ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ಒಳನೋಟ | ಬೆಟ್ಟಿಂಗ್ ಭೂತದ ತಾಂಡವ: ವೈಭವೊಪೇತ ಐಪಿಎಲ್‌ ಕ್ರಿಕೆಟ್‌ನ ಮತ್ತೊಂದು ಮುಖ
ಒಳನೋಟ | ಬೆಟ್ಟಿಂಗ್ ಭೂತದ ತಾಂಡವ: ವೈಭವೊಪೇತ ಐಪಿಎಲ್‌ ಕ್ರಿಕೆಟ್‌ನ ಮತ್ತೊಂದು ಮುಖ
ವೈಭವೊಪೇತ ಐಪಿಎಲ್‌ ಕ್ರಿಕೆಟ್‌ ನ ಮತ್ತೊಂದು ಮುಖ
Published 6 ಮೇ 2023, 20:43 IST
Last Updated 6 ಮೇ 2023, 20:43 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಸಮೀಪದ ರಾಮೋಹಳ್ಳಿಯ ಅಶ್ವಿನಿಗೆ ಕ್ರಿಕೆಟ್‌ ಕುರಿತು ಆಸಕ್ತಿಯೇ ಇರಲಿಲ್ಲ. ಯಾವತ್ತೂ ಟೆಲಿವಿಷನ್  ಅಥವಾ ಮೊಬೈಲ್‌ನಲ್ಲಿ ಪಂದ್ಯಗಳನ್ನು ವೀಕ್ಷಿಸಿರಲಿಲ್ಲ. ಆದರೆ ಅದೇ ಆಟದಿಂದಾಗಿ ಅವರ ಸಂಸಾರ ಅಲ್ಲೋಲಕಲ್ಲೋಲವಾಗಿದೆ!

ಓಮ್ನಿ ಕಾರಿನಲ್ಲಿ  ಸಂಚಾರಿ ಅಂಗಡಿ ಮಾಡಿಕೊಂಡು ಬಟ್ಟೆ ವ್ಯಾಪಾರ ಮಾಡಿದ ಆದಾಯದಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದ ಸಂಸಾರ ನೆಮ್ಮದಿಯಿಂದ ಬಾಳುತ್ತಿತ್ತು. ಆದರೆ, ಅಶ್ವಿನಿಯ ಗಂಡ ಆನಂದನ ತಲೆಗೇರಿದ ಕ್ರಿಕೆಟ್ ಬೆಟ್ಟಿಂಗ್ ಅಮಲಿನಿಂದಾಗಿ ಎಲ್ಲವೂ ಡೋಲಾಯ ಮಾನವಾಯಿತು. ‘ಕ್ರಿಕೆಟ್‌ನಿಂದ ನನ್ನ ಸಂಸಾರ ಮತ್ತು ಜೀವನ ಹಾಳಾಗಿಹೋಯಿತು. ಈ ಐಪಿಎಲ್ ಬೆಟ್ಟಿಂಗ್ ಮಾಡಿ 18 ಲಕ್ಷ ರೂಪಾಯಿ ಸಾಲ ಮಾಡಿದ ನನ್ನ ಗಂಡ,  ಇದ್ದ ಒಂದು ಸೈಟು ಮತ್ತು ಜೀವನಾಧಾರವಾಗಿದ್ದ ಒಮ್ನಿ ಕಾರನ್ನೂ ಮಾರಿದರು. ಕೆಲವು ದಿನಗಳ ಹಿಂದೆ ಸಾಲಗಾರರ ಕಾಟ ತಾಳದೇ ಕಾಣೆಯಾಗಿಬಿಟ್ಟಿದ್ದಾರೆ. ಮಾರ್ಚ್‌ನಲ್ಲಿ ಬಿಡದಿಯಲ್ಲಿ ಒಂದು ಮದುವೆಗೆ ಹೋಗಿದ್ವಿ. ಅಲ್ಲಿಂದಲೇ ನಾಪತ್ತೆ ಯಾದರು. ಇನ್ನೂ ಹತ್ತು ಲಕ್ಷ ಸಾಲ ಇದೆ.  ಪೊಲೀಸ್ ಕಂಪ್ಲೆಂಟ್ ಕೊಟ್ಟಿದ್ದೇನೆ. ಇದುವರೆಗೂ ಪತ್ತೆಯಾಗಿಲ್ಲ. ಅವರು ಮಾಡಿದ ಸಾಲ ತೀರಿಸಲು ನಾನು
ಮತ್ತೆ ಸಾಲ ಮಾಡಿದ್ದೇನೆ’ ಎಂದು ಗದ್ಗದಿತರಾದರು ಅಶ್ವಿನಿ.

2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿ ಇವತ್ತು ಜಗತ್ತಿನ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದು. ಕಳೆದ 16 ವರ್ಷಗಳಲ್ಲಿ ಐಪಿಎಲ್ ಗಳಿಸಿದ ಬ್ರ್ಯಾಂಡ್‌ ಮೌಲ್ಯ ಅಸಾ ಧಾರಣವಾದದ್ದು. ಕೇವಲ ಮಾಧ್ಯಮ ಪ್ರಸಾರ ಹಕ್ಕುಗಳೇ ₹ 48 ಸಾವಿರ ಕೋಟಿಗೆ ಹರಾಜಾಗುವಷ್ಟು
ಬೆಳೆದಿದೆ. ಆಟಗಾರರು ಮತ್ತು ಆಯೋಜಕರು ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ.

ಝಗಮಗಿಸುವ ಈ ಟೂರ್ನಿಯ ಬೌಂಡರಿಯಾಚೆ ಅಕ್ರಮ ಬೆಟ್ಟಿಂಗ್‌ನ ಮಾಫಿಯಾ ಬ್ರಹ್ಮರಾಕ್ಷಸನಂತೆ ಬೆಳೆದಿದೆ. ಅದರ ಅಟ್ಟಹಾಸಕ್ಕೆ ಬಡವ, ಮಧ್ಯಮ ವರ್ಗ ಮತ್ತು ಶ್ರೀಮಂತರೂ ಸೇರಿದಂತೆ ಎಲ್ಲ ವರ್ಗದವರು ಬಲಿಯಾಗುತ್ತಿದ್ದಾರೆ. ಮಾಫಿಯಾಗಳು ನಡೆಸುವ ಬೆಟ್ಟಿಂಗ್‌ ನಿಂದಾಗಿ ಹಲವಾರು ಸಂಸಾರಗಳು ಮೂರಾಬಟ್ಟೆಯಾಗಿವೆ. ಅಶ್ವಿನಿ ಹಾಗೂ ಆನಂದ್ ದಂಪತಿಯ ಕಥೆ ಇತ್ತೀಚಿನ ಸೇರ್ಪಡೆಯಷ್ಟೇ. 

ಸ್ಮಾರ್ಟ್‌ಫೋನ್‌ ತಂತ್ರಜ್ಞಾನ, ಇಂಟರ್‌ನೆಟ್ ಕ್ರಾಂತಿಯಿಂದಾಗಿ ಹಳ್ಳಿ ಹಳ್ಳಿಗೂ ಈ ಪಿಡುಗು ಕಾಲಿಟ್ಟಿದೆ. ಆನ್‌ಲೈನ್‌ನಲ್ಲಿ ಕಟ್ಟುವ ಬೆಟ್ಟಿಂಗ್‌ ಯುವ ಮತ್ತು ಮಧ್ಯವಯಸ್ಕರನ್ನು ಆಪೋಷನ ತೆಗೆದುಕೊಳ್ಳುತ್ತಿದೆ.

ಗೆದ್ದವರು ಮತ್ತಷ್ಟು ಹಣ ಗಳಿಸಲು, ಸೋತವರು ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಯತ್ನಿಸುತ್ತಾರೆ. ಚಟ ಅಂಟಿಸಿಕೊಳ್ಳುತ್ತಾರೆ. ಆ್ಯಪ್‌ಗಳ ಮೂಲಕ ದಿಢೀರ್ ಸಾಲ ನೀಡುವವರ ಮೊರೆ ಹೋಗುತ್ತಾರೆ. ಅಲ್ಲಿಯೂ ಕಳೆದುಕೊಂಡ ಮೇಲೆ ಇದ್ದಬದ್ದ ಆಸ್ತಿ, ಉಳಿತಾಯದ ಹಣ, ಹೆಂಡತಿಯ ತಾಳಿಯನ್ನೂ ಮಾರಾಟ ಮಾಡುತ್ತಾರೆ. ಎಲ್ಲ ಮುಗಿದ ಮೇಲೆ  ಒಂದೋ ನಾಪತ್ತೆಯಾಗ್ತಾರೆ, ಇಲ್ಲವೇ ಸಾವಿನ ಮನೆಯ ಕದ ತಟ್ಟುತ್ತಾರೆ. ಇಂತಹ ಪ್ರಕರಣಗಳು ದೇಶದಲ್ಲೆಡೆ ಪ್ರತಿವರ್ಷವೂ ಹೆಚ್ಚುತ್ತಿವೆ.

₹ 100 ಕೋಟಿ ಕ್ಲೀನ್‌ಬೌಲ್ಡ್

ತೆಲಂಗಾಣದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ ಐಪಿಎಲ್ ಬೆಟ್ಟಿಂಗ್ ಚಟಕ್ಕೆ
₹ 100 ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಕಥೆ ಇದು. 

ಕೆಲ ದಿನಗಳ ಹಿಂದೆ ತೆಲಂಗಾಣದ ರಾಚಕೊಂಡದ ಪೊಲೀಸ್ ಕಮಿಷನರ್ ಡಿ.ಎಸ್. ಚೌಹಾಣ್ ನೇತೃತ್ವದ ತಂಡವು  ಬೆಟ್ಟಿಂಗ್ ಜಾಲವೊಂದರ ಮೇಲೆ ದಾಳಿ ಮಾಡಿತು. ಮೂವರು ಬುಕ್ಕಿಗಳು, ಇಬ್ಬರು ಸಹಾಯಕ ಬುಕ್ಕಿಗಳು ಹಾಗೂ ಒಬ್ಬ ವಸೂಲಿ ಏಜೆಂಟನನ್ನು ಬಂಧಿಸಿದರು. ಮೊಬೈಲ್ ಫೋನ್‌ಗಳು, ಲಕ್ಷಾಂತರ ಹಣವನ್ನೂ ವಶಪಡಿಸಿಕೊಂಡರು. ಆರೋಪಿ ಜಕ್ಕಿರೆಡ್ಡಿ ಅಶೋಕ ರೆಡ್ಡಿ ನೀಡಿದ ಹೇಳಿಕೆಗೆ ಪೊಲೀಸ್ ಅಧಿಕಾರಿಗಳು ಬೆಚ್ಚಿಬೆರಗಾದರು.

ಕಳೆದ 12 ವರ್ಷಗಳಲ್ಲಿ ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಈತ ಕಳೆದುಕೊಂಡಿದ್ದು ₹ 100 ಕೋಟಿಗೂ ಹೆಚ್ಚು ಹಣ. ರಿಯಲ್ ಎಸ್ಟೇಟ್‌ ಉದ್ಯಮಿಯಾಗಿದ್ದ ಆತ, ಆರಂಭದಲ್ಲಿ ಮೋಜಿಗಾಗಿ ಬಾಜಿ ಕಟ್ಟಿದ. ಆರಂಭದಲ್ಲಿ ಹಣ ಬಂತು. ಸ್ನೇಹಿತರೂ ‘ಅದೃಷ್ಟಶಾಲಿ’ ಎಂದು ಹುರಿದುಂಬಿಸಿದರು. ಮತ್ತಷ್ಟು ಕಟ್ಟಿ ಕಳೆದುಕೊಂಡ. ಮತ್ತೆ ಗಳಿಸಲೇಬೇಕೆಂಬ ಕೆಟ್ಟ ಹಟ ಹುಟ್ಟಿತು. ತನ್ನ ಉದ್ಯಮದ ಹಣವೂ ಇತ್ತ ಹರಿಯಿತು. ಸಾಲವೂ ಬೆಟ್ಟದಂತೆ ಬೆಳೆಯಿತು. ನಂತರ ಜಾಲಕ್ಕೆ ಉಪಬುಕ್ಕಿಯಾಗಿ ಕೆಲಸ ಮಾಡತೊಡಗಿದ. ತನ್ನ ಪರಿಚಯಸ್ಥರಿಗೂ ಮತ್ತು ಬೆಟ್ಟಿಂಗ್ ಜಾಲಕ್ಕೂ ಸಂಪರ್ಕ ಸೇತುವೆಯಾದ.

ಈತನೊಂದಿಗೆ ಬಂಧನಕ್ಕೊಳಗಾದ ಮತ್ತೊಬ್ಬ ಉಪಬುಕ್ಕಿ ಎಡುಕುಲ ಜಗದೀಶ್ ಕೂಡ ಬೆಟ್ಟಿಂಗ್ ಚಟ ಹೊಂದಿದವನು. ಈತ ಹೈದರಾಬಾದಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಈ ಜಾಲಕ್ಕೆ ವಸೂಲಿ ಏಜೆಂಟ್ ಆಗಿದ್ದ ವಡುಪು ಚರಣ್ ವೃತ್ತಿಯಿಂದ ಸಾಫ್ಟ್‌ವೇರ್ ಎಂಜಿನಿಯರ್. ಇವರೆಲ್ಲರಿಗೂ ಹರಿಯಾಣದ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದರು. ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ (ಏ. 17ರವರೆಗೆ) ಸುಮಾರು ಮೂರು ಕೋಟಿ ರೂಪಾಯಿಯ ಬೆಟ್ಟಿಂಗ್ ವ್ಯವಹಾರ ನಡೆಸಿದ್ದರಂತೆ ಇವರು. ಬೆಟ್ಟಿಂಗ್‌ನಲ್ಲಿ ತಮ್ಮ ಹಣವನ್ನು ಕಳೆದುಕೊಂಡ ಮೇಲೆ ಅದೇ ಮಾಫಿಯಕ್ಕಾಗಿ ಕೆಲಸ ಮಾಡುತ್ತ ಮತ್ತಷ್ಟು ಜನರನ್ನು ಕೂಪಕ್ಕೆ ತಳ್ಳುತ್ತಿದ್ದಾರೆ.

ಸಹೋದರ ಸಂಸಾರಕ್ಕೆ ಕಿಚ್ಚು

ಧಾರವಾಡದ ನಿವಾಸಿ ಮಹಾಲಕ್ಷ್ಮೀ ಶೀಲವಂತ ಅವರು ತಮ್ಮ ಕುಟುಂಬದಲ್ಲಿಯೇ ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾರೆ.

‘ಕ್ರಿಕೆಟ್ ಬೆಟ್ಟಿಂಗ್‌ನಿಂದಾಗಿ ನನ್ನ ತಮ್ಮ ದೀಪಕ್ (ಹೆಸರು ಬದಲಿಸಲಾಗಿದೆ) ಸಂಸಾರ ಹಾಳಾಗಿ ಹೋಯಿತು. ಸುಮಾರು ₹ 45 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಯಿತು. ನನ್ನ ತವರು ಮನೆ ಶಹಾಪುರದಲ್ಲಿ (ಯಾದಗಿರಿ ಜಿಲ್ಲೆ). ನನ್ನ ತಮ್ಮನದು, ಹೆಂಡತಿ ಮತ್ತು ಮಗುವಿನೊಂದಿಗೆ ಚೆನ್ನಾಗಿದ್ದ ಸಂಸಾರ. ಸ್ವಂತ ಮನೆ ಮತ್ತು ಒಂದು ಸೈಟು ಕೂಡ ಇತ್ತು. ಸ್ನೇಹಿತರ ವಲಯದಲ್ಲಿ ಆರಂಭವಾದ ಬೆಟ್ಟಿಂಗ್ ಮೋಜು ಮಾರಿಯಾಗಿ ಕಾಡಿತು. ಸಂಬಳ ಸಾಲದಾಯಿತು. ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಮತ್ತೆ ಬೆಟ್ಟಿಂಗ್ ಮಾಡಿದ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ. ಸಾಲಗಾರರ ಕಾಟ ಹೆಚ್ಚಾದಾಗ ಮನೆ, ಸೈಟು ಮಾರಾಟ ಮಾಡಬೇಕಾಯಿತು. ಸಾಲದ್ದಕ್ಕೆ ಗೋವಾಕ್ಕೆ ಹೋಗಿ ಕ್ಯಾಸಿನೊ ಕೂಡ ಆಡಿ ಹಣ ಕಳೆದುಕೊಂಡಿದ್ದ. ಹೆಂಡತಿ ದೂರವಾದಳು. ನನ್ನ ಸಹೋದರ ಈಗ ಬೆಂಗಳೂರಿನಲ್ಲಿ ಕಿರಾಣಿ ಅಂಗಡಿಯ ಡೆಲಿವರಿ ಬಾಯ್ ಆಗಿದ್ದಾನೆ. ಸಿಂಧನೂರಿನಲ್ಲಿರುವ ನನ್ನ ತಂಗಿ ಗಂಡನೂ
₹ 10 ಲಕ್ಷ ರೂಪಾಯಿಯನ್ನು ಬೆಟ್ಟಿಂಗ್‌ನಲ್ಲಿ ಕಳೆದುಕೊಂಡು ಬೆಂಗಳೂರು ಸೇರಿಕೊಂಡಿದ್ದಾನೆ’ ಎಂದು ಮಹಾಲಕ್ಷ್ಮೀ ಕಣ್ಣೀರೊರೆಸಿಕೊಂಡರು. ಸಹೋದರನ ಸಾಲ ತೀರಿಸಲು ತಮ್ಮ ಒಡವೆಗಳನ್ನೂ ಮಾರಿದ್ದರಂತೆ. 

‘ಇದು ಒಂದು ಊರಿಗೆ ಸೀಮಿತವಾಗಿಲ್ಲ. ಎಲ್ಲ ಕಡೆಯೂ ಹಬ್ಬಿದೆ. ಸರ್ಕಾರಗಳು ಈ ಪಿಡುಗನ್ನು ತಡೆಯಲು ಏನೂ ಮಾಡುತ್ತಿಲ್ಲವಲ್ಲ ಏಕೆ’ ಎಂದು ಅವರು ಪ್ರಶ್ನಿಸುತ್ತಾರೆ.

ಠೇವಣಿಗೇ ಕನ್ನ

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಅಂಚೆ ಕಚೇರಿಯಲ್ಲಿ ಗ್ರಾಹಕರು ಇಟ್ಟಿದ್ದ  ಎಫ್‌.ಡಿ (ಠೇವಣಿ) ಅಕೌಂಟ್‌ಗಳ ನಕಲಿ ಪಾಸ್‌ಬುಕ್ ಸೃಷ್ಟಿಸಿ ಕನ್ನ ಹಾಕಿದ್ದ ಪೋಸ್ಟ್ ಮಾಸ್ಟರ್‌ ವಿಶಾಲ್ ಎಂಬುವವನು ಒಂದು ಕೋಟಿ ರೂಪಾಯಿಯನ್ನು ಬೆಟ್ಟಿಂಗ್‌ಗೆ ಸುರಿದಿದ್ದ. ನಂತರ ತಲೆತಪ್ಪಿಸಿಕೊಂಡಿದ್ದ. ಹಲವು ದಿನಗಳ ಕಾಲ ಪೊಲೀಸರು ಮಾಡಿದ ಪ್ರಯತ್ನಕ್ಕೆ ಕಡೆಗೂ ಸಿಕ್ಕಿಬಿದ್ದ ಆರೋಪಿ ತಪ್ಪೊಪ್ಪಿಕೊಂಡ. ಇಂತಹ ಕರಾಳ ದಂಧೆಗೆ ಹಣವಷ್ಟೇ ಅಲ್ಲ. ಪ್ರಾಣವನ್ನೂ ಕಳೆದುಕೊಂಡಿರುವ ಪ್ರಕರಣಗಳು ಬಹಳಷ್ಟಿವೆ.

ಇಪ್ಪತ್ತು ದಿನಗಳ ಹಿಂದಷ್ಟೇ ತಮಿಳುನಾಡಿನ ಹೋಟೆಲ್‌ವೊಂದರಲ್ಲಿ 35 ವರ್ಷದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ. ಆತ ಸುಮಾರು
₹ 90 ಲಕ್ಷ ಸಾಲ ಮಾಡಿ ಐಪಿಎಲ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ರಮ್ಮಿಗಳಲ್ಲಿ ಕಳೆದುಕೊಂಡಿದ್ದ ಎಂಬುದು ಪೊಲೀಸರ ತನಿಖೆಯಿಂದ ಹೊರಬಿತ್ತು. ಕೆಲವು ವರ್ಷಗಳ ಹಿಂದೆ ಹಾಸನ, ಮೈಸೂರು, ಬೆಳಗಾವಿ ಜಿಲ್ಲೆಗಳಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗಿದ್ದವು.

ಇವೆಲ್ಲವೂ ಕೆಲವೇ ಕೆಲವು ಸತ್ಯಘಟನೆಗಳು ಮಾತ್ರ. ಆದರೆ ದೇಶದ ಉದ್ದಗಲ್ಲಕ್ಕೂ ಇಂತಹ ಪ್ರಕರಣಗಳು ಲೆಕ್ಕವಿಲ್ಲದಷ್ಟು ಇವೆ. ಹಾಗಿದ್ದರೆ ಇಷ್ಟೊಂದು ವ್ಯಾಪಕವಾಗಿ ಬೆಟ್ಟಿಂಗ್ ಮಾಫಿಯಾ ಬೆಳೆದಿದ್ದು ಹೇಗೆ?

ಎಂಟು ಸೆಕೆಂಡುಗಳ ಅಂತರ

ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಒಬ್ಬ ಬೌಲರ್ ಎಸೆತ ಹಾಕುವ ದೃಶ್ಯವು ಟಿ.ವಿ. ಪರದೆ ಮೇಲೆ ಬರಲು ಸುಮಾರು ಎಂಟು ಸೆಕೆಂಡುಗಳ ಸಮಯ ಬೇಕು.  ಇಷ್ಟು ಸಣ್ಣ ಅಂತರವೇ ಬೆಟ್ಟಿಂಗ್ ಲೋಕಕ್ಕೆ ಬಂಡವಾಳ. ಬೌಂಡರಿ, ಸಿಕ್ಸರ್, ವಿಕೆಟ್, ಯುಡಿಆರ್‌ಎಸ್, ವೈಡ್, ನೋಬಾಲ್, ಕ್ಯಾಚ್, ಡ್ರಾಪ್ ಗಳಿಗೆಲ್ಲ ಬೆಟ್ಟಿಂಗ್ ಕಟ್ಟುತ್ತಾರೆ.

ಕ್ರೀಡಾಂಗಣದೊಳಗೇ ಪ್ರೇಕ್ಷಕರ ನಡುವೆ ಇರುವ ಮಾಫಿಯಾ ಏಜೆಂಟ್‌ಗಳು, ಜಾಮರ್‌ ಇದ್ದರೂ ಕೆಲಸ ಮಾಡುವ ಅತ್ಯಾಧುನಿಕ ತ್ರೀಡಿ ತಂತ್ರಾಶದ ಫೋನ್‌ಗಳ ಮುಖಾಂತರ ತಮ್ಮ ಧಣಿಗಳಿಗೆ ಸಂದೇಶ ಮುಟ್ಟಿಸುತ್ತಾರೆ. ಅಲ್ಲಿಯವರು ಸ್ಪಾಟ್ ಬೆಟ್ಟಿಂಗ್ ಮಾಡುತ್ತಾರೆ. ಈಗ ತಂತ್ರ ಜ್ಞಾನ ಮುಂದುವರಿದಿರುವುದರಿಂದ ತಮಗೆ ಬೇಕಾದ ಹಾಗೆ ಆ್ಯಪ್‌ಗಳನ್ನು ಮಾಡಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಇಂತಹದೇ ಆ್ಯಪ್‌ ನಲ್ಲಿ ನಡೆಯುತ್ತಿದ್ದ ದಂಧೆಯನ್ನು ಬೆಂಗಳೂರು ಪೊಲೀಸರು ಪತ್ತೆ ಹೆಚ್ಚಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯವೊಂದರಲ್ಲಿ ವಿಶಾಂತ್, ಅಮರ್ ಜಿತ್ ಸಿಂಗ್, ಮೋಹಿತ್ ಬಾತ್ರಾ ಹಾಗೂ ದುಶ್ಯಂತ್ ಕುಮಾರ್ ಸೋನಿ ಎಂಬುವವರನ್ನು ಬಂಧಿಸಲಾಗಿತ್ತು.

‘ಪಂದ್ಯದ ಪ್ರತಿ ಬಾಲ್ ಹಾಗೂ ಬ್ಯಾಟಿಂಗ್ ಮಾಹಿತಿಯನ್ನು ಆರೋಪಿಗಳು ಆ್ಯಪ್‌ ಮೂಲಕ ರವಾನಿಸುತ್ತಿದ್ದರು. ಈ ಮೂಲಕ ಜನರಿಂದ ಬೆಟ್ಟಿಂಗ್ ಕಟ್ಟಿಸಿಕೊಂಡು ವಂಚಿಸುತ್ತಿದ್ದರು. ಪಂದ್ಯ ನಡೆಯುವ ಸಂದರ್ಭದಲ್ಲಿ ಅಕ್ರಮ ತಡೆಯಲು ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ಪ್ರೇಕ್ಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ನಡೆದ ಪಂದ್ಯದ ವೇಳೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಬೆಟ್ಟಿಂಗ್ ವಿಷಯ ಗೊತ್ತಾಯಿತು’ ಎಂದು ಪೊಲೀಸರು ಬಹಿಂಗಪಡಿಸಿದ್ದಾರೆ.

ಬೆಟ್ಟಿಂಗ್‌ನಲ್ಲಿ ಇನ್ನೊಂದು ಬಗೆ ಇದೆ. ಅದು ಪಂದ್ಯ ಫಲಿತಾಂಶದ ಮೇಲೆ ಕಟ್ಟುವುದು. ಪಂದ್ಯದಲ್ಲಿ ಕಠಿಣ ಪೈಪೋಟಿ ಶುರುವಾದಂತೆ, ರೋಚಕ ಫಲಿತಾಂಶ ಹೊರಹೊಮ್ಮುವಂತಹ ಪಂದ್ಯಗಳಲ್ಲಿ ಬಾಜಿ ಕಟ್ಟಿದವರ ಮನಸ್ಸೂ ಅತ್ತಿತ್ತ ಹೊಯ್ದಾಡುತ್ತಾ, ಹೂಡುವ ದುಡ್ಡು ಹೆಚ್ಚುತ್ತದೆ. ಇದರಲ್ಲಿ ಬುಕ್ಕಿಗಳು ಯಥೇಚ್ಛ ಲಾಭ ಗಳಿಸುತ್ತಾರೆ. 

ಮುಂಬೈ, ದೆಹಲಿ  ಹರಿಯಾಣ, ರಾಜಸ್ಥಾನ, ಮಾಲ್ಡಿವ್ಸ್‌, ಶ್ರೀಲಂಕಾ ಮತ್ತಿತರ ಪ್ರದೇಶಗಳಿಂದ ಬಾಜಿಯನ್ನು ನಿಯಂತ್ರಿಸುತ್ತಾರೆ. ಪ್ರತಿ ಊರಿನಲ್ಲಿಯೂ  ಇವರಿಗೆ ಏಜೆಂಟರು ಇದ್ದಾರೆ. ಇಲ್ಲವೇ ಆನ್‌ಲೈನ್‌ ಆ್ಯಪ್‌ಗಳ ಮೂಲಕ ವ್ಯವಹಾರ ಕುದುರಿಸುತ್ತಾರೆ. ಹಣ ವಸೂಲಿ ಮಾಡಲು ಕಲೆಕ್ಷನ್ ಏಜೆಂಟರೂ ಇರುತ್ತಾರೆ.  

ಆನ್‌ಲೈನ್ ಆ್ಯಪ್‌ಗಳು ಹಾಗೂ ಮನೋವ್ಯಾಧಿ:ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳು ಈಗ ಅಪಾರ ಸಂಖ್ಯೆಯಲ್ಲಿ ಲಭ್ಯ ಇವೆ. ಕೋವಿಡ್ ಕಾಲಘಟ್ಟದಲ್ಲಿ ಮಕ್ಕಳಿಗೆ ಆನ್‌ಲೈನ್ ಮೂಲಕವೇ ಶಾಲೆ ತರಗತಿಗಳು ನಡೆದವು. ಇದರಿಂದಾಗಿ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆ ಹೆಚ್ಚಾಯಿತು. ಅದರೊಂದಿಗೆ ಗೇಮಿಂಗ್ ಆ್ಯಪ್‌ಗಳ ಭರಾಟೆಯೂ ಹೆಚ್ಚಾಯಿತು.

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕ್ರಿಕೆಟ್‌ಗೆ ಸಂಬಂಧಿತ ಫ್ಯಾಂಟಸಿ ಆ್ಯಪ್‌ಗಳೇ ಹೆಚ್ಚಾಗಿವೆ. ಅಲ್ಲೆಲ್ಲೋ ಪಂದ್ಯ ನಡೆಯುತ್ತಿದ್ದರೆ, ಆ ತಂಡಗಳ ಹನ್ನೊಂದರ ಬಳಗವನ್ನು ಇಲ್ಲಿ ಕುಳಿತವರು ತಮ್ಮ ಮೊಬೈಲ್‌ಗಳಲ್ಲಿ ರಚಿಸಿಕೊಳ್ಳುತ್ತಾರೆ. ಇವರ ಫ್ಯಾಂಟಸಿ ತಂಡದಲ್ಲಿರುವ ಆಟಗಾರರು ಕ್ರೀಡಾಂಗಣದಲ್ಲಿ ನೀಡುವ ಪ್ರದರ್ಶನದ ಆಧಾರದಲ್ಲಿ ಪಾಯಿಂಟ್ಸ್‌ ಅಥವಾ ಹಣ ಗಳಿಕೆಯಾಗುತ್ತದೆ. ಇಲ್ಲಿ ಹತ್ತು, ಇಪ್ಪತ್ತು ರೂಪಾಯಿ ಕಟ್ಟಿ ಆಡಲು ಆರಂಭಿಸಬಹುದು. ಆದರೆ ಇದು ದಿನಗಳೆದಂತೆ ಚಟವಾಗಿ ಪರಿಣಮಿಸುತ್ತದೆ.

ಆದರೆ ಈ ಫ್ಯಾಂಟಸಿ ಗೇಮಿಂಗ್ ಈಗ ₹ 50 ಸಾವಿರ ಕೋಟಿ ವ್ಯವಹಾರದ ಉದ್ಯಮವಾಗಿ ಬೆಳೆದಿದೆ. 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ ಎಂದು ನಿಯಮ ವಿಧಿಸಿದೆ. ಆಡುತ್ತ ಆಡುತ್ತಾ ಚಟವಾಗಿ ಪರಿಣಮಿಸುವ ಅಪಾಯವೂ ಇದೆ ಎಂದು ಜಾಹೀರಾತುಗಳ ಕೊನೆಯಲ್ಲಿ ಎಚ್ಚರಿಕೆ ಸಂದೇಶ ನೀಡಲಾಗುತ್ತದೆ. ಆದರೆ ಅದಕ್ಕೂ ಮುನ್ನ ಖ್ಯಾತನಾಮ ಆಟಗಾರರು ‘ಎಲ್ಲಾ ಕೆಲಸ ಬಿಡಿ, ತಂಡ ಕಟ್ಟಿ ಆಡಿ, ಗೆಲ್ಲಿರಿ ಬಹುಮಾನ’ ಎಂದು ಆಮಿಷ ತೋರಿರುತ್ತಾರೆ!

‘ಗೇಮಿಂಗ್ ಆ್ಯಪ್‌ಗಳಿಂದ ಪೀಡಿತರಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಖಿನ್ನತೆ, ಏಕಾಗ್ರತೆ ಕೊರತೆ, ಓದಿನಲ್ಲಿ ಹಿಂದುಳಿಯುವಿಕೆ, ಸುಳ್ಳು ಹೇಳುವ ಪ್ರವೃತ್ತಿ ಮತ್ತಿತರ ದುಶ್ಚಟಗಳಿಗೆ ಬೀಳುತ್ತಿರುವ ಯುವಕ, ಯುವತಿಯರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಕ್ಲಿನಿಕ್‌ನಲ್ಲಿ ಪ್ರತಿನಿತ್ಯ ಇಂತಹ ಪ್ರಕರಣಗಳು ಬರುತ್ತಿವೆ. ಮಕ್ಕಳಿಗೆ ಇಂತಹ ಚಟ ಹತ್ತದಂತೆ ತಂದೆ, ತಾಯಿ ಮತ್ತು ಕುಟುಂಬದ ಸದಸ್ಯರು ಕಾಳಜಿ ವಹಿಸಬೇಕು. ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಮೊದಲು ತಾವು ಮೊಬೈಲ್‌ಗಳನ್ನು ಪಕ್ಕಕ್ಕಿಟ್ಟು ಮಕ್ಕಳಿಗೆ ಮಾದರಿಯಾಗಬೇಕು‘ ಎಂದು ನಿಮ್ಹಾನ್ಸ್‌ನಲ್ಲಿರುವ ಸರ್ವಿಸ್ ಫಾರ್ ಹೆಲ್ತಿ ಯೂಸ್ ಆಫ್ ಟೆಕ್ನಾಲಜಿ ಕ್ಲಿನಿಕ್‌ ಮುಖ್ಯಸ್ಥರಾದ ಡಾ. ಮನೋಜ್ ಶರ್ಮಾ (ಸಹಾಯವಾಣಿ; 9480829675) ಹೇಳುತ್ತಾರೆ.

ಕಾನೂನಿನ ಚೌಕಟ್ಟು ಇಲ್ಲ

ಭಾರತದಲ್ಲಿ ಜೂಜಾಟಕ್ಕೆ ಮಹಾಭಾರತ ಕಾಲದಿಂದಲೂ ನಂಟಿದೆ. ಆದರೆ ಬ್ರಹ್ಮಾಂಡದಂತೆ ಬೆಳೆದಿರುವ ಕ್ರಿಕೆಟ್ ಬೆಟ್ಟಿಂಗ್‌ಗೆ ಕಾನೂನಿನ ಚೌಕಟ್ಟು ಹಾಕುವ ಕಾರ್ಯ ಈಗಲೂ ಆಗಿಲ್ಲ. ದೇಶದಲ್ಲಿ ಕುದುರೆ ಜೂಜು ಕಾನೂನುಬದ್ಧವಾಗಿ ನಡೆಯುತ್ತದೆ. ಅದರಿಂದ ಬರುವ ತೆರಿಗೆ ಹಣವು ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತಿದೆ. ಆದರೆ, ಕ್ರಿಕೆಟ್ ಆಟವನ್ನು ಧರ್ಮದ ರೀತಿ ಆರಾಧಿಸುವ ಭಾರತದಲ್ಲಿ ನಡೆಯುವ ಅಕ್ರಮ ಬೆಟ್ಟಿಂಗ್‌ಗೆ ಕಡಿವಾಣವಿಲ್ಲ. ಇದರಿಂದಾಗಿ ಜನಸಾಮಾನ್ಯರು ಆಮಿಷಗಳಿಗೆ ಒಳಗಾಗಿ ಹಣ ಮತ್ತು ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಕ್ಕೆ ತೆರಿಗೆಯೂ ಸಿಗುತ್ತಿಲ್ಲ. ಆದರೆ ಸಾವಿರಾರು ಕೋಟಿ ಹಣ ಮಾಫಿಯಾ ಪಾಲಾಗುತ್ತಿದೆ.

ಕ್ರಿಕೆಟ್ ಜನಕರ ನಾಡು ಬ್ರಿಟನ್‌ನಲ್ಲಿ ಇವತ್ತಿಗೂ ಫ್ರ್ಯಾಂಚೈಸಿ ಲೀಗ್‌ ಕ್ರಿಕೆಟ್ ಆರಂಭಿಸಿಲ್ಲ. ಆದರೆ, ಅಲ್ಲಿ ಕ್ರಿಕೆಟ್, ಟೆನಿಸ್, ಫುಟ್‌ಬಾಲ್ ಹಾಗೂ ಕುದುರೆ ರೇಸ್‌ಗಳ ಬೆಟ್ಟಿಂಗ್ ಕಾನೂನುಬದ್ಧವಾಗಿದೆ. ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ದೇಶಗಳಲ್ಲಿಯೂ ಕಾನೂನುಬದ್ಧ ಬೆಟ್ಟಿಂಗ್ ನಡೆಯುತ್ತದೆ. ಈ ಮೂಲಕ ಅಕ್ರಮ ಬೆಟ್ಟಿಂಗ್‌ಗೆ ಲಗಾಮು ಹಾಕಲಾಗಿದೆ.

ಬೆಟ್ಟಿಂಗ್ ಮತ್ತು ಪಂದ್ಯಗಳ ಫಿಕ್ಸಿಂಗ್‌ಗೆ ಸಂಬಂಧವಿದೆ ಎಂಬುದೂ ಈಗ ಗುಟ್ಟಾಗಿಯೇನೂ ಉಳಿದಿಲ್ಲ. 1999–2000ರಲ್ಲಿ ದೊಡ್ಡಮಟ್ಟದ ಸುದ್ದಿ ಮಾಡಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಖ್ಯಾತನಾಮ ಆಟಗಾರರು ಸಿಲುಕಿದ್ದರು. ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್, ಆಟಗಾರರಾಗಿದ್ದ ಅಜಯ್ ಜಡೇಜ, ಮನೋಜ್ ಪ್ರಭಾಕರ್, ದಕ್ಷಿಣ ಆಫ್ರಿಕಾದ ಹ್ಯಾನ್ಸಿ ಕ್ರೊನಿಯೆ ಅವರ ಮೇಲೆ ಆರೋಪಗಳಿದ್ದವು. ಹ್ಯಾನ್ಸಿ ಕ್ರೊನಿಯೆ ದುರಂತ ಸಾವಿನೊಂದಿಗೆ ಬಹಳಷ್ಟು ರಹಸ್ಯಗಳು ಸಮಾಧಿಯಾದವು ಎನ್ನಲಾಗುತ್ತದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕ್ರಿಕೆಟ್ ಬೆಟ್ಟಿಂಗ್ ಜಾಲದ ಸೂತ್ರಧಾರಿಯೆಂದೂ ಹೇಳಲಾಗಿತ್ತು. ನಂತರ ವರ್ಷಗಳಲ್ಲಿಯೂ ಹಲವಾರು ಪ್ರಕರಣಗಳು ವರದಿಯಾದವು.

ಆದರೆ 2013ರಲ್ಲಿ ಐಪಿಎಲ್‌ನಲ್ಲಿ ನಡೆದ ಸ್ಪಾಟ್ ಫಿಕ್ಸಿಂಗ್ ಹಗರಣ ಕೂಡ ದೊಡ್ಡ ಸದ್ಸು ಮಾಡಿತು. ವೇಗದ ಬೌಲರ್ ಎಸ್. ಶ್ರೀಶಾಂತ್, ಅಜಿತ್‌ ಚಾಂಡೇಲಾ ಮತ್ತು ಅಂಕಿತ್‌ ಚವಾಣ್ ಆಟಗಾರರನ್ನು ಪೊಲೀಸರು ಬಂಧಿಸಿದ್ದರು. ಇತ್ತೀಚೆಗಷ್ಟೇ ಅವರು ಖುಲಾಸೆಯಾದರು. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರ್ಯಾಂಚೈಸಿಗಳು ಎರಡು ವರ್ಷಗಳ ಅವಧಿಗೆ ನಿಷೇಧಕ್ಕೊಳಗಾಗಿದ್ದವು. ಈ ಪ್ರಕರಣದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತ ಸುಧಾರಣೆಗೆ ಹೊಸ ನಿಯಮಾವಳಿ ರಚಿಸಿದ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯು ‘ಕ್ರಿಕೆಟ್‌ ಬೆಟ್ಟಿಂಗ್‌ ಅನ್ನು ಕಾನೂನು ಬದ್ಧಗೊಳಿಸಬೇಕು. ಬಿಸಿಸಿಐ ಪದಾಧಿಕಾರಿಗಳು, ಆಡಳಿತ ಸಿಬ್ಬಂದಿ, ಆಟಗಾರರು ಇದರಲ್ಲಿ ಭಾಗಿಯಾಗುವಂತಿಲ್ಲ. ಅವರೆಲ್ಲರೂ ತಮ್ಮ ಆಸ್ತಿ ವಿವರ ಸಲ್ಲಿಸಬೇಕು. ಮ್ಯಾಚ್‌ ಫಿಕ್ಸಿಂಗ್‌ ಅನ್ನು ಅಪರಾಧವೆಂದು ಪರಿಗಣಿಸಿ ಶಿಕ್ಷೆ ನೀಡುವ ನಿಯಮ ತರಬೇಕು’ ಎಂದು ಸೂಚಿಸಿತ್ತು. ಆದರೆ ಇದು ಇನ್ನೂ ಜಾರಿಯಾಗಿಲ್ಲ.

ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್ ಮತ್ತು ತಮಿಳುನಾಡು  ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿಯೂ ಫಿಕ್ಸಿಂಗ್ ಆರೋಪಗಳು ವರದಿಯಾಗಿದ್ದವು. ಸ್ಥಳೀಯ ಟೂರ್ನಿಗಳಿಗೂ ದುಷ್ಟಶಕ್ತಿಗಳ ನೆರಳು ಬೀಳುತ್ತಿರುವುದು ಅಪಾಯಕಾರಿ ಬೆಳವಣಿಗೆ ಇದು ಮುಂದೊಂದು ದಿನ ಕ್ರಿಕೆಟ್‌ ಆಟವನ್ನೇ ನುಂಗಿದರೆ ಅಚ್ಚರಿಯಿಲ್ಲ.

ಮಾಹಿತಿ: ಸಂತೋಷ ಜಿಗಳಿಕೊಪ್ಪ, ಎಂ.ಎನ್. ಯೋಗೇಶ್, ವಿಕ್ರಂ ಕಾಂತಿಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT