ಗುರುವಾರ , ಏಪ್ರಿಲ್ 2, 2020
19 °C

Explainer | ರೈಲ್ವೆಯ ಹಿಮಾಲಯ ವಿಸ್ಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದತಿಯಿಂದಾಗಿ ಆ ರಾಜ್ಯವು ಪೂರ್ಣ ಪ್ರಮಾಣದಲ್ಲಿ ಭಾರತದೊಳಗೆ ಸೇರಿಕೊಂಡಿದೆ. ಆದರೆ, ರೈಲ್ವೆ ಯೋಜನೆಯ ಮೂಲಕ ಆ ರಾಜ್ಯವನ್ನು ಭಾರತದ ಇತರ ನಗರಗಳಿಗೆ ಸಂಪರ್ಕಿಸುವ ಯೋಜನೆಯು ಎರಡು ದಶಕಗಳಿಂದ ಕುಂಟುತ್ತಾ ಸಾಗಿದೆ. 1997ರಲ್ಲಿ ಆರಂಭವಾಗಿದ್ದ ಉಧಂಪುರ– ಶ್ರೀನಗರ– ಬಾರಾಮುಲ್ಲಾ ರೈಲ್ವೆ ಲಿಂಕ್‌ ಯೋಜನೆ (ಯುಎಸ್‌ಬಿಆರ್‌ಎಲ್‌) ಕಾಮಗಾರಿಯನ್ನು ಪೂರ್ಣಗೊಳಿಸಲು ಈಗ 2021ರ ಡಿಸೆಂಬರ್‌ ಅಂತ್ಯದ ಗುಡುವು ನಿರ್ಧರಿಸಲಾಗಿದೆ. ಸ್ವಾತಂತ್ರ್ಯಾ ನಂತರ ದೇಶದಲ್ಲಿ ಕೈಗೆತ್ತಿಕೊಳ್ಳಲಾದ ಮತ್ತು ರೈಲ್ವೆಯ 150 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಸವಾಲಿನ ಈ ಯೋಜನೆಯ ಮಹತ್ವ ಏನು?

ಸವಾಲಿನ ಯೋಜನೆ

ಉಧಂಪುರ– ಶ್ರೀನಗರ– ಬಾರಾಮುಲ್ಲಾ ರೈಲ್ವೆ ಲಿಂಕ್‌ ಯೋಜನೆಗೆ 1997ರಲ್ಲಿ ಅಂದಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಕೊಂಕಣ ರೈಲ್ವೆ ನಿಗಮವು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿತು. ನೈಸರ್ಗಿಕವಾಗಿ ಮತ್ತು ಭೌಗೋಳಿಕವಾಗಿ ಈ ಯೋಜನೆಯು ಎಂಜಿನಿಯರ್‌ಗಳಿಗೆ ಬಹುದೊಡ್ಡ ಸವಾಲು. ಕಡಿದಾದ ಬೆಟ್ಟ–ಗುಡ್ಡ, ಕಣಿವೆಗಳ ನಡುವೆ ಕೆಲವೆಡೆ ಸುರಂಗ, ಕೆಲವೆಡೆ ಬೃಹತ್‌ ಸೇತುವೆಗಳನ್ನು ನಿರ್ಮಿಸಿ ರೈಲ್ವೆ ಹಳಿಗಳನ್ನು ಹಾಕಬೇಕು.

₹ 12,000 ಕೋಟಿ ವೆಚ್ಚದ ಮೂಲ ಯೋಜನೆಯ ಕಾಮಗಾರಿ 2007ರಲ್ಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 2008ರಲ್ಲಿ ಈ ಯೋಜನೆಯ ಸುರಕ್ಷತೆ ಮತ್ತು ಮಾರ್ಗದ ವಿಚಾರವಾಗಿ ಕೆಲವು ಸವಾಲುಗಳೆದ್ದವು. ಪರಿಣಾಮ, ಯೋಜನೆಯನ್ನು ಸ್ಥಗಿತಗೊಳಿಸಲಾಯಿತು. ‘ಮೆಟ್ರೊ ಮ್ಯಾನ್‌’ ಎಂದು ಖ್ಯಾತರಾಗಿರುವ ಎಂಜಿನಿಯರ್‌ ಇ. ಶ್ರೀಧರನ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಮರುಪರಿಶೀಲನೆ ನಡೆಸಲಾಯಿತು. ಯೋಜನೆಯ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿ ಮತ್ತೆ ಕಾಮಗಾರಿ ಆರಂಭಿಸಲಾಯಿತು.

2002ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಇದನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಿ, ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರದಿಂದ ಭರಿಸಲು ತೀರ್ಮಾನಿಸಿದರು. ಕಾಮಗಾರಿ ಪೂರ್ಣಗೊಳಿಸುವ ಗಡುವನ್ನು ಆ ನಂತರವೂ ನಾಲ್ಕು ಬಾರಿ ವಿಸ್ತರಿಸಲಾಯಿತು. 2015, 2016, 2017 ಕೊನೆಗೆ 2019ರಲ್ಲಿ ಯೋಜನೆ ಪೂರ್ಣಗೊಳಿಸಬೇಕು ಎಂಬ ಗಡುವು ನಿರ್ಧರಿಸಲಾಯಿತು. ಆದರೆ ಯೋಜನೆ ಪೂರ್ಣಗೊಳ್ಳಲೇ ಇಲ್ಲ. ಈ ಮಾರ್ಗದಲ್ಲಿ ಸೇತುವೆ ಮತ್ತು ಸುರಂಗಗಳನ್ನು ನಿರ್ಮಿಸುವುದು ಅತ್ಯಂತ ಸವಾಲಿನ ಕೆಲಸ.

ದಾಖಲೆಯ ಸುರಂಗ

ಕತ್ರಾ–ಬನಿಹಾಳ್‌ ಮಧ್ಯೆ ನಿರ್ಮಾಣವಾಗುತ್ತಿರುವ 10.90 ಕಿ.ಮೀ. ಉದ್ದದ ಸುರಂಗವು ಭಾರತದ ಅತಿ ದೀರ್ಘವಾದ ಮತ್ತು ಏಷ್ಯಾದ ಮೂರನೇ ಅತಿ ಉದ್ದದ ಸುರಂಗಮಾರ್ಗ ಎನಿಸಲಿದೆ. 2006ರಲ್ಲಿ ರೂಪಿಸಿದ ಅಂದಾಜಿನ ಪ್ರಕಾರ ಈ ಸುರಂಗದ ನಿರ್ಮಾಣ ವೆಚ್ಚ ₹ 647 ಕೋಟಿ.

ಸರಳರೇಖೆಯಂತೆ ನೇರವಾಗಿರುವ ಈ ಸುರಂಗದಲ್ಲಿ ತುರ್ತು ಸಂದರ್ಭದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳಲು 3 ಮೀಟರ್‌ ಅಗಲದ ರಸ್ತೆಯನ್ನೂ ನಿರ್ಮಿಸಲಾಗಿದೆ.

161 ಕಿ.ಮೀ. ಪೂರ್ಣ

ಉಧಂಪುರದಿಂದ ಬಾರಾಮುಲ್ಲಾವರೆಗಿನ 272 ಕಿ.ಮೀ. ಉದ್ದದ ಮಾರ್ಗವನ್ನು, ಉಧಂಪುರದಿಂದ ಕತ್ರಾ (25 ಕಿ.ಮೀ), ಕತ್ರಾದಿಂದ ಬನಿಹಾಳ್‌ (111 ಕಿ.ಮೀ) ಹಾಗೂ ಬನಿಹಾಳ್‌ದಿಂದ ಬಾರಾಮುಲ್ಲಾ (136ಕಿ.ಮೀ.) ಎಂದು ಮೂರು ವಿಭಾಗಗಳನ್ನಾಗಿ ವಿಭಜಿಸಲಾಗಿದೆ. ಇದರಲ್ಲಿ ಕತ್ರಾ– ಬನಿಹಾಳ್‌ ವ್ಯಾಪ್ತಿಯನ್ನು ಬಿಟ್ಟರೆ ಉಳಿದ 161 ಕಿ.ಮೀ. ಮಾರ್ಗ ಪೂರ್ಣಗೊಂಡಿದ್ದು ರೈಲು ಸಂಚಾರವೂ ಆರಂಭವಾಗಿದೆ.

ಕತ್ರಾ– ಬನಿಹಾಳ್‌ ಮಾರ್ಗವೇ ಅತ್ಯಂತ ಸವಾಲಿನದ್ದಾಗಿದೆ ಎಂದು ಎಂಜಿನಿಯರ್‌ಗಳು ಹೇಳುತ್ತಾರೆ.

‘ಅಂಜಿ’ ಸೇತುವೆ

ಈ ರೈಲ್ವೆ ವ್ಯಾಪ್ತಿಯಲ್ಲಿ ಬರುವ ಇನ್ನೊಂದು ಅತ್ಯಾಕರ್ಷಕ ಸೇತುವೆ ಎಂದರೆ ಅಂಜಿಖಾದ್‌ ಕೇಬಲ್‌ ಸೇತುವೆ. ಅಂಜಿ ನದಿಗೆ ನಿರ್ಮಿಸಿರುವ ಈ ಸೇತುವೆಯು ನದಿಯ ಮಟ್ಟದಿಂದ 195 ಮೀಟರ್‌ ಎತ್ತರದಲ್ಲಿದೆ.

ಈ ಸೇತುವೆ ನಿರ್ಮಾಣವೂ ಅತ್ಯಂತ ಸವಾಲಿನದ್ದಾಗಿತ್ತು. ನಿರ್ಮಾಣ ಸ್ಥಳಕ್ಕೆ ಬರಲು ಸರಿಯಾದ ರಸ್ತೆಯೂ ಇಲ್ಲದ ಕಾರಣಕ್ಕೆ ಸುಮಾರು 266 ಟನ್‌ನಷ್ಟು ನಿರ್ಮಾಣ ಸಾಮಗ್ರಿಯನ್ನು ಏರ್‌ಲಿಫ್ಟ್ ಮಾಡಲಾಗಿತ್ತು.

 

ಉದ್ಯೋಗದ ಬಾಗಿಲು ಈ ಯೋಜನೆ ಪೂರ್ಣಗೊಂಡಾಗ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂಬ ವಿಶ್ವಾಸ ಸ್ಥಳೀಯರದ್ದಾಗಿದೆ. ರೈಲ್ವೆ ನಿಲ್ದಾಣದ ಸಮೀಪ, ಪ್ರವಾಸಿ ಕೇಂದ್ರಗಳು ಅಥವಾ ಯಾತ್ರಾ ಸ್ಥಳಗಳಲ್ಲಿ ವ್ಯಾಪಾರ–ವಹಿವಾಟು ನಡೆಸಬಹುದು ಎಂದು ಸ್ಥಳೀಯರು ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ ಈ ಯೋಜನೆಯು ಈಗಾಗಲೇ ನೂರಾರು ಜನರಿಗೆ ಉದ್ಯೋಗದ ಬಾಗಿಲುಗಳನ್ನು ತೆರೆದಿದೆ. ಯೋಜನೆಯ ಸಲುವಾಗಿ ಕೆಲವು ಪ್ರದೇಶಗಳಲ್ಲಿ ಹೊಸದಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಸ್ಥಳೀಯರ ಓಡಾಟ ಹೆಚ್ಚಾಗಿದ್ದು, ಅನೇಕರು ಈಗಾಗಲೇ ಸ್ವಂತ ವಾಹನಗಳನ್ನು ಖರೀದಿಸಿ ಸಾರಿಗೆ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. ಕುರಿ ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದ ಅನೇಕರು ಈ ಯೋಜನೆಗಾಗಿ ಕೆಲಸ ಮಾಡುತ್ತಾ ಹೊಸ ಕೌಶಲವನ್ನು ಕಲಿತು, ತಮ್ಮ ಆದಾಯದ ಮೂಲವನ್ನು ಬದಲಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಯೋಜನೆ ಯಾಕೆ ಮುಖ್ಯ?

* ಭಾರತದ ಇತರ ನಗರಗಳೊಂದಿಗೆ ಇಡೀ ಜಮ್ಮು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವುದು

*ಎಲ್ಲಾ ಋತುಮಾನದಲ್ಲೂ ಜಮ್ಮು ಕಾಶ್ಮೀರಕ್ಕೆ ಅಬಾಧಿತವಾಗಿ ಸಂಪರ್ಕ

* ಜಮ್ಮು–ಕಾಶ್ಮೀರದ ಆರ್ಥಿಕತೆಯ ವೇಗವರ್ಧಕ

* ಉನ್ನತ ಶಿಕ್ಷಣಕ್ಕಾಗಿ ಹಂಬಲಿಸುವವರಿಗೆ ದೇಶದ ಇತರ ನಗರಗಳಿಗೆ ಬರಲು ಅನುಕೂಲ

* ಈ ಯೋಜನೆಯು ಜಾರಿಯಾದಾಗಿನಿಂದ ಯೋಜನಾ ವ್ಯಾಪ್ತಿಯ ಪಟ್ಟಣ, ನಗರಗಳಲ್ಲಿ ವ್ಯಾಪಾರ ಚಟುವಟಿಕೆ ಹೆಚ್ಚಿದೆ. ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ಹೆಚ್ಚಿವೆ. ಆರ್ಥಿಕವಾಗಿಯೂ ಸ್ಥಳೀಯರು ಏಳಿಗೆ ಕಾಣುತ್ತಿದ್ದಾರೆ.

* ವೈಷ್ಣೋದೇವಿ, ತ್ರಿಕೂಟ ಪರ್ವತಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವುದು

* ಕತ್ರಾ ಪಟ್ಟಣದವರೆಗೆ ರೈಲು ಸೇವೆ ಆರಂಭವಾದ ಬಳಿಕ ವೈಷ್ಣೋದೇವಿಗೆ ಬರುವ ಭಕ್ತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. 2011–12ರಲ್ಲೇ ಭೇಟಿನೀಡುವ ಭಕ್ತರ ಸಂಖ್ಯೆ  ಒಂದು ಕೋಟಿ ದಾಟಿದೆ.

ಜಗತ್ತಿನ ಅತಿ ಎತ್ತರದ ಸೇತುವೆ

ಕತ್ರಾ– ಕಾಜಿಗುಂಡ ಮಧ್ಯೆ, ಚಿನಾಬ್‌ ನದಿಗೆ ನಿರ್ಮಿಸಲಾಗುತ್ತಿರುವ ಬೃಹತ್‌ ಸೇತುವೆಯು ಕಾಮಗಾರಿ ಪೂರ್ಣಗೊಂಡ ಕೂಡಲೇ ದಾಖಲೆ ಸೃಷ್ಟಿಸಲಿದೆ. ಇದು ಜಗತ್ತಿನ ಅತಿ ಎತ್ತರದ ಸೇತುವೆ ಎನಿಸಲಿದೆ. ಈ ಸೇತುವೆಯು ಪ್ಯಾರಿಸ್‌ನ ಐಫೆಲ್‌ ಟವರ್‌ಗಿಂದಲೂ 35 ಮೀಟರ್‌, ಹಾಗೂ ಕುತುಬ್‌ ಮಿನಾರ್‌ಗಿಂತ ಐದು ಪಟ್ಟು ಎತ್ತರದ್ದಾಗಿರುತ್ತದೆ.

ಈ ಸೇತುವೆಗಾಗಿ ಎರಡು ಬೆಟ್ಟಗಳ ನಡುವೆ ಕಮಾನು ನಿರ್ಮಿಸಲು 5,462 ಟನ್‌ ಉಕ್ಕನ್ನು ಬಳಸಲಾಗುತ್ತಿದೆ. ಸೇತುವೆಯು ನದಿ ಮಟ್ಟದಿಂದ 359 ಮೀಟರ್‌ ಎತ್ತರದಲ್ಲಿದೆ. 1.315 ಕಿ.ಮೀ. ಉದ್ದದ ಈ ಸೇತುವೆಯನ್ನು, ಗಂಟೆಗೆ 260 ಕಿ.ಮೀ. ವೇಗದ ಗಾಳಿಯನ್ನು ತಾಳಬಲ್ಲಂತೆ ರೂಪಿಸಲಾಗಿದೆ. ಗಾಳಿಯ ವೇಗವನ್ನು ಮಾಪನ ಮಾಡಲು ಸೇತುವೆಯ ಮೇಲೆ ಸೆನ್ಸರ್‌ ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಗಾಳಿಯ ವೇಗವು 90 ಕಿ.ಮೀ. ಮೀರಿದರೆ ತಾನಾಗಿಯೇ ಕೆಂಪು ದೀಪ ಉರಿಯುವಂತೆ ಮಾಡುವುದು ಇದರ ಉದ್ದೇಶ.

ಭಾರಿ ಸ್ಫೋಟವನ್ನು ಸಹ ಸಡೆದುಕೊಳ್ಳಬಲ್ಲ ರೀತಿಯಲ್ಲಿ ಸೇತುವೆ ವಿನ್ಯಾಸಗೊಳಿಸಲಾಗಿದೆ. 63 ಮಿ.ಮೀ. ದಪ್ಪದ ವಿಶೇಷವಾದ ‘ಬ್ಲಾಸ್ಟ್‌ ಪ್ರೂಫ್‌’ ಉಕ್ಕನ್ನು ಇದರ ನಿರ್ಮಾಣದಲ್ಲಿ ಬಳಸಲಾಗಿದೆ. 1,300 ಕಾರ್ಮಿಕರು ಮತ್ತು 300 ಎಂಜಿನಿಯರ್‌ಗಳು ಇದರ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.

ಚೀನಾದ ಬೀಪನ್‌ ನದಿಗೆ ನಿರ್ಮಿಸಿರುವ ಶುಯಿಬೈ ಸೇತುವೆಗೆ ಜಗತ್ತಿನ ಅತಿ ಎತ್ತರದ ಸೇತುವೆ (275 ಮೀಟರ್‌) ಎಂಬ ಹೆಗ್ಗಳಿಕೆ ಇದೆ. ಚಿನಾಬ್‌ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಇದೇ ಅತಿ ಎತ್ತರದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು