ಶುಕ್ರವಾರ, ಮೇ 20, 2022
23 °C
ನವಭಾರತಕ್ಕಾಗಿ ಕನ್ನಡದ ನಿರ್ಲಕ್ಷ್ಯವು ಸಾಮಂತಗಿರಿಯ ಇನ್ನೊಂದು ರೂಪ

ಆಳ–ಅಗಲ: ‘ನವಕರ್ನಾಟಕ’ ಎತ್ತ ಸಾಗುತ್ತಿದೆ?

ಜಾನಕಿ ನಾಯರ್‌ ಮತ್ತು ಎ.ಆರ್.ವಾಸವಿ Updated:

ಅಕ್ಷರ ಗಾತ್ರ : | |

PV Photo

‘ನವಭಾರತಕ್ಕಾಗಿ ನವಕರ್ನಾಟಕ’ ಎಂಬುದು ಹೊಸ ಘೋಷವಾಕ್ಯವಾಗಿ ಅದರ ಸುತ್ತಲೇ ರಾಜ್ಯವನ್ನು ಮರುಕಲ್ಪಿಸಲಾಗುತ್ತಿದೆ. ಈ 65ನೇ ರಾಜ್ಯೋತ್ಸವದ ಸಂದರ್ಭದಲ್ಲಿ ಒಂದು ಕಾಲದಲ್ಲಿ ಮಾದರಿ ರಾಜ್ಯವಾಗಿದ್ದ ಕರ್ನಾಟಕ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬ ವಿಮರ್ಶಾತ್ಮಕ ವಿಶ್ಲೇಷಣೆಯು ಈ ರೂಪಾಂತರವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಬಹುದು. ಶತಮಾನಕ್ಕೂ ಹೆಚ್ಚಿನ ಕಾಲ ಅಭಿವೃದ್ಧಪಥದ ನೇತೃತ್ವವನ್ನು ರಾಜ್ಯವೇ ವಹಿಸಿತ್ತು ಮತ್ತು ಸಾಮಾಜಿಕ ಸೌಹಾರ್ದದ ಕೀರ್ತಿಯನ್ನೂ ಹೊಂದಿತ್ತು. ರಾಜ್ಯವು ಇಂದು ಆಡಳಿತ ಮತ್ತು ಸಾರ್ವಜನಿಕ ಸಂಸ್ಕೃತಿಯ ಹೊಸಮಾದರಿಗೆ ಹೊರಳಿಕೊಳ್ಳುತ್ತಿದೆ. 1970ರ ದಶಕದ ‘ಎಲ್ಲರನ್ನೂ ಒಳಗೊಳ್ಳುವ ಸಾಮಾಜಿಕನ್ಯಾಯ’ದ ಕಾರ್ಯಕ್ರಮಗಳಿಂದ ಹೊರಳಿ, ಸಾರ್ವಜನಿಕ, ಸಾಂವಿಧಾನಿಕ ಹಕ್ಕು ಮತ್ತು ಸಮಾನತೆ ಮುಂತಾದ ಪದಗಳಿಗೆ ಹೊಸ ಅರ್ಥಗಳನ್ನು ‘ನವಕರ್ನಾಟಕ’ ಟಂಕಿಸುತ್ತಿದೆ. ಭಾರತದ ಪ್ರಜಾಸತ್ತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯಗಳ ಭವಿಷ್ಯಕ್ಕೇ ಕಾರ್ಮೋಡ ಕವಿಯುವಂತೆ ಈ ಹೊಸ ಪ್ರಯತ್ನಗಳಿವೆ. 

ಜಾತಿ ಮತ್ತು ಕಾಸಿನ ತಂತ್ರಗಳ ಮೂಲಕ ಗೆದ್ದಿರುವ ನಮ್ಮ ಶಾಸಕರ ಪೈಕಿ ಶೇ 97ರಷ್ಟು ಮಂದಿ ಕೋಟ್ಯಧಿಪತಿಗಳಾಗಿದ್ದರೆ, 77 ಮಂದಿಯ ಮೇಲೆ ಕ್ರಿಮಿನಲ್‌ ಕೇಸುಗಳಿವೆ 54 ಶಾಸಕರ ಮೇಲೆ ಗಂಭೀರ ಅಪರಾಧ ಪ್ರಕರಣಗಳಿವೆ. ಈ ವಸ್ತು ಸ್ಥಿತಿ ಸಾರ್ವಜನಿಕ ಬದುಕಿನ ಚರ್ಚೆಯನ್ನೇ ಒರಟು ಮಾಡಿಬಿಟ್ಟಿದೆ. ಜನಪ್ರತಿನಿಧಿಗಳಿಂದ ನಿರೀಕ್ಷಿಸುವ ಸಾರ್ವಜನಿಕ ಗಾಂಭೀರ್ಯ ಮತ್ತು ಶಿಷ್ಟತೆಯ ನಿರೀಕ್ಷೆಗಳನ್ನೇ ಈ ಸ್ಥಿತಿಗತಿ ಕೊರೆದು ಹಾಕುತ್ತಿದೆ. ಇದಕ್ಕಿಂತಲೂ ಘೋರವೆಂದರೆ ಹಿಂಸೆಯನ್ನು ಛೂಬಿಡುವುದು, ಅಧಿಕಾರದಲ್ಲಿದ್ದಾಗ ತಮ್ಮನ್ನು ತಾವೇ ಕ್ಷಮಿಸಿ ಬಿಡುವುದು, ಕಾನೂನಿಗೆ ಅತೀತರೆಂಬಂತೆ ಕಾರ್ಯನಿರ್ವಹಿಸುವುದು. ಪೋಲೀಸ್‌ ಮಹಾನಿರ್ದೇಶಕರು, ದಾವೆ ನಿರ್ದೇಶನಾಲಯ ಮತ್ತು ಕಾನೂನು ಇಲಾಖೆ ವಿರೋಧ ವ್ಯಕ್ತಪಡಿಸಿದಾಗಲೂ ಬಿಜೆಪಿಯ ನಾಯಕರು, ಶಾಸಕರು, ಸಂಸದರ ಮೇಲೆ ಇದ್ದ 62 ಅ‍‍ಪರಾಧ ಪ್ರಕರಣಗಳನ್ನು ಹಿಂಪಡೆದಿದ್ದರಲ್ಲೇ ಈ ನಡೆಯ ಪುರಾವೆ ಇದೆ.

1975ರ ಭೂಸುಧಾರಣಾ ಕಾಯ್ದೆ ಮೂಲಕ ಕರ್ನಾಟಕವು ಗಮನಾರ್ಹ ಸಾಮಾಜಿಕ, ಆರ್ಥಿಕ ಕಲ್ಯಾಣ ಕಾರ್ಯಕ್ರಮಗಳ ಹರಿಕಾರನಾಗಿ ಮೂಡಿಬಂತು. ಆದರೆ ಇತ್ತೀಚೆಗೆ ಯಾವ ಸಮಾಲೋಚನೆಯಾಗಲೀ, ಚರ್ಚೆಯಾಗಲೀ ನಡೆಸದೇ ಈ ಕಾಯ್ದೆಯನ್ನೇ ನಿಷ್ಫಲಗೊಳಿಸುವ ಕಾಯ್ದೆಗಳನ್ನು ಅಂಗೀಕಾರ ಮಾಡಲಾಯಿತು. 

ಜಮೀನಿನ ಕ್ರೋಡೀಕರಣ ಮತ್ತು ದುರುಪಯೋಗ ಮಿತಿಮೀರಿದೆ; ಇದು ಸಣ್ಣ ಮತ್ತು ಅತಿಸಣ್ಣ ರೈತರ ಪಾಲಿಗೆ ಮರಣ ಶಾಸನವಾಗಲಿದೆ. ಕರ್ನಾಟಕದ ಪಾಲಿಗೆ ದುಃಸ್ವಪ್ನದಂತಿದ್ದ ಗಣಿಗಾರಿಕೆಯನ್ನು ಮತ್ತೆ ಪ್ರೋತ್ಸಾಹಿಸಲಾಗುತ್ತಿದೆ. ಈ ಹಿರಿದು ತೆಗೆವ ಆರ್ಥಿಕತೆಯು ಪರಿಸರ, ಶಾಸನಾತ್ಮಕ ಮತ್ತು ವಿಕೇಂದ್ರೀಕೃತ ಆಡಳಿತದ ಕಾನೂನುಗಳನ್ನೇ ಧಿಕ್ಕರಿಸಿದೆ ಎಂಬುದನ್ನು ಮರೆತು ಗಣಿಗಾರಿಕೆಗೆ ಮತ್ತೆ ಮಣೆ ಹಾಕಲಾಗುತ್ತಿದೆ. ತನ್ಮೂಲಕ, ಪ್ರಜಾಸತ್ತಾತ್ಮಕ ಪ್ರಕ್ರಿಯೆ, ಸಾಮಾಜಿಕ/ ಆರ್ಥಿಕ ನ್ಯಾಯ ಮತ್ತು ಪರಿಸರದ ಸುಸ್ಥಿರತೆಯ ಅಂಶಗಳನ್ನು ಸಂಪೂರ್ಣ ನಿರ್ಲಕ್ಷಿಸಿದೆಯಷ್ಟೇ ಅಲ್ಲ; ಈ ಮೂಲಕ ಪಾಳೇಗಾರಿಕೆಯ ತುಂಡರಸರನ್ನು ಸೃಷ್ಟಿಸಿದೆ.

ಕರ್ನಾಟಕದ ಪಂಚಾಯಿತಿ ರಾಜ್‌ ಸಂಸ್ಥೆಗಳು ದೇಶಕ್ಕೇ ಮಾದರಿಯಾಗಿದ್ದವು. ಅವುಗಳನ್ನು ಇಂದು ಹಳಿತಪ್ಪಿಸಲಾಗಿದೆ. ಇತ್ತೀಚೆಗಿನ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿ ವಿಕೇಂದ್ರೀಕೃತ ಆಡಳಿತಾತ್ಮಕ ರಚನೆಗಳ ಕಾರ್ಯಕ್ಕೆ ಅಡ್ಡಿಯುಂಟು ಮಾಡುವ ಪ್ರಯತ್ನವಾಗಿದೆ. ಇದೇ ರೀತಿ ಬೆಂಗಳೂರು ಮಹಾನಗರ ಪಾಳಿಕೆಯ ಚುನಾವಣೆಯನ್ನೂ ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸತತ ಮುಂದೂಡಿಕೆಯು ಶಾಸಕರ, ಮಂತ್ರಿಗಳ ಕಪಿಮುಷ್ಠಿಯಲ್ಲಿ ರಾಜಕೀಯ ಅಧಿಕಾರದ ಕೇಂದ್ರೀಕರಣಕ್ಕೆ ಕಾರಣವಾಗುತ್ತದೆ.

ಕೇಂದ್ರದ ನೀತಿ ಆಯೋಗವನ್ನು ಅನುಸರಿಸಿ ಕರ್ನಾಟಕವೂ ತನ್ನ ಯೋಜನಾ ಮಂಡಳಿಗೆ ‘ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಮಂಡಲಿ’ ಎಂದು ಮರುನಾಮಕಣ ಮಾಡಿದೆ. ಈಗ ಅದು ವಿವರವಾದ ನೀತಿ ವಿಶ್ಲೇಷಣೆ, ಮೌಲ್ಯಮಾಪನದ ಫಲಿತಗಳ ಅನುಷ್ಠಾನ, ಹಾಗೂ ದಕ್ಷ ನಿಗಾವಣೆಗೆ ಮಹತ್ವ ನೀಡುವ ಬದಲು ಕೇಂದ್ರೀಕೃತ ನಿಯಂತ್ರಣ ಮತ್ತು ಕಂಪ್ಯೂಟರುಗಳ ಮೇಲೆ ಒತ್ತು ನೀಡುತ್ತಿರುವಂತಿದೆ.

ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಯ ದಿಕ್ಸೂಚಿಯಾಗಿದ್ದ ಡಾ. ನಂಜುಂಡಪ್ಪ ವರದಿಯನ್ನು ಮೂಲೆಗೆ ತಳ್ಳಲಾಗಿದೆ. ಹೈದರಾಬಾದ್‌ ಕರ್ನಾಟಕಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಗಿದೆಯಾದರೂ ಯಾವುದೇ ಗಮನಾರ್ಹ ಕಲ್ಯಾಣವಾಗಿದ್ದು ಕಾಣುತ್ತಿಲ್ಲ. ಹವಾಮಾನ ಬದಲಾವಣೆಯ ಪರಿಣಾಮದ ಲಕ್ಷಣಗಳು ಹೆಚ್ಚುತ್ತಿರುವ ಪ್ರವಾಹ, ಬರಗಾಲ ಮತ್ತು ಉಷ್ಣಾಂಶಗಳಲ್ಲಿ ಕಾಣಿಸುತ್ತಿದ್ದರೂ ಇದನ್ನು ಎದುರಿಸಲು ಬೇಕಾದ ಕ್ರಿಯಾಯೋಜನೆ ನಾಪತ್ತೆಯಾಗಿದೆ. ಮಾನ್ಯತೆ, ಗೌರವ ಉಳಿಸಿಕೊಂಡಿರುವ ಸಂಸ್ಥೆಗಳು, ಚಿಂತಕರ ಚಾವಡಿಗಳು ಅಂಚಿಗೆ ತಳ್ಳಲ್ಪಟ್ಟಿವೆ. ಸರಕಾರವು ಖ್ಯಾತನಾಮರಿಂದ ಸಲಹೆ ಪಡೆಯುತ್ತಿದೆ. ವಿಕೇಂದ್ರೀಕೃತ ಅಭಿವೃದ್ಧಿಯನ್ನು ಹಿಂದಕ್ಕೆ ತಳ್ಳಲಾಗಿದ್ದು ಅಭಿವೃದ್ಧಿ ಎಂದರೆ ಜಾತಿ ಕ್ರೋಡೀಕರಣವಾಗಿದೆ.ಅಷ್ಟೇ ಅಲ್ಲ ಅನಭಿವೃದ್ಧಿಯನ್ನೇ ಮರುನಿರ್ವಚಿಸಲಾಗುತ್ತಿದೆ.

ವಿವಿಧ ಜಾತಿ ನಿಗಮಗಳನ್ನು ಸ್ಥಾಪಿಸುವ ಮೂಲಕ ಕರ್ನಾಟಕ ಸರ್ಕಾರವು ಯಜಮಾನಿಕೆಯ ಜಾತಿ/ಮಠಗಳನ್ನು ಓಲೈಸುತ್ತಿರುವಂತಿದೆ. ಒಬಿಸಿ/ ಪರಿಶಿಷ್ಟಜಾತಿ/ಪಂಗಡಗಳ ನಿಗಮಗಳ ಅನುದಾನಕ್ಕೆ ಸಂಚಕಾರ ತಂದು ಬ್ರಾಹ್ಮಣ, ಮರಾಠ, ಲಿಂಗಾಯತ, ಒಕ್ಕಲಿಗ ಮಠಗಳಿಗೆ ಅನುದಾನ ನೀಡಿರುವುದನ್ನು ಗಮನಿಸಬೇಕು. ಈ ಪ್ರಬಲ ಜಾತಿಗಳನ್ನು ಬಲಪಡಿಸುವ ನಿರ್ಲಜ್ಜ ಹೆಜ್ಜೆಯೊಂದಿಗೆ ಕರ್ನಾಟಕದ ಶ್ರೀಮಂತ, ವೈವಿಧ್ಯಮಯ ಚರಿತ್ರೆಯ ಘನ ವ್ಯಕ್ತಿಗಳನ್ನು ದುರುಪಯೋಗ ಮಾಡುವ ಪ್ರಯತ್ನವೂ ನಡೆದಿದೆ. 

ಬಸವಕಲ್ಯಾಣದಲ್ಲಿ ಅನುಭವ ಮಂಟಪದಿಂದ ಹಿಡಿದು ಅಕ್ಕಮಹಾದೇವಿ ಸ್ಮಾರಕಕ್ಕೂ ಅನುದಾನ ನೀಡಲಾಗಿದೆಯಲ್ಲದೇ ಸಿದ್ಧಗಂಗಾಶ್ರೀಗಳ 111 ಅಡಿ ಮೂರ್ತಿಯ ಸ್ಥಾಪನೆಗೂ ಅನುದಾನ ಘೋಷಿಸಲಾಗಿದೆ. ಇದೆಲ್ಲದರಲ್ಲೂ ಸರ್ಕಾರ ಮತ್ತು ಜಾತಿ/ಮತ ನಾಯಕರ ಮಧ್ಯೆ ಅಧಿಕಾರ ಹಂಚಿಕೆಯ ಒಪ್ಪಂದ ಕಾಣುತ್ತಿದೆ.

ಒಂದು ಕಾಲದಲ್ಲಿ ಆಧ್ಯಾತ್ಮಿಕ ವಿಚಾರ, ಶಿಕ್ಷಣ ನೀಡುವಿಕೆ, ಸ್ಥಳೀಯ ಪಂಚಾಯಿತಿಕೆ, ಮತ್ತು ತಮ್ಮ ತಮ್ಮ ಪ್ರಬಾವದ ವಲಯಗಳಲ್ಲಿ ಅಭಿವೃದ್ಧಿ ಕುರಿತಂತೆ ಮಾಡಲಾದ ಭರವಸೆಗಳ ಈಡೇರಿಕೆಗಳಲ್ಲಿ ಈ ಮಠಗಳು ತೊಡಗಿಸಿಕೊಂಡಿದ್ದವು. ಆದರೆ ಈಗ ಈ ಮಠಾಧಿಪತಿಗಳು ಬಲಾಢ್ಯ ರಾಜಕೀಯ ಮಧ್ಯವರ್ತಿಗಳ ರೀತಿ ವರ್ತಿಸುತ್ತಿದ್ದಾರೆ.

ಎರಡನೇ ಅಧಿಕಾರ ಹಂಚಿಕೆಯ ವರ್ಗ ಸ್ಥಳೀಯ ಅತಿರೇಕಿ ಗುಂಪುಗಳು. ಇವು ಅಂಚಿನ ಗುಂಪುಗಳಾಗಿ ಈಗ ಉಳಿದಿಲ್ಲ; ಇವುಗಳಿಗೆ ವಿಸ್ತೃತ ಮಾನ್ಯತೆ ಮತ್ತು ಅಧಿಕಾರ ದೊರಕುತ್ತಿದೆ. ಇವುಗಳಲ್ಲಿ ಹೆಚ್ಚಿನವು ಹಿಂದುತ್ವದ ಗುಂಪುಗಳು. ಇವು ಕಾನೂನುಬಾಹಿರ ಹಿಂಸೆಯ ಮೂಲಕ ಸಾಮಾಜಿಕ ವಿಷಯಗಳಲ್ಲೂ ತಲೆಹಾಕುತ್ತಿವೆ. ಈ ಗುಂಪುಗಳ ಹೇಳಿಕೆ ಮತ್ತು ಕಾರ್ಯಾಚರಣೆಗಳಿಗೆ ವಿಸ್ತೃತ ಮಾನ್ಯತೆಯೂ ದೊರಕುತ್ತಿರುವಂತಿದೆ. ಈ ಗುಂಪುಗಳ ಮೂಗು ತೂರಿಸುವಿಕೆಗೆ ಶಾಸಕರಷ್ಟೇಅಲ್ಲ; ಮುಖ್ಯಮಂತ್ರಿಗಳೂ ಅಂಗೀಕಾರದ ಮುದ್ರೆ ಒತ್ತುತ್ತಿರುವಂತಿದೆ.

ಅಂತರ ಧರ್ಮೀಯ ಪ್ರೀತಿಗಾಗಿ ತಲೆಕಡಿಯಲ್ಪಟ್ಟ ಅರ್ಬಾಜ್‌, ಅಂತರ ಜಾತೀಯ ಅಂತರ ಧರ್ಮೀಯ ಸಂಬಂಧಗಳಿಗೆ ಹೆಚ್ಚುತ್ತಿರುವ ಬೆದರಿಕೆ, ಬಹಿರಂಗ ಹಿಂಸೆಯ ಬೆದರಿಕೆ ಮತ್ತು ಕರೆ; ಜೊತೆಗೆ ಇಂಥಾ ದ್ವೇಷ ಭಾಷಣ ಮತ್ತು ಪ್ರಚೋದಕ ಮಾತುಗಳನ್ನು ನಿಗ್ರಹಿಸಲು ಹಿಂದೇಟು ಹಾಕುತ್ತಿರುವುದು- ಇವೆಲ್ಲಾ ರಾಜ್ಯದ ಹೊಸ ರಾಜಕೀಯ ಅಧಿಕಾರದ ಚಿಹ್ನೆಗಳಾಗಿವೆ.

ಪ್ರಭುತ್ವದ ವಿಮರ್ಶೆ, ಪಕ್ಷದ ಆಂತರಿಕ ಭಿನ್ನಮತಗಳನ್ನು ಭಯೋತ್ಪಾದಕ ಚಟುವಟಿಕೆಗಳೆಂದು ಬಣ್ಣಿಸಿ ಕಾನೂನುಬಾಹಿರ ಕೃತ್ಯ ತಡೆಯಂತಹ (ಯುಎಪಿಎ) ರಾಕ್ಷಸೀ ಕಾನೂನುಗಳನ್ನು ಪದೇಪದೇ ಬಳಸಲಾಗುತ್ತಿದೆ .ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪ್ರಕರಣಗಳಲ್ಲಿ 370 ಮಂದಿ ಮೇಲೆ ಈ ಕಾಯ್ದೆ ಬಳಸಲಾಗಿದೆ. ಇವರಿಗೆ ಆರು ತಿಂಗಳಾದರೂ ಜಾಮೀನೂ ದೊರಕಲಿಲ್ಲ. ಬೀದರದ ಶಾಲೆಯೊಂದರಲ್ಲಿ ಸಿಎಎ ಕುರಿತ ನಾಟಕ ಪ್ರದರ್ಶನದ ಕಾರಣಕ್ಕೆ ಶಾಲಾ ಮಕ್ಕಳನ್ನೂ ಸರ್ಕಾರ ಬಿಟ್ಟಿಲ್ಲ. ಭಿನ್ನಮತವನ್ನು ಅಪರಾಧವೆಂಬಂತೆ ಬಗೆದು ದೇಶದ್ರೋಹದ ಪ್ರಕರಣವನ್ನು ಬಳಸಲಾಗುತ್ತಿದೆ. ದಿಶಾ ರವಿಯನ್ನು ಯಾವುದೇ ಕಾನೂನು ಪ್ರಕ್ರಿಯೆಗಳಿಲ್ಲದೇ ದೆಹಲಿಗೆ ಒಯ್ಯಲಾಯಿತು. ಈ ಪ್ರಕರಣ ನಮ್ಮ ಸರ್ಕಾರವು ಮುಗ್ಧ ನಾಗರಿಕರನ್ನು ಅಪರಾಧಿಗಳೆಂದು ಬಿಂಬಿಸುವಲ್ಲಿ ಕೈಜೋಡಿಸುತ್ತಿದೆ ಎಂಬುದರ ಪುರಾವೆ.

ಕೋವಿಡ್‌ ಕಾರಣಕ್ಕೆ ಶಿಕ್ಷಣ ಮತ್ತು ಗಣಿತದ ಸಾಕ್ಷರತೆ ತೀವ್ರ ಕುಸಿತ ಕಂಡು ಶೈಕ್ಷಣಿಕ ತುರ್ತುಪರಿಸ್ಥಿತಿಯಂಥಾ ಸನ್ನಿವೇಶ ಸೃಷ್ಟಿಯಾದರೂ ಸರ್ಕಾರವು ಹೊಸ ಶಿಕ್ಷಣನೀತಿಯನ್ನು ಮೊದಲು ಜಾರಿಗೆ ತಂದ ರಾಜ್ಯವಾಗಬೇಕೆಂಬ ಹೆಗ್ಗಳಿಕೆಯ ತರಾತುರಿಯಲ್ಲಿದೆ. ಹೈಸ್ಕೂಲುವರೆಗಿನ ಸಮಾಜ, ಭಾಷಾ ಪಠ್ಯ ಮತ್ತು ಪರಿಸರ ವಿಜ್ಞಾನದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಮತ್ತೆ ಸಮಿತಿಯೊಂದನ್ನು ನೇಮಿಸುವ ತುರ್ತು ಸರ್ಕಾರಕ್ಕಿದೆ.

‘ಕನ್ನಡಕಾಯಕ ವರ್ಷ’ ಇತ್ಯಾದಿ ಸಾಂಕೇತಿಕ ಆಚರಣೆಗಳನ್ನು ಘೋಷಿಸಿದರೂ, ನವಕರ್ನಾಟಕದ ಬದಲು ನವಭಾರತವನ್ನು ಮುಂಚೂಣಿಗೆ ತರುವಲ್ಲಿ ಕನ್ನಡವನ್ನು ಅಂಚಿಗೆ ತಳ್ಳಿ ಹಿಂದಿ ಭಾಷೆಗೆ ಪ್ರೋತ್ಸಾಹ ನೀಡುವ ಪ್ರಯತ್ನಗಳು ನಡೆಯುತ್ತಲೇ ಇವೆ. 

ಇಷ್ಟೇ ಪ್ರಮಾಣದ ದಮನ ನೀತಿ ಮಹಿಳೆಯರ ಬಗ್ಗೆಯೂ ಬೆಳೆಯುತ್ತಿದೆ. ರಾಷ್ಟ್ರೀಯತೆ ಮತ್ತು ಕುಲ ನೆಂಟಸ್ತಿಕೆ ಆದರ್ಶದ ಪರಿಣಾಮ ಇದು. ಇದು ಸ್ವಾಯತ್ತೆ ಮತ್ತು ಹಕ್ಕುಗಳಿಂದ ದೂರ ಸೆಳೆಯುವ ತಿರುವು. ಜನಪ್ರತಿನಿಧಿಗಳು ಮತ್ತು ಅತಿರೇಕಿ ಗುಂಪುಗಳ ಹೇಳಿಕೆಗಳು ಸತತವಾಗಿ ಬಲಿಪಶುವನ್ನುಆಪಾದಿಸುವ, ತಪ್ಪಿತಸ್ಥಳಂತೆ ನೋಡುವ ಮನಃಸ್ಥಿತಿಯನ್ನಷ್ಟೇ ಅಲ್ಲ, ಮಹಿಳೆಯರು ಹೇಗೆ ವರ್ತಿಸಬೇಕು, ಹೇಗೆ ಉಡುಪು
ಧರಿಸಬೇಕು ಎಂದು ನಿಗದಿ ಪಡಿಸುವ ಮನಃಸ್ಥಿತಿಯನ್ನು ಜಾಹೀರುಗೊಳಿಸಿದೆ. 2001ರಲ್ಲಿ ಸ್ಥಾಪಿಸಲಾಗಿದ್ದ 187 ಸಾಂತ್ವನ ಕೇಂದ್ರಗಳನ್ನು ಹಣಕಾಸಿನ ಕೊರತೆಯ ನೆಪವೊಡ್ಡಿ (₹6 ಕೋಟಿ ಅನುದಾನ!) ಮುಚ್ಚಿರುವುದು ಆಕಸ್ಮಿಕವಲ್ಲ. ಈ ಕೇಂದ್ರಗಳು ಕೌಟುಂಬಿಕ ಹಿಂಸೆಯ ಬಲಿಪಶುಗಳು ಮೊರೆ ಹೋಗುವ ಕೇಂದ್ರಗಳಾಗಿದ್ದವು. ಕುಟುಂಬದ ಚೌಕಟ್ಟು ಈಗ ಕಾನೂನಿಂದ ಹೊರತಾಗಿದೆ!

ಹೊಸ ಮಾರ್ಗಾನ್ವೇಷಿ, ಒಳಗೊಳ್ಳುವ ರಾಜಕೀಯ ಚಿಂತನೆಗಳ ರಾಜ್ಯವಾಗಿದ್ದ ಕರ್ನಾಟಕ ಇಂದು ಚಿಲ್ಲರೆ ಮನಸ್ಸಿನ, ಶಿಕ್ಷಾದಾಹಿ, ವಿಭಜಕ ಗುರಿಯ ರಾಜಕೀಯದಿಂದ ತುಂಬಿದೆ. ಹಿಂದೂರಾಷ್ಟ್ರದ ಪರಿಕಲ್ಪನೆಯಲ್ಲಿ ಕಾನೂನು ಮತ್ತು ನ್ಯಾಯದ ಆಡಳಿತವೆಂಬುದು ಭಯ ಹುಟ್ಟಿಸುವ ಆಡಳಿತವಾಗಿದೆ. ಬೇರು ಮಟ್ಟದ ಸಮುದಾಯ/ ಸಂಸ್ಥೆಗಳನ್ನು ಬಲಗೊಳಿಸುತ್ತಾ ಪ್ರಜಾಸತ್ತೆಯನ್ನು ಆಳ/ ಅಗಲಗೊಳಿಸಿದ ಕಾಲದಿಂದ ನಾವು ಈಗ ಪ್ರಭುತ್ವ, ಧಾರ್ಮಿಕ ( ಹಿಂದೂ) ಅಧಿಕಾರ ಕೇಂದ್ರಗಳು ಮತ್ತು ಅತಿರೇಕಿ ಸಂಘಟನೆಗಳ ನಡುವೆ ಅಧಿಕಾರ ಹಂಚಿಕೆಯ ಅಪಾಯಕಾರಿ ಹಂತಕ್ಕೆ ಸಾಕ್ಷಿಯಾಗಿದ್ದೇವೆ. ತುಚ್ಛ ಆಚರಣೆ/ ನಡಾವಳಿಗಳ ಅನುಕರಣೆಯೇ ನವ ಕರ್ನಾಟಕದ ಮೊದಲ ಆಯ್ಕೆಯಾಗಿರುವಂತಿದೆ. ದಕ್ಷಿಣದ ಉಳಿದ ರಾಜ್ಯಗಳು ವಿಸ್ತರಿಸಿದ ಆರೋಗ್ಯ ವ್ಯವಸ್ಥೆ, ನಗರ ಉದ್ಯೋಗ ಖಾತರಿ, ಸಾರ್ವಜನಿಕ ಶಿಕ್ಷಣದ ಸುಧಾರಣೆಗಳ ಮೂಲಕ ಮಾರಕ ಸಾಂಕ್ರಾಮಿಕ ತಂದಿಟ್ಟಿರುವ ಸಂಕಷ್ಟಗಳನ್ನು ಎದುರಿಸುವ ಪ್ರಯತ್ನ ಮಾಡಿದರೆ ಉತ್ತರ ಪ್ರದೇಶವನ್ನು ದಕ್ಷತೆಯಲ್ಲಿ ಮೀರಿಸುವುದೇ ಕರ್ನಾಟಕದ ಸದ್ಯದ ಸರ್ಕಾರದ ಘೋಷಿತ ಗುರಿಯಾಗಿದೆ. ಅಂದರೆ ನಮ್ಮ ರಾಜ್ಯವೇ ಅಲ್ಪಸಂಖ್ಯಾತರ ಭೀಕರ ಹಿಂಸೆಯ ವಿಚಾರಣಾ ಕೊಠಡಿಯಾಗಿದೆ.

‘ನವಭಾರತಕ್ಕಾಗಿ ನವಕರ್ನಾಟಕ’ ಎಂಬ ಘೋಷಣೆಯ ಹಿಂದೆ ಸಾಮಂತಗಿರಿ ಇದೆ. ಪ್ರಜಾಸತ್ತೆಯ ಭರವಸೆಯನ್ನು, ಒಕ್ಕೂಟ ಪರಿಕಲ್ಪನೆಯನ್ನು, ಬಹುಸಂಸ್ಕೃತಿ, ಬಹುಧರ್ಮೀಯ ಸಾಂಸ್ಕೃತಿಕ ಪರಂಪರೆಯನ್ನು ದಮನಿಸಿ ವಿಕೃತಗೊಳಿಸುವ ಕಾರ್ಯತಂತ್ರವಿದೆ.

ಜನಾಂಗೀಯ ನವಭಾರತ

ಹೊಸ ಶಾಸನಗಳು ಜನಾಂಗೀಯ ನವಭಾರತದ ಚಿಂತನೆ ಮತ್ತು ಕಾರ್ಯಸೂಚಿಗಳು ಅಡಿಯಾಳಾದ ಕರ್ನಾಟಕದ ಸೂಚನೆಗಳಾಗಿವೆ. ದುಡಿವ ವರ್ಗಗಳ ಹಿತಾಸಕ್ತಿಗೆ ವಿರುದ್ಧವಾದ ಕಾರ್ಮಿಕ ಕಾನೂನು (ಇದು ರಾಜ್ಯಪಾಲರಿಂದ ತಿರಸ್ಕೃತವಾಗಿದೆ), ಗೋಹತ್ಯಾ ನಿಷೇಧ ಕಾಯಿದೆ, ಇವೆಲ್ಲಾ ಈ ಪಟ್ಟಿಯಲ್ಲಿ ಸೇರಿವೆ. ಹಿಂದೆಂದೂ ಕಾಣದ ರೀತಿಯಲ್ಲಿ ವಿಧಾನಸೌಧದಲ್ಲಿ ಅಸಂವಿಧಾನಾತ್ಮಕವಾಗಿ ಗೋಪೂಜೆಯನ್ನೂ ನಡೆಸಲಾಗಿದೆ ಎಂಬುದನ್ನು ಗಮನಿಸಿ. ಮತಾಂತರ ನಿಷೇಧ ಕಾಯ್ದೆ, ಕುಟುಂಬ ನಿಯಂತ್ರಣ ಕಾಯ್ದೆ, ‘ಲವ್‌ ಜಿಹಾದ್‌’ ನಿಷೇಧ ಇವೆಲ್ಲಾ ಚರ್ಚೆಯ ವಿಷಯಗಳಾಗಿ ಮುನ್ನೆಲೆಗೆ ಬರುತ್ತಿವೆ. ಕ್ರಿಶ್ಚಿಯನ್‌ ಅಲ್ಪ ಸಂಖ್ಯಾತರು ಮತ್ತು ಅವರ ಸಂಸ್ಥೆಗಳನ್ನು ಗುರಿ ಮಾಡಿ ಈ ಸರ್ಕಾರ ತನಿಖೆ ಆರಂಭಿಸಿದೆ. ಇದು ಸಂವಿಧಾನ ಮತ್ತು ನಾಗರಿಕ ಹಕ್ಕುಗಳ ಭಂಡ ಉಲ್ಲಂಘನೆ. ಇವು ಮೂಲತಃ ಧಾರ್ಮಿಕ ಅಲ್ಪಸಂಖ್ಯಾತರನ್ನು ರಾಕ್ಷಸರಂತೆ ಬಿಂಬಿಸಿ ಅವರ ನಾಗರಿಕತ್ವ ಮತ್ತು ಮಾನವ ಹಕ್ಕುಗಳನ್ನು ದಮನಿಸುವ ಹೆಜ್ಜೆಗಳಾಗಿವೆ. ಮುದ್ರಣ ಮತ್ತು ಟಿವಿ ಮಾಧ್ಯಮಗಳಲ್ಲಿ ಹೆಚ್ಚಿನವು ಈ ದ್ವೇಷ ಭಾಷಣ ಮತ್ತು ಸುಳ್ಳು ಮಾಹಿತಿಯ ಮೇಳಕ್ಕೆ ಕೈಜೋಡಿಸಿವೆ. ಆದರೆ ಸರ್ಕಾರ ಈ ಹಿಂಸಾತ್ಮಕ ಸಾರ್ವಜನಿಕ ಸಂಸ್ಕೃತಿಯ ಹರಡುವಿಕೆಯನ್ನು ನೋಡಿಯೂ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.

ಸುಸ್ಥಿರ ಅಭಿವೃದ್ಧಿ ಸೂಚ್ಯಂಕ

ವಿವಿಧ ಸೂಚ್ಯಂಕಗಳಲ್ಲಿ ರಾಜ್ಯ ಸ್ಥಾನ ಹೀಗಿವೆ:

ಸ್ಥಾನ;ರಾಜ್ಯ;ಸೂಚ್ಯಂಕ

1;ಕೇರಳ;75

2;ಹಿಮಾಚಲ ಪ್ರದೇಶ;74

2;ತಮಿಳುನಾಡು;74

3;ಆಂಧ್ರಪ್ರದೇಶ;72

3;ಗೋವಾ;72

3;ಕರ್ನಾಟಕ;72

10;ರಾಷ್ಟ್ರೀಯ ಸರಾಸರಿ;66

 

ಬಡತನ ನಿರ್ಮೂಲನೆ 

ಸ್ಥಾನ;ರಾಜ್ಯ;ಸೂಚ್ಯಂಕ

1;ತಮಿಳುನಾಡು;86

2;ಗೋವಾ;83

2;ಕೇರಳ;83

11;ಕರ್ನಾಟಕ;68

16;ರಾಷ್ಟ್ರೀಯ ಸರಾಸರಿ;60

 

ಆರೋಗ್ಯ 

ಸ್ಥಾನ;ರಾಜ್ಯ;ಸೂಚ್ಯಂಕ

1;ಗುಜರಾತ್;86

2;ಮಹಾರಾಷ್ಟ್ರ;83

3;ತಮಿಳುನಾಡು;81

5;ಕರ್ನಾಟಕ;78

8;ರಾಷ್ಟ್ರೀಯ ಸರಾಸರಿ;74

 

ಗುಣಮಟ್ಟದ ಶಿಕ್ಷಣ 

ಸ್ಥಾನ;ರಾಜ್ಯ;ಸೂಚ್ಯಂಕ

1;ಕೇರಳ;80

2;ಹಿಮಾಚಲ ಪ್ರದೇಶ;74

3;ಗೋವಾ;71

4;ಉತ್ತರಾಖಂಡ;70

6;ಕರ್ನಾಟಕ;64

10;ರಾಷ್ಟ್ರೀಯ ಸರಾಸರಿ;57


ಜಾನಕಿ ನಾಯರ್‌


ವಾಸವಿ

ಲೇಖಕರು:
ಜಾನಕಿ ನಾಯರ್‌ ಅವರು ಇತಿಹಾಸ ಪ್ರಾಧ್ಯಾಪಕಿ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ, ದೆಹಲಿ.
ವಾಸವಿ ಅವರು ಮಾನವಶಾಸ್ತ್ರಜ್ಞೆ
.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು