ಗುರುವಾರ , ಅಕ್ಟೋಬರ್ 29, 2020
26 °C

ಆಳ–ಅಗಲ: ರಾಜಕಾರಣದ ‘ಹಿಂದುತ್ವ’ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ದೇವಸ್ಥಾನ ಭೇಟಿಗಳು ಸದ್ದು ಮಾಡಿದ್ದವು. ಚುನಾವಣಾ ಸಂದರ್ಭದ ಈ ಭೇಟಿಯನ್ನು ಮಾಧ್ಯಮಗಳು ‘ಟೆಂಪಲ್‌ ರನ್‌’ ಎಂದು ಬಣ್ಣಿಸಿದ್ದವು. ಹಿಂದುತ್ವವನ್ನೇ ಮುನ್ನೆಲೆಯಲ್ಲಿಟ್ಟು, ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿಯ ನೀತಿಗೆ ಪ್ರತಿಯಾಗಿ, ಕಾಂಗ್ರೆಸ್‌ ಈ ‘ಮೃದು ಹಿಂದುತ್ವ’ ತಂತ್ರ ರೂಪಿಸಿತ್ತು.  ರಾಹುಲ್‌ ನಂತರ ಕೇಜ್ರಿವಾಲ್‌, ಆನಂತರ ಕಮಲ‌ನಾಥ್‌ ಹೀಗೆ ಹಲವು ಮುಖಂಡರು ‘ಮೃದು ಹಿಂದುತ್ವ’ವನ್ನು ಚುನಾವಣೆಯ ದಾಳವಾಗಿಸಿದರು. ಈಗ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇದೇ ಹಾದಿಯನ್ನು ತುಳಿದಿದ್ದಾರೆ ಎಂದು ಪಶ್ಚಿಮ ಬಂಗಾಳದ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ

****

ಪಶ್ಚಿಮ ಬಂಗಾಳ: ಮಮತಾ ಹೊಸ ಮಂತ್ರ
ದೇವಸ್ಥಾನದ ಅರ್ಚಕರಿಗೆ ಮಾಸಿಕ ₹1000 ನೆರವು, 8000 ಬ್ರಾಹ್ಮಣ ಅರ್ಚಕರಿಗೆ ಉಚಿತ ಮನೆಗಳು, ದುರ್ಗಾ ಪೂಜೆ ಮಂಡಳಿಗಳಿಗೆ ಆರ್ಥಿಕ ನೆರವು ಹೆಚ್ಚಳ...

2021ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಚುನಾ ವಣೆ ನಡೆಯಲಿದೆ. ಸರ್ಕಾರದ ನೀತಿಗಳಲ್ಲಿ ಆಗಿರುವ ಈ ಬದಲಾವಣೆಗೆ ಇದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿ ಖಾತೆ ತೆರೆಯಲು ಸಹ ಪರದಾಡುತ್ತಿದ್ದ ಬಿಜೆಪಿಯು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯತೆಯನ್ನು ಮುಂದಿಟ್ಟುಕೊಂಡು, 18 ಸ್ಥಾನಗಳನ್ನು ಗೆದ್ದು ತೃಣಮೂಲ ಕಾಂಗ್ರೆಸ್‌ ಹಾಗೂ ಸಿಪಿಎಂಗೆ ಆಘಾತ ಕೊಟ್ಟಿತ್ತು. ಈ ಬೆಳವಣಿಗೆಯಿಂದ ಹೆಚ್ಚು ಕಳವಳಕ್ಕೆ ಒಳಗಾಗಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ದೀದಿ).

‘ತುಷ್ಟೀಕರಣದ ರಾಜಕಾರಣ’ ಮಾಡುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಮಮತಾ ಅವರಿಗೆ ರಾಜ್ಯದಲ್ಲಿ ಬಿಜೆಪಿಯ ಹೆಜ್ಜೆಗಳು ಗಟ್ಟಿಯಾಗುತ್ತಿರುವುದು ಆತಂಕ ಮೂಡಿಸಿದೆ. ಆ ಕಾರಣಕ್ಕೆ ಕಠಿಣ ನಿಲುವನ್ನು ಬದಲಿಸಿ ಮೃದು ಹಿಂದುತ್ವದತ್ತ ವಾಲುತ್ತಿದ್ದಾರೆ’ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಕಮ್ಯುನಿಸ್ಟ್‌ ಪಕ್ಷದ ಆಧಿಪತ್ಯವನ್ನು ಅಂತ್ಯಗೊಳಿಸಿ, 2011ರಲ್ಲಿ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಅವರು, 2012ರಲ್ಲಿ ಇಮಾಮ್‌ ಹಾಗೂ ಮುವಾಜಿನ್‌ಗಳಿಗೆ ಕ್ರಮವಾಗಿ ಮಾಸಿಕ ₹ 2,500 ಹಾಗೂ ₹ 1,500 ಭತ್ಯೆ ಘೋಷಿಸಿದ್ದರು. ‘ಇದು ಅಸಾಂವಿಧಾನಿಕ ಕ್ರಮ’ ಎಂದು ಕಲ್ಕತ್ತಾ ಹೈಕೋರ್ಟ್‌ 2013ರಲ್ಲಿ ಇದಕ್ಕೆ ತಡೆ ಒಡ್ಡಿತ್ತು. ಆದರೆ ಮಮತಾ ಅವರು ಇದಕ್ಕಾಗಿ ಪ್ರತ್ಯೇಕ ನಿಧಿಯನ್ನು ರಚಿಸಿ, ವಕ್ಫ್‌ ಮಂಡಳಿಯ ಮೂಲಕ ತಮ್ಮ ನಿರ್ಧಾರವನ್ನು ಜಾರಿ ಮಾಡಿದ್ದರು.

‌ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಭಾಷಣ ಮಾಡಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ  ಅವರು ಟಿಎಂಸಿಯನ್ನು ‘ಹಿಂದೂ ವಿರೋಧಿ ಪಕ್ಷ’ ಎಂದು ಜರೆದಿದ್ದರು.

‘ಮುಸ್ಲಿಂ ಮತಗಳು ತಮಗೆ ಬಂದೇ ಬರುತ್ತವೆ ಎಂಬ ವಿಶ್ವಾಸದಲ್ಲಿ ಟಿಎಂಸಿ ಇದೆ. ಈಗ ಮೃದು ಹಿಂದುತ್ವದ ನೀತಿಯನ್ನು ಅನುಸರಿಸುವ ಮೂಲಕ ಬಿಜೆಪಿಯ ಮತಗಳನ್ನು ಸೆಳೆಯುವ ಪ್ರಯತ್ನ ಆರಂಭಿಸಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ಆದರೆ ಈ ವಾದವನ್ನು ಟಿಎಂಸಿ ಒಪ್ಪುತ್ತಿಲ್ಲ. ‘ನಾವು ಬಿಜೆಪಿಯಂತಲ್ಲ. ಕೋಮುವಾದಿ ರಾಜಕಾರಣದಲ್ಲಿ ನಮಗೆ ವಿಶ್ವಾಸವಿಲ್ಲ. ಸಂಕಷ್ಟದಲ್ಲಿರುವ ಸಮುದಾಯದವರಿಗೆ ನೆರವಾಗುವುದು ನಮ್ಮ ಉದ್ದೇಶ. ಧಾರ್ಮಿಕ ಕಾರ್ಯತಂತ್ರ ಟಿಎಂಸಿಗೆ ಇಲ್ಲ’ ಎಂದು ಪಕ್ಷದ ಮುಖಂಡ, ಸಂಸದ ಸೌಗತಾ ರಾಯ್‌ ಹೇಳಿದ್ದಾರೆ.

‘ಹಿಂದೂ ವಿರೋಧಿ’ ಎಂದು ನಮ್ಮನ್ನು ಬಿಂಬಿಸಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ನಮಗೆ ಸಾಕಷ್ಟು ಹಾನಿಯಾಗಿದೆ. ಟಿಎಂಸಿಯ ಭದ್ರ ಕೋಟೆಗಳು ಎನಿಸಿಕೊಂಡ ಕ್ಷೇತ್ರಗಳಲ್ಲೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಲಿಷ್ಠ ಹೆಜ್ಜೆ ಇಟ್ಟಿದೆ. 2021ರ ವಿಧಾನಸಭಾ ಚುನಾವಣೆಗೂ ಮುನ್ನ ನಾವು ಈ ಬಿಂಬವನ್ನು ಬದಲಾಯಿಸಲೇಬೇಕು, ಕಳೆದುಕೊಂಡಿರುವ ಕ್ಷೇತ್ರಗಳನ್ನು ಮತ್ತೆ ವಶಪಡಿಸಿಕೊಳ್ಳಬೇಕು’ ಎಂದು ರಾಯ್‌ ಹೇಳುತ್ತಾರೆ.

-ಉದಯ ಯು.
**
ವನಗಮನ ಪಥ ಹಿಡಿದ ಕಮಲನಾಥ್
2019ರ ಲೋಕಸಭಾ ಚುನಾವಣೆ‌ ಯಲ್ಲಿ ಪರಾಭವಗೊಂಡ ಬಳಿಕ ಕಾಂಗ್ರೆಸ್, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನ ಸಭಾ ಚುನಾವಣೆಗಳಲ್ಲಿ ಹಿಂದುತ್ವದ ಕಾರ್ಡ್ ಪ್ರಯೋಗಿಸಿತು. ಕಮಲನಾಥ್‌ ಅವರು ಮಧ್ಯ ಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ‘ಮೃದು ಹಿಂದುತ್ವ’ ಕಾರ್ಯತಂತ್ರವನ್ನು ಅಳವಡಿಸಲು ನಿರ್ಧರಿಸಿ ದರು. ಹಿಂದುತ್ವವನ್ನೇ ಮುಖ್ಯ ನೆಲೆ ಯಾಗಿ ಇರಿಸಿಕೊಂಡು ಅಧಿಕಾರ ಹಿಡಿ ದಿದ್ದ ಬಿಜೆಪಿಯನ್ನು ಗದ್ದುಗೆಯಿಂದ ಕೆಳಗಿಳಿಸಲು ಮೃದು ಹಿಂದುತ್ವದ ಮೊರೆ ಹೋಗುವ ತಂತ್ರಗಾರಿಕೆ ರೂಪಿಸಲಾಯಿತು.

2018ರ ಸೆಪ್ಟೆಂಬರ್‌ನಲ್ಲಿ ಭೋಪಾಲ್‌ಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಶಿವಭಕ್ತ’ ಎಂದು ಬಿಂಬಿಸಲಾಯಿತು. ಸಿದ್ಧಾಂತ ಬದಲಾವಣೆಯ ಮೊದಲ ಕುರುಹು ಇಲ್ಲಿ ಸಿಕ್ಕಿತು. ಈ ಬಗ್ಗೆ ನಾನಾ ವಿಧದ ಚರ್ಚೆಗಳು ನಡೆದವು. ಬಿಜೆಪಿ ವ್ಯಂಗ್ಯವಾಡಿತು. ಆದರೆ ತನ್ನ ಕಾರ್ಯತಂತ್ರದ ಮೊದಲ ಯಶಸ್ಸಿನಿಂದ ಕಾಂಗ್ರೆಸ್ ಹಿಗ್ಗಿದ್ದು ನಿಜ.

ಇದೇ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಇರಿಸಿದ ಕಮಲನಾಥ್, ತಮ್ಮ ಎರಡು ಘೋಷಣೆಗಳಿಂದ ಹಿಂದೂಗಳ ಒಲವು ಗಳಿಸಲು ಯತ್ನಿಸಿದರು. 23 ಸಾವಿರ ಗ್ರಾಮ ಗಳಲ್ಲಿ ಗೋಶಾಲೆಗಳನ್ನು ತೆರೆಯುವ ಘೋಷಣೆ ಮಾಡಿದರು. ಶ್ರೀರಾಮನು ತನ್ನ 14 ವರ್ಷಗಳ ವನವಾಸದಲ್ಲಿ ಸಂಚರಿಸಿ ದ್ದಾನೆಂದು ನಂಬಲಾದ ಪೌರಾಣಿಕ ಮಾರ್ಗ ವನ್ನು ‘ರಾಮವನಗಮನ ಪಥ’ವಾಗಿ ನಿರ್ಮಿಸುವ ನಿರ್ಧಾರವನ್ನು ಕೈಗೊಳ್ಳ ಲಾಯಿತು. ಈ ಎರಡೂ ವಿಚಾರ ಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಥಾನ ಪಡೆ ದವು. ಕಳೆದ 15 ವರ್ಷಗಳಲ್ಲಿ ಬಿಜೆಪಿಯು ಈ ಎರಡೂ ವಿಚಾರಗಳನ್ನು ನಿರ್ಲಕ್ಷಿಸಿದೆ ಎಂದು ಬಿಂಬಿಸಲಾಯಿತು.

ಕಾಂಗ್ರೆಸ್‌ನ ಈ ತಂತ್ರಗಾರಿಕೆಯು ವಿಧಾನಸಭಾ ಚುನಾವಣೆಯಲ್ಲಿ ಫಲ ನೀಡಿತು. ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವಲ್ಲಿ ಕಮಲನಾಥ್ ಶಕ್ತರಾದರು. ಆ ಮಟ್ಟಿಗೆ ಮೃದು ಹಿಂದುತ್ವವು ಕೈಹಿಡಿಯಿತು ಎಂದು ವಿಶ್ಲೇಷಿಸಲಾಗಿದೆ. ಕಮಲನಾಥ್ ಅವರು ಮಂಡಿಸಿದ ಮೊದಲ ಬಜೆಟ್‌ನಲ್ಲೂ ಮೃದು ಹಿಂದುತ್ವದ ಕುರುಹು ಇಣುಕಿತ್ತು. ರಾಜ್ಯದ ದೇವಸ್ಥಾನಗಳ ಅರ್ಚಕರ ವೇತನವನ್ನು ಮೂರು ಪಟ್ಟು ಹೆಚ್ಚಿಸಲಾಗಿತ್ತು.


ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ರಾಹುಲ್ ಗಾಂಧಿ, ಜ್ಯೋತಿರಾದಿತ್ಯ ಸಿಂಧಿಯಾ ಜೊತೆ ಕಮಲನಾಥ್

ಪೂರ್ಣ ಹಿಂದುತ್ವದತ್ತ?: ನಂತರದ ದಿನಗಳಲ್ಲಿ ಕಮಲನಾಥ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರ ಹಿಡಿದ ಘಟನಾವಳಿಗಳಿ ನಡೆದವು. ಇದೀಗ 27 ಕ್ಷೇತ್ರಗಳ ಉಪಚುನಾವಣೆಗೆ ರಾಜ್ಯ ಸಜ್ಜಾಗಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಹೋಗುತ್ತಿರುವ ಹಾದಿಯನ್ನು ಗಮನಿಸಿದರೆ, ಅದು ಮೃದು ಹಿಂದುತ್ವದಿಂದ ‘ಸಂಪೂರ್ಣ ಹಿಂದುತ್ವ ಸಿದ್ಧಾಂತ’ದತ್ತ ಹೊರಳಿಕೊಂಡಂತೆ ತೋರುತ್ತಿದೆ.

ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲನಾಥ್ ಅವರು ಇತ್ತೀಚೆಗೆ ಸನ್ವೀರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿದ ಚುನಾವಣಾ ಸಮಾವೇಶ ಇದಕ್ಕೆ ಪುಷ್ಠಿ ನೀಡುವಂತಿತ್ತು. ಕೇಸರಿ ಧ್ವಜಗಳನ್ನು ಹಿಡಿದ ನೂರಾರು ಕಾರ್ಯಕರ್ತರು ಇಂದೋರ್‌ನಿಂದ ಮೆರವಣಿಗೆ ಮೂಲಕ ಇಲ್ಲಿಗೆ ಬಂದಿದ್ದರು. ಈ ವೇಳೆ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ‘ರಾಮ‌ಚರಿತ ಮನಸಾ’ ಕೃತಿಯ ಪ್ರತಿಯನ್ನು ನೀಡಿ ಅವರನ್ನು ಸ್ವಾಗತಿಸಲಾಯಿತು.

ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ನಡೆಸುವ ವೇಳೆ ಕಮಲನಾಥ್ ಅವರು ಭೋಪಾಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿ ಹಿಂದೂ ಭಕ್ತರ ಗಮನ ಸೆಳೆದರು. ಕಾಂಗ್ರೆಸ್ ಕಚೇರಿಯಲ್ಲಿ ‘ಸುಂದರಕಾಂಡ’ವನ್ನು ಪಠಿಸಲಾಯಿತು. ಕಮಲನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ದೇವಸ್ಥಾನಗಳಿಗೆ ಭೇಟಿ ನೀಡುವ ಯತ್ನವನ್ನು ಮುಂದುವರಿಸಿದ್ದಾರೆ.

ಅತ್ತ ರಾಜಸ್ಥಾನದ ಬಜೆಟ್‌ನಲ್ಲೂ ಈ ಛಾಯೆ ಕಂಡುಬಂದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗೋಶಾಲೆಗಳನ್ನು ತೆರೆಯುವ ನಿರ್ಧಾರ ಪ್ರಕಟಿಸಿತು. ಇದಕ್ಕಾಗಿ ₹132 ಕೋಟಿ ನಿಧಿಯನ್ನು  ಎತ್ತಿಡಲಾಯಿತು. ಕಾಂಗ್ರೆಸ್‌ನ ಈ ಸಿದ್ಧಾಂತ ಬದಲಾವಣೆ ತಂತ್ರಕ್ಕೆ ಬಿಜೆಪಿ ಏನು ಪ್ರತಿತಂತ್ರ ಹೆಣೆಯಲಿದೆ ಎಂಬುದು ಈಗಿನ ಕುತೂಹಲ.

-ಆಮೃತ ಕಿರಣ್‌ ಬಿ.ಎಂ.
***

‘ಕೈ’ ಹಿಡಿಯದ ಮೃದು ನೀತಿ
2019ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷವು ಮೃದು ಹಿಂದುತ್ವದ ಮೊರೆ ಹೋಗಿತ್ತು. ಮುಸ್ಲಿಮರ ಓಲೈಕೆಯ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಉದ್ದೇಶದಿಂದ ಮೃದು ಹಿಂದುತ್ವವನ್ನು ಅಪ್ಪಿಕೊಳ್ಳಲಾಯಿತು. ಬಿಜೆಪಿಯ ಉಗ್ರ ಹಿಂದುತ್ವದ ಪ್ರತಿಪಾದನೆಯನ್ನು ಎದುರಿಸಿ, ಚುನಾವಣೆಯಲ್ಲಿ ಗೆಲ್ಲುವುದು ಕಾಂಗ್ರೆಸ್‌ಗೆ ಸಾಧ್ಯವಿರಲಿಲ್ಲ. ಹೀಗಾಗಿ ಮೃದು ಹಿಂದುತ್ವ ಕಾಂಗ್ರೆಸ್‌ಗೆ ಅನಿವಾರ್ಯವಾಯಿತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

2019ರ ಲೋಕಸಭಾ ಚುನಾವಣೆಗೂ ಮುನ್ನವೇ ರಾಹುಲ್ ಗಾಂಧಿ ಅವರು ದೇವಾಲಯಗಳಿಗೆ ಭೇಟಿ ನೀಡಲು ಆರಂಭಿಸಿದ್ದರು. ಅವರು ಶಿವನ ಭಕ್ತ ಎಂದು ಬಿಂಬಿಸುವ ಪ್ರಯತ್ನ ನಡೆಯಿತು. ಅವರು ಕೈಲಾಸ–ಮಾನಸ ಸರೋವರ ಯಾತ್ರೆಯನ್ನೂ ಕೈಗೊಂಡರು. ಚುನಾವಣೆ ಸನ್ನಿಹಿತವಾದಂತೆ ರಾಹುಲ್ ಅವರು ದೇವಾಲಯಗಳಿಗೆ ನೀಡುವ ಭೇಟಿಗಳ ಸಂಖ್ಯೆಯೂ ಹೆಚ್ಚಾಯಿತು. ಉತ್ತರ ಪ್ರದೇಶದಲ್ಲಿ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಗಾಂಧಿ ಸಹ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು.


ಪುಷ್ಕರ್‌ನ ಜಗತ್ಪಿತ ಬ್ರಹ್ಮ ದೇವಾಲ ಯದಲ್ಲಿ 2018ರ ನವಂಬರ್‌ನಲ್ಲಿ ಪೂಜೆ ಸಲ್ಲಿಸಿ, ಹೊರಡಲು ಅನುವಾಗಿದ್ದ ರಾಹುಲ್ ಗಾಂಧಿ –ಪಿಟಿಐ ಚಿತ್ರ

ಚುನಾವಣೆಯ ಸಲುವಾಗಿಯೇ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ನಾಯಕರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಅಲ್ಲದೆ ‘ಅಸಲಿಗೆ ರಾಹುಲ್ ಗಾಂಧಿ ಹಿಂದುವೇ ಅಲ್ಲ’ ಎಂದೂ ಬಿಜೆಪಿಯ ಐಟಿ ಘಟಕವು ಬಿಂಬಿಸಿತು. ಮೃದು ಹಿಂದುತ್ವದ ಮೊರೆ ಹೋಗಿದ್ದ ಕಾಂಗ್ರೆಸ್‌ಗೆ‌, ರಾಹುಲ್ ಹಿಂದೂ ಎಂಬುದನ್ನು ಸಾಬೀತುಮಾಡುವ ಅನಿವಾರ್ಯ ಎದುರಾಯಿತು.

ಅವರು ರಾಜಸ್ಥಾನದ ಪುಷ್ಕರ್‌ ಸರೋವರಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದ ಸಂದರ್ಭದಲ್ಲಿ ಅವರದ್ದು ‘ದತ್ತಾತ್ರೇಯ’ ಗೋತ್ರ ಎಂದು ಘೋಷಿಸಲಾಯಿತು. ಜಾತಿಯಲ್ಲಿ ಅವರು ‘ಕಾಶ್ಮೀರಿ ಬ್ರಾಹ್ಮಣ’ ಎಂದೂ ಹೇಳಲಾಯಿತು. ಅಲ್ಲಿ ಪೂಜೆ ನೆರವೇರಿಸಿಕೊಟ್ಟಿದ್ದ ಪೋತಿಗಳ ಕಡತದಲ್ಲಿ ಮೋತಿಲಾಲ್ ನೆಹರೂ, ಜವಾಹರ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪುಷ್ಕರ್ ಸರೋವರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ದಾಖಲಾಗಿತ್ತು. ಕಾಂಗ್ರೆಸ್‌ ಇದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿತು. ಸ್ವತಃ ದಿಗ್ವಿಜಯ್ ಸಿಂಗ್ ಇದನ್ನು ಟ್ವೀಟ್ ಮಾಡಿದ್ದರು. ‘ಬಿಜೆಪಿಗೆ ಇದಕ್ಕಿಂತ ದೊಡ್ಡ ಪುರಾವೆ ಬೇಕೆ?’ ಎಂದೂ ಅವರು ಪ್ರಶ್ನಿಸಿದ್ದರು. ಆದರೆ, ‘ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇದರಿಂದ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ’ ಎಂದೇ ವಿಶ್ಲೇಷಿಸಲಾಗಿದೆ. ಕಾಂಗ್ರೆಸ್‌ನ ಮೃದು ಹಿಂದುತ್ವ ಧೋರಣೆಯು 2019ರ ಲೋಕಸಭಾ ಚುನಾವಣೆಯಲ್ಲೂ ಫಲ ನೀಡಲಿಲ್ಲ ಎಂಬುದನ್ನು ಫಲಿತಾಂಶವೇ ಹೇಳುತ್ತದೆ.
ಆಧಾರ: ಪಿಟಿಐ, ರಾಹುಲ್‌ ಗಾಂಧಿ–ದಿಗ್ವಿಜಯ್ ಸಿಂಗ್–ಯೋಗೇಂದ್ರ ಯಾದವ್ ಟ್ವೀಟ್‌ಗಳು

–ಜಯಸಿಂಹ ಆರ್.

**
‘ಕೆಂಪುಕೋಟೆ’ಯಲ್ಲಿ ಕೇಸರಿ ಸುಳಿಗಾಳಿ
ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್‌ ಜತೆಗಿನ ಸಂಘರ್ಷದ ಜತೆಗೆ, ಶಬರಿಮಲೆ ವಿವಾದ ಬಳಸಿಕೊಂಡು ಕೇರಳದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ತಡೆಯಲು ಎಡಪಕ್ಷಗಳು ಹೊಸ ರಾಜಕೀಯ ತಂತ್ರಗಾರಿಕೆಗೆ ಮೊರೆ ಹೋಗಬೇಕಾಗಿದೆ.

ಶಬರಿಮಲೆ ವಿವಾದದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಒಗ್ಗೂಡಿ ಬೀದಿಗಿಳಿದವು. ಜನರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಈ ಸೂಕ್ಷ್ಮ ವಿವಾದವನ್ನು ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ಹೇಗೆ ನಿರ್ವಹಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ವಿವಾದವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರ ನಿರ್ವಹಿಸಿದ ರೀತಿ ಎಡ ಪಕ್ಷಗಳ ಬದಲಾದ ರಾಜಕೀಯ ತಂತ್ರಗಾರಿಕೆಯ ಸಣ್ಣ ಸುಳಿವು ನೀಡಿತ್ತು. ಈ ವಿವಾದವನ್ನು ನಿಭಾಯಿಸಲು ಪಿಣರಾಯಿ ಸರ್ಕಾರ ಒಂದು ರೀತಿಯಲ್ಲಿ ಮೃದು ಹಿಂದುತ್ವ ಧೋರಣೆ ಅನುಸರಿಸಿತು ಎಂಬ ಆರೋಪ ಕೇಳಿಬಂತು.

ಅಯ್ಯಪ್ಪ ಭಕ್ತರ ನಂಬಿಕೆ, ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗದಂತೆ ಮತ್ತು ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆಯಾಗದಂತೆ ಪ್ರಕರಣ ನಿರ್ವಹಿಸಬೇಕಿತ್ತು. ಮಹಿಳೆಯರ ಹಕ್ಕುಗಳ ರಕ್ಷಣೆಯ ಪ್ರಶ್ನೆಯೂ ಇದರಲ್ಲಿ ಅಡಗಿತ್ತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯ ಇತ್ತು.

ರಾಜ್ಯದಲ್ಲಿ ಬಿಜೆಪಿ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಅದರ ಬೆಳವಣಿಗೆ ತಡೆಯುವ ಜತೆಗೆ ಕಮ್ಯುನಿಸ್ಟ್‌ ಮತಬ್ಯಾಂಕ್‌ ಉಳಿಸಿಕೊಳ್ಳುವ ಸವಾಲುಗಳನ್ನು ಎಡಪಕ್ಷಗಳು ಎದುರಿಸುತ್ತಿವೆ. ಅದಕ್ಕಾಗಿ ಪಕ್ಷದ ತತ್ವ, ಸಿದ್ಧಾಂತಕ್ಕೆ ವಿರುದ್ಧವಾದ ಮೃದು ಧೋರಣೆಯ ರಾಜಕೀಯ ತಂತ್ರಗಳಿಗೆ ಮೊರೆ ಹೋಗುವ ಅನಿವಾರ್ಯವನ್ನು ವಿಜಯನ್‌ ಎದುರಿಸುತ್ತಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

‘ಜಾತ್ಯತೀತ ನಿಲುವು ಅನುಸರಿಸುತ್ತಿರುವ ಕಾಂಗ್ರೆಸ್‌ ಒಂದು ವೇಳೆ ಮೃದು ಹಿಂದುತ್ವ ನಿಲುವು ತೆಳೆದರೆ ಪಕ್ಷ ಶೂನ್ಯಕ್ಕೆ ಇಳಿಯಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್ ಕಳೆದ ವರ್ಷ‌ ಪಕ್ಷದ ನಾಯಕರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು. ಬಿಜೆಪಿ ಪ್ರತಿಪಾದಿಸುತ್ತಿರುವ ಹಿಂದುತ್ವ ನಿಜವಾದ ಹಿಂದುತ್ವವಲ್ಲ. ರಾಜಕೀಯ ಲಾಭದ ಹಿಂದುತ್ವ. ದಕ್ಷಿಣ ಭಾರತದಲ್ಲಿ ಬಿಜೆಪಿಯ ಹಿಂದುತ್ವವನ್ನು ಜನರು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಅವರ‌ ವಾದ.

-ಗವಿಸಿದ್ಧಪ್ಪ ಬ್ಯಾಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು