ಅಭಿವೃದ್ಧಿಯ ಬಿಸಿಶಾಖ ಇಡೀ ಭೂಮಿಗೇ ವಿಸ್ತರಿಸಿದಾಗ ಕಳೆದ ದಶಕದಲ್ಲಿ ವಿಜ್ಞಾನಿಗಳೇ ದನಿಯೆತ್ತಿದರು. ‘ಅತಿಮಾನವ ಯುಗ ಆರಂಭವಾಗಿದೆ’ ಎಂದರು. ನಾವೆಲ್ಲ ಸೇರಿ ಭೂಮಿಯನ್ನು ಆರನೇ ಮಹಾನಾಶದ ಅಂಚಿಗೆ ತಂದಿದ್ದೇವೆ ಎಂದರು. ಬರುತ್ತಿರುವ ಝಳಪ್ರಳಯದಲ್ಲಿ ಭೂಗ್ರಹಕ್ಕೆ ಅದೇನೇ ವಿಪತ್ತು ಬಂದರೂ ರಿಪೇರಿ ಮಾಡಿಕೊಳ್ಳುವ ಸಾಮರ್ಥ್ಯ ಮಳೆಕಾಡುಗಳ ಸಂಕೀರ್ಣ ಜೀವಮಂಡಲಕ್ಕಿದೆ, ‘ಅದನ್ನು ಉಳಿಸಿಕೊಳ್ಳಬೇಕು’ ಎಂದರು. ಕೇಳುವ ವ್ಯವಧಾನ ಯಾರಿಗಿದೆ? ನಿಸರ್ಗದ ಪರವಾಗಿ ವಕಾಲತ್ತು ಮಾಡುವವರು ಯಾರು?
***
‘ಮನುಷ್ಯನಿರ್ಮಿತ ಏನನ್ನೇ ಯಾರಾದರೂ ಹಾಳುಗೆಡವಿದರೆ ನಾವದನ್ನು ‘ವಿಧ್ವಂಸಕ ಕೃತ್ಯ’ ಎನ್ನುತ್ತೇವೆ. ನಿಸರ್ಗನಿರ್ಮಿತ ಏನೆಲ್ಲವನ್ನು ನಾವು ಹಾಳುಗೆಡವಿ ಅದಕ್ಕೆ ‘ಅಭಿವೃದ್ಧಿ’ ಎನ್ನುತ್ತೇವೆ’- ಹೀಗೆಂದು ಅಮೆರಿಕದ ನಿಸರ್ಗ ಚಿಂತಕ ಜೋಸೆಫ್ ವುಡ್‌ಕ್ರಚ್ ಹೇಳಿದ್ದ. ಲಂಗುಲಗಾಮಿಲ್ಲದ ಅಭಿವೃದ್ಧಿಯ ದಾಂಗುಡಿಯ ಕುರಿತು ಆತ ಇನ್ನೂ ಒಂದು ಮಾತನ್ನು ಹೇಳುತ್ತಾನೆ: ‘ಭಾರೀ ವೇಗದಲ್ಲಿ ಕಾರಿನ ಚಾಲನೆ ಮಾಡುತ್ತಿದ್ದರೆ ನೀವು ಏನನ್ನೂ ಚಿಂತನ ಮಂಥನ ಮಾಡಲಾರಿರಿ; ನಿಮ್ಮ ಗಮನವೆಲ್ಲ ಆ ರೋಚಕತೆಯನ್ನು ಸಂಭಾಳಿಸುವುದರಲ್ಲೇ ಕಳೆದು ಹೋಗುತ್ತದೆ’ ಅಂತ.
ತಂತ್ರಜ್ಞಾನದ ರೋಚಕತೆಯನ್ನು, ಅಭಿವೃದ್ಧಿಯ ಉನ್ಮಾದವನ್ನು ಜನಸಾಮಾನ್ಯರಿಗೆ ತೋರಿಸುತ್ತಲೇ ನಮ್ಮ ಬಹುಪಾಲು ಜನಪ್ರತಿನಿಧಿಗಳು ಮತ್ತು ಕಾರ್ಪೊರೇಟ್ ಶಕ್ತಿಗಳು ಎಲ್ಲರ ಭವಿಷ್ಯವನ್ನು ಡೋಲಾಯಮಾನ ಸ್ಥಿತಿಯತ್ತ ತಳ್ಳುತ್ತಿರುವಂತೆ ಕಾಣುತ್ತಿದೆ. ಚಿಂತನೆಗೆ ಅವಕಾಶವೇ ಇಲ್ಲದ, ಏಕಾಂತಕ್ಕೆ ತಾಣವೇ ಇಲ್ಲದಂಥ ಸಮಾಜವೊಂದು ನಮ್ಮ ಕಣ್ಣೆದುರೇ ಸೃಷ್ಟಿಯಾಗುತ್ತಿದೆ.
ಪಶ್ಚಿಮಘಟ್ಟಗಳನ್ನು ನಾವೆಲ್ಲ ಬರಿಗಣ್ಣಲ್ಲಿ, ಅದೂ ಟಾರ್ ರಸ್ತೆಯ ಆಚೀಚೆ ಕಂಡಷ್ಟೆ ನೋಡುತ್ತೇವೆ. ಅದನ್ನು ನೋಡಲು ಕಣ್ಣಷ್ಟೇ ಸಾಲದು, ಕೈಕಾಲು ಗಟ್ಟಿ ಇರಬೇಕು, ಪಂಚೇಂದ್ರಿಯಗಳು ಚುರುಕಾಗಿರಬೇಕು. ಜೊತೆಗೆ ಬೈನಾಕ್ಯುಲರೂ ಬೇಕು, ಭೂತಗನ್ನಡಿ, ಸೂಕ್ಷ್ಮದರ್ಶಕವೂ ಬೇಕು. ಮೇಲಾಗಿ, ಉಪಗ್ರಹಗಳ ಸಿಂಹಾವಲೋಕನವೂ ಬೇಕು, ಅವೆಲ್ಲಕ್ಕಿಂತ ಮುಖ್ಯವಾಗಿ ನಿನ್ನೆ ನಾಳೆಗಳ ಸಮಗ್ರ ನೋಟ ಬೇಕು. ಈ ಘಟ್ಟಪ್ರದೇಶಗಳ 320 ಕೋಟಿ ವರ್ಷಗಳ ವಿಕಾಸಯಾತ್ರೆಯಲ್ಲಿ ಈಚೆಗಷ್ಟೇ ಎಂಟ್ರಿ ಪಡೆದ ಮನುಷ್ಯನಿಗೆ ತನ್ನ ಪಾತ್ರ ಏನು ಎಂಬುದರ ಪರಿಜ್ಞಾನ ಬೇಕು. ಇಡೀ ಪೃಥ್ವಿಯ ಜೀವಮಂಡಲದಲ್ಲಿ ಈ ಘಟ್ಟಸಾಲಿನ ಪಾತ್ರ ಏನು ಎಂಬುದೂ ಗೊತ್ತಿರಬೇಕು.
ಅವೆಲ್ಲ ಗೊತ್ತಿದ್ದ ಕೆಲವೇ ತಜ್ಞರಿಂದಾಗಿ, ವಿವೇಕವಂತರಿಂದಾಗಿ ಈ ಘಟ್ಟಸಾಲು ಈಗಲೂ ಅಷ್ಟಿಷ್ಟು ಉಳಿದುಕೊಂಡಿದೆ. 1970ರಲ್ಲಿ ಕೇರಳ ಸರ್ಕಾರ ಅಲ್ಲಿನ ಸೈಲೆಂಟ್ ವ್ಯಾಲಿಯನ್ನೇ ಮುಳುಗಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಹಾಕಿತು. ಅಲ್ಲಿ ‘ಅಭಿವೃದ್ಧಿಯ ಹಸ್ತಕ್ಷೇಪ ಕೂಡದು’ ಎಂದು ನಿಸರ್ಗತಜ್ಞ ಝಫರ್ ಫುತೇಹಲಿ ವರದಿ ಸಲ್ಲಿಸಿದರು. ಸರ್ಕಾರ ಅದನ್ನು ಕಡೆಗಣಿಸಿ ಅಣೆಕಟ್ಟು ಕಟ್ಟಲು ಹೊರಟಾಗ ಜನಸಾಮಾನ್ಯರು ಬೀದಿಗಿಳಿದರು. ಪ್ರಧಾನಿಯವರ ವಿಜ್ಞಾನ ಸಲಹಾಕಾರರಾಗಿದ್ದ ಡಾ. ಎಮ್‌ಜಿಕೆ ಮೆನನ್‌ಗೆ ಜನಾಕ್ರೋಶದ ಬಿಸಿ ತಲುಪಿತು. ಅವರು ಇಂದಿರಾಗಾಂಧಿಯವರಿಗೆ ಆ ಮೌನ ಕಣಿವೆಯ ಮಹತ್ವವನ್ನು ತಿಳಿಸಿದರು. ಅದೇತಾನೆ 1972ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ಪ್ರಥಮ ವಿಶ್ವ ಪರಿಸರ ಸಮ್ಮೇಳನದಲ್ಲಿ ತಜ್ಞರ ಉಪನ್ಯಾಸಗಳನ್ನು ಆಲಿಸಿ ಬಂದಿದ್ದ ಇಂದಿರಾ ಗಾಂಧಿಯವರು ಮೆನನ್ ಸಲಹೆಯ ಪ್ರಕಾರ ‘ಸೈಲೆಂಟ್ ವ್ಯಾಲಿ’ಯನ್ನು ಸಂರಕ್ಷಣಾ ವಲಯವನ್ನಾಗಿ ಘೋಷಿಸಿದರು. ಹೀಗೆ, ಕೇರಳದ ‘ಮೌನ ಕಣಿವೆ’ ಇಂದಿಗೂ ಇಡಿಯಾಗಿ ಉಳಿಯುವಲ್ಲಿ ಇಡೀ ಜಗತ್ತಿನ ವಿವೇಕವೇ ಒಂದಾಗಿತ್ತು.
ಐವತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲೂ ಅಂಥ ವಿವೇಕ ಅಲ್ಲಲ್ಲಿ ಜಾಗೃತವಾಗಿತ್ತು. ಅರಣ್ಯ ಪರಿಸರದ ಜಾಗತಿಕ ಮಹತ್ವ ಗೊತ್ತಾಗುತ್ತಿದ್ದಂತೆ ಒಂದರಮೇಲೊಂದರಂತೆ ಹತ್ತಾರು ಸಂರಕ್ಷಣಾ ವಲಯಗಳು, ಜೀವಧಾಮಗಳು, ರಕ್ಷಿತಾರಣ್ಯಗಳು ಘೋಷಣೆಯಾದವು. ಆಮೇಲೆ 80ರ ದಶಕದಲ್ಲಿ ಕಾಳಿ, ಬೇಡ್ತಿ, ಶರಾವತಿ ಕಣಿವೆಗಳಲ್ಲಿ ಅಭಿವೃದ್ಧಿಯ ರಣಕಹಳೆ ಮೊಳಗತೊಡಗಿದಾಗ ಪರಿಸರವಾದ ಮುನ್ನೆಲೆಗೆ ಬಂತು; ಪ್ರತಿಭಟನೆಗಳು ನಡೆದವು. ತೊಂಬತ್ತರ ದಶಕದಲ್ಲಿ ಜಾಗತೀಕರಣದ ಸುನಾಮಿಯಲ್ಲಿ ಎಲ್ಲ ಬಗೆಯ ಜನಪರ ಚಳವಳಿಗಳ ದನಿ ಉಡುಗಿ, ಭೋಗಭಾಗ್ಯಗಳ ಹೆಬ್ಬಾಗಿಲು ಎಲ್ಲೆಲ್ಲೂ ತೆರೆದುಕೊಂಡಿತು. ಜೆಸಿಬಿಗಳ ಸಾಲುಸಾಲುಗಳೇ ಘಟ್ಟಪ್ರದೇಶದ ಕಾಡುಕೊಳ್ಳಗಳಿಗೆ ನುಗ್ಗಿದವು. ಡೈನಮೈಟ್, ವಿದ್ಯುತ್ ಗರಗಸ, ಡ್ರಿಲ್ಲಿಂಗ್ ಯಂತ್ರಗಳ ಗದ್ದಲದಲ್ಲಿ ಶಿವರಾಮ ಕಾರಂತ, ಕುಸುಮಾ ಸೊರಬ, ಕೆ.ವಿ. ಸುಬ್ಬಣ್ಣ, ಸೆಸಿಲ್ ಸಾಲ್ಡಾನ್ಹಾ, ತೇಜಸ್ವಿ, ಯೆಲ್ಲಪ್ಪ ರೆಡ್ಡಿಯಂಥವರ ವಿವೇಕದ ಸದ್ದಡಗಿತು.
ಅಭಿವೃದ್ಧಿಯ ಬಿಸಿಶಾಖ ಇಡೀ ಭೂಮಿಗೇ ವಿಸ್ತರಿಸಿದಾಗ ಕಳೆದ ದಶಕದಲ್ಲಿ ವಿಜ್ಞಾನಿಗಳೇ ದನಿಯೆತ್ತಿದರು. ‘ಅತಿಮಾನವ ಯುಗ ಆರಂಭವಾಗಿದೆ’ ಎಂದರು. ನಾವೆಲ್ಲ ಸೇರಿ ಭೂಮಿಯನ್ನು ಆರನೇ ಮಹಾನಾಶದ ಅಂಚಿಗೆ ತಂದಿದ್ದೇವೆ ಎಂದರು. ಬರುತ್ತಿರುವ ಝಳಪ್ರಳಯದಲ್ಲಿ ಭೂಗ್ರಹಕ್ಕೆ ಅದೇನೇ ವಿಪತ್ತು ಬಂದರೂ ರಿಪೇರಿ ಮಾಡಿಕೊಳ್ಳುವ ಸಾಮರ್ಥ್ಯ ಮಳೆಕಾಡುಗಳ ಸಂಕೀರ್ಣ ಜೀವಮಂಡಲಕ್ಕಿದೆ, ‘ಅದನ್ನು ಉಳಿಸಿಕೊಳ್ಳಬೇಕು’ ಎಂದರು.
ಕೇಳುವ ವ್ಯವಧಾನ ಯಾರಿಗಿದೆ? ನಿಸರ್ಗದ ಪರವಾಗಿ ವಕಾಲತ್ತು ಮಾಡುವವರು ಯಾರು? ತೇಜಸ್ವಿ ಹಿಂದೊಮ್ಮೆ ಹೇಳಿದ ಹಾಗೆ, ಕಾಡಿನ ಈ ಮೂಕಜೀವಿಗಳಿಗೆ ವೋಟ್ ಹಾಕುವ ಹಕ್ಕು ಇದ್ದಿದ್ದರೆ ಚಿತ್ರಣವೇ ಬೇರೆ ಇರುತ್ತಿತ್ತು. ಅವಕ್ಕಂತೂ ಉಸಿರೆತ್ತುವ ಸ್ವಾತಂತ್ರ್ಯವಿಲ್ಲ; ನಾಳಿನ ಜಗತ್ತನ್ನು ನಿಭಾಯಿಸಬೇಕಾದ ಎಳೆ ಮಕ್ಕಳೂ ಮತ ಹಾಕುವಂತಿಲ್ಲ. ‘ಇರುವುದೊಂದೇ ಭೂಮಿ’ ಎಂಬ ಘೋಷಣೆ ಹೊಮ್ಮಿದ 50ನೇ ವರ್ಷದ ಸಂದರ್ಭದಲ್ಲಿ ಅದೇ ಸ್ಟಾಕ್‌ಹೋಮ್‌ನಲ್ಲಿಮೊನ್ನೆ ಜೂನ್ 5ರಂದು ಮತ್ತೊಮ್ಮೆ ಅದೇ ಘೋಷಣೆ ಹೊಮ್ಮಿತು. ಈ ಅರ್ಧ ಶತಮಾನದಲ್ಲಿ ಜಗತ್ತಿನಲ್ಲಿ ನಿಸರ್ಗಜೀವಿಗಳ ಸಂಖ್ಯೆ ಡೇಂಜರಸ್ಲೀ ಡಿಕ್ಲೈನಿಂಗ್ (ಕಮ್ಮಿಯಾಗುತ್ತಿದೆ) ಎಂದು ತಜ್ಞರು ವರದಿ ಕೊಟ್ಟರು. ಪ್ರತಿಷ್ಠಿತ 17 ಸಂಶೋಧನ ಸಂಸ್ಥೆಗಳು ಜಂಟಿ ಹೇಳಿಕೆ ನೀಡಿ, ‘ನಾಳಿನವರಿಗಾಗಿ ನಾವೆಲ್ಲ ಉತ್ತಮ ಪೂರ್ವಜರಾಗೋಣ’ ಎಂದರು.
ಪಶ್ಚಿಮಘಟ್ಟಗಳಲ್ಲಿ ಇನ್ನಷ್ಟು ಅಭಿವೃದ್ಧಿ ಬೇಕೆನ್ನುವವರು, ‘ಹತ್ತಾರು ರಕ್ಷಿತಾರಣ್ಯಗಳು ನಮ್ಮಲ್ಲಿವೆ, ಅದು ಸಾಲದೆ?’ ಎನ್ನುತ್ತಾರೆ. ಊಜಿನೊಣದ ಉದಾಹರಣೆ ನಮಗಿಲ್ಲಿ ನೆನಪಾಗಬೇಕು: ರೇಷ್ಮೆಹುಳದ ದೇಹವನ್ನು ಊಜಿನೊಣದ ಲಾರ್ವಾ ಒಳಗಿಂದೊಳಗೇ ತಿನ್ನುತ್ತ ಹೋಗುತ್ತದೆ. ಆದರೆ ಹೃದಯ, ಶ್ವಾಸಕೋಶ, ಕಣ್ಣು, ಮಿದುಳು ಮುಂತಾದ ಮಹತ್ವದ ಅಂಗಗಳನ್ನು ಕೊನೆಗೆ ತಿನ್ನಲೆಂದು ಉಳಿಸಿಕೊಂಡಿರುತ್ತದೆ. ಆಶ್ರಯ ಕೊಟ್ಟ ಜೀವಿ ಸಾಯಬಾರದಲ್ಲ! ನಮ್ಮ ರಕ್ಷಿತಾರಣ್ಯಗಳು ಮುಖ್ಯ, ಹೌದು. ಆದರೆ ಅದರಾಚೆಗೂ ಏನೆಲ್ಲ ಜೀವಸಮೃದ್ಧಿ ಇವೆ. ಶೋಲಾ ಕಾಡುಗಳಿವೆ, ಸೊಪ್ಪಿನ ಬೆಟ್ಟ, ಕುಮ್ಕಿ, ಬಾಣೆಗಳಿವೆ. ಪ್ರಪಾತಗಳಿವೆ, ಜಲಪಾತದ ತುಂತುರುಗಳಲ್ಲಿ ಮಾತ್ರ ಜೀವಿಸಬಲ್ಲ ಕೀಟಭಕ್ಷಕ ಸಸ್ಯಗಳಿವೆ. ಅದರ ಬಗ್ಗೆ ಗೊತ್ತಿಲ್ಲದ ಎಂಜಿನಿಯರ್‌ಗಳು ನದಿ ತಿರುವಿನ ಯೋಜನೆ ಹಾಕುತ್ತಾರೆ. ಜೀವ ಜಗತ್ತಿನಲ್ಲೇ ಅನನ್ಯವೆನಿಸಿದ ಡಾನ್ಸಿಂಗ್ ಕಪ್ಪೆಗಳು ಹಳ್ಳದ ಕೊರಕಲುಗಳಲ್ಲಿವೆ ಎಂಬುದು ಗೊತ್ತೇ ಇಲ್ಲದೆ ಮರಳು ಮಾಫಿಯಾಗಳು ಲಗ್ಗೆ ಹಾಕುತ್ತಾರೆ. ಕೋಟಿವರ್ಷಗಳ ಹಿಂದಿನ ‘ರಾಂಪತ್ರೆ ಜಡ್ಡಿ’ಗಳಲ್ಲಿ ಬೇರುಗಳ ಮೂಲಕ ಉಸಿರಾಡುವ ವೃಕ್ಷಗಳಿವೆ; ಮೊಟ್ಟೆಗೆ ಮಣ್ಣುಮೆತ್ತಿ ಕಾವು ಕೊಡುವ ವಿಶಿಷ್ಟ ಕುಂಬಾರ ಕಪ್ಪೆಗಳು ವಾಸಿಸುತ್ತವೆ. ಅದರ ಜಾಗತಿಕ ಮಹತ್ವ ಗೊತ್ತೇ ಇಲ್ಲದವರು ಅತಿಕ್ರಮ ಸಾಗುವಳಿಗೆಂದು ಗಿಡಮರ ಸವರುತ್ತಾರೆ. ಕೃಷಿ ವಿಸ್ತರಣೆಗೆಂದು ಬೆಂಕಿ ಇಡುತ್ತಾರೆ. ರಕ್ಷಿತ ಅರಣ್ಯದಲ್ಲಿ ಇಲ್ಲದ ಅವೆಷ್ಟೊ ಕಿರುಜೀವಿಗಳು, ಪಕ್ಷಿಪ್ರಾಣಿಗಳು ಅದರಾಚಿನ ಹುಲ್ಲು ಮೈದಾನದಲ್ಲಿ, ಬೇಣದ ಪೊದೆ-ಪೊಟರೆಗಳಲ್ಲಿ ಇವೆ. ನಾಳಿನ ಜಗತ್ತಿಗೆ ವಿಮೆಯಾಗಬಲ್ಲ ಗಿಡಮೂಲಿಕೆಗಳಿವೆ. ಬೋಳುಬೆಟ್ಟಗಳಲ್ಲಿ ಕುರಿಂಜಿ ಹೂ ಅರಳಿದಾಗ ಇಡೀ ಜೀವಜಾಲವೇ ಮೈಮುರಿದೆದ್ದು ಸಂಭ್ರಮಿಸುವ ಚಮತ್ಕಾರವನ್ನು ನಾವು ನೋಡಿದ್ದೇವೆ. ಕಾಡಂಚಿನ ಕಣಿವೆಗಳ ಕೃಷಿಕರು ಬಯೊಟೆಕ್ ಕಂಪನಿಗಳ ನಿಯೊನಿಕೊಟಿನೈಡ್ ವಿಷವನ್ನೊ, ಕಳೆನಾಶಕ ಗ್ಲೈಫೊಸೇಟನ್ನೊ ಸಿಂಪಡಿಸಿದಾಗ ದುಂಬಿ, ಜೇನ್ನೊಣಗಳು ಸಾಯುತ್ತವೆ. ಇವು ಅರಣ್ಯಕ್ಕೆ ಮರಳಿ ಬಾರದಿದ್ದರೆ ಅರಣ್ಯದ ಒಣಮರಗಳಲ್ಲಿ ಅರಳಬೇಕಿದ್ದ ಆರ್ಕಿಡ್‌ಗಳು ಪರಾಗಸ್ಪರ್ಶವಿಲ್ಲದೆ ನಶಿಸುತ್ತವೆ. ದಟ್ಟಕಾಡನ್ನು ಸೀಳಿ ಹೆದ್ದಾರಿಯನ್ನು ನಿರ್ಮಿಸಿ, ಅಗಲಿಸುತ್ತ ಹೋದರೆ ಅದು ಆನೆಯ ಪಾದಕ್ಕೆ ನಾಟಿದ ಸೂಜಿಯಂತಾಗುತ್ತದೆ. ದಿನದಿನಕ್ಕೂ ಹೆಚ್ಚುವ ನೋವು, ಕೀವು, ವ್ರಣದ ಆ ಆಕ್ರಂದನ ನಮಗೆ ಕೇಳಿಸಲಾರದು. ಶರಾವತಿ ಕೊಳ್ಳದ ಸಿಂಗಳೀಕಗಳು ಬಿಸ್ಕಿಟ್, ಕುರ್ಕುರೆಯ ಭಿಕ್ಷೆಗಾಗಿ ಹೆದ್ದಾರಿಗೆ ಜಿಗಿಯುತ್ತ ವಿದ್ಯುತ್ ತಂತಿಗೊ, ವೇಗದ ಚಕ್ರಕ್ಕೊ ಸಿಕ್ಕು ಸತ್ತಾಗ ನಾವು ಕ್ಲಿಕ್ ಮಾಡಿ ಅವರಿವರಲ್ಲಿ ಹಂಚಿಕೊಳ್ಳುವಲ್ಲಿಗೆ ನಮ್ಮ ಸಂವೇದನೆ ಮುಗಿಯುತ್ತದೆ.
ಈ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ, ‘ಅರಣ್ಯ ನಮಗೆ ಬೇಕಾಗಿಲ್ಲ’ ಎನ್ನುವ ಜನಪ್ರತಿನಿಧಿಗಳನ್ನೂ ನಾವು ನೋಡಿದ್ದೇವೆ. (‘ಗಿಡಮರಗಳನ್ನೆಲ್ಲ ಕಡಿದು ಹಾಕಿ ಸಾಗುವಳಿ ಮಾಡಿ! ಹುಟ್ಟಿದ ಮೇಲೆ ನಾವು ಹೊಟ್ಟೆಗೆ ಅನ್ನ ತಿಂತೇವೆ ವಿನಾ ಅರಣ್ಯ ತಿನ್ನೋದಿಲ್ಲ’ ಎಂದು ಹಿರಿಯ ಶಾಸಕರೊಬ್ಬರು ಹೇಳಿದ್ದು ಪ್ರಜಾವಾಣಿಯ ಮುಖಪುಟದಲ್ಲಿ 2017ರ ಮೇ 9ರಂದುಪ್ರಕಟವಾಗಿತ್ತು). ಅಂಥ ಘಂಟಾಘೋಷವನ್ನೇನೂ ಮಾಡದೆ, ಕಡತಗಳ ಮೂಲಕವೇ ಡೀಮ್ಡ್ (ಡೂಮ್ಡ್?) ಅರಣ್ಯಗಳ ತಲೆಕಡಿತ ಮಾಡಿಸಬಲ್ಲ ಚಾಣಾಕ್ಷರೂ ಇದ್ದಾರೆ; ಗ್ರಾನೈಟ್ ಗಣಿಸ್ಫೋಟಕ್ಕೆ ಲೈಸೆನ್ಸ್ ಕೊಡಿಸುವ ದಲ್ಲಾಳಿಗಳೂ ಇದ್ದಾರೆ.
ಅಂಥವರೆಲ್ಲ ಕೈಕೈ ಜೋಡಿಸಿ ನಿಂತು ಗಾಡ್ಗೀಳ್ ವರದಿ, ಕಸ್ತೂರಿರಂಗನ್ ವರದಿ ಬೇಡ ಎನ್ನುತ್ತಿದ್ದಾರೆ ವಿನಾ ಬದಲಿಯಾಗಿ ಬೇರೇನನ್ನೂ ತೋರಿಸುತ್ತಿಲ್ಲ. ಕೋಸ್ಟಾರೀಕಾ ದೇಶದ ಮಾದರಿ ನಮ್ಮಲ್ಲೂ ಬರಬೇಕೆಂದು ಸೂಚಿಸಿದಿರೊ, ಅಲ್ಲಿಗೆ ದೌಡಾಯಿಸಲು ಇದೇ ಪೀಠಸ್ಥರ ದಂಡೇ ತಯಾರಾಗುತ್ತದೆ. ಹೋಗಲಿ, ಆದರೆ ಅದಕ್ಕೂ ಮೊದಲು ಮಾಡಬೇಕಾದ ಕೆಲ ಕೆಲಸಗಳಿವೆ. ನಮ್ಮ ಘಟ್ಟಸೀಮೆಯಲ್ಲೇ ಸುಸ್ಥಿರ ಬದುಕಿನ ನೂರಾರು ಮಾದರಿಗಳಿವೆ. ಗಾಡ್ಗೀಳ್ ಸಮಿತಿಯ ಆಶಯಗಳನ್ನು ಎಂದೋ ಜಾರಿಗೆ ತಂದ ಗ್ರಾಮೀಣ ಸಂಘಸಂಸ್ಥೆಗಳಿವೆ. ಪರಿಸರ ಸಂವರ್ಧನೆಯಲ್ಲೇ ಬದುಕಿನ ಸುಸ್ಥಿರತೆಯನ್ನು ಕಂಡುಕೊಂಡ ಅಂಥ ಮಾದರಿಗಳನ್ನು ಘಟ್ಟಪ್ರದೇಶದ ಇತರ ಪಂಚಾಯತ್‌ಗಳಿಗೂ ಪರಿಚಯಿಸಬೇಕಿದೆ. ಘಟ್ಟಪ್ರದೇಶದ ಪ್ರತಿ ಶಾಲಾಮಕ್ಕಳಿಗೂ ಅವರದೇ ಪರಿಸರದ ಮಹತ್ವವನ್ನು ತಿಳಿಸುವಂಥ ಪಠ್ಯಗಳ ಸೇರ್ಪಡೆಯಾಗಬೇಕಿದೆ. ನಿಸರ್ಗದ ಗರ್ಭಗುಡಿಯಲ್ಲೇ ಹಣ ಹೂಡಬಯಸುವವರಿಗೆ ಗರ್ಭಗುಡಿಯ ನಿಯಮಗಳನ್ನು ಮನದಟ್ಟು ಮಾಡಿಕೊಡಬೇಕಿದೆ.
ಅಭಿವೃದ್ಧಿಯ ಲಾಂಛನವೆನಿಸಿದ ಜೆಸಿಬಿಯೇ ಕಂದಕಕ್ಕೆ ಉರುಳಿ ಭೂಗತವಾದ ಉದಾಹರಣೆಯನ್ನು ನಾವು ಈಚಿನ ಜಡಿಮಳೆಯಲ್ಲಿ ನೋಡಿದ್ದೇವೆ. ‘ಇದು ಪರಿಸರ ಸೂಕ್ಷ್ಮ ಪ್ರದೇಶ: ಹುಷಾರಾಗಿ ಹೆಜ್ಜೆ ಇಡಿ’ ಎಂದು ಪ್ರಕೃತಿ ದನಿಯೆತ್ತಿ ಹೇಳಿದಂತಿದೆ. ಅದನ್ನು ಕೇಳಿಸಿಕೊಂಡು ಮುಂದಡಿ ಇಡುವ ವಿವೇಕ ನಮ್ಮದಾಗಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.