ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳಕ್ಕೆ ಅತ್ಯುತ್ತಮ ಆರೋಗ್ಯ, ಉತ್ತರ ಪ್ರದೇಶಕ್ಕೆ ಅನಾರೋಗ್ಯ!

ಆರೋಗ್ಯ ಸೂಚ್ಯಂಕ: ಕುಸಿದ ಕರ್ನಾಟಕ
Last Updated 28 ಡಿಸೆಂಬರ್ 2021, 2:55 IST
ಅಕ್ಷರ ಗಾತ್ರ

ನೀತಿ ಆಯೋಗದ 2019–20ನೇ ಸಾಲಿನ ‘ಆರೋಗ್ಯ ಸೂಚ್ಯಂಕ ವರದಿ’ಯಲ್ಲಿ ರಾಜ್ಯಗಳ ನಡುವೆ ಸಾಕಷ್ಟು ಏರಿಳಿತ ಕಂಡುಬಂದಿದೆ. ದೊಡ್ಡ ರಾಜ್ಯಗಳ ಸಾಲಿನಲ್ಲಿ ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಮೊದಲ ಮೂರು ಸ್ಥಾನದಲ್ಲಿವೆ. ಪಟ್ಟಿಯಲ್ಲಿ ಕೊನೆಯ ರ‍್ಯಾಂಕ್ ಪಡೆದಿದ್ದರೂ, ಉತ್ತರ ಪ್ರದೇಶವು 2018–19ನೇ ಸಾಲಿಗೆ ಹೋಲಿಸಿದರೆ ಗಮನಾರ್ಹ ಪ್ರಗತಿ (5.52 ಶೇಕಡವಾರು ಅಂಶಗಳಷ್ಟು ಏರಿಕೆ) ದಾಖಲಿಸಿದೆ.

ದಕ್ಷಿಣ ಭಾರತದ ರಾಜ್ಯಗಳು ಆರೋಗ್ಯ ಕ್ಷೇತ್ರದ ವಿವಿಧ ಸೂಚಿಗಳಲ್ಲಿ ಪ್ರಗತಿಯತ್ತ ಮುಖ ಮಾಡಿದ್ದರೆ,ಕರ್ನಾಟಕ ಹಿಂದೆ ಬಿದ್ದಿದೆ.2018–19ನೇ ಸಾಲಿಗೆ ಹೋಲಿಸಿದರೆ, 2019–20ನೇ ಸಾಲಿನಲ್ಲಿ ರಾಜ್ಯವು ಒಂದು ಶ್ರೇಯಾಂಕ ಕುಸಿತ ದಾಖಲಿಸಿದೆ. ರ‍್ಯಾಂಕಿಂಗ್ 8ರಿಂದ 9ಕ್ಕೆ ಇಳಿಕೆಯಾಗಿದೆ. ಅಷ್ಟೇ ಅಲ್ಲದೆ, ಒಟ್ಟಾರೆ ರಾಜ್ಯಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ವಿಚಾರದಲ್ಲಿ ಕರ್ನಾಟಕ ಕೊನೆಯ ಸ್ಥಾನದಲ್ಲಿದೆ. ರಾಜ್ಯದ ಪ್ರಗತಿ ಪ್ರಮಾಣವು ಮೈನಸ್ 1.37 ಶೇಕಡವಾರು ಅಂಶಗಳಷ್ಟು ಇಳಿಕೆ ದಾಖಲಿಸಿದೆ.

ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಹಿಂದೆ ಬೀಳಲು ಹಲವು ಅಂಶಗಳು ಕಾರಣವಾಗಿವೆ. ನವಜಾತ ಶಿಶುಗಳ ಮರಣ ಪ್ರಮಾಣ, ಹೆರಿಗೆ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣ, ಲಿಂಗಾನುಪಾತ, ಆಸ್ಪತ್ರೆಯಲ್ಲಿ ಆಗುವ ಹೆರಿಗೆಗಳ ಪ್ರಮಾಣ ಹಾಗೂ ರಾಜ್ಯದ ಒಟ್ಟು ವೆಚ್ಚದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮಾಡಲಾಗುವ ವೆಚ್ಚದ ಪ್ರಮಾಣದಲ್ಲಿ ಕುಸಿತ ಕಂಡುಬಂದಿರುವುದೇ ಇದಕ್ಕೆ ಕಾರಣ ಎಂದು ಆರೋಗ್ಯ ಸೂಚ್ಯಂಕ ವರದಿಯ ದತ್ತಾಂಶಗಳು ಸ್ಪಷ್ಟಪಡಿಸಿವೆ.

ಹೃದ್ರೋಗ ಆರೈಕೆ ಘಟಕಗಳ ಕಡೆಗಣನೆ

ಒಂಬತ್ತು ರಾಜ್ಯಗಳ ಯಾವುದೇ ಜಿಲ್ಲಾಸ್ಪತ್ರೆಯಲ್ಲಿ ಸಕ್ರಿಯವಾಗಿರುವ ಹೃದ್ರೋಗ ಆರೈಕೆ ಘಟಕ (ಸಿಸಿಯು) ಇಲ್ಲವೇ ಇಲ್ಲ. ದೇಶದ ದೊಡ್ಡ ರಾಜ್ಯಗಳ ಪೈಕಿ ಶೇ 50ಕ್ಕಿಂತ ಹೆಚ್ಚು ರಾಜ್ಯಗಳ ಜಿಲ್ಲಾಸ್ಪತ್ರೆಗಳಲ್ಲಿ ಸಿಸಿಯು ಇಲ್ಲ; ಇದ್ದರೂ, ಅಂತಹ ಘಟಕಗಳು ಇರುವ ಜಿಲ್ಲಾಸ್ಪತ್ರೆಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇವೆ.

ಆಮ್ಲಜನಕ ಪೂರೈಕೆ, ವೆಂಟಿಲೇಟರ್‌, ಮಾನಿಟರ್, ಡೆಫಿಬ್ರಿಲಾಟರ್, ಪೋರ್ಟಬಲ್ ಇಸಿಜಿ ಯಂತ್ರ, ಪಲ್ಸ್ ಆಕ್ಸಿಮೀಟರ್‌, ಔಷಧ ತಜ್ಞರು ಮತ್ತು ಅಗತ್ಯ ಸಿಬ್ಬಂದಿ ಹೊಂದಿರುವ ಘಟಕಗಳನ್ನು ಮಾತ್ರವೇ ಸಕ್ರಿಯ ಸಿಸಿಯು ಎಂದು ಈ ವರದಿಯಲ್ಲಿ ವ್ಯಾಖ್ಯಾನಿಸಲಾಗಿದೆ.

ದೇಶದ ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವುಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಡುವವರ ಪ್ರಮಾಣವು ಶೇ 23ರಷ್ಟಿದೆ. 2030ರ ವೇಳೆಗೆ ಈ ಪ್ರಮಾಣವು ಶೇ 31ಕ್ಕೆ ಏರಿಕೆಯಾಗಲಿದೆ ಎಂದು ನೀತಿ ಆಯೋಗವು ‘ದೇಶದ ಆಸ್ಪತ್ರೆಗಳಲ್ಲಿ ತುರ್ತು ಮತ್ತು ಗಾಯಾಳು ಆರೈಕೆ ಮಟ್ಟ’ ಎಂಬ ವರದಿಯಲ್ಲಿ ಹೇಳಿದೆ. ಆದರೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಪೂರ್ಣ ಚಿಕಿತ್ಸೆ ನೀಡಲು ಸಾಧ್ಯವಿರುವ ಸಿಸಿಯು ಇರುವ ಜಿಲ್ಲಾಸ್ಪತ್ರೆಗಳ ಕೊರತೆ ತೀವ್ರವಾಗಿದೆ ಎಂಬುದನ್ನು ನೀತಿ ಆಯೋಗದ ಆರೋಗ್ಯ ಸೂಚ್ಯಂಕ ವರದಿಯ ದತ್ತಾಂಶಗಳು ಹೇಳುತ್ತವೆ.


* 2018–19ನೇ ಸಾಲಿನಲ್ಲಿ ಸಕ್ರಿಯ ಸಿಸಿಯುಗಳನ್ನು ಹೊಂದಿದ್ದ ಹಲವು ರಾಜ್ಯಗಳ ಜಿಲ್ಲಾಸ್ಪತ್ರೆಗಳ ಪ್ರಮಾಣವು, 2019–20ರಲ್ಲಿ ಕುಸಿದಿದೆ. ಸಕ್ರಿಯವಾಗಿದ್ದ ಸಿಸಿಯುಗಳು, ನಂತರದ ದಿನಗಳಲ್ಲಿ ನಿಷ್ಕ್ರಿಯವಾಗಿವೆ ಎಂಬುದನ್ನು ಇದು ಸೂಚಿಸುತ್ತದೆ. ಒಟ್ಟು ಆರು ರಾಜ್ಯಗಳ ಜಿಲ್ಲಾಸ್ಪತ್ರೆಗಳಲ್ಲಿ ಇಸಿಯುಗಳು ನಿಷ್ಕ್ರಿಯವಾಗಿವೆ

* ಒಂದು ಜಿಲ್ಲಾಸ್ಪತ್ರೆಯಲ್ಲೂ ಸಕ್ರಿಯ ಸಿಸಿಯು ಇಲ್ಲದೇ ಇದ್ದ ರಾಜ್ಯಗಳ ಸಂಖ್ಯೆ 2018–19ರಲ್ಲಿ ಒಂಬತ್ತು ಇತ್ತು. 2019–20ರಲ್ಲೂ ಇಂತಹ ರಾಜ್ಯಗಳ ಸಂಖ್ಯೆ ಒಂಬತ್ತೇ ಆಗಿದೆ. ಒಂದೂ ಸಕ್ರಿಯ ಸಿಸಿಯು ಇಲ್ಲದೇ ಇದ್ದ ಉತ್ತರಪ್ರದೇಶವು ಈ ವಿಚಾರದಲ್ಲಿ ಸ್ವಲ್ಪ ಪ್ರಗತಿ ಸಾಧಿಸಿದೆ. ಆದರೆ 2018–19ರಲ್ಲಿ ಶೇ 13ರಷ್ಟು ಜಿಲ್ಲಾಸ್ಪತ್ರೆಗಳಲ್ಲಿ ಸಕ್ರಿಯ ಸಿಸಿಯು ಹೊಂದಿದ್ದ ಪಂಜಾಬ್‌ನಲ್ಲಿ, 2019–20ರ ವೇಳೆಗೆ ಸಕ್ರಿಯ ಸಿಸಿಯು ಹೊಂದಿರುವ ಜಿಲ್ಲಾಸ್ಪತ್ರೆಗಳ ಪ್ರಮಾಣ ಶೂನ್ಯಕ್ಕೆ ಕುಸಿದಿದೆ

* ಸಕ್ರಿಯ ಸಿಸಿಯುಗಳನ್ನು ಹೊಂದಿರುವ ಜಿಲ್ಲಾಸ್ಪತ್ರೆಗಳ ಪ್ರಮಾಣದಲ್ಲಿ ಐದು ರಾಜ್ಯಗಳು ಯಾವುದೇ ರೀತಿಯ ಪ್ರಗತಿಯನ್ನು ಸಾಧಿಸಿಲ್ಲ

* 7 ರಾಜ್ಯಗಳು ಸಕ್ರಿಯ ಸಿಸಿಯು ಹೊಂದಿರುವ ಜಿಲ್ಲಾಸ್ಪತ್ರೆಗಳ ಪ್ರಮಾಣವನ್ನು ಹೆಚ್ಚಿಸಿಕೊಂಡಿವೆ. ಇದರಲ್ಲಿ ಹಿಮಾಚಲ ಪ್ರದೇಶವು ಗಮನಾರ್ಹ ಪ್ರಗತಿ ಸಾಧಿಸಿದೆ. 2018–19ರಲ್ಲಿ ಹಿಮಾಚಲ ಪ್ರದೇಶದ ಶೇ 66.66ರಷ್ಟು ಜಿಲ್ಲಾಸ್ಪತ್ರೆಗಳು ಸಕ್ರಿಯ ಸಿಸಿಯು ಹೊಂದಿದ್ದವು. 2019–20ರಲ್ಲಿ ಸಿಸಿಯು ಹೊಂದಿರುವ ಜಿಲ್ಲಾಸ್ಪತ್ರೆಗಳ ಪ್ರಮಾಣವು ಶೇ 100ಕ್ಕೆ ಏರಿಕೆಯಾಗಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಸಕ್ರಿಯ ಸಿಸಿಯು ಹೊಂದಿರುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT