ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಜಾತಿ ಪೋಷಣೆಯ ನವವಿಧಾನ

Last Updated 27 ನವೆಂಬರ್ 2020, 21:21 IST
ಅಕ್ಷರ ಗಾತ್ರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು 1975ರಲ್ಲಿ ಆರಂಭವಾಯಿತು. ಅದುವರೆಗೆ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನಂತಹ‌ (ಎಂಎಸ್‌ಐಎಲ್‌) ಸರ್ಕಾರಿ ಅಧೀನದ ಸಂಸ್ಥೆಗಳಿದ್ದವಾದರೂ ಅವು ಜನರಿಗೆ ಸೌಲಭ್ಯ ನೀಡುವುದಕ್ಕೆ ರಚನೆಯಾದವುಗಳಲ್ಲ.

1956ರ ಕಂಪನಿ ಕಾಯ್ದೆ ಅನ್ವಯ ಸ್ಥಾಪಿಸಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೆಸರನ್ನು 2005ರ ಅ.13ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಎಂದು ಬದಲಾಯಿಸಲಾಯಿತು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ರಚನೆಯಾದ ಬಳಿಕ ಈ ನಿಗಮದ ಹೊಣೆ ಪರಿಶಿಷ್ಟ ಜಾತಿಯವರ ಏಳಿಗೆಗೆ ಸೀಮಿತವಾಗಿದೆ. ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು1977ರಲ್ಲಿ ಸ್ಥಾಪಿಸಲಾಯಿತು. ಇದರ ಈಗಿನ ಹೆಸರು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ. 1990ರ ದಶಕಗಳವರೆಗೂ ಈ ಎರಡು ನಿಗಮಗಳ ಅಡಿಯಲ್ಲೇ ಪರಿಶಿಷ್ಟ, ಹಿಂದುಳಿದ ವರ್ಗದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಎಲ್ಲ ಜಾತಿಗಳಿಗೂ ಸವಲತ್ತುಗಳನ್ನು ಒದಗಿಸಲಾಗುತ್ತಿತ್ತು.

ಈ ನಿಗಮಗಳ ಹಿಂದಿದ್ದ ಉದ್ದೇಶ ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವುದು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವುದು. ತನ್ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವುದು. ಈ ಕಾರ್ಯಕ್ಕಾಗಿಯೇ ಇಲಾಖೆಗಳು ಇರುವಾಗ ಪ್ರತ್ಯೇಕ ನಿಗಮಗಳ ಅಗತ್ಯವೇನು ಎಂಬ ಪ್ರಶ್ನೆ ಮೂಡುವುದು ಸಹಜ.

ಇಲಾಖೆಗಳ (ಆಯುಕ್ತಾಲಯ/ ನಿರ್ದೇಶನಾಲಯ/ ಪ್ರಾಧಿಕಾರ) ಮೂಲಕ ಸಬ್ಸಿಡಿ ರೂಪದ ಸವಲತ್ತುಗಳನ್ನು ತಲುಪಿಸಬಹುದು. ಆದರೆ, ಸಾಲ ನೀಡಿ ಅದನ್ನು ಮರುವಸೂಲಿ ಮಾಡುವ ಅಧಿಕಾರ ಅವುಗಳಿಗಿಲ್ಲ. ಆದರೆ, ನಿಗಮಗಳು ಹಾಗಲ್ಲ. ಅವು ಕಂಪನಿ ಕಾಯ್ದೆಯನ್ವಯ ಕಾರ್ಯನಿರ್ವಹಿಸುವ ಸ್ವತಂತ್ರ ಸಂಸ್ಥೆಗಳು. ಆಯುಕ್ತಾಲಯ/ ನಿರ್ದೇಶನಾಲಯಗಳಿಗಿಂತ ನಿಗಮಗಳಿಗೆ ಇರುವ ಹಣಕಾಸು ಸ್ವಾತಂತ್ರ್ಯ ಹೆಚ್ಚು. ಹಾಗಾಗಿ ಆರ್ಥಿಕ ಸಮಾನತೆ ಸಾಧಿಸಲು ಜನರನ್ನು ಪ್ರೇರೇಪಿಸುವ ಮತ್ತು ಸಶಕ್ತರನ್ನಾಗಿಸುವ ಉದ್ದೇಶಕ್ಕೆ ನಿಗಮಗಳ ಅಗತ್ಯ ಇದೆ. ಅಲ್ಲದೇ, ಕೇಂದ್ರ ಸರ್ಕಾರದಲ್ಲೂ ನಿಗಮಗಳಿದ್ದು, ಅವುಗಳ ಕೆಲವು ಆರ್ಥಿಕ ಸವಲತ್ತುಗಳನ್ನು ರಾಜ್ಯ ಮಟ್ಟದ ನಿಗಮಗಳ ಮೂಲಕ ಜನರಿಗೆ ತಲುಪಿಸುವುದು ಸುಲಭ.

ನಿಗಮಗಳು ಬೇಕು ನಿಜ. ಆದರೆ, ಪ್ರತಿಯೊಂದು ಜಾತಿಗೂ ಪ್ರತ್ಯೇಕ ನಿಗಮದ ಅಗತ್ಯವಿದೆಯೇ ಎಂಬುದು ಪ್ರಶ್ನೆ. ಹಿಂದುಳಿದ ಸಮುದಾಯಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮೇಲಕ್ಕೆತ್ತಲು ನೆರವಾಗಬೇಕಾದ ನಿಗಮಗಳಲ್ಲಿ ನಾವು ಕಾಣುತ್ತಿರುವುದೇ ಬೇರೆ. ಈ ನಿಗಮಗಳು ಸಮಾಜದಲ್ಲಿ ಜಾತಿ ಪರಂಪರೆಯನ್ನು ಪೋಷಿಸುವ ‘ಗೊಬ್ಬರ’ದಂತಾಗಿಬಿಟ್ಟಿವೆ.

ಕೆಲವು ಜಾತಿಗಳ ಮುಖಂಡರು ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿ ಸಮಾವೇಶಗಳನ್ನು ನಡೆಸುವುದು, ತಮ್ಮ ಜಾತಿಯ ಜನರ ಸಂಖ್ಯೆ ‘ಇಷ್ಟು ಲಕ್ಷ, ಇಷ್ಟು ಕೋಟಿ ಇದೆ’ ಎಂದು ಬಿಂಬಿಸುವುದು, ‘ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ನಿಮಗೆ ಕಷ್ಟವಾದೀತು’ ಎಂದು ರಾಜಕೀಯ ಪಕ್ಷಗಳಿಗೆ ನೇರ ಬೆದರಿಕೆ ಒಡ್ಡುವುದೆಲ್ಲ ಗುಟ್ಟಿನ ವಿಚಾರಗಳೇನಲ್ಲ.

ಇಷ್ಟಕ್ಕೇ ಇದು ನಿಲ್ಲುವುದಿಲ್ಲ. ನಿರ್ದಿಷ್ಟ ಜಾತಿಯ ನಿಗಮಕ್ಕೆ ಆ ಜಾತಿಯವರೇ ಅಧ್ಯಕ್ಷರಾಗಬೇಕು, ಅವರೇ ಆಡಳಿತ ಮಂಡಳಿ ಸದಸ್ಯರಾಗಬೇಕು. ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರಿಂದ ಹಿಡಿದು, ಅಧ್ಯಕ್ಷರ ಕಾರು ಚಾಲಕನವರೆಗೆ ಅಷ್ಟೂ ಸಿಬ್ಬಂದಿ ಆ ಜಾತಿಯವರೇ ಆಗಬೇಕು. ಇದು ಜಾತಿಯನ್ನು ಪೋಷಿಸುವ ನವವಿಧಾನ.

ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ 101 ಜಾತಿಗಳು, ಹಿಂದುಳಿದ ವರ್ಗಗಳಲ್ಲಿ 207 ಜಾತಿಗಳಿವೆ. ಒಂದೇ ನಿಗಮದ ಮೂಲಕ ಎಲ್ಲ ಜಾತಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಅವುಗಳಿಗೆ ಒದಗಿಸುವ ಒಟ್ಟು ಅನುದಾನವನ್ನು ಹರಿದು ಹಂಚುವಾಗ ತೀರಾ ಹಿಂದುಳಿದ ಜಾತಿಗಳಿಗೆ ಏನೂ ದಕ್ಕುವುದಿಲ್ಲ. ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಿ ವಿಶೇಷ ಸವಲತ್ತು ನೀಡಿದರೆ ಮಾತ್ರ ಆ ಜಾತಿಯ ಜನರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತಲು ಸಾಧ್ಯ ಎಂಬುದು ಜಾತಿಗೊಂದರಂತೆ ನಿಗಮ ರಚಿಸುವುದಕ್ಕೆ ಸರ್ಕಾರ ನೀಡುವ ಸಮಜಾಯಿಷಿ.

ಇದು ನಿಜವೇ ಎಂದು ವಿಶ್ಲೇಷಿಸಿದರೆ ಬೇರೆಯೇ ಸತ್ಯದ ದರ್ಶನವಾಗುತ್ತದೆ. ಜಾತಿಗೊಂದು ನಿಗಮ ರಚಿಸಿದರೂ ಅವುಗಳಿಗೆ ಹಂಚಿಕೆ ಮಾಡುವ ವಾರ್ಷಿಕ ಅನುದಾನ ₹10 ಕೋಟಿಯಿಂದ ₹50 ಕೋಟಿ ಮಾತ್ರ (ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಇದಕ್ಕೆ ಅಪವಾದ. ಅದಕ್ಕೆ ₹500 ಕೋಟಿ ಮಂಜೂರು ಮಾಡುವುದಾಗಿ ಸರ್ಕಾರ ಹೇಳಿದೆ). ನಿಗಮಗಳ ನಿರ್ವಹಣೆಗೆ ಸರ್ಕಾರ ಪ್ರತ್ಯೇಕ ಅನುದಾನ ನೀಡುವುದಿಲ್ಲ. ಅದರ ಸಿಬ್ಬಂದಿಯ ಸಂಬಳದಿಂದ ಹಿಡಿದು ಕಾಗದ ಪತ್ರ ಖರೀದಿಸುವವರೆಗೆ ಅಷ್ಟೂ ವೆಚ್ಚವನ್ನು ನಿಗಮವೇ ಭರಿಸಬೇಕು. ಕಿರು ಸಾಲಗಳಿಂದ ಬರುವ ಬಡ್ಡಿಯ ಹಣದಲ್ಲೇ ಈ ವೆಚ್ಚಗಳನ್ನು ನಿಗಮಗಳು ಸರಿದೂಗಿಸಿಕೊಳ್ಳಬೇಕಾದ ಸ್ಥಿತಿ ಇದೆ. ನಿಗಮಕ್ಕೆ ನೇಮಕಗೊಳ್ಳುವ ಅಧ್ಯಕ್ಷರು ಮೊದಲು ಮಾಡುವ ಕೆಲಸ ಕಚೇರಿ ನವೀಕರಣ. ತಮ್ಮ ಹುದ್ದೆ ಸಚಿವ ದರ್ಜೆಯದ್ದಲ್ಲವೇ, ಹಾಗಾಗಿ ಓಡಾಟಕ್ಕೊಂದು ದುಬಾರಿ ಕಾರು ಇರದಿದ್ದರೆ ಹೇಗೆ ಎಂದು ಕಾರಿನ ಬೇಡಿಕೆ ಇಡುತ್ತಾರೆ. ನಿಗಮಕ್ಕೆ ಮಂಜೂರಾದ ಅನುದಾನದ ಗಮನಾರ್ಹ ಮೊತ್ತ ಕಚೇರಿ ನವೀಕರಣ, ಕಾರು ಖರೀದಿಗೇ ಕರಗಿ ಹೋಗಿರುತ್ತದೆ. ಇನ್ನು ಅವರ ಜಿಲ್ಲಾ ಪ್ರವಾಸ, ಸಭೆ ಸಮಾರಂಭಗಳಿಗೂ ಒಂದಿಷ್ಟು ರೊಕ್ಕ ಬೇಕು. ಸರ್ಕಾರದಿಂದ ಮಂಜೂರಾದ ಅನುದಾನದಲ್ಲಿ ಅರ್ಧದಷ್ಟೂ ಫಲಾನುಭವಿಗಳನ್ನು ತಲುಪುವುದಿಲ್ಲ. ನಿಗಮವೊಂದರಲ್ಲಿ ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಬಿಚ್ಚಿಟ್ಟ ಒಳಗುಟ್ಟು ಇದು.

‘ಬಹುತೇಕ ನಿಗಮಗಳಲ್ಲಿ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆಯುವುದೇ ಇಲ್ಲ. ಅಧ್ಯಕ್ಷರ ಚೇಲಾಗಳು ಅಥವಾ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಪುಡಾರಿಗಳೇ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಕಿರುಸಾಲವಾದರೆ, ಅದರ ಸಬ್ಸಿಡಿ ಮೊತ್ತದಲ್ಲಿ ಕಾಲು ಭಾಗ ಪುಡಾರಿಗಳ ಜೇಬು ಸೇರುತ್ತದೆ. ಫಲಾನುಭವಿಯೂ ಸಿಕ್ಕಿದ್ದೇ ಲಾಭ ಎಂದು ಸುಮ್ಮನಿರುತ್ತಾನೆ. ಇನ್ನು ವಾಹನ ಸಾಲ, ಪರಿಕರಗಳ ಖರೀದಿ ಸಾಲಗಳಲ್ಲಿ ಆಡಳಿತ ಮಂಡಳಿಯವರ ಜೊತೆಗೆ ಅಧಿಕಾರಿಗಳಿಗೂ ಪಾಲು ಇರುತ್ತದೆ’ ಎಂದು ಅವರು ಸವಲತ್ತುಗಳ ಅಸಲಿಯತ್ತುಗಳನ್ನು ತೆರೆದಿಟ್ಟರು.

ನಿಗಮಗಳ ಮೂಲಕ ನೀಡುವ ಕಿರು ಸಾಲಗಳು ನಿರ್ದಿಷ್ಟ ಜಾತಿಯೊಳಗೇ ಅಸಹಜ ಪೈಪೋಟಿಗೂ ಕಾರಣವಾಗುತ್ತವೆ ಎಂಬುದು ಇನ್ನೊಂದು ಕರಾಳ ಸತ್ಯ. ಉದಾಹರಣೆಗೆ ಸವಿತಾ ಸಮಾಜದವರಿಗೆ ನೀಡುವ ಕಿರುಸಾಲ ಕ್ಷೌರದಂಗಡಿ ನಿರ್ಮಾಣಕ್ಕೆ, ಅವುಗಳ ನವೀಕರಣಕ್ಕೆ ಬಳಕೆಯಾಗುವುದೇ ಹೆಚ್ಚು. ‘ಒಂದೇ ಊರಿನಲ್ಲಿ ಅನೇಕ ಫಲಾನುಭವಿಗಳು ಕ್ಷೌರದಂಗಡಿ ನಿರ್ಮಿಸಿ, ಅವರವರೇ ಕಿತ್ತಾಟ ಶುರು ಹಚ್ಚಿಕೊಂಡ ಉದಾಹರಣೆಗಳಿವೆ’ ಎಂದು ಅವರು ವಿವರಿಸಿದರು.

ಜಾತಿಗೊಂದು ನಿಗಮ ಸ್ಥಾಪಿಸದೆಯೂ ಪರಿಶಿಷ್ಟರ ಹಾಗೂ ಹಿಂದುಳಿದವರ ಏಳಿಗೆಗೆ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ. ಹಿಂದುಳಿದ ವರ್ಗಗಳ ನಿಗಮ ಅಥವಾ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಗಮವನ್ನು ಮಾತ್ರ ಉಳಿಸಿಕೊಂಡು, ಅವುಗಳ ಅಧೀನದ ತೀರಾ ಹಿಂದುಳಿದ ಜಾತಿಗಳಿಗೆ ವಿಶೇಷ ಸವಲತ್ತು ಒದಗಿಸುವ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಬಹುದು. ನಿಗಮಗಳಿಗೆ ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಕಚೇರಿಗಳನ್ನು ಹೊಂದುವ, ಸಿಬ್ಬಂದಿಯನ್ನು ನೇಮಿಸುವ ಅನಗತ್ಯ ವೆಚ್ಚಗಳನ್ನು ತಪ್ಪಿಸಬಹುದು. ನಿರ್ವಹಣಾ ವೆಚ್ಚ ಕಡಿಮೆ ಮಾಡಿ ಫಲಾನುಭವಿಗಳಿಗೆ ಹೆಚ್ಚಿನ ಸವಲತ್ತು ಸಿಗುವಂತೆ ಮಾಡಬಹುದು.

ಆದರೆ, ನಿಗಮ ಮಂಡಳಿಗಳು ಇರುವುದೇ ರಾಜಕೀಯ ಅತೃಪ್ತರ ಪುನರ್ವಸತಿಗೆ ಎಂದು ಭಾವಿಸಿರುವ ರಾಜಕಾರಣಿಗಳಿಂದ ಇಂತಹ ಸಕಾರಾತ್ಮಕ ಚಿಂತನೆಗಳನ್ನು ನಿರೀಕ್ಷಿಸಬಹುದೇ ಎಂಬುದು ಯಕ್ಷಪ್ರಶ್ನೆ?

ಹತ್ತಾರು ನಿಗಮಗಳು
ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ, ಕರ್ನಾಟಕ ಆರ್ಯ ವೈಶ್ಯ ಅಭಿವೃದ್ದಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಗಳಿವೆ. ಅಲೆಮಾರಿ ಕೋಶವೂ ಇದೆ. ಜತೆಗೆ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ ನಿಗಮವನ್ನು 2018ರಲ್ಲಿ ಸ್ಥಾಪಿಸಲಾಗಿದೆ. ಕರ್ನಾಟಕ ಕಾಡುಗೊಲ್ಲ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಗಳು ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಡಾ.ಬಾಬು ಜಗಜೀವನ್ ರಾಮ್ ಚರ್ಮದ ಕೈಗಾರಿಕೆ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮಗಳಿವೆ. ಬ್ರಾಹ್ಮಣರ ಅಭಿವೃದ್ಧಿ ನಿಗಮವು ಕಂದಾಯ ಇಲಾಖೆ ಅಧೀನದಲ್ಲಿದೆ. ಪ್ರಮುಖ ಜಾತಿಗಳಾದ ಕುರುಬ, ನೇಕಾರ, ಒಕ್ಕಲಿಗ, ಈಡಿಗ/ ಬಿಲ್ಲವ, ಬಲಿಜ, ಕೊಡವ ಸಮಾಜಗಳೂ ಪ್ರತ್ಯೇಕ ನಿಗಮಕ್ಕೆ ಬೇಡಿಕೆ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT