ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

New Year 2023 | ಜನವರಿ 1ರಂದೇ ಹೊಸ ವರ್ಷಾಚರಣೆ ಏಕೆ?

ಜನವರಿ ವರ್ಷದ ಮೊದಲ ತಿಂಗಳು ಆಗಿದ್ದು ಹೇಗೆ?
Last Updated 31 ಡಿಸೆಂಬರ್ 2022, 8:30 IST
ಅಕ್ಷರ ಗಾತ್ರ

2023ರ ಹೊಸ ವರ್ಷವನ್ನು ಸ್ವಾಗತಿಸಿಲು ಇಡೀ ಜಗತ್ತು ಸಿದ್ಧವಾಗಿದೆ. ಹಳೇ ವರ್ಷಕ್ಕೆ ಬೀಳ್ಕೊಟ್ಟು, ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಲು ಜಗತ್ತಿನ ವಿವಿಧೆಡೆ ಸಿದ್ಧತೆಗಳು ಮುಗಿದಿವೆ. ವಿಶ್ವದಾದ್ಯಂತ ಇರುವ ಜನ ತಮ್ಮ ಕುಟುಂಬದವರೊಂದಿಗೆ, ಸ್ನೇಹಿತರೊಂದಿಗೆ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಮನೆಗಳು ಸಿಂಗಾರಗೊಂಡಿವೆ. ಪ್ರಮುಖ ನಗರಗಳ ಬೀದಿಗಳು ಮದುವಣಗಿತ್ತಿಯಂತೆ ಅಲಂಕೃತಗೊಂಡಿವೆ. ಪಾರ್ಟಿಗಳು, ಗೆಟ್‌ ಟುಗೆದರ್‌ಗಳು ಆಯೋಜನೆಗೊಂಡಿವೆ. ಹಾಗಾದರೆ ಹೊಸ ವರ್ಷ ಆಚರಣೆ ಯಾಕೆ ಮಾಡಲಾಗುತ್ತದೆ? ಈ ಆಚರಣೆ ಹುಟ್ಟಿಕೊಂಡಿದ್ದು ಹೇಗೆ? ಇದರ ಹಿನ್ನಲೆ ಏನು? ಸಂಕ್ಷಿಪ್ತ ವಿವರ ಇಲ್ಲಿದೆ.

ಇತಿಹಾಸ

‘ಹೊಸ ವರ್ಷ ಆಚರಣೆ‘ ಎಂಬ ಪರಿಕಲ್ಪನೆ ಸುಮಾರು 4000 ವರ್ಷಗಳಷ್ಟು ಹಳೇಯದ್ದು. ಪುರಾತನ ಬಾಬಿಲೋನ್‌ ಕಾಲದಲ್ಲಿ ಅಂದರೆ ಕ್ರಿಸ್ತಪೂರ್ವ ಸುಮಾರು 2000ರಲ್ಲಿ ಆರಂಭವಾದ ಆಚರಣೆ ಇದು ಎನ್ನುವುದು ನಂಬಿಕೆ. 11 ದಿನಗಳ ಕಾಲ ‘ಅಕಿಟು‘ ಎನ್ನುವ ಹೆಸರಿನಲ್ಲಿ ಬಾಬಿಲೋನ್‌ಗಳು ಹೊಸ ವರ್ಷ ಆಚರಣೆ ಮಾಡುತ್ತಿದ್ದರು. ಈ ಹನ್ನೊಂದು ದಿನವೂ ಬೇರೆ ಬೇರೆ ಆಚರಣೆಗಳು ನಡೆಯುತ್ತಿದ್ದವು. ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ನಂತರದ ಮೊದಲ ಅಮಾವಾಸ್ಯೆಯಂದು (ಸುಮಾರು ಮಾರ್ಚ್‌ ತಿಂಗಳ ವೇಳೆಗೆ) ಈ ಆಚರಣೆಗಳು ನಡೆಯುತ್ತಿದ್ದವು.

ಸಮುದ್ರ ದೇವತೆ ‘ತಿಯಾಮತ್‌‘ ವಿರುದ್ಧ ಆಕಾಶ ದೇವತೆ ‘ಮರ್ದುಕ್‌‘ ವಿಜಯ ಸಾಧಿಸಿದ್ದಾರೆ ಎಂದು ಅವರು ನಂಬಿದ್ದರು. ಹೀಗಾಗಿ ಆಚರಣೆಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಇದರ ಜೊತೆಗೆ ಹೊಸ ರಾಜನನ್ನು ಪಟ್ಟಾಭಿಷೇಕ ಮಾಡುವ ಅಥವಾ ಹಿಂದಿನ ರಾಜನನ್ನು ಆಳಲು ಅನುಮತಿ ನೀಡುವ ಪ್ರಕ್ರಿಯೆಯನ್ನೂ ಈ ಆಚರಣೆ ನೆನಪಿಸುತ್ತದೆ.

ಆದರೆ ಇಂದು ವಿಶ್ವದ ಬಹುತೇಕ ಕಡೆಗಳಲ್ಲಿ ಡಿಸೆಂಬರ್‌ 31 ರಿಂದ ಆರಂಭವಾಗಿ ಜನವರಿ 1ರ ಮುಂಜಾನೆವರೆಗೂ ಹೊಸ ವರ್ಷದ ಆಚರಣೆಗಳು ನಡೆಯುತ್ತವೆ. ಸಂತೋಷ ಕೂಟಗಳು, ಪಾರ್ಟಿಗಳು ನಡೆಯುತ್ತವೆ. ಶುಭ ಹಾರೈಕೆಗಳ ಸಾಗರವೇ ಹರಿಯುತ್ತದೆ. ಹೊಸ ವರ್ಷವು ಹೊಸತನ ತರಲಿ, ಶುಭ ತರಲಿ, ಅನಿಷ್ಠ ಕಳೆಯಲಿ ಎನ್ನುವ ನಂಬಿಕೆ ಕೂಡ ಜನರಲ್ಲಿ ಇದೆ. ಅಲ್ಲದೇ ಹೊಸ ವರ್ಷಕ್ಕೆ ಹಲವು ನಿರ್ಣಯಗಳನ್ನು ತೆಗೆದುಕೊಂಡು, ಮುಂದಿನ ವರ್ಷದೊಳಗೆ ಇವನ್ನೆಲ್ಲಾ ಮಾಡಿ ಮುಗಿಸಬೇಕು ಎಂದು ಪ್ರತಿಜ್ಞೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸಂಭ್ರಮಾಚರಣೆ ಬೇರೆ ಬೇರೆ ರೂಪ ಪಡೆದುಕೊಂಡಿದೆ.

ಜನವರಿ 1ಕ್ಕೆ ಹೊಸ ವರ್ಷ ಯಾಕೆ?

ಕಾಲ ಕಳೆದಂತೆ ಪುರಾತನ ರೋಮನ್‌ ಕ್ಯಾಲೆಂಡರ್, ಸೂರ್ಯನ ಚಲನೆ ಜತೆ ಸಮನ್ವಯತೆ ಕಳೆದುಕೊಂಡಿತ್ತು. ಹೀಗಾಗಿ ಇದನ್ನು ಸರಿ ಪಡಿಸಲು, ಕ್ರಿಸ್ತ ಪೂರ್ 46 ರಲ್ಲಿ ರೋಮ್‌ ಚಕ್ರವರ್ತಿ ಜೂಲಿಯಸ್‌ ಸೀಸರ್‌ ಆ ಕಾಲದ ಪ್ರಮುಖ ಖಗೋಳಶಾಸ್ತ್ರಜ್ಞರು ಮತ್ತು ಗಣಿತಜ್ಞರು ಒಗ್ಗೂಡಿಸಿ ಹೊಸ ಕ್ಯಾಲೆಂಡರ್ ತಯಾರಿಸುತ್ತಾನೆ. ಇದಕ್ಕೆ ಜೂಲಿಯನ್‌ ಕ್ಯಾಲೆಂಡರ್ ಎಂದು ಹೆಸರು. ಇದು ಈಗ ನಾವು ಅನುಸರಿಸುತ್ತಿರುವ ಗ್ರೆಗೋರಿಯನ್‌ ಕ್ಯಾಲೆಂಡರ್‌ ರೀತಿಯೇ ಇದೆ.

ಯಾವುದೇ ಶುಭ ಕಾರ್ಯ ಪ್ರಾರಂಭಿಸುವುದಕ್ಕೂ ಮುನ್ನ ‘ವಿಘ್ನ ನಿವಾರಕ ದೇವ‘ ಎಂದು ರೋಮನ್ನರು ನಂಬಿದ್ದ ‘ಜೇನಸ್‘ ಎನ್ನುವ ದೇವರಿಗೆ ಪೂಜೆ ಸಲ್ಲಿಸುವುದು ಅವರ ವಾಡಿಕೆಯಾಗಿತ್ತು. ಹೀಗಾಗಿ ಸೀಸರ್‌ ಜನವರಿ ತಿಂಗಳಲ್ಲಿ ಮೊದಲ ತಿಂಗಳಾಗಿ ಆಯ್ಕೆ ಮಾಡಿಕೊಂಡಿದ್ದ ಎನ್ನುವುದು ಪ್ರಚಲಿತ. ಬಲಿದಾನ ನೀಡಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಮನೆ–ಬೀದಿಗಳನ್ನು ಸಿಂಗರಿಸಿಕೊಂಡು ಜೇನಸ್‌ ದೇವರ ಹುಟ್ಟು ಹಬ್ಬವನ್ನು ರೋಮನ್ನರು ಆಚರಿಸುತ್ತಿದ್ದರು.

ನಂತರ, ಮಧ್ಯಕಾಲೀನ ಯುರೋಪಿನ ಕ್ರಿಶ್ಚಿಯನ್ ಅಧಿಕಾರಿಗಳು ತಾತ್ಕಾಲಿಕವಾಗಿ ಜನವರಿ 1 ಅನ್ನು ವರ್ಷದ ಆರಂಭದ ದಿನವಾಗಿ ಬದಲಾಯಿಸಿದರು. ಏಸು ಕ್ರಿಸ್ತ ಹುಟ್ಟಿದ ಡಿಸೆಂಬರ್‌ 25 ಹಾಗೂ ಏಸು ಕ್ರಿಸ್ತ ಹುಟ್ಟಲಿದ್ದಾರೆ ಎಂದು ಮಾತೆ ಮೇರಿಗೆ ದೇವದೂತ ಗೆಬ್ರಿಯೇಲ್ ಬಂದು ತಿಳಿಸಿದ ಮಾರ್ಚ್‌ 25 ಈ ಎರಡು ದಿನಗಳನ್ನು ಹೊರೆತುಪಡಿಸಿ ಜನವರಿ 1 ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆ ಹೊಂದಿದೆ ಎಂದು ನಂಬಿದ್ದರು.

ಇದಾದ ಬಳಿಕ ಕ್ರಿಸ್ತ ಶಕ 1582ರಲ್ಲಿ 13ನೇಯ ಪೋಪ್‌ ಗ್ರೆಗೋರಿ ಅವರು ಜನವರಿ 1 ನ್ನು ಹೊಸ ವರ್ಷವಾಗಿ ಘೋಷಣೆ ಮಾಡಿದರು. ಅಲ್ಲಿಂದ ಈಚೆಗೆ ಅದೇ ದಿನ ಹೊಸ ವರ್ಷವಾಗಿ ಆಚರಿಸಲ್ಪಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT