ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ| ಪ್ರಧಾನಿ ಮೋದಿ ವಿದೇಶಿ ಪ್ರವಾಸದ ವೇಳೆ
ದೇಶದಲ್ಲಿ ಆಗಿದ್ದೇನು...?
ಆಳ–ಅಗಲ| ಪ್ರಧಾನಿ ಮೋದಿ ವಿದೇಶಿ ಪ್ರವಾಸದ ವೇಳೆ ದೇಶದಲ್ಲಿ ಆಗಿದ್ದೇನು...?
Published 27 ಜೂನ್ 2023, 23:46 IST
Last Updated 27 ಜೂನ್ 2023, 23:46 IST
ಅಕ್ಷರ ಗಾತ್ರ

‘ದೇಶದಲ್ಲಿ ಏನಾಗುತ್ತಿದೆ?’. ಅಮರಿಕ ಮತ್ತು ಈಜಿಪ್ಟ್‌ನ ಆರು ದಿನಗಳ ಪ್ರವಾಸ ಮುಗಿಸಿ ಭಾನುವಾರ ಭಾರತಕ್ಕೆ ವಾಪಸಾದ ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿದ ಪ್ರಶ್ನೆ ಇದು. ಇದಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ‘ದೇಶವು ಸಂತೋಷವಾಗಿದೆ’ ಎಂದು ಹೇಳಿದ್ದಾರೆ. ಪ್ರಧಾನಿ ಮತ್ತು ಆಡಳಿತಾರೂಢ ‍ಪಕ್ಷದ ಅಧ್ಯಕ್ಷನ ನಡುವಣ ಈ ಪ್ರಶ್ನೋತ್ತರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಪ್ರಧಾನಿ ವಿದೇಶಿ ಪ್ರವಾಸಿದಲ್ಲಿ ಇದ್ದಾಗ ದೇಶದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮಣಿಪುರದಲ್ಲಿ ಸಂಘರ್ಷ ತೀವ್ರಮಟ್ಟಕ್ಕೆ ಮುಟ್ಟಿದೆ, ಅಸ್ಸಾಂನಲ್ಲಿ ಪ್ರವಾಹ ತಲೆದೋರಿದೆ, ದೇಶದ ಹಲವೆಡೆ ಹಲವು ಅವಘಡಗಳು ಸಂಭವಿಸಿವೆ ಹೀಗಿದ್ದೂ ‘ದೇಶವು ಸಂತೋಷವಾಗಿದೆ’ ಎಂದು ನಡ್ಡಾ ಉತ್ತರಿಸಿದ್ದಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಮೋದಿ ಅವರ ಆರು ದಿನಗಳ ವಿದೇಶ ಪ್ರವಾಸದ ಅವಧಿಯಲ್ಲಿ ದೇಶದಲ್ಲಾದ ಕೆಲವು ಪ್ರಮುಖ ಬೆಳವಣಿಗೆಗಳು ಇಂತಿವೆ

ಹಲವು ಅತ್ಯಾಚಾರ ಪ್ರಕರಣಗಳು

  • ಜೂನ್‌ 20ರಿಂದ ಜೂನ್‌ 25ರ ರಾತ್ರಿವರೆಗೆ ದೇಶದಾದ್ಯಂತ ಆರು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ವರದಿಯಾಗಿವೆ. ಈ ಅವಧಿಯಲ್ಲಿ ದೇಶದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳ ವಿವರ ಇಂತಿದೆ

  • ಉತ್ತರ ಪ್ರದೇಶದ ಮೀರಠ್‌ನಲ್ಲಿ ಇದೇ 21ರಂದು 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಸುದ್ದಿ ಬಹಿರಂಗವಾಗಿದೆ. ರಮೇಶ್ ಚಂದ್ರ ಗುಪ್ತಾ (67) ಎಂಬ ವಕೀಲ ತನ್ನದೇ ಕಚೇರಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುವ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆತನ ವಿರದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ

  • ರಾಜಸ್ಥಾನದ ಬಿಕಾನೇರ್‌ನಲ್ಲಿ ಜೂನ್‌ 21ರಂದು ದಲಿತ ಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರೂ ಆರೋಪಿಗಳಾಗಿದ್ದರು. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ

  • ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಪುನರ್ವಸತಿ ಕೇಂದ್ರದಲ್ಲಿ ಇದ್ದ 17 ವರ್ಷ ಬಾಲಕಿ ಇದೇ ಜೂನ್‌ 21ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ಆನಂತರ ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು

  • ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ದಲಿತ ಬಾಲಕಿ (16) ಮೇಲೆ ಅತ್ಯಾಚಾರ ನಡೆದಿತ್ತು. ‌ಆ ಪ್ರಕರಣದ ಆರೋಪಿ ಪೊಲೀಸರ ಬಂಧನದಿಂದ ಜೂನ್‌ 21ರಂದು ತಪ್ಪಿಸಿಕೊಂಡಿದ್ದ. ಜೂನ್‌ 23ರಂದು ಮರಕ್ಕೆ ನೇಣುಹಾಕಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ

  • ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಜೂನ್‌ 25ರಂದು 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ

  • ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಆರು ವರ್ಷದ ಬಾಲಕಿ ಮೇಲೆ ಇಬ್ಬರು ಬಾಲಕರು ಜೂನ್‌ 25ರಂದು ಅತ್ಯಾಚಾರ ನಡೆಸಿದ್ದಾರೆ. ಅತ್ಯಾಚಾರದ ನಂತರ ತೀವ್ರ ಅಸ್ವಸ್ಥಳಾಗಿದ್ದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ.

  • ಉತ್ತರ ಪ್ರದೇಶದ ಬಲಿಯಾದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು 45 ವರ್ಷದ ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ. ಅತ್ಯಾಚಾರ ಯತ್ನ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ

ವಿದ್ಯುತ್ ದರದಲ್ಲಿ ರಿಯಾಯಿತಿ ಮತ್ತು ಏರಿಕೆ

ವಿದ್ಯುತ್ ದರದಲ್ಲಿ ಏಕಕಾಲಕ್ಕೆ ರಿಯಾಯಿತಿ ನೀಡುವ ಮತ್ತು ಏರಿಕೆಯನ್ನೂ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಹಗಲಿನಲ್ಲಿ ಬಳಸುವ ವಿದ್ಯುತ್‌ನ ದರದಲ್ಲಿ ಶೇ 10–20ರಷ್ಟು ರಿಯಾಯಿತಿ ಘೋಷಿಸಿದೆ. ಆದರೆ ವಿದ್ಯುತ್‌ಗೆ ಹೆಚ್ಚು ಬೇಡಿಕೆ ಇರುವ ರಾತ್ರಿಯ ಸಂದರ್ಭದಲ್ಲಿ ವಿದ್ಯುತ್ ಬಳಸಿದರೆ ಅದರ ದರದಲ್ಲಿ ಶೇ 10–20ರಷ್ಟು ಏರಿಕೆಯಾಗಲಿದೆ.  ಹಗಲು ವೇಳೆ ಸೌರವಿದ್ಯುತ್ ಲಭ್ಯತೆ ಇರುವ ಕಾರಣ ದರದಲ್ಲಿ ಕಡಿತ ಮಾಡಲಾಗಿದೆ. ರಾತ್ರಿಯ ವೇಳೆ ಪಳೆಯುಳಿಕೆ ಇಂಧನಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಕಾರಣ ದರವನ್ನು ಶೇ 10–20ರಷ್ಟು ಏರಿಕೆ ಮಾಡಲಾಗಿದೆ ಎಂದು ಸರ್ಕಾರವು ಜೂನ್‌ 23ರಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಹಗಲಿನ ವೇಳೆ ವಿದ್ಯುತ್‌ನ ಬೇಡಿಕೆ ಮತ್ತು ಬಳಕೆ ಕಡಿಮೆ ಇರುತ್ತದೆ. ಹೀಗಾಗಿ ರಿಯಾಯಿತಿಯಿಂದ ಹೆಚ್ಚಿನ ಲಾಭವೇನೂ ಆಗುವುದಿಲ್ಲ. ಆದರೆ ರಾತ್ರಿಯ ವೇಳೆ ವಿದ್ಯುತ್‌ನ ಬಳಕೆ ಪ್ರಮಾಣ ಹೆಚ್ಚು. ಅಂತಿಮವಾಗಿ ವಿದ್ಯುತ್‌ನ ದರ ಏರಿಕೆಯಾಗಲಿದೆ.  ಆದರೆ 2024ರ ಏಪ್ರಿಲ್‌ನಿಂದ ಈ ದರ ವ್ಯತ್ಯಾಸ ವಾಣಿಜ್ಯ ಬಳಕೆದಾರರಿಗೆ ಮತ್ತು ಕೈಗಾರಿಕೆಗಳಿಗೆ ಅನ್ವಯವಾಗಲಿದೆ. 2025ರ ಏಪ್ರಿಲ್‌ನಿಂದ ಎಲ್ಲರಿಗೂ ಅನ್ವಯವಾಗಲಿದೆ.

ಸ್ವಯಂಘೋಷಿತ ಗೋರಕ್ಷಕರ ದಾಳಿ

ದೇಶದಲ್ಲಿ ಸ್ವಯಂಘೋಷಿತ ಗೋರಕ್ಷಕರು ದಾಳಿ ನಡೆಸಿದ ಒಂದು ಪ್ರಕರಣ ವರದಿಯಾಗಿದೆ. ಈ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆಯೂ ನಡೆದಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಾರಿನಲ್ಲಿ ಮೇಕೆಯ ಮಾಂಸ ಸಾಗಿಸುತ್ತಿದ್ದ ಅಫಾನ್‌ ಅನ್ಸಾರಿ ಮತ್ತು ನಾಸಿರ್ ಖುರೇಶಿ ಎಂಬವರ ಮೇಲೆ 15 ಜನರಿದ್ದ ಸ್ವಯಂಘೋಷಿತ ಗೋರಕ್ಷಕರ ತಂಡವು ಹಲ್ಲೆ ನಡೆಸಿದೆ. ಹಲ್ಲೆಯ ತೀವ್ರತೆಗೆ ಅನ್ಸಾರಿ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದೆ. ಮುಂಗಾರು ಪ್ರವೇಶ ತಡವಾಗಿಯಾದರೂ ದೇಶದ ಹಲವು ರಾಜ್ಯಗಳಿಗೆ ನೈರುತ್ಯ ಮುಂಗಾರು ಮಾರುತ ಪ್ರವೇಶಿಸಿದೆ. ಕೇರಳ ಕರ್ನಾಟಕ ಮಹಾರಾಷ್ಟ್ರ ಗೋವಾ ಮಧ್ಯಪ್ರದೇಶ ಗುಜರಾತ್ ಛತ್ತೀಸಗಡ ರಾಜಸ್ಥಾನ ಮತ್ತು ದೆಹಲಿಗೆ ಮುಂಗಾರು ಪ್ರವೇಶಿಸಿದೆ

ಮಣಿಪುರ ಹಿಂಸಾಚಾರ ತೀವ್ರ

ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ಜೂನ್‌ 21ಕ್ಕೆ 50 ದಿನ ಕಳೆಯಿತು. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಮೆರಿಕ ಪ್ರವಾಸದಲ್ಲಿ ಇದ್ದರು. ಜೊತೆಗೆ ಅಂತರರಾಷ್ಟ್ರೀಯ ಯೋಗ ದಿನದ (ಜೂನ್‌ 21) ಅಂಗವಾಗಿ ವಿಶ್ವಸಂಸ್ಥೆಯ ಮುಖ್ಯಕಚೇರಿ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯೋಗದ ಮಹತ್ವವನ್ನು ವಿದೇಶಿಯರಿಗೆ ತಿಳಿಸಿಕೊಟ್ಟರು.  ಮೈತೇಯಿ ಹಾಗೂ ಕುಕಿ ಎಂಬ ಎರಡು ಪ್ರಮುಖ ಸಮುದಾಯಗಳ ನಡುವೆ ಆರಂಭವಾದ ಸಂಘರ್ಷವು ಹಿಂಸಾಚಾರದ ಸ್ವರೂಪ ಪಡೆದಿಕೊಂಡಿದೆ. ಹಾಗಿದ್ದರೂ ಇಲ್ಲಿಯವರೆಗೂ ಪ್ರಧಾನಿ ಮೋದಿ ಅವರು ಒಮ್ಮೆಯೂ ಈ ಬಗ್ಗೆ ಮಾತನಾಡಿಲ್ಲ ಎಂಬುದು ಮಣಿಪುರ ಜನರ ಹಾಗೂ ವಿರೋಧ ಪಕ್ಷಗಳ ಆಕ್ರೋಶ. ಹಿಂಸಾಚಾರದ ಕುರಿತು ಸರ್ವಪಕ್ಷ ಸಭೆ ಕರೆಯಬೇಕು ಎಂದು ಸುಮಾರು 10 ವಿರೋಧ ಪಕ್ಷಗಳು ಜೂನ್‌ 10ರಿಂದ ಪ್ರಧಾನಿ ಮೋದಿ ಅವರನ್ನು ಆಗ್ರಹಿಸಿದ್ದವು. ಈ ಸಂಬಂಧ ಪ್ರಧಾನಿ ಕಚೇರಿಗೆ ಮನವಿ ಪತ್ರವನ್ನೂ ನೀಡಿದ್ದರು. ನಂತರ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ ಬಳಿಕ ಜೂನ್‌ 24ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದೆ. ‘ಮಣಿಪುರದಲ್ಲಿ ನಡೆಯುತ್ತಿರುವ ಸಂಗತಿಗಳ ಕುರಿತು ಒಂದು ದಿನವೂ ಬಿಡದಂತೆ ನಿತ್ಯವೂ ಪ್ರಧಾನಿ ಮೋದಿ ಅವರೊಂದಿಗೆ ನಾನು ಮಾತನಾಡುತ್ತಿದ್ದೇನೆ. ರಾಜ್ಯದಲ್ಲಿ ಶಾಂತಿ ನೆಲೆಸಲು ಪ್ರಧಾನಿ ಅವರ ಸಲಹೆ ಸೂಚನೆಯಂತೆ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ ಎಂದು ಸಭೆಯಲ್ಲಿ ಸಚಿವ ಅಮಿತ್‌ ಶಾ ಅವರು ಹೇಳಿದರು’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಅವರು ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಪ್ರಧಾನಿ ಮೋದಿ ಅವರು ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಬಳಿಕ ಬಿಜೆಪಿ ಅಧ್ಯಕ್ಷ ನಡ್ಡಾ ಅವರಿಗೆ ಕೇಳಿದ ಪ್ರಶ್ನೆ ಹಾಗೂ ಅಮಿತ್‌ ಶಾ ಅವರು ಸಭೆಯಲ್ಲಿ ಕೇಳಿದ್ದಕ್ಕೂ ತಾಳೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ. ‘ಮಣಿಪುರವು ಹೊತ್ತಿ ಉರಿಯುತ್ತಿದೆ. ಇದು ಪ್ರಧಾನಿ ಅವರಿಗೆ ತಿಳಿದಿಲ್ಲವೇ?’ ಎಂದು ಟ್ವಿಟರ್‌ನಲ್ಲಿ ಹಲವರು ಪ್ರಶ್ನಿಸಿದ್ದಾರೆ. ವಿರೋಧ ಪಕ್ಷಗಳೂ ಇದೇ ಪ್ರಶ್ನೆಯನ್ನೇ ಕೇಳಿವೆ. ಹಿಂಸಾಚಾರ ಪೀಡಿತ ಮಣಿಪುರಕ್ಕೆ ಎಲ್ಲಾ ಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಬೇಕು ಎಂದೂ ವಿರೋಧ ಪಕ್ಷಗಳ ಆಗ್ರಹಿಸಿವೆ. 120; ಮಣಿಪುರ ಹಿಂಸಾಚಾರದಲ್ಲಿ ಈವರೆಗೆ ಮೃತಪಟ್ಟವರು 3000; ಮಣಿಪುರ ಹಿಂಸಾಚಾರದಲ್ಲಿ ಈವರೆಗೆ ಗಾಯಗೊಂಡವರ ಸಂಖ್ಯೆ

ಮುಂಗಾರು ಪ್ರವೇಶ

ತಡವಾಗಿಯಾದರೂ ದೇಶದ ಹಲವು ರಾಜ್ಯಗಳಿಗೆ ನೈರುತ್ಯ ಮುಂಗಾರು ಮಾರುತ ಪ್ರವೇಶಿಸಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸಗಡ, ರಾಜಸ್ಥಾನ ಮತ್ತು ದೆಹಲಿಗೆ ಮುಂಗಾರು ಪ್ರವೇಶಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT