ಭಾನುವಾರ, ಏಪ್ರಿಲ್ 5, 2020
19 °C

ಕೋವಿಡ್ 19 ಬಗ್ಗೆ ಸಮಗ್ರ ಮಾಹಿತಿ: ಏನಿದು ವೈರಸ್ ಮ್ಯುಟೇಶನ್, ಚಿಕಿತ್ಸೆಯೇನು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Coronavirus seeks cleanliness

ಚೀನಾದಲ್ಲಿ ಕಾಣಿಸಿಕೊಂಡು ಜಾಗತಿಕವಾಗಿ ಹರಡುತ್ತಿರುವ ಕೋವಿಡ್ 19 ಕಾಯಿಲೆ ಈ ಹಿಂದಿನ ಸಾರ್ಸ್, ಎಬೋಲಾ ವೈರಸ್‌ಗಳಂತೆಯೇ ಆತಂಕ ಮೂಡಿಸಿದೆ ಮತ್ತು ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ ಮಹತ್ವವನ್ನು ಸಾರುತ್ತಿದೆ. ಈ ರೀತಿಯ ವೈರಾಣುಗಳಿಂದ ಹರಡುವ ಕಾಯಿಲೆಗಳು ತಗುಲದಂತೆ ಮುನ್ನೆಚ್ಚರಿಕೆ ವಹಿಸುವ ಏಕೈಕ ಮಾರ್ಗವೆಂದರೆ ಶುಚಿತ್ವ ಕಾಪಾಡಿಕೊಳ್ಳುವುದು. ಭಾರತಲ್ಲಿ ಈಗಾಗಲೇ ಇಂದಿನವರೆಗೆ (09 ಮಾರ್ಚ್ 2020) 43 ಮಂದಿಯಲ್ಲಿ ಕೋವಿಡ್-19 ಇರುವುದು ದೃಢಪಟ್ಟಿದೆ. ಭಾರತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಸುಳ್ಳು ಸುದ್ದಿಗಳು ಮತ್ತು ವದಂತಿಗಳು ವೈರಸ್‌ಗಳಿಗಿಂತಲೂ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಜಾವಾಣಿ ಓದುಗರು ತಿಳಿದಿರಬೇಕಾದ ಅಂಶಗಳು ಇಲ್ಲಿವೆ.

ಕೊರೊನಾ ವೈರಸ್ - ಕೋವಿಡ್ 19 ಏನಿದು ಗೊಂದಲ?
* ಏಡ್ಸ್ ರೋಗ ಹರಡುವ ವೈರಸ್‌ನ ಹೆಸರು ಹೆಚ್‌ಐವಿ ಇರುವಂತೆಯೇ, 2019 ನಾವೆಲ್ ಕೊರೊನಾ ವೈರಸ್ ಎಂದು ಆರಂಭದಲ್ಲಿ ಗುರುತಿಸಲಾಗಿದ್ದ ವೈರಸ್‌ನಿಂದ ಹರಡುವ ರೋಗಕ್ಕೆ, ವೈರಾಣುಗಳಿಗೆ ಹೆಸರಿಡುವ 'ಇಂಟರ್‌ನ್ಯಾಶನಲ್ ಕಮಿಟಿ ಆನ್ ಟ್ಯಾಕ್ಸಾನಮಿ ಆಫ್ ವೈರಸಸ್ (ICTV)', ಇತ್ತೀಚೆಗೆ 'ಕೋವಿಡ್-19' ಅಂತ ಹೆಸರಿಟ್ಟಿದೆ. ಇದನ್ನು ಹರಡುತ್ತಿರುವ ವೈರಾಣುವಿನ ಅಧಿಕೃತ ಹೆಸರು ಸಾರ್ಸ್ ಕೊರೊನಾ ವೈರಸ್ 2 (SARS-CoV-2). ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್ 2 ಎನ್ನುವುದು ಅದರ ಪೂರ್ಣ ರೂಪ. 2003ರಲ್ಲಿ ಜಾಗತಿಕವಾಗಿ ಕಂಗೆಡಿಸಿದ್ದ ಸಾರ್ಸ್ ವೈರಸ್‌ಗೂ ಈ ವೈರಸ್‌ಗೂ ಜೀವವೈಜ್ಞಾನಿಕ ಸಂಬಂಧವಿರುವುದರಿಂದ ಮತ್ತು ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದರಿಂದ ಸಾರ್ಸ್ ಹೆಸರು. ಈ ರೀತಿ ವೈಜ್ಞಾನಿಕ ಹೆಸರು ಇಡುವುದಕ್ಕೆ ಕಾರಣವಿದೆ. ವೈರಾಣುವಿನ ಹರಡುವಿಕೆಯ ತಡೆಗೆ, ಪ್ರತಿಬಂಧಕಾತ್ಮಕ ಕ್ರಮಗಳಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ಎಲ್ಲೇ ಆದರೂ ನಡೆಯಬಹುದಾದ ಯಾವುದೇ ಸಂಶೋಧನೆಗಳಿಗೆ ಈ ಅನನ್ಯ ಹೆಸರಿನಿಂದಾಗಿ ಅನುಕೂಲವಾಗುತ್ತದೆ ಮತ್ತು ಸಂಶೋಧನೆಗಳನ್ನು ಏಕೀಕರಿಸಿ ಔಷಧಿ ಕಂಡುಹುಡುಕಲು ನೆರವಾಗುತ್ತದೆ.

ಕೊರೊನಾ ವೈರಸ್ ಮ್ಯುಟೇಶನ್ ಆಗಿ ರೌದ್ರ ರೂಪ ತಾಳಿದೆಯೇ?
* ಯಾವುದೇ ವೈರಸ್ ಕಾಲಾನುಕ್ರಮದಲ್ಲಿ ಮ್ಯುಟೇಶನ್ (ರೂಪಾಂತರ) ಅಂದರೆ, ವಾತಾವರಣಕ್ಕೆ ಬಂದ ಬಳಿಕ ಅದಕ್ಕೆ ಅನುಗುಣವಾಗಿ ಅದರ ಜೀನೋಮ್‌ನಲ್ಲಿ ಬದಲಾವಣೆ ಆಗುವುದು ಸಹಜ. ಅದೇ ರೀತಿ ಕೊರೊನಾ ವೈರಸ್ ಕೂಡ ರೂಪಾಂತರಗೊಂಡಿದೆ. ಅಂದರೆ ವೈರಸ್‌ನ ಜೀನೋಮ್‌ಗಳು (ಮೂಲ ಕಣಗಳು) ವಿಭಜನೆಗೊಂಡು, ಸಂಖ್ಯೆ ವೃದ್ಧಿಯಾಗಿವೆ.

ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡ ವೈರಾಣು ಬಾಧಿತ 103 ರೋಗಿಗಳ ದೇಹದಲ್ಲಿದ್ದ ವೈರಸ್‌ನ ಜೀನೋಮ್‌ಗಳನ್ನು ಸಂಗ್ರಹಿಸಿ ಅಲ್ಲಿನ ಸಂಶೋಧಕರು ವಿಶ್ಲೇಷಣೆ ನಡೆಸಿದರು. ಕೆಲವು ಜೀನೋಮ್‌ಗಳಲ್ಲಿ ವ್ಯತ್ಯಾಸ ಕಂಡುಬಂದ ಕಾರಣ, ಅವುಗಳವನ್ನು ಪ್ರತ್ಯೇಕಿಸಿ, ಎರಡು ರೂಪಗಳಾಗಿ 'ಎಲ್' ಮತ್ತು 'ಎಸ್' ಎಂದು ವಿಂಗಡಿಸಿದರು. ಹೆಚ್ಚು ತೀವ್ರತರ ಪರಿಣಾಮ ಬೀರುವ ಕೊರೊನಾ ವೈರಸ್‌ನ 'ಎಲ್' ತಳಿಯು ಶೇ.70 ಪ್ರಕರಣಗಳಲ್ಲಿ ಇದೆ ಎಂಬುದನ್ನು ಈ ಸಂಶೋಧಕರು ಪತ್ತೆ ಹಚ್ಚಿರುವುದಾಗಿ ನ್ಯಾಶನಲ್ ಸೈನ್ಸ್ ರಿವ್ಯೂ ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ ಮಾರ್ಚ್ 3ರಂದು ಪ್ರಕಟವಾದ ವರದಿಯು ಹೇಳಿದೆ. ಆದರೆ, ಈ ಹೊಸ 'ಎಲ್' ತಳಿಯ ಪ್ರಮಾಣವು ಜನವರಿ ತಿಂಗಳಿಂದೀಚೆಗೆ ಕಡಿಮೆಯಾಗಿದೆ ಮತ್ತು ಕಡಿಮೆ ಪರಿಣಾಮ ಬೀರಬಲ್ಲ 'ಎಸ್' ತಳಿ ಈಗ ಹೆಚ್ಚು ಚಾಲ್ತಿಯಲ್ಲಿದೆ ಎಂದು ವರದಿ ಹೇಳಿದೆ. 'ಎಲ್' ತಳಿಯ ಪ್ರಭಾವ ಕುಗ್ಗುವುದಕ್ಕೆ ಪ್ರಮುಖ ಕಾರಣವೆಂದರೆ, ವೈರಸ್ ತಡೆಗೆ ಮಾನವನು ಕೈಗೊಂಡ 'ಕ್ವಾರಂಟೈನ್' ಮಾಡುವಂಥ (ತಟಸ್ಥಗೊಳಿಸುವ) ಕ್ರಮಗಳು.

ಆದರೆ ಈ ಮ್ಯುಟೇಶನ್ ವರದಿಗೂ ಆಕ್ಷೇಪವಿದೆ. ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರಾದ ನಥಾನ್ ಗ್ರುಬಾ (Nathan Grubaugh) ಅವರು ಎತ್ತಿರುವ ಆಕ್ಷೇಪವೇನೆಂದರೆ, ಸಂಶೋಧಕರ ತೀರ್ಮಾನವು ಕೇವಲ ಊಹೆಯಷ್ಟೇ. ಯಾಕೆಂದರೆ, ಮ್ಯುಟೇಶನ್ ಅಧ್ಯಯನಕ್ಕೆ ಈ ಸಂಶೋಧಕರು ತೆಗೆದುಕೊಂಡ ವೈರಾಣುವಿನ ಜೀನೋಮ್ ಪ್ರಮಾಣ ಅತ್ಯಲ್ಪ. ಒಂದು ಸಾರ್ಸ್ CoV-2ನ ಜೀನೋಮ್‌ನಲ್ಲಿ ಸುಮಾರು 30 ಸಾವಿರ ನ್ಯೂಕ್ಲಿಯೋಟೈಯ್ಡ್‌ಗಳು (ಜೀನೋಮ್‌ನ ಮೂಲ ಜೀವಾಣು ಘಟಕಗಳು) ಇರುತ್ತವೆ. ಇವರು ಸಂಶೋಧನೆಗೆ ತೆಗೆದುಕೊಂಡಿದ್ದು ಒಂದೆರಡು ನ್ಯೂಕ್ಲಿಯೋಟೈಡ್‌ಗಳನ್ನು ಮಾತ್ರ. ಅಷ್ಟಲ್ಲದೆ, ಸಂಶೋಧಕರು ಪರಿಗಣಿಸಿದ್ದು ಕೇವಲ 103 ಮಂದಿ ಪೀಡಿತರನ್ನು ಮಾತ್ರ. ಈ ವಾದವನ್ನು ಬೇರೆ ವಿಜ್ಞಾನಿಗಳೂ ಒಪ್ಪುತ್ತಾರೆ. ಉದಾಹರಣೆಗೆ, ಸ್ವಿಜರ್ಲೆಂಡ್‌ನ ಬಾಸೆಲ್ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞ ಹಾಗೂ ಭೌತಶಾಸ್ತ್ರಜ್ಞರೂ ಆಗಿರುವ ರಿಚರ್ಡ್ ನೆಹೆರ್ ಅವರು ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ವೈರಸ್ ಈ ಪರಿಯಾಗಿ ಜಾಗತಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಸಂಶೋಧನಾ ವರದಿಗಳು ಬರುವುದು ಸಾಮಾನ್ಯ. ಈ ಕುರಿತು ಚಿಂತೆಯೇನೂ ಮಾಡಬೇಕಾಗಿಲ್ಲ ಎಂದು ಆತಂಕ ನಿವಾರಿಸಿದ್ದಾರೆ ನಥಾನ್ ಗ್ರುಬಾ. ಈ ಕುರಿತು ಆತಂಕ ಉದ್ಭವವಾಗುವುದು ಸಾಮಾನ್ಯವಾದರೂ ವೈರಸ್‌ನ ಜೀವಿತಾವಧಿಯಲ್ಲಿ ರೂಪಾಂತರ ಎಂಬುದು ತೀರಾ ಸಹಜ ಎಂದು ನ್ಯಾಚುರಲ್ ಮೈಕ್ರೋಬಯಾಲಜಿ ನಿಯತಕಾಲಿಕದಲ್ಲಿ ಫೆ.18ರಂದು ಬರೆದಿರುವ ಲೇಖನದಲ್ಲಿ ಅವರು ಭಯ ನಿವಾರಿಸಿದ್ದಾರೆ. ಹೆಚ್ಚಿನ ರೂಪಾಂತರಗಳು ವೈರಸ್ ಮೇಲೆಯೇ ಋಣಾತ್ಮಕ ಪರಿಣಾಮ ಬೀರಿ, ಅವುಗಳ ನಿವಾರಣೆಗೂ ಕಾರಣವಾಗಬಲ್ಲುದು, ಇಲ್ಲವಾದಲ್ಲಿ ಮಾನವರು ಕೈಗೊಳ್ಳುತ್ತಿರುವ ಪರಿಹಾರಾತ್ಮಕ ಕ್ರಮಗಳ ಮೂಲಕ ಈ ವೈರಸ್ ಸಹಜವಾಗಿ ನಾಶ ಹೊಂದಬಲ್ಲುದು. ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿರುವ ಜೀವಿಗಳು ಮಾತ್ರವೇ ಬದುಕುಳಿಯಬಲ್ಲವು ಎಂಬುದು ವಿಜ್ಞಾನಿಗಳು ಹೇಳುವ ಮಾತು.

ಒಂದು ವೈರಸ್ ಒಂದು ಇದ್ದದ್ದು ಇದ್ದಂತೆಯೇ ತಟಸ್ಥ ರೂಪಕ್ಕೆ ಅಥವಾ ಹೆಚ್ಚು ಪ್ರಬಲ ರೂಪಕ್ಕೆ ಮ್ಯುಟೇಟ್ ಆಗಗಬಹುದು. ತಟಸ್ಥ ರೂಪಾಂತರಕ್ಕೆ ಒಳಪಟ್ಟವು ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದರೆ, ಹೆಚ್ಚು ಅಪಾಯಕಾರಿ ಗುಣಕ್ಕೆ ಪರಿವರ್ತನೆಗೊಳ್ಳುವ ವೈರಾಣುಗಳು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಮತ್ತು ನೈಸರ್ಗಿಕ ಆಯ್ಕೆ ಎಂಬ ಪ್ರಾಕೃತಿಕ ಸಿದ್ಧಾಂತದ ಪ್ರಕಾರ, ಹೆಚ್ಚು ದಿನ ಬದುಕುಳಿಯದೆ ನಾಶವಾಗುತ್ತವೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ. ಹೀಗಾಗಿ, ಕೊರೊನಾ ವೈರಸ್ ಮ್ಯುಟೇಶನ್ ಕುರಿತು ಸೂಕ್ತವಾಗಿ ಸಂಶೋಧನೆಯಾಗದಿರುವುದರಿಂದ, ಅವುಗಳ ಬಗ್ಗೆ ಭೀತಿ ಹೊಂದುವುದು ಅಥವಾ ಆತಂಕವನ್ನು ಹರಡುವುದು ಆಧಾರರಹಿತ ಮತ್ತು ಅಪಾಯಕಾರಿ. ಭಾರತದಲ್ಲಿ 2018ರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಾಗ, ಈ ರೂಪಾಂತರ ಸಿದ್ಧಾಂತವು ಸಾಕಷ್ಟು ಮಂದಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು ಎಂಬುದು ಗಮನಿಸಬೇಕಾದ ಅಂಶ ಮತ್ತು ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕಾಗಿಬಂದಿತ್ತು. 

ಕೊರೊನಾ ಎಂಬುದು ಹೊಸ ವೈರಾಣುವೇ?
ಕೊರೊನಾ ವೈರಸ್ ಎಂಬುದು ಮೊದಲು ಪತ್ತೆಯಾಗಿದ್ದು 1960ರಲ್ಲಿ. ಆರಂಭದಲ್ಲಿ ಕಾಣಿಸಿಕೊಂಡಿದ್ದು ಕೋಳಿಮರಿಗಳ ಶ್ವಾಸಕೋಶಗಳಲ್ಲಿ ಹಾಗೂ ಸಾಮಾನ್ಯ ಶೀತ ಬಾಧಿತ ಮಾನವರ ಮೂಗಿನ ಹೊಳ್ಳೆಗಳಲ್ಲಿ. ಇದಕ್ಕೆ ಮಾನವ ಕೊರೊನಾ ವೈರಸ್ 229E ಹಾಗೂ ಮಾನವ ಕೊರೊನಾ ವೈರಸ್ OC43 ಅಂತ ಹೆಸರಿಸಲಾಗಿತ್ತು. ಆ ಬಳಿಕ ಪತ್ತೆಯಾದ, ಇದೇ ಪಂಗಡಕ್ಕೆ ಸೇರಿದ ವೈರಾಣುಗಳೆಂದರೆ, 2003ರಲ್ಲಿ ಸಾರ್ಸ್-CoV, 2004ರಲ್ಲಿ HCoV NL63, 2005ರಲ್ಲಿ HKU1, 2012ರಲ್ಲಿ MERS-CoV, 2019ರಲ್ಲಿ SARS-CoV-2 (ಹಿಂದೆ 2019-nCoV ಅಂತ ಕರೆಯಲಾಗುತ್ತಿತ್ತು). ಇವೆಲ್ಲವೂ ಶ್ವಾಸಕೋಶ ನಾಳಕ್ಕೆ ಸಂಬಂಧಿಸಿದ ಸೋಂಕುಗಳೇ.

ಭಾರತದಲ್ಲಿ ಸಾವು ಸಂಭವಿಸಿದೆಯೇ?
ಇಲ್ಲವೇ ಇಲ್ಲ. ಭಾರತದಲ್ಲಿ ಇಂದಿನ ದಿನದವರೆಗೆ (09 ಮಾರ್ಚ್ 2020) 43 ಮಂದಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ದೃಢಪಟ್ಟಿದೆಯಷ್ಟೇ. ಅವರನ್ನು ಪ್ರತ್ಯೇಕವಾಗಿರಿಸಿ, ವಿಶೇಷ ಕಾಳಜಿಯಿಂದ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ತೆಗೆದುಕೊಳ್ಳಲಾದ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಭಾರತದಲ್ಲಿ ಇಂದಿನ ದಿನದವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಜನರು ಆತಂಕ ಪಡಬೇಕಾಗಿಲ್ಲ, ಸರ್ಕಾರ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಕೈಗೊಂಡರೆ ಸಾಕು.

ಇದನ್ನೂ ಓದಿ: ಕೋವಿಡ್ 19 ಬಾಧೆ: ಏನು ಲಕ್ಷಣಗಳು, ನೀವೇನು ಮಾಡಬೇಕು? ಇಲ್ಲಿ ಕ್ಲಿಕ್ ಮಾಡಿ.

ಮುಖಗವಸುಗಳಿಂದ ವೈರಸ್ ಬಾರದಂತೆ ತಡೆಯಬಹುದೇ?
ಇದರರ್ಥ ಹಾಗಲ್ಲ. ಸೋಂಕು ಪೀಡಿತರು ಅಥವಾ ವೈರಸ್ ಬಾಧಿತರು ಸಾಮಾನ್ಯವಾದ ಮುಖಗವುಸು (ಮಾಸ್ಕ್) ಧರಿಸಿದರೆ ಅವರು ಸೀನಿದಾಗ, ಕೆಮ್ಮಿದಾಗ ವೈರಾಣುಗಳು ದೂರ ಹೋಗದಂತೆ, ಈ ಮೂಲಕ ಮತ್ತೊಬ್ಬರಿಗೆ ಹರಡದಂತೆ ತಡೆಯಬಹುದಷ್ಟೇ.

ಇದನ್ನೂ ಓದಿ: 

ಚಿಕಿತ್ಸೆ ಏನು?
ಇದುವರೆಗೂ ಕೋವಿಡ್-19 ಕಾಯಿಲೆ ಹರಡದಂತೆ ವೈರಾಣುಗಳಿಗೆ ಲಸಿಕೆ ತಯಾರಿಸಲಾಗಿಲ್ಲ. ಸಾಮಾನ್ಯ ಶೀತ, ನೆಗಡಿ, ಕೆಮ್ಮು, ಸೀನುವಿಕೆ, ಉಸಿರಾಟದ ತೊಂದರೆ, ಜ್ವರ, ರಕ್ತಹೀನತೆ, ತಲೆನೋವು ಇತ್ಯಾದಿ ಕಂಡುಬಂದರೆ, ವೈದ್ಯರನ್ನು ಕಾಣಬೇಕಾಗುತ್ತದೆ. ಅವರು ಈ ವೈರಾಣುವಿನ ಸೋಂಕು ತಿಳಿಯಲು ರಕ್ತ ಪರೀಕ್ಷೆ ಮಾಡಿಸಲು ಸಲಹೆ ನೀಡಬಹುದು. ಈ ಪರೀಕ್ಷೆಯಲ್ಲಿ ಕೊರೊನಾ ವೈರಸ್ ತಗುಲಿದೆ ಎಂದು ಕಂಡುಬಂದರೆ, ಈ ರೋಗವು ಇತರರಿಗೂ ಹರಡದಂತೆ ಅಂಥ ಬಾಧಿತರನ್ನು ಪ್ರತ್ಯೇಕವಾಗಿರಿಸಿ, ವೈರಾಣುಗಳನ್ನು ನಾಶಪಡಿಸುವ ಪ್ರಕ್ರಿಯೆಗೆ (ಕ್ವಾರಂಟೈನ್) ಒಳಪಡಿಸಲಾಗುತ್ತದೆ. ಭಾರತದಲ್ಲಿ ಮೊದಲು ಕಂಡುಬಂದಿದ್ದು ವುಹಾನ್‌ನಿಂದ ಬಂದ ಕೇರಳದ ಒಬ್ಬ ಶುಶ್ರೂಷಕಿಗೆ. ತ್ರಿಶೂರಿನಲ್ಲಿ ಅವರನ್ನು ಪ್ರತ್ಯೇಕಿತ ಶುಶ್ರೂಷಾ ವಿಧಾನಕ್ಕೆ ಒಳಪಡಿಸಿದ ಕಾರಣದಿಂದಾಗಿ, ಅವರ ಸೋಂಕು ನಿವಾರಣೆಯಾಗಿದೆ ಮತ್ತು ಅವರು ಆಸ್ಪತ್ರೆಯಿಂದ ಈಗಾಗಲೇ ಬಿಡುಗಡೆಯಾಗಿ ಬಂದಿದ್ದಾರೆ.

ಕೊರೊನಾ ವೈರಸ್ ಬಾಧೆಯಾದರೆ ಸಾಯುತ್ತಾರೆಯೇ?
ಚೀನಾದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು ಅಧ್ಯಯನದ ನಡೆಸಿ ಫೆ.18ರಂದು ಪ್ರಕಟಿಸಿರುವ ವರದಿಯ ಪ್ರಕಾರ, ಕೊರೊನಾ ವೈರಸ್ ಬಾಧಿತ ಶೇ.81 ಮಂದಿಗೆ ಕೋವಿಡ್-19ನ ಅಲ್ಪ ಪರಿಣಾಮ ತಗುಲಿದೆ. ಶೇ.13.8 ಮಂದಿಗೆ ತೀವ್ರ ಬಾಧೆ ಉಂಟಾಗಿದೆ, ಎಂದರೆ, ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಅಥವಾ ಕೃತಕವಾಗಿ ಆಮ್ಲಜನಕ ಪೂರೈಕೆಯ ಅಗತ್ಯವಿತ್ತು ಮತ್ತು ಶೇ.4.7 ಮಂದಿ ಚಿಂತಾಜನಕ ಸ್ಥಿತಿ ತಲುಪಿದ್ದಾರೆ. ಇವರಲ್ಲಿ ಉಸಿರಾಟದ ವೈಫಲ್ಯ, ಬಹು ಅಂಗಾಂಗ ವೈಫಲ್ಯ ಅಥವಾ ಆಘಾತ (ಸ್ಟ್ರೋಕ್) ಕಾಣಿಸಿಕೊಂಡಿದೆ. ಮತ್ತು ಫೆ.18ರವರೆಗಿನ ಮಾಹಿತಿಯ ಅನುಸಾರ, ಕೋವಿಡ್-19ರಿಂದ ಬಾಧಿತರಾಗಿ ಸಾವನ್ನಪ್ಪಿದವರ ಪ್ರಮಾಣ ಶೇ.2.7 ಮಾತ್ರ. ವಯೋವೃದ್ಧರು ಮತ್ತು ಈಗಾಗಲೇ ರೋಗ-ಪ್ರತಿರೋಧಕತೆ ಕಡಿಮೆ ಇರುವವರು ಈ ವೈರಸ್ ಕಾಟಕ್ಕೆ ಒಳಗಾಗುವುದು ಹೆಚ್ಚು. ಮಕ್ಕಳಿಗೆ ಬರುವುದಿಲ್ಲ ಎಂಬುದು ಮಿಥ್ಯೆ. ಮಕ್ಕಳಾಗಲೀ, ವೃದ್ಧರಾಗಲೀ ಅಥವಾ ಯುವಜನರೇ ಆಗಲಿ, ರೋಗನಿರೋಧಕ ಶಕ್ತಿಯು ಯಾರ ದೇಹದಲ್ಲಿ ಕಡಿಮೆಯಿದೆಯೋ ಅವರಿಗೆ ಕೋವಿಡ್-19 ಬಾಧೆಯ ಸಾಧ್ಯತೆ ಹೆಚ್ಚು.

ಮುನ್ನೆಚ್ಚರಿಕೆ ಕ್ರಮಗಳೇನು?
ಈಗಾಗಲೇ ತಿಳಿಸಿರುವಂತೆ, ಶುಚಿತ್ವ ಕಾಪಾಡುವುದು, ಪೀಡಿತರಿಂದ ದೂರವಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಮಾವೇಶಗೊಳ್ಳುವುದರಿಂದ ತತ್ಕಾಲಕ್ಕೆ ದೂರವಿರುವುದು, ಕೈಗಳನ್ನು ಪದೇ ಪದೇ ತೊಳೆದುಕೊಂಡ ಬಳಿಕವೇ ತಿಂಡಿ ತಿನಸು ಸೇವಿಸುವುದು, ಅನಗತ್ಯವಾಗಿ ಕಣ್ಣು, ಮೂಗು, ಬಾಯಿಗೆ ಕೈ ಹಾಕದಿರುವುದು, ಕೈಕುಲುಕುವುದು, ಆಲಿಂಗನ, ಚುಂಬನದ ಬದಲು ಕೈ ಮುಗಿಯುವುದು, ಬೇಯಿಸಿದ, ಆರೋಗ್ಯಕರ ಆಹಾರ ಸೇವಿಸುವುದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು, ಶೀತ-ಜ್ವರ, ತಲೆನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಕಾಣುವುದು... ಇವಿಷ್ಟು ಮುಂಜಾಗ್ರತೆ ವಹಿಸಿದರೆ ಕ್ಷೇಮ.

ಹೀಗಾಗಿ, ವದಂತಿಗಳಿಗೆ ಕಿವಿಗೊಡದೆ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ, ಸ್ವಚ್ಛತೆದೆ ಆದ್ಯತೆ ನೀಡಿದರೆ ಆತಂಕವಿಲ್ಲದೆ ಸೋಂಕಿನಿಂದ ಪಾರಾಗಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು