ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಒಳನೋಟ | ಪ್ರವಾಸಿ ತಾಣಗಳಲ್ಲಿ ಸೌಲಭ್ಯಕ್ಕೆ ಅಸಡ್ಡೆ
ಒಳನೋಟ | ಪ್ರವಾಸಿ ತಾಣಗಳಲ್ಲಿ ಸೌಲಭ್ಯಕ್ಕೆ ಅಸಡ್ಡೆ
Published 28 ಜನವರಿ 2024, 0:02 IST
Last Updated 28 ಜನವರಿ 2024, 0:02 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಕೋಟೆ ನೋಡಬೇಕೆಂದು ಮಹಾರಾಷ್ಟ್ರದಿಂದ ಬಂದಿದ್ದೆ. ಆದರೆ, ಇಲ್ಲಿನ ಸ್ಮಾರಕಗಳಿಗೆ ಬೀಗ ಹಾಕಿದ್ದಾರೆ. ಸ್ಮಾರಕಗಳ ಬಗ್ಗೆ ವಿವರಿಸಲು ಗೈಡ್‌ಗಳೂ ಇಲ್ಲ. ಸ್ಮಾರಕಗಳ ಕಡೆಗೆ ಹೇಗೆ ಹೋಗಬೇಕೆಂಬ ದಿಕ್ಸೂಚಿ ಫಲಕಗಳೂ ಇಲ್ಲ. ಕನಿಷ್ಠ ಮಾಹಿತಿಯೇ ಇರದಿದ್ದರೆ ನೋಡುವುದಾದರೂ ಹೇಗೆ? ಇಷ್ಟೊಂದು ಖರ್ಚು ಮಾಡಿ ಇಲ್ಲಿಗೆ ಬಂದ ನಂತರ ಬಹಳ ನಿರಾಸೆಯಾಯಿತು...’

ಇದು ಪುಣೆಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಪ್ರವಾಸಿ ಆಸ್ಥಾ ಅವರ ಮಾತುಗಳು.

‘ಕಲ್ಲಿನ ಕೋಟೆಯೊಳಗೆ ನಾಮಫಲಕಗಳಿದ್ದರೂ ಕುಡಿಯುವ ನೀರು, ಶೌಚಾಲಯ ಹುಡುಕಿದರೂ ಸಿಗುವುದಿಲ್ಲ. ಏಕನಾಥೇಶ್ವರಿ ದೇಗುಲದ ಬಳಿಯ ಕ್ಯಾಂಟೀನ್‌ನಲ್ಲಿ ಒಂದು ಲೀಟರ್‌ ನೀರಿಗೆ ದುಪ್ಪಟ್ಟು ಹಣ ಪಾವತಿಸಿದ್ದೇನೆ. ಕ್ಯಾಂಟೀನ್, ನೀರು, ಶೌಚಾಲಯ, ಲಗೇಜ್‌ ರೂಂ, ಮಾಹಿತಿ ಕೇಂದ್ರ ಸೇರಿದಂತೆ ಯಾವುದೇ ಸೌಕರ್ಯ ಇಲ್ಲ. ಹೀಗಿದ್ದರೆ ಪ್ರವಾಸಿಗರು ಬರುವುದಾದರೂ ಹೇಗೆ? ಕನಿಷ್ಠ ಸೌಕರ್ಯ ಕಲ್ಪಿಸಲು ಸಮಸ್ಯೆಯಾದರೂ ಏನಿದೆ?’ ಎಂದು ಜಮಖಂಡಿಯ ಪ್ರವಾಸಿ ಪರಶುರಾಮ್‌ ಭಜಂತ್ರಿ ಅವರು ಚಿತ್ರದುರ್ಗದ ಕೋಟೆಯೊಳಗಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದರು.

ಪ್ರವಾಸಿ ತಾಣಗಳಲ್ಲಿ ಈ ರೀತಿಯ ಸಮಸ್ಯೆ ಇರುವುದು ಬೀದರ್‌, ಬಯಲು ಸೀಮೆಯ ಚಿತ್ರದುರ್ಗದಲ್ಲಷ್ಟೇ ಅಲ್ಲ. ರಾಜ್ಯದ ಉತ್ತರ ದಿಕ್ಕಿನಿಂದ ದಕ್ಷಿಣದ ತುತ್ತ ತುದಿಯವರೆಗೂ ಬಹುತೇಕ ಪ್ರವಾಸಿ ತಾಣಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಮಾರ್ದನಿಸುತ್ತವೆ.

ಬೀದರ್‌ ಕೋಟೆಗೆ ವಾರಾಂತ್ಯಕ್ಕೆ ಏನಿಲ್ಲವೆಂದರೂ ನಾಲ್ಕು ಸಾವಿರದಿಂದ ಐದು ಸಾವಿರ ಜನ ಬರುತ್ತಾರೆ. 5.5 ಕಿ.ಮೀ ಸುತ್ತಳತೆ ವಿಸ್ತೀರ್ಣದ ಕೋಟೆಯನ್ನು ಕಾಲ್ನಡಿಗೆಯಲ್ಲೇ ನೋಡಬೇಕು. ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಇಲ್ಲ. ಗೈಡ್‌ಗಳಿಲ್ಲ. ಲಗೇಜ್‌ ರೂಂಗಳಿಲ್ಲ. ಅಂಗವಿಕಲರಿಗೆ ತ್ರಿಚಕ್ರ ವಾಹನಗಳಿಲ್ಲ. ಇಲ್ಲಗಳ ಪಟ್ಟಿಯೇ ದೊಡ್ಡದಿದೆ. ಕೈಕಾಲು ಗಟ್ಟಿಯಿದ್ದವರಷ್ಟೇ ಕೋಟೆ ನೋಡಬಹುದು ಎಂಬ ಪರಿಸ್ಥಿತಿ ಇದೆ. ರಕ್ಷಣೆಯ ಹೆಸರಲ್ಲಿ ‘ರಂಗೀನ್‌ ಮಹಲ್‌’ ಸೇರಿದಂತೆ ಪ್ರಮುಖ ಸ್ಮಾರಕಗಳಿಗೆ ಬೀಗ ಹಾಕಲಾಗಿದೆ. ಉಪಾಹಾರ, ಊಟ, ತಂಪುಪಾನೀಯ, ಚಹಾ, ಬಿಸ್ಕತ್‌, ಅಷ್ಟೇಕೆ ಕುಡಿಯಲು ನೀರು ಬೇಕೆಂದರೂ ಕೋಟೆಯ ಹೊರಗೆ ಹೋಗಿ ಖರೀದಿಸುವ ಪರಿಸ್ಥಿತಿ ಇದೆ. ಕೋಟೆಯೊಳಗಿನ ಕ್ಯಾಂಟೀನ್‌ಗೆ ಎರಡು ಸಲ ಕರೆದ ಟೆಂಡರ್‌ ಪ್ರಕ್ರಿಯೆಯಲ್ಲಿ ಕಠಿಣ ಷರತ್ತುಗಳ ಕಾರಣಕ್ಕೆ ಯಾರೊಬ್ಬರೂ ಪಾಲ್ಗೊಂಡಿಲ್ಲ. ಇಷ್ಟಿದ್ದರೂ, ಬೀದರ್‌ ಕೋಟೆ ಯುನೆಸ್ಕೋ ಸಂಭವನೀಯ ಸ್ಮಾರಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಪಶ್ಚಿಮ ದೇಶಗಳಿಂದ ರಾಜ್ಯದ ಪ್ರವಾಸೋದ್ಯಮ ಇಲಾಖೆ ಕಲಿಯುವಂತಹದ್ದು ಸಾಕಷ್ಟಿದೆ. ಅಲ್ಲಿ ಯಾವುದೇ ಚಾರಿತ್ರಿಕ ಸ್ಥಳಕ್ಕೆ ಹೋದರೆ ಶೌಚಾಲಯ, ಶುದ್ಧ ಕುಡಿಯುವ ನೀರು, ತಿಂಡಿ, ವಿವಿಧ ಬಗೆಯ ಕಾಫಿ, ಸ್ಮರಣಿಕೆ ಅಂಗಡಿಗಳು ತೀರಾ ಹತ್ತಿರದಲ್ಲಿ ಇದ್ದೇ ಇರುತ್ತವೆ. ಇದು ಸ್ಥಳೀಯರಿಗೆ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುತ್ತದೆ. ಆದರೆ, ನಮ್ಮಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ತೊಡಕಾಗುವಂತಹ ಬಿಗಿ ನಿಯಮಗಳನ್ನು ಹೇರಲಾಗುತ್ತಿದೆ.

‘ಪಿಸುಗುಟ್ಟುವ ಗೋಪುರ’ ಎಂದೇ ಹೆಸರಾಗಿರುವ ವಿಜಯಪುರದ ಗೋಳಗುಮ್ಮಟವೂ ಯುನೆಸ್ಕೋ ಮಾನ್ಯತೆಗೆ ಕಾದಿದೆ. ಆದರೆ, ಅಧಿಕೃತವಾಗಿ ಇದುವರೆಗೆ ಯಾವುದೇ ಪ್ರಸ್ತಾವ ಸಲ್ಲಿಕೆಯಾಗಿಲ್ಲ. ಜಾಗತಿಕವಾಗಿ ಗೋಳಗುಮ್ಮಟ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಆದಿಲ್‌ಶಾಹಿಗಳ ಗೋಳಗುಮ್ಮಟ, ಚಾಲುಕ್ಯರ ಪಟ್ಟದಕಲ್ಲು ಸ್ಮಾರಕ ಮತ್ತು ಬಾದಾಮಿ ಗುಹೆಗಳಿಗೆ ಪ್ರವಾಸಿಗರ ಆಕರ್ಷಣೆಗಾಗಿ ಧ್ವನಿ–ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂಬ ಬಹು ವರ್ಷಗಳ ಬೇಡಿಕೆ ಕೈಗೂಡಿಲ್ಲ. ‘ದೇವಾಲಯಗಳ ತೊಟ್ಟಿಲು’ ಖ್ಯಾತಿಯ ಐಹೊಳೆ ಮತ್ತು ಬಾದಾಮಿಯ ಗುಹಾಂತರ ದೇವಾಲಯಗಳ ವ್ಯಾಪ್ತಿಯಲ್ಲಿರುವ ಮನೆಗಳನ್ನು ತೆರವುಗೊಳಿಸಿ, ಅಲ್ಲಿಯ ನಿವಾಸಿಗಳಿಗೆ ಬೇರೆಡೆಗೆ ಪುನರ್ವಸತಿ ಕಲ್ಪಿಸುವ ಯೋಜನೆ ದಶಕ ಕಳೆದರೂ ಕಾರ್ಯಗತವಾಗಿಲ್ಲ. ಹಂಪಿ, ಬೀದರ್‌ ಕೋಟೆಯೂ ಇದಕ್ಕೆ ಹೊರತಾಗಿಲ್ಲ. ಇಲ್ಲೂ ವಾಜ್ಯ ಕೋರ್ಟ್‌ ಮೆಟ್ಟಿಲೇರಿದೆ.

‘ದೆಹಲಿ ಹೊರತುಪಡಿಸಿದರೆ ಅತಿ ಹೆಚ್ಚು ಸ್ಮಾರಕಗಳಿರುವುದು ವಿಜಯಪುರ, ಬೀದರ್‌ ನಗರಗಳಲ್ಲಿ. ಆದರೆ, ಹೆಚ್ಚಿನ ಸ್ಮಾರಕಗಳು ಪ್ರವಾಸಿಗರಿಗೆ ಅಪರಿಚಿತವಾಗಿವೆ. ಪ್ರವಾಸಿಗರಿಗೆ ಈ ಸ್ಮಾರಕಗಳನ್ನು ಪರಿಚಯಿಸುವ ಕೆಲಸವನ್ನೇ ಪ್ರವಾಸೋದ್ಯಮ ಇಲಾಖೆ ಮಾಡುತ್ತಿಲ್ಲ. ಅತಿಕ್ರಮಣದ ಸಮಸ್ಯೆಯೂ ಕಾಡುತ್ತಿದೆ. ಸುತ್ತಲೂ ಜನವಸತಿ ಬೆಳೆಯುತ್ತಿರುವುದರಿಂದ ಸ್ಮಾರಕಗಳು ಅಂದಗೆಡುವ ಭೀತಿಯಲ್ಲಿವೆ’ ಎಂದು ವಿಜಯಪುರದ ನಿವಾಸಿ ವಿಠ್ಠಲರಾವ ಕಳವಳ ವ್ಯಕ್ತಪಡಿಸಿದರು.

ಹಂಪಿ ವಿಶ್ವ ಪಾರಂಪರಿಕ ತಾಣದ ವ್ಯಾಪ್ತಿ 236 ಚದರ ಕಿ.ಮೀ. ಇದೆ. ಅಂಜನಾದ್ರಿ ಬೆಟ್ಟವೂ ಇದರ ವ್ಯಾಪ್ತಿಗೆ ಒಳಪಡುತ್ತದೆ. ಅಂಜನಾದ್ರಿಯಲ್ಲಿ ರೋಪ್‌ವೇ ಅಭಿವೃದ್ಧಿ ಯೋಜನೆಗಳಿಗೆ ಯುನೆಸ್ಕೋ ಅನುಮತಿ ನೀಡುತ್ತಿಲ್ಲ. ಕೂಡಲಸಂಗಮ ಹೊರತುಪಡಿಸಿದರೆ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ವಿಜಯಪುರ, ಹಂಪಿ ಸೇರಿದಂತೆ ಉತ್ತರದ ಬಹುತೇಕ ಜಿಲ್ಲೆಗಳಲ್ಲಿ ಯಾತ್ರಿ ನಿವಾಸಗಳಿಲ್ಲ. ವಿಜಯಪುರದ ಐತಿಹಾಸಿಕ ಕೋಟೆ ಗೋಡೆ ಸಂಪೂರ್ಣ ಒತ್ತುವರಿಯಾಗಿದೆ.

‘ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರ ವಾಹನ ಕಲ್ಲಿನಕೋಟೆಯತ್ತ ಸಾಗಲು ರಸ್ತೆ ಸರಿಯಾಗಿಲ್ಲ. ಚಿಕ್ಕ ರಸ್ತೆಯ ಕೋಟೆ ಬಾಗಿಲು ದಾಟಿ ಒಳಪ್ರವೇಶಿಸಲು ಪರ್ಯಾಯ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ. ಟಿಕೆಟ್‌ಗೆ ರೂಪಿಸಿದ ಆನ್‌ಲೈನ್ ವ್ಯವಸ್ಥೆ ಕೂಡ ಪ್ರವಾಸಿಗರಿಗೆ ಪೂರಕವಾಗಿಲ್ಲ. ಹೆಚ್ಚು ಪ್ರವಾಸಿಗರು ಭೇಟಿ ನೀಡಿದಾಗ ಟಿಕೆಟ್ ಪಡೆಯಲು ಹರಸಾಹಸ ಪಡುವ ಸ್ಥಿತಿ ಇದೆ’ ಎಂದು ಪ್ರವಾಸಿ ಪರಶುರಾಮ್‌ ಗೋಳು ತೋಡಿಕೊಂಡರು.

ರಸ್ತೆ ಬದಿಗೆ ಶಾಸನಗಳು: ರಾಜ್ಯದಲ್ಲಿ ಹಂಪಿ, ಬೇಲೂರು, ಹಳೇಬೀಡು, ಸೋಮನಾಥಪುರ, ಪಟ್ಟದಕಲ್ಲು ಸ್ಮಾರಕಗಳು ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಿವೆ. ಅಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಶೌಚಾಲಯ, ತಂಗಲು ಕೊಠಡಿ ವ್ಯವಸ್ಥೆ, ವಾಹನಗಳ ಪಾರ್ಕಿಂಗ್‌ಗೆ ಪರದಾಟ ನಡೆಸಬೇಕಾದ ಸ್ಥಿತಿ ಇದೆ.

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಪಾರ್ಕಿಂಗ್ ಬಳಿ, ಜೈನ ಬಸದಿ, ಕೇದಾರೇಶ್ವರ ದೇವಾಲಯ ಹಾಗೂ ಜೈನ ಬಸದಿ ಬಳಿ ಶೌಚಾಲಯ ಇಲ್ಲ. ಶುದ್ಧ ಕುಡಿಯುವ ನೀರು ಪೂರೈಕೆ ಇಲ್ಲ. ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಯೂರ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ 4 ಕೊಠಡಿ ಮಾತ್ರ ಲಭ್ಯವಿದೆ. ಬೇಲೂರಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಚಿತ್ರದುರ್ಗದ ಕೋಟೆ ವೀಕ್ಷಿಸಲು ಬಂದ ಪ್ರವಾಸಿಗರು

ಚಿತ್ರದುರ್ಗದ ಕೋಟೆ ವೀಕ್ಷಿಸಲು ಬಂದ ಪ್ರವಾಸಿಗರು 

ಚಿತ್ರ: ಚಂದ್ರಪ್ಪ ವಿ.

ಜೈನ ಕ್ಷೇತ್ರ ಶ್ರವಣಬೆಳಗೊಳಕ್ಕೆ ನಿತ್ಯ ದೇಶ– ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೇಂದ್ರ ಸರ್ಕಾರ ‘ಸ್ವಚ್ಛ ಭಾರತ್ ಮಿಷನ್’ ಯೋಜನೆಯಡಿ ಪಾರಂಪರಿಕ ತಾಣಗಳಲ್ಲಿ ಶುಚಿತ್ವ, ನೈರ್ಮಲ್ಯ ಮತ್ತು ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಗುರುತಿಸಿರುವ ದೇಶದ 10 ಪ್ರಮುಖ ಸ್ವಚ್ಛ ‘ಐಕಾನಿಕ್’ ಸ್ಥಳಗಳಲ್ಲಿ ಶ್ರವಣಬೆಳಗೊಳವೂ ಸೇರಿದೆ. ಆದರೆ ಈ ಪ್ರಸಿದ್ಧ ತಾಣಕ್ಕೆ ಮೂಲಸೌಕರ್ಯಗಳ ಕೊರತೆ ಸಾಕಷ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ ಕಿರಿದಾದ ರಸ್ತೆಗಳು, ಪಾರ್ಕಿಂಗ್ ವ್ಯವಸ್ಥೆ ಇಲ್ಲ. ವಸತಿ ಸೌಕರ್ಯ ಇದ್ದರೂ ಸಾಲದು. ಸಾಕಷ್ಟು ಶೌಚಾಲಯ ಇಲ್ಲ.

‘ವಿಶ್ವದ ಎರಡನೇ ಅತಿದೊಡ್ಡ ಮಧುಗಿರಿ ಏಕಶಿಲಾ ಬೆಟ್ಟದ ಮಧ್ಯ ಭಾಗದಲ್ಲಿ ಬೆಟ್ಟ ಹತ್ತಲು ಅಳವಡಿಸಿದ್ದ ಕಬ್ಬಿಣದ ಪೈಪ್‌ಗಳು ಸಂಪೂರ್ಣವಾಗಿ ಕಿತ್ತುಹೋಗಿವೆ. ಪೈಪ್‌ಗಳ ದುರಸ್ತಿ ಮಾಡಿಲ್ಲ. ಇದರಿಂದ ಬೆಟ್ಟ ಹತ್ತಲು ಸಮಸ್ಯೆಯಾಗುತ್ತಿದೆ. ಏಕಶಿಲಾ ಬೆಟ್ಟವು ತನ್ನದೇ ಆದ ಇತಿಹಾಸ ಹೊಂದಿದೆ. ಆದರೆ, ಬೆಟ್ಟದ ಉಳಿವಿಗೆ ಆಸಕ್ತಿ ತೋರುತ್ತಿಲ್ಲ’ ಎಂದು ಪ್ರವಾಸಿಗ ಅಂಜಿನಪ್ಪ ಪರಿಸ್ಥಿತಿ ಬಿಚ್ಚಿಟ್ಟರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡುಬಿದಿರೆ ಚೌಟರ ಅರಮನೆ, ಮಂಗಳೂರಿನ ಸುಲ್ತಾನ್ ಬತ್ತೇರಿ, ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಕೋಟೆ ಕುರುಹು, ಕತ್ತಲೆ ಬಸದಿ, ಬೈಂದೂರಿನ ಸೋಮೇಶ್ವರ ದೇವಾಲಯ ಇನ್ನಿತರ ತಾಣಗಳು ಪುರಾತತ್ವ ಇಲಾಖೆಗೆ ಸೇರಿವೆ. ಗತವೈಭವಕ್ಕೆ ಸಾಕ್ಷಿಯಾಗಿ ನಿಂತಿರುವ ದೇವಾಲಯಗಳು, ಶಾಸನಗಳು, ಸ್ತಂಭಗಳು, ಬಸದಿ, ಕೋಟೆ ಕುರುಹುಗಳಿಗೆ ರಕ್ಷಣೆ ಇಲ್ಲದಂತಾಗಿದೆ.

ಇಲ್ಲಿನ ಆವೆಮಣ್ಣಿನ ಸೂರಾಲು ಅರಮನೆ, ಕತ್ತಲೆ ಬಸದಿ, ಕೆರೆಗಳು, ಕೋಟೆ ಪ್ರದೇಶಗಳಲ್ಲಿರುವ ಶಾಸನಗಳು, ಬಸದಿಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೆಲ ವರ್ಷಗಳ ಹಿಂದೆ ಉತ್ಖನನ ಮಾಡಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿತ್ತು. ಆದರೆ, ಇವು ಈಗ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಶಾಸನಗಳು ಯಾವುದೇ ರಕ್ಷಣೆ ಇಲ್ಲದೆ ರಸ್ತೆ ಬದಿಯಲ್ಲಿ ಬಿದ್ದಿವೆ.

‘ಬಾರ್ಕೂರು ಕೋಟೆ ಕುರುಹು ಪ್ರದೇಶಕ್ಕೆ ಭೇಟಿ ನೀಡಿದರೆ, ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಾಗುತ್ತದೆ. ಆದರೆ, ಪ್ರವಾಸಿಗರಿಗೆ ನಿಸರ್ಗದ ಕರೆಗೆ ಹೋಗಲು ಶೌಚಾಲಯ ಸೌಲಭ್ಯವೂ ಇಲ್ಲ’ ಎಂದು ಬೆಂಗಳೂರಿನಿಂದ ಬಂದಿದ್ದ ಎಂಜಿನಿಯರ್ ರಕ್ಷಿತ್ ಬೇಸರ ವ್ಯಕ್ತಪಡಿಸಿದರು.

ಕಠಿಣ ನಿಯಮಗಳೇ ಅಡ್ಡಿ: ಯುನೆಸ್ಕೋ ಹಾಗೂ ಪುರಾತತ್ವ ಇಲಾಖೆಯ ಕಠಿಣ ನಿಯಮಗಳಿಂದ ಸ್ಮಾರಕಗಳ ಪರಿಸರದಲ್ಲಿ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಹಂಪಿ ಉತ್ತಮ ನಿದರ್ಶನ. ಪ್ರವಾಸಿಗರ ಅನುಕೂಲಕ್ಕಾಗಿ ಹಂಪಿ–ಆನೆಗೊಂದಿ ಸಂಪರ್ಕಿಸಲು ತುಂಗಭದ್ರಾ ನದಿ ಮೇಲೆ 2009ರಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅದು ಕುಸಿದು ಬಿದ್ದು 8 ಕಾರ್ಮಿಕರು ಮೃತಪಟ್ಟಿದ್ದರು. ಬಳಿಕ ಆ ಕಾಮಗಾರಿ ಕೈಗೆತ್ತಿಕೊಳ್ಳಲು ಯುನೆಸ್ಕೋ ಅನುಮತಿ ನೀಡಲಿಲ್ಲ. ಇಂದಿಗೂ ಯೋಜನೆ ಕಾರ್ಯಗತವಾಗಿಲ್ಲ.

‘ಸ್ಮಾರಕಗಳ ಜೀರ್ಣೋದ್ಧಾರ, ಅವುಗಳ ಪರಿಸರದಲ್ಲಿ ಯಾವುದೇ ರೀತಿಯ ಸೌಕರ್ಯ ಕಲ್ಪಿಸಲು ನಮಗೆ ಅಧಿಕಾರ ಇಲ್ಲ. ಏನೇ ಮಾಡಬೇಕಿದ್ದರೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಕೇಂದ್ರ ಕಚೇರಿಯ ಅನುಮತಿ ಪಡೆಯಬೇಕಾದದ್ದು ಕಡ್ಡಾಯ. ಇನ್ನು, ಯುನೆಸ್ಕೋ ಪಟ್ಟಿಗೆ ಸೇರಿರುವ ಸ್ಥಳಗಳಲ್ಲಿ ಯುನೆಸ್ಕೋ ಅನುಮತಿ ಇಲ್ಲದೆ ಏನೂ ಮಾಡುವಂತಿಲ್ಲ. ಕಠಿಣವಾದ ನಿಯಮಗಳಿವೆ. ಹೀಗಾಗಿ ಪ್ರವಾಸಿಗರು ಕೇಳುವ ಮೂಲಸೌಲಭ್ಯ ಅಭಿವೃದ್ಧಿ ಮಾಡುವುದು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಪುರಾತತ್ವ ಇಲಾಖೆಯ ಬೀದರ್‌ ಉಪವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ್‌ ದೇಸಾಯಿ.

ಘೋಷವಾಕ್ಯಕ್ಕಷ್ಟೇ ಸೀಮಿತ: ‘ಒಂದು ರಾಜ್ಯ ಹಲವು ಜಗತ್ತುಗಳು’ ಇದು ಪ್ರವಾಸೋದ್ಯಮ ಇಲಾಖೆಯ ಘೋಷವಾಕ್ಯ. ರಾಜ್ಯದಲ್ಲಿನ ಹಲವು ಜಗತ್ತುಗಳನ್ನು ಕಣ್ತುಂಬಿಕೊಳ್ಳಲೆಂದೇ ನಿತ್ಯ ದೇಶ–ವಿದೇಶಗಳಿಂದ ಅಸಂಖ್ಯ ಜನ ರಾಜ್ಯಕ್ಕೆ ಭೇಟಿ ಕೊಡುತ್ತಾರೆ. ಆದರೆ, ಹೀಗೆ ಭೇಟಿ ಕೊಟ್ಟಾಗ ಕನಿಷ್ಠ ಮೂಲಸೌಕರ್ಯಗಳು ಸಿಗದೆ ಅವರು ಗೊಣಗಿಕೊಂಡು ಹಿಂತಿರುಗಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಸಹಜವಾಗಿಯೇ ರಾಜ್ಯದ ಪ್ರವಾಸಿ ತಾಣಗಳೆಂದರೆ ಅಲ್ಲಿಗೆ ಭೇಟಿ ಕೊಡಲು ಹೊರಗಿನವರು ಹಿಂಜರಿಯುತ್ತಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ.

ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ‘ಬಾರಾಕಮಾನ್‌’ ವೀಕ್ಷಿಸಲು ಬರುವ ಪ್ರವಾಸಿಗರನ್ನು ಸ್ವಾಗತಿಸುವ ತರಕಾರಿ ವ್ಯಾಪಾರಸ್ಥರು ಮತ್ತು ಸ್ಥಳೀಯ ಗ್ರಾಹಕರು.

ವಿಜಯಪುರ ನಗರದ ಐತಿಹಾಸಿಕ ಸ್ಮಾರಕ ‘ಬಾರಾಕಮಾನ್‌’ ವೀಕ್ಷಿಸಲು ಬರುವ ಪ್ರವಾಸಿಗರನ್ನು ಸ್ವಾಗತಿಸುವ ತರಕಾರಿ ವ್ಯಾಪಾರಸ್ಥರು ಮತ್ತು ಸ್ಥಳೀಯ ಗ್ರಾಹಕರು.

–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ರಾಜ್ಯದಲ್ಲಿ ನಾಲ್ಕು ಸರ್ಕಾರಿ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ), ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್‌ ಲಿಮಿಟೆಡ್ (ಜೆಎಲ್‌ಆರ್), ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಲಿಮಿಟೆಡ್ (ಕೆಟಿಐಎಲ್) ಮತ್ತು ಕರ್ನಾಟಕ ಪ್ರದರ್ಶನ ಪ್ರಾಧಿಕಾರ (ಕೆಇಎ). ಆದರೆ, ಇದರ ಹೆಚ್ಚಿನ ಚಟುವಟಿಕೆಗಳು ಚಾರಿತ್ರಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಹೊರತುಪಡಿಸಿದೆ. ಜಂಗಲ್‌ ಲಾಡ್ಜಸ್‌ ಕಾಡಿನಂಚಿನಲ್ಲಿ ರೆಸಾರ್ಟ್‌ ನಡೆಸುತ್ತಿದೆ. ಕೆಎಸ್‌ಟಿಡಿಸಿ ಮತ್ತು ಕೆಟಿಐಎಲ್‌ ಚಾರಿತ್ರಿಕ ಮತ್ತು ಐತಿಹಾಸಿಕ ಸ್ಥಳಗಳಲ್ಲಿ ತನ್ನ ಕಾರ್ಯಚಟುವಟಿಕೆ ಇನ್ನೂ ವಿಸ್ತರಿಸಬೇಕಿದೆ. ಜಂಗಲ್‌ ಲಾಡ್ಜಸ್‌ ಹೊರತುಪಡಿಸಿದರೆ ಉಳಿದ ಸಂಸ್ಥೆಗಳು ತಾವು ನಡೆಸುತ್ತಿರುವ ಉದ್ಯಮಕ್ಕೆ ಗುಣಮಟ್ಟದ ಛಾಪು ನೀಡಬೇಕಿದೆ.

ಕೈಚೆಲ್ಲಿದ ಉದ್ಯೋಗ ಸೃಷ್ಟಿ ಅವಕಾಶ: ಪ್ರವಾಸಿ ತಾಣಗಳಲ್ಲಿ ಉತ್ತಮ ಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದು. ಇದರ ಮೂಲಕ ಉದ್ಯೋಗ ಸೃಷ್ಟಿಗೂ ವಿಪುಲ ಅವಕಾಶಗಳಿವೆ. ಆದರೆ, ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಕೊನೆಯ ಸ್ಥಾನ ಪಡೆದಿರುವುದರಿಂದ ಹೇಳಿಕೊಳ್ಳುವಂತಹ ಕೆಲಸಗಳಾಗುತ್ತಿಲ್ಲ. ಬರೀ ಘೋಷಣೆಗಳಿಗೆ ಸೀಮಿತವಾಗಿದೆ.

ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಹೊಸಪೇಟೆಯಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಸೌಕರ್ಯಗಳಿವೆ. ತಂಗಲು ಹೋಟೆಲ್‌, ಸಾರಿಗೆ ವ್ಯವಸ್ಥೆ, ಆಯಾ ರಾಜ್ಯಗಳ ಖಾದ್ಯಗಳು ಸಿಗುತ್ತವೆ. ಪ್ರವಾಸಿ ಮಾರ್ಗದರ್ಶಿಗಳಿಗೂ ಕೊರತೆ ಇಲ್ಲ. ಆದರೆ, ರಾಜ್ಯದ ಇತರೆ ಸ್ಥಳಗಳಲ್ಲಿ ಈ ಸೌಕರ್ಯ ಹೇಳಿಕೊಳ್ಳುವಂತಹ ರೀತಿಯಲ್ಲಿ ಇಲ್ಲ. ಪ್ರವಾಸಿ ಸ್ಥಳಗಳಿಗೆ ಉತ್ತಮ ಸಾರಿಗೆ ಸೌಕರ್ಯ, ತಂಗಲು ಯಾತ್ರಿ ನಿವಾಸ, ಹೋಟೆಲ್‌ ವ್ಯವಸ್ಥೆ, ಪ್ರವಾಸಿ ಮಾರ್ಗದರ್ಶಿಗಳ ನೇಮಕ, ಅಗತ್ಯ ಇರುವ ಕಡೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ, ಬಿಸಿಲು ಹೆಚ್ಚಿರುವ ಕಡೆಗಳಲ್ಲಿ ರಾತ್ರಿ ವೇಳೆ ಸ್ಮಾರಕಗಳ ವೀಕ್ಷಣೆಗೆ ವ್ಯವಸ್ಥೆ ಮಾಡಿದರೆ ಉದ್ಯೋಗ ಸೃಷ್ಟಿಸಬಹುದು. ಆದರೆ, ಈ ವಿಚಾರದಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.

ದಕ್ಷಿಣ ಕನ್ನಡದ ಬಾರ್ಕೂರ ಕೋಟೆ ನೋಡಿದರೆ ಹೆಮ್ಮೆ ಆಗುತ್ತದೆ. ಆದರೆ, ದೂರದಿಂದ ಬರುವ ಪ್ರವಾಸಿಗರಿಗೆ ಶೌಚಾಲಯ ಸೌಲಭ್ಯವೂ ಇಲ್ಲ.
–ರಕ್ಷಿತ್‌, ಬೆಂಗಳೂರು ಪ್ರವಾಸಿ

ಸೌಲಭ್ಯಕ್ಕೆ ಕಠಿಣ ನಿಯಮಗಳ ಕಡಿವಾಣ

ಸಂರಕ್ಷಿತ ಸ್ಮಾರಕಗಳಿರುವ ಕಡೆ ಕೋರ್‌ ಜೋನ್‌, ಬಫರ್‌ ಜೋನ್‌ ಎಂದು ಎರಡು ಭಾಗ ಮಾಡಲಾಗಿರುತ್ತದೆ. ಕೋರ್‌ ಜೋನ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಾಗೂ ಯುನೆಸ್ಕೋ ನಿಯಮಗಳು ಹೇಳುತ್ತವೆ. 

ಉದಾಹರಣೆಗೆ ಸಂರಕ್ಷಿತ ಸ್ಮಾರಕ ಇರುವ ಕಡೆಗಳಲ್ಲಿ 100 ಮೀಟರ್‌ ನಿಷೇಧಿತ ವಲಯ ಇರುತ್ತದೆ. ಅಲ್ಲಿ ಏನೂ ಮಾಡುವಂತಿಲ್ಲ. 200 ಮೀಟರ್‌ ಆಚೆಯದು ನಿಯಂತ್ರಿತ ಪ್ರದೇಶವಾಗಿರುತ್ತದೆ. ಏನೇ ಮಾಡಬೇಕಿದ್ದರೂ ಕೇಂದ್ರ ಕಚೇರಿ ಅನುಮತಿ ಕಡ್ಡಾಯವಾಗಿರುತ್ತದೆ. ಬಹುತೇಕ ಕಡೆಗಳಲ್ಲಿ ಹೆಚ್ಚು ಸ್ಮಾರಕಗಳು ಇರುವುದರಿಂದ ಅದನ್ನು ಸ್ಪಷ್ಟವಾಗಿ ಗುರುತಿಸದೆ ಗೊಂದಲ ಉಂಟಾಗಿದೆ. ಪತ್ರ ವ್ಯವಹಾರಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ತುರ್ತಾಗಿ ಮೂಲಸೌಕರ್ಯ ಕಲ್ಪಿಸಲು ಸಮಸ್ಯೆ ಉಂಟಾಗುತ್ತದೆ. ಯುನೆಸ್ಕೋ, ಪುರಾತತ್ವ ಇಲಾಖೆಯ ಕೇಂದ್ರ ಕಚೇರಿಯನ್ನು ಒಳಗೊಂಡಂತೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು. ನಿಯಮಗಳ ಬಗ್ಗೆ ಹೆಚ್ಚಿನ ಅಧಿಕಾರಿಗಳಿಗೆ ಜ್ಞಾನದ ಕೊರತೆ ಇದೆ. ಪ್ರತಿಯೊಂದಕ್ಕೂ ಕೇಂದ್ರ ಕಚೇರಿಗೆ ಪತ್ರ ಬರೆಯುವ ಸಂದರ್ಭ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೀದರ್‌ ಕೋಟೆಯೊಳಗಿನ ‘ರಂಗೀನ್‌ ಮಹಲ್‌’ ಪ್ರಮುಖ ಸ್ಮಾರಕ. ಆದರೆ, ಅದರ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವುದರಿಂದ ಪ್ರವಾಸಿಗರು ಗೇಟ್‌ ಹೊರಗೆ ದೂರದಿಂದಲೇ ನೋಡಿದರು

ಬೀದರ್‌ ಕೋಟೆಯೊಳಗಿನ ‘ರಂಗೀನ್‌ ಮಹಲ್‌’ ಪ್ರಮುಖ ಸ್ಮಾರಕ. ಆದರೆ, ಅದರ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವುದರಿಂದ ಪ್ರವಾಸಿಗರು ಗೇಟ್‌ ಹೊರಗೆ ದೂರದಿಂದಲೇ ನೋಡಿದರು

–ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ

ಸ್ಮಾರಕಗಳು ಅಂದಗೆಡದಿರಲಿ ಎಂಬ ಕಾರಣಕ್ಕೆ ಶಾಶ್ವತವಾದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ. ಆದರೆ, ತಾತ್ಕಾಲಿಕವಾಗಿ ಶೌಚಾಲಯ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಕಲ್ಪಿಸಬಹುದು. ಆದರೆ, ಹೆಚ್ಚಿನ ಅಧಿಕಾರಿಗಳಿಗೆ ಜ್ಞಾನವಿಲ್ಲ. ಇದರ ಜೊತೆಯಲ್ಲಿ ಮೂಲಸೌಕರ್ಯಕ್ಕೆ ಎಎಸ್‌ಐ ಬಳಿ ಹೆಚ್ಚಿನ ಅನುದಾನವೂ ಇಲ್ಲ. ಇದರಿಂದ ಸೌಕರ್ಯ ಕಲ್ಪಿಸಲು ತೊಡಕಾಗುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ಚಿತ್ರದುರ್ಗ ಕೋಟೆಯೊಳಗೆ ಏನೇನೂ ಸೌಕರ್ಯಗಳಿಲ್ಲ. ಮಹಿಳಾ ಪ್ರವಾಸಿಗರಿಗೆ ಕೋಟೆ ಸುರಕ್ಷಿತವೂ ಅಲ್ಲ. ಇದನ್ನು ನೋಡಿ ಬೇಸರವಾಯಿತು.
ಜ್ಯೋತಿ ಶಾಂತರಾಜ್‌, ದಾವಣಗೆರೆ ಪ್ರವಾಸಿ

ಕಾರ್ಯರೂಪಕ್ಕೆ ಬಾರದ ಪ್ರವಾಸಿ ಸರ್ಕ್ಯೂಟ್‌

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿರುವ ಪ್ರವಾಸಿ ತಾಣಗಳಿಗೆ ತಕ್ಕಂತೆ ಪ್ರವಾಸಿ ಸರ್ಕ್ಯೂಟ್‌ ಮಾಡಿ, ಪ್ರವಾಸಿಗರನ್ನು ಆಕರ್ಷಿಸಬೇಕೆನ್ನುವುದು ದಶಕಗಳ ಯೋಜನೆ. ಆದರೆ, ಇದು ಇನ್ನೂ ಬಹುತೇಕ ಕಡೆಗಳಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನೂ ಗೊಂದಲ ಮನೆ ಮಾಡಿದೆ.

ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯೋಜನೆ ಇನ್ನೂ ಶೈಶವಾವಸ್ಥೆಯಲ್ಲೇ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾದರೆ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳಲ್ಲಿ ಇನ್ನೂ ಯೋಜನೆಯೇ ರೂಪಿತವಾಗಿಲ್ಲ. ‘ಪ್ರಸಿದ್ಧ ತಾಣಗಳನ್ನು ಒಳಗೊಂಡ ಪ್ರವಾಸಿ ಸರ್ಕ್ಯೂಟ್ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಪ್ರವಾಸಿಗರು ಹೆಚ್ಚು ಭೇಟಿ ನೀಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದು ಯಶಸ್ಸು ಕಾಣಬಹುದೆಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎನ್. ಮಾಣಿಕ್ಯ. ಆದರೆ, ಮೈಸೂರು ಭಾಗದಲ್ಲಿ ಪರಿಸ್ಥಿತಿ ಭಿನ್ನವಿದೆ. ಮೈಸೂರು ಭಾಗದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು, ಮೈಸೂರು–ಶ್ರೀರಂಗಪಟ್ಟಣ–ಹಾಸನ–ಬೇಲೂರು–ಹಳೇಬೀಡು ಪ್ರವಾಸಿ ಸರ್ಕ್ಯೂಟ್‌ ಅಭಿವೃದ್ಧಿಪಡಿಸುವ ಕಾರ್ಯ ನಡೆದಿಲ್ಲ. ಘೋಷಣೆಗಷ್ಟೇ ಸೀಮಿತವಾಗಿದೆ.

ಬಾದಾಮಿ ಸಮೀಪದ ವಿಶ್ವಪರಂಪರೆ ತಾಣವಾದ ಪಟ್ಟದಕಲ್ಲಿನಲ್ಲಿ ಟೂರಿಸಂ ಪ್ಲಾಜಾ ಹೋಟೆಲ್ ಕಾಮಗಾರಿ ಸ್ಥಗಿತಗೊಂಡಿದೆ

ಬಾದಾಮಿ ಸಮೀಪದ ವಿಶ್ವಪರಂಪರೆ ತಾಣವಾದ ಪಟ್ಟದಕಲ್ಲಿನಲ್ಲಿ ಟೂರಿಸಂ ಪ್ಲಾಜಾ ಹೋಟೆಲ್ ಕಾಮಗಾರಿ ಸ್ಥಗಿತಗೊಂಡಿದೆ

‘ಪ್ರವಾಸಿ ಸರ್ಕ್ಯೂಟ್‌ ಅಥವಾ ಪ್ರವಾಸಿ ಕಾರಿಡಾರ್‌ ರೀತಿಯ ಪ್ರಸ್ತಾವ ಇಲಾಖೆಯ ಮುಂದಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ತಿಳಿಸಿದ್ದಾರೆ. ಬಹಮನಿ–ರಾಷ್ಟ್ರಕೂಟ–ಚಾಲುಕ್ಯ ಪ್ರವಾಸೋದ್ಯಮ ಸರ್ಕ್ಯೂಟ್‌ ವಾಹನಕ್ಕೆ ಸಿ.ಎಂ ಡಿಸೆಂಬರ್‌ 3ರಂದು ಭಾಲ್ಕಿಯಲ್ಲಿ ಚಾಲನೆ ಕೊಟ್ಟಿದ್ದರು. ಇದುವರೆಗೂ ಅದು ಸಂಚಾರ ಆರಂಭಿಸಿಲ್ಲ.

ಬೀದರ್‌ ಕೋಟೆ ವೀಕ್ಷಣೆಗೆ ಬರುವವರಿಗೆ ಪ್ರವೇಶ ಶುಲ್ಕ ನಿಗದಿಪಡಿಸಿ ಅಗತ್ಯ ಸೌಕರ್ಯ ಕಲ್ಪಿಸಿ, ಅದರಿಂದ ಪ್ರವಾಸೋದ್ಯಮ ಬೆಳೆಸಬಹುದು. ಏನೂ ಸೌಲಭ್ಯವಿಲ್ಲದೆ ಹೇಗೆ ಬೆಳೆಯುತ್ತದೆ.
ಆಸ್ಥಾ, ಪುಣೆ ಪ್ರವಾಸಿ

‘ಸ್ಮಾರಕಗಳ ದತ್ತು’ ಯೋಜನೆಗೆ ಚಾಲನೆ

ರಾಜ್ಯ ಸರ್ಕಾರ ಸ್ಮಾರಕಗಳ ಸಂರಕ್ಷಣೆಗಾಗಿ ಕಲ್ಕಿ ಫೌಂಡೇಶನ್ ಜೊತೆ ಒಡಂಬಡಿಕೆ ಮಾಡಿಕೊಂಡು ‘ನಮ್ಮ ಸ್ಮಾರಕ’ ಎಂಬ ಡಿಜಿಟಲ್ ವೇದಿಕೆಯನ್ನು ಸಿದ್ಧಪಡಿಸಿದೆ. ಸಂಘ ಸಂಸ್ಥೆಗಳು, ಉದ್ಯಮಿಗಳು, ಖಾಸಗಿ ಕಂಪನಿಗಳು, ಕೈಗಾರಿಕೋದ್ಯಮಿಗಳ ಸಹಕಾರದೊಂದಿಗೆ ಎಲ್ಲ ಸ್ಮಾರಕಗಳು, ಪ್ರಾಚ್ಯ ವಸ್ತು ಅವಶೇಷಗಳನ್ನು ಸಂರಕ್ಷಿಸಿ, ಆ ಸ್ಥಳಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ಅನುಷ್ಠಾನಕ್ಕೆ ತರುತ್ತಿದೆ. ಈ ಯೋಜನೆಯಡಿ ರಾಜ್ಯದ 800ಕ್ಕೂ ಹೆಚ್ಚು ಸಂರಕ್ಷಿತ ಸ್ಕಾರಕಗಳ ಪೈಕಿ 280 ಸ್ಮಾರಕಗಳನ್ನು ಆಯ್ಕೆ ಮಾಡಿದೆ. ಸ್ಮಾರಕಗಳಿಗೆ ಮೂಲಸೌಕರ್ಯ ಒದಗಿಸುವುದು, ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳನ್ನು ಜೀರ್ಣೋದ್ಧಾರಗೊಳಿಸುವುದು ಯೋಜನೆಯಲ್ಲಿ ಸೇರಿದೆ. ‘ಸ್ಮಾರಕ ದತ್ತು’ ಯೋಜನೆಯ ಅನುಷ್ಠಾನಕ್ಕೆ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು, ‘ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ’ ಹಮ್ಮಿಕೊಂಡಿದ್ದಾರೆ. ಈಗಾಗಲೇ ಎರಡು ಹಂತದ ಪ್ರವಾಸದಲ್ಲಿ ಅವರು ಐದು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ಸ್ಮಾರಕಗಳ ರಕ್ಷಣೆಗೆ ಸರ್ಕಾರದ ಜತೆಗೆ ಜನರು ಕೈಜೋಡಿಸಿದರೆ, ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು. ‘ನಮ್ಮ ಸ್ಮಾರಕ ದರ್ಶನ ಮತ್ತು ಸಂರಕ್ಷಣೆಗಾಗಿ ಪ್ರವಾಸ’ ಕೈಗೊಂಡು ಸ್ಮಾರಕಗಳಲ್ಲಿ ಸ್ವಚ್ಛತೆ, ಮೂಲಸೌಲಭ್ಯ, ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ.

ಚಿತ್ರದುರ್ಗದ ಕೋಟೆ ವೀಕ್ಷಿಸಲು ಬಂದ ಪ್ರವಾಸಿಗರು

ಚಿತ್ರದುರ್ಗದ ಕೋಟೆ ವೀಕ್ಷಿಸಲು ಬಂದ ಪ್ರವಾಸಿಗರು 

ಚಿತ್ರ: ಚಂದ್ರಪ್ಪ ವಿ.

‘ರಾಜ್ಯದ ಪ್ರವಾಸೋದ್ಯಮಕ್ಕೆ ಚುರುಕುಮುಟ್ಟಿಸಲು ಆರಂಭಿಸಿದ್ದೇನೆ. ಕರಾವಳಿಯ 320 ಕಿ.ಮೀ ಉದ್ದಗಲ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇವೆ. ವಿಸ್ತ್ರುತ ಯೋಜನಾ ವರದಿಯೂ ಸಿದ್ದವಾಗಿದೆ. ಇದರ ಜತೆಯಲ್ಲಿ ಚಾಮುಂಡಿಬೆಟ್ಟವೂ ಸೇರಿದಂತೆ ಹತ್ತು ಕಡೆ ರೋಪ್‌ವೇ ಮಾಡುತ್ತೇವೆ’ ಎಂದು ಸಚಿವರು ತಿಳಿಸಿದರು.

ಮಕ್ಕಳಿಗೆ ಕುಡಿಯಲು ನೀರು, ಸ್ನ್ಯಾಕ್ಸ್‌, ಡಸ್ಟ್‌ಬಿನ್‌, ಹಿರಿಯ ನಾಗರಿಕರಿಗೆ ವೀಲ್‌ ಚೇರ್‌ ಇಲ್ಲ. ಬೀದರ್‌ನ ಸ್ಮಾರಕಗಳನ್ನು ನೋಡುವುದು ಹೇಗೆ?
ಸಾಕ್ಷಿ ಟಂಡನ್‌, ಹೈದರಾಬಾದ್‌ ಪ್ರವಾಸಿ
ಪೂರಕ ಮಾಹಿತಿ: ವಿವಿಧ ಬ್ಯುರೊಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT