ಮಂಗಳವಾರ, ಮಾರ್ಚ್ 2, 2021
19 °C

ಆಳ–ಅಗಲ: ವಿಸ್ಟಾಡೋಮ್ ಎಂಬ ಸೊಬಗಿನ ಬೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರವಾಸಿ ತಾಣಗಳ ಸೊಬಗನ್ನು ಆನಂದಿಸುವ ಸಲುವಾಗಿಯೇ ವಿನ್ಯಾಸ ಮಾಡಲಾಗಿರುವ ವಿಸ್ಟಾಡೋಮ್ ರೈಲು ಬೋಗಿಗಳಲ್ಲಿ ಪ್ರಯಾಣಿಸಲು ಭಾರತೀಯರು ಇನ್ನುಮುಂದೆ ಯುರೋಪ್‌ಗೆ ಭೇಟಿ ನೀಡಬೇಕಿಲ್ಲ. ಭಾರತೀಯ ರೈಲ್ವೆಯು ಹೊಸ ವಿಸ್ಟಾಡೋಮ್‌ ಬೋಗಿಗಳನ್ನು ಪರಿಚಯಿಸಿದೆ. ರೈಲ್ವೆ ಪ್ರವಾಸೋದ್ಯಮಕ್ಕೆ ಹೊಸ ಮಜಲು ದೊರಕಿಸಿದೆ.

ಪಾರದರ್ಶಕ ಚಾವಣಿ, ವೀಕ್ಷಣಾ ಲಾಂಜ್, ವೈಫೈ ಸವಲತ್ತು, ಸಿಸಿಟಿವಿ ಕಣ್ಗಾವಲು, ಆಕರ್ಷಕ ಒಳಾಂಗಣ ವಿನ್ಯಾಸ, ಅಪ್ರತಿಮ ವೇಗ... ಭಾರತೀಯ ರೈಲ್ವೆ ಹೊಸದಾಗಿ ನಿರ್ಮಿಸಿರುವ ವಿಸ್ಟಾಡೋಮ್ ಬೋಗಿಗಳ ಈ ವೈಶಿಷ್ಟ್ಯಗಳು ಪ್ರವಾಸಿಗರ ಮನಸೆಳೆಯುತ್ತಿವೆ. ವಿಸ್ಟಾಡೋಮ್ ಬೋಗಿಗಳನ್ನು ಪ್ರವಾಸಿ ರೈಲುಗಳಿಗೆಂದೇ ವಿಶೇಷವಾಗಿ ರೂಪಿಸಲಾಗಿದೆ.

‌ರೈಲ್ವೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಹೊಸ ವಿನ್ಯಾಸದ ಪ್ರವಾಸಿ ಬೋಗಿಗಳನ್ನು ಪರಿಚಯಿಸಿದೆ. ಇದು ಮುಂದಿನ ದಿನಗಳಲ್ಲಿ ರೈಲು ಪ್ರಯಾಣವನ್ನು ಪ್ರವಾಸಿಗರಿಗೆ ಹೆಚ್ಚು ಸ್ಮರಣೀಯವಾಗಿಸುತ್ತದೆ.

ಸೌಲಭ್ಯ ಒಂದೆರಡಲ್ಲ
ಪ್ರತಿ ಬೋಗಿಯಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಇದೆ. 44 ಸೀಟುಗಳ ಪ್ರತೀ ಬೋಗಿಯು ವೈ-ಫೈ ಆಧರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಹೊಂದಿದೆ. ಸಂಗೀತಪ್ರಿಯರಿಗಾಗಿ ಡಿಜಿಟಲ್ ಪರದೆ ಮತ್ತು ಸ್ಪೀಕರ್‌ಗಳೊಂದಿಗೆ ಸಂಯೋಜಿಸಲಾದ ಮನರಂಜನಾ ವ್ಯವಸ್ಥೆ ಇದೆ. ಪ್ರಯಾಣಿಕರ ಗ್ಯಾಜೆಟ್‌ಗಳಿಗೆ ವೈಫೈ ಸೌಲಭ್ಯ ಸಿಗಲಿದೆ. ಪ್ರತಿಯೊಂದು ಸೀಟಿಗೆ ಪ್ರತ್ಯೇಕ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ನೀಡಲಾಗಿದೆ. ಆಸನಗಳು 180 ಡಿಗ್ರಿಗಳವರೆಗೆ ತಿರುಗಬಲ್ಲವು. ಹೀಗಾಗಿ ಜನರು ಎದಿರುಬದಿರಾಗಿ ಕುಳಿತು ಹರಟಬಹುದು.

ಹೊಸ ಬೋಗಿಗಳಲ್ಲಿ ಜಿಪಿಎಸ್ ಆಧಾರಿತ ಪ್ರಯಾಣಿಕ ಮಾಹಿತಿ ವ್ಯವಸ್ಥೆ, (ಪಿಎಪಿಐಎಸ್‌), ಎಲ್ಇಡಿ ಡೆಸ್ಟಿನೇಶನ್ ಬೋರ್ಡ್, ಸ್ಟೀಲ್‌ನಲ್ಲಿ ಮಾಡಲಾದ ಲಗೇಜ್ ಇಡುವ ರ‍್ಯಾಕ್‌ಗಳು, ಪ್ರಯಾಣಿಕರಿಗೆ ಉಪಾಹಾರ ಒದಗಿಸಲು ಮಿನಿ ಪ್ಯಾಂಟ್ರಿ ಇವೆ. ಸರ್ವಿಸ್ ಸ್ಥಳವು ಮೈಕ್ರೊವೇವ್ ಓವನ್, ಕಾಫಿ ತಯಾರಿಕಾ ಯಂತ್ರ, ರೆಫ್ರಿಜರೇಟರ್ ಮತ್ತು ವಾಶ್‌ಬೇಸಿನ್ ಅನ್ನು ಒಳಗೊಂಡಿರುತ್ತದೆ.


ವಿಸ್ಟಾಡೋಮ್ ರೈಲ್ವೆ ಬೋಗಿಯ ಒಳಾಂಗಣ ವಿನ್ಯಾಸ

ವಿಸ್ಟಾಡೋಮ್ ಹೊಸದಲ್ಲ
ವಿಸ್ಟಾಡೋಮ್ ಬೋಗಿ ಹೊಸ ಕಲ್ಪನೆ ಅಲ್ಲ. ಹಳೆಯ ಅವತರಣಿಕೆಗಳು ಹೊರಾಂಗಣ ಸೊಬಗು ಸವಿಯುವ ಪ್ರವಾಸಿ ಸ್ಥಳಗಳಲ್ಲಿ ಈಗಾಗಲೇ ಓಡುತ್ತಿವೆ. ದಾದರ್–ಮಡಗಾಂವ್, ಕಾಶ್ಮಿರ ಕಣಿವೆ, ಡಾರ್ಜಲಿಂಗ್ ಹಿಮಾಲಯನ್ ರೈಲ್ವೆ, ಕಲ್ಕಾ ಶಿಮ್ಲಾ ರೈಲ್ವೆ, ಕಂಗ್ರಾ ಕಣಿವೆ ರೈಲ್ವೆ, ಮಾಥೇರಾನ್ ಗಿರಿಧಾಮ ರೈಲ್ವೆ ಮತ್ತು ನೀಲಗಿರಿ ತಪ್ಪಲಿನ ರೈಲ್ವೆಯಲ್ಲಿ ವಿಸ್ಟಾಡೋಮ್ ಚಾಲನೆಯಲ್ಲಿವೆ. ಅವುಗಳನ್ನು ಈಗ ಅತ್ಯಾಧುನಿಕ ತಂತ್ರಜ್ಞಾನದ ಜೊತೆ ಬೆಸೆಯಲಾಗುತ್ತಿದೆ.

ಪಾರದರ್ಶಕ ಚಾವಣಿ ಹೊಂದಿರುವ ಹಳೆಯ ಅವತರಣಿಕೆಯ ಇಂತಹ ಬೋಗಿಗಳು ಪ್ರಸ್ತುತ ಮುಂಬೈ-ಗೋವಾ, ಆಂಧ್ರಪ್ರದೇಶದ ವಿಶಾಖಪಟ್ಟಣಂ–ಅರಕು ಕಣಿವೆಯಲ್ಲೂ ಇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸುವ ಪ್ರಸ್ತಾವ ಇದೆಯಾದರೂ, ಅಲ್ಲಿ ಭದ್ರತಾ ಸಮಸ್ಯೆಗಳಿವೆ.

ಬನಿಹಾಲ್–ಬಾರಾಮುಲ್ಲಾ ನಡುವಿನ 135 ಕಿಲೋಮೀಟರ್ ಮಾರ್ಗದಲ್ಲಿ ಹಳೆಯ ವಿಸ್ಟಾಡೋಮ್ ಓಡುತ್ತಿದೆ. ಕಾಶ್ಮೀರದ ನಿಸರ್ಗ ರಮಣೀಯ ಪರಿಸರದಲ್ಲಿ ತರಹೇವಾರಿ ಹೂಗಳು, ಹಣ್ಣಿನ ಮರಗಳ ಚೆಲುವನ್ನು ಕಾಣುತ್ತಾ, ಸಾಸಿವೆ ಹೊಲಗಳ ಮೂಲಕ ಹಾದುಹೋಗುವುದೇ ಒಂದು ಚೆಂದ’ ಎನ್ನುತ್ತಾರೆ ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ.


ವಿಸ್ಟಾಡೋಮ್ ರೈಲ್ವೆ ಬೋಗಿಯ ಒಳಾಂಗಣ ವಿನ್ಯಾಸ –ಪಿಟಿಐ ಚಿತ್ರಗಳು

ಸುರಕ್ಷತೆ
ಅತಿಸುರಕ್ಷಿತ ಎನಿಸಿರುವ ಲಿಂಕ್ ಹೋಫ್‌ಮನ್ ಬುಷ್‌ (ಎಲ್‌ಎಚ್‌ಬಿ) ಪ್ಲಾಟ್‌ಫಾರ್ಮ್‌ನಡಿ ಬೋಗಿ ನಿರ್ಮಾಣವಾಗಿವೆ. ಆರಾಮದಾಯಕ ಪ್ರಯಾಣಕ್ಕಾಗಿ ಬೋಗಿಗಳಿಗೆ ಏರ್ ಸ್ಪ್ರಿಂಗ್ ಸಸ್ಪೆನ್ಷನ್ ಅಳವಡಿಸಲಾಗಿದೆ. ಅಂಗವಿಕಲರ ಗಾಲಿ ಕುರ್ಚಿಗಳು ಒಳ‌ಪ್ರವೇಶಿಸಲು ಅನುಕೂಲವಾಗುವಂತೆ ವಿಶಾಲವಾದ ಸ್ಲೈಡಿಂಗ್ ಬಾಗಿಲುಗಳನ್ನು ವಿನ್ಯಾಸ ಮಾಡಲಾಗಿದೆ.

ವಿಸ್ಟಾಡೋಮ್ ಬೋಗಿಗಳ ಗಾಜಿನ ಕಿಟಕಿಗಳನ್ನು ಲ್ಯಾಮಿನೇಟೆಡ್ ಗಾಜಿನ ಶೀಟ್‌ಗಳಿಂದ ಮಾಡಲಾಗಿದ್ದು, ಅವು ಬಿರುಕು ಬಿಡುವುದಿಲ್ಲ. ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ಮತ್ತು ಎಫ್‌ಆರ್‌ಪಿ ಪ್ಯಾನೆಲಿಂಗ್, ಬಯೋ ಟ್ಯಾಂಕ್‌ ಇರುವ ಎಫ್‌ಆರ್‌ಪಿ ಮಾಡ್ಯುಲರ್ ಶೌಚಾಲಯ ಮತ್ತು ಸ್ವಯಂಚಾಲಿತ ಅಗ್ನಿ ಅವಘಡ ಎಚ್ಚರಿಕೆ ವ್ಯವಸ್ಥೆಯು ಬೋಗಿಗಳಲ್ಲಿದೆ.

ವೆಚ್ಚ ಎಷ್ಟು?
ಐಷಾರಾಮಿ ವಿಸ್ಟಾಡೋಮ್ ರೈಲ್ವೆ ಬೋಗಿಯನ್ನು ನಿರ್ಮಿಸಲು ಸರಿಸುಮಾರು ₹4 ಕೋಟಿ ವೆಚ್ಚ ತಗುಲುತ್ತದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದರು.

ಮುಂದಿನ ದಿನಗಳಲ್ಲಿ ಕಲ್ಕಾ–ಶಿಮ್ಲಾ ನ್ಯಾರೊಗೇಜ್ ಮಾರ್ಗದಲ್ಲಿ ವಿಸ್ಟಾಡೋಮ್ ರೈಲನ್ನು ಓಡಿಸಲು ಸಿದ್ಧತೆ ನಡೆದಿದ್ದು, ಪ್ರತಿ ಪ್ರಯಾಣಿಕರಿಗೆ ₹500 ಪ್ರಯಾಣ ದರ ನಿಗದಿಪಡಿಸುವ ಸಾಧ್ಯತೆಯಿದೆ. ಇಲ್ಲಿನ ಬಹುತೇಕ ಪ್ರಯಾಣಿಕರು ವಿದೇಶಿಯರು. ಪಾರದರ್ಶಕ ಚಾವಣಿಯ ಮೂಲಕ ಹಿಮಪಾತ ಹಾಗೂ ಮಳೆ ಸುರಿಯುವುದನ್ನು ಪ್ರಯಾಣಿಕರು ಆನಂದಿಸಬಹುದು.

ವೇಗದ ಹೆಗ್ಗಳಿಕೆ
ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಅಭಿವೃದ್ಧಿಪಡಿಸಿದ ಹೊಸ ವಿನ್ಯಾಸದ ವಿಸ್ಟಾಡೋಮ್, ಪ್ರವಾಸಿ ಬೋಗಿಗಳಿರುವ ರೈಲು ಕಳೆದವಾರ ಗಂಟೆಗೆ 180 ಕಿ.ಮೀ ವೇಗದ ಪರೀಕ್ಷಾರ್ಥ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.

ವಿಹಂಗಮ ನೋಟ ಸವಿಯಿರಿ
ವಿಸ್ಟಾಡೋಮ್ ಬೋಗಿಗಳು ವಿಶಾಲವಾದ ಒಳಾಂಗಣ ಹೊಂದಿವೆ. ಚಾವಣಿಯು ಪಾರದರ್ಶಕವಾಗಿದ್ದು,‍ ‍‍ಪ್ರವಾಸಿ ತಾಣಗಳನ್ನು ಜನರು ಬೋಗಿಯಲ್ಲಿ ಕುಳಿತೇ ಕಣ್ತುಂಬಿಕೊಳ್ಳಬಹುದು. ದೊಡ್ಡದಾದ ಗಾಜಿನ ಕಿಟಕಿಗಳನ್ನು ಅಳವಡಿಸಿರುವುದು ಮತ್ತೊಂದು ವಿಶೇಷ. ಬೋಗಿಯ ಒಂದು ತುದಿಯಲ್ಲಿ ದೊಡ್ಡ ಕಿಟಕಿ ಇದ್ದು, ಇದು ವೀಕ್ಷಣಾಲಯದ ರೀತಿ ಹೊರಗಿನ ಸೌಂದರ್ಯ ಕಣ್ತುಂಬಿಕೊಳ್ಳಲು ಸಹಕಾರಿಯಾಗಿದೆ.

ಎಷ್ಟು ಬೋಗಿ
ಇಂತಹ 10 ಬೋಗಿಗಳನ್ನು ತಯಾರಿಸಲಾಗುತ್ತಿದ್ದು, ಈ ಪೈಕಿ ಎರಡು ಈಗಾಗಲೇ ಸಿದ್ಧಗೊಂಡಿವೆ. ಒಂದನ್ನು ಕಳೆದ ಮಂಗಳವಾರ ಪರಿಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಉಳಿದವು ಮಾರ್ಚ್ ವೇಳೆಗೆ ಹಳಿ ಹತ್ತಲಿವೆ.

*
‘ಪ್ರಯಾಣವನ್ನು ಮೈಲುಗಳಿಂದಲ್ಲ, ಅವಿಸ್ಮರಣೀಯ ನೆನಪುಗಳಿಂದ ಅಳೆಯಬೇಕು’ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಹೇಳಿರುವ ಮಾತು ಸತ್ಯ. ಈ ಬೋಗಿಗಳಲ್ಲಿ ಪ್ರಯಾಣ ಮಧುರಾನುಭೂತಿ ನೀಡುತ್ತದೆ.
-ನರೇಂದ್ರ ಮೋದಿ, ಪ್ರಧಾನಿ

**
ಭಾರತೀಯ ರೈಲ್ವೆಗೆ ಆಧುನಿಕತೆಯ ವೇಗ
ಜಗತ್ತಿನ ಕೆಲವು ದೇಶಗಳು ಗಂಟೆಗೆ 500 ಕಿ.ಮೀಗೂ ವೇಗದಲ್ಲಿ ಧಾವಿಸುವ ರೈಲುಗಳ ಪರೀಕ್ಷೆಯಲ್ಲಿ ತೊಡಗಿದ್ದರೆ,  ನಾವಿನ್ನೂ ರೈಲುಗಳ ವೇಗವನ್ನು ಗಂಟೆಗೆ 150ಕಿ.ಮೀ.ಗೆ ಹೆಚ್ಚಿಸುವುದು ಹೇಗೆ ಎಂಬ ಚರ್ಚೆಯಲ್ಲಿದ್ದೇವೆ. ರೈಲ್ವೆ ಸೇವೆಗಳ ವಿಚಾರದಲ್ಲಿ ನಾವಿನ್ನೂ ಜಾಗತಿಕ ಗುಣಮಟ್ಟದ ಸಮೀಪದಲ್ಲೂ ಇಲ್ಲ ಎಂಬುದು ವಾಸ್ತವ. ರೈಲ್ವೆಯು ಅತ್ಯಂತ ಸುರಕ್ಷಿತ ಮತ್ತು ಜನಸಾಮಾನ್ಯರ ಕೈಗೆಟಕುವ ಸಂಚಾರ ಮಾಧ್ಯಮ. ವೇಗ ಹೆಚ್ಚಿಸುವುದು, ಸಮಯ ಪರಿಪಾಲನೆ, ಗುಣಮಟ್ಟದ ಸೇವೆಗಳ ಮೂಲಕ ಇದನ್ನು ಬಲಪಡಿಸಿದರೆ ದೇಶದ ಅಭಿವೃದ್ಧಿಗೂ ವೇಗ ಲಭಿಸುತ್ತದೆ ಎಂದು ತಜ್ಞರು ವಾದಿಸುತ್ತಾರೆ.

ಕೇಂದ್ರ ಸರ್ಕಾರವು ಕೆಲವು ವರ್ಷಗಳ ಹಿಂದೆ ಮುಂಬೈ– ಅಹಮದಾಬಾದ್‌ ನಡುವೆ (508 ಕಿ.ಮೀ) ಬುಲೆಟ್‌ ರೈಲು ಓಡಿಸುವ ಯೋಜನೆ ರೂಪಿಸಿತು. ಅಂದಾಜು ₹1.08 ಲಕ್ಷ ಕೋಟಿ ಮೌಲ್ಯದ ಈ ಯೋಜನೆಯನ್ನು 2023ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು.

ಈ ಯೋಜನೆಯನ್ನು ರೂಪಿಸಿದಾಗ ಕೇಂದ್ರ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದವು. ಈಗ ಮಹಾರಾಷ್ಟ್ರದಲ್ಲಿ ರಾಜಕೀಯ ಪಲ್ಲಟವಾಗಿದೆ. ಶಿವಸೇನಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ‘ಈ ಯೋಜನೆಯ ಬಗ್ಗೆ ನಾವು ಮರು ಚಿಂತನೆ ನಡೆಸುತ್ತೇವೆ’ ಎಂದು ಹೇಳಿತು. ಅದಾದ ಬಳಿಕ ಈ ಯೋಜನೆಗೆ ಭೂಮಿಯನ್ನು ನೀಡಲು ಠಾಣೆ ಮಹಾನಗರ ಪಾಲಿಕೆ ನಿರಾಕರಿಸಿತು. ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳ ಮಧ್ಯೆ ಈಗಲೂ ಜಗ್ಗಾಟ ನಡೆಯುತ್ತಿದೆ. ಇದರಿಂದಾಗಿ ಯೋಜನೆಯು ಕನಿಷ್ಠ ಐದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಪಾನ್‌ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗುತ್ತಿದ್ದರೂ, ಶೇ 72ರಷ್ಟು ಗುತ್ತಿಗೆಗಳನ್ನು ಭಾರತೀಯ ಕಂಪನಿಗಳೇ ನಿರ್ವಹಿಸಲಿವೆ ಎಂಬುದು ವಿಶೇಷವಾಗಿದೆ. ಇದರ ಮಧ್ಯದಲ್ಲೇ ದೆಹಲಿ– ವಾರಣಾಸಿ ಮಧ್ಯೆ (805 ಕಿ.ಮೀ.) ಹೈಸ್ಪೀಡ್‌ ರೈಲ್ವೆ ಕಾರಿಡಾರ್‌ ನಿರ್ಮಿಸುವ ಚಿಂತನೆ ನಡೆಸಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸುವ ಕೆಲಸ ಆರಂಭವಾಗಿದೆ.


ದೇಶದ ಮೊದಲ ಚಾಲಕರಹಿತ ಮೆಟ್ರೊ ರೈಲು

ಚಾಲಕ ರಹಿತ ಮೆಟ್ರೊ
ದೆಹಲಿಯ ಜನಕಪುರಿ (ಪಶ್ಚಿಮ)– ಬೊಟಾನಿಕಲ್‌ ಗಾರ್ಡನ್ ನಿಲ್ದಾಣಗಳ ನಡುವೆ (38 ಕಿ.ಮೀ.) ಚಾಲಕರಹಿತ ರೈಲನ್ನು ಓಡಿಸುವ ಮೂಲಕ ದೆಹಲಿ ಮೆಟ್ರೊ ಸಂಸ್ಥೆ ಡಿ.28ರಂದು ಇತಿಹಾಸ ಬರೆಯಿತು. ದೇಶದಲ್ಲಿ ಚಾಲಕರಹಿತವಾಗಿ ಓಡಿದ ಮೊದಲ ರೈಲು ಇದಾಗಿದೆ. ನಗರ ಸಾರಿಗೆ ವ್ಯವಸ್ಥೆಯಲ್ಲಿ ಇದನ್ನು ದೊಡ್ಡ ಮೈಲುಗಲ್ಲು ಎಂದು ಪರಿಗಣಿಸಲಾಗುತ್ತಿದೆ.

ಎಲ್ಲವೂ ಯೋಜನೆಯಂತೆ ನಡೆದರೆ, ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲೂ ಚಾಲಕ ರಹಿತ ಮೆಟ್ರೊ ರೈಲುಗಳು ಸಂಚರಿಸಲಿವೆ. ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಹಳದಿ ಮಾರ್ಗದಲ್ಲಿ (ಆರ್.ವಿ. ರಸ್ತೆ–ಬೊಮ್ಮಸಂದ್ರ–ಎಲೆಕ್ಟ್ರಾನಿಕ್‌ ಸಿಟಿ) ಈ ವ್ಯವಸ್ಥೆ ಮೊದಲು ಅನುಷ್ಠಾನಕ್ಕೆ ಬರಲಿದೆ. ಈ ರೈಲುಗಳಲ್ಲಿ ಸಂವಹನ ಆಧರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಅಳವಡಿಸಲಾಗಿರುತ್ತದೆ.

‘19 ಕಿ.ಮೀ. ಉದ್ದದ ಈ ಮಾರ್ಗ 2021ರ ನವೆಂಬರ್‌ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಕೋವಿಡ್ ಬಿಕ್ಕಟ್ಟಿನ ಕಾರಣ ಕಾಮಗಾರಿ ವಿಳಂಬವಾಗಿದ್ದು, 2022ರ ಮೇ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೊ ರೈಲುಗಳು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಈ ಮಾರ್ಗದ ಹೆಬ್ಬಗೋಡಿಯಲ್ಲಿ ಡಿಪೊ ನಿರ್ಮಾಣವಾಗುತ್ತಿದ್ದು, ಆರ್.ವಿ. ರಸ್ತೆ, ಜಯದೇವ ಆಸ್ಪತ್ರೆ ಮತ್ತು ಸೆಂಟ್ರಲ್‌ ಸಿಲ್ಕ್ ಬೋರ್ಡ್‌ನಲ್ಲಿ ಮೂರು ಇಂಟರ್‌ಚೇಂಜ್‌ ನಿಲ್ದಾಣಗಳು ತಲೆ ಎತ್ತಲಿವೆ.

ಇದಲ್ಲದೆ, ಸಂಪೂರ್ಣ ಹೊಸ ಮಾರ್ಗಗಳಾದ ಐಐಎಂಬಿ (ಕಾಳೇನ ಅಗ್ರಹಾರ) ಮತ್ತು ಹೊರವರ್ತುಲ ರಸ್ತೆ–ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗಗಳನ್ನು ಪ್ರಾರಂಭದಿಂದಲೇ ಚಾಲಕರಹಿತ ವ್ಯವಸ್ಥೆಯ ಮಾರ್ಗಗಳಾಗಿ ಮಾಡಲಾಗುತ್ತಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು