ಸೋಮವಾರ, ಏಪ್ರಿಲ್ 12, 2021
31 °C
ನಂಬಿ ಕೆಟ್ಟರೇ?

ಆಗ ನೆಹರು-ಮಾವೊ, ಈಗ ಷಿನ್‌ಪಿಂಗ್-ಮೋದಿ: ಎಷ್ಟೆಲ್ಲಾ ಸಾಮ್ಯ, ಏನೆಲ್ಲಾ ಭಿನ್ನ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ಚೀನಾವನ್ನು ನಂಬಿ ಸ್ನೇಹದ ಹಸ್ತ ಚಾಚಿದ್ದ ಇಬ್ಬರು ನಾಯಕರಿಗೂ ಅತ್ತಕಡೆಯಿಂದ ಒಂದೇ ರೀತಿಯ ಉತ್ತರ ಸಿಕ್ಕಿದೆ. 

1962ರ ಯುದ್ಧದಲ್ಲಿ ಭಾರತೀಯ ಸೈನಿಕರತ್ತ ಗುಂಡು ಹಾರಿಸುವ ಮೊದಲು ಚೀನಾದ ಸೈನಿಕರು 'ಹಿಂದಿ ಚೀನಿ ಭಾಯಿಭಾಯಿ' ಎಂದು ಕೂಗುತ್ತಿದ್ದರಂತೆ. ಚೀನಾ ಹೀಗೆ ನಂಬಿಸಿ ಬೆನ್ನಿಗೆ ಚೂರಿ ಹಾಕಿದ್ದು ಹಲವು ಸಲ.

ನಂಬಿಸುವುದನ್ನು ಚೀನಾ ಒಂದು ಯುದ್ಧತಂತ್ರವಾಗಿಯೂ ಅನುಷ್ಠಾನಕ್ಕೆ ತಂದಿದೆ. ಚೀನಾದ ಪಿಪಲ್ ಲಿಬರೇಷನ್ ಆರ್ಮಿಯ ಕರ್ನಲ್ ಕಿಯಾ ಲಿಯಾಂಗ್ ಮತ್ತು ವಾಂಗ್‌ ಕ್ಸಿಯಾಗ್ಸುಯಿ ಬರೆದಿರುವ 'ಅನ್‌ರಿಸ್ಟ್ರಿಕ್ಟೆಡ್‌ ವಾರ್‌ಫೇರ್‌' (ನಿರ್ಬಂಧವಿಲ್ಲದ ಯುದ್ಧ) ಪುಸ್ತಕದಲ್ಲಿ ಈ ಮಾತಿಗೆ ಹಲವು ಉದಾಹರಣೆಗಳು ಸಿಗುತ್ತವೆ.

ಭಾರತೀಯ ಮಾಧ್ಯಮಗಳಲ್ಲಿ ಇಷ್ಟು ದಿನ 'ಎರಡು ಹೆಜ್ಜೆ ಮುಂದೊತ್ತಿ, ಒಂದು ಹೆಜ್ಜೆ ಹಿಂದೆ ಸರಿಯುವುದು ಚೀನಾದ ತಂತ್ರ' ಎಂಬ ಉಲ್ಲೇಖ ಹಲವು ಸಲ ಬಂದಿದೆ. ಆದರೆ ಚೀನಾ ಯುದ್ಧ ತಂತ್ರದ ಆಂತರ್ಯ ಅರಿತವರ ಪ್ರಕಾರ ಅದು ಹಾಗಲ್ಲ. 

ಅವರು ಮೂರು ಹೆಜ್ಜೆ ಮುಂದಕ್ಕೆ ಬರುತ್ತಾರೆ. ತಾವು ಮಾಡಿದ್ದು ಸರಿ ಎಂದು ಹಟ ಹಿಡಿದು ವಾದಿಸುತ್ತಾರೆ. ಇತಿಹಾಸದ ದಾಖಲೆ ಎಂದು ಪುರಾಣಗಳನ್ನು ಬಿಚ್ಚಿಡುತ್ತಾರೆ. ಅವರನ್ನು ಹಿಮ್ಮೆಟ್ಟಿಸಲು ಎದುರಿನ ದೇಶ ಮಾಡುವ ಯತ್ನಗಳಿಗೆ ತಾವೇ ಮೊದಲು ಬಲಿಯಾದಂತೆ ನಾಟಕವಾಡಿ ತಮ್ಮ ಮೇಲೆ ಅನ್ಯಾಯವಾಗುತ್ತಿದೆ ಎಂದು ಹುಯಿಲೆಬ್ಬಿಸುತ್ತೆ. ಎದುರಾಳಿಯನ್ನು ಮಾನಸಿಕವಾಗಿ ಹಣ್ಣು ಮಾಡಿ, ಸಾಮರಿಕ ಶಕ್ತಿಯೇ ಇಲ್ಲ ಎನ್ನುವಂತೆ ಬಿಂಬಿಸಿ, ಅದರ ಸಹಾಯಕ್ಕೆ ಬರಬಹುದಾದ ಇತರ ದೇಶಗಳನ್ನು ತನ್ನತ್ತ ಒಲಿಸಿಕೊಂಡು ಯುದ್ಧ ಸಾರುತ್ತದೆ. ಯುದ್ಧ ಸಾರದಿದ್ದರೆ ಬಲಿಪಶು ದೇಶಕ್ಕೆ ಮಹದುಪಕಾರ ಮಾಡುವಂತೆ ಒಂದು ಹೆಜ್ಜೆ ಹಿಂದೆ ಸರಿದು, ಮುಂದೊತ್ತಿದ್ದ ಎರಡು ಹೆಜ್ಜೆಯನ್ನು ತಮ್ಮದಾಗಿಸಿಕೊಳ್ಳುತ್ತೆ.

'ಸಲಾಮಿ ಸ್ಲೈಸ್' ಹೆಸರಿನ ತಂತ್ರವನ್ನು ಹೋಲುವ ಈ ಜಾಣತನವನ್ನು 'ಅನ್‌ರಿಸ್ಟ್ರಿಕ್ಟೆಡ್‌ ವಾರ್‌ಫೇರ್‌' ಪುಸ್ತಕ ವಿಸ್ತಾರವಾಗಿ ವಿವರಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ 1962ರ ಯುದ್ಧದ ಮೊದಲು ನಡೆದ ಬೆಳವಣಿಗೆಗಳು ಮತ್ತು ಇದೀಗ 2020ರಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಸಿದ್ಧಾಂತಕ್ಕೆ ಅನುಗುಣವಾಗಿಯೇ ಇದೆ. ಈ ಪುಸ್ತಕ ಪ್ರಕಟವಾಗಿರುವುದು 1999ರ ಅವಧಿಯಲ್ಲಿ.

ಮಿಲಿಟರಿ ಅಧಿಕಾರಿಗಳು ಬರೆದಿರುವ ಈ ಪುಸ್ತಕ ಪ್ರತಿಪಾದಿಸುವ ಆಶಯಗಳ ಹಿನ್ನೆಲೆಯಲ್ಲಿ ಭಾರತೀಯ ದೃಷ್ಟಿಕೋನದಿಂದ ಚೀನಾವನ್ನು ನೋಡಿದರೆ ಹಲವು ಹೊಳಹುಗಳು ಸಿಗುತ್ತವೆ. ಮಾತ್ರವಲ್ಲ ಚೀನಾದ ಹಲವು ತಂತ್ರಗಳ ಹಿನ್ನೆಲೆಯೂ ಅರ್ಥವಾಗುತ್ತದೆ.

ಚೀನಾದ ಮಹತ್ವಾಕಾಂಕ್ಷೆ ಮತ್ತು ಭಾರತ ಅದನ್ನು ಎದುರುಗೊಳ್ಳಲೆಂದು ಇಟ್ಟ ಹೆಜ್ಜೆಗಳು ಇತಿಹಾಸದ ಆವೃತ್ತದಲ್ಲಿ ಮೇಲೆ-ಕೆಳಗೆ ಆಗುತ್ತಲೇ ಇವೆ. 1962ರ ಯುದ್ಧ ಮತ್ತು 2020ರ ಸಂಘರ್ಷದ ನಡುವಣ ಅವಧಿಯಲ್ಲಿ ಆಗಿರುವ ಬೆಳವಣಿಗೆಗಳು ಮತ್ತು ಪರಿಣಾಮಗಳ ಇಣುಕುನೋಟ ಇಲ್ಲಿದೆ...

ಇದನ್ನೂ ಓದಿ: 


ಜವಾಹರ್‌ಲಾಲ್ ನೆಹರು

ರಕ್ಷಣಾ ಒಪ್ಪಂದಗಳು

1962ರ ಕಾಲಘಟ್ಟದಲ್ಲಿ ಭಾರತ ಆಲಿಪ್ತ ನೀತಿ (ನಾನ್ ಅಲೈನ್‌ಮೆಂಟ್) ಅಪ್ಪಿಕೊಂಡಿತ್ತು. ಅಮೆರಿಕ ಮತ್ತು ರಷ್ಯಾಗಳ ಹೊಯ್ದಾಟದಲ್ಲಿ ಸಿಲುಕದಂತೆ ತನ್ನಪಾಡಿಗೆ ತಾನಿರುವುದಾಗಿ ಘೋ‍ಷಿಸಿಕೊಂಡಿತ್ತು. ಆದರೆ ಚೀನಾ ದಾಳಿ ಮಾಡಿದಾಗ ಭಾರತದ ಸಹಾಯಕ್ಕೆ ಬಂದಿದ್ದು ಅಮೆರಿಕ.

2020ರಲ್ಲಿ ಭಾರತಕ್ಕೆ ವಿಶ್ವದ ಬಹುತೇಕ ದೇಶಗಳ ಜೊತೆಗೆ ಸೌಹಾರ್ದ ಸಂಬಂಧವಿದ್ದರೂ ಯಾರ ಜೊತೆಗೂ ಭಾರತ ಪ್ರಬಲ ರಕ್ಷಣಾ ಒಪ್ಪಂದ ಮಾಡಿಕೊಂಡಿಲ್ಲ. ಒಂದು ರೀತಿಯಲ್ಲಿ ಆಲಿಪ್ತ ನೀತಿಯ ಮುಂದುವರಿಕೆಯಂತೆಯೇ ಇದೆ ನಮ್ಮ ವಿದೇಶಾಂಗ ವ್ಯವಹಾರ. ಚೀನಾ-ಭಾರತದ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ರಷ್ಯಾ ಸ್ಪಷ್ಪಪಡಿಸಿದ್ದರೆ, ಮಧ್ಯ ಪ್ರವೇಶಿಸುವ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸಿದೆ. ಚೀನಾ ಸುತ್ತಲಿನ ರಾಷ್ಟ್ರಗಳಾದ ಜಪಾನ್, ವಿಯೆಟ್ನಾಂ, ಮಂಗೋಲಿಯಾ ಮತ್ತು ತೈವಾನ್‌ಗಳ ಜೊತೆಗೆ ಭಾರತದ ಸಂಬಂಧ ಸಾಕಷ್ಟು ಸುಧಾರಿಸಿದೆ. ಆದರೆ ಭಾರತದ ಸುತ್ತಲಿನ ದೇಶಗಳಾದ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನಗಳೊಂದಿಗೆ ಸಂಬಂಧ ಹದಗೆಟ್ಟಿದೆ.

ಕೈಕುಲುಕಿದ ನಂತರ ಸಂಘರ್ಷ

1962ರಲ್ಲಿ ಚೀನಾದ ಅಧ್ಯಕ್ಷ ಮಾವೊ ಝೆಡಾಂಗ್ ಮತ್ತು ಭಾರತದ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ನಡುವೆ ಉತ್ತಮ ಬಾಂಧವ್ಯವಿತ್ತು. 1960ರಲ್ಲಿ ಚೀನಾದ ಪ್ರಧಾನಿ ಚೌ ಎನ್‌ಲಾಯ್ ಭಾರತಕ್ಕೆ ಸೌಹಾರ್ದ ಭೇಟಿ ನೀಡಿದ್ದರು. ಇದಾದ ಎರಡು ವರ್ಷಗಳ ನಂತರ 1962ರ ಯುದ್ಧ ನಡೆಯಿತು.

2020ರಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಉತ್ತಮ ಬಾಂಧವ್ಯವಿದೆ. ಎರಡೂ ನಾಯಕರು ವಿವಿಧ ವೇದಿಕೆಗಳಲ್ಲಿ 18 ಬಾರಿ ಕೈಕುಲುಕಿದ್ದಾರೆ. ಚೀನಾದ ವುಹಾನ್ ಮತ್ತು ಭಾರತದ ಮಾಮಲ್ಲಪುರಂಗಳಲ್ಲಿ ಅನೌಪಚಾರಿಕ ಮಾತುಗಳನ್ನೂ ನಡೆಸಿದ್ದಾರೆ. ಚೀನಾ ಅಧ್ಯಕ್ಷರು ಮಾಮಲ್ಲಪುರಂ ಭೇಟಿ ನೀಡಿದ ವರ್ಷದೊಳಗೆ ಲಡಾಖ್‌ ಗಡಿಯಲ್ಲಿ ಭಾರತೀಯ ಯೋಧರ ರಕ್ತ ಚೆಲ್ಲಿದೆ.

ಇದನ್ನೂ ಓದಿ: 


ನರೇಂದ್ರ ಮೋದಿ

ಚೀನಾ-ಪಾಕಿಸ್ತಾನ: ಮೊದಲ ಶತ್ರು ಯಾರು?

1962ರಲ್ಲಿ ಜವಾಹರ್‌ಲಾಲ್ ನೆಹರು ಮತ್ತು ಅಂದಿನ ಕಾಂಗ್ರೆಸ್ ನಾಯಕರಿಗೆ ಪಾಕಿಸ್ತಾನವೇ ಮೊದಲ ಶತ್ರುವಾಗಿತ್ತು. ಚೀನಾ ದೇಶವು ಎಂದಿಗೂ ಭಾರತದ ಮೇಲೆ ಯುದ್ಧ ಸಾರುವುದಿಲ್ಲ ಮನಸಾರೆ ಅವರೆಲ್ಲರೂ ನಂಬಿದ್ದರು. ವಿಶ್ವ ವೇದಿಕೆಗಳಲ್ಲಿ ಚೀನಾ ಓಲೈಕೆಯೂ ಎಗ್ಗಿಲ್ಲದೆ ಸಾಗಿತ್ತು. ಟಿಬೆಟ್ ವಿವಾದದಲ್ಲಿಯೂ ಭಾರತ ಮಧ್ಯಪ್ರವೇಶಿಸಿ ತನ್ನ ಹಕ್ಕು ಸ್ಥಾಪಿಸಲಿಲ್ಲ, ದೊಡ್ಡಮಟ್ಟದಲ್ಲಿ ದನಿ ಎತ್ತಲಿಲ್ಲ.

2020ರಲ್ಲಿ ಭಾರತದ ರಾಜತಾಂತ್ರಿಕ ಪ್ರಭಾವ ವೃದ್ಧಿಸಿದೆ. ಪ್ರಧಾನಿ ಸ್ಥಾನಕ್ಕೆ ಬಂದ ದಿನದಿಂದಲೂ ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸಲು ಶ್ರಮಿಸುತ್ತಿರುವ ನರೇಂದ್ರ ಮೋದಿ ಆರಂಭದ ದಿನಗಳಲ್ಲಿ ಪಾಕಿಸ್ತಾನದತ್ತ ಸ್ನೇಹಹಸ್ತ ಚಾಚಿದರು. ಪಠಾಣ್‌ಕೋಟ್, ಪುಲ್ವಾಮಾ ವಿಚಾರದಲ್ಲಿ ಪಾಕಿಸ್ತಾನ ಬೆನ್ನಿಗೆ ಇರಿಯಿತು. ಇದಾದ ನಂತರ ಪಾಕಿಸ್ತಾನವನ್ನು ಏಕಾಂಗಿಯಾಗಿಸುವ ಯತ್ನದಲ್ಲಿ ಚೀನಾದತ್ತ ಮೋದಿ ಸ್ನೇಹಹಸ್ತ ಚಾಚಿದರು. ನಿಮ್ಮ ಸ್ನೇಹದ ಅಗತ್ಯವೇ ನಮಗಿಲ್ಲ ಎಂಬಂತೆ ವರ್ತಿಸಿದ ಚೀನಾ ದೊಕಲಮ್, ಲಡಾಖ್‌ ಗಡಿಗಳಲ್ಲಿ ಇರಿಯಿತು.

ನೆಹರು-ಮೋದಿ: ತಮ್ಮ ಕಾಲದ ಜನಪ್ರಿಯ ನಾಯಕರು

1962ರಲ್ಲಿ ನೆಹರು ಅವರ ಪರವಾಗಿ ಇಡೀ ದೇಶ ನಿಂತಿತ್ತು. ಕಾಂಗ್ರೆಸ್‌ನ ಪ್ರಭಾವ ಮೀರಿ ಬೆಳೆದಿದ್ದ ಅವರು ಪ್ರಶ್ನಾತೀತ ನಾಯಕರಾಗಿದ್ದರು. ಆದರೆ ವಾಸ್ತವ ಪರಿಸ್ಥಿತಿ ಅರಿಯದೇ ಗಡಿಗಳನ್ನು ಕಾಪಾಡಿಕೊಳ್ಳುವ 'ಫಾರ್ವರ್ಡ್‌ ಪಾಲಿಸಿ' ಘೋಷಿಸಿದರು. 'ಚೀನಿಯರನ್ನು ಹೊರದಬ್ಬಿ' ಎಂದು ಸೇನೆಗೆ ಆದೇಶ ನೀಡಿದರು. ಮುಂದಿನ ದಿನಗಳಲ್ಲಿ ಇದು 'ಹಿಮಾಲಯದಷ್ಟು ಎತ್ತರದ ತಪ್ಪು' (ಹಿಮಾಲಯನ್ ಬ್ಲಂಡರ್) ಎಂದು ಪರಿಗಣಿತವಾಯಿತು. ಭಾರತೀಯ ಸೇನೆಯನ್ನು ಅದರ ಅಗತ್ಯ ಪರಿಗಣಿಸದೆ, ಯಾವುದೇ ಸಿದ್ಧತೆಗೆ ಸಮಯ ಕೊಡದೆ ಯುದ್ಧಕ್ಕೆ ದೂಡಿದ ನೆಹರು ಅವರ ಬಗ್ಗೆ ಇಂದಿಗೂ ಹಲವರಲ್ಲಿ ಅಸಮಾಧಾನ ಮನೆಮಾಡಿದೆ.

2020ರಲ್ಲಿ ಸಹ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಗಿಂತಲೂ ಹಿರಿದಾಗಿ ಬೆಳೆದಿರುವ ನಾಯಕ. 'ಮೋದಿ ಪ್ರಧಾನಿಯಾಗಬೇಕೆಂಬ ಆಸೆಯಿಂದ' ಜನರು ಬಿಜೆಪಿ ಅಭ್ಯರ್ಥಿಗಳಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿದ್ದರು. ಮೋದಿ ನಿರ್ಧಾರವನ್ನು ಪ್ರಶ್ನಿಸುವ, ಜನಾಭಿಪ್ರಾಯ ರೂಪಿಸುವ ಸಾಮರ್ಥ್ಯವಿರುವ ನಾಯಕರು ಇನ್ನೂ ರೂಪುಗೊಂಡಿಲ್ಲ. 'ಭಾರತದ ನೆಲಕ್ಕೆ ಚೀನಾದ ಯೋಧರು ಬಂದಿರಲಿಲ್ಲ' ಎಂದು ಹೇಳಿಕೆ ನೀಡಿದ ಮೋದಿ, 'ನಮ್ಮ ಯೋಧರು ಕೊಲ್ಲುತ್ತಾ ಕೊಲ್ಲುತ್ತಾ ಹುತಾತ್ಮರಾದರು' ಎಂಬ ಹೇಳಿಕೆಯನ್ನೂ ನೀಡಿದರು. ಇವರ ಮೊದಲ ಹೇಳಿಕೆ ಚೀನಾದ ಪ್ರಚಾರಾಂದೋಲನಕ್ಕೆ (ಪ್ರಾಪಗಂಡ) ದೊಡ್ಡ ಅಸ್ತ್ರವಾಗಿ ಒದಗಿಬಂದು, ಭಾರತದ ವಾದದ ನೈತಿಕತೆಯನ್ನೇ ಅಲುಗಾಡಿಸಿತು. ಮತ್ತೊಂದು ಮಾತು, 'ಚೀನಾದೊಂದಿಗೆ ಯುದ್ಧ ಘೋಷಿಸಿ ಮೋದಿ' ಎಂದು ಜನರು ಒತ್ತಾಯಿಸಲು ಕಾರಣವಾಯಿತು.

ಇದನ್ನೂ ಓದಿ: 


ರಾಹುಲ್ ಗಾಂಧಿ

ವಿರೋಧ ಪಕ್ಷಗಳಿಗೆ ರಾಜಕೀಯವೇ ಮುಖ್ಯವಾಯಿತೇ?

1962ರಲ್ಲಿ ವಿರೋಧ ಪಕ್ಷಗಳು ದೇಶದ ಹಿತಾಸಕ್ತಿ ಅರಿತು ವರ್ತಿಸಲಿಲ್ಲ. ಸೇನೆಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲಿಲ್ಲ. ಜನಾಭಿಪ್ರಾಯದ ಒತ್ತಡಕ್ಕೆ ಮಣಿದ ನೆಹರು ತಮ್ಮ ಜನಪ್ರಿಯತೆ ಉಳಿಸಿಕೊಳ್ಳಲು 'ಫಾರ್ವರ್ಡ್‌ ಪಾಲಿಸಿ' ಘೋಷಿಸಿದರು. ಇದರ ಹಿಂದೆ ಅಪಕ್ವ ಸೇನಾ ನಾಯಕರೊಬ್ಬರ ಚಿತಾವಣೆಯೂ ಇತ್ತು. ಅದು 1000 ಯೋಧರ ಮಾರಣಹೋಮ, 46 ಸಾವಿರ ಚದರ ಕಿ.ಮೀ. ಪ್ರದೇಶವನ್ನು ಚೀನಾ ಆಕ್ರಮಿಸಿಕೊಳ್ಳಲು ಮತ್ತು ದೇಶಕ್ಕೆ ಭಾರೀ ಅವಮಾನವಾಗುವಂಥ ಯುದ್ಧದಲ್ಲಿ ಪರ್ಯಾವಸನಗೊಂಡಿತು.

2020ರಲ್ಲಿಯೂ ನಮ್ಮ ವಿರೋಧ ಪಕ್ಷಗಳು ದೇಶದ ಪರಿಸ್ಥಿತಿ ಅರಿತು ವರ್ತಿಸುತ್ತಿಲ್ಲ. ಯಾವಾಗ ಮಾತನಾಡಬೇಕು, ಯಾವಾಗ ಸುಮ್ಮನಿರಬೇಕು ಎಂಬುದನ್ನು ಇಂದಿಗೂ ಅರಿತುಕೊಳ್ಳದ ರಾಹುಲ್ ಗಾಂಧಿ 'ಪ್ರಧಾನಿ ಉತ್ತರಿಸಬೇಕು' ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ತೇಲಿ ಬಿಡುತ್ತಿದ್ದಾರೆ. ಮಹಾನ್ ಚಾಣಾಕ್ಷ ಶತ್ರುವನ್ನು ಮಣಿಸಲು ಮೌನವೂ ಒಂದು ರಾಜತಾಂತ್ರಿಕ ನಡೆ, ಯುದ್ಧವನ್ನು ಮುಂದೂಡುವುದೂ ಒಂದು ಸೇನಾ ತಂತ್ರ ಎಂಬುದು ವಿರೋಧ ಪಕ್ಷಕ್ಕೆ ಅರ್ಥವಾಗುತ್ತಿಲ್ಲ. ಅಂದಿನ ಪ್ರಧಾನಿ ನೆಹರು ಅವರಂತೆ ಇಂದಿನ ಪ್ರಧಾನಿ ಮೋದಿ ಸಹ ವಿರೋಧ ಪಕ್ಷಗಳ ಒತ್ತಡ, ಜನಾಭಿಪ್ರಾಯದ ಅಲೆಗೆ ಮಣಿದು ಪ್ರತಿಕ್ರಿಯೆ ನೀಡಿದ್ದಾರೆ. ಆ ಮೂಲಕ ಯುದ್ಧದಲ್ಲಿ ಮೌನವೂ ಪರಿಣಾಮಕಾರಿ ಎಂದು ಸಾರಿಹೇಳುವ ಅವಕಾಶ ಕಳೆದುಕೊಂಡಿದ್ದಾರೆ. ಆದರೆ ಚೀನಾ ನಾಯಕರು ಈ ನಿಟ್ಟಿನಲ್ಲಿ ಮೌನ ಕಾಯ್ದುಕೊಂಡು ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ.

ಜನಪ್ರಿಯತೆಯ ಹಂಗು

1962ರಲ್ಲಿ ನೆಹರು ಅವರಿಗೆ ತಾವು ಸದಾ ಜನಪ್ರಿಯರಾಗಿಯೇ ಉಳಿದುಕೊಳ್ಳಬೇಕು. ಮುಂದಿನ ತಲೆಮಾರು ತಮ್ಮನ್ನು ಹೀಗೆಯೇ ನೆನಪಿಸಿಕೊಳ್ಳಬೇಕೆಂಬ ಆಸೆಯಿತ್ತು. ಅವರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಮತ್ತು ಅವರ ಪ್ರತಿ ನಡೆಯ ಹಿಂದೆ ಇಂಥದ್ದೇ ಆಸೆಗಳ ಛಾಯೆ ಇಣುಕುತ್ತಿತ್ತು. ವರ್ತಮಾನಕ್ಕಿಂತಲೂ ಭವಿಷ್ಯವೇ ಅವರಿಗೆ ಮುಖ್ಯವಾಗಿತ್ತು. ಚೀನಾ ಸೇನೆ ಭಾರತದ ಗಡಿಯಲ್ಲಿ ಕಂದಕ ತೋಡಿ, ಕಾವಲು ಗೋಪುರಗಳನ್ನು ನಿರ್ಮಿಸುತ್ತಿದ್ದಾಗಲೂ ನೆಹರು ನೇತೃತ್ವದಲ್ಲಿ ಭಾರತದ ನಾಯಕರು ವಿಶ್ವಸಂಸ್ಥೆಯಲ್ಲಿ ಚೀನಾ ಪರವಾಗಿ ಭಾಷಣ ಮಾಡುತ್ತಿದ್ದರು. ಚೀನಾದ ಯುದ್ಧ ಸನ್ನದ್ಧತೆ ಗುರುತಿಸಿ, ಪ್ರತಿಯಾಗಿ ನಾವೂ ಸಿದ್ಧರಾಗಬೇಕು ಎಂದು ಆಗಿನ ಸರ್ಕಾರಕ್ಕೆ ಅನ್ನಿಸಲೇ ಇಲ್ಲ.

2020ಕ್ಕೆ ಮೊದಲು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ದಾಳಿಯ ಕಾರ್ಯಾಚರಣೆಗಳಲ್ಲಿ ಭಾರತದ ರಕ್ಷಣಾ ಪಡೆಗಳು ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಣಾಯಕ ಫಲಿತಾಂಶ ಪಡೆದುಕೊಂಡಿತು. ನರೇಂದ್ರ ಮೋದಿ ಸಹ 2019ರ ಚುನಾವಣೆಯಲ್ಲಿ ಇದೇ ವಿಚಾರಗಳನ್ನು ದೊಡ್ಡಗಂಟಲಿನಲ್ಲಿ ಪ್ರಸ್ತಾಪಿಸಿ ಜನಾಭಿಪ್ರಾಯವನ್ನು ತನ್ನತ್ತ ವಾಲಿಸಿಕೊಂಡರು. ಭಾರತದ ವಿರುದ್ಧ ಇತರ ದೇಶಗಳು ಇಡುವ ಪ್ರತಿ ಹೆಜ್ಜೆಗೂ ಭಾರತೀಯ ಸೇನೆ ಇಂಥದ್ದೇ ಕಠಿಣ ಕ್ರಮ ಜರುಗಿಸಬೇಕೆಂಬ ಜನಾಭಿಪ್ರಾಯ ರೂಪಿಸಿದ ನರೇಂದ್ರ ಮೋದಿಗೆ ಈಗ ಅದೇ ತಿರುಗುಬಾಣವಾಗಿದೆ. ಪಾಕಿಸ್ತಾನದಂತೆ ಚೀನಾ ವಿರುದ್ಧವೂ ಸೈನಿಕ ಕಾರ್ಯಾಚರಣೆ ನಡೆಸಬೇಕೆಂದು ಜನರು ಕೂಗಿ ಹೇಳುವುದನ್ನು ಕೇಳಿಸಿಕೊಳ್ಳಲೇಬೇಕಾದ, ಚೀನಾವನ್ನು ಶಿಕ್ಷಿಸದಿದ್ದರೆ ಜನಾಭಿಪ್ರಾಯ ತನ್ನ ವಿರುದ್ಧ ತಿರುಗುವ ಸಾಧ್ಯತೆಯ ಅಪಾಯ ಎದುರಿಸುವ ಪರಿಸ್ಥಿತಿ ತಂದುಕೊಂಡಿದ್ದಾರೆ.

ಎರಡು ಕದನಕಣ ಎದುರಿಸಲು ಸೇನೆಗೆ ಶಕ್ತಿ

1962ರಲ್ಲಿಯೂ ಭಾರತಕ್ಕೆ ಪಾಕಿಸ್ತಾನ ಮತ್ತು ಚೀನಾ ದೇಶಗಳನ್ನು ಏಕಕಾಲಕ್ಕೆ ಎದುರಿಸಬೇಕಾದೀತು ಎನ್ನುವ ಆತಂಕವಿತ್ತು. ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದ ನೆಹರು, ಸೌಹಾರ್ದ ಸಂಬಂಧದ ಮೂಲಕ ಚೀನಾವನ್ನು ಒಲಿಸಿಕೊಂಡು ಎರಡೂ ಕಡೆ ಉಪದ್ರವ ಇಲ್ಲದಂತೆ ಮಾಡಿಕೊಳ್ಳಲು ನೋಡಿದರು. ಆದರೆ ಅತ್ತ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಸಮಸ್ಯೆಯೂ ಬಗೆಹರಿಯಲಿಲ್ಲ. ಇತ್ತ ಚೀನಾ ಜೊತೆಗೂ ಸ್ನೇಹ ಉಳಿಯಲಿಲ್ಲ. ಆದರೆ 1962ರಲ್ಲಿ ಚೀನಾ ಭಾರತದ ಮೇಲೆ ದಂಡೆತ್ತಿ ಬಂದಾಗ ಪಾಕಿಸ್ತಾನ ಉಪದ್ರವ ಕೊಡಲಿಲ್ಲ. ಎರಡು ದೇಶಗಳ ಪೈಕಿ ಒಂದು ದೇಶವನ್ನಾದರೂ ಮಿತ್ರರಾಷ್ಟ್ರವಾಗಿಸಿಕೊಳ್ಳಬೇಕು ಎಂದು ನೆಹರು ಆಸೆ ಮಾತ್ರ ಕೊನೆಗೂ ಈಡೇರಲಿಲ್ಲ. ಏಕಕಾಲಕ್ಕೆ ಎರಡು ಕದನಕಣ ಎದುರಿಸುವ ಸಾಮರ್ಥ್ಯವನ್ನು ಸೇನೆಗೆ ತಂದುಕೊಡುವ ಪ್ರಯತ್ನಗಳನ್ನೂ ನೆಹರು ಗಂಭೀರವಾಗಿ ಮಾಡಲಿಲ್ಲ.

2020ರಲ್ಲಿಯೂ ಭಾರತಕ್ಕೆ ಎರಡು ಕಡೆಯ ಯುದ್ಧಭೀತಿ ದೂರವಾಗಿಲ್ಲ. ಪಾಕಿಸ್ತಾನದ ಜನಪ್ರತಿನಿಧಿಗಳು ಭಾರತದೊಂದಿಗೆ ಸ್ನೇಹಕ್ಕೆ ಸಿದ್ಧರಿದ್ದರೂ ಮಿಲಿಟರಿ, ಐಎಸ್‌ಐ ಮತ್ತು ಭಯೋತ್ಪಾದಕರ ವಿಷವರ್ತುಲ ಇದನ್ನು ಈಡೇರಲು ಬಿಡುತ್ತಿಲ್ಲ. ಚೀನಾದೊಂದಿಗೆ ಸ್ನೇಹಹಸ್ತ ಚಾಚಲು ನಡೆಸಿದ ಯತ್ನಕ್ಕೆ ಅಲ್ಲಿನ ಪ್ರಮುಖ ನಾಯಕರ ಒತ್ತಾಸೆಯೇ ಸಿಗಲಿಲ್ಲ. ಅವರಿಗೆ ಇಂಥ ಪ್ರಯತ್ನಗಳು ಮಿಲಿಟರಿ ಮತ್ತು ಸಾರ್ವಭೌಮ ದೇಶದೊಂದಿಗೆ ಸೌಹಾರ್ದ ಸಂಬಂಧ ಕಾಪಾಡಿಕೊಳ್ಳುವ ಯತ್ನದಂತೆಯೂ ಕಾಣಿಸಲಿಲ್ಲ. ಪರಸ್ಪರ ಸ್ನೇಹದಿಂದ ಬಾಳೋಣ ಎಂಬ ಭಾರತದ ಯತ್ನ ಚೀನಾಕ್ಕೆ ಅಸಹಾಯಕತೆಯ ಕೂಗಾಗಿಯೇ ಕಾಣಿಸಿತು. ನಿಮ್ಮ ಸ್ನೇಹದ ಅಗತ್ಯವೇ ನಮಗಿಲ್ಲ ಎಂದು ಚೀನಾ ಸಾರಾಸಗಟಾಗಿ ಭಾರತದ ಸ್ನೇಹವನ್ನು ನಿರಾಕರಿಸಿತು. ಆದರೆ ಸೇನೆ ಮಾತ್ರ ಮೌಂಟೇನ್ ಬ್ರಿಗೇಡ್ ಸಿದ್ಧಪಡಿಸಿಕೊಂಡು, ಲಡಾಖ್‌ನಲ್ಲಿ ಟ್ಯಾಂಕ್ ರೆಜಿಮೆಂಟ್‌ ಸ್ಥಾಪಿಸಿಕೊಂಡಿದೆ. ಏಕಕಾಲಕ್ಕೆ ಪಾಕ್ ಮತ್ತು ಚೀನಾ ದಂಡೆತ್ತಿ ಬಂದರೂ ತಕ್ಕ ಉತ್ತರ ನೀಡಲು ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ: ಲಡಾಖ್‌ನಲ್ಲಿ ಯುದ್ಧವಾದರೆ ಚೀನಾ ಸೋಲಬಹುದು ಎನ್ನುತ್ತವೆ ಅಧ್ಯಯನಗಳು


ಗಾಲ್ವನ್ ಕಣಿವೆಯತ್ತ ಭಾರತೀಯ ಸೇನೆ

ಸೇನೆಗೆ ಸ್ವಾತಂತ್ರ್ಯ

1962ರಲ್ಲಿ ಸ್ಥಳೀಯ ಕಮಾಂಡರ್‌ಗಳಿಗೆ ಕನಿಷ್ಠಮಟ್ಟದ ಸ್ವಾತಂತ್ರ್ಯ ನೀಡಲಾಗಿತ್ತು. ಯುದ್ಧದ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಏನು ಮಾಡಬೇಕು ಎಂದು ತಿಳಿದಿದ್ದರೂ ಸೇನಾ ನಾಯಕರು ಕೈಕಟ್ಟಿ ಹಾಕಿದ ಸ್ಥಿತಿಯಲ್ಲಿ ಅಸಹಾಯಕತೆ ಅನುಭವಿಸಿದರು. ಪ್ರತಿ ಹಂತದಲ್ಲಿಯೂ ರಾಜಕೀಯ ನಾಯಕತ್ವ ಸೇನಾ ನಾಯಕತ್ವದ ನಿರ್ಧಾರಗಳಲ್ಲಿ ಮಧ್ಯಪ್ರವೇಶಿಸುತ್ತಿತ್ತು. ಕಮಾಂಡರ್‌ಗಳಿಗೆ ಅವಮಾನವಾಗುವಂತೆ ವರ್ತಿಸುತ್ತಿತ್ತು. ಸೇನೆಯ ಸೋಲಿಗೆ ಇದು ಮುಖ್ಯ ಕಾರಣ ಎಂದು ನಂತರದ ದಿನಗಳಲ್ಲಿ ವಿಶ್ಲೇಷಿಸಲಾಯಿತು.

2020ರಲ್ಲಿ ಸೇನಾ ನಾಯಕರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡಲಾಗಿದೆ. ಗಾಲ್ವನ್ ಕಣಿವೆ ಸಂಘರ್ಷದ ಸಂದರ್ಭ ಭಾರತೀಯ ಯೋಧರು ತಮ್ಮ ಕಮಾಂಡಿಂಗ್ ಆಫೀಸರ್‌ರ ಹತ್ಯೆಗೆ ತಕ್ಷಣದ ಪ್ರತಿಕ್ರಿಯೆ ನೀಡಿ, ಎದುರಾಳಿಗಳನ್ನು ಹಣಿದಿದ್ದೇ ಉದಾಹರಣೆ. ಈ ಸಂದರ್ಭದಲ್ಲಿ ಚೀನಿ ಸೈನಿಕರನ್ನು ಬೆನ್ನಟ್ಟಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ದಾಟಿದ್ದ ಭಾರತೀಯ ಸೈನಿಕರನ್ನು ಚೀನಿ ಸೈನಿಕರು ಬಂಧಿಸಿದ್ದರು. ಮಾತುಕತೆಯ ಪಟ್ಟಿನಲ್ಲಿ ಎದುರಾಳಿಗಳನ್ನು ಸಿಲುಕಿಸಿದ ಸ್ಥಳೀಯ ಕಮಾಂಡರ್‌ಗಳು ಎಲ್ಲ ಬಂಧಿತ ಸೈನಿಕರನ್ನೂ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸದೆ ಕಮಾಂಡರ್‌ಗಳನ್ನು ಬೆಂಬಲಿಸಿದ ಸಂಗತಿ ಶ್ಲಾಘನೆಗೆ ಪಾತ್ರವಾಯಿತು.

ವಾಯುಪಡೆ, ನೌಕಾಪಡೆಯ ಬಳಕೆ

1962ರ ಯುದ್ಧದಲ್ಲಿ ನೆಹರು ವಾಯುಪಡೆಯನ್ನು ಬಳಸಲಿಲ್ಲ. ಒಂದು ವೇಳೆ ಬಳಸಿದರೆ ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು ಎಂಬ ಅಭಿಪ್ರಾಯ ಅವರದ್ದಾಗಿತ್ತು. ಕೊಲ್ಕತ್ತಾ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ಚೀನಾ ವಾಯುಪಡೆಯ ವಿಮಾನಗಳು ಬಾಂಬು ಸುರಿಸಬಹುದು ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಯುದ್ಧ ಮುಗಿದ ನಂತರವೂ ಗಡಿ ಪ್ರದೇಶದಲ್ಲಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಿದರೆ ಅದು ಚೀನಾಗೆ ನೆರವಾಗುತ್ತದೆ ಎಂಬಂತೆಯೇ ವರ್ತಿಸಿದರು. ನೌಕಾಪಡೆಯನ್ನು ಬಳಸಿ ಚೀನಾದ ಹಡಗುಗಳಿಗೆ ಹಿಂದೂ ಮಹಾಸಾಗರದಲ್ಲಿ ತಡೆಯೊಡ್ಡುವ ಯತ್ನವೂ ಒಂದು ಯುದ್ಧತಂತ್ರವಾಗಿ ಬಳಕೆಯಾಗಲಿಲ್ಲ.

2020ರಲ್ಲಿ ವಾಯುಪಡೆ ಸಾಕಷ್ಟು ಸುಧಾರಿಸಿದೆ. ವಿಶ್ವದ ಅತ್ಯಂತ ಎತ್ತರದ ವಾಯುನೆಲೆಯಾದ ದೌಲತ್ ಬೇಗ್ ಓಲ್ಡಿಯಲ್ಲಿ ಸೂಪರ್ ಹರ್ಕ್ಯುಲೆಸ್‌ನಂಥ ಅತ್ಯಾಧುನಿಕ ವಿಮಾನ ಇಳಿದಿದೆ. ಲಡಾಖ್ ಸೇರಿದಂತೆ ಎಲ್ಲ ಮುಂಚೂಣಿ ವಾಯುನೆಲೆಗಳಲ್ಲಿ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ. ಗಸ್ತು ಹಾರಾಟ ಹೆಚ್ಚಿಸುವುದರ ಜೊತೆಗೆ ಸೇನೆಗೆ ಟಿ-90 ಟ್ಯಾಂಕ್‌ಗಳನ್ನೂ ಸಾಗಿಸಿಕೊಟ್ಟಿದೆ. ಚೀನಾ ವಿರುದ್ಧದ ಹೋರಾಟದಲ್ಲಿ ವಾಯುಪಡೆಯನ್ನು ನಿರ್ಣಾಯಕವಾಗಿ ಬಳಸಲು ರಕ್ಷಣಾ ಪಡೆಗಳಿಗೆ ಮೋದಿ ಮುಕ್ತ ಸ್ವಾತಂತ್ರ್ಯ ನೀಡುವ ಸ್ಥಿತಿಯಲ್ಲಿದ್ದಾರೆ. ನೌಕಾಪಡೆಯ ಶಕ್ತಿಯೂ ಸಾಕಷ್ಟು ವೃದ್ಧಿಸಿದ್ದು, ನಿರ್ಣಾಯಕ ಸಂದರ್ಭದಲ್ಲಿ ಮಲೇಷಿಯಾ ಮತ್ತು ಇಂಡೋನೇಷಿಯಾ ನಡುವಣ ಮಲಕ್ಕಾ ಜಲಸಂಧಿಯಲ್ಲಿ ಕಚ್ಚಾ ತೈಲ ಹೊತ್ತ ಚೀನಾದ ಹಡಗುಗಳಿಗೆ ತಡೆಯೊಡ್ಡುವ ಸಾಮರ್ಥ್ಯ ಬೆಳೆಸಿಕೊಂಡಿದೆ.

ಇದನ್ನೂ ಓದಿ: 


ಲೇಹ್‌ನಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನ

ಚೀನಾಕ್ಕೂ ಗೊತ್ತು ಇದು 2020

ಅಂದು ಮತ್ತು ಇಂದಿನ ಪರಿಸ್ಥಿತಿಯನ್ನು ಒಟ್ಟಾರೆಯಾಗಿ ಗ್ರಹಿಸುವುದಾದರೆ, 1962ರ ಸ್ಥಿತಿಯಲ್ಲಿ ಭಾರತ ಖಂಡಿತ ಇಲ್ಲ ಎನ್ನುವುದು ನಿಜ. ನಮ್ಮ ಸಾಮರ್ಥ್ಯವೂ ಅಗಾಧವಾಗಿ ವೃದ್ಧಿಸಿದೆ. ಆದರೆ ಚೀನಾ ಸಹ 1962ರಲ್ಲಿ ಇದ್ದ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಸಹ ಅಷ್ಟೇ ನಿಜ. ಲಡಾಖ್‌ನ ಈಗಿನ ಬೆಳವಣಿಗೆಯಿಂದ ಎರಡೂ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧವೊಂದು ನಡೆಯದಿದ್ದರೂ, ಎರಡೂ ದೇಶಗಳ ವ್ಯಾಪಾರಿ ಹಿತಾಸಕ್ತಿಗಳು, ಮಿಲಿಟರಿ ಬಲಾಬಲಗಳ ಘರ್ಷಣೆ ಇನ್ನೂ ಕೆಲ ವರ್ಷಗಳ ಕಾಲ ಮುಂದುವರಿಯಲಿದೆ. ಎದುರಾಳಿಯ ಬಲವನ್ನು ಮಾತ್ರ ಗೌರವಿಸುವ, ಭಾರತವನ್ನು ಅಮೆರಿಕದ ಕೈಗೊಂಬೆ ಎಂಬಂತೆ ಕಾಣುವ ಚೀನಾ ನಾಯಕರ ಮನಃಸ್ಥಿತಿಯೂ ಸದ್ಯಕ್ಕೆ ಬದಲಾಗದು. 

ಪ್ರಬಲ ಆರ್ಥಿಕ ಮತ್ತು ಸೇನಾ ಬಲವಾಗಿ ಭಾರತ ಹೊರಹೊಮ್ಮುವವರೆಗೂ, ನಮ್ಮ ದೇಶದ ಸುತ್ತಲೂ ಇರುವ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಿಸುವವರೆಗೂ ಇದು ಮುಂದುವರಿಯುತ್ತದೆ. ನಿರ್ಣಾಯಕವಾಗಿ ಚೀನಾವನ್ನು ಮಣಿಸುವವರೆಗೆ ಅಥವಾ ಅಂಥ ಸಾಮರ್ಥ್ಯವಿದೆ ಎಂದು ಭಾರತ ತೋರಿಸಿಕೊಡುವವರಗೆ  'ಅನ್‌ರಿಸ್ಟ್ರಿಕ್ಟೆಡ್‌ ವಾರ್‌ಫೇರ್‌' (ನಿರ್ಬಂಧವಿಲ್ಲದ ಯುದ್ಧ) ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧತಂತ್ರಗಳನ್ನು ಭಾರತದತ್ತ ಚೀನಾ ಪ್ರಯೋಗಿಸುತ್ತಲೇ ಇರುತ್ತದೆ.

(ಆಧಾರ: wikipedia, theprint.in, indiandefencereview.com, indiatoday.in, theweek.in, outlookindia.com)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು