ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್ ಭಾರತದ `ಡಬಲ್ಸ್' ದಂಡು

Last Updated 23 ಜೂನ್ 2013, 19:59 IST
ಅಕ್ಷರ ಗಾತ್ರ

ಪ್ರಸ್ತುತ ವರ್ಷದ ಮೂರನೇ ಗ್ರ್ಯಾನ್‌ಸ್ಲಾಮ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್ ಇಂದು ಆರಂಭವಾಗಿದೆ.  ಇದೇ ಮೊದಲ ಬಾರಿಗೆ ಭಾರತದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಡಬಲ್ಸ್ ನಲ್ಲಿ ಸ್ಪರ್ಧಿಸುತ್ತಿದ್ದಾರೆ.  ದಿವಿಜ್ ಶರಣ್ ಮತ್ತು ಪುರವ್ ರಾಜಾ ಭಾರತದ ಹೊಸ ಜೋಡಿಯಾಗಿ ಡಬಲ್ಸ್ ಅಂಕಣಕ್ಕೆ ಇಳಿಯಲಿದ್ದಾರೆ. ಇದು ಅವರ ಮೊದಲ ಗ್ರ್ಯಾನ್‌ಸ್ಲಾಮ್ ಪ್ರವೇಶವೂ ಆಗಿದೆ.

ಉದಯೋನ್ಮುಖ ಆಟಗಾರರಾದ ದಿವಿಜ್-ಪುರವ್ ಈಗಾಗಲೆ ನಾಲ್ಕು ಪ್ರಮುಖ ಟೂರ್ನಿಗಳಲ್ಲಿ ಫೈನಲ್ ಹಂತವನ್ನು ತಲುಪಿದ್ದು ಆ ಪೈಕಿ ಕ್ಯುಟೊ ಟೂರ್ನಿಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

  ವಿಂಬಲ್ಡನ್ ಅರ್ಹತಾ ಸುತ್ತಿನಲ್ಲಿ ನಾಲ್ಕನೇ  ಶ್ರೇಯಾಂಕ ಪಡೆದಿದ್ದ ಈ ಜೋಡಿ ವಾಕ್‌ಓವರ್ ಪಡೆದ ಕಾರಣ ಪ್ರಧಾನ ಹಂತದಲ್ಲಿ ಆಡುವ ಅವಕಾಶ ಗಿಟ್ಟಿಸಿತು. ಡೇವಿಸ್‌ಕಪ್‌ನಲ್ಲಿ ಕೂಡಾ ಆಡಿರುವ ಇವರು ವಿಂಬಲ್ಡನ್‌ನಲ್ಲಿ ಭಾರತದ ಹೊಸ ಆಶಾಕಿರಣವಾಗಿದ್ದಾರೆ. ಅಚ್ಚರಿಯ ಫಲಿತಾಂಶವನ್ನು ಈ ಜೋಡಿಯಿಂದ ನಿರೀಕ್ಷಿಸಬಹುದು.

ಕಳೆದ ವಾರ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಭಾರತ ಟೆನಿಸ್‌ನ `ದೊಡ್ಡಣ್ಣ' ಲಿಯಾಂಡರ್ ಪೇಸ್ ಪುರುಷರ ಡಬಲ್ಸ್‌ನಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜತೆ ಆಡಲಿದ್ದು ಈ ಜೋಡಿಗೆ ನಾಲ್ಕನೇ ಶ್ರೇಯಾಂಕವನ್ನು ನೀಡಲಾಗಿದೆ.  ಅತಿ ಹೆಚ್ಚಿನ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ( 7 ಡಬಲ್ಸ್ ಮತ್ತು 6 ಮಿಶ್ರ ಡಬಲ್ಸ್) ಗಳಿಸಿರುವ ಪೇಸ್ 1999ರ ಫಲಿತಾಂಶವನ್ನು ಈ ಬಾರಿ ಪುನರಾವರ್ತಿಸುವರೆ ಎಂಬುದನ್ನು ಕಾದು ನೋಡಬೇಕಿದೆ. ಆ ವರ್ಷ ಅವರು ಮಹೇಶ್ ಭೂಪತಿ ಜತೆ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಗಳಿಸಿದ್ದರು.

  ಪೇಸ್ ಅವರನ್ನು ಬಿಟ್ಟರೆ ಮಹೇಶ್ ಭೂಪತಿ ಗ್ರ್ಯಾನ್‌ಸ್ಲಾಮ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಪೇಸ್ ಜತೆ ಮೂರು ಬಾರಿ ಸೇರಿದಂತೆ ಒಟ್ಟು ನಾಲ್ಕು ಗ್ರ್ಯಾನ್‌ಸ್ಲಾಮ್ ಗಳಿಸಿರುವ ಮಹೇಶ್ ಅವರು ಇದೀಗ ಆಸ್ಟ್ರೀಯಾದ ಜೂಲಿಯನ್ ನೋಲ್ ಅವರ ಜತೆ ಕಣಕ್ಕಿಳಿಯುತ್ತಿದ್ದು ಈ ಜೋಡಿಗೆ ಎಂಟನೇ ಶ್ರೇಯಾಂಕ ಕೊಡಲಾಗಿದೆ. ಮಹೇಶ್ 2002ರ ನಂತರ ಮಿಶ್ರ ಡಬಲ್ಸ್‌ನಲ್ಲಿ ಮಾತ್ರ ಪ್ರಶಸ್ತಿ ಗಳಿಸಿದ್ದಾರೆ. ಒಟ್ಟಾರೆ ಎಂಟು ಮಿಶ್ರ ಡಬಲ್ಸ್ ಗ್ರ್ಯಾನ್‌ಸ್ಲಾಮ್ ಪಡೆದಿರುವ ಅವರು ಈ ಬಾರಿ ಡಬಲ್ಸ್‌ನಲ್ಲಿ ಪ್ರಶಸ್ತಿ ಪಡೆಯುವರೇ ಎಂಬುದನ್ನು ಕಾದು ನೋಡಬೇಕಿದೆ.

ಪುರುಷರ ಡಬಲ್ಸ್‌ನಲ್ಲಿ ಆಡುವ ಮತ್ತೊಬ್ಬ ಭಾರತೀಯನೆಂದರೆ ರೋಹನ್ ಬೋಪಣ್ಣ. ಇನ್ನೂ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗಳಿಸಬೇಕಿರುವ ಬೋಪಣ್ಣ 14ನೇ ಶ್ರೇಯಾಂಕದೊಂದಿಗೆ ಫ್ರಾನ್ಸ್‌ನ ಎಡ್ವರ್ಡ್ ವ್ಯಾಸೆಲಿನ್ ಜತೆ ಆಡುತ್ತಿದ್ದಾರೆ.

ಪೇಸ್ ಮತ್ತು ಮಹೇಶ್ ಭೂಪತಿ ಭಾರತದ ಅಗ್ರಮಾನ್ಯ ಡಬಲ್ಸ್ ಜೋಡಿ ಯಾಗಿ ಗ್ರ್ಯಾನ್‌ಸ್ಲಾಮ್, ಡೇವಿಸ್ ಕಪ್ ಮತ್ತಿತರ ಪ್ರಮುಖ ಚಾಂಪಿಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಆದರೆ ಈ ಜೋಡಿಗೆ ಅಂಕಣದ ಹೊರಗೆ ಮನಸ್ತಾಪ ವಾಗಿದ್ದೇ ಹೆಚ್ಚು. ಆದ್ದರಿಂದ ಕೆಲವು ಬಾರಿ ಈ ಜೋಡಿ ಬೇರ್ಪಟ್ಟಿದೆ ಹಾಗೆಯೇ ಜತೆಗೂಡಿದೆ. ಒಂದು ಪಕ್ಷ ಈ ಜೋಡಿ ಬೇರ್ಪಡದಿದ್ದರೆ ಭಾರತದ ಮಟ್ಟಿಗೆ ದಾಖಲೆ ಎನಿಸುವಷ್ಟು ಪ್ರಶಸ್ತಿಗಳನ್ನು ಪಡೆಯುತ್ತಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಸಾನಿಯಾ ಮಿಂಚುವರೆ?: ಮಹಿಳೆಯರ ಸಿಂಗಲ್ಸ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಭಾರತದ ಸಾನಿಯಾ ಮಿರ್ಜಾ ಒಮ್ಮೆ ವಿಶ್ವ ರ‍್ಯಾಂಕಿಂಗ್‌ನಲ್ಲಿ 27ನೇ ಸ್ಥಾನ ಗಳಿಸಿದ್ದರು. ಭಾರತದ ಯಾವ ಮಹಿಳೆಯೂ ಮಾಡದ ಸಾಧನೆಗಳನ್ನು ಅವರು ಮಾಡಿದ್ದರು.

ಕೆಲ ವರ್ಷಗಳಿಂದೀಚೆಗೆ ಅವರು ಸಿಂಗಲ್ಸ್‌ಗಿಂತ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನತ್ತ ತಮ್ಮ ಗಮನವನ್ನು ಕೇಂದ್ರಿಕರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಫ್ರೆಂಚ್ ಓಪನ್‌ನ ಮಹಿಳೆಯರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದ ಅವರು ಕಳೆದ ವರ್ಷ ಮಹೇಶ್ ಭೂಪತಿ ಜತೆ ಫ್ರೆಂಚ್ ಓಪನ್‌ನ ಮಿಶ್ರ ಡಬಲ್ಸ್‌ನಲ್ಲಿ ಪ್ರಶಸ್ತಿ ಗಳಿಸಿದ್ದರು.

ಪ್ರಸ್ತುತ ವಿಂಬಲ್ಡನ್‌ನಲ್ಲಿ ಆರನೇ ಶ್ರೇಯಾಂಕದೊಂದಿಗೆ ಅಮೆರಿಕದ ಲಿಜೆಲ್ ಹುಬೆರ್ ಜತೆ  ಡಬಲ್ಸ್‌ನಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ಕೆಲ ಚಾಂಪಿಯನ್‌ಷಿಪ್‌ಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದೆ. ವಿಂಬಲ್ಡನ್‌ನಲ್ಲಿ ಆಶ್ಚರ್ಯಕರ ಫಲಿತಾಂಶವನ್ನು ಈ ಜೋಡಿಯಿಂದ ನಿರೀಕ್ಷಿಸಲಾಗಿದೆ. 2003ರಲ್ಲಿ ಸಾನಿಯಾ ಅವರು ವಿಂಬಲ್ಡನ್‌ನ ಬಾಲಕಿಯರ ಡಬಲ್ಸ್ ಪ್ರಶಸ್ತಿ ಗಳಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT