ಕೇರಳದ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಶೋಷಣೆ, ತಾರತಮ್ಯ ಮತ್ತು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಿಡುಗಡೆಯಾಗಿದೆ. ಅದು ಮಲಯಾಳದಲ್ಲಿ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದಲ್ಲಿಯೇ ಕಂಪನ ಹುಟ್ಟಿಸಿದೆ. ಹೊರಜಗತ್ತಿನ ಮಟ್ಟಿಗೆ ಮಿರಮಿರನೆ ಮಿರುಗುವ ಬಣ್ಣದ ಲೋಕದಲ್ಲಿನ ಗುಪ್ತ ಸತ್ಯಗಳನ್ನು, ಶೋಷಣೆಯ ವಿಧಾನಗಳನ್ನು, ಹೆಣ್ಣಿನ ಹತಾಶೆ, ಅಸಹಾಯಕತೆ, ಆಕ್ರೋಶವನ್ನು ವರದಿಯು ಜನರ ಮುಂದೆ ಇಟ್ಟಿದೆ. ವರದಿ ಬಹಿರಂಗಗೊಳ್ಳುತ್ತಲೇ ಮಲಯಾಳ ಚಿತ್ರರಂಗದ ಕೆಲವು ನಿರ್ಮಾಪಕ, ನಿರ್ದೇಶಕ, ನಟರಿಗೆ ಸಂಕಷ್ಟ ಆರಂಭವಾಗಿದೆ.
ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಶೋಷಣೆಯ ಬಗ್ಗೆ ಬೆಚ್ಚಿಬೀಳಿಸುವ ವಿವರಗಳುಳ್ಳ ನ್ಯಾ.ಹೇಮಾ ಸಮಿತಿ ರಚನೆಗೆ ಕೇರಳದಲ್ಲಿ ನಡೆದ ಅಂಥದ್ದೇ ಒಂದು ಘಟನೆ ಕಾರಣ. ಚಿತ್ರರಂಗದ ಖ್ಯಾತ ನಟಿಯೊಬ್ಬರ ಮೇಲೆ ಒಂದು ಗುಂಪು ಲೈಂಗಿಕ ಹಲ್ಲೆ ನಡೆಸಿತ್ತು. ಅದರ ಹಿಂದೆ ಮಲಯಾಳ ಚಿತ್ರರಂಗದ ಸ್ಟಾರ್ ನಟ ದಿಲೀಪ್ ಅವರ ಕ್ರಿಮಿನಲ್ ಪಿತೂರಿ ಇದೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಪ್ರಕರಣದ ಸಂಬಂಧ ದಿಲೀಪ್ ಅವರನ್ನು ಬಂಧಿಸಲಾಗಿತ್ತು. 3 ತಿಂಗಳ ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು.
ಈ ಪ್ರಕರಣದ ನಂತರ ನಟಿಯ ಕೆಲವು ಸ್ನೇಹಿತೆಯರು ‘ವಿಮೆನ್ ಇನ್ ಸಿನಿಮಾ ಕಲೆಕ್ಟಿವ್’ (ಡಬ್ಲ್ಯುಸಿಸಿ) ಎನ್ನುವ ಸಂಸ್ಥೆಯನ್ನು ರೂಪಿಸಿ, ಚಿತ್ರರಂಗದಲ್ಲಿನ ಮಹಿಳಾ ಶೋಷಣೆಯ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಅದರ ಫಲವಾಗಿ ಕೇರಳ ಸರ್ಕಾರ 2017ರಲ್ಲಿ ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹೇಮಾ ನೇತೃತ್ವದ ಸಮಿತಿ ರಚನೆ ಮಾಡಿ, ನಟಿ ಟಿ.ಶಾರದಾ ಮತ್ತು ನಿವೃತ್ತ ಐಎಎಸ್ ಅಧಿಕಾರಿ ವಲ್ಸಲಾಕುಮಾರಿ ಅವರನ್ನು ಸದಸ್ಯರನ್ನಾಗಿ ನೇಮಿಸಿತು. ಸಮಿತಿಯು ಡಿಸೆಂಬರ್ 2019ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ವರದಿ ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು, ಕಾನೂನು ಹೋರಾಟವೂ ನಡೆಯಿತು. ಅಂತಿಮವಾಗಿ, ಅಲ್ಪಸ್ವಲ್ಪ ಪರಿಷ್ಕರಣೆಯೊಂದಿಗೆ ವರದಿಯು ಇದೇ 19ರಂದು ಬಿಡುಗಡೆಯಾಗಿದೆ.
ಚಿತ್ರರಂಗದಲ್ಲಿನ ನಟ, ನಟಿಯರು, ತಂತ್ರಜ್ಞರು, ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಸಂದರ್ಶನ ಮಾಡುವುದು ಸೇರಿದಂತೆ ಹಲವು ಮಾರ್ಗಗಳ ಮೂಲಕ ಸಮಿತಿ ಮಾಹಿತಿ ಸಂಗ್ರಹಿಸಿದೆ. ಜತೆಗೆ ಅದಕ್ಕೆ ಪೂರಕವಾದ ಹೇಳಿಕೆ, ವಿಡಿಯೊ, ಆಡಿಯೊ, ವಾಟ್ಸ್ ಆ್ಯಪ್ ಚಾಟ್ ಮುಂತಾದ ದಾಖಲೆಗಳನ್ನೂ ಕಲೆಹಾಕಿದೆ. ಅದರ ಆಧಾರದ ಮೇಲೆ ಸಮಿತಿಯು, ಚಿತ್ರರಂಗದಲ್ಲಿ ಮಹಿಳೆಯರು ವ್ಯಾಪಕ ಶೋಷಣೆಗೆ ಒಳಗಾಗುತ್ತಿರುವುದಾಗಿ ಅಭಿಪ್ರಾಯಕ್ಕೆ ಬಂದಿದೆ.
ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುವ ಅತಿ ದೊಡ್ಡ ಸಮಸ್ಯೆ ಎಂದರೆ, ಅದು ಲೈಂಗಿಕ ಕಿರುಕುಳದ್ದು; ಅದು ‘ಅತಿ ಕೆಡುಕಿನ ಸಂಗತಿ’ ಎಂದು ವರದಿ ತಿಳಿಸಿದೆ. ಮಲಯಾಳ ಚಿತ್ರರಂಗವನ್ನು 10ರಿಂದ 15 ಜನ ಪ್ರಭಾವಿ ಪುರುಷರು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಇದರಲ್ಲಿ ಪ್ರಭಾವಿ ನಟರು, ನಿರ್ಮಾಪಕರು, ನಿರ್ದೇಶಕರು, ವಿತರಕರು ಇದ್ದಾರೆ. ಸಿನಿಮಾದಿಂದಾಗಿ ಸಾಕಷ್ಟು ಹೆಸರು ಮತ್ತು ಆಸ್ತಿ ಸಂಪಾದಿಸಿರುವ ಇವರು ಚಿತ್ರರಂಗದ ಚಟುವಟಿಕೆಗಳನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಜೂನಿಯರ್ ಆರ್ಟಿಸ್ಟ್‌ಗಳನ್ನು ಕನಿಷ್ಠ ಸೌಲಭ್ಯ ಒದಗಿಸದೆ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತದೆ ಎಂದೂ ನಿದರ್ಶನ ಸಹಿತ ವರದಿಯಲ್ಲಿ ವಿವರಿಸಲಾಗಿದೆ. ಆದರೆ, ಚಿತ್ರರಂಗದಲ್ಲಿರುವ ಎಲ್ಲ ಗಂಡಸರೂ ಇಂಥ ಕೆಟ್ಟ ಗುಣಗಳನ್ನು ಹೊಂದಿದವರೇನಲ್ಲ. ಅನೇಕರು ಸಜ್ಜನರೂ ಇದ್ದಾರೆ ಎಂಬ ಮಾತನ್ನು ಕೂಡ ಸಿನಿಮಾ ರಂಗದಲ್ಲಿನ ಮಹಿಳೆಯರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
‘ಚಿತ್ರಗಳಲ್ಲಿ ಅತ್ಯಾಪ್ತ ದೃಶ್ಯಗಳಲ್ಲಿ ನಟಿಸಲು ಸಿದ್ಧರಿರುವ ಮಹಿಳೆಯರು, ಸೆಟ್‌ನ ಹೊರಗಡೆಯೂ ಅದೇ ರೀತಿ ನಡೆದುಕೊಳ್ಳಲು ಸಿದ್ಧರಿರುತ್ತಾರೆ ಎಂದು ಸಿನಿಮಾದಲ್ಲಿ ತೊಡಗಿಕೊಂಡಿರುವ ಬಹುತೇಕ ಪುರುಷರು ಯೋಚಿಸುತ್ತಾರೆ. ಹಾಗಾಗಿ, ಯಾವುದೇ ಮುಜುಗರವಿಲ್ಲದೆ, ಸೆಕ್ಸ್‌ಗೆ ಬೇಡಿಕೆ ಇಡುತ್ತಾರೆ...’
ಸಿನಿಮಾ ರಂಗದಲ್ಲಿನ ಮಹಿಳೆಯರು ನ್ಯಾ. ಹೇಮಾ ಸಮಿತಿಯ ಮುಂದೆ ನೀಡಿರುವ ಹೇಳಿಕೆ ಇದು.
ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರು ಅವಕಾಶ ಪಡೆಯಬೇಕಾದರೆ ‘ರಾಜಿ’ (compromise) ಮತ್ತು ‘ಹೊಂದಾಣಿಕೆ’ (Adjustment) ಮಾಡಿಕೊಳ್ಳಲೇಬೇಕು. ಮಲಯಾಳ ಚಿತ್ರೋದ್ಯಮದಲ್ಲಿ ತೊಡಗಿರುವ ಮಹಿಳೆಯರಿಗೆ ಈ ಎರಡು ಪದಗಳು ತುಂಬಾ ಪರಿಚಿತ ಎಂದು ಹೇಳುತ್ತದೆ ವರದಿ.
ಮಹಿಳೆಯರು ಚಿತ್ರರಂಗಕ್ಕೆ ಪ್ರವೇಶ ಪಡೆಯುವಾಗಲೇ ಕಿರುಕುಳ ಆರಂಭವಾಗುತ್ತದೆ. ಚಿತ್ರದ ಪ್ರೊಡಕ್ಷನ್ ಕಂಟ್ರೋಲರ್ ಯಾವುದೇ ಮಹಿಳೆಗೆ ಸಿನಿಮಾದಲ್ಲಿ ಅವಕಾಶ ಇದೆ ಎಂದು ಹೇಳುವಾಗ ಅಥವಾ ಮಹಿಳೆಯೇ ಚಿತ್ರದಲ್ಲಿ ನಟಿಸಲು ಕೇಳುವಾಗ, ‘ಚಿತ್ರರಂಗದಲ್ಲಿ ಅವಕಾಶ ಬೇಕಿದ್ದರೆ ‘ರಾಜಿ’ ಮತ್ತು ‘ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಹೇಳಲಾಗುತ್ತದೆ. ಆ ಮೂಲಕ, ಬೇಡಿಕೆಗೆ ತಕ್ಕಂತೆ ಸೆಕ್ಸ್‌ಗೆ ಲಭ್ಯವಿರುವಂತೆ ಆಕೆಗೆ ತಿಳಿಸಲಾಗುತ್ತದೆ.
ನಟ, ನಿರ್ಮಾಪಕ, ನಿರ್ದೇಶಕ, ಪ್ರೊಡಕ್ಷನ್ ಕಂಟ್ರೋಲರ್ ಸೇರಿದಂತೆ ಸಿನಿಮಾದಲ್ಲಿ ಭಾಗಿಯಾಗಿರುವ ಯಾರು ಬೇಕಾದರೂ ಸೆಕ್ಸ್‌ಗೆ ಬೇಡಿಕೆ ಇಡಬಹುದು ಮತ್ತು ಮಹಿಳೆ ಅವರ ಬೇಡಿಕೆಗಳಿಗೆ ಶರಣಾಗಲು ಸಿದ್ಧವಾಗಿರಬೇಕು ಎಂದು ಮಹಿಳೆಯೊಬ್ಬರು ಸಮಿತಿಗೆ ನೀಡಿರುವ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಹಲವು ನಟಿಯರು ‘ಹೊಂದಾಣಿಕೆ’ ಮತ್ತು ‘ರಾಜಿ’ ಮಾಡಿಕೊಂಡಿದ್ದರಿಂದಲೇ ಗೌರವ ಪಡೆಯಲು, ಹೆಸರು ಮಾಡಿರಲು ಸಾಧ್ಯವಿದೆ ಎಂದು ಆ ಮಹಿಳೆ ಕೆಲವು ಖ್ಯಾತನಾಮ ನಟಿಯರ ಹೆಸರುಗಳನ್ನು ಉಲ್ಲೇಖಿಸಿದ್ದನ್ನೂ ವರದಿ ಪ್ರಸ್ತಾಪಿಸಿದೆ.
ಹೊಸ ನಟ ನಟಿಯರು ಅಗತ್ಯವಿದ್ದಾರೆ ಎಂಬ ಜಾಹೀರಾತನ್ನು ನೋಡಿ ಆಡಿಷನ್‌ಗೆ ತೆರಳುವ ಮಹಿಳೆಗೆ ನಿರ್ಮಾಪಕ ಮತ್ತು ನಿರ್ದೇಶಕರನ್ನು ಭೇಟಿ ಮಾಡುವಂತೆ ಸೂಚಿಸಲಾಗುತ್ತದೆ. ರಾಜಿ ಮತ್ತು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಆಕೆಗೆ ತಿಳಿಸಲಾಗುತ್ತದೆ ಎಂದು ವರದಿ ವಿವರಿಸಿದೆ.
ಚಿತ್ರರಂಗಕ್ಕೆ ಕಾಲಿಡುವ ಹೊಸ ನಟಿಯರು, ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರೂ ಈ ಎಲ್ಲ ರಹಸ್ಯಗಳನ್ನು ಮುಚ್ಚಿಡುತ್ತಾರೆ. ಡಬ್ಲ್ಯುಸಿಸಿ ಸ್ಥಾಪನೆಯಾದ ಬಳಿಕ ಮಹಿಳೆಯರು ಈ ರಹಸ್ಯಗಳನ್ನು ಹಂಚಿಕೊಳ್ಳಲು ಆರಂಭಿಸಿದರು ಎಂದು ವರದಿ ಹೇಳಿದೆ.
ಹಿರಿಯ ನಟಿ ಟಿ.ಶಾರದಾ ಅವರು ಕೂಡ ಮೂವರು ಸದಸ್ಯರಲ್ಲಿ ಒಬ್ಬರು. ಚಿತ್ರೋದ್ಯಮದಲ್ಲಿ ಈಗ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಹಿಂದಿನಿಂದಲೇ ಇವೆ ಎಂದು ವರದಿಯಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
l ಲೈಂಗಿಕ ಕಿರುಕುಳ ಹಿಂದೆಯೂ ಇತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಂದು ಸಮಾಜ ಬದಲಾಗಿದೆ. ನಮ್ಮ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವ ಹೆಚ್ಚಾಗಿದೆ. ಎಲ್ಲರೂ ಈಗ ಮುಕ್ತವಾಗಿ ಬೆರೆಯುತ್ತಾರೆ. ಗಂಡುಮಕ್ಕಳು ಮತ್ತು ಹೆಣ್ಣು ಮಕ್ಕಳ ಸಂಬಂಧ ಈಗ ಸಂಪೂರ್ಣವಾಗಿ ಬದಲಾಗಿದೆ. ‘ರಾಜಿ’ ಮತ್ತು ‘ಹೊಂದಾಣಿಕೆಗಳು’ ಈಗಿನ ಕಾಲದಲ್ಲಿ ಮುಕ್ತವಾಗಿವೆ. ಆದರೆ, ಹಿಂದೆ ಹೀಗಿರಲಿಲ್ಲ
l ‘ಪಾತ್ರಕ್ಕಾಗಿ ಪಲ್ಲಂಗ’ ಹಿಂದೆಯೂ ಇತ್ತು. ಈಗ ಮಹಿಳೆಯರು ಅದನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಹಿಂದಿನ ಕಾಲದಲ್ಲಿ ನಾಯಕ ನಟ ಮತ್ತು ನಾಯಕ ನಟಿ ಪರಸ್ಪರ ಸಮ್ಮತಿಯ ಸಂಬಂಧ ಹೊಂದಿರುತ್ತಿದ್ದರು. ಆಗಲೂ ಕೂಡ ಚಿತ್ರೋದ್ಯಮದ ಪುರುಷರು, ಮಹಿಳೆಯರು ಎಲ್ಲದಕ್ಕೂ ‘ಲಭ್ಯ’ರಿರುತ್ತಾರೆ ಎಂಬ ದೃಷ್ಟಿಕೋನ ಹೊಂದಿದ್ದರು.
l ಚಿತ್ರೋದ್ಯಮದಲ್ಲಿರುವ ಈಗಿನ ಮಹಿಳೆಯರ ಉಡುಗೆ ತೊಡುಗೆ ಸರಿ ಇಲ್ಲ. ಧರಿಸುವ ಬಟ್ಟೆಗಳು ದೇಹವನ್ನು ಮುಚ್ಚುವುದರ ಬದಲಾಗಿ, ಅವರ ದೇಹದ ಭಾಗಗಳನ್ನು ಪ್ರದರ್ಶಿಸುತ್ತವೆ. ಹಿಂದಿನ ದಿನಗಳಲ್ಲಿ ಸೆಟ್‌ಗಳಲ್ಲಿ ದ್ವಂದ್ವಾರ್ಥದ ಮಾತುಗಳು ಕೇಳಿಬರುತ್ತಿರಲಿಲ್ಲ. ಸೆಟ್‌ನಲ್ಲಿ ಲೈಂಗಿಕ ಕಿರುಕುಳಗಳೂ ನಡೆಯುತ್ತಿರಲಿಲ್ಲ. ಆದರೆ, ಈಗ ಅಂತಹದ್ದು ನಡೆಯುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ
l ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕಾನೂನು ಜಾರಿಗೆ ತರಬೇಕು. ಅದರ ಅಡಿಯಲ್ಲಿ ನ್ಯಾಯಮಂಡಳಿ ಸ್ಥಾಪಿಸಬೇಕು
l ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳು, ನಿಯಮಗಳು ಈಗ ಎದುರಾಗಿರುವ ಸವಾಲುಗಳನ್ನು ನಿಭಾಯಿಸಲು ಸಾಕಾಗದು. ‘ಪಾಶ್’ ಕಾಯ್ದೆ ನಿಯಮಗಳು ಚಿತ್ರೋದ್ಯಮಕ್ಕೆ ಹೆಚ್ಚು ಅನ್ವಯಿಸುವುದಿಲ್ಲ ಹಾಗಾಗಿ, ಇದಕ್ಕಾಗಿ ಪ್ರತ್ಯೇಕ ಕಾಯ್ದೆಯ ಅಗತ್ಯವಿದೆ.
l ಕಾಯ್ದೆಯ ಅಡಿಯಲ್ಲಿ ಜಿಲ್ಲಾ ನ್ಯಾಯಾಲಯದ ನಿವೃತ್ತ ಮಹಿಳಾ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ನ್ಯಾಯಮಂಡಳಿ ಸ್ಥಾಪಿಸಬೇಕು. ಅವರಿಗೆ ಕನಿಷ್ಠ ಐದು ವರ್ಷಗಳ ವಿಚಾರಣೆಯ ಅನುಭವ ಇರಬೇಕು
l ಸಿನಿಮಾ ಆರಂಭಕ್ಕೂ ಮುನ್ನ ನಟನೆ ಅಥವಾ ಇತರ ಕೆಲಸಗಳಿಗೆ ಸಂಬಂಧಿಸಿದಂತೆ ಯಾವುದೇ ಉದ್ಯೋಗಿ ಒಪ್ಪಂದ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರೆ, ನಿರ್ಮಾಪಕರು ಈ ಪ್ರಸ್ತಾವವನ್ನು ತಿರಸ್ಕರಿಸಬಾರದು.
l ಸೆಟ್‌ನಲ್ಲಿ ಮಹಿಳೆಯರಿಗೆ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿ, ಕುಡಿಯುವ ನೀರು ಸೇರಿದಂತೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಬೇಕು
l ಸಿನಿಮಾ ರಂಗದ ಮಹಿಳೆಯನ್ನು ಮಂಚಕ್ಕೆ ಕರೆದು ಕಿರುಕುಳ ನೀಡಬಾರದು
ಕನ್ನಡದಲ್ಲಿ ಸದ್ದು ಮಾಡಿದ್ದ ‘ಮೀಟೂ’
ಕನ್ನಡ ಚಿತ್ರರಂಗದಲ್ಲಿ ಕೆಲವು ನಟ, ನಿರ್ದೇಶಕ, ನಿರ್ಮಾಪಕರ ವಿರುದ್ಧವೂ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದಿದ್ದವು. ಅವುಗಳಲ್ಲಿ ಮುಖ್ಯವಾದದ್ದು, ನಟಿ ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ್ದ ಮೀಟೂ ಆರೋಪ. ‘ವಿಸ್ಮಯ’ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ತಮಗೆ ಇರುಸುಮುರುಸಾಗುವಂತೆ ನಡೆದುಕೊಂಡಿದ್ದರು ಎಂದು ಶ್ರುತಿ ಹೇಳಿದ್ದರು. ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಹತ್ತಿತು.
ನಟಿ ಸಂಗೀತಾ ಭಟ್ ತಮ್ಮ ಮೇಲೆ ಆದ ಲೈಂಗಿಕ ಶೋಷಣೆಯ ಬಗ್ಗೆ ಹೇಳಿಕೊಂಡಿದ್ದರು. ಮೀಟೂ ಅಭಿಯಾನದ ವೇಳೆ ಹಲವು ನಟಿಯರು ತಮಗೆ ಎದುರಿಸಿದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. ‘ತಿಥಿ’ ಸಿನಿಮಾದ ಕಥೆಗಾರ ಹಾಗೂ ನಿರ್ದೇಶಕ ಈರೇಗೌಡ ಅವರ ವಿರುದ್ಧವೂ ಇಂಥದ್ದೇ ಆರೋಪ ಕೇಳಿಬಂದಿತ್ತು. ಚಿತ್ರರಂಗದಲ್ಲಿ ಮಹಿಳಾ ಶೋಷಣೆಯ ವಿರುದ್ಧ ಕೆಲಸ ಮಾಡಲು ನಟ ಚೇತನ್ ಮತ್ತು ಇತರರು ‘ಫೈರ್’ ಎನ್ನುವ ಸಂಸ್ಥೆ ಹುಟ್ಟುಹಾಕಿದ್ದರು.
ವರದಿಯಲ್ಲಿ ಏನಿದೆ?
l ಚಿತ್ರರಂಗಕ್ಕೆ ಅಡಿಯಿಡುವ ಹಂತದಲ್ಲಿಯೇ ಮಹಿಳೆಯರಿಗೆ ಪುರುಷರಿಂದ ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ; ಅವಕಾಶಕ್ಕಾಗಿ ‘ಹೊಂದಾಣಿಕೆ’ ಮಾಡಿಕೊಳ್ಳುವಂತೆ ಒತ್ತಾಯ (ಕಾಸ್ಟಿಂಗ್ ಕೌಚ್); ಬೇಡಿಕೆ ನಿರಾಕರಿಸಿದರೆ, ಕಿರುಕುಳ ನೀಡಲಾಗುತ್ತದೆ
l ಕೆಲಸದ ಸ್ಥಳದಲ್ಲಿ, ಪ್ರಯಾಣದ ವೇಳೆ ಹಾಗೂ ವಾಸ್ತವ್ಯ ಹೂಡಿದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ, ನಿಂದನೆ, ಹಲ್ಲೆ ಮಾಡಲಾಗುತ್ತದೆ
l ಸಿನಿಮಾ ಸೆಟ್‌ಗಳಲ್ಲಿ ಮಹಿಳೆಯರಿಗೆ ಶೌಚಾಲಯ, ಬಟ್ಟೆ ಬದಲಾಯಿಸುವ ಸ್ಥಳದಂಥ ಕನಿಷ್ಠ ಸೌಲಭ್ಯ ಒದಗಿಸದೇ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ; ಮುಟ್ಟಾದ ಸಂದರ್ಭದಲ್ಲೂ ಶುಚಿತ್ವದ ಸಾಧನಗಳಿಗಾಗಿ ಮಹಿಳೆಯರು ಪರದಾಡುವ ಸ್ಥಿತಿ ಇದೆ
l ವಿವಿಧ ವಿಭಾಗಗಳ ಕೆಲಸಗಾರರ ಮೇಲೆ ಅನಧಿಕೃತವಾಗಿ ಹಾಗೂ ಅಕ್ರಮವಾಗಿ ನಿಷೇಧ ಹೇರಲಾಗುತ್ತಿದೆ; ನಿಷೇಧದ ಭಯ ಹುಟ್ಟಿಸಿ ಮಹಿಳೆಯರ ಬಾಯಿ ಮುಚ್ಚಿಸಲಾಗುತ್ತಿದೆ
l ಸಿನಿಮಾ ರಂಗ ಪುರುಷ ಪ್ರಧಾನವಾಗಿದ್ದು, ವ್ಯಾಪಕ ಲಿಂಗ ತಾರತಮ್ಯ ಅನುಸರಿಸಲಾಗುತ್ತಿದೆ
l ಕೆಲಸದ ಸ್ಥಳದಲ್ಲಿ ಮದ್ಯ, ಡ್ರಗ್ಸ್ ಸೇವನೆ ಮಾಡುತ್ತಾರೆ, ಮನಸೋ ಇಚ್ಛೆ ವರ್ತಿಸುತ್ತಾರೆ. ಅಶಿಸ್ತಿನ ನಡವಳಿಕೆಯೂ ಇದೆ. ಮಹಿಳೆಯರಿಗೆ ರಕ್ಷಣೆಯ ಕೊರತೆ ಕಾಡುತ್ತಿದೆ
l ಕೆಲಸದ ಸ್ಥಳದಲ್ಲಿ (ಫೋನ್ ಮೂಲಕವೂ) ದ್ವಂದ್ವಾರ್ಥ ಹಾಗೂ ಅಶ್ಲೀಲ ಮಾತುಗಳನ್ನು ಆಡಲಾಗುತ್ತಿದೆ
l ವೈಯಕ್ತಿಕ ಅಗತ್ಯ, ಸೌಲಭ್ಯಗಳಿಗೆ ತಕ್ಕಂತೆ ಲಿಖಿತ ಗುತ್ತಿಗೆಗಳನ್ನು ಜಾರಿ ಮಾಡಲಾಗುತ್ತಿಲ್ಲ
l ಸಂಭಾವನೆಯಲ್ಲಿ ಗಂಡು–ಹೆಣ್ಣಿನ ನಡುವೆ ತಾರತಮ್ಯ; ಜತೆಗೆ, ಒಪ್ಪಿಕೊಂಡಷ್ಟು ಸಂಭಾವನೆ ನೀಡುವುದಿಲ್ಲ
l ತಾಂತ್ರಿಕ ವಿಭಾಗಗಳೂ ಸೇರಿದಂತೆ ಸಿನಿಮಾ ರಂಗಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುಲಾಗುತ್ತಿದೆ; ಅವಕಾಶ ನೀಡಲಾಗುತ್ತಿಲ್ಲ
l ಆನ್‌ಲೈನ್ ಕಿರುಕುಳ (ಸೈಬರ್ ದಾಳಿ)
l ಮಹಿಳೆಯರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಇಲ್ಲ
l ಮಹಿಳೆಯರ ಸಮಸ್ಯೆಗಳ ವಿಚಾರಣೆಗೆ ಕಾನೂನಾತ್ಮಕ ವ್ಯವಸ್ಥೆ ಇಲ್ಲ
ನ್ಯಾ.ಹೇಮಾ ನೇತೃತ್ವದ ಸಮಿತಿಯು 2019ರಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ವರದಿ ಸಲ್ಲಿಸಿದ ಸಂದರ್ಭ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.