ಬುಧವಾರ, ಜುಲೈ 6, 2022
21 °C

ಅನುಭವ ಮಂಟಪ | ಮೀಸಲಾತಿ: ಒಬಿಸಿ ಹಿತ ಕಾಯಲು ಕಾಲಹರಣವೇಕೆ?

ಕೆ.ಎನ್.ಲಿಂಗಪ್ಪ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌ನ 2010ರ ಆದೇಶ ಕುರಿತಂತೆ ತನ್ನ ನಿಲುವು ಏನು ಎಂಬುದನ್ನು ಕರ್ನಾಟಕ ಸರ್ಕಾರ ಈವರೆಗೂ ಸ್ಪಷ್ಟಪಡಿಸಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸುವುದು ಕಷ್ಟಸಾಧ್ಯ. ಮೀಸಲಾತಿ ನೀಡದೆಯೇ ಚುನಾವಣೆ ನಡೆಸಿದರೆ, ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿ ಅವಕಾಶ ಕೈತಪ್ಪುತ್ತದೆ. ತ್ರಿಸ್ತರ ಪರಿಶೀಲನೆಗಾಗಿ ಪ್ರತ್ಯೇಕ ಆಯೋಗವೊಂದನ್ನು ಸರ್ಕಾರವು ರಚಿಸಲೇಬೇಕಾಗಿದೆ.

**

ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂಬ ಡಾ.ಎಲ್.ಎಂ ಸಿಂಗ್ವಿ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ತರಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಪ್ರಯತ್ನಿಸಿದರು. ಆದರೆ, ಗ್ರಾಮ ಸ್ವರಾಜ್ಯದ ಅವರ ಕನಸು ಮಾತ್ರ ಅವರ ಹಠಾತ್ ದುರ್ಮರಣದಿಂದಾಗಿ ಈಡೇರಲಿಲ್ಲ.

ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ, 1992ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಸಂಸತ್ತಿನಲ್ಲಿ ಅನುಮೋದನೆ ಪಡೆದವು. ತಿದ್ದುಪಡಿಯಲ್ಲಿ ಪ್ರಮುಖವಾಗಿ, ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡಬೇಕು ಎಂಬುದೂ ಒಂದಾಗಿತ್ತು. ಆವರೆಗೆ, ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಮತ್ತು ಸಾರ್ವಜನಿಕ ವಲಯದ ಹುದ್ದೆಗಳ ನೇಮಕಾತಿಗೆ ಮಾತ್ರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇದ್ದದ್ದು, ಈ ತಿದ್ದುಪಡಿಗಳಿಂದಾಗಿ ಅದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ವಿಸ್ತರಿಸಿ, ಚುನಾವಣಾ ಕಣದಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳು ಅವಕಾಶ ಪಡೆದದ್ದು ಚುನಾವಣಾ ರಾಜಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಗುರುತಾಗಿದೆ.


ಕೆ.ಎನ್‌. ಲಿಂಗಪ್ಪ

ಈ ದಿಸೆಯಲ್ಲಿ ಕರ್ನಾಟಕ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, 1993 ಮತ್ತು ನಿಯಮಗಳನ್ನು ಕರ್ನಾಟಕ ಸರ್ಕಾರವು ಜಾರಿಗೆ ತಂದು ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ಅವಕಾಶ ಕಲ್ಪಿಸಿತು.

1986ರಲ್ಲಿ ಸಮಾಜ ಕಲ್ಯಾಣ ಇಲಾಖೆ, ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ’ ಹಿಂದುಳಿದ ವರ್ಗಗಳನ್ನು ಗುರುತಿಸಿತು. ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಮತ್ತು ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ಸಿದ್ಧಪಡಿಸಿದ್ದ ಪಟ್ಟಿಯಲ್ಲಿರುವ ಜಾತಿಗಳನ್ನು ‘ಎ’ ಮತ್ತು ‘ಬಿ’ ಎಂಬ ಎರಡು ಗುಂಪುಗಳಾಗಿ ವಿಂಗಡಿಸಿತು; ಇದನ್ನು ಸ್ಥಳೀಯ ಪಂಚಾಯತ್ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯ ಉದ್ದೇಶಕ್ಕೆ ಪಂಚಾಯತ್ ರಾಜ್ ಇಲಾಖೆ ಅಳವಡಿಸಿಕೊಂಡಿತು. ಪರಿಶಿಷ್ಟ ವರ್ಗಗಳೂ ಸೇರಿದಂತೆ, ಒಟ್ಟಾರೆ ಮೀಸಲಾತಿ ಕೋಟಾವನ್ನು ಶೇ 56ಕ್ಕೆ ನಿಗದಿ ಮಾಡಿತ್ತು. ಸರ್ಕಾರ 1991ರ ದಶವಾರ್ಷಿಕ ಜನಗಣತಿಯ ಅಂಕಿ -ಅಂಶಗಳನ್ನು ಆಧರಿಸಿ ಕೋಟಾ ನಿಗದಿ ಮಾಡಬೇಕಿತ್ತು. ಈ ಕುರಿತು ವಿವೇಕಯುಕ್ತ ತೀರ್ಮಾನ ತೆಗೆದುಕೊಂಡಿದ್ದಲ್ಲಿ ಬಹುಶಃ ಈಗ ಎದುರಾಗಿರುವ ಸಮಸ್ಯೆ ಉದ್ಭವಿಸುತ್ತಿರಲಿಲ್ಲ!

ಮುಂದೆ, ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿ ವರದಿ ಆಧರಿಸಿ ಸಿದ್ಧಪಡಿಸಿದ ಪಟ್ಟಿಯನ್ನು ಶಿಕ್ಷಣ ಮತ್ತು ಉದ್ಯೋಗದ ಸಲುವಾಗಿ ಸರ್ಕಾರ ಅನುಷ್ಠಾನಗೊಳಿಸಿತು. ಪಂಚಾಯತ್ ರಾಜ್ ನಿಯಮಗಳ ಅನ್ವಯ, ಅದೇ ಮೀಸಲಾತಿ ಪಟ್ಟಿಯನ್ನು ಎರಡು ಗುಂಪುಗಳಾಗಿ ಬೇರ್ಪಡಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಉದ್ದೇಶಕ್ಕೂ ಇಲಾಖೆ ಅಳವಡಿಸಿಕೊಂಡಿತು. ಹೀಗೆ ಅಳವಡಿಸಿಕೊಳ್ಳುವ ಮುನ್ನ ಸರ್ಕಾರ ತುಸು ಎಚ್ಚರ ವಹಿಸಿ, ಹಿಂದೆ ಎಸಗಿರುವ ತಪ್ಪನ್ನು ತಿದ್ದಿಕೊಳ್ಳಬಹುದಾಗಿತ್ತು. ಆದರೆ, ಅದಾಗಲಿಲ್ಲ. 

ಈ ನಡುವೆ, ಕೆ. ಕೃಷ್ಣಮೂರ್ತಿ ಎಂಬುವರು ಮೀಸಲಾತಿ ಕೋಟಾ ಮಿತಿಯ ಕುರಿತು ಸಲ್ಲಿಸಿದ ರಿಟ್ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್‌ 2010ರಲ್ಲಿ, ಮೀಸಲಾತಿ ಕೋಟಾ ಶೇ 50ರ ಮಿತಿ ಮೀರಬಾರದೆಂದು ಹೇಳಿತು. ಹಿಂದುಳಿದವರಿಗೆ ಮೀಸಲಾತಿಗಾಗಿ ಅಳವಡಿಸಿಕೊಂಡಿರುವ ವಿಧಿ-ವಿಧಾನಗಳು ರಾಜಕೀಯ ಮಾನದಂಡ ಅನುಸರಿಸಿದವುಗಳಲ್ಲ ಎಂದೂ ಅವುಗಳನ್ನು ‘ತ್ರಿಸ್ತರ ಪರಿಶೀಲನೆ’ಗೆ ಒಳಪಡಿಸಲು ಪ್ರತ್ಯೇಕ ಆಯೋಗ ಕೂಡಾ ರಚಿಸಬೇಕೆಂದು ಆದೇಶಿಸಿತು.

ನ್ಯಾಯಾಲಯದ ಆದೇಶದಂತೆ ಮೀಸಲಾತಿ ಕೋಟಾವನ್ನು ಶೇ 50ರಷ್ಟಕ್ಕೆ ನಿಗದಿಗೊಳಿಸಲು ಸರ್ಕಾರವು ಕ್ರಮ ತೆಗೆದುಕೊಂಡಿತೇನೋ ಸರಿ. ಆದರೆ, ‘ತ್ರಿಸ್ತರ ಪರಿಶೀಲನೆ’ ಕಾರ್ಯ ಕೈಗೊಳ್ಳಲು ಮಾತ್ರ ಮುಂದಾಗಲಿಲ್ಲ. ಆದೇಶವಾಗಿ 12 ವರ್ಷಗಳೇ ಗತಿಸಿದ್ದರೂ ಅದು ಕಾರ್ಯಗತವಾಗಿಲ್ಲ. ಏತನ್ಮಧ್ಯೆ, ಮೀಸಲಾತಿ ಕೋಟಾ ಕಡಿತಗೊಳಿಸಿರುವ ಪ್ರಶ್ನೆ ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಂದೆ ಬಂತು. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಪಡೆದಿರುವ ಪ್ರಾತಿನಿಧ್ಯ, ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿದ್ದು, ರಾಜಕೀಯವಾಗಿ ಅವು ಆಧಿಪತ್ಯ ಪಡೆದಿವೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ‘ರಾಜಕೀಯವಾಗಿ ಮುಂದುವರಿದ’ ಜಾತಿಗಳನ್ನು ಪಟ್ಟಿಯಿಂದ ಹೊರಗಿಡಲು ಹೈಕೋರ್ಟ್‌ ಆದೇಶಿಸಿತು. ಸರ್ಕಾರ ಮಾತ್ರ ನ್ಯಾಯಾಲಯದ ಆದೇಶದಂತೆ ಯಾವುದೇ ಕ್ರಮ ಜರುಗಿಸಲು ಇಚ್ಛಿಸಲಿಲ್ಲ.

ಕಳೆದ ವರ್ಷ ಮಹಾರಾಷ್ಟ್ರ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ನಿಗದಿ ಮಾಡಿರುವ ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. 2010ರಲ್ಲಿ ಕೆ.ಕೃಷ್ಣಮೂರ್ತಿ ಪ್ರಕರಣದಲ್ಲಿ ನೀಡಿರುವ ಆದೇಶದಂತೆ ‘ತ್ರಿಸ್ತರ ಪರಿಶೀಲನೆ’ ಕಾರ್ಯ ಕೈಗೊಳ್ಳಿ ಅಥವಾ ಪರಿಶೀಲನಾ ಕಾರ್ಯ ಕೈಗೊಳ್ಳುವವರೆಗೆ, ಅಂತಹ ಕ್ಷೇತ್ರಗಳನ್ನು ‘ಸಾಮಾನ್ಯ’ ಕ್ಷೇತ್ರಗಳೆಂದೂ ಪರಿಗಣಿಸಿ ಚುನಾವಣೆಗಳನ್ನು ನಡೆಸಿ ಎಂದು ಸುಪ್ರೀಂ ಕೋರ್ಟ್‌ ಕಟ್ಟುನಿಟ್ಟಾಗಿ ಆದೇಶಿಸಿತು. 

ಸುಪ್ರೀಂ ಕೋರ್ಟ್‌ನ 2010ರ ಆದೇಶ ಕುರಿತಂತೆ ತನ್ನ ನಿಲುವು ಏನು ಎಂಬುದನ್ನು ಕರ್ನಾಟಕ ಸರ್ಕಾರ ಈವರೆಗೂ ಸ್ಪಷ್ಟಪಡಿಸಿಲ್ಲ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸುವುದು ಕಷ್ಟಸಾಧ್ಯ. ಮೀಸಲಾತಿ ನೀಡದೆಯೇ ಚುನಾವಣೆ ನಡೆಸಿದರೆ, ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿ ಅವಕಾಶ ಕೈತಪ್ಪುತ್ತದೆ. ತ್ರಿಸ್ತರ ಪರಿಶೀಲನೆಗಾಗಿ ಪ್ರತ್ಯೇಕ ಆಯೋಗವೊಂದನ್ನು ಸರ್ಕಾರವು ರಚಿಸಲೇಬೇಕಾಗಿದೆ. 

ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಇರುವ ಮಾನದಂಡ ಏನು ಎಂಬುದನ್ನು ಈಗ ಸ್ಪಷ್ಟಪಡಿಸಿಕೊಳ್ಳಬೇಕಿದೆ. ವಾಸ್ತವಿಕ ಅಂಕಿ-ಅಂಶಗಳು ಆಗತ್ಯ ಬೇಕೇ ಬೇಕು. ಆಯೋಗವು ಸಮೀಕ್ಷೆಯ ಮೂಲಕ ಅಂಕಿ-ಅಂಶಗಳನ್ನು ಸಂಗ್ರಹಿಸಲು ಸುದೀರ್ಘ ಸಮಯ ಬೇಕು. ಹಾಗಾಗಿ, ಅದು ಕಾರ್ಯಸಾಧುವಲ್ಲ. ಸರ್ಕಾರ 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ಅನ್ವಯಿಸುವಂತೆ ಸಮಗ್ರ ಸಮೀಕ್ಷೆ ನಡೆಸಿ ಅಂಕಿಅಂಶಗಳನ್ನು ಸಂಗ್ರಹಿಸಿದೆ. ಈ ಪರಿಶೀಲನಾ ಕಾರ್ಯಕ್ಕೆ ಅವುಗಳನ್ನು ಉಪಯೋಗಿಸಿಕೊಳ್ಳಬಹುದು. ಇವು ಪ್ರಥಮ ಮೂಲದ ಅಂಕಿ-ಅಂಶಗಳಾಗಿವೆ.

ಹಾಗೆಯೇ, ದ್ವಿತೀಯ ಮೂಲದ ಅಂಕಿ-ಅಂಶಗಳನ್ನು ಅಗತ್ಯ ಸಂಗ್ರಹಿಸಿ, ಸಮಂಜಸ ಮಾನದಂಡಗಳನ್ನು ಅನುಸರಿಸಿ, ಪರಾಮರ್ಶನ ಕಾರ್ಯ ಕೈಗೊಂಡು, ಸಕಾಲದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಾಧ್ಯವಿದೆ. ಜಿಲ್ಲೆ, ತಾಲೂಕು ಪಂಚಾಯಿತಿ, ಮಹಾನಗರಪಾಲಿಕೆ,  ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಂಸ್ಥೆಗಳಿಂದ ದ್ವಿತೀಯ ಮೂಲದ ಮಾಹಿತಿಗಳನ್ನು ಪಡೆಯಬಹುದು. ಆ ಸಂಸ್ಥೆಗಳಿಗೆ ಚುನಾಯಿತರಾಗಿದ್ದ ಸದಸ್ಯರ ಕನಿಷ್ಠ ಮೂರು ಅವಧಿಗಳ ಜಾತಿವಾರು ಪಟ್ಟಿಯನ್ನು ತರಿಸಿಕೊಳ್ಳಬೇಕು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ, ಈ ವಿಷಯ ಮುನ್ನೆಲೆಗೆ ಬಂದು ಹಲವು ತಿಂಗಳು ಕಳೆದು ಹೋಗಿವೆ. ಇಷ್ಟಾದರೂ ಸರ್ಕಾರ ಮಾತ್ರ ಕ್ರಮಕ್ಕೆ ಬದಲಾಗಿ ಮೌನಕ್ಕೆ ಶರಣಾಗಿರುವುದು ಹಿಂದುಳಿದ ವರ್ಗಗಳ ಹಿತ ಕಾಯಬೇಕಾದ ಹೊಣೆ ಇರುವ ಸರ್ಕಾರಕ್ಕೆ ಗೌರವ ತರುವ ವಿಷಯವಲ್ಲ. ವೃಥಾ ಕಾಲಹರಣ ಮಾಡಿ, ಕೊನೆಗೆ ಚುನಾವಣೆ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಗಿ ಮೀಸಲಾತಿಯನ್ನು ಬದಿಗಿಟ್ಟು ಚುನಾವಣೆ ನಡೆಸುವ ಸಂದರ್ಭ ಬಂದಲ್ಲಿ, ಆ ವರ್ಗಗಳಿಗೆ ರಾಜಕೀಯವಾಗಿ ತೀವ್ರ ಅನ್ಯಾಯವಾಗುವಾಗುವುದಂತೂ ನಿಶ್ಚಿತ.

ವಿಧಾನಮಂಡಲದ ಸಭೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳು ಕೂಡ ಧ್ವನಿ ಎತ್ತಿ, ಕೂಡಲೇ ಕಾರ್ಯೋನ್ಮುಖವಾಗುವಂತೆ ಸರ್ಕಾರವನ್ನು ಒತ್ತಾಯಿಸುವ ಅವಶ್ಯಕತೆಯೂ ಇದೆ.

ಲೇಖಕ: ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

____________

‘ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಆಧರಿಸಿ ಮೀಸಲಾತಿ ನಿರ್ಧರಿಸಿ’
ರಾಜ್ಯ ಸರ್ಕಾರ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆಧರಿಸಿ ಸರ್ಕಾರ ರಾಜಕೀಯ ಮೀಸಲಾತಿಯ ನಿರ್ಧಾರ ಕೈಗೊಳ್ಳುವುದೇ ಉತ್ತಮ. ಪ್ರತಿ ಮನೆಗೂ ತೆರಳಿ ನಡೆಸಿದ್ದ ಈ ಸಮೀಕ್ಷೆಯಲ್ಲಿ  ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆವರೆಗೆ ಯಾವ ಜಾತಿಗೆ ಎಷ್ಟು ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ ಎಂಬ ವಿವರಗಳನ್ನೂ ಕಲೆಹಾಕಲಾಗಿತ್ತು.

ಹಿಂದುಳಿದ ಜಾತಿಗಳಿಗೆ ಸಿಕ್ಕಿರುವ ರಾಜಕೀಯ ಪ‍್ರಾತಿನಿಧ್ಯದ ಬಗ್ಗೆ ವಿವರ ಸಂಗ್ರಹಿಸಲು ಸರ್ಕಾರ ಹೊಸ ಆಯೋಗವನ್ನು ರಚಿಸಿದರೂ ಇಷ್ಟು ನಿಖರವಾದ ಮಾಹಿತಿ ಕಲೆ ಹಾಕುವುದು ಕಷ್ಟ. ಹೊಸತಾಗಿ ಸಮೀಕ್ಷೆ ಆರಂಭಿಸಿದರೂ, ಪೂರ್ಣಗೊಳಿಸುವುದಕ್ಕೇ ಎರಡು ವರ್ಷಗಳಾದರೂ ಬೇಕು. ಅಷ್ಟರವರೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದು ಸರಿಯಲ್ಲ. ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸದೆಯೇ ಚುನಾವಣೆ ನಡೆಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ವಿರುದ್ಧವಾಗಿ ಕಾನೂನು ತಿದ್ದುಪಡಿ ತರಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಬಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಈ ಹಿಂದೆ ಇಂತಹದ್ದೇ ಮಾರ್ಗವನ್ನು ಅನುಸರಿಸಿತ್ತು.
-ಕೆ.ಎಂ.ರಾಮಚಂದ್ರಪ್ಪ, ಅಧ್ಯಕ್ಷ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ

__

‘ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸಬಾರದು’
ಹಿಂದುಳಿದ ವರ್ಗಗಳ ಮೀಸಲಾತಿ ಕಸಿಯುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿದೆ. ಹಿಂದುಳಿದ ವರ್ಗಗಳಿಗೆ ಸೇರಿರುವ ಎಲ್ಲ ಜಾತಿಗಳ ಮುಖಂಡರು ಸಭೆ ಸೇರಿ, ನಮ್ಮ ಹಕ್ಕನ್ನು ಯಾವುದೇ ಕಾರಣಕ್ಕೆ ಕಸಿದುಕೊಳ್ಳಲು ಅವಕಾಶ ನೀಡಬಾರದು ಎಂಬ ನಿರ್ಧಾರ ತಳೆದಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಹಿಂದುಳಿದ ವರ್ಗಗಳ ಮೀಸಲಾತಿ ತಪ್ಪಿಸುವ ಹುನ್ನಾರ ನಡೆದಿದೆ.

ಸರ್ಕಾರ ಈಗಾಗಲೇ ನಡೆಸಿರುವ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಕಿ ಅಂಶಗಳು ಜಾತಿ ಆಧಾರಿತ ಮೀಸಲಾತಿ ಕಲ್ಪಿಸುವುದಕ್ಕೆ ಅತ್ಯಂತ ಸೂಕ್ತವಾದ ದಾಖಲೆ. ಇವುಗಳ ಆಧಾರದಲ್ಲೇ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬುದು ರಾಜ್ಯದ ಎಲ್ಲ ಹಿಂದುಳಿದ ಜಾತಿಗಳ ಒತ್ತಾಯ. ಸರ್ಕಾರ ಈ ಬಗ್ಗೆ ಮೀನಮೇಷ ಮಾಡುವುದು ಸರಿಯಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೂ ಮೀಸಲಾತಿ ಕಲ್ಪಿಸುವ ಕುರಿತು ಸರ್ಕಾರ ದಿಟ್ಟ ನಿರ್ಧಾರ ತಳೆಯಬೇಕು. ಹಿಂದುಳಿದ ಜಾತಿಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸದೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದನ್ನು ಯಾವುದೇ ಕಾರಣಕ್ಕೆ ಒಪ್ಪಲಾಗದು.
-ಎಂ.ತಿಮ್ಮೇಗೌಡ, ಅಧ್ಯಕ್ಷ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ

__

‘ಮೀಸಲಾತಿ ನಿಗದಿಗೆ ಪ್ರತ್ಯೇಕ ಸಮೀಕ್ಷೆ ನಡೆಸಲಿ’
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆಸಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರಿಗೆ ಬಹಳಷ್ಟು ವಂಚನೆಗಳಾಗಿವೆ. ವೀರಶೈವ ಲಿಂಗಾಯತ ಸಮಾಜದ ಗಾಣಿಗ, ಸಾದರ, ರೆಡ್ಡಿ ಮೊದಲಾದ ಉಪಜಾತಿಯವರು ಸರ್ಕಾರದ ಸವಲತ್ತು ಸಿಗುತ್ತದೆ ಎಂಬ ಕಾರಣಕ್ಕೆ ಹಿಂದೂ ಗಾಣಿಗ, ಹಿಂದೂ ಸಾದರ, ಹಿಂದೂ ರೆಡ್ಡಿ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಸಹಜವಾಗಿಯೇ ಈ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರ ಜನಸಂಖ್ಯೆ ವಾಸ್ತವಕ್ಕಿಂತ ಕಡಿಮೆ ಇರುವಂತೆ ಬಿಂಬಿತವಾಗಿದೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಆಧರಿಸಿ ಮೀಸಲಾತಿ ನಿಗದಿಪಡಿಸುವುದನ್ನು ನಾನು ಸ್ಪಷ್ಟವಾಗಿ ವಿರೋಧಿಸುತ್ತೇನೆ. ಯಾರೂ ಅರ್ಜಿ ಹಾಕಿ ನಿರ್ದಿಷ್ಟ ಜಾತಿಯಲ್ಲಿ ಹುಟ್ಟುವುದಿಲ್ಲ. ಸರ್ಕಾರದ ಸವಲತ್ತು ಪಡೆಯುವ ಕಾರಣಕ್ಕೆ ಜಾತಿ ತ್ಯಜಿಸುವುದನ್ನು ಒಪ್ಪಲಾಗದು. ಯಾರಿಗೋ ಸಿಗುವ ಸವಲತ್ತನ್ನು ನಾವು ಕಸಿದುಕೊಳ್ಳಬಾರದು. ಅಗತ್ಯಬಿದ್ದರೆ ಸರ್ಕಾರ ಪ್ರತ್ಯೇಕ ಸಮೀಕ್ಷೆ ನಡೆಸಿ ಮೀಸಲಾತಿಯ ಪ್ರಮಾಣವನ್ನು ನಿರ್ಧರಿಸಬೇಕು ಎಂಬುದು ನನ್ನ ಅಭಿಪ್ರಾಯ.  
-ಬಿ.ಎಸ್‌.ಪರಮಶಿವಯ್ಯ, ಅಧ್ಯಕ್ಷ, ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು