ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ನಿಯಮಗಳಿಗೆ ಬದಲಾವಣೆ: ಭಯವೇಕೆ? ಇರಲಿ ಎಚ್ಚರ

Last Updated 8 ಜುಲೈ 2020, 1:52 IST
ಅಕ್ಷರ ಗಾತ್ರ

ಪರಿಸರದ ಮೇಲೆ ಪರಿಣಾಮ ಬೀರುವಂತಹ ನೀತಿ ನಿರೂಪಣೆಗಳ ಕುರಿತು ಸರ್ಕಾರಗಳು ಕೈಗೊಂಡ ತೀರ್ಮಾನಗಳು ಹೊರಬಿದ್ದಾಗ ನನ್ನಂತಹ ಪರಿಸರಾಸಕ್ತರಿಗೆ ಏನೋ ಕುತೂಹಲ; ಆತಂಕವೂ ಇರುತ್ತದೆ. ಪರಿಸರಕ್ಕೆ ಗಂಡಾಂತರ ಉಂಟು ಮಾಡುವಂತಹ ಹೊಸ ಅವಕಾಶಗಳು ಏನಾದರೂ ಸೃಷ್ಟಿಯಾದಾವು ಎನ್ನುವ ಆತಂಕ ಅದು.

‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಅಧಿಸೂಚನೆ 2006’ಅನ್ನು ರದ್ದುಪಡಿಸಿ, ಹೊಸ ಅಧಿಸೂಚನೆಯನ್ನು ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿರುವುದನ್ನು ಗಮನಿಸಿದ್ದೇನೆ. ಹೊಸ ಅಧಿಸೂಚನೆ ಹೊರಡಿಸಿದರೆ ಸದ್ಯ ಚಾಲ್ತಿಯಲ್ಲಿರುವ ನಿಯಮಗಳ ಬದಲಿಗೆ ಹೊಸ ನಿಯಮಗಳು ಜಾರಿಗೆ ಬರಲಿವೆ.

ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣಾ ವರದಿ ಸಲ್ಲಿಕೆಯಾದ ಏಳು ದಿನಗಳ ಒಳಗೆ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕು ಎನ್ನುವುದು ಸದ್ಯದ ನಿಯಮ. ಅದನ್ನು ಹತ್ತು ದಿನಕ್ಕೆ ಏರಿಕೆ ಮಾಡುವ ‍ಪ್ರಸ್ತಾವ ಇದೆ.ಮೂರು ದಿನಗಳ ಕಾಲಾವಕಾಶ ಏರಿಕೆ ಮಾಡಿದ್ದರಿಂದ ಪರಿಸರಕ್ಕೆ ಪ್ರತಿಕೂಲ ಆಗುವಂಥದ್ದು ನಡೆಯಬಹುದೆಂಬ ಭಯಪಡುವ ಕಾರಣ ಕಾಣುವುದಿಲ್ಲ. ಸಾರ್ವಜನಿಕ ಅಭಿಪ್ರಾಯ ಪಡೆಯುವ ಪ್ರಕ್ರಿಯೆಯನ್ನು ಮೊಟಕುಗೊಳಿಸುವ ಪ್ರಯತ್ನ ನಡೆದಿದ್ದರೆ ಅದನ್ನು ಖಂಡಿತವಾಗಿ ಪ್ರಶ್ನೆ ಮಾಡಬೇಕು. ಅಂತಹದ್ದು ಕಾಣಲಿಲ್ಲ.

ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಆಕ್ಷೇಪ ಸಲ್ಲಿಸಲು ಸದ್ಯ ಇರುವ 30 ದಿನಗಳ ಕಾಲಾವಕಾಶವನ್ನು 20 ದಿನಗಳಿಗೆ ಇಳಿಕೆಮಾಡುವ ಪ್ರಸ್ತಾವವನ್ನೂ ಮಾಡಲಾಗಿದೆ. ಕೆಲವೊಮ್ಮೆ ಪೂರಕ ಮಾಹಿತಿಯನ್ನು ಕಲೆಹಾಕಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎನ್ನುವು ದರಲ್ಲಿ ಎರಡು ಮಾತಿಲ್ಲ. ಆದರೆ, ನಮ್ಮ ಆಕ್ಷೇಪಗಳನ್ನು ಸಲ್ಲಿಸಲು 20 ದಿನ ತೀರಾ ಕಡಿಮೆ ಅವಧಿ ಏನಲ್ಲ. ಇಡೀ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿರಬಹುದು. ಈ ನಿಯಮದಲ್ಲೂ ಆಕ್ಷೇಪಕ್ಕೆ ಕಾರಣವಾಗುವಂಥದ್ದು ಏನೂ ಕಾಣುತ್ತಿಲ್ಲ.

ಸಾರ್ವಜನಿಕ ಅಭಿಪ್ರಾಯ ಕೇಳುವ ಪ್ರಕ್ರಿಯೆಯಲ್ಲೂ ಕೆಲವು ಮಾರ್ಪಾಡುಗಳನ್ನು ಮಾಡಲು ಉದ್ದೇಶಿಸಲಾಗಿದೆ. ಸಾರ್ವಜನಿಕ ಅಭಿಪ್ರಾಯವನ್ನು ಕೇಳುವ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌/ಜಿಲ್ಲಾಧಿಕಾರಿ ಅಥವಾ ಅವರ ಪ್ರತಿನಿಧಿ ನಡೆಸಬೇಕು ಎಂಬ ನಿಯಮದಲ್ಲಿ ತುಸು ಸಡಿಲಿಕೆ ಮಾಡಲಾಗಿದೆ. ‘ಎ’ ವರ್ಗದ ಯೋಜನೆಗಳಿಗೆ ಇದೇ ನಿಯಮ ಅನ್ವಯವಾದರೆ ‘ಬಿ’ ವರ್ಗದ ಯೋಜನೆಗಳಿಗೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ರ‍್ಯಾಂಕ್‌ನ ಅಧಿಕಾರಿಯು ಅಧ್ಯಕ್ಷತೆ ವಹಿಸಬಹುದು ಎಂಬ ಮಾರ್ಪಾಡು ತರಲಾಗುತ್ತಿದೆ.

ಜಿಲ್ಲಾಧಿಕಾರಿಗಳಿಗಾಗಿ ಹತ್ತು–ಹಲವು ಹೊಣೆಗಳು ಸರದಿಯಲ್ಲಿ ನಿಂತಿರುವಾಗ ಆಗುವ ವಿಳಂಬ ತಪ್ಪಿಸಲು ಅವರ ಕೆಳಗಿನ ಹಂತದ ಅಧಿಕಾರಿಗೆ ಈ ಹೊಣೆಯನ್ನು ವಹಿಸುವುದರಲ್ಲಿ ಅಪಾಯ ಇರಲಿಕ್ಕಿಲ್ಲ. ಜಿಲ್ಲಾಧಿಕಾರಿಗಳಂತೆಯೇ ಅವರೂ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಬಲ್ಲರು.

ಅನುಪಾಲನಾ ವರದಿಯನ್ನು ಈಗ ವರ್ಷಕ್ಕೆ ಎರಡೆರಡು ಬಾರಿ ಏಕೆ ಕೊಡಬೇಕೋ ಗೊತ್ತಿಲ್ಲ. ವರ್ಷಕ್ಕೆ ಎರಡು ಬಾರಿ ಅಪೂರ್ಣ ವರದಿಗಳನ್ನು ಸಲ್ಲಿಸುವುದಕ್ಕಿಂತ ಒಂದು ಬಾರಿ ಪೂರ್ಣ ವರದಿ ಕೊಟ್ಟರೆ ಸಾಕು ಎನ್ನುವುದು ನಿಯಮ ಬದಲಾವಣೆ ಹಿಂದಿರುವ ಉದ್ದೇಶ ಆಗಿರಬಹುದು. ತಿದ್ದುಪಡಿಯಲ್ಲಿ ಕಾರಣ ಹೇಳಿಲ್ಲ.

ರಾಷ್ಟ್ರೀಯ ಭದ್ರತೆ ಹಾಗೂ ಯುದ್ಧತಂತ್ರದ ಭಾಗವಾಗಿ ಗುರುತಿಸುವ ಯೋಜನೆಗಳಿಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದರಿಂದ ಮೊದಲಿದ್ದ ವಿನಾಯಿತಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಭದ್ರತೆ ವಿಚಾರ ಇದಾಗಿದ್ದರಿಂದ ಸರ್ಕಾರದ ಈ ತೀರ್ಮಾನವನ್ನು ಯಾರೂ ಪ್ರಶ್ನೆ ಮಾಡಲಾರರು. ಆದರೆ, ಈ ಯೋಜನೆಗಳಿಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸುವಂತಿಲ್ಲ ಎಂಬ ಹೊಸ ನಿಯಮವನ್ನೂ ಸೇರ್ಪಡೆ ಮಾಡಲು ಉದ್ದೇಶಿ ಸಲಾಗಿದೆ. ತುಂಬಾ ಸೂಕ್ಷ್ಮ ವಿಚಾರ ಇದಾಗಿದ್ದರಿಂದ ಸರಿ–ತಪ್ಪು ಎಂದು ಬಿಡುಬೀಸಾಗಿ ವ್ಯಾಖ್ಯಾನ ಮಾಡಲಾರೆ.

ಅಣೆಕಟ್ಟು, ಗಣಿಗಾರಿಕೆ, ಹೆದ್ದಾರಿ, ಕೈಗಾರಿಕೆ, ವಿಮಾನ ನಿಲ್ದಾಣ ನಿರ್ಮಾಣದಂತಹ ಯೋಜನೆಗಳಿಗೆ ಪೂರ್ವ ಪರಿಸರ ಅನುಮತಿಯಿಂದ ವಿನಾಯಿತಿ ನೀಡುವ ಪ್ರಸ್ತಾಪ ಸಹ ಇದೆಯೆಂದು ಕೇಳಿದ್ದೇನೆ. ಈ ರೀತಿ ವಿನಾಯಿತಿ ಪಡೆಯುವಂತಹ 40 ಯೋಜನೆಗಳ ಪಟ್ಟಿ ಮಾಡಲಾಗಿದೆಯಂತೆ. 40 ಸಂಖ್ಯೆ ನನಗೆ ತುಂಬಾ ದೊಡ್ಡದಾಗಿ ಕಾಣುತ್ತದೆ. ಇಷ್ಟೊಂದು ಯೋಜನೆಗಳಿಗೆ ಪೂರ್ವ ಪರಿಸರ ಅನುಮತಿಯಿಂದ ವಿನಾಯಿತಿ ನೀಡುವುದು ಪ್ರಶ್ನಾರ್ಹವಾಗಿದೆ.

ಕರಡು ಅಧಿಸೂಚನೆಗೆ ಸರ್ಕಾರ ಅಂತಿಮ ಸ್ವರೂಪ ನೀಡುವಾಗ ಈ ತೀರ್ಮಾನದ ಕುರಿತು ಮರು ಅವಲೋಕನ ನಡೆಸಬೇಕು. ನಮಗೆ ಅಭಿವೃದ್ಧಿ ಬೇಕು. ಆದರೆ, ಅದಕ್ಕೆ ಪರಿಸರದ ರೂಪದಲ್ಲಿ ಭಾರಿ ಬೆಲೆ ತೆರುವಂತಾಗಬಾರದು. ಪರಿಸರಕ್ಕೆ ಪೂರಕವಾದ ಹೆಜ್ಜೆ ಇಡುವತ್ತ ನಾವು ಗಮನಹರಿಸಬೇಕು. ಯೋಜನೆಗಳ ಅನುಷ್ಠಾನದಲ್ಲಿ ಸಣ್ಣ ಮಟ್ಟಿಗಿನ ‘ತ್ಯಾಗ’ವೂ ಅನಿವಾರ್ಯವೇನೋ. ಹೆದ್ದಾರಿಗಳ ನಿರ್ಮಾಣಕ್ಕಾಗಿ ಸಾವಿರ, ಸಾವಿರ ಸಂಖ್ಯೆಯಲ್ಲಿ ಮರಗಳನ್ನು ಕತ್ತರಿಸಲಾಗಿದೆ. ಅದಕ್ಕೆ ಪರ್ಯಾಯವಾಗಿ ಪ್ರಾಧಿಕಾರ ಎಲ್ಲಿ ಮರಗಳನ್ನು ಬೆಳೆಸಿದೆ? ಪರಿಸರ ಸಂಬಂಧಿಯಾದ ಇಂತಹ ವಿಷಯಗಳಲ್ಲಿ ಉತ್ತರ ದಾಯಿತ್ವ ಅತ್ಯಗತ್ಯವಾಗಿ ಬೇಕು.

ಲೇಖಕ: ಸುಸ್ಥಿರಾಭಿವೃದ್ಧಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT