ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗಷ್ಟೇ ಸ್ವಚ್ಛ ನಗರಿ: ಸುತ್ತಲೂ ಕಸದ ರಾಶಿ

ಚಾಮುಂಡಿ ಬೆಟ್ಟದೆತ್ತರಕ್ಕೆ ಬೆಳೆದು ನಿಂತ ತ್ಯಾಜ್ಯದ ಗುಡ್ಡ!
Last Updated 23 ಜನವರಿ 2021, 19:50 IST
ಅಕ್ಷರ ಗಾತ್ರ

ಮೈಸೂರು: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಕೂಡ ಸ್ಥಾನ ಪಡೆದಿದೆ. ಜೊತೆಗೇ, ಕಸದ ರಾಶಿಗಳುಚಾಮುಂಡಿ ಬೆಟ್ಟಕ್ಕೆ ಸರಿಸಮಾನವಾಗಿ ಬೆಳೆದು ನಿಂತಿವೆ ಎಂಬ ತಮಾಷೆ ಮಾತುಗಳೂ ಹುಟ್ಟಿಕೊಂಡಿವೆ.

ರಿಂಗ್‌ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ರಾಶಿರಾಶಿ ಕಸ ಮತ್ತುವಿದ್ಯಾರಣ್ಯಪುರಂನ‌ ಘಟಕದಲ್ಲಿ ಸಂಗ್ರಹವಾಗಿರುವ ಏಳು ಲಕ್ಷ ಟನ್ ಕಸದ ಗುಡ್ಡ ನೋಡಿದರೆ ಆ ಮಾತು ಬರೀ ತಮಾಷೆ ಎನಿಸದಿರದು. ವಿದ್ಯಾರಣ್ಯಪುರಂ ಕಸದ ರಾಶಿ, ಅಲ್ಲಿಂದ ಹೊರಡುವ ದುರ್ವಾಸನೆ ಜೆತೆಗೆ ಹರಡುವ ರೋಗಗಳಿಂದ ಮೈಸೂರಿನ ಸ್ಥಿತಿ ‘ಮೇಲೆಲ್ಲ ಹೊಳಪು, ಒಳಗೆಲ್ಲ ಹುಳುಕು’ ಎಂಬಂತಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 450 ಟನ್‌ ಕಸ ಉತ್ಪತ್ತಿಯಾಗುತ್ತಿದ್ದು, 200 ಟನ್‌ ಕಸ ವಿದ್ಯಾರಣ್ಯಪುರಂನ ಎಕ್ಸೆಲ್ ತ್ಯಾಜ್ಯ‌ ಘಟಕ ಸೇರುತ್ತಿದೆ. ಇನ್ನುಳಿದ 250 ಟನ್‌ ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ. ಅದನ್ನು ಕದ್ದುಮುಚ್ಚಿ ಸುರಿಯಲಾಗುತ್ತಿದೆ.

ಕೆಸರೆ ಹಾಗೂ ರಾಯನಕೆರೆಯಲ್ಲಿತ್ಯಾಜ್ಯ ಸಂಸ್ಕರಣಾ ಘಟಕದ ಟೆಂಡರ್‌ ಮುಗಿದಿದ್ದು, ಕಾಮಗಾರಿ ಆರಂಭವಾಗಬೇಕಿದೆ. ಈ ಎರಡೂ ಘಟಕ ಶುರುವಾದರೆ 250 ಟನ್‌ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರೆಯಲಿದೆ.

ವೈಜ್ಞಾನಿಕವಾಗಿಕಸ ವಿಂಗಡಣೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ಒಂಬತ್ತು ‘ಶೂನ್ಯ ತ್ಯಾಜ್ಯ’ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದ್ದು, ಹೆಚ್ಚಿನವು ಕಾರ್ಯ ನಿರ್ವಹಿಸುತ್ತಿಲ್ಲ.ಕಸದಿಂದ ವಿದ್ಯುತ್‌ ಮತ್ತು ಗೊಬ್ಬರ ಉತ್ಪಾದನೆ ಕೇವಲ ಘೋಷಣೆಯಾಗಿ ಉಳಿದಿವೆ. ಚಾಮರಾಜನಗರ ಮತ್ತು ಯಳಂದೂರಿನಲ್ಲಿ ಎರೆಹುಳು ಗೊಬ್ಬರ ತಯಾರಿಸಲು ಆರಂಭವಾದ ಸಣ್ಣ ಪ್ರಯತ್ನಕ್ಕೆಕೋವಿಡ್‌ ಕೊನೆ ಹಾಡಿತು.

ಗುಡ್ಡಕ್ಕೂ ಕಸ: ಮಡಿಕೇರಿಯಲ್ಲಿ ವರ್ಷಗಳಿಂದ ಸ್ಟೋನ್‌ಹಿಲ್‌‌ ಮೇಲೆ ಕಸ ಸುರಿಯಲಾಗುತ್ತಿದ್ದು, ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ನಗರದ ಹೊರಭಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಲು 10 ಎಕರೆ ಜಾಗ ಗುರುತಿಸಲಾಗಿದ್ದು, ಅದಿನ್ನೂ ಕಾರ್ಯಗತವಾಗಿಲ್ಲ.

ವಿದೇಶಿಯರ ಗಮನ ಸೆಳೆದ ಮಾದರಿ ಘಟಕ

ಕುಂಬಾರಕೊಪ್ಪಲು ಬಡಾವಣೆಯಲ್ಲಿ ಪಾಲಿಕೆ ಸಹಯೋಗದಲ್ಲಿ ಸ್ಥಾಪಿಸಿರುವ ‘ಶೂನ್ಯ ತ್ಯಾಜ್ಯ’ ವಿಲೇವಾರಿ ಘಟಕ ಮಾದರಿಯಾಗಿದ್ದು, ಹಲವಾರು ಪ್ರಶಸ್ತಿಗಳೂ ಸಂದಿವೆ.

ವಿದೇಶಿಯರು ಸೇರಿದಂತೆ ಅನ್ಯ ರಾಜ್ಯಗಳ ಅಧಿಕಾರಿಗಳೂ ಅಧ್ಯಯನಕ್ಕಾಗಿ ಭೇಟಿ ನೀಡಿದ ಹೆಗ್ಗಳಿಕೆ ಈ ಘಟಕದ್ದು. ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಕಸ ವಿಂಗಡಣೆ ಮೊದಲಿಗೆ ಇಲ್ಲಿ ಆರಂಭವಾಯಿತು. ರೈತರಿಗೆ ಉಚಿತವಾಗಿ ಹಸಿ ಕಸದ ಗೊಬ್ಬರ ನೀಡಿದರೆ, ಒಣಕಸ ಮಾರಾಟ ಮಾಡಲಾಗುತ್ತಿದೆ.

ಕಸದಿಂದ ಸಾವಯವ ಗೊಬ್ಬರ

ಹಾಸನ: ಬೇಲೂರು ಬಳಿ ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ, ಮೂರು ಹಂತದಲ್ಲಿ ಸಂಸ್ಕರಿಸಿ, ಸಾವಯವ ಗೊಬ್ಬರ ತಯಾರಿಸಲಾಗುತ್ತದೆ.

ಸ್ಥಳೀಯರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರಷ್ಟೇ ಅಲ್ಲ, ಮನೆಯ ಕೈತೋಟಕ್ಕೆ ಈ ಗೊಬ್ಬರ ಉಪಯೋಗವಾಗುತ್ತಿದೆ.

‘ಮನೆ, ಹೋಟೆಲ್‌, ಅಂಗಡಿಗಳಿಂದ ಸಂಗ್ರಹಿಸಿದ ಕಸದಿಂದ ಸಾವಯವ ಗೊಬ್ಬರ ತಯಾರಿಸಿ, ಪ್ರತಿ ಕೆ.ಜಿ. ಗೆ ₹ 5 ರಂತೆ ಮಾರಾಟ ಮಾಡಲಾಗುತ್ತಿದೆ. ಈಗಾಗಲೇ ₹ 25 ಸಾವಿರದಷ್ಟು ಮೌಲ್ಯದ ಗೊಬ್ಬರ ಮಾರಾಟ ಮಾಡಲಾಗಿದೆ’ ಎಂದು ಬೇಲೂರು ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌ ಹೇಳುತ್ತಾರೆ.

ಹಾಸನ ಹೊರವಲಯದ ಅಗಿಲೆ ತ್ಯಾಜ್ಯ ವಿಲೇವಾರಿ ಘಟಕದ ಯಂತ್ರೋಪಕರಣ ಕೆಲಸ ಮಾಡದೆ ತುಕ್ಕು ಹಿಡಿದಿವೆ. ನಗರದಲ್ಲಿ ನಿತ್ಯ ಸಂಗ್ರಹವಾಗುತ್ತಿರುವ 100 ಟನ್‌ ತ್ಯಾಜ್ಯವನ್ನು 22 ಎಕರೆ ಪ್ರದೇಶದ ಅಗಿಲೆ ನೆಲಭರ್ತಿ ಘಟಕಕ್ಕೆ ತಂದು ಸುರಿಯುತ್ತಾರೆ. ಕಸ ನಿರ್ವಹಣೆ ಸರಿಯಾಗಿಲ್ಲದೆ ಸುತ್ತಮುತ್ತ ದುರ್ವಾಸನೆ ಹರಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT