ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
Explainer: ಜನಗಣತಿ ಸೆಪ್ಟೆಂಬರ್‌ನಿಂದ ಆರಂಭ; ದಶಕದ ಮಾಹಿತಿಗೆ ಏಕಿಷ್ಟು ಮಹತ್ವ..?
Explainer: ಜನಗಣತಿ ಸೆಪ್ಟೆಂಬರ್‌ನಿಂದ ಆರಂಭ; ದಶಕದ ಮಾಹಿತಿಗೆ ಏಕಿಷ್ಟು ಮಹತ್ವ..?
ಫಾಲೋ ಮಾಡಿ
Published 22 ಆಗಸ್ಟ್ 2024, 11:20 IST
Last Updated 22 ಆಗಸ್ಟ್ 2024, 11:20 IST
Comments
ಕೋವಿಡ್ ಕಾರಣದಿಂದ ಮೂರೂವರೆ ವರ್ಷ ಮುಂದೂಡಿದ್ದ ಜನಗಣತಿಯು ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ ಎಂದೆನ್ನಲಾಗಿದೆ. ದೇಶದ ಅಭಿವೃದ್ಧಿಯಲ್ಲಿ ಜನಗಣತಿಯ ಮಹತ್ವ ಏನು? ಜಾತಿ ಜನಗಣತಿಯನ್ನೂ ಈ ಬಾರಿ ನಡೆಸಲಾಗುತ್ತಿದೆಯೇ..? ಮಾಹಿತಿ ಇಲ್ಲಿದೆ.

ಬೆಂಗಳೂರು: ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಗೆ ಅತ್ಯಂತ ಮಹತ್ವವಿದೆ. 2021ರಲ್ಲೇ ನಡೆಯಬೇಕಿದ್ದ ಜನಗಣತಿ ಕೋವಿಡ್‌ ಕಾರಣದಿಂದ ಮೂರೂವರೆ ವರ್ಷ ತಡವಾಗಿದೆ. ಇದೀಗ 2024ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.

ಜನಗಣತಿಗೆ 18 ತಿಂಗಳ ಅಗತ್ಯವಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಹೀಗಾದಲ್ಲಿ ಇದರ ವರದಿಯು 2026ರ ಮಾರ್ಚ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ದೇಶದ ಜನಸಂಖ್ಯೆ ಆಧಾರಿತ ಮಾಹಿತಿಯು ಇತರೆಡೆ ಲಭ್ಯವಿಲ್ಲದ ಅಥವಾ ನಂಬಲರ್ಹ ಮೂಲದ್ದಾಗಿರುವ ಕಾರಣ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತಕ್ಕೆ ಸರ್ಕಾರದ ಈ ಮಾಹಿತಿಯು ಸದಾ ಪ್ರಾಮುಖ್ಯತೆ ಪಡೆದಿರುತ್ತದೆ. ಈ ಮಾಹಿತಿಯು ದೇಶದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ರಚನೆ ಮತ್ತು ದೇಶದ ಜನಸಂಖ್ಯಾಶಾಸ್ತ್ರದ ಮಾಹಿತಿಯನ್ನು ಒಳಗೊಂಡಿರುತ್ತದೆ.

‘ಸಾಮಾನ್ಯವಾಗಿ ಸರ್ಕಾರಗಳು ಈ ಮಾಹಿತಿಯನ್ನು ತಮ್ಮ ನಗರ ಯೋಜನೆ ಹಾಗೂ ಒಕ್ಕೂಟ ವ್ಯವಸ್ಥೆಯ ಪುನರ್‌ಹಂಚಿಕೆಗೆ ಬಳಕೆ ಮಾಡಿಕೊಳ್ಳುತ್ತದೆ. ಆದರೆ ವ್ಯಾಪಾರ ಕ್ಷೇತ್ರವು ಈ ಮಾಹಿತಿಯನ್ನು ಗ್ರಾಹಕರ ಗುಣಲಕ್ಷಣ ಮತ್ತು ಮುಂದೆ ಬರಬಹುದಾದ ಬೇಡಿಕೆಯ ಗ್ರಹಿಕೆಗೆ ಬಳಕೆ ಮಾಡಿಕೊಳ್ಳುತ್ತದೆ’ ಎಂದು ಸಂಶೋಧಕ ಅಂಕುಶ್ ಅಗರ್ವಾಲ್ ಹಾಗೂ ವಿಕಾಸ್ ಕುಮಾರ್ ಅವರು 2020ರಲ್ಲಿ ಪ್ರಕಟಿಸಿದ ‘ಡೀಲೇಸ್‌ ಇನ್ ದಿ ರಿಲೀಸ್ ಆಫ್ ಇಂಡಿಯಾಸ್ ಸೆನಸ್ಸ್ ಡಾಟಾ’ ಎಂಬ ಲೇಖನದಲ್ಲಿ ಹೇಳಿದ್ದಾರೆ.

‘ಭಾರತದ ಜನರು ಮತ್ತು ಅವರ ಗುಣಲಕ್ಷಣಗಳ ಕುರಿತು ದತ್ತಾಂಶ ಸಹಿತ ಸಮಗ್ರವಾಗಿ ಲಭ್ಯವಾಗುವ ಏಕೈಕ ಮಾಹಿತಿಯೇ ಈ ಜನಗಣತಿ. ಗಣತಿ ಸಂದರ್ಭದಲ್ಲಿ ಸಂಗ್ರಹಿಸುವ ಪ್ರತಿಯೊಬ್ಬರ ಮಾಹಿತಿಯು ಜನಸಂಖ್ಯೆಯ ಬೆಳವಣಿಗೆ ಮತ್ತು ಅದರ ಲಕ್ಷಣ ಹಾಗು ಬೆಳವಣಿಗೆಯ ಅಂದಾಜು ಲೆಕ್ಕಾಚಾರಕ್ಕೆ ನೆರವಾಗಲಿದೆ’ ಎಂದು ಮತ್ತೊಬ್ಬ ಅಧ್ಯಯನಕಾರ ಹರ್ಷ ಆನಂದ್ ಅವರು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಲೋಕಸಭೆ, ವಿಧಾನಸಭೆ, ಪಂಚಾಯ್ತಿ ಹಾಗೂ ಸ್ಥಳೀಯ ಆಡಳಿತದಲ್ಲಿನ ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲು ಕ್ಷೇತ್ರಗಳ ಪುನರ್‌ರಚನೆಗೂ ಈ ದಾಖಲೆ ಅಗತ್ಯ. ಜತೆಗೆ ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಧಿಸಿದ ಪ್ರಗತಿಯ ಮೌಲ್ಯಮಾಪನವೂ ಹೌದು. ಸರ್ಕಾರ ಜಾರಿಗೆ ತಂದ ಯೋಜನೆಗಳು ಜನರ ಜೀವನ ಮಟ್ಟದ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದರ ಲೆಕ್ಕಾಚಾರವೂ ಈ ಮಾಹಿತಿಯನ್ನು ಆಧರಿಸಿರುತ್ತದೆ. ಅದರಿಂದ ಭವಿಷ್ಯದ ಯೋಜನೆಗೂ ನೆರವಾಗಲಿದೆ’ ಎಂದು ಅವರು ಹೇಳಿದ್ದಾರೆ.

‘ವ್ಯಾಪಾರ ಕ್ಷೇತ್ರ ಹಾಗೂ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯ ಕುರಿತು ಯೋಜನೆ ರೂಪಿಸಲೂ ಜನಗಣತಿಯ ಮಾಹಿತಿ ಅಗತ್ಯ. ಹಣಕಾಸು ಆಯೋಗವೂ ಜನಗಣತಿಯ ಮಾಹಿತಿ ಆಧರಿಸಿಯೇ ಸರ್ಕಾರಕ್ಕೆ ಹಣ ಬಿಡುಗಡೆ ಮಾಡುತ್ತದೆ’ ಎಂದಿದ್ದಾರೆ.

‘ನೀತಿ ನಿರೂಪಣೆಯ ತಾಂತ್ರಿಕತೆ, ಹೆಚ್ಚುತ್ತಿರುವ ರಾಜಕೀಯ ಹಸ್ತಕ್ಷೇಪ ಹಾಗೂ ವ್ಯಕ್ತಿಯ ಗುರುತಿನ ಮಾಹಿತಿ ಆಧಾರದಲ್ಲಿ ಕೋಮುವಾದವೂ ಹೆಚ್ಚುತ್ತಿದೆ. ಭಾರತದ ಅಧಿಕೃತ ದತ್ತಾಂಶ ಸಂಗ್ರಹ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ರಾಜಕೀಯ ಹಸ್ತಕ್ಷೇಪ ತಡೆಯದಿದ್ದರೆ, ಅದು ತಪ್ಪು ಮಾಹಿತಿಯ ಕಡೆ ನಿರಂತರವಾಗಿ ವಾಲುತ್ತಲೇ ಸಾಗುವ ಅಪಾಯವೂ ಇದೆ’ ಎಂದು ಅಗರ್ವಾಲ್ ಮತ್ತು ಕುಮಾರ್ ಅವರು ತಮ್ಮ ಲೇಖನದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗಿದ್ದರೆ ಈ ಬಾರಿಯ ಜನಗಣತಿಯಲ್ಲಿ ಏನೆಲ್ಲಾ ಇರುವ ಸಾಧ್ಯತೆ ಇದೆ

ದತ್ತಾಂಶ ಸಂಗ್ರಹದ ಆಧಾರದಲ್ಲಿ ಈ ಬಾರಿ ನಡೆಯಲಿರುವ ಜನಗಣತಿಯು ಈ ಹಿಂದಿನ ಗಣತಿಗಿಂತ ಭಿನ್ನವಾಗಿರಲಿದೆ ಎಂದೇ ಹೇಳಲಾಗುತ್ತಿದೆ. 

ಮೊದಲನೆಯದಾಗಿ ಸ್ವಯಂ ಎಣಿಕೆಯ ಆಯ್ಕೆಯೊಂದಿಗೆ ಈ ಬಾರಿ ದತ್ತಾಂಶ ಸಂಗ್ರಹ ಡಿಜಿಟಲ್ ರೂಪದಲ್ಲಿರಲಿದೆ. ಈ ಹಿಂದೆ ಪುರುಷ ಮತ್ತು ಮಹಿಳೆ ಎಂಬ ಎರಡೇ ಕಾಲಂಗಳಿದ್ದವು. ಆದರೆ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಕುಟುಂಬಗಳ ಮಾಹಿತಿಯನ್ನೂ ಜನಗಣತಿಯಲ್ಲಿ ದಾಖಲಿಸಲಾಗುತ್ತಿದ.

ಇತ್ತೀಚಿನ ಕೆಲ ವರದಿಗಳ ಪ್ರಕಾರ ಜಾತಿ ಜನಗಣತಿಯಲ್ಲಿ ಜಾತಿಯ ಮಾಹಿತಿ ಸೇರಿಸುವ ಸಾಧ್ಯತೆಯೂ ಇದೆ. ಕಾಂಗ್ರೆಸ್ ಕೂಡಾ ಈ ಕಲಂ ಅಳವಡಿಸಲು ಸಲಹೆ ನೀಡಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದೊಂದಿಗೆ ಇತರ ಹಿಂದುಳಿದ ವರ್ಗ ಎಂಬ ಕಲಂ ಕೂಡಾ ಸೇರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT