ಗುರುವಾರ , ಜೂನ್ 24, 2021
23 °C

ಆಳ–ಅಗಲ: ‘ಸಿಬಿಐ ಪಂಜರದ ಗಿಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆಂಟ್ರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ಸ್ (ಸಿಬಿಐ) ಎಂಬ ದೇಶದ ಪರ‌ಮೋಚ್ಚ ತನಿಖಾ ಸಂಸ್ಥೆಯನ್ನು ಆಳುವ ಪಕ್ಷಗಳು ತನ್ನ ಕೈಗೊಂಬೆಯಾಗಿ ಬಳಸಿಕೊಂಡಿವೆ ಎಂಬ ಆರೋಪ ತೀರಾ ಹೊಸತೇನೂ ಅಲ್ಲ. ಆಳುವ ಪಕ್ಷಗಳು ಸಿಬಿಐ ಅನ್ನು ಎರಡು ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತವೆ ಎಂಬುದು ಪದೇಪದೇ ಗೋಚರವಾಗಿದೆ. ಪ್ರಮುಖವಾಗಿ ರಾಜಕೀಯ ಎದುರಾಳಿಗಳನ್ನು ಮತ್ತು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಆಡಳಿತ ಪಕ್ಷವು ಸಿಬಿಐ ಅನ್ನು ಬಳಸಿಕೊಳ್ಳುವುದು ಒಂದು ರೀತಿ. ತನ್ನದೇ ಹಗರಣಗಳಿಂದ ತನ್ನವರನ್ನು ರಕ್ಷಿಸಿಕೊಳ್ಳಲೂ ಆಡಳಿತ ಪಕ್ಷವು ಸಿಬಿಐ ಅನ್ನು ಬಳಸಿಕೊಂಡ ಉದಾಹರಣೆಗಳು ಇವೆ ಎಂಬುದು ಅಂದಂದಿನ ವಿರೋಧ ಪಕ್ಷಗಳ ಆರೋಪ. ಸಿಬಿಐ ಕ್ರಮಗಳು, ಕ್ರಮ ತೆಗೆದುಕೊಂಡ ಸಂದರ್ಭ ಮತ್ತು ಆ ಕ್ರಮಗಳ ವ್ಯಾಪ್ತಿಯೂ ಈ ಆರೋಪಕ್ಕೆ ಇಂಬು ನೀಡುತ್ತವೆ.

1993ರ ಹವಾಲಾ ಮತ್ತು ಜೈನ್‌ ಡೈರಿ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಲವು ನಾಯಕರ ಹೆಸರು ಕೇಳಿಬಂದಿತ್ತು. ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ನಡೆದ ತನಿಖೆ ಅಂತಿಮ ಹಂತ ಮುಟ್ಟಲೇ ಇಲ್ಲ. 2013ರಲ್ಲಿ ಪ್ರಕರಣವನ್ನು ಮುಚ್ಚಿ ಹಾಕಲಾಯಿತು. ಇಲ್ಲಿ ಸಿಬಿಐ ಅನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು 2013ರಲ್ಲಿ ತನಿಖಾ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಅವರು, ‘ಸಿಬಿಐ ಪಂಜರದ ಗಿಳಿ’ ಎಂದು ಕರೆದಿದ್ದರು. ವಿರೋಧ ಪಕ್ಷಗಳೂ ಈ ಮಾತನ್ನು ಈಗಲೂ ಬಳಸುತ್ತಿವೆ.

ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿ ಇದ್ದಾಗ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಬಲವಾಗಿ ಆರೋಪಿಸಿದ್ದವು. ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಎಂದು ಕರೆದಿದ್ದವು. ‘2005ರ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ರಾಜಕೀಯವಾಗಿ ತುಳಿಯಲು, ಸಿಬಿಐ ಮೂಲಕ ಅವರನ್ನು ಬಂಧಿಸಲಾಗಿದೆ. ಈ ಮೂಲಕ ನಮ್ಮ ಪಕ್ಷದ ಉದಯೋನ್ಮುಖ ನಾಯಕ ನರೇಂದ್ರ ಮೋದಿ ಅವರನ್ನು ತುಳಿಯುವುದಕ್ಕೆ ಸಿಬಿಐ ಅನ್ನು ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ. ಇದನ್ನು ನಿಲ್ಲಿಸಿ’ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರು 2013ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಇದೇ ಸೊಹ್ರಾಬುದ್ದೀನ್ ಶೇಕ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಮಿತ್ ಶಾ ಅವರಿಗೆ ಸಿಬಿಐ ಕ್ಲೀನ್‌ ಚಿಟ್ ನೀಡಿತು.

ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಮತ್ತು ವಿಪಕ್ಷಗಳ ನಾಯಕರನ್ನು ತಮ್ಮ ಪಕ್ಷಕ್ಕೆ ಪಕ್ಷಾಂತರ ಆಗಲು ಒತ್ತಡ ಹೇರಲು, ಸಿಬಿಐ ಅನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ದೊಡ್ಡದನಿಯಲ್ಲಿ ಆರೋಪ ಮಾಡುತ್ತಿವೆ. ರಾಜಕೀಯ ಎದುರಾಳಿಯಾದ ಡಿಎಂಕೆಯ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಮತ್ತವರ ಪಕ್ಷದ ನಾಯಕರ ಮೇಲೆ 2018-2019ರ ಅವಧಿಯಲ್ಲಿ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳು ‘ದಾಳಿ’ ನಡೆಸಿದ್ದವು. ‘ಪಶ್ಚಿಮ ಬಂಗಾಳದ ನಾರದಾ ಮಾರುವೇಷದ ಕಾರ್ಯಾಚರಣೆಯ ಲಂಚ ಹಗರಣದಲ್ಲಿ ಟಿಎಂಸಿಯ ನಾಲ್ವರನ್ನು ಬಂಧಿಸಲಾಗಿದೆ. ಟಿಎಂಸಿಯ ಅಂದಿನ ನಾಯಕ ಹಾಗೂ ಈಗ ಬಿಜೆಪಿಯಲ್ಲಿ ಇರುವ ಸುವೇಂದು ಅಧಿಕಾರಿ ಸಹ ಲಂಚ ಪಡೆಯುತ್ತಿರುವ ದೃಶ್ಯ ನಾರದಾ ಟೇಪ್‌ನಲ್ಲಿ ದಾಖಲಾಗಿತ್ತು. ಆದರೆ ಅವರನ್ನು ಸಿಬಿಐ ಬಂಧಿಸಿಲ್ಲ.
ಸಿಬಿಐ ಅನ್ನು ತೋರಿಸಿಯೇ, ಸುವೇಂದು ಅವರನ್ನು ಬಿಜೆಪಿ ಸೆಳೆದುಕೊಂಡಿದೆ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ವಿಪಕ್ಷಗಳು ಸಿಬಿಐ ಅನ್ನು, ‘ಸೆಂಟ್ರಲ್ ಬಿಜೆಪಿ ಇನ್ವೆಸ್ಟಿಗೇಷನ್ಸ್’ ಎಂದು ಕರೆಯುತ್ತಿವೆ.

ಚುನಾವಣೆ ಹೊಸ್ತಿಲಲ್ಲಿ ‘ಶೋಧ’ ಕಾರ್ಯಾಚರಣೆ

ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದಾಗ, ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಮಗಳು–ಅಳಿಯನ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ಅಧಿಕಾರದ ದುರ್ಬಳಕೆ ಆರೋ‍ಪದಲ್ಲಿ ಚುನಾವಣಾ ಆಯೋಗಕ್ಕೆ ಪಕ್ಷ ದೂರು ನೀಡಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಚುನಾವಣೆ ಘೋಷಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜೀರಾ ಬ್ಯಾನರ್ಜಿ ಅವರನ್ನು ಸಿಬಿಐ ಕಲ್ಲಿದ್ದಲು ಕಳ್ಳತನ ಹಗರಣದಲ್ಲಿ ಪ್ರಶ್ನಿಸಿತ್ತು.  

ಇದೇ ಮಾರ್ಚ್‌ನಲ್ಲಿ ಚಿಟ್ ಫಂಡ್‌ಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಮತ್ತು ಮಾಜಿ ಸಚಿವ ಮದನ್ ಮಿತ್ರ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ವಿಚಾರಣೆಗೆ ಕರೆಸಿತ್ತು. ಇಬ್ಬರೂ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸುವವರಿದ್ದರು. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಅಭ್ಯರ್ಥಿ ವಿವೇಕ್ ಗುಪ್ತಾ ಅವರನ್ನು ಗಂಟೆಗಳ ಕಾಲ ಪ್ರಶ್ನಿಸಲಾಗಿತ್ತು.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಇ.ಡಿ. 2020ರ ಸೆಪ್ಟೆಂಬರ್‌ನಲ್ಲಿ ಬಂಧಿಸಿತ್ತು. ‌‘ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆದೇಶದ ಮೇರೆಗೆ ಕಳ್ಳಸಾಗಣೆ ನಡೆದಿದೆ ಎಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹೇಳಿದ್ದಾರೆ‌’ ಎಂಬುದಾಗಿ ವಿಧಾನಸಭಾ ಚುನಾವಣೆಗೆ ವಾರಗಳ ಮೊದಲು, ಆದಾಯ ತೆರಿಗೆ ಇಲಾಖೆ ಮತ್ತು ಇ.ಡಿ. ಹೇಳಿದ್ದವು.

2019ರ ಏಪ್ರಿಲ್‌ನಲ್ಲಿ, ಲೋಕಸಭಾ ಚುನಾವಣೆಗೆ ಮುನ್ನ, ಅಂದಿನ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತ ಸಹಾಯಕನಿಗೆ ಸೇರಿದ 52 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ನೋಟಿಸ್ ನೀಡಿತ್ತು. 2020ರ ಅಕ್ಟೋಬರ್‌ನಲ್ಲಿ, ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು, ಆದಾಯ ತೆರಿಗೆ ಇಲಾಖೆ ಬಿಹಾರದ ಕಾಂಗ್ರೆಸ್ ಪಕ್ಷದ ಕಚೇರಿಯ ಮೇಲೆ
ದಾಳಿ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಗುಪ್ಕಾರ್ ಕೂಟ ರಚಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ. ನೋಟಿಸ್ ಬಂದಿತ್ತು. 2018ರಲ್ಲಿ ಛತ್ತೀಸಗಡ ವಿಧಾನಸಭಾ ಚುನಾವಣೆಗೆ ಮುನ್ನ ಭೂಪೇಶ್ ಬ‌ಘೇಲ್ ಅವರನ್ನು ಸಿ.ಡಿ. ಹಗರಣದಲ್ಲಿ ಆರೋಪಿಯನ್ನಾಗಿ ಸಿಬಿಐ ಹೆಸರಿಸಿತ್ತು. 2020ರ ಫೆಬ್ರುವರಿಯಲ್ಲೂ ಆದಾಯ ತೆರಿಗೆ ತಂಡಗಳು ರಾಜ್ಯದಲ್ಲಿ ಮೂರು ದಿನ ಶೋಧ ನಡೆಸಿದ್ದವು.

2020ರ ಜುಲೈನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನಿಷ್ಠಾವಂತರಿಗೆ ಸೇರಿದ ಸ್ಥಳಗಳಲ್ಲಿ ಐ.ಟಿ. ಶೋಧ ನಡೆಸಿತ್ತು. ಅದರ ಬೆನ್ನಲ್ಲೇ, ಅವರ ಪುತ್ರ ವೈಭವ್ ಅವರ ವ್ಯವಹಾರ ಪಾಲುದಾರ ಮತ್ತು ಮಾರಿಷಸ್‌ನ ಹೂಡಿಕೆದಾರರ ನಡುವಿನ ಹೂಡಿಕೆ ಒಪ್ಪಂದದ ತನಿಖೆಗೆ ಇ.ಡಿ. ಅಧಿಕಾರಿಗಳು ಮುಂದಾದರು. ಈ ದಾಳಿಯು ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ನಡೆಸಿದ ಪ್ರಯತ್ನವಲ್ಲದೇ ಮತ್ತೇನಲ್ಲ ಎಂದು ಕಾಂಗ್ರೆಸ್ ಹೇಳಿತ್ತು.

ಚುನಾವಣೆಗೆ ಮುನ್ನ ಮಹಾರಾಷ್ಟ್ರ ಮತ್ತು ಹರಿಯಾಣದ ತಮ್ಮ ಲೆಕ್ಕಪತ್ರ ಕಚೇರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ಯಾವುದೇ ಸೂಚನೆಯಿಲ್ಲದೇ ದಾಳಿಯಿಡುತ್ತಿದ್ದಾರೆ ಎಂದು ಆರೋಪಿಸಿ 2019ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಮಣಿಪುರದ ಕಾಂಗ್ರೆಸ್ ಶಾಸಕರು ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕೆಲ ದಿನಗಳ ಮುನ್ನ ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರ ಅಧಿಕೃತ ಮತ್ತು ಖಾಸಗಿ ನಿವಾಸಗಳಲ್ಲಿ ಸಿಬಿಐ ಶೋಧ ನಡೆಸಿತ್ತು.

ಕಾಂಗ್ರೆಸ್‌ ಪಕ್ಷದ ಕರ್ನಾಟಕ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ 2019ರ ಆಗಸ್ಟ್‌ನಲ್ಲಿ ಇ.ಡಿ. ಶೋಧ ನಡೆಸಿತ್ತು. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಅಡ್ಡ ಮತದಾನ ತಪ್ಪಿಸಲು ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರಕ್ಷಣೆ ನೀಡಿದ್ದರು ಹಾಗೂ ಜೆಡಿಎಸ್ ಜತೆಗೂಡಿ ಕಾಂಗ್ರೆಸ್ ಸರ್ಕಾರ ರಚನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದೇ ಶೋಧಕ್ಕೆ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿತ್ತು. 

ರಾಜಕೀಯ ಮುಖಂಡರೇ ಗುರಿ

ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ 2019ರ ಸೆಪ್ಟೆಂಬರ್‌ 5ರಂದು ಕಾಂಗ್ರೆಸ್‌ ಮುಖಂಡ
ಪಿ. ಚಿದಂಬರಂ ಅವರನ್ನು ಸಿಬಿಐ ಬಂಧಿಸಿತ್ತು. ಹಗರಣದ ಪ್ರಮುಖ ಆರೋಪಿಗಳಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರೂ ಇದ್ದರು.

ಚಿದಂಬರಂ ಅವರು ಕೇಂದ್ರದ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಹೂಡಿಕೆ ನಡೆಸಲು ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು (ಎಫ್‌ಐಪಿಬಿ) ಕೆಲವು ಸಂಸ್ಥೆಗಳಿಗೆ ಅನುಮೋದನೆ ನೀಡಿತ್ತು. ಇವುಗಳಲ್ಲಿ ಹಲವು ಸಂಸ್ಥೆಗಳು ನಕಲಿಯಾಗಿದ್ದವು ಮತ್ತು ಅವುಗಳು ಚಿದಂಬರಂ ಮತ್ತು ಅವರ ಪುತ್ರನ ಮಾಲೀಕತ್ವದ್ದಾಗಿದ್ದವು. ಹಣದ ಅಕ್ರಮ ವರ್ಗಾವಣೆಗೆ ಇವುಗಳನ್ನು ಬಳಸಲಾಗಿತ್ತು ಎಂಬುದು ಇವರ ವಿರುದ್ಧದ ಆರೋಪಗಳಾಗಿದ್ದವು.

l ಡಿ.ಕೆ. ಶಿವಕುಮಾರ್‌ ಅವರಿಗೆ ಸೇರಿದ ದೆಹಲಿ, ಮಹಾರಾಷ್ಟ್ರ ಹಾಗೂ ಬೆಂಗಳೂರಿನ ಮನೆಗಳಲ್ಲಿ ಸಿಬಿಐ 2020ರ ಅಕ್ಟೋಬರ್‌ ತಿಂಗಳಲ್ಲಿ ಶೋಧ ನಡೆಸಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಉಪಚುನಾವಣೆಗಳಿಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದವು. ಘೋಷಿತ ಆದಾಯಕ್ಕಿಂತ ಸುಮಾರು ₹75 ಕೋಟಿಯಷ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಎಂದು ಶಿವಕುಮಾರ್‌ ವಿರುದ್ಧ ದೂರು ದಾಖಲಿಸಲಾಗಿತ್ತು.

l 2019ರ ಜ. 25, ಹರಿಯಾಣದ ಜಿಂದ್‌ನಲ್ಲಿ ಉಪಚುನಾವಣೆಗೂ ಸ್ವಲ್ಪ ಮುನ್ನ, ರಾಜ್ಯದ ಕಾಂಗ್ರೆಸ್‌ ಮುಖಂಡ ಭೂಪಿಂದರ್‌ಸಿಂಗ್‌ ಹೂಡಾ ಅವರ ವಿರುದ್ಧ ಭೂಸ್ವಾಧೀನ ಹಗರಣಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಡೆಸಿದ ದೂರನ್ನು ಸಿಬಿಐ ದಾಖಲಿಸಿಕೊಂಡಿತು. ಅದು ಹೂಡಾ ವಿರುದ್ಧ ಸಿಬಿಐ ದಾಖಲಿಸಿದ್ದ ಮೂರನೇ ಎಫ್‌ಐಆರ್‌ ಆಗಿತ್ತು.

l 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್‌ಪಿ– ಬಿಎಸ್‌ಪಿ ಮೈತ್ರಿ ಮಾತುಕತೆ ಅಂತಿಮ ಹಂತದಲ್ಲಿತ್ತು. ಮೈತ್ರಿ ಘೋಷಣೆಯಾಗುವುದಕ್ಕೂ ಒಂದು ವಾರ ಮೊದಲು, ರಾಜ್ಯದ ಅನೇಕ ಕಡೆಗಳಲ್ಲಿ ಸಿಬಿಐ ಶೋಧ ನಡೆಸಿತು. 2012ರಿಂದ 2016ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ಶೋಧಗಳು ನಡೆದಿದ್ದವು. ಕೆಲವು ಅಧಿಕಾರಿಗಳು ಹಾಗೂ ಎರಡೂ ಪಕ್ಷಗಳ ಮುಖಂಡರ ಮನೆಗಳಲ್ಲಿ ಶೋಧ ನಡೆದಿತ್ತು.

l ಒಡಿಶಾದಲ್ಲಿ 2017ರ ಪಂಚಾಯತ್‌ ಚುನಾವಣೆಗಳಿಗೂ ಕೆಲವೇ ದಿನ ಮೊದಲು ಬಿಜೆಡಿಯ ಕೆಲವು ಶಾಸಕರು ಮತ್ತು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರ ಕಚೇರಿಯ ಅಧಿಕಾರಿಗಳ ಮನೆಯಲ್ಲಿ ಸಿಬಿಐ ಶೋಧ ನಡೆಸಿತ್ತು. ₹ 500 ಕೋಟಿ ಮೌಲ್ಯದ ಚಿಟ್‌ಫಂಡ್‌ ಅಕ್ರಮದಲ್ಲಿ ಇವರು ಶಾಮೀಲಾಗಿದ್ದಾರೆ ಎಂದು ಸಿಬಿಐ ಶಂಕಿಸಿತ್ತು.

l 2016ರಲ್ಲಿ ಉತ್ತರಾಖಂಡದಲ್ಲಿ ರಾಜಕೀಯ ತುಮುಲ ಸೃಷ್ಟಿಯಾಗಿ, ಕಾಂಗ್ರೆಸ್‌ ಪಕ್ಷ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಮುಖ್ಯಮಂತ್ರಿ ವಿಶ್ವಾಸಮತ ಪಡೆಯಬೇಕಾಗಿ ಬಂದಿತ್ತು. ತನ್ನ ಪರವಾಗಿ ಮತ ಚಲಾಯಿಸಲು ರಾವತ್‌ ಅವರು ಲಂಚದ ಆಮಿಷ ತೋರಿಸಿದ್ದರು ಎಂದು ಬಂಡಾಯ ಶಾಸಕರು ಆರೋಪಿಸಿದ್ದರು. ಇದರ ಆಧಾರದಲ್ಲಿ ಬಿಜೆಪಿಯ ಮುಖಂಡರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನೇ ಆಧಾರವಾಗಿಟ್ಟು, ಸಿಬಿಐ ತನಿಖೆಯನ್ನು ಆರಂಭಿಸಿತ್ತು. ವಿಶ್ವಾಸಮತ ಯಾಚನೆಯ ಹಿಂದಿನ ದಿನ ವಿಚಾರಣೆಗೆ ಹಾಜರಾಗುವಂತೆ ರಾವತ್‌ ಅವರಿಗೆ ಸಿಬಿಐ
ನೋಟಿಸ್‌ ನೀಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು