ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಸ್ತೆ ಅಪಘಾತಕ್ಕೆ ಹೆದ್ದಾರಿ ವಿನ್ಯಾಸ ದೋಷವೂ ಕಾರಣ

Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಉದ್ಯಮಿ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ, ಆ ಅಪಘಾತಕ್ಕೆ ದೋಷಪೂರಿತ ಹೆದ್ದಾರಿ ವಿನ್ಯಾಸವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಅಪಘಾತ ನಡೆದ ಸ್ಥಳದಲ್ಲಿನ ಹೆದ್ದಾರಿ ವಿನ್ಯಾಸದಲ್ಲಿರುವ ದೋಷಗಳನ್ನು ಹಲವರು ಪಟ್ಟಿ ಮಾಡಿದ್ದರು.

*******

‘ದೇಶದಲ್ಲಿನ ಬಹುತೇಕ ರಸ್ತೆ ಅಪಘಾತಗಳಿಗೆ ದೋಷಪೂರಿತ ರಸ್ತೆ, ಹೆದ್ದಾರಿ ವಿನ್ಯಾಸಗಳೇ ಕಾರಣ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ರಸ್ತೆ–ಹೆದ್ದಾರಿ ನಿರ್ಮಾಣದ ವಿಸ್ತೃತ ಯೋಜನಾ ವರದಿಗಳಲ್ಲಿ, ದೋಷರಹಿತ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದೂ ಹೇಳಿದ್ದರು. ಉದ್ಯಮಿ ಸೈರಸ್ ಮಿಸ್ತ್ರಿ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ, ಆ ಅಪಘಾತಕ್ಕೆ ದೋಷಪೂರಿತ ಹೆದ್ದಾರಿ ವಿನ್ಯಾಸವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಅಪಘಾತ ನಡೆದ ಸ್ಥಳದಲ್ಲಿನ ಹೆದ್ದಾರಿ ವಿನ್ಯಾಸದಲ್ಲಿರುವ ದೋಷಗಳನ್ನು ಹಲವರು ಪಟ್ಟಿ ಮಾಡಿದ್ದರು. ಇದು ಚರ್ಚೆಗೆ ಬಂದ ಬೆನ್ನಲ್ಲೇ, ದೋಷರಹಿತ ಹೆದ್ದಾರಿ ವಿನ್ಯಾಸಕ್ಕೆ ಒತ್ತು ನೀಡಬೇಕು ಎಂದು ಗಡ್ಕರಿ ಅವರು ಹೇಳಿದ್ದು.

ದೇಶದಲ್ಲಿನ ರಸ್ತೆ, ಹೆದ್ದಾರಿಗಳ ವಿನ್ಯಾಸ ಮತ್ತು ಅಲ್ಲಿ ಲಭ್ಯವಿರಬೇಕಿರುವ ಸವಲತ್ತುಗಳು ಏನು ಎಂಬುದನ್ನು ‘ಭಾರತೀಯ ರಸ್ತೆ ಕಾಂಗ್ರೆಸ್‌’ ನಿಗದಿಪಡಿಸುತ್ತದೆ. ಸೈರಸ್ ಮಿಸ್ತ್ರಿ ಅವರಿದ್ದ ಕಾರು ಅಪಘಾತಕ್ಕೆ ಒಳಗಾದ ಹೆದ್ದಾರಿಯ ವಿನ್ಯಾಸದಲ್ಲಿ ಯಾವ–ಯಾವ ದೋಷಗಳಿದ್ದವು ಎಂಬುದನ್ನು ಹಲವರು ಪಟ್ಟಿ ಮಾಡಿದ್ದಾರೆ. ಮೇಲ್ನೋಟಕ್ಕೆ ಈ ವಿನ್ಯಾಸಗಳು ದೋಷಪೂರಿತ ಎಂದು ಅನಿಸಿದರೂ, ಭಾರತೀಯ ರಸ್ತೆ ಕಾಂಗ್ರೆಸ್ ರೂಪಿಸಿರುವ ‘ಆರು ಪಥಗಳ ಹೆದ್ದಾರಿ ವಿನ್ಯಾಸ ಕೈಪಿಡಿ’ಗೆ ಅನುಗುಣವಾಗಿಯೇ ವಿನ್ಯಾಸ ಮಾಡಲಾಗಿದೆ. ಆದರೆ, ಕೈಪಿಡಿಯಲ್ಲಿ ತೋರಿಸಲಾಗಿರುವ ಕೆಲವು ಮಾರ್ಗಸೂಚಿಗಳನ್ನು ಈ ಹೆದ್ದಾರಿಯ ವಿನ್ಯಾಸದಲ್ಲಿ ಉಲ್ಲಂಘಿಸಲಾಗಿದೆ. ಈ ಉಲ್ಲಂಘನೆಯೇ, ಅಪಘಾತದ ತೀವ್ರತೆ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗಿದೆ.

ದೋಷವಿದೆ ಎಂದು ಹೇಳಲಾದ ವಿನ್ಯಾಸಗಳು...

ಮುಂಬೈ–ಅಹಮದಾಬಾದ್‌ (ಹೆದ್ದಾರಿ ಸಂಖ್ಯೆ 48) ಹೆದ್ದಾರಿಯು ಒಟ್ಟು ಆರುಪಥಗಳಿಂದ ಕೂಡಿದೆ. ಇದರಲ್ಲಿ ಸರ್ವಿಸ್‌ ಪಥಗಳಿಲ್ಲ. ಮುಂಬೈನಿಂದ ಅಹಮದಾಬಾದ್‌ ಕಡೆಗೆ ಮೂರು ಪಥಗಳು, ಅಹಮದಾಬಾದ್‌ನಿಂದ ಮುಂಬೈ ಕಡೆಗೆ ಮೂರು ಪಥಗಳು ಸಾಗುತ್ತವೆ. ಮಿಸ್ತ್ರಿ ಅವರಿದ್ದ ಕಾರು ಅಪಘಾತಕ್ಕೆ ಒಳಗಾಗಿದ್ದು ಅಹಮದಾಬಾದ್‌ನಿಂದ ಮುಂಬೈ ಕಡೆಗೆ ಸಾಗುವ ಪಥದಲ್ಲಿ.

ನೈಜ ದೋಷ: ಹೆದ್ದಾರಿಯಲ್ಲಿ ಸೇತುವೆಗಳನ್ನು ನಿರ್ಮಿಸುವಾಗ ಅವುಗಳಿಗೆ ತಡೆಗೋಡೆಗಳನ್ನೂ ನಿರ್ಮಿಸಬೇಕು. ಆದರೆ, ಯಾವುದೇ ವಾಹನವು ಚಾಲಕನ ನಿಯಂತ್ರಣ ತಪ್ಪಿದರೂ ತಡೆಗೋಡೆಗೆ ಸವರಿಕೊಂಡು ಹೋಗುವಂತೆ ವಿನ್ಯಾಸ ಮಾಡಿರಬೇಕು. ಇದಕ್ಕಾಗಿ ತಡೆಗೋಡೆಗೆ ಇನ್ನೂ 120 ಮೀಟರ್ ದೂರ ಇರುವಂತೆಯೇ ಉಕ್ಕಿನ ತಡೆಪಟ್ಟಿ (ಬ್ಯಾರಿಯರ್‌) ನಿರ್ಮಿಸಬೇಕು ಎಂದು ಕೈಪಿಡಿ ಹೇಳುತ್ತದೆ. ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡರೂ, ಉಕ್ಕಿನ ತಡೆಪಟ್ಟಿಗೆ ವಾಹನ ಸವರಿಕೊಂಡು ಹೋಗುತ್ತದೆ. ಸೇತುವೆಯ ತಡೆಗೋಡೆಗೆ ವಾಹನ ನೇರವಾಗಿ ಅಪ್ಪಳಿಸುವುದನ್ನು ಇದು ತಡೆಯುತ್ತದೆ. ಆದರೆ ಮಿಸ್ತ್ರಿ ಅವರಿದ್ದ ಕಾರು ಅಪಘಾತಕ್ಕೆ ಈಡಾದ ಸೇತುವೆಯ ತಡೆಗೋಡೆಗೆ ಉಕ್ಕಿನ ತಡೆಪಟ್ಟಿ ಅಳವಡಿಸಿರಲಿಲ್ಲ. ಇದು ದೊಡ್ಡ ದೋಷ. ಉಕ್ಕಿನ ತಡೆಪಟ್ಟಿ ಇದ್ದಿದ್ದರೆ, ಕಾರು ಸೇತುವೆಯ ಕಾಂಕ್ರೀಟ್‌ ತಡೆಗೋಡೆಗೆ ನೇರವಾಗಿ ಅಪ್ಪಳಿಸುತ್ತಿರಲಿಲ್ಲ.

ಆರೋಪಿತ ದೋಷ: ಮೂರು ಪಥಗಳ ಮಾರ್ಗವು, ನದಿ ಮೇಲಿನ ಸೇತುವೆ ಸಮೀಪಿಸುತ್ತಿದ್ದಂತೆಯೇ ಬದಲಾಗುತ್ತದೆ. ಎರಡು ಪಥಗಳದ್ದು ಒಂದು ಮಾರ್ಗ ಮತ್ತು ಒಂದು ಪಥದ್ದು ಮತ್ತೊಂದು ಮಾರ್ಗವಾಗಿ ಬದಲಾಗುತ್ತದೆ. ಮೂರೂ ಪಥಗಳು ಒಂದೇ ಕಡೆ ಹೋಗುವುದರಿಂದ, ಎರಡು ಪ್ರತ್ಯೇಕ ಸೇತುವೆಗಳು ಏಕೆ ಬೇಕಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ. ಮೂರು ಪಥಗಳು ಎರಡು ಪಥಗಳಾಗಿ ಬದಲಾಗಿದ್ದರಿಂದಲೇ ಗೊಂದಲವಾಗಿ ಅಪಘಾತ ಸಂಭವಿಸಿದೆ ಎಂದು ಹಲವರು ಆರೋ‍ಪಿಸಿದ್ದಾರೆ.

ವಿನ್ಯಾಸದಲ್ಲೇನಿದೆ: ಈ ವಿನ್ಯಾಸವು ಕೈಪಿಡಿಯಲ್ಲಿನ ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ಇದೆ. ಯಾವುದೇ ಹೆದ್ದಾರಿಯಲ್ಲಿ ಹಳೆಯ ಸೇತುವೆಗಳು ಇದ್ದರೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಈ ಮಾರ್ಗಸೂಚಿ ಹೇಳುತ್ತದೆ. ಹೆಚ್ಚುವರಿ ಪಥಗಳಿಗೆ ಅಗತ್ಯವಿರುವ ಸೇತುವೆಯನ್ನು ಹೊಸದಾಗಿ ನಿರ್ಮಿಸಬೇಕು ಎನ್ನುತ್ತದೆ. ಈ ಹೆದ್ದಾರಿಯಲ್ಲಿ ಸೂರ್ಯ ನದಿಗೆ ನಿರ್ಮಿಸಲಾಗಿರುವ ಸೇತುವೆಯು ಈ ಮಾರ್ಗಸೂಚಿಗೆ ಅನುಗುಣವಾಗಿಯೇ ಇದೆ.

ಆರೋಪಿತ ದೋಷ: ಮೂರು ಪಥಗಳನ್ನು ವಿಭಜಿಸುವ ಬಿಳಿಯ ಗುರುತುಗಳು ಹೆದ್ದಾರಿಯ ಈ ಭಾಗದಲ್ಲಿ ಇಲ್ಲ ಎಂದು ಹೇಳಲಾಗಿದೆ.

ವಿನ್ಯಾಸದಲ್ಲೇನಿದೆ: ಪಥಗಳನ್ನು ವಿಭಜಿಸುವ ಬಿಳಿಯ ಗುರುತುಗಳು ಸ್ಪಷ್ಟವಾಗಿರಬೇಕು. ಪಥ ಬದಲಾವಣೆಯಾಗುವಲ್ಲಿ, ಅದನ್ನು ಸ್ಪಷ್ಟವಾಗಿ ಸೂಚಿಸುವಂತಹ ಗುರುತು ಇರಬೇಕು ಎಂದು ಕೈಪಿಡಿ ಹೇಳುತ್ತದೆ. ಹೆದ್ದಾರಿಯ ಈ ಭಾಗದಲ್ಲಿ ಬಿಳಿಯ ಗೆರೆಗಳು ಅಳಿಸಿ ಹೋಗಿರುವುದು ಸ್ಪಷ್ಟವಾಗಿದೆ. ಎರಡನೇ ಪಥ ಯಾವುದು ಮತ್ತು ಮೂರನೇ ಪಥ ಯಾವುದು ಎಂಬುದನ್ನು ಗುರುತಿಸಲು ಸಾಧ್ಯವಿಲ್ಲ. ಪಥ ವಿಭಜನೆನೆಯಾಗುವುದೂ ಸ್ಪಷ್ಟವಾಗಿ ಕಾಣುವುದಿಲ್ಲ. ಹೆದ್ದಾರಿ ನಿರ್ವಹಣೆಯಲ್ಲಿ ಲೋಪವಾಗಿರುವುದನ್ನು ಇಲ್ಲಿ ಗುರುತಿಸಬಹುದು.

ಬ್ಲ್ಯಾಕ್‌ ಸ್ಪಾಟ್: ದಕ್ಷಿಣದ ಹೆದ್ದಾರಿಗಳಲ್ಲೇ ಹೆಚ್ಚು

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಡೆಯುವ ಅಪಘಾತಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ, ಕೆಲವು ಸ್ಥಳಗಳಲ್ಲಿ ಪದೇ ಪದೇ ಅ‍ಪಘಾತಗಳು ಸಂಭವಿಸುತ್ತಿರುವ ವಿಚಾರ ತಿಳಿದು ಬಂದಿದೆ. ಇಂತಹ ಸ್ಥಳಗಳನ್ನು ‘ಬ್ಲ್ಯಾಕ್ ಸ್ಪಾಟ್’ ಎಂದು ಗುರುತಿಸಲಾಗಿದೆ. ನಿಗದಿತ ಸ್ಥಳವೊಂದರಲ್ಲಿ ಐದು ಬಾರಿ ಅಪಘಾತ ನಡೆದಿದ್ದರೆ ಅಥವಾ ಹತ್ತು ಮಂದಿ ಮೃತಪಟ್ಟಿದ್ದರೆ ಆ ಸ್ಥಳವನ್ನು ಬ್ಲ್ಯಾಕ್‌ ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ.

ಇಂತಹ ಸ್ಥಳಗಳಲ್ಲಿ ಸಾಮಾನ್ಯವಾಗಿ ದೋಷಪೂರಿತ ರಸ್ತೆ ವಿನ್ಯಾಸ ಕಂಡುಬರುತ್ತದೆ. ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸದೇ ರಸ್ತೆ ನಿರ್ಮಾಣ ಮಾಡಿದ್ದರಿಂದ, ಈ ಸ್ಥಳಗಳು ಆಗಾಗ್ಗೆ ಅಪಘಾತಕ್ಕೆ ಸಾಕ್ಷಿಯಾಗುತ್ತವೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇಂತಹ ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸುವ ಹಾಗೂ ಅವುಗಳ ದೋಷವನ್ನು ಸರಿಪಡಿಸುವ ಕೆಲಸ ಮಾಡುತ್ತಿದೆ. ಲೋಕಸಭೆಗೆ 2019ರ ಡಿಸೆಂಬರ್‌ನಲ್ಲಿ ಸಲ್ಲಿಸಲಾದ ಮಾಹಿತಿ ಪ್ರಕಾರ, ದೇಶದಲ್ಲಿ 5,803 ಬ್ಲ್ಯಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು, ಅಂದರೆ 748 ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ (701), ಕರ್ನಾಟಕ (551), ತೆಲಂಗಾಣ (485), ಆಂಧ್ರಪ್ರದೇಶ (466), ಉತ್ತರ ಪ್ರದೇಶ (405), ರಾಜಸ್ಥಾನ (349), ಮಧ್ಯಪ್ರದೇಶ (303), ಕೇರಳ (243) ರಾಜ್ಯಗಳಿವೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲೇ ಹೆಚ್ಚು ಸಂಖ್ಯೆಯ ಬ್ಲ್ಯಾಕ್‌ ಸ್ಪಾಟ್‌ಗಳು ಕಂಡುಬಂದಿವೆ. ಇದು 2016ರಿಂದ 2018ರವರೆಗಿನ ಮಾಹಿತಿಯಾಗಿದ್ದು, ನಂತರದ ಅವಧಿಯ ಮಾಹಿತಿ ಲಭ್ಯವಿಲ್ಲ.

ಬ್ಲ್ಯಾಕ್‌ ಸ್ಪಾಟ್‌ಗಳನ್ನು ಗುರುತಿಸಿ, ಅವುಗಳನ್ನು ಸರಿಪಡಿಸುವ ಯತ್ನದ ಫಲವಾಗಿ ಅಪಘಾತಗಳ ಸಂಖ್ಯೆ ಅಲ್ಪ ಕುಸಿದಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳುತ್ತವೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗುರುತಿಸಿದ್ದ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ 28,626 ಅಪಘಾತಗಳು ಸಂಭವಿಸಿ, 13,734 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವೇ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ 2018ರಲ್ಲಿ 24,940 ಅ‍ಪಘಾತಗಳು ನಡೆದಿದ್ದು, 12,047 ಜನ ಮೃತಪಟ್ಟಿದ್ದಾರೆ. ಬ್ಲ್ಯಾಕ್‌ ಸ್ಪಾಟ್‌ಗಳ ಮೇಲೆ ನಿಗಾ ಹೆಚ್ಚಿಸಿದ್ದರಿಂದ ಅಪಘಾತಗಳು ಹಾಗೂ ಅದರಿಂದ ಉಂಟಾಗುವ ಪ್ರಾಣಹಾನಿಯನ್ನು ಅಲ್ಪಮಟ್ಟಿಗೆ ತಗ್ಗಿಸಲಾಗಿದೆ.

ಆಧಾರ: ಭಾರತೀಯ ರಸ್ತೆ ಕಾಂಗ್ರೆಸ್‌ನ ‘ಆರು ಪಥಗಳ ಹೆದ್ದಾರಿ ವಿನ್ಯಾಸ ಕೈಪಿಡಿ’, ಪಿಟಿಐ, ರಾಯಿಟರ್ಸ್‌, ಪಿಐಬಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT