ಸೋಮವಾರ, ಮೇ 23, 2022
30 °C

ಆಳ-ಅಗಲ: ನಕ್ಸಲರ ಮೇಲೆ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಶನಿವಾರ ನಡೆದ ನಕ್ಸಲ್ ಎನ್‌ಕೌಂಟರ್, ಕಳೆದ ಐದು ವರ್ಷಗಳಲ್ಲಿ ನಡೆದ ಯಶಸ್ವಿ ಕಾರ್ಯಾಚರಣೆಗಳಲ್ಲಿ ಒಂದು ಎಂದು ಕರೆಯಲಾಗಿದೆ. ಪ್ರಮುಖ ಕಮಾಂಡರ್ ಮಿಲಿಂದ್‌ ತೇಲ್ತುಂಬ್ಡೆ ಸೇರಿದಂತೆ 26 ನಕ್ಸಲರು ಒಂದೇ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿರುವುದು ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಬಲ ತುಂಬಿದೆ ಎಂದು ವಿಶ್ಲೇಷಿಸಲಾಗಿದೆ. 2009ರಿಂದ ನಕ್ಸಲ್ ನಿಗ್ರಹ ಕಾರ್ಯಾಚರಣೆ ಚುರುಕುಗೊಂಡಿದ್ದು, ವಿವಿಧ ರಾಜ್ಯಗಳಲ್ಲಿ ನಕ್ಸಲರ ಚಟುವಟಿಗಳಿಗೆ ಮೂಗುದಾರ ಹಾಕಲಾಗುತ್ತಿದೆ. 

ಛತ್ತೀಸಗಡ ಹಾಗೂ ತೆಲಂಗಾಣ ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಗಡ್‌ಚಿರೋಲಿ ಜಿಲ್ಲೆಯಲ್ಲಿ ನಕ್ಸಲೀಯರು ಸಕ್ರಿಯರಾಗಿದ್ದಾರೆ. ಇಲ್ಲಿನ ದಟ್ಟ ಕಾನನವು ಛತ್ತೀಸಗಡದ ಬಸ್ತಾರ್‌ ವಲಯ ಹಾಗೂ ತೆಲಂಗಾಣದ ನಡುವೆ ಬಂಡುಕೋರರು ಓಡಾಡುವ ಮಾರ್ಗ ಎನಿಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಶುಷ್ಕ ವಾತಾವರಣವು ನಕ್ಸಲ್ ಚಟುವಟಿಕೆಗೆ ಅಡ್ಡಿಯಾಗಿದೆ. ಹೀಗಾಗಿ 2018–21ರ ಅವಧಿಯಲ್ಲಿ 100ಕ್ಕೂ ಹೆಚ್ಚು ನಕ್ಸಲರು ಹತ್ಯೆಗೀಡಾಗಿದ್ದಾರೆ. 

‘ಹಲವು ವರ್ಷಗಳಿಂದ ಹರಿಸಿದ ಬೆವರು, ರಕ್ತ ಹಾಗೂ ಕಣ್ಣೀರಿನ ಫಲವಾಗಿ ನಾವೀಗ ಯಶಸ್ಸು ಕಾಣುತ್ತಿದ್ದೇವೆ’ ಎಂಬುದು ಮಹಾರಾಷ್ಟ್ರ ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರ ಮಾತು. ಆದರೆ ನಕ್ಸಲರು ಮತ್ತೆ ಗುಂಪುಗೂಡಿ, ಪ್ರಬಲ ಯೋಜನೆಯೊಂದಿಗೆ ದಾಳಿಗೆ ಇಳಿಯುವ ಛಾತಿ ಹೊಂದಿದ್ದಾರೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. 

ಗಡ್‌ಚಿರೋಲಿಯಲ್ಲಿ 2018ರ ಏಪ್ರಿಲ್‌ನಲ್ಲಿ ನಡೆದ ಅವಳಿ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಕಮಾಂಡರ್‌ಗಳು ಸೇರಿದಂತೆ 40 ನಕ್ಸಲರನ್ನು ಹತ್ಯೆ ಮಾಡಲಾಗಿತ್ತು. ಸಂಖ್ಯೆಯ ಲೆಕ್ಕದಲ್ಲಿ ಇದು ಅತಿದೊಡ್ಡ ಕಾರ್ಯಾಚರಣೆ ಎನಿಸಿತ್ತು. 2020ರ ಮಾರ್ಚ್‌ನಲ್ಲಿ ಗಡ್‌ಚಿರೋಲಿ ಗಡಿಯಲ್ಲಿ ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರವನ್ನು ನಾಶಪಡಿಸಲಾಗಿತ್ತು. 2021ರ ಮೇನಲ್ಲಿ ಕೊಸ್ಮಿ–ಕಿಸ್ನೇಲಿ ಅರಣ್ಯದಲ್ಲಿ 13 ನಕ್ಸಲರು ಹತರಾಗಿದ್ದರು. 

2018ರಲ್ಲಿ 833, 2019ರಲ್ಲಿ 670 ಹಾಗೂ 2020ರಲ್ಲಿ 665 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಕೇಂದ್ರ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದರು. 2009ರಿಂದ 2014ರ ಅವಧಿಯಲ್ಲಿ ನಡೆದ ನಕ್ಸಲ್ ಚಟುವಟಿಕೆಗಳಿಗೆ ಹೋಲಿಸಿದರೆ, 2015ರಿಂದ 2020ರ ಅವಧಿಯಲ್ಲಿ ನಡೆದ ಚಟುವಟಿಕೆಗಳಲ್ಲಿ ಶೇ 47ರಷ್ಟು ಇಳಿಕೆಯಾಗಿದೆ ಎಂದು ಕಳೆದ ಅಧಿವೇಶನದಲ್ಲಿ ರಾಜ್ಯಸಭೆಗೆ ಕೇಂದ್ರ ಮಾಹಿತಿ ನೀಡಿತ್ತು.

2013ರಲ್ಲಿ 10 ರಾಜ್ಯಗಳ 76 ಜಿಲ್ಲೆಗಳಲ್ಲಿ ವ್ಯಾಪಿಸಿದ್ದ ನಕ್ಸಲ್ ಚಟುವಟಿಕೆಯು 2020ರ ವೇಳೆಗೆ 9 ರಾಜ್ಯಗಳ 53 ಜಿಲ್ಲೆಗಳಿಗೆ ಸೀಮಿತಗೊಂಡಿದೆ. ನಕ್ಸಲ್ ನಿಗ್ರಹಕ್ಕೆ ಹಾಕಿಕೊಂಡ ಕಠಿಣ ಕಾರ್ಯಕ್ರಮಗಳಿಂದಾಗಿ ‘ಕೆಂಪು ಪ್ರದೇಶ’ದ ವ್ಯಾಪ್ತಿ ಕುಗ್ಗಿದೆ ಎಂದು ಗೃಹಖಾತೆ ರಾಜ್ಯ ಸಚಿವ ಜಿ. ಕೃಷ್ಣರೆಡ್ಡಿ ಅವರು ತಿಳಿಸಿದ್ದರು. ‘2009ರಲ್ಲಿ 2,258 ನಕ್ಸ‌ಲ್ ಹಿಂಸಾಚಾರ ಪ್ರಕರಣಗಳ ಜೊತೆ ಹೋಲಿಸಿದರೆ, 2020ರಲ್ಲಿ 665 ಪ್ರಕರಣಗಳು ವರದಿಯಾಗಿದ್ದು, ಹಿಂಸಾಚಾರದ ಪ್ರಮಾಣ ಶೇ 70ರಷ್ಟು ಕಡಿಮೆಯಾಗಿದೆ’ ಎಂದು ಅವರು ಮಾಹಿತಿ ನೀಡಿದ್ದರು. 2003ರಿಂದ 2018ರ ಅವಧಿಯಲ್ಲಿ 6,279 ನಾಗರಿಕರು ಹಾಗೂ 1,959 ಭದ್ರತಾ ಸಿಬ್ಬಂದಿ ಸಹ ಪ್ರಾಣ ಕಳೆದುಕೊಂಡಿದ್ದಾರೆ. 

ನಕ್ಸಲ್ ಚಟುವಟಿಕೆ ಅಧಿಕವಾಗಿರುವ ಆಂಧ್ರ ಪ್ರದೇಶದಲ್ಲಿ ಗ್ರೇಹೌಂಡ್ಸ್, ಮಹಾರಾಷ್ಟ್ರದಲ್ಲಿ  ಸಿ–60 ಹಾಗೂ ಛತ್ತೀಸಗಡದಲ್ಲಿ ಸಿಆರ್‌ಪಿಎಫ್, ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆಗಳಿಗೆ ನಕ್ಸಲ್ ನಿಗ್ರಹ ಜವಾಬ್ದಾರಿ ವಹಿಸಲಾಗಿದೆ. ಇದೇ ವರ್ಷದ ಜೂನ್‌ನಲ್ಲಿ ಬಿಹಾರದ 6 ಜಿಲ್ಲೆಗಳನ್ನು ನಕ್ಸಲ್‌ಮುಕ್ತ ಎಂಬುದಾಗಿ ಕೇಂದ್ರ ಗೃಹಸಚಿವಾಲಯ ಘೋಷಿಸಿತ್ತು.  

ಕೇರಳದ ವಯನಾಡಿನಲ್ಲಿ ಕರ್ನಾಟಕ ಮೂಲದ ನಕ್ಸಲರಾದ ಬಿ.ಜಿ ಕೃಷ್ಣಮೂರ್ತಿ ಮತ್ತು ಸಾವಿತ್ರಿ ಅವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ಆರ್.ರಾಘವೇಂದ್ರನ್ ಅಲಿಯಾಸ್ ವಿನೋದ್ ಕುಮಾರ್ ಎಂಬ ನಕ್ಸಲೀಯನನ್ನು ಕೇರಳದಲ್ಲಿ ಎನ್‌ಐಎ ಇತ್ತೀಚೆಗೆ ಬಂಧಿಸಿತ್ತು. ಭೀಮಾ–ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಬೋಸ್ ಅವರನ್ನು ಜಾರ್ಖಂಡ್‌ನಲ್ಲಿ ಭಾನುವಾರ ಬಂಧಿಸಲಾಗಿದೆ. 

ನಕ್ಸಲರ ಎನ್‌ಕೌಂಟರ್ ಬಗ್ಗೆ ಪ್ರಶ್ನೆಗಳೂ ಇವೆ. 2018ರಲ್ಲಿ 40 ನಕ್ಸಲರ ಹತ್ಯೆಯಾದ ಗಡ್‌ಚಿರೋಲಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿಗೂ ಗಾಯವಾಗಿಲ್ಲ ಏಕೆ ಎಂದು ಸ್ಥಳೀಯ ಮಾನವಹಕ್ಕು ಸಂಘಟನೆಗಳು ಪ್ರಶ್ನೆ ಎತ್ತಿದ್ದವು. ‘ಇದು ಸಂಘಟಿತ ಹಾಗೂ ಉದ್ದೇಶಪೂರ್ವಕ ಸಾಮೂಹಿಕ ಹತ್ಯಾಕಾಂಡ’ ಎಂದು ಆರೋಪಿಸಲಾಗಿತ್ತು.

ಶಸ್ತ್ರ, ಪುನರ್ವಸತಿ ಮತ್ತು ಅಭಿವೃದ್ಧಿ

ದೇಶದಲ್ಲಿ ನಕ್ಸಲರ ಚಟುವಟಿಕೆಗಳನ್ನು ಹತ್ತಿಕ್ಕಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಸಶಸ್ತ್ರ ಹೋರಾಟದ ಮೊರೆ ಹೋಗಿದ್ದರೂ, ನಕ್ಸಲರ ಪುನರ್ವಸತಿಗೂ ಒತ್ತು ನೀಡಿವೆ. 2009ರಲ್ಲಿ ಅಧಿಕಾರದಲ್ಲಿದ್ದ ಯುಪಿಎ–2 ಸರ್ಕಾರವು ನಕ್ಸಲರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರಗಳನ್ನು ಉತ್ತೇಜಿಸಿತು. ನಕ್ಸಲ್‌ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿತು. 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವೂ ಇದನ್ನು ಮುಂದುವರಿಸಿತು.

* ಮುಖ್ಯವಾಹಿನಿಗೆ ಮರಳಲು ಬಯ ಸುವ ನಕ್ಸಲರಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡುವುದು ಮತ್ತು ಕೆಲವು ಪ್ರಕರಣಗಳನ್ನು ರದ್ದುಪಡಿಸುವ ಭರವಸೆ ನೀಡಲಾಯಿತು. ಈ ಮೂಲಕ ಶಸ್ತ್ರತ್ಯಾಗ ಮಾಡಲು ನಕ್ಸಲರ ಮನವೊಲಿಸಲಾಯಿತು

* ಶರಣಾಗತಿ ವೇಳೆ ಶಸ್ತ್ರಾಸ್ತ್ರಗಳನ್ನೂ ಒಪ್ಪಿಸುವ ನಕ್ಸಲ ರಿಗೆ ಹೆಚ್ಚುವರಿ ಭತ್ಯೆ ಘೋಷಿಸಲಾಯಿತು. ವಿವಿಧ ಶಸ್ತ್ರಗಳು ಮತ್ತು ಸಲಕರಣೆಗಳಿಗೆ ಭತ್ಯೆಯನ್ನು ನಿಗದಿ ಮಾಡಲಾಗಿತ್ತು. ವಿವಿಧ ಶಸ್ತ್ರಾಸ್ತ್ರಗಳಿಗೆ ₹10ರಿಂದ ₹30,000ರದವರೆಗೂ ಭತ್ಯೆ ಪ್ರಕಟಿಸಲಾಗಿತ್ತು

* ನಕ್ಸಲ್‌ಪೀಡಿತ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು, ವಿದ್ಯುತ್ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಲಾಯಿತು. ನಕ್ಸಲ್ ಪೀಡಿತ ಪ್ರದೇಶದಲ್ಲಿರುವ ಜನರು, ನಕ್ಸಲರ ಬೆಂಬಲಿಗರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಯಿತು. ಇದು ನಕ್ಸಲರಿಗಿದ್ದ ಬೆಂಬಲವನ್ನು ಕಡಿಮೆ ಮಾಡಿತು

ಬಿಹಾರ–ಉತ್ತರ ಪ್ರದೇಶ–ಪಶ್ಚಿಮ ಬಂಗಾಳ: ಈ ಮೂರೂ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ನಕ್ಸಲರ ಚಟುವಟಿಕೆ ಹರಡಿತ್ತು. ಆದರೆ ಈ ಪ್ರದೇಶಗಳಲ್ಲಿ ನಕ್ಸಲರ ಚಟುವಟಿಕೆಗಳು ತೀವ್ರ ಸ್ವರೂಪವನ್ನು ಪಡೆದಿರಲಿಲ್ಲ. ಕೇಂದ್ರದ ಭದ್ರತಾ ಪಡೆಗಳು ಈ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. 

ಜಾರ್ಖಂಡ್: ಜಾರ್ಖಂಡ್‌ನ 20 ಜಿಲ್ಲೆಗಳಲ್ಲಿ ನಕ್ಸಲರ ಚಟುವಟಿಕೆ ಇತ್ತು. 2010ರಲ್ಲಿ ಅಂದಿನ ಮುಖ್ಯಮಂತ್ರಿ ಶಿಬು ಸೊರೆನ್ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪುರ್ನವಸತಿ ಕಾರ್ಯಕ್ರಮವನ್ನು ಆರಂಭಿಸಿದರು. ಆದರೆ ಈ ಕಾರ್ಯಕ್ರಮವು ರಾಜ್ಯದಲ್ಲಿ ಸಂಪೂರ್ಣವಾಗಿ ವಿಫಲವಾಯಿತು.

ಹೀಗಾಗಿ ಕೇಂದ್ರ ಸರ್ಕಾರದ ಆಣತಿಯಂತೆ 2011ರಲ್ಲಿ ನಕ್ಸಲರ ವಿರುದ್ಧ ಸಶಸ್ತ್ರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದರು. ಇದು ಹೆಚ್ಚು ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿತು. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸಶಸ್ತ್ರ ಕಾರ್ಯಾಚರಣೆ ಮತ್ತು ಪುನರ್ವಸತಿ ಕಾರ್ಯಕ್ರಮಕ್ಕೂ ಆದ್ಯತೆ ನೀಡಿತು. 

ಛತ್ತೀಸಗಡ: ಛತ್ತೀಸಗಡದ ಬಸ್ತಾರ್ ಪ್ರಾಂತ್ಯದ ಅಂದಾಜು 18 ಜಿಲ್ಲೆಗಳಲ್ಲಿ ನಕ್ಸಲರ ಪ್ರಭಾವವಿದೆ. ಈಗ ಅವರ ಪ್ರಭಾವ ಕುಗ್ಗಿದೆಯಾದರೂ, ಈಗಲೂ ದೇಶದಲ್ಲಿ ನಕ್ಸಲರ ಕೇಂದ್ರಸ್ಥಾನವಾಗಿ ಬಸ್ತಾರ್ ಪ್ರಾಂತ್ಯವೇ ಉಳಿದುಕೊಂಡಿದೆ. ಈ ಪ್ರಾಂತ್ಯದ ದಂತೇವಾಡಾ, ಸುಕ್ಮಾ, ಬಿಜಾಪುರ ಜಿಲ್ಲೆಗಳಲ್ಲಿ ಈಗಲೂ ನಕ್ಸಲರ ಪ್ರಾಬಲ್ಯ ಇದೆ. ಛತ್ತೀಸಗಡದಲ್ಲಿ ನಕ್ಸಲರ ವಿರುದ್ಧ ಶಸಸ್ತ್ರ ಕಾರ್ಯಾಚರಣೆಗೆ ಆದ್ಯತೆ ನೀಡಲಾಗಿದೆ. 

ಬಸ್ತಾರ್ ಪ್ರಾಂತ್ಯದ ಈ ಜಿಲ್ಲೆಗಳನ್ನು ರಾಜ್ಯದ ಇತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 11 ಪ್ರಮುಖ ಹೆದ್ದಾರಿ ಮತ್ತು ರಸ್ತೆಗಳನ್ನು ಸರ್ಕಾರ ನಿರ್ಮಿಸಿದೆ. ಇದರಿಂದ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಲು ಭದ್ರತಾ ಪಡೆಗಳಿಗೆ ನೆರವಾಗುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಸುಧಾರಣೆಗೆ ಈ ರಸ್ತೆಗಳು ಕಾರಣವಾಗಿವೆ

ಮಹಾರಾಷ್ಟ್ರ: ಮಹಾರಾಷ್ಟ್ರದ ಗಡ್‌ಚಿರೋಲಿ ಮತ್ತು ಗೊಂಡಿಯಾ ಜಿಲ್ಲೆಗಳಲ್ಲಿ ರಾಜ್ಯದ ನಕ್ಸಲ್ ಚಟುವಟಿಕೆಗಳು ಕೇಂದ್ರೀಕೃತವಾಗಿದ್ದವು. ನಕ್ಸಲರ ಪ್ರಭಾವನ್ನು ತಗ್ಗಿಸಲು ರಾಜ್ಯ ಸರ್ಕಾರವು ವಿಶೇಷ ಪಡೆಗಳ ಮೂಲಕ ಸಶಸ್ತ್ರ ಕಾರ್ಯಾಚರಣೆಯನ್ನೂ ನಡೆಸಿತು.

ಆಂಧ್ರ ಪ್ರದೇಶ–ತೆಲಂಗಾಣ: ಅವಿಭಜಿತ ಆಂಧ್ರ ಪ್ರದೇಶದ 20 ಜಿಲ್ಲೆಗಳಲ್ಲಿ (ಹೆಚ್ಚಿನ ಜಿಲ್ಲೆಗಳು ಈಗ ತೆಲಂಗಾಣದಲ್ಲಿವೆ) ನಕ್ಸಲರ ಪ್ರಭಾವವಿತ್ತು. 1990ರ ದಶಕದಿಂದಲೇ ಇಲ್ಲಿ ನಕ್ಸಲರ ಪ್ರಭಾವ ಹೆಚ್ಚುತ್ತಾ ಬಂದರೂ, 2003ರ ನಂತರ ನಕ್ಸಲರ ಪ್ರಾಬಲ್ಯ ಹೆಚ್ಚಾಯಿತು. ನಕ್ಸಲರ ಸಮಸ್ಯೆಯನ್ನು ಪರಿಹರಿಸಲು ಆಂಧ್ರಪ್ರದೇಶ ಸರ್ಕಾರವು ಒಂದೆಡೆ ಪೊಲೀಸ್ ಬಲವನ್ನು ಪ್ರಯೋಗಿಸಿತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ಹೊಂದಿರುವ ವಿಶೇಷ ಪಡೆಯು ನಕ್ಸಲರ ವಿರುದ್ಧ ಕಾರ್ಯಾಚರಣೆಗೆ ಇಳಿಯಿತು. ಮತ್ತೊಂದೆಡೆ ರಾಜ್ಯ ಸರ್ಕಾರವು ನಕ್ಸಲ್ ಪ್ರಭಾವವಿರುವ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಿತು. 

ಕರ್ನಾಟಕ: ಕರ್ನಾಟಕದಲ್ಲಿಯೂ ನಕ್ಸಲರ ಚಟುವಟಿಕೆ 2000ದ ನಂತರದ ವರ್ಷಗಳಲ್ಲಿ ತೀವ್ರ ಸ್ವರೂಪ ಪಡೆದಿತ್ತು. ಕುದುರೆಮುಖ ಅರಣ್ಯವಾಸಿಗಳನ್ನು ಒಕ್ಕಲೆ ಬ್ಬಿಸುವುದರ ವಿರುದ್ಧ ಹೋರಾಟಕ್ಕೆ ಇಳಿದ ಕಾರಣ, ನಕ್ಸಲರಿಗೆ ಬೆಂಬಲ ಹೆಚ್ಚಾಗಿತ್ತು. ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಮೈಸೂರು  ಜಿಲ್ಲೆಗಳಲ್ಲಿ ನಕ್ಸಲರ ಚಟುವಟಿಕೆ ವಿಸ್ತರಿಸಿತ್ತು. 2005ರಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ನಕ್ಸಲ್ ನಾಯಕ ಸಾಕೇತ್‌ ರಾಜನ್‌ ಹತ್ಯೆಯ ನಂತರ ರಾಜ್ಯದಲ್ಲಿ ನಕ್ಸಲರ ಚಟುವಟಿಕೆ ಕಡಿಮೆಯಾಯಿತು

ಕೇರಳ: ವಯನಾಡಿನ ಕೆಲವೆಡೆ ನಕ್ಸಲರ ಚಟುವಟಿಕೆಗಳು ಇವೆ

ಕರ್ನಾಟಕ ಚಟುವಟಿಕೆ ಸ್ತಬ್ಧ

ನಕ್ಸಲರು ನಡೆದಾಡಿದ ಪಶ್ಚಿಮಘಟ್ಟದ ಹಳ್ಳಿಗಳಲ್ಲಿ ಈಗ ಗುಂಡಿನ ಸದ್ದು ಮೊರೆಯುತ್ತಿಲ್ಲ, ಪೊಲೀಸರ ಬೂಟಿನ ಸಪ್ಪಳವೂ ಕೇಳುತ್ತಿಲ್ಲ. ‘ನಕ್ಸಲ್ ಪೀಡಿತ’ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕುಗ್ರಾಮಗಳಲ್ಲಿ ನಕ್ಸಲರ ಭಯದ ಬದಲಾಗಿ ಅಲ್ಲಿನ ಗ್ರಾಮಸ್ತರು ಅಭಿವೃದ್ಧಿಗೆ ಹಾತೊರೆಯುತ್ತಿದ್ದಾರೆ. ಆದರೆ, ಗ್ರಾಮಸ್ತರ ಗೋಳು ಅರಣ್ಯರೋದನವಾಗಿದೆ.

‘ವನ್ಯಜೀವಿ ಹಾಗೂ ಅರಣ್ಯ ಕಾನೂನುಗಳು ಅಭಿವೃದ್ಧಿಗೆ ತೊಡಕಾಗಿವೆ. ಬೆರಳೆಣಿಕೆ ಮತದಾರರು ಎಂಬ ಕಾರಣಕ್ಕೆ ರಾಜಕೀಯ ನಾಯಕರಿಗೂ ನಕ್ಸಲ್ ಪೀಡಿತ ಗ್ರಾಮಗಳ ಅಭಿವೃದ್ಧಿ ಆದ್ಯತೆಯ ವಿಷಯವಾಗಿ ಕಾಣುತ್ತಿಲ್ಲ’ ಎಂದು ಗ್ರಾಮಸ್ತರು ಹೇಳುತ್ತಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿ, ಕಾರ್ಕಳ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸದ ಸುತ್ತಮುತ್ತಲಿನ ಹಲವು ಗ್ರಾಮಗಳು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ನರಳುತ್ತಿವೆ.

ಕೇರಳದತ್ತ ನಕ್ಸಲರು: ದಶಕಗಳ ಹಿಂದೆ, ಕರಪತ್ರ ಹಾಗೂ ಬ್ಯಾನರ್‌ಗಳನ್ನು ಕಟ್ಟಿ ಇರುವಿಕೆಯನ್ನು ಗುರುತಿಸಿಕೊಳ್ಳುತ್ತಿದ್ದ, ಆತಂಕ ಸೃಷ್ಟಿಸುತ್ತಿದ್ದ ನಕ್ಸಲರ ಸದ್ದು ಈಗ ಕೇಳುತ್ತಿಲ್ಲ. ಕರ್ನಾಟಕ ಸುರಕ್ಷಿತವಲ್ಲ ‌ಎಂಬ ಕಾರಣಕ್ಕೆ ನಕ್ಸಲರು ಕೇರಳಕ್ಕೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ಪತ್ತೆಯಾಗಿಲ್ಲ. ನಕ್ಸಲ್ ನಿಗ್ರಹದಳದ 14 ಕ್ಯಾಂಪ್‌ಗಳು ಪ್ರತಿದಿನ ಅರಣ್ಯ ಪ್ರದೇಶಗಳಲ್ಲಿ ಶೋಧ ನಡೆಸುತ್ತಿವೆ ಎಂದು ನಕ್ಸಲ್ ನಿಗ್ರಹಪಡೆಯ ಎಸ್‌ಪಿ ಪ್ರಕಾಶ್ ನಿಕ್ಕಂ ಮಾಹಿತಿ ನೀಡುತ್ತಾರೆ.

ಹೋರಾಟದ ಆರಂಭ

ಪಶ್ಚಿಮ ಬಂಗಾಳದ ‘ನಕ್ಸಲ್‌ಬಾರಿ’ ಎಂಬ ಪಟ್ಟಣದಲ್ಲಿ ಬುಡಕಟ್ಟು ಜನಾಂಗದ ಕೃಷಿ ಕಾರ್ಮಿಕರು 1967ರಲ್ಲಿ ಭೂಮಾಲೀಕರ ವಿರುದ್ಧ ಬಂಡಾಯವೆದ್ದರು. ಈ ಬಂಡಾಯವನ್ನು ಹತ್ತಿಕ್ಕಲಾಯಿತು. ಈ ಬೆಳವಣಿಗೆಯು ಕಮ್ಯುನಿಸ್ಟರ ಹಲವು ಗುಂಪುಗಳ ಗಮನ ಸೆಳೆಯಿತು. 

‘ಕಮ್ಯುನಿಸ್ಟ್‌ ಪಕ್ಷ’ದ ನಾಯಕ ಚಾರು ಮಜುಂದಾರ್‌ ನೇತೃತ್ವದ ಗುಂಪು ನಕ್ಸಲ್‌ಬಾರಿಗೆ ಬಂದು ಹಿಂಸಾತ್ಮಕ ಹೋರಾಟ ನಡೆಸಿತು. ಬಳಿಕ ಚಾರು ಮಜುಂದಾರ್‌ನನ್ನು ಪೊಲೀಸರು ಬಂಧಿಸಿ ಹತ್ಯೆಗೈದರು. 

‘ನಕ್ಸಲ್‌ಬಾರಿ’ಯಲ್ಲಿ ನಡೆದ ಈ ಹೋರಾಟದ ಮಾದರಿಯಲ್ಲೇ ಹಲವು ಕಮ್ಯುನಿಸ್ಟ್‌ ಗುಂಪುಗಳು ಹೋರಾಟ ನಡೆಸಿಲು ಆರಂಭಿಸಿದವು. ಈ ಹೋರಾಟದ ಮಾದರಿಗೆ ‘ನಕ್ಸಲ್ ಹೋರಾಟ’ ಮತ್ತು ಹೋರಾಟಗಾರನ್ನು ‘ನಕ್ಸಲರು’ ಎಂದು ಕರೆಯಲಾಯಿತು. 

1969ರಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯ–ಮಾರ್ಕ್ಸಿಸ್ಟ್‌–ಲೆನಿನಿಸ್ಟ್‌ (ಸಿಪಿಐ–ಎಂಎಲ್‌) ಪಕ್ಷದ ಉದಯಕ್ಕೆ ಈ ಹೋರಾಟವು ಕಾರಣವಾಯಿತು. 

ಅಲ್ಲಿಂದ ಮುಂದಕ್ಕೆ ನಕ್ಸಲ್‌ ಹೋರಾಟ ಗೆರಿಲ್ಲಾ ಮಾದರಿ ಹೋರಾಟವನ್ನು ಅಳವಡಿಸಿಕೊಂಡು ಭೂಮಾಲೀಕರು, ಉದ್ಯಮಿಗಳು, ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಹೋರಾಟದಲ್ಲಿ ತೊಡಗಿತು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಕ್ಸಲ್‌ ಗುಂಪುಗಳಿಗೆ ‘ಉಗ್ರ ಸಂಘಟನೆ’ಗಳು ಎಂದು ಹಣೆಪಟ್ಟಿ ನೀಡಿದವು. 

ಆಧಾರ: ಕೇಂದ್ರ ಗೃಹ ಸಚಿವಾಲಯದ ವರದಿಗಳು ಮತ್ತು ಅಧಿಸೂಚನೆಗಳು, ಪಿಟಿಐ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು