ಶನಿವಾರ, ಫೆಬ್ರವರಿ 29, 2020
19 °C

Explainer | ಚಿತ್ರರಂಗಕ್ಕೊಂದು ಮಾಯಾನಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅತ್ಯಾಧುನಿಕ ಚಿತ್ರನಗರಿ (ಫಿಲಂ ಸಿಟಿ) ಸ್ಥಾಪಿಸಬೇಕು ಎಂಬುದು ಹಳೆಯ ಕನಸು. ಹಲವು ದಶಕಗಳ ಹಿಂದೆ, ಹೆಸರಘಟ್ಟದಲ್ಲಿ ಫಿಲಂ ಸಿಟಿ ಸ್ಥಾಪಿಸುವ ಮಾತುಗಳು ಜೋರಾಗಿಯೇ ಕೇಳಿ ಬಂದಿದ್ದವು. ಆ ಬಳಿಕ, ಸಿದ್ದರಾಮಯ್ಯ ಮುಖ್ಯಮಂತ್ರಿ
ಆಗಿದ್ದಾಗ ಮೈಸೂರಿನಲ್ಲಿ ಸ್ಥಳ ಗುರುತಿಸುವ ಕೆಲಸ ಆಗಿ, ಅಲ್ಲಿ ಸ್ಥಾಪಿಸುವ ತೀರ್ಮಾನ ಆಯಿತು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ‘ದೋಸ್ತಿ’ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಮೈಸೂರಿನ ಬದಲು ರಾಮನಗರದಲ್ಲಿ ಸ್ಥಾಪಿಸುವುದಾಗಿ ಘೋಷಿಸಿದರು. ಸ್ಥಳದ ಬಗ್ಗೆ ವಾಗ್ವಾದ ಇನ್ನೂ ಮುಗಿದಿಲ್ಲ. ಇದೀಗ ಬಿಜೆಪಿ ಸರ್ಕಾರ ಹೆಸರಘಟ್ಟದಲ್ಲಿ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದೆ.

ಬೆಂಗಳೂರಿನಲ್ಲೇ ಚಿತ್ರನಗರಿ ಸ್ಥಾಪನೆಯಾದರೆ ಅನಿಮೇಷನ್‌, ಗ್ರಾಫಿಕ್ಸ್‌ ಮತ್ತು ಪೂರಕ ಉದ್ಯಮಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯ. ಅಂತರರಾಷ್ಟ್ರೀಯ ಚಿತ್ರೋದ್ಯಮವನ್ನು ಬೆಂಗಳೂರಿನತ್ತ ಸೆಳೆಯಲು ಸಾಧ್ಯ ಎಂಬುದು ಕನ್ನಡ ಚಿತ್ರೋದ್ಯಮದಲ್ಲಿ ಕೆಲವರ ಅಭಿಪ್ರಾಯ. ಇನ್ನು ಕೆಲವರು ಈ ಹಿಂದೆ ನಿರ್ಧರಿಸಿದಂತೆ ಮೈಸೂರಿನಲ್ಲಿ ಸ್ಥಾಪಿಸುವುದು ಸೂಕ್ತ ಎನ್ನುತ್ತಿದ್ದಾರೆ.

ಚಿತ್ರನಗರಿಗಳು
ಕಳೆದ ಒಂದೆರಡು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರೋದ್ಯಮದ ಚಿತ್ರಣ ಬದಲಾಗಿದೆ. ಭಾರತೀಯ ಸಿನಿಮಾ ಎಂದರೆ ‘ಬಾಲಿವುಡ್‌’ ಮಾತ್ರ ಎಂಬ ಧೋರಣೆ ಈಗ ಇಲ್ಲ. ಪ್ರಾದೇಶಿಕ ಭಾಷೆಗಳ ಚಿತ್ರಗಳೂ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅದರಂತೆ, ಚಿತ್ರೋದ್ಯಮಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲು ವಿವಿಧ ರಾಜ್ಯಗಳಲ್ಲಿ ಅತ್ಯಾಧುನಿಕ ಚಿತ್ರನಗರಿಗಳೂ ನಿರ್ಮಾಣವಾಗಿವೆ. ಇಂಥ ಕೆಲವು ಚಿತ್ರನಗರಿಗಳು ಪ್ರೇಕ್ಷಣೀಯವಾಗಿಯೂ ಇವೆ

ರಾಮೋಜಿರಾವ್‌ ಫಿಲಂ ಸಿಟಿ
ಇದು ಜಗತ್ತಿನ ಅತಿ ದೊಡ್ಡ ಸಂಯೋಜಿತ ಚಿತ್ರನಗರಿಯಾಗಿದೆ. ಅತಿ ವಿಸ್ತಾರವಾದ ಸ್ಟುಡಿಯೊ ಸಂಕೀರ್ಣ ಹೊಂದಿರುವ ಕಾರಣಕ್ಕೆ ಇದರ ಹೆಸರು ‘ಗಿನ್ನೆಸ್‌’ನಲ್ಲೂ ದಾಖಲಾಗಿದೆ. ಹೈದರಾಬಾದ್‌ನಲ್ಲಿರುವ (ತೆಲಂಗಾಣ) 1666 ಎಕರೆ ವಿಸ್ತೀರ್ಣದ ಈ ಚಿತ್ರ ನಗರಿಯನ್ನು ಉದ್ಯಮಿ ರಾಮೋಜಿ ರಾವ್‌ ಅವರು 1996ರಲ್ಲಿ ಸ್ಥಾಪಿಸಿದ್ದರು. ಈಗ ಇದು ಪ್ರಮುಖ ಪ್ರವಾಸಿ ತಾಣವೂ ಆಗಿದೆ.

ತೋಟಗಳು, ಆಸ್ಪತ್ರೆ, ಪೊಲೀಸ್‌ ಕೇಂದ್ರ ಕಚೇರಿ, ತಾಜ್‌ ಮಹಲಿನ ಮಾದರಿ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಸೆಟ್‌ಗಳು ಇಲ್ಲಿಯ ಕೆಲವು ವೈಶಿಷ್ಟ್ಯ.ಇದನ್ನು ಪೂರ್ಣವಾಗಿ ನೋಡಬೇಕಿದ್ದರೆ ಕನಿಷ್ಠ ಎರಡು ದಿನಗಳಾದರೂ ಬೇಕು.

ಮುಂಬೈ ಚಿತ್ರನಗರಿ
ಮುಂಬೈಯ ಉಪನಗರ ಗೋರೆಗಾಂವ್‌ನಲ್ಲಿರುವ ಈ ಚಿತ್ರನಗರಿಯನ್ನು ‘ಬಾಲಿವುಡ್‌ನ ಹೃದಯ’ ಎಂದು ಪರಿಗಣಿಸಲಾಗುತ್ತದೆ. ನೂರಾರು ಎಕರೆ ವಿಸ್ತಾರದ ಈ ಚಿತ್ರನಗರಿಯಲ್ಲಿ ಮಂದಿರ, ಜೈಲು, ಕೋರ್ಟ್‌, ಗುಡ್ಡ ಬೆಟ್ಟಗಳು, ಗ್ರಾಮೀಣ ಪರಿಸರ, ಕೃತಕ ಜಲಪಾತ... ಹೀಗೆ ಸಿನಿಮಾಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ. ಚಿತ್ರ ನಿರ್ದೇಶಕ, ಕನ್ನಡಿಗ ವಿ.ಶಾಂತಾರಾಂ ಅವರ ಮಾರ್ಗದರ್ಶನದಲ್ಲಿ 1977ರಲ್ಲಿ ಈ ಚಿತ್ರನಗರಿಯ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಲಾಗಿತ್ತು. 2001ರಲ್ಲಿ ಇದಕ್ಕೆ ‘ದಾದಾಸಾಹೇಬ ಫಾಲ್ಕೆ ಚಿತ್ರನಗರಿ’ ಎಂದು ಮರುನಾಮಕರಣ ಮಾಡಲಾಗಿದೆ. 

ನೊಯ್ಡಾ ಫಿಲ್ಮ್‌ ಸಿಟಿ
ದೆಹಲಿ ಸಮೀಪದ ನೊಯ್ಡಾ ಚಿತ್ರನಗರಿಯು ಸಿನಿಮಾಗಳಿಗಿಂತ ಹೆಚ್ಚಾಗಿ ಟಿ.ವಿ. ಧಾರಾವಾಹಿಗಳು, ಸುದ್ದಿ ವಾಹಿನಿಗಳು ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಹೆಚ್ಚು ಜನಪ್ರಿಯವಾಗಿದೆ. ಸುಮಾರು 100 ಎಕರೆ ವಿಸ್ತೀರ್ಣದ ಈ ಫಿಲಂ ಸಿಟಿಯು ಅತಿ ಹೆಚ್ಚು ಗಣ್ಯರು ಭೇಟಿನೀಡುವ ಜಾಗವಾಗಿದೆ. ಸಾಕಷ್ಟು ಬಾಲಿವುಡ್‌ ಸಿನಿಮಾಗಳ ಚಿತ್ರೀಕರಣ ಸಹ ಇಲ್ಲಿ ನಡೆದಿದೆ. ಸುದ್ದಿ ವಾಹಿನಿಗಳ ಸ್ಟುಡಿಯೊಗಳು ಸಹ ಇಲ್ಲಿವೆ. ಚೆನ್ನೈನ ಎಂಜಿಆರ್‌ ಫಿಲಂ ಸಿಟಿ, ಬೆಂಗಳೂರಿನ ಬಿಡದಿಯ ಇನ್ನೊವೇಟಿವ್‌ ಫಿಲಂ ಸಿಟಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಹಾಲಿವುಡ್‌
ಹಾಲಿವುಡ್‌ ಎಂಬುದು ಒಟ್ಟಾರೆ ಅಮೆರಿಕದ ಚಿತ್ರೋದ್ಯಮಕ್ಕೆ ಇರುವ ಹೆಸರೇ ವಿನಾ ಅದು ಒಂದು ಚಿತ್ರನಗರಿಯಲ್ಲ. ಲಾಸ್‌ಏಂಜಲಿಸ್‌ ಸಮೀಪದ ಈ ಪ್ರದೇಶದಲ್ಲಿ ಆರಂಭದ ದಿನಗಳಲ್ಲಿ ಚಿತ್ರ ನಿರ್ಮಾಣ ಸಂಸ್ಥೆಗಳು ಹುಟ್ಟಿಕೊಂಡಿ
ದ್ದವು. ಅಮೆರಿಕನ್‌ ಫಿಲಂ ಇನ್‌ಸ್ಟಿಟ್ಯೂಟ್‌, ಎಲ್‌ಎ ಫಿಲಂ ಸ್ಕೂಲ್‌, ಎನ್‌ವೈಎಫ್‌ಎಯಂಥ ಸಂಸ್ಥೆಗಳು ಇಲ್ಲೇ ಆರಂಭವಾಗಿದ್ದವು. ಕ್ರಮೇಣ ಇದು ಚಿತ್ರ ನಿರ್ಮಾಣದ ಪ್ರಮುಖ ತಾಣವಾಯಿತು. ಈಗ ಅದು ಅಮೆರಿಕದ ಸಿನಿಮಾ ಜಗತ್ತಿಗೆ ಪರ್ಯಾಯ ಹೆಸರಾಗಿ ರೂಪುಗೊಂಡಿದೆ.

1911ರ ಅಕ್ಟೋಬರ್‌ 27ರಂದು ನೆಸ್ಟರ್‌ ಕಂಪನಿಯು ಆರಂಭಿಸಿದ ಸ್ಟುಡಿಯೊಗೆ ಹಾಲಿವುಡ್‌ನ ಮೊದಲ ಸಿನಿಮಾ ಸ್ಟುಡಿಯೊ ಎಂಬ ಹೆಗ್ಗಳಿಕೆ ಲಭಿಸಿದೆ. 1912ರಲ್ಲಿ ಯುನಿವರ್ಸಲ್‌ ಸ್ಟುಡಿಯೊ ಆರಂಭವಾಗಿತ್ತು. ಆನಂತರ ಹಲವು ಸ್ಟುಡಿಯೊಗಳು ಅಮೆರಿಕದಲ್ಲಿ ನಿರ್ಮಾಣವಾಗಿವೆ. ಹಾಲಿವುಡ್‌ ಅನ್ನು ಜಗತ್ತಿನ ಅತ್ಯಂತ ಹಳೆಯ ಮತ್ತು ಆದಾಯದ ದೃಷ್ಟಿಯಿಂದ ಅತಿ ದೊಡ್ಡ ಚಿತ್ರೋದ್ಯಮ ಎಂದು ಗುರುತಿಸಲಾಗುತ್ತದೆ. ಅಮೆರಿಕದ ಚಿತ್ರೋದ್ಯಮವು ಪ್ರತಿವರ್ಷ ನೂರಾರು ಸಿನಿಮಾಗಳನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಹೆಚ್ಚಿನ ಸಿನಿಮಾಗಳ ಚಿತ್ರೀಕರಣವು ಕ್ಯಾಲಿಫೋರ್ನಿಯ, ನ್ಯೂಯಾರ್ಕ್‌, ಲೂಸಿಯಾನ, ಜಾರ್ಜಿಯಾ ಮುಂತಾದ ನಗರಗಳಲ್ಲಿ ನಡೆಯುತ್ತಿವೆ.

ಸ್ಟುಡಿಯೊ ಒಂದರಲ್ಲಿ ರೈಲು ಉರಿಯುವ ಸೆಟ್‌ 

ಎಲ್ಲಿ ಮತ್ತು ಎಷ್ಟು ಎಕರೆ

* ಅಗತ್ಯವಿರುವ ಜಾಗ 100 ರಿಂದ 200 ಎಕರೆ

* ಹೆಸರಘಟ್ಟದಲ್ಲಿ ಸರ್ಕಾರಿ ಫಿಲಂ ಅಂಡ್‌ ಟೆಲಿವಿಷನ್‌ ಇನ್ಸ್‌ಟಿಟ್ಯೂಟ್‌ಗೆ 5 ಎಕರೆ ಬಳಕೆಯಾಗಿದ್ದು, ಉಳಿದ 20 ಎಕರೆ ಇದಕ್ಕೆ ಬಳಸಬಹುದು.

* ರಾಜ್ಯ ಸರ್ಕಾರವು ಪಶುಸಂಗೋಪನೆ ಇಲಾಖೆಗೆ ಸೇರಿದ 347.12 ಎಕರೆಯನ್ನು ವಶಕ್ಕೆ ತೆಗೆದುಕೊಂಡು, ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಕ್ಕೆ (ಕೆಎಫ್‌ಐಡಿಸಿ) ಗುತ್ತಿಗೆಗೆ ನೀಡಿದೆ. ಇದರಲ್ಲಿ 25 ಎಕರೆಯನ್ನು ಜಿಎಫ್‌ಟಿಐಗೆ ಉಪಗುತ್ತಿಗೆ ನೀಡಿತ್ತು. ಉಪ ಗುತ್ತಿಗೆ ಅವಧಿ 2004 ಕ್ಕೆ ಕೊನೆಗೊಂಡಿದೆ.

ಯಾವ ಸೌಲಭ್ಯಗಳು ಲಭ್ಯ

ಚಿತ್ರ ನಿರ್ಮಾಣಕ್ಕೆ ಬೇಕಾದ ಎಲ್ಲ ಅಂಶಗಳು ಒಂದೇ ಸ್ಥಳದಲ್ಲಿ ಲಭ್ಯ

* ಎಕ್ಸಿಬಿಷನ್‌ ಸ್ಥಳಾವಕಾಶ

* ಸ್ಟುಡಿಯೊಗಳು

* ಕಾರ್ಪೊರೇಟ್‌ ಕಚೇರಿಗಳು

* ಮನರಂಜನಾ ಕೇಂದ್ರ

* ಶಿಕ್ಷಣ ಮತ್ತು ತರಬೇತಿ ವಲಯ

* ಇಂಟಿಗ್ರೇಟೆಡ್‌ ಫಿಲಂ ಸ್ಟುಡಿಯೊ ಅಂಡ್‌ ಎಂಟರ್‌ಟೈನ್‌ಮೆಂಟ್‌ ಕಾಂಪ್ಲೆಕ್ಸ್‌

ಅತ್ಯುತ್ತಮ ಸ್ಟುಡಿಯೊಗಳ ಅಧ್ಯಯನ

* ವಾಲ್ಟ್‌ ಡಿಸ್ನಿ, ದುಬೈ ಸ್ಟುಡಿಯೊ, ವಾರ್ನರ್‌ ಬದ್ರರ್ಸ್ ಸ್ಟುಡಿಯೊ, ಪ್ಯಾರ್‌ಮೌಂಟ್‌ ಪಿಕ್ಚರ್ಸ್‌, ರಾಮೋಜಿ, ಮುಂಬೈ ಮತ್ತು ನೊಯ್ಡಾ ಫಿಲಂ ಸಿಟಿ ಇವುಗಳ ಮಾದರಿ ಅಧ್ಯಯನ ನಡೆಸಿದ್ದು, ಇವುಗಳ ಸಾಲಿನಲ್ಲಿ ನಿಲ್ಲುವಂತಹ ಸ್ಟುಡಿಯೊ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ.

 **
ಬೆಂಗಳೂರಿನಲ್ಲಿ ಫಿಲಂ ಸಿಟಿ ಸ್ಥಾಪಿಸುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ ನಿರ್ಧಾರ. ನಟ–ನಟಿಯರು, ತಂತ್ರಜ್ಞರು ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವುದರಿಂದ ಹೆಚ್ಚು ಅನುಕೂಲ. ಅಲ್ಲದೇ, ಇಡೀ ಜಗತ್ತಿನ ಚಲನಚಿತ್ರ ಉದ್ಯಮವನ್ನು ಇಲ್ಲಿಗೆ ಸೆಳೆಯಬಹುದು. ಫಿಲಂ ಸಿಟಿ ಎಷ್ಟು ಎಕರೆ ಪ್ರದೇಶ ಒಳಗೊಂಡಿರುತ್ತದೆ ಮತ್ತು ಏನೆಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ ಎನ್ನುವುದು ಮುಖ್ಯ. ಚಿತ್ರ ನಿರ್ಮಾಣ ಮಾಡುವವರು ಯಾವುದೇ ಒಂದು ನಿರ್ದಿಷ್ಟ ಸೌಲಭ್ಯ ಮಾರನೇ ದಿನ ಬೆಳಿಗ್ಗೆಯೇ ಸಿಗಬೇಕು ಎಂದು ಬಯಸಿದರೆ, ಅದನ್ನು ಒದಗಿಸಬೇಕು. ಆಗ ಮಾತ್ರ ಬೆಂಗಳೂರು ಫಿಲಂ ಸಿಟಿ, ಮುಂಬೈ, ಹೈದರಾಬಾದ್‌ಗೂ ಖಚಿತವಾಗಿ ಸ್ಪರ್ಧೆ ನೀಡಲು ಸಾಧ್ಯ. ಅನಿಮೇಷನ್‌ಗಾಗಿ ಅಂತರರಾಷ್ಟ್ರೀಯ ಚಲನಚಿತ್ರ ರಂಗವು ಬೆಂಗಳೂರನ್ನೇ ನೆಚ್ಚಿಕೊಂಡಿವೆ. ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಈ ಎಲ್ಲವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದನ್ನು ಕನಸಿನ ಯೋಜನೆಯಾಗಿ ರೂಪಿಸಿದರೆ, ಖಂಡಿತ ಯಶಸ್ಸು ಕಾಣಬಹುದು.
-ಕೆಸಿಎನ್‌ ಚಂದ್ರಶೇಖರ್‌, ನಿರ್ಮಾಪಕ

**

ಮೈಸೂರಿನಲ್ಲೇ ಫಿಲಂ ಸಿಟಿ ಆಗಬೇಕು ಎಂಬುದು ರಾಜ್‌ಕುಮಾರ್‌, ವಿಷ್ಣುವರ್ಧನ್‌ ಮತ್ತು ಅಂಬರೀಷ್‌ ಅವರ ಕನಸಾಗಿತ್ತು. ಅದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಮೈಸೂರಿನಲ್ಲಿ ಈಗಾಗಲೇ 80 ಎಕರೆ ಜಮೀನು ಗುರುತಿಸಲಾಗಿದೆ. ಮೈಸೂರು ಮತ್ತು ಬೆಂಗಳೂರು ಎರಡೂ ಕಡೆಗಳಲ್ಲಿ ಫಿಲಂ ಸಿಟಿ ಸ್ಥಾಪಿಸಬಹುದು. ಮುಂಬೈನಲ್ಲಿ ಐದು ಕಡೆ ಸ್ಟುಡಿಯೋಗಳಿವೆ. ಆರಂಭದಲ್ಲಿ ಕೊಲ್ಲಾಪುರದಲ್ಲಿ ಚಿತ್ರೋದ್ಯಮ ಆರಂಭವಾಯಿತು. ಮೈಸೂರು ಪ್ರದೇಶವನ್ನು ಬಯಸುವವರು ಚಿತ್ರೋದ್ಯಮದಲ್ಲಿ ಬಹಳ ಜನರಿದ್ದಾರೆ. ಇದಕ್ಕೆ 80 ವರ್ಷಗಳ ಇತಿಹಾಸವಿದೆ. ಬೆಂಗಳೂರಿನಲ್ಲಿ ಡಿಜಿಟಲ್‌, ಅನಿಮೇಷನ್, ಮಾಹಿತಿ ತಂತ್ರಜ್ಞಾನಕ್ಕೆ ಪೂರಕವಾಗಿ ಫಿಲಂ ಸಿಟಿ ಸ್ಥಾಪನೆಗೊಳ್ಳಲಿ. ಕನ್ನಡ ಚಿತ್ರೋದ್ಯಮ ಮತ್ತು ಟೆಲಿವಿಷನ್‌ ಧಾರಾವಾಹಿ ಮತ್ತು ಕಾರ್ಯಕ್ರಮಗಳು ಆ ಮಟ್ಟಿಗೆ ಬೆಳೆದಿವೆ.
-ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕ ಮತ್ತು ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು