಿಸಿತು (ಆಗಸ್ಟ್ 11). ನಂತರ, ಶಸ್ತ್ರಚಿಕಿತ್ಸೆ, ಲಸಿಕೆ ನೀಡಿ ಸ್ವಸ್ಥಾನದಲ್ಲೇ ತಂದುಬಿಡಬೇಕು. ಆಕ್ರಮಣಕಾರಿಯಂತೆ ತೋರುವ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಇಡಬೇಕು ಎಂದಿತು (ಆಗಸ್ಟ್ 22). ಮತ್ತೊಮ್ಮೆ ಆದೇಶ ಬದಲಿಸಿದ ಸುಪ್ರೀಂ ಕೋರ್ಟ್, ಶಾಲೆ, ಕಾಲೇಜು, ಆಸ್ಪತ್ರೆ, ಮೈದಾನ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಿಂದ ಬೀದಿ ನಾಯಿಗಳನ್ನು ತೊಲಗಿಸಬೇಕು ಎಂದು ನವೆಂಬರ್ 11ರಂದು ಹೇಳಿತು.

ಬದಲಾದ ಮುಖ್ಯ ನ್ಯಾಯಮೂರ್ತಿಗಳು

ಸುಪ್ರೀಂ ಕೋರ್ಟ್ ಈ ವರ್ಷ ಇಬ್ಬರು ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಕಂಡಿತು. ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಸುಪ್ರೀಂ ಕೋರ್ಟ್ನ 52ನೇ ಸಿಜೆಐ ಆಗಿ ಮೇ 14ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ವಯೋನಿವೃತ್ತಿಯಿಂದಾಗಿ ತೆರವಾಗಿದ್ದ ಸ್ಥಾನವನ್ನು ನ್ಯಾ.ಗವಾಯಿ ಅಲಂಕರಿಸಿದ್ದರು. ಅವರು ದೇಶದ ಎರಡನೇ ದಲಿತ ಹಾಗೂ ಮೊದಲ ಬೌದ್ಧ ಸಿಜೆಐ ಆಗಿದ್ದರು. ಅವರು ಇದೇ ನ.23ರಂದು ನಿವೃತ್ತಿ ಹೊಂದಿದರು.

ಈ ನಡುವೆ, ಅಕ್ಟೋಬರ್ 6ರಂದು ರಾಕೇಶ್ ಕಿಶೋರ್ ಎನ್ನುವ ವಕೀಲ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಘಟನೆ ನಡೆದಿತ್ತು. ವಿಷ್ಣುವಿನ ಮೂರ್ತಿ ಮರುಸ್ಥಾಪಿಸುವ ಕುರಿತ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಗವಾಯಿ ಅವರು ಸನಾತನ ಧರ್ಮಕ್ಕೆ ಅವಮಾನವಾಗುವಂತಹ ಮಾತುಗಳನ್ನು ಆಡಿದ್ದರು ಎಂದು ಅಸಮಾಧಾನದಿಂದ ಹಾಗೆ ಮಾಡಿದ್ದಾಗಿ ರಾಕೇಶ್ ಕಿಶೋರ್ ಹೇಳಿದ್ದರು.

ಗವಾಯಿ ನಂತರ ಸೂರ್ಯಕಾಂತ್ ಅವರು ಸಿಜೆಐ ಆದರು.

ನ್ಯಾ.ಯಶವಂತ ವರ್ಮಾ ಪ್ರಕರಣ

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ಅವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ನಡೆದು (ಮಾರ್ಚ್ 14), ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಕಂತೆ ಕಂತೆ ನೋಟುಗಳು ಸಿಕ್ಕಿದ್ದವು. ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಯಿತು. ಈ ಬಗ್ಗೆ ಮೂವರು ನ್ಯಾಯಮೂರ್ತಿಗಳ ಸಮಿತಿಯು ವಿಚಾರಣೆ ನಡೆಸಿ, ನ್ಯಾ ವರ್ಮಾ ಅವರು ತಪ್ಪಿತಸ್ಥ ಎಂದು ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಜುಲೈ 21ರಂದು ಲೋಕಸಭೆಯಲ್ಲಿ 100ಕ್ಕೂ ಹೆಚ್ಚು ಸಂಸದರು ನ್ಯಾ.ವರ್ಮಾ ಅವರ ವಿರುದ್ಧ ವಾಗ್ದಂಡನೆ ಗೊತ್ತುವಳಿಗೆ ಸಹಿ ಹಾಕಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನ್ಯಾ. ವರ್ಮಾ ಅವರ ವಿರುದ್ಧದ ಆರೋಪಗಳ ವಿಚಾರಣೆಗೆ ಮೂವರು ಸದಸ್ಯರ ಸಮಿತಿ ನೇಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.