ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ: ಸಂವಿಧಾನ ರಚನಾ ಸಭೆಯಲ್ಲಿ ಬೇಕು, ಬೇಡಗಳ ಚರ್ಚೆ

Published 23 ಜುಲೈ 2023, 19:48 IST
Last Updated 23 ಜುಲೈ 2023, 19:48 IST
ಅಕ್ಷರ ಗಾತ್ರ

ಏಕರೂಪ ನಾಗರಿಕ ಸಂಹಿತೆ ಬೇಕು ಮತ್ತು ಏಕೆ ಬೇಡ ಎಂಬುದು ಇತ್ತೀಚಿನ ಚರ್ಚೆಯಲ್ಲ. ಸ್ವತಂತ್ರ ಭಾರತದ ಸಂವಿಧಾನ ರಚಿಸುವಾಗಲೇ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಭಾರತದ ಕರಡು ಸಂವಿಧಾನದ 35ನೇ ವಿಧಿಯಲ್ಲಿ, ‘ಸರ್ಕಾರವು ಭಾರತದಾದ್ಯಂತ ಅನ್ವಯವಾಗುವಂತೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಪ್ರಯತ್ನಿಸಬೇಕು’ ಎಂದು ಉಲ್ಲೇಖಿಸಲಾಗಿತ್ತು. 1948ರ ನವೆಂಬರ್ 23ರಂದು ನಡೆದ ಸಂವಿಧಾನ ರಚನಾ ಸಭೆಯ ಕಲಾಪದಲ್ಲಿ ಈ ವಿಧಿಯನ್ನು ಚರ್ಚೆಗೆ ಎತ್ತಿಕೊಳ್ಳಲಾಗಿತ್ತು. ಈ ವಿಧಿಗೆ ಹಲವು ತಿದ್ದುಪಡಿಗಳನ್ನು ಕೆಲವು ಸದಸ್ಯರು ಸೂಚಿಸಿದ್ದರು, ಈ ವಿಧಿ ಏಕೆ ಅಗತ್ಯ ಎಂದು ಕೆಲವು ಸದಸ್ಯರು ಪ್ರತಿಪಾದಿಸಿದ್ದರು. ಸುದೀರ್ಘವಾದ ಈ ಚರ್ಚೆಯ ಆಯ್ದ ಭಾಗಗಳು ಇಲ್ಲಿವೆ.

‘ಧಾರ್ಮಿಕ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲ’

ವೈಯಕ್ತಿಕ ಕಾನೂನುಗಳು ಧರ್ಮ ಮತ್ತು ಸಂಸ್ಕೃತಿಯ ಭಾಗ. ವೈಯಕ್ತಿಕ ಕಾನೂನಿಗೆ ಧಕ್ಕೆ ತರುವುದು ಎಂದರೆ, ಅದು ವ್ಯಕ್ತಿಯ ಜೀವನಕ್ರಮದ ಮೇಲೆ ಪ್ರಹಾರ ನಡೆಸುವುದೇ ಆಗಿದೆ. ಈ ವೈಯಕ್ತಿಕ ಕಾನೂನುಗಳನ್ನು ಜನರು ಹಲವು ಪೀಳಿಗೆಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಜಾತ್ಯತೀತ ದೇಶವೊಂದನ್ನು ನಿರ್ಮಾಣ ಮಾಡಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಹೀಗಿರುವಾಗ, ಜಾತ್ಯತೀತ ದೇಶವೊಂದು ಜನರ ಜೀವನಕ್ರಮದಲ್ಲಿ, ಅವರ ಧರ್ಮ ಅನುಸರಣೆಯಲ್ಲಿ ಮಧ್ಯಪ್ರವೇಶಿಸುವುದು ತಪ್ಪಾಗುತ್ತದೆ. ನಾವು ಪ್ರಸ್ತಾಪಿಸಿರುವ ತಿದ್ದುಪಡಿಗಳು ಅಲ್ಪಸಂಖ್ಯಾತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇವುಗಳು ಬಹುಸಂಖ್ಯಾತರಿಗೂ ಅನ್ವಯವಾಗುತ್ತವೆ. ಜೊತೆಗೆ, ಅಲ್ಪಸಂಖ್ಯಾತರ ಹಕ್ಕುಗಳನ್ನು ಬಹುಸಂಖ್ಯಾತರು ಒಪ್ಪಂದದ ಮೂಲಕವಾಗಿ ಕಾಪಾಡುತ್ತಿರುವಂಥ ಹಲವು ಉದಾಹರಣೆಗಳನ್ನು ಐರೋಪ್ಯ ದೇಶಗಳಲ್ಲಿ ಕಾಣಬಹುದಾಗಿದೆ.

ಈಗಾಗಲೇ ಇರುವ ವೈಯಕ್ತಿಕ ಕಾನೂನುಗಳನ್ನು ಉಳಿಸಿಕೊಳ್ಳಬೇಕು ಎಂಬುದು ನಮ್ಮ ಆಗ್ರಹ. ದೇಶದಲ್ಲಿ ಸೌಹಾರ್ದವನ್ನು ಕಾಪಾಡಬೇಕು ಎಂಬುದಕ್ಕಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡಬೇಕು ಎನ್ನುವುದು ಈ ವಿಧಿಯ ಉದ್ದೇಶ. ಆದರೆ ದೇಶದಲ್ಲಿ ಸೌಹಾರ್ದ ಉಳಿಸಬೇಕು ಎನ್ನುವುದಕ್ಕಾಗಿ ವೈಯಕ್ತಿಕ ಕಾನೂನುಗಳು ಸೇರಿದಂತೆ, ನಾಗರಿಕ ಕಾನೂನುಗಳನ್ನು ಏಕರೂಪಗೊಳಿಸುವ ಅಗತ್ಯ ಇಲ್ಲ. ಏಕರೂಪ ಕಾನೂನನ್ನು ಜಾರಿಗೊಳಿಸುವುದು, ವಾಸ್ತವದಲ್ಲಿ ಜನರ ನಡುವಣ ಸೌಹಾರ್ದವನ್ನೇ ಹಾಳುಗೆಡುವುತ್ತವೆ.

–ಮೊಹಮ್ಮದ್‌ ಇಸ್ಮಾಯಿಲ್‌ ಖಾನ್‌, ಸಂವಿಧಾನ ರಚನಾ ಸಭೆಯಲ್ಲಿ ಮುಸ್ಲಿಂ ಲೀಗ್‌ನ ಯುನೈಟೆಡ್‌ ಪ್ರಾವಿನೆನ್ಸ್‌ ಪ್ರತಿನಿಧಿ

‘ಒಟ್ಟು ಹಿತ ಮುಖ್ಯ, ಅಲ್ಪಸಂಖ್ಯಾತರದ್ದಲ್ಲ’

ಏಕರೂಪ ನಾಗರಿಕ ಸಂಹಿತೆಯ ಕುರಿತು ಈ ಹಿಂದೆಯೇ ಹಲವೆಡೆ, ಹಲವು ಸಮಿತಿಯ ಸಮ್ಮುಖದಲ್ಲಿ ಹಲವು ಬಾರಿ ಚರ್ಚೆ ನಡೆದಿದೆ. ಈ ಸಂಹಿತೆಯನ್ನು ವಿರೋಧಿಸಲು ಎರಡು ಕಾರಣಗಳನ್ನು ಮುಂದಿಡಲಾಗುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂಬುದು ಮೊದಲನೆಯ ಕಾರಣ. ಈ ಸಂಹಿತೆಯು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಗೆ ಕಾರಣವಾಗಲಿದೆ ಎಂಬುದು ಎರಡನೆಯ ಕಾರಣ.

ಸಮಾಜದ ಕಲ್ಯಾಣಕ್ಕಾಗಿ ಮತ್ತು ಸುಧಾರಣೆ ಕಾರಣಕ್ಕಾಗಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಬಾರದು ಎಂದಿದ್ದ ಅಂಶವನ್ನು 19ನೇ ವಿಧಿಯಿಂದ ತೆಗೆದುಹಾಕಲಾಗಿದೆ. ಆದ್ದರಿಂದ, ಸಾಮಾಜಿಕ ಕಲ್ಯಾಣ ಅಥವಾ ಸುಧಾರಣೆಯ ಕಾರಣಕ್ಕಾಗಿ ಸರ್ಕಾರವು ಯಾವುದೇ ಕಾನೂನುಗಳನ್ನು ರೂಪಿಸಬಹುದು ಎಂಬುದನ್ನು ಈ ಸಂಸತ್ತು ಒಪ್ಪಿಕೊಂಡಿದೆ.

ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆಗೆ ಕಾರಣವಾಗುತ್ತದೆ ಎನ್ನುವ ವಾದವನ್ನು ಮಂಡಿಸಲಾಗುತ್ತಿದೆ. ಯಾವುದೇ ಆಧುನಿಕ ಮುಸ್ಲಿಂ ರಾಷ್ಟ್ರದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವಾಗ ಅಲ್ಲಿನ ಅಲ್ಪಸಂಖ್ಯಾತರ ವೈಯಕ್ತಿಕ ಕಾನೂನುಗಳನ್ನು ಪರಿಗಣನೆಗೆ ತೆಗೆದುಕೊಂಡೇ ಇಲ್ಲ. ಟರ್ಕಿ ಹಾಗೂ ಈಜಿಪ್ಟ್‌ ದೇಶಗಳ ಉದಾಹರಣೆಗಳನ್ನೇ ನೋಡಿ. ಇಲ್ಲಿರುವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಹಕ್ಕು ನೀಡಲಾಗಿಲ್ಲ.

ಬ್ರಿಟಿಷ್‌ ಆಡಳಿತದಲ್ಲಿ ದೇಶದಲ್ಲಿ ಷರಿಯಾ ಕಾನೂನು ಜಾರಿಗೊಳಿಸಲಾಗಿತ್ತು. ಆಗ ಮುಸ್ಲಿಂ ಧರ್ಮದ ಖೋಜಾ ಹಾಗೂ ಕುಚಿ ಮೆಮನ್‌ ಎನ್ನುವ, ಮುಸ್ಲಿಮರಲ್ಲೇ ಅಲ್ಪಸಂಖ್ಯಾತರಾದ ಸಮುದಾಯದವರು ಅಸಮಾಧಾನಗೊಂಡಿದ್ದರು. ಖೋಜಾ ಹಾಗೂ ಕುಚಿ ಮೆಮನ್‌ಗಳು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡವರು. ಮತಾಂತರಗೊಂಡ ನಂತರವೂ ಅವರು ಹಿಂದೂ ಆಚರಣೆಗಳನ್ನೇ ಅನುಸರಿಸುತ್ತಿದ್ದರು. ಈ ಎರಡು ಅಲ್ಪಸಂಖ್ಯಾತ ಸಮುದಾಯಗಳೂ ಸೇರಿ ಎಲ್ಲಾ ಮುಸ್ಲಿಮರ ಮೇಲೆ ಷರಿಯಾ ಕಾನೂನನ್ನು ಹೇರಲಾಯಿತು. ಅದನ್ನು ವಿರೋಧಿಸಲು ಈ ಸಮುದಾಯಗಳಿಗೆ ಧೈರ್ಯ ಸಾಲಲಿಲ್ಲ. ಆದ್ದರಿಂದ ಷರಿಯಾ ಕಾನೂನನ್ನೇ ಪಾಲಿಸಿಕೊಂಡು ಬಂದರು. ಷರಿಯಾ ಕಾನೂನು ಇಡೀ ಮುಸ್ಲಿಂ ಧರ್ಮದ ಮೇಲೆ ಜಾರಿ ಆಗಬೇಕು ಎಂಬುದು ಅಂದಿನ ಆಡಳಿತದಲ್ಲಿದ್ದ ಕೆಲವು ಮುಸ್ಲಿಂ ಸದಸ್ಯರ ಅಪೇಕ್ಷೆಯಾಗಿತ್ತು. ಹಾಗಾದರೆ, ಆ ಅಲ್ಪಸಂಖ್ಯಾತರ ಹಕ್ಕುಗಳ ಕಥೆ ಏನಾಯಿತು?

ಬೇರೆ ಬೇರೆ ಸಮುದಾಯಗಳನ್ನು ಸೇರಿಸಿಕೊಂಡು ಒಂದು ಧರ್ಮವನ್ನು ಮಾಡಿಕೊಳ್ಳುತ್ತೀರಿ ಎಂದಾದರೆ, ಆ ಎಲ್ಲಾ ಸಮುದಾಯಗಳ ಒಟ್ಟು ಹಿತವನ್ನು ಪರಿಗಣಿಸಬೇಕಾಗುತ್ತದೆಯೇ ಹೊರತು ಆ ಧರ್ಮದ ಯಾವುದೇ ಒಂದು ಸಮುದಾಯದ ಹಿತವನ್ನಲ್ಲ. ಈ ರೀತಿ ನೋಡುವುದಾದರೆ, ಏಕರೂಪ ನಾಗರಿಕ ಸಂಹಿತೆಯನ್ನು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಎಂದು ಹೇಳಲಾಗದು.

ಐರೋಪ್ಯ ದೇಶಗಳನ್ನೇ ನೋಡಿ. ಜಗತ್ತಿನ ಯಾವ ದೇಶದಿಂದಾದರೂ ಜನರು ಐರೋಪ್ಯ ದೇಶಗಳಿಗೆ ಹೋಗಿ ನೆಲೆಸಬಹುದು. ಆದರೆ, ಅವರು ಆ ದೇಶದ ಏಕರೂಪ ನಾಗರಿಕ ಸಂಹಿತೆಯನ್ನೇ ಪಾಲಿಸಬೇಕು. ಇದು ಅಲ್ಲಿನ ಅಲ್ಪಸಂಖ್ಯಾತರಿಗೂ ಅನ್ವಯವಾಗುತ್ತದೆ. ಕಾಲಾನುಕ್ರಮದಲ್ಲಿ ನಮ್ಮ ದೇಶದ ಎಲ್ಲ ಜನರ ಜೀವನ ಕ್ರಮವು ಒಂದೇ ಆಗಬೇಕು; ಜಾತ್ಯತೀತವಾಗಬೇಕು. ಈ ದಿಸೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಯಾವ ರೀತಿಯಲ್ಲಿ ಜಾರಿ ಮಾಡಬಹುದು ಎಂಬುದಷ್ಟೇ ನಮ್ಮ ಚರ್ಚೆ ಆಗಬೇಕು.

ವೈಯಕ್ತಿಕ ಕಾನೂನಿಗೂ ಧರ್ಮಕ್ಕೂ ಸಂಬಂಧ ಏನು ಎನ್ನುವುದೇ ನನ್ನ ಅರ್ಥವ್ಯಾಪ್ತಿಗೆ ನಿಲುಕದ್ದಾಗಿದೆ. ನಮ್ಮ ಧರ್ಮದಿಂದ ವೈಯಕ್ತಿಕ ಕಾನೂನುಗಳನ್ನು ಬೇರ್ಪಡಿಸಬೇಕು. ಅವನ್ನು ಧರ್ಮದಿಂದ ದೂರ ಇರಿಸಬೇಕು. ಹಿಂದೂ ಕಾನೂನಿನ ಕರಡನ್ನೇ ಉದಾಹರಣೆಯಾಗಿ ನೋಡೋಣ. ಈ ಕರಡಿನಲ್ಲಿರುವ ಹಲವು ಅಂಶಗಳು ಮನು, ಯಾಜ್ಞವಲ್ಕ್ಯ ಅಥವಾ ಯಾವುದೇ ಋಷಿಗಳ ಅಭಿಪ್ರಾಯಗಳಿಗೆ ವಿರುದ್ಧವಾಗಿಯೇ ಇವೆ. ನಮ್ಮ ಸಮಾಜವು ಆಧುನಿಕಗೊಳ್ಳುತ್ತಿದೆ. ಪ್ರತಿ ಹೆಜ್ಜೆಯಲ್ಲಿಯೂ ನಾವೆಲ್ಲರೂ ಒಂದುಗೂಡಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗೆ ದೇಶ ಒಗ್ಗಟ್ಟಾಗುವಲ್ಲಿ ಯಾವ ಧಾರ್ಮಿಕ ಸ್ವಾತಂತ್ರ್ಯವೂ ಅಡ್ಡಿಯಾಗಬಾರದು. ನಮ್ಮ ಧಾರ್ಮಿಕ ಆಚರಣೆಗಳು ನಮ್ಮ ಇಡೀ ಜೀವನಕ್ರಮವನ್ನು ಆವರಿಸಿಕೊಂಡಿವೆ ಎಂದು ಹೇಳಲಾಗುತ್ತಿದ್ದರೂ, ಈಗ ನಾವು ಅವನ್ನು ಹಿಂದಿಕ್ಕಬೇಕಾಗಿದೆ. ಈ ಎಲ್ಲವೂ ಧಾರ್ಮಿಕ ವಿಷಯಗಳಲ್ಲ, ಬದಲಿಗೆ ಇವು ಜಾತ್ಯತೀತ ವಿಷಯಗಳು ಎಂದು ನಾವು ಅರಿತುಕೊಳ್ಳಬೇಕಿದೆ.

–ಕನ್ಹಯ್ಯಾಲಾಲ್‌ ಮಾಣೆಕ್‌ಲಾಲ್‌ ಮುನ್ಷಿ, ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಕ್ಷೇತ್ರದ ಪ್ರತಿನಿಧಿ

‘ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ’

ಏಕರೂಪ ನಾಗರಿಕ ಸಂಹಿತೆಯಿಂದ ಮುಸ್ಲಿಮರಿಗೆ ಧಕ್ಕೆಯಾಗುತ್ತದೆ ಎಂಬುದಕ್ಕಷ್ಟೇ ನನ್ನ ವಾದ ಸೀಮಿತವಾಗಿಲ್ಲ. ದೇಶದಲ್ಲಿರುವ ಧಾರ್ಮಿಕ ಕಾನೂನುಗಳು ಹಾಗೂ ನಾಗರಿಕ ಕಾನೂನುಗಳು, ದೇಶದ ಜನರ ಧಾರ್ಮಿಕ ನಂಬುಗೆ ಹಾಗೂ ಸಂಪ್ರದಾಯದಿಂದ ರೂಪುಗೊಂಡಿವೆ. ಇವು ದೇಶದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ, ಪ್ರತಿಯೊಂದು ಧರ್ಮಕ್ಕೂ ಅನ್ವಯವಾಗುತ್ತವೆ. ಏಕರೂಪ ಸಂಹಿತೆ ಜಾರಿಯಾಗಬೇಕು ಎಂದಾದರೆ, ಇಂಥ ಧಾರ್ಮಿಕ ಕಾನೂನುಗಳನ್ನು ಕೈಬಿಡಬೇಕಾಗುತ್ತದೆ.

ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಧರ್ಮವನ್ನು ಅನುಸರಿಸುವ, ಧರ್ಮವನ್ನು ಪ್ರಚಾರ ಮಾಡುವ ಸಮಾನ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನದ 19ನೇ ವಿಧಿ ನೀಡುತ್ತದೆ. ‘ಧಾರ್ಮಿಕ ಆಚರಣೆಗಳೊಂದಿಗೆ ಗುರುತಿಸಿಕೊಂಡಿರುವ ಯಾವುದೇ ಆರ್ಥಿಕ, ರಾಜಕೀಯ ಮತ್ತು ಇತರೆ ಜಾತ್ಯತೀತ ಚಟುವಟಿಕೆಗಳನ್ನು ನಿರ್ಬಂಧಿಸುವ ಅಥವಾ ನಿಯಂತ್ರಿಸುವ ಸಂಬಂಧ ಈಗಾಗಲೇ ಇರುವ ಕಾನೂನುಗಳು ಮತ್ತು ಸರ್ಕಾರ ಮುಂದೆ ರಚಿಸಲಿರುವ ಕಾನೂನುಗಳ ಅನುಷ್ಠಾನಕ್ಕೆ 19ನೇ ವಿಧಿ ಅಡ್ಡಿಪಡಿಸುವುದಿಲ್ಲ’ ಎಂದು 19ನೇ ವಿಧಿಯ ಎರಡನೇ ಉಪವಿಧಿಯಲ್ಲಿ ವಿವರಿಸಲಾಗಿದೆ. ಧಾರ್ಮಿಕ ಆಚರಣೆಗಳೊಂದಿಗೆ ನಂಟು ಹೊಂದಿರುವ ಆರ್ಥಿಕ, ರಾಜಕೀಯ ಮತ್ತು ಇತರೆ ಜಾತ್ಯತೀತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಾನೂನು ರಚಿಸುವುದಕ್ಕೆ ಮಾತ್ರ ಈ ವಿಧಿ ಅವಕಾಶ ನೀಡುತ್ತದೆ. ಸರ್ಕಾರ ಕಾನೂನು ರಚಿಸಬಹುದಾದ ಅಧಿಕಾರದ ವ್ಯಾಪ್ತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಇಲ್ಲ. ಹೀಗಿದ್ದೂ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದರೆ, ಕರಡು ಸಂವಿಧಾನದಲ್ಲಿ ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಸರ್ಕಾರವೇ ಉಲ್ಲಂಘಿಸಿದಂತಾಗುತ್ತದೆ.

ಬ್ರಿಟಿಷರು ತಮ್ಮ 175 ವರ್ಷಗಳ ಆಳ್ವಿಕೆಯಲ್ಲಿ ನೋಂದಣಿ ಕಾಯ್ದೆ, ನಾಗರಿಕ ಪ್ರಕ್ರಿಯಾ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ, ದಂಡ ಸಂಹಿತೆ, ಸಾಕ್ಷ್ಯ ಕಾಯ್ದೆ ಸೇರಿ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದರು. ಆದರೆ, ಮದುವೆ, ಉತ್ತರಾಧಿಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳಲ್ಲಿ ಅವರು ಹಸ್ತಕ್ಷೇಪ ಮಾಡಲಿಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಸರ್ಕಾರ ಜಾರಿಗೆ ತರಬಹುದು ಎಂದು 35ನೇ ವಿಧಿ (ಈಗ 44ನೇ ವಿಧಿ) ಹೇಳುತ್ತದೆ. ಆ ಪ್ರಕಾರ ಸರ್ಕಾರವು ಎಲ್ಲಾ ವಿವಾಹಗಳೂ ನೋಂದಣಿಯಾಗಬೇಕು. ಇಲ್ಲದಿದ್ದರೆ ಮದುವೆಯು ಅಸಿಂಧು ಆಗುತ್ತದೆ ಎಂದು ಕಾನೂನು ಮಾಡುತ್ತದೆ ಎಂದಿಟ್ಟುಕೊಳ್ಳಿ. ಈಗಾಗಲೇ ವೈಯಕ್ತಿಕ ಕಾನೂನುಗಳ ಅನ್ವಯ ನಡೆದಿರುವ ವಿವಾಹಗಳು ಅಸಿಂಧುವಾಗುವುದಿಲ್ಲವೇ? ಆ ಮದುವೆಯು ಹೊಸ ಕಾನೂನುಗಳ ಅನ್ವಯ ನೋಂದಣಿ ಆಗಿಲ್ಲ ಎಂದಾದರೆ, ಆ ದಂಪತಿಯ ಮಕ್ಕಳು ಅನಾಥರಾಗಬೇಕೆ? – ವೈಯಕ್ತಿಕ ಕಾನೂನುಗಳನ್ನು ನಿರಾಕರಿಸಿದರೆ ಆಗುವ ಪರಿಣಾಮದ ಒಂದು ಉದಾಹರಣೆ ಇದು.

ವೈಯಕ್ತಿಕ ಕಾನೂನುಗಳಲ್ಲಿ ಕೆಲವು ಕೆಟ್ಟ ಆಚರಣೆಗಳು ಇವೆ. ಅವನ್ನು ಬದಲಾಯಿಸಬಹುದು. ಸಂಬಂಧಿತ ಜನರಿಂದ ಒಪ್ಪಿಗೆ ಪಡೆದುಕೊಂಡೇ, ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೇ ಜಾರಿಗೆ ತರಬೇಕು ಎನ್ನುವುದು ನಮ್ಮ ಆಗ್ರಹ.

–ನಸೀರುದ್ದೀನ್‌ ಅಹಮ್ಮದ್‌, ಸಂವಿಧಾನ ರಚನಾ ಸಭೆಯಲ್ಲಿ ಪಶ್ಚಿಮ ಬಂಗಾಳದ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT