ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಸಂಘರ್ಷ ಸಾಕು; ಸಂರಕ್ಷಣೆ ಬೇಕು

ಕಾಡಿನ ಒತ್ತುವರಿಗೆ ನಲುಗಿದ ವನ್ಯಜೀವಿಗಳು
Last Updated 5 ಫೆಬ್ರುವರಿ 2023, 11:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಗುಣಮಟ್ಟ ಕಳೆದುಕೊಂಡಿರುವ ಅರಣ್ಯಗಳು ಹಾಗೂ ಛಿದ್ರಗೊಂಡಿರುವ ಪ್ರಾಣಿಗಳ ನೆಲೆಗಳಿಂದ ಮಾನವ–ವನ್ಯಜೀವಿಗಳ ನಡುವೆ ಸಂಘರ್ಷ ತಾರಕಕ್ಕೇರಿದೆ. ಮುಂದಿನ ಪೀಳಿಗೆಗೂ ಹುಲಿ, ಚಿರತೆ, ಆನೆ, ಕರಡಿಯಂತಹ ಪ್ರಾಣಿಗಳನ್ನು ಉಳಿಸುವ ಬದಲು ಅವುಗಳ ಬಗ್ಗೆ ಅಪನಂಬಿಕೆ, ಭಯ ಹುಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಆಳುವವರು ತಳೆದಿರುವ ಕುರುಡು ಧೋರಣೆಯೇ ಕಾರಣ.

ಕಾಡು ಉಸಿರಾಡಲು ಅದಕ್ಕೆ ಮತ್ತಷ್ಟು ಜಾಗ ಬೇಕು. ಇದಕ್ಕಾಗಿ ಕಾಡಂಚಿನ ಕುರುಚಲು ಪ್ರದೇಶ, ಕಂದಾಯ ಜಮೀನನ್ನು ಕಾಪು ವಲಯಗಳನ್ನಾಗಿ(ಬಫರ್‌ ಜೋನ್‌) ಪರಿವರ್ತಿಸಬೇಕು. ಒತ್ತುವರಿ ಜಮೀನಿನ ತೆರವೂ ನಡೆಯಬೇಕು. ಆದರೆ, ಈ ಕುರಿತು ರಾಜ್ಯ ಸರ್ಕಾರದ್ದು ದ್ವಂದ್ವ ನೀತಿ. ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕಾಡಂಚಿನಲ್ಲಿ ಒತ್ತುವರಿಯಾಗಿರುವ ಸುಮಾರು 90 ಸಾವಿರ ಎಕರೆ ಕಂದಾಯ ಜಮೀನನ್ನು ಒತ್ತುವರಿದಾರರಿಗೆ 30 ವರ್ಷ ಗುತ್ತಿಗೆ ನೀಡಲು ಹೊರಟಿರುವ ಕಂದಾಯ ಸಚಿವ
ಆರ್‌.ಅಶೋಕ ಧೋರಣೆಯೂ ಇದಕ್ಕೊಂದು ತಾಜಾ ನಿದರ್ಶನ.

1978ರ ಏಪ್ರಿಲ್‌ 27ರಂದು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದನ್ವಯ ಹೆಚ್ಚುವರಿ ಅರಣ್ಯ ಭೂಮಿಯ ಒತ್ತುವರಿಗೆ ಅವಕಾಶವಿಲ್ಲ. ರಾಜ್ಯದಲ್ಲಿ ಈ ಆದೇಶದ ಬಳಿಕವೂ 3 ಎಕರೆಗಿಂತ(ಒತ್ತುವರಿ ಮತ್ತು ಪಟ್ಟಾ ಭೂಮಿ ಸೇರಿ) ಕಡಿಮೆ ಒತ್ತುವರಿ ಮಾಡಿಕೊಂಡಿರುವ 86,352 ಪ್ರಕರಣಗಳಿದ್ದು, ಒಟ್ಟು 1,15,089.26 ಎಕರೆ ಒತ್ತುವರಿಯಾಗಿದೆ.

‘ಈ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು. ಅವರಿಗೆ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಪ್ಯಾಕೇಜ್‌ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು,
ಪಿಸಿಸಿಎಫ್‌(ಅರಣ್ಯ ಪಡೆ)ಗೆ ಪತ್ರ ಬರೆದಿದ್ದಾರೆ.

ಈ ಪತ್ರಕ್ಕೆ ಉತ್ತರಿಸಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ) ಅವರು, ‘ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ 2017ರಲ್ಲಿಯೇ ಒಂದು ಬಾರಿ ಆರ್ಥಿಕ ಪುನರ್ವಸತಿ ಪ್ಯಾಕೇಜ್‌ ನೀಡಲಾಗಿದೆ.

ಮತ್ತೆ ವಿಶೇಷ ಭೂ ಪುನರ್ವಸತಿ ಪ್ಯಾಕೇಜ್‌ ಪರಿಗಣಿಸಿದರೆ ₹ 12,952.80 ಕೋಟಿ ಬೇಕಿದೆ. ಬದಲಿಗೆ ಪರ್ಯಾಯ ಜಮೀನು ಒದಗಿಸಬೇಕಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಆದರೆ, ಇಲಾಖೆಯಲ್ಲಿ ಪರ್ಯಾಯ ಜಮೀನು ಮತ್ತು ಅನುದಾನವಿಲ್ಲ. ಪುನರ್ವಸತಿ ಮತ್ತು ಪುನರ್‌ ಪ್ಯಾಕೇಜ್‌ ಕಲ್ಪಿಸಲು ಸೂಕ್ತ ಪ್ರಾಧಿಕಾರ ರಚಿಸಬೇಕು. ಆಗಷ್ಟೇ ಅತಿಕ್ರಮಿಸಿರುವ ಅರಣ್ಯ ಭೂಮಿ ಮೇಲೆ ಕ್ರಮಕೈಗೊಳ್ಳಲು ಇಲಾಖೆಗೆ ಅನುಕೂಲವಾಗುತ್ತದೆ’ ಎಂದು ಕೋರಿದ್ದು, ಒತ್ತುವರಿ ತೆರವು ಕಾರ್ಯ ನನೆಗುದಿಗೆ ಬಿದ್ದಿದೆ.

ವನ್ಯಜೀವಿ ಸಂರಕ್ಷಣಾ ನಿಯಮಗಳ ‍ಪರಿಣಾಮಕಾರಿ ಜಾರಿಯಿಂದ ಕಾಡು ಪ್ರಾಣಿಗಳ ಸಂತತಿ ವೃದ್ಧಿಸಿದೆ. ಆದರೆ, ಇದಕ್ಕೆ ಪೂರಕವಾಗಿ ಕಾಡಂಚಿನ ಅನುಪಯುಕ್ತ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಕಾಡು ವಿಸ್ತರಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ವನ್ಯಜೀವಿಗಳಿಗೆ ಮೀಸಲಿಟ್ಟ ಕಾಡುಗಳೂ ಸುಸ್ಥಿತಿಯಲ್ಲಿಲ್ಲ. ಇದು ಸಂಘರ್ಷವನ್ನು ಉಲ್ಬಣಗೊಳಿಸಿದೆ.

ನಾಗರಹೊಳೆ, ಬಂಡೀಪುರದ ಸುತ್ತಮುತ್ತ ಹುಲಿ ಸಂಘರ್ಷ ಹೆಚ್ಚಿದೆ. ಇಲ್ಲಿ ಅವುಗಳ ಸಂಖ್ಯೆ ಆ ಪ್ರದೇಶಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ. ಹಾಗಾಗಿ, ಹುಲಿಗಳು ನಾಗರಹೊಳೆಯ ಉತ್ತರಕ್ಕೆ ಮತ್ತು ಪಶ್ಚಿಮಕ್ಕಿರುವ ಕಾಫಿ ತೋಟಗಳಲ್ಲಿಯೂ ಜೀವಿಸಲು ಮತ್ತು ಬೇಟೆಯಾಡಲು ಪ್ರಾರಂಭಿಸಿವೆ. ಹಾಗಾಗಿಯೇ, ಕೊಡಗಿನಲ್ಲಿ ಜಾನುವಾರುಗಳ ಹತ್ಯೆ ನಿರಂತರವಾಗಿದೆ.

ಹಾಗೆಯೇ ನಾಗರಹೊಳೆಯ ಪೂರ್ವ ಮತ್ತು ಬಂಡೀಪುರದ ಉತ್ತರಕ್ಕಿರುವ ಒಣಭೂಮಿಗಳಲ್ಲೂ ಆಗಾಗ್ಗೆ ಕಾಣಿಸಿಕೊಳ್ಳುತ್ತಿವೆ. ಅಲ್ಲಿ ಸಾಮಾನ್ಯವಾಗಿ ವಯಸ್ಸಾಗಿರುವ, ಗಾಯಗೊಂಡಿರುವ ಅಥವಾ ತಮ್ಮ ವ್ಯಾಪ್ತಿಯನ್ನು ಇತರೆ ಪ್ರಾಯದ ಹುಲಿಗಳಿಗೆ ಕಳೆದುಕೊಂಡಿ ರುವ ವ್ಯಾಘ್ರಗಳು ಕಂಡುಬರುತ್ತವೆ. ಬಿಆರ್‌ಟಿ ವ್ಯಾಪ್ತಿಯ ಹುಲಿಗಳದ್ದೂ ಇದೇ ಸ್ಥಿತಿ. ಭದ್ರಾ ಹಾಗೂ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಬಲಿಪ್ರಾಣಿಗಳ ಸಾಂದ್ರತೆ ಕಡಿಮೆಯಿದೆ. ಆಹಾರ ಹುಡುಕಿಕೊಂಡು ಹೊರಬರುವ ಹುಲಿಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಕಾಳಿ ಸಂರಕ್ಷಿತ ಪ್ರದೇಶದೊಳಗೆ ಜನವಸತಿ ಇದ್ದು, ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ವಿದೇಶಿ ಕಳೆ ಸಸ್ಯಗಳ ಹಾವಳಿ: ಅರಣ್ಯದ ಗಿರಿಕಂದರ, ಇಳಿಜಾರು ಪ್ರದೇಶದಲ್ಲಿ ಬೆಳೆಯುವ ಹುಲ್ಲು ಬಹುತೇಕ ಪ್ರಾಣಿಗಳಿಗೆ ಆಹಾರದ ಮೂಲ. ಕಾಡಾನೆಗಳಿಗೆ ಹುಲ್ಲು, ಬಿದಿರು ಮುಖ್ಯ ಆಹಾರ. ಆದರೆ ಹುಲಿ ರಕ್ಷಿತಾರಣ್ಯಗಳು, ವನ್ಯಜೀವಿಧಾಮ ಗಳಲ್ಲಿ ಪೊದೆ ಸಸ್ಯವಾದ ಲಂಟಾನಾ ಶೇ 50ರಷ್ಟು ಹಬ್ಬಿದೆ. ಇದರಿಂದ ಕಾಡಿನ ಸಸ್ಯ ಸಂಯೋಜನೆ ಪಲ್ಲಟಗೊಂಡಿದೆ.

ಲಂಟಾನಾದ ಸಸ್ಯಕ್ಷಾರ ಗುಣ ಹುಲ್ಲಿನ ಬೆಳವಣಿಗೆಗೆ ಮಾರಕ. ಇದು ತನ್ನ ಪ್ರಭುತ್ವ ವಿಸ್ತರಿಸಲು ‘ಟಾನಿಸ್‌’ ಹಾಗೂ ‘ಫಿನಾಲಿಕ್‌’ ಎಂಬ ರಾಸಾಯನಿಕವನ್ನೂ ಸ್ರವಿಸುತ್ತದೆ. ಈ ಪರದೇಶಿ ಕಳೆ ವಿರುದ್ಧ ಸ್ಥಳೀಯ ಸಸ್ಯಗಳಿಗೆ ಸ್ಪರ್ಧಿಸುವುದಿರಲಿ, ಕಾದಾಟ ನಡೆಸುವುದೂ ತಿಳಿದಿಲ್ಲ. ನಿತ್ರಾಣಗೊಂಡ ಅವು ತಮ್ಮ ಅಸ್ತಿತ್ವವನ್ನು ಬಿಟ್ಟುಕೊಡುತ್ತಿವೆ. ಇದು ಸಸ್ಯಗಳನ್ನು ಅವಲಂಬಿಸಿರುವ ಪ್ರಾಣಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಆನೆಯಂತಹ ದೈತ್ಯಪ್ರಾಣಿಯ ಆಹಾರ ಕ್ರಮದಲ್ಲೂ ಏರುಪೇರಾಗಿದೆ. ಹಾಗಾಗಿಯೇ, ಅರಣ್ಯದಲ್ಲಿ ಮೇವಿನ ಕೊರತೆಯಿಂದ ಕಾಡಾನೆಗಳು ರೈತರ ಹೊಲಗಳತ್ತ ಲಗ್ಗೆ ಇಡುತ್ತಿವೆ.

ವಿವಿಧ ಬಳ್ಳಿಗಳು, ಗಿಡಮೂಲಿಕೆಗಳು, ಹುಲ್ಲು ಅವಲಂಬಿಸಿ ಜೀವಿಸುವ ಮೊಲ, ಜಿಂಕೆ, ಕಡವೆ, ಕರಡಿಗಳ ಆಹಾರದ ಮೂಲಕ್ಕೆ ಲಂಟಾನಾ, ಕರಿಕಡ್ಡಿ (ಯುಪಟೋರಿಯಾ), ಸೆನ್ನಾ ಸ್ಪೆಕ್ಟಾಬಿಲಿಸ್‌ ಕಳೆ ಸಸ್ಯಗಳು ‍ಪೆಟ್ಟು ನೀಡಿವೆ. ಇದರಿಂದ ಅರಣ್ಯದಲ್ಲಿ ಬಲಿಪ್ರಾಣಿಗಳ ಸಾಂದ್ರತೆ ಕಡಿಮೆಯಾಗುತ್ತಿದೆ. ಇವುಗಳನ್ನು ತಿಂದು ಬದುಕುವ ಹುಲಿ, ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳ ಆಹಾರದ ಸರಪಳಿ ತುಂಡಾಗಿದೆ. ಮತ್ತೊಂಡೆದೆ ಕಾಡಂಚಿನ ಗ್ರಾಮಗಳಲ್ಲಿ ಕಳ್ಳಬೇಟೆಗೆ ಕಡಿವಾಣ ಬಿದ್ದಿಲ್ಲ.

‘ಪ್ರಾಣಿಗಳಿಗೆ ಕಾಡಿನಲ್ಲಿಯೇ ಮೇವಿಗೆ ಕೊರತೆಯಾಗದಂತೆ ಸರ್ಕಾರ ವ್ಯವಸ್ಥೆ ರೂಪಿಸಬೇಕು’ ಎಂದು ಒತ್ತಾಯಿಸುತ್ತಾರೆ ರಾಮನಗರದ ರೈತ ಸಿ. ಪುಟ್ಟಸ್ವಾಮಿ.

ಆನೆ ಕಾರಿಡಾರ್‌ ಅಸ್ತವ್ಯಸ್ತ: ಕಾಡುಪ್ರಾಣಿಗಳ ನಡುವಿನ ಸಂಘರ್ಷ ತಡೆಗಟ್ಟುವಲ್ಲಿ ಆನೆ ಮೊಗಸಾಲೆ(ಕಾರಿಡಾರ್‌)ಗಳದ್ದು ನಿರ್ಣಾಯಕ ಪಾತ್ರ. ವನ್ಯಜೀವಿಗಳ ಸಂತಾನಾಭಿವೃದ್ಧಿ, ಛಿದ್ರಗೊಂಡಿರುವ ಅವುಗಳ ನೆಲೆ ಒಗ್ಗೂಡಿಸಲು ಇವುಗಳ ಪಾತ್ರ ಹಿರಿದು. ಆದರೆ, ಬಹುತೇಕ ಕಾರಿಡಾರ್‌ಗಳು ಅಭಿವೃದ್ಧಿ ಹೆಸರಿನಲ್ಲಿ ಗುಣಮಟ್ಟ ಕಳೆದುಕೊಂಡಿವೆ.

ರಾಜ್ಯದಲ್ಲಿ ಕರಡಿಕಲ್‌–ಮಹದೇಶ್ವರ, ಥಳೀ (ತಮಿಳುನಾಡು–ಕರ್ನಾಟಕದ ನಡುವೆ ಸಂಪರ್ಕ), ಎಡೆಯರಹಳ್ಳಿ–ದೊಡ್ಡಸಂಪಿಗೆ, ಚಾಮರಾಜನಗರ–ತಲಮಲೈ (ಪರ್ಯಾಯ ಹೆಸರು: ಪುಣಜನೂರು–ಕೋಳಿಪಾಳ್ಯ), ಚಾಮರಾಜನಗರ–ತಲಮಲೈ–ಮೂಡಳ್ಳಿ (ಪರ್ಯಾಯ ಹೆಸರು: ತಲಮಲೈ–ಮೂಡಳ್ಳಿ) ಹಾಗೂ ಕಣಿಯನಪುರ ಪರಿಸರವನ್ನು ಆನೆ ಮೊಗಸಾಲೆ ಎಂದು ಗುರುತಿಸಲಾಗಿದೆ. ಕಾಡಾನೆಗಳಷ್ಟೇ ಈ ಪಥಗಳನ್ನು ಬಳಸುವುದಿಲ್ಲ. ಹುಲಿ, ಚಿರತೆ, ಕರಡಿ, ಜಿಂಕೆ, ಕಾಟಿ, ಸೀಳುನಾಯಿಗಳೂ ಬಳಸುತ್ತವೆ.

ಋತುಮಾನಕ್ಕೆ ಅನುಗುಣವಾಗಿ ಪ್ರಾಣಿಗಳು ನೀರು, ನೆರಳು, ಆಹಾರಕ್ಕಾಗಿ ಕಾಡಿನಿಂದ ಕಾಡಿಗೆ ಸಂಚರಿಸಲು ಇವು ಮಹತ್ವಪೂರ್ಣವಾಗಿವೆ. ಆದರೆ, ಬಹುತೇಕ ಕಡೆಯಲ್ಲಿ ಕಾರಿಡಾರ್‌ಗಳು ಕೃಷಿ ಭೂಮಿಯಾಗಿ ಪರಿವರ್ತನೆಗೊಂಡಿವೆ. ಕೆಲವೆಡೆ ಇವುಗಳ ಪಕ್ಕದಲ್ಲಿಯೇ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಪುಣಜನೂರು–ಕೋಳಿಪಾಳ್ಯ ಕಾರಿಡಾರ್‌ ಇದಕ್ಕೊಂದು ಉದಾಹರಣೆ.

ಅಕ್ಷಾಂಶ, ರೇಖಾಂಶಗಳನ್ನು ಬರೆದಂತೆ ಈ ಪಥಗಳಲ್ಲಿ ಹೆದ್ದಾರಿಗಳು ನಿರ್ಮಾಣವಾಗಿವೆ. ಅಕ್ರಮ ಕಲ್ಲುಕ್ವಾರಿ ಗಣಿಗಾರಿಕೆ ಎಲ್ಲೆ ಮೀರಿದೆ. ಕಾರಿಡಾರ್‌ ಬಳಿಯ ಹಳ್ಳಿಗಳಲ್ಲಿ ಜಾನುವಾರು ಸಾಕಾಣಿಕೆ, ಉರುವಲು, ಸೊಪ್ಪು ಸಂಗ್ರಹ ಮಿತಿಮೀರಿದೆ. ಮೊಗಸಾಲೆ ಬಳಿಗೆ ದನ–ಕರು, ಜನರು ತೆರಳಿದಾಗ ಪ್ರಾಣಿಗಳು ಮುಖಾಮುಖಿಯಾಗಿ ಸಂಘರ್ಷ ಏರ್ಪಡುವುದು ಸಹಜ. ಆದರೆ, ಹಿಂದಿನ ಸಾಲಿನ ರಾಜ್ಯ ಬಜೆಟ್‌ನಲ್ಲಿ ಕಾರಿಡಾರ್‌ಗಳನ್ನು ಬಲವರ್ಧನೆಗೊಳಿಸಲು ಘೋಷಿಸಿದ್ದ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಾವಳಿ ಉಲ್ಬಣಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ಆನೆಗಳ ದಾಳಿಗೆ 11 ಮಂದಿ ಸಾವಿಗೀಡಾಗಿರುವುದೇ ಇದಕ್ಕೆ ಸಾಕ್ಷಿ.

‘ಅರಣ್ಯದಂಚಿನ ಕೃಷಿ ಭೂಮಿಯಲ್ಲಿ ಆಗಿರುವ ಬೆಳೆ ಪರಿವರ್ತನೆಯೂ ಸಂಘರ್ಷಕ್ಕೆ ಕಾರಣವಾಗಿದೆ’ ಎನ್ನುತ್ತಾರೆ ನಾಗರಹೊಳೆ ಹುಲಿ ಯೋಜನೆಯ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ.

ಪುನರ್ವಸತಿ ಕೇಂದ್ರ ಭರ್ತಿ: ಜನರ ಒತ್ತಾಯಕ್ಕೆ ಚಿರತೆಗಳನ್ನು ಹಿಡಿದು ಬೇರೆಡೆ ತೆಗೆದುಕೊಂಡು ಹೋಗಿ ಬಿಡಲಾಗುತ್ತಿದೆ. ಇದು ಹೆಚ್ಚು ಸಂಘರ್ಷಕ್ಕೆ ಅನುವು ಮಾಡಿಕೊಟ್ಟಿದೆ. ಎಲ್ಲಾ ಚಿರತೆಗಳನ್ನು ಹಿಡಿಯುವುದು ಅನವಶ್ಯಕ. ಜನರಲ್ಲಿ ಅರಿವು ಮೂಡಿಸುವುದು ಬಹುಮುಖ್ಯ. ಇದಕ್ಕೆ ಸಾರ್ವಜನಿಕರು ಕೂಡ ಸಹಕರಿಸಬೇಕಿದೆ. ಆದರೆ, ಮಾನವ ಹತ್ಯೆ ಅಥವಾ ಜನರನ್ನು ಗಾಯಗೊಳಿಸುವ ಚಿರತೆಗಳನ್ನು ಹಿಡಿದರೆ ಅವುಗಳನ್ನು ಹಿಂದಿರುಗಿ ಬಿಡಬಾರದು. ಪುನರ್ವಸತಿ ಕೇಂದ್ರಗಳಲ್ಲಿಯೇ ಇಡಬೇಕು.

ರಾಜ್ಯದಲ್ಲಿ ಪ್ರತಿವರ್ಷ 100ರಿಂದ 150 ಚಿರತೆಗಳನ್ನು ಸೆರೆ ಹಿಡಿಯಲಾಗುತ್ತಿದೆ. ಅವುಗಳಿಗೆ ಸೂಕ್ತ ನೆಲೆ ಕಲ್ಪಿಸುವುದು ಅರಣ್ಯ ಇಲಾಖೆಗೆ ಸವಾಲಾಗಿದೆ. ವಯಸ್ಸಾದ, ತೀವ್ರ ಗಾಯಗೊಂಡ ಚಿರತೆಗಳಷ್ಟೇ ಬನ್ನೇರುಘಟ್ಟ ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗುತ್ತಿದೆ. ಉಳಿದವುಗಳನ್ನು ಬಂಡೀಪುರ, ಬಿಆರ್‌ಟಿ, ಮಲೆಮಹದೇಶ್ವರಬೆಟ್ಟ, ಕಾವೇರಿ ವನ್ಯಜೀವಿಧಾಮ, ನಾಗರಹೊಳೆ, ಕುದುರೆಮುಖ ಅರಣ್ಯಕ್ಕೆ ಬಿಡಲಾಗಿದೆ.

ಈಗಾಗಲೇ ಮೈಸೂರು, ಬನ್ನೇರುಘಟ್ಟದ ಪುನರ್ವಸತಿ ಕೇಂದ್ರಗಳು ಭರ್ತಿಯಾಗಿವೆ. ಹೊಸದಾಗಿ ಹಿಡಿಯುವ ಚಿರತೆಗಳಿಗೆ ನೆಲೆ ಇಲ್ಲದಾಗಿದೆ. ಹಾಗಾಗಿಯೇ, ಗುಜರಾತ್‌ ಮಾದರಿಯಲ್ಲಿ ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ ಅರಣ್ಯ ಇಲಾಖೆ ಮುಂದಾಗಿದೆ.

ಕರಡಿ ಹಾವಳಿ: ಹೊಸಪೇಟೆ(ವಿಜಯನಗರ) ಜಿಲ್ಲೆಯ ದರೋಜಿ ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ತಿಮ್ಲಾಪುರದಲ್ಲಿ ಕರಡಿಧಾಮಗಳಿವೆ. ಕಲ್ಲುಕ್ವಾರಿ ಗಣಿಗಾರಿಕೆ ಮೇಲೆ ನಿರ್ಬಂಧ ಹೇರಿ ವಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಿರುವುದರಿಂದ ದರೋಜಿಯಲ್ಲಿ ಕರಡಿ ಸಂಘರ್ಷ ಕಡಿಮೆಯಾಗಿದೆ.

ಆದರೆ, ತುಮಕೂರು ಜಿಲ್ಲೆಯ ಮಧುಗಿರಿ, ಕೊರಟಗೆರೆ, ಪಾವಗಡ, ಶಿರಾ ತಾಲ್ಲೂಕಿನ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ತಿಮ್ಲಾಪುರ ಕರಡಿಧಾಮ ಘೋಷಣೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಈವರೆಗೂ ಕರಡಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿಸಿಲ್ಲ. ಈ ಭಾಗದಲ್ಲಿ 160ಕ್ಕೂ ಹೆಚ್ಚು ಕರಡಿಗಳಿವೆ ಎಂದು ಅಂದಾಜಿಸಲಾಗಿದೆ. ಗುಣಮಟ್ಟ ಕಳೆದುಕೊಂಡಿರುವ ಕುರುಚಲು ಕಾಡುಗಳಲ್ಲಿ ವರ್ಷಪೂರ್ತಿ ಆಹಾರ ಸಿಗುತ್ತಿಲ್ಲ. ಹಾಗಾಗಿ, ಅವು ಗ್ರಾಮಗಳತ್ತ ಸುಳಿಯುತ್ತಿವೆ.

ರಾಜ್ಯದಲ್ಲಿ ಕಾಡುಪ್ರಾಣಿಗಳ ಉಳಿವು ಅವುಗಳ ಸಂಘರ್ಷ ತಡೆಗಟ್ಟುವುದರ ಮೇಲೆ ನಿಂತಿದೆ. ಆದರೆ, ಸಂಘರ್ಷ ತಡೆಗಟ್ಟುವುದು ಸುಲಭದ ಮಾತಲ್ಲ. ಸಿಬ್ಬಂದಿ ಕೊರತೆ ನೀಗಿಸಿ ಅರಣ್ಯ ಇಲಾಖೆಯಲ್ಲಿ ಸಂಘರ್ಷ ತಡೆಗಾಗಿಯೇ ಪ್ರತ್ಯೇಕ ವಿಭಾಗ ರಚಿಸುವ ತುರ್ತಿದೆ.

***

ಕಾಡು ವಿಸ್ತರಣೆಯೇ ಪರಿಹಾರ

ಕಾಡಂಚಿನವರೆಗೂ ಮಾನವನ ಚಟುವಟಿಕೆಗಳು ವಿಸ್ತರಿಸಿವೆ. ಇದು ಸಂಘರ್ಷ ತಂದೊಡ್ಡಿದೆ. ‍ಪಾಳುಬಿದ್ದ ಕಂದಾಯ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಕಾಡು ವಿಸ್ತರಿಸುವ ಕೆಲಸವಾಗಬೇಕಿದೆ.

ವಂಶಾಭಿವೃದ್ಧಿಯೇ ಜೀವಸಂಕುಲದ ಅಂತಿಮ ಗುರಿ. ಇದಕ್ಕಾಗಿ ಅವುಗಳಿಗೆ ಕಾಡು ಅತ್ಯಗತ್ಯ. ಜೈವಿಕ ಒತ್ತಡದಿಂದ ಪ್ರತ್ಯೇಕ ನೆಲೆಯ ಹುಡುಕಾಟ ನಡೆಸುವ ಹುಲಿಗಳಿಗೆ ಹೊಸ ಕಾಡುಗಳಿಲ್ಲ. ಕಾಫಿ ತೋಟಗಳು, ಅರಣ್ಯದಂಚಿನ ಪಾಳುಬಿದ್ದ ಜಮೀನುಗಳೇ ಆವಾಸವಾಗುತ್ತಿವೆ. ಕಣ್ಣುಬಿಟ್ಟ ಹುಲಿ ಮರಿಗಳಿಗೆ ಕಾಫಿ ತೋಟ, ಪಾಳು ಜಮೀನುಗಳೇ ಕಾಡುಗಳಂತೆ ಭಾಸವಾಗುತ್ತಿವೆ! ಬೆಟ್ಟಗುಡ್ಡಗಳಲ್ಲಿ ನೆಲೆ ಕಳೆದುಕೊಂಡ ಚಿರತೆ ಮರಿಗಳಿಗೆ ಕಬ್ಬಿನ ಗದ್ದೆಗಳೇ ಕಾಡಿನಂತೆ ಕಾಣುತ್ತಿವೆ. ಮಾನವನ ತಿಳಿವಳಿಕೆಗೆ ನಿಲುಕುವ ಅರಣ್ಯದ ಗಡಿ, ಬೇಲಿಯು ಹುಲಿ, ಚಿರತೆ, ಆನೆ, ಕರಡಿಗಳಿಗೆ ಅರ್ಥವಾಗುವುದಿಲ್ಲ. ಈ ಸತ್ಯ ಸರ್ಕಾರಕ್ಕೂ ತಿಳಿಯುತ್ತಿಲ್ಲ.

ಕೃ‍ಪಾಕರ, ವನ್ಯಜೀವಿ ತಜ್ಞ

***
ಚಿರತೆ ಪುನರ್ವಸತಿಗೆ ಗುಜರಾತ್‌ ಸೂತ್ರ

ಗುಜರಾತ್‌ನ ಜಾಮ್‌ನಗರದಲ್ಲಿ ಚಿರತೆಗಳಿಗಾಗಿಯೇ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ‘ಗ್ರೀನ್ಸ್‌ ಜಿಯಾಲಾಜಿಕಲ್ ರೆಸ್ಕ್ಯೂ ಆ್ಯಂಡ್‌ ರಿಯಾಬಿಲಿಟೇಷನ್‌ ಕಿಂಗ್‌ಡಂ’ ಹೆಸರಿನ ಈ ಕೇಂದ್ರ ರಿಲಯನ್ಸ್‌ ಇಂಡಸ್ಟ್ರಿಯ ಉಸ್ತುವಾರಿಯಲ್ಲಿದೆ. ಸಾರ್ವಜನಿಕ–ಖಾಸಗಿ ಸಹಭಾಗಿತ್ವದಡಿ(ಪಿಪಿಪಿ) ರೂಪಿಸಿರುವ ದೇಶದ ಮೊದಲ ಪುನರ್ವಸತಿ ಕೇಂದ್ರ ಇದು.

ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಕೇಂದ್ರ ತೆರೆಯಲು ನಿರ್ಧರಿಸಲಾಗಿದೆ. ಅಧಿಕಾರಿಗಳ ತಂಡ ಅಲ್ಲಿಗೆ ಭೇಟಿ ನೀಡಿ ಅಧ್ಯಯನವನ್ನೂ ನಡೆಸಿದೆ. ಶೀಘ್ರವೇ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.

ಬನ್ನೇರುಘಟ್ಟದಲ್ಲಿ ಸದ್ಯಕ್ಕೆ 42 ಚಿರತೆಗಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಇಲ್ಲಿ ಒಟ್ಟಾರೆ 110 ಚಿರತೆಗಳಿಗೆ ನೆಲೆ ಕಲ್ಪಿಸಲು ಸಿದ್ಧತೆ ನಡೆದಿದೆ. ಕೇಂದ್ರದ 2011ರ ಮಾರ್ಗಸೂಚಿಯನ್ವಯ ಚಿರತೆ ಸೆರೆಗೆ ಪರಿಣತರ ತಂಡ ರಚಿಸಲಾಗಿದೆ. ಮೈಸೂರು, ಮಂಡ್ಯ, ರಾಮನಗರ ಜಿಲ್ಲೆ ಒಳಗೊಂಡಂತೆ ಚಿರತೆ ಕಾರ್ಯಪಡೆ ರಚಿಸಲಾಗಿದೆ.

ಕುಮಾರ್‌ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

***

ಪೂರಕ ಮಾಹಿತಿ: ಕೆ.ಜೆ. ಮರಿಯಪ್ಪ, ಆರ್‌. ಜಿತೇಂದ್ರ, ಶಶಿಕಾಂತ ಎಸ್‌. ಶೆಂಬೆಳ್ಳಿ, ಸೂರ್ಯನಾರಾಯಣ ವಿ., ಕೆ.ಎಸ್‌. ಗಿರೀಶ, ಚಿದಂಬರ ಪ್ರಸಾದ, ಸಚ್ಚಿತ್‌ ಹುಣಸೂರು, ಬಿ.ಜೆ. ಧನ್ಯಪ್ರಸಾದ್‌, ಚಂದ್ರಹಾಸ ಹಿರೇಮಳಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT