ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ: ಪದ್ಮ ಪುರಸ್ಕಾರ ವಿವಿಧ ಕಾರಣಗಳಿಗೆ ತಿರಸ್ಕಾರ

Last Updated 27 ಜನವರಿ 2022, 19:31 IST
ಅಕ್ಷರ ಗಾತ್ರ

ಭಾರತದ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮ’ಪ್ರಶಸ್ತಿಗಳನ್ನುಕೇಂದ್ರ ಸರ್ಕಾರ ಪ್ರಕಟಿಸಿದೆ. ಇದರ ಬೆನ್ನಲ್ಲೇ, ಮೂವರು ಗಣ್ಯರು ಪ್ರಶಸ್ತಿಯನ್ನು ತಿರಸ್ಕರಿಸಿದ್ದು, ಇದು ರಾಜಕೀಯ ತಿರುವು ಪಡೆದುಕೊಂಡಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂ ಹಿರಿಯ ನಾಯಕ ಬುದ್ಧದೇವ ಭಟ್ಟಾಚಾರ್ಯ, ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ ಹಾಗೂ ತಬಲಾವಾದಕ ಅನಿಂದ್ಯ ಚಟರ್ಜಿ ಅವರು ಪದ್ಮ ಪ್ರಶಸ್ತಿಗಳನ್ನು ನಿರಾಕರಿಸಿದ್ದಾರೆ.

ದೇಶದ ಮೂರನೇ ಅತ್ಯುನ್ನತ ಗೌರವ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಬುದ್ಧದೇವ ಭಟ್ಟಾಚಾರ್ಯ ಒಪ್ಪಿಲ್ಲ. ‘ಪದ್ಮಭೂಷಣ ಪ್ರಶಸ್ತಿ ನೀಡುವ ಬಗ್ಗೆ ನನಗೇನೂ ಗೊತ್ತಿಲ್ಲ. ಮೊದಲೇ ತಿಳಿಸಿದ್ದರೆ ನಾನದನ್ನು ನಿರಾಕರಿಸು ತ್ತಿದ್ದೆ’ ಎಂದು ಅವರು ಹೇಳಿದ್ದಾರೆ.ಸರ್ಕಾರದ ಯಾವ ಪುರಸ್ಕಾರವನ್ನು ಸ್ವೀಕರಿಸಬಾರದು ಎಂಬುದು ಪಕ್ಷದ ನೀತಿಯೂ ಹೌದು ಎಂದಿದ್ದಾರೆ.

ಜೀವನ ಸಂಧ್ಯಾಕಾಲದಲ್ಲಿ ಪ್ರಶಸ್ತಿಯೇ?

ದೇಶದ ನಾಲ್ಕನೇ ಅತ್ಯುತ್ನತ ನಾಗರಿಕ ಗೌರವ ಎನಿಸಿರುವ ‘ಪದ್ಮಶ್ರೀ’ ಪ್ರಶಸ್ತಿ ಪಟ್ಟಿಯಲ್ಲಿ ಖ್ಯಾತ ಗಾಯಕಿ, 90 ವರ್ಷದ ಸಂಧ್ಯಾ ಮುಖರ್ಜಿ ಅವರ ಹೆಸರಿತ್ತು. ಸಂಧ್ಯಾ ಅವರ ಏಳು ದಶಕಗಳ ಸಾಧನೆಯನ್ನು ಪರಿಗಣಿಸಿ ಅವರ ಜೀವನ ಸಂಧ್ಯಾಕಾಲದಲ್ಲಿ ಪ್ರಶಸ್ತಿ ನೀಡಲುಪರಿಗಣಿಸಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ಇಳಿ ವಯಸ್ಸಿನಲ್ಲಿ ಅತ್ಯುನ್ನತ ಪ್ರಶಸ್ತಿಗಳಲ್ಲಿ ಕೊನೆಯದನ್ನು ನೀಡಲು ಕೇಂದ್ರ ನಿರ್ಧರಿಸಿರುವುದೂ ಅವರ ಶಿಷ್ಯರು ಹಾಗೂ ಕುಟುಂಬ ವರ್ಗದಲ್ಲಿ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಮುಖರ್ಜಿ ಅವರು ಭಾರತೀಯ ಸಿನಿಮಾದ ಸಾವಿರಾರು ಹಾಡುಗಳಿಗೆ ದನಿಯಾಗಿದ್ದು, ಹಲವು ಆಲ್ಬಮ್‌ಗಳನ್ನು ಹೊರತಂದಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ 1970ರಲ್ಲೇ ಅವರು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದರು. ಇದಾಗಿ ಭರ್ತಿ 50 ವರ್ಷಗಳ ಬಳಿಕ ಅವರನ್ನು ಪದ್ಮ ಪ್ರಶಸ್ತಿಗೆ ಸರ್ಕಾರ ಆಯ್ಕೆ ಮಾಡಿದೆ. ಈ ವಯಸ್ಸಿನಲ್ಲಿಪದ್ಮಶ್ರೀ ಸ್ವೀಕರಿಸುವುದರಿಂದ ತಮ್ಮ ಘನತೆಗೆ ಧಕ್ಕೆಯಾಗುತ್ತದೆ ಎಂದು ಅವರು ಕರೆ ಮಾಡಿದ್ದ ಅಧಿಕಾರಿಗಳಿಗೆ ತಿಳಿಸಿದ್ದರು.

ಸಂಗೀತದ ದಂತಕಥೆಗೆ ಅವರ 90ನೇ ವಯಸ್ಸಿನಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡುವುದು ಅತ್ಯಂತ ಅವಮಾನಕರ ಎಂದು ಸಂಧ್ಯಾ ಮುಖರ್ಜಿ ಅವರ ಪುತ್ರಿ ಸೌಮಿ ಸೇನ್‌ಗುಪ್ತಾ ಬೇಸರ ತೋಡಿಕೊಂಡಿದ್ದಾರೆ. ತಮ್ಮ ತಾಯಿಯ ನಿರ್ಧಾರವು ರಾಜಕೀಯ ಪ್ರೇರಿತ ಅಲ್ಲ ಎಂದು ಸ್ಪಷ್ಟಪ‍ಡಿಸಿದ್ದಾರೆ.

‘ಸಂಧ್ಯಾ ಅವರು ಬಂಗಾಳದವರು ಎಂಬ ಕಾರಣಕ್ಕೆ ಅವರನ್ನು ಅಪಮಾನಿಸಲು ಹೀಗೆ ಮಾಡಲಾಗಿದೆ. ಸಂಧ್ಯಾ ಅವರ ಶಿಷ್ಯರಾಗಲೂ ಯೋಗ್ಯರಲ್ಲದ ಕೆಲವರನ್ನು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತನ್ನ ಜನರನ್ನು ಗೌರವಿಸದ ಸರ್ಕಾರದ ಈ ವರ್ತನೆ ನೋಡಿದರೆ ದೇಶ ಬಿಟ್ಟು ಹೋಗಬೇಕೆನಿಸುತ್ತದೆ’ ಎಂದು ಟಿಎಂಸಿ ಮಾಜಿ ಸಂಸದರೂ ಆಗಿರುವ ಗಾಯಕ ಸುಮನ್ ಚಟರ್ಜಿ ಕಿಡಿಕಾರಿದ್ದಾರೆ.ಯಾರನ್ನು ಪ್ರಶಸ್ತಿಗೆ ಯಾವಾಗ ಆಯ್ಕೆ ಮಾಡಬೇಕು ಎಂಬ ಕನಿಷ್ಠ ತಿಳಿವಳಿಕೆ ಇಲ್ಲದವರಿಂದ ಸರ್ಕಾರ ನಡೆಯುತ್ತಿದೆ ಎಂಬುದಾಗಿ ಲೇಖಕ ಅಬುಲ್ ಬಷರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘10 ವರ್ಷದ ಹಿಂದೆಕೊಟ್ಟಿದ್ದರೆ ಒಪ್ಪುತ್ತಿದ್ದೆ’

ತಮ್ಮ ಹಾಗೂ ತಮ್ಮ ವೃತ್ತಿಜೀವನದ ಬಗ್ಗೆ ಕಿಂಚಿತ್ತೂ ಅರಿವಿದಲ್ಲದವರು ತಮ್ಮನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂಬ ಬೇಸರವನ್ನು ಖ್ಯಾತ ತಬಲಾವಾದಕ ಅನಿಂದ್ಯ ಚಟರ್ಜಿ ವ್ಯಕ್ತಪಡಿಸಿದ್ದಾರೆ.ಪ್ರಶಸ್ತಿ ಒಪ್ಪಿಕೊಳ್ಳುವಂತೆ ಮಂಗಳವಾರ ತಮಗೆ ದೆಹಲಿಯಿಂದ ಕರೆ ಬಂದಿತ್ತು ಎಂದು ತಬಲಾ ಮಾಂತ್ರಿಕ ಹೇಳಿದ್ದಾರೆ. ‘ನಾನು ಈ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದೆ. ನಿಮಗೆ ಧನ್ಯವಾದಗಳು. ಆದರೆ, ನನ್ನ ವೃತ್ತಿ ಜೀವನದ ಈ ಕಾಲಘಟ್ಟದಲ್ಲಿ ನಾನು ಪ್ರಶಸ್ತಿ ಸ್ವೀಕರಿಸಲು ಸಿದ್ಧನಿಲ್ಲ’ ಎಂದು ತಿಳಿಸಿದ್ದಾಗಿ ಅನಿಂದ್ಯ ಮಾಹಿತಿ ನೀಡಿದ್ದಾರೆ.

ಈಗ್ಗೆ 10 ವರ್ಷಗಳ ಹಿಂದೆ ಈ ಪ್ರಶಸ್ತಿಯನ್ನು ನೀಡಿದ್ದರೆ ಗೌರವದಿಂದ ಸ್ವೀಕಾರ ಮಾಡುತ್ತಿದ್ದೆ ಎಂದು ಅವರು ಹೇಳಿದ್ದಾರೆ. ‘ನನ್ನ ಎಷ್ಟೋ ಜೊತೆಗಾರರು ಹಾಗೂ ಕಿರಿಯರು ಹಲವು ವರ್ಷಗಳ ಹಿಂದೆಯೇ ಪದ್ಮಶ್ರೀಗೆ ಭಾಜನರಾಗಿದ್ದಾರೆ.ಆದಾಗ್ಯೂ, ನಾನು ವಿನಮ್ರತೆಯಿಂದ ಹೇಳುತ್ತಿದ್ದೇನೆ. ನಾನು ಪ್ರಶಸ್ತಿ ಸ್ವೀಕರಿಸಲು ಸಾಧ್ಯವಿಲ್ಲ, ಕ್ಷಮಿಸಿ’ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.

ಆಜಾದ್‌ಗೆ ಅತ್ಯುನ್ನತ ಗೌರವದ ಹಿಂದೇನಿದೆ?

ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಅವರಿಗೆ ‘ಪದ್ಮಭೂಷಣ’ ನೀಡುವ ವಿಚಾರವು ಕಾಂಗ್ರೆಸ್‌ನಲ್ಲಿ ಅಂತಃಕಲಹಕ್ಕೆ ಕಾರಣವಾಗಿದೆ. ಪಕ್ಷ ಅವರ ಸೇವೆಯನ್ನು ಗುರುತಿಸದಿದ್ದರೂ, ಸರ್ಕಾರ ಗುರುತಿಸಿದೆ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಆದರೆ, ಜೈರಾಮ್ ರಮೇಶ್ ಅವರು ಭಿನ್ನ ನಿಲುವು ತಳೆದಿದ್ದಾರೆ.

ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್‌ನ 23 ಮಂದಿ ಅತೃಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದು ಒತ್ತಾಯಿಸಿದ್ದ ತಂಡದಲ್ಲಿ ಇವರಿದ್ದರು. ಹೀಗಾಗಿ ರಾಹುಲ್ ಗಾಂಧಿ ಮೊದಲಾದವರು ಈ ಗುಂಪಿನ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಮಧ್ಯೆ, ಆಜಾದ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತಿರ ಮಾಡಿಕೊಂಡಿದ್ದಾರೆ. ಮೋದಿ ಹಾಗೂ ಆಜಾದ್ ನಡುವಣ ಸಂಬಂಧ ಆಪ್ತವಾಗಿದೆ ಎಂದು ಹೇಳಲಾಗುತ್ತಿದೆ. ಆಜಾದ್ ಅವರು ರಾಜ್ಯಸಭೆಯಿಂದ ನಿವೃತ್ತರಾದ ದಿನ ಸಂಸತ್ತಿನಲ್ಲಿ ಪ್ರಧಾನಿ ಅವರು ಭಾವುಕರಾಗಿ ಮಾತನಾಡಿದ್ದರು.

ಈಗ ಜಮ್ಮು ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆಗಳು ಶುರುವಾಗಿವೆ. ಸದ್ಯದಲ್ಲೇ ಅಲ್ಲಿ ಚುನಾವಣೆ ಘೋಷಣೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್‌ನಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಆಜಾದ್ ಅವರು ಪಕ್ಷ ತೊರೆದು, ಕಾಶ್ಮೀರದಲ್ಲಿ ಹೊಸ ಪಕ್ಷ ಕಟ್ಟುವ ಸಿದ್ಧತೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಇದು ಕೈಗೂಡಿದಲ್ಲಿ, ಬಿಜೆಪಿ ಜೊತೆ ಆಜಾದ್ ಪಕ್ಷ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವಿಶ್ಲೇಷಕರು. ಆಜಾದ್ ಅವರನ್ನು ಅತ್ಯುನ್ನತ ನಾಗರಿಕ ಗೌರವ ಹುಡುಕಿಕೊಂಡು ಬಂದಿರುವುದು ಈ ಎಲ್ಲ ಬೆಳವಣಿಗೆಗಳಿಗೆ ಪುಷ್ಟಿ ನೀಡುವಂತಿದೆ ಎನ್ನಲಾಗುತ್ತಿದೆ.

ಪ್ರಕ್ರಿಯೆ ಉಲ್ಲಂಘನೆ

ಪದ್ಮ ಪ್ರಶಸ್ತಿ ಘೋಷಿಸುವ ಮುನ್ನ, ಉದ್ದೇಶಿತ ಪುರಸ್ಕೃತರ ವೈಯಕ್ತಿಕ ಅನುಮತಿ ಪಡೆಯಲಾಗುತ್ತದೆ. ಪುರಸ್ಕಾರ ಘೋಷಣೆಯ ನಂತರ ಅದನ್ನು ತಿರಸ್ಕರಿಸಿದರೆ, ಸರ್ಕಾರಕ್ಕೆ ಮುಜುಗರವಾಗುತ್ತದೆ. ಈ ಕಾರಣದಿಂದಲೇ ಘೋಷಣೆಗೆ ಮುನ್ನವೇ ಅನುಮತಿ ಪಡೆಯಲಾಗುತ್ತದೆ. ಆದರೆ ಈ ಸಾಲಿನ ಪುರಸ್ಕಾರವನ್ನು ಘೋಷಿಸುವ ಮುನ್ನ ಒಬ್ಬರಿಂದ ವೈಯಕ್ತಿಕವಾಗಿ ಒಪ್ಪಿಗೆ ಪಡೆದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳೇ ಹೇಳಿದ್ದಾರೆ.

‘ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಅವರಿಗೆ ಪದ್ಮ ಪುರಸ್ಕಾರವನ್ನು ನೀಡುವ ಸಂಬಂಧ ಒಪ್ಪಿಗೆ ಪಡೆಯಲು ಅವರ ಮನೆಗೆ ಮಂಗಳವಾರ ಕರೆ ಮಾಡಲಾಗಿತ್ತು. ಅವರ ಪತ್ನಿ ಕರೆ ಸ್ವೀಕರಿಸಿದ್ದರು. ಅವರಿಗೆ ವಿಷಯವನ್ನು ಮುಟ್ಟಿಸಲಾಯಿತು. ಅವರು ತಮ್ಮ ಪತಿಗೆ ವಿಷಯವನ್ನು ಹೇಳುತ್ತೇನೆ ಎಂದು ಹೇಳಿದರು. ಮಂಗಳವಾರ ಸಂಜೆವರೆಗೆ ಕಾಯಲಾಯಿತು. ಅವರಿಂದ ಯಾವುದೇ ಕರೆ ಬರದಿದ್ದ ಕಾರಣ ಪುರಸ್ಕಾರಕ್ಕೆ ಅವರ ಒಪ್ಪಿಗೆ ಇದೆ ಎಂದು ಪರಿಗಣಿಸಲಾಯಿತು’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಬುದ್ಧದೇವ್ ಭಟ್ಟಾಚಾರ್ಯ ಅವರು ಪುರಸ್ಕಾರ ಘೋಷಣೆಯ ನಂತರ ಅದನ್ನು ತಿರಸ್ಕರಿಸಿದ್ದಾರೆ. ‘ತಮಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಸರ್ಕಾರ ಅದನ್ನು ನನಗೆ ಕೊಡಬೇಕು ಎಂದು ನಿರ್ಧರಿಸಿದ್ದರೆ, ನಾನು ಖಂಡಿತಾ ಅದನ್ನು ತಿರಸ್ಕರಿಸುತ್ತಿದ್ದೆ’ ಎಂದು ಅವರು ಹೇಳಿಕೆ ನೀಡಿದ್ದಾರೆ. ತಮಗೆ ಪುರಸ್ಕಾರ ನೀಡಲಾಗುತ್ತದೆ ಎಂಬ ಮಾಹಿತಿಯೇ ಅವರಿಗೆ ಇರಲಿಲ್ಲ. ಅವರಿಗೆ ಈ ಮಾಹಿತಿ ಇದ್ದಿದ್ದರೆ ಅದನ್ನು ಅವರು ಘೋಷಣೆಗೂ ಮುನ್ನವೇ ತಿರಸ್ಕರಿಸುತ್ತಿದ್ದರು ಎಂದು ಸಿಪಿಎಂ ಮೂಲಗಳು ಹೇಳಿವೆ. ‘ಸರ್ಕಾರದ ಯಾವುದೇ ಪುರಸ್ಕಾರವನ್ನು ಸ್ವೀಕರಿಸಬಾರದು ಎಂಬುದು ನಮ್ಮ ಪಕ್ಷದ ನೀತಿ. ಕೇರಳದ ಮೊದಲ ಮುಖ್ಯಮಂತ್ರಿ ಕಾಮ್ರೇಡ್‌ ಇಎಂಎಸ್‌ ನಂಬೂದಿರಿಪ್ಪಾಡ್‌ ಅವರು ಸಹ ಪದ್ಮ ಪುರಸ್ಕಾರವನ್ನು ತಿರಸ್ಕರಿಸಿದ್ದರು’ ಎಂದು ಸಿಪಿಎಂ ಹೇಳಿದೆ.

ಸರ್ಕಾರದ ಮುಲಾಜಿಗೆ ಸಿಗಬಾರದೆಂಬುದೇ ಪ್ರಮುಖ ಕಾರಣ

ಪದ್ಮ ಪುರಸ್ಕಾರಗಳನ್ನು ಆರಂಭಿಸಿದಾಗಿನಿಂದ ಈವರೆಗೆ ಹಲವು ಮಂದಿ ಪುರಸ್ಕಾರವನ್ನು ತಿರಸ್ಕರಿಸಿದ್ದಾರೆ. ಈವರೆಗೆ 20 ಜನರು ಪದ್ಮಶ್ರೀ ಪುರಸ್ಕಾರವನ್ನು ತಿರಸ್ಕರಿಸಿದ್ದರೆ, ಪದ್ಮಭೂಷಣ ಪುರಸ್ಕಾರವನ್ನು 12 ಮಂದಿ ತಿರಸ್ಕರಿಸಿದ್ದಾರೆ. ಪದ್ಮವಿಭೂಷಣ ಪುರಸ್ಕಾರವನ್ನು ತಿರಸ್ಕರಿಸಿದವರ ಸಂಖ್ಯೆ ಮೂರು.

2015ರ ನಂತರ ಪದ್ಮಶ್ರೀ ಪುರಸ್ಕಾರವನ್ನು ತಿರಸ್ಕರಿಸಿದವರ ಸಂಖ್ಯೆ ಹೆಚ್ಚು. 1959ರಿಂದ 2013ರವರೆಗೆ 11 ಮಂದಿ ಈ ಪುರಸ್ಕಾರವನ್ನು ತಿರಸ್ಕರಿಸಿದ್ದರೆ, 2015ರಿಂದ ಈವರೆಗೆ 9 ಮಂದಿ ಈ ಪುರಸ್ಕಾರವನ್ನು ಸ್ವೀಕರಿಸಿದ್ದಾರೆ.

ಪದ್ಮ ಪುರಸ್ಕಾರಗಳನ್ನು ತಿರಸ್ಕರಿಸಿದವರು ನೀಡಿರುವ ಕಾರಣಗಳು ಭಿನ್ನವಾಗಿವೆ. ಆದರೆ, ‘ಸ್ಥಾಪಿತ ಸರ್ಕಾರವು ನೀಡುವ ಪುರಸ್ಕಾರ ಸ್ವೀಕರಿಸಿದರೆ ಸರ್ಕಾರದ ಮುಲಾಜಿಗೆ ಒಳಗಾಗುತ್ತೇವೆ. ಈ ಕಾರಣದಿಂದಲೇ ಸರ್ಕಾರದ ಪುರಸ್ಕಾರ ಸ್ವೀಕರಿಸಬಾರದು’ ಎಂದು ಹೇಳಿದವರ ಪ್ರಮಾಣ ಹೆಚ್ಚು. ಪದ್ಮ ಪುರಸ್ಕಾರವನ್ನು ತಿರಸ್ಕರಿಸಿರುವ ಎಲ್ಲಾ ಪತ್ರಕರ್ತರು ಇದೇ ಕಾರಣವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ‘ಪತ್ರಕರ್ತರು ಸರ್ಕಾರದ ಪುರಸ್ಕಾರಗಳಿಂದ ದೂರವಿರಬೇಕು’ ಎಂದು ಹೇಳಿದ್ದಾರೆ.

ಪದ್ಮ ಪುರಸ್ಕಾರವನ್ನು ತಿರಸ್ಕರಿಸಿದ ಹಲವು ಲೇಖಕರು, ಸಾಹಿತಿಗಳು ಮತ್ತು ಕಲಾವಿದರು ಸಹ ಇಂಥಹದ್ದೇ ಕಾರಣ ನೀಡಿದ್ದಾರೆ. ‘ಕಲಾವಿದರು ಮತ್ತು ಸಾಹಿತಿಗಳು ಸರ್ಕಾರವು ನೀಡುವ ಪುರಸ್ಕಾರಗಳಿಂದ ದೂರವಿರಬೇಕು. ಪುರಸ್ಕಾರವನ್ನು ಸ್ವೀಕರಿಸಿದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅಧಿಕಾರದಲ್ಲಿರುವ ಪಕ್ಷದ ಮುಲಾಜಿಗೆ ಒಳಗಾಗಬೇಕಾಗುತ್ತದೆ’ ಎಂದು ಹಲವರು ಸ್ಪಷ್ಟವಾಗಿ ಹೇಳಿದ್ದಾರೆ.

ತಮಿಳು ಸಾಹಿತಿ ಬಿ.ಜಯಮೋಹನ್ ಅವರಂತೂ ಈ ಕಾರಣವನ್ನು ಬಹಳ ನೇರವಾಗಿ ಉಲ್ಲೇಖಿಸಿದ್ದಾರೆ. ಬಿ.ಜಯಮೋಹನ್ ಅವರ ಸಾಹಿತ್ಯ ಕೃತಿಗಳು ಮತ್ತು ಬರಹಗಳು ಕೇಂದ್ರದ ಬಿಜೆಪಿ ಸರ್ಕಾರವನ್ನೇ ಗುರಿ ಮಾಡುತ್ತವೆ. ‘ನಾನು ಸರ್ಕಾರದ ವಿರುದ್ಧ ಬರೆಯುತ್ತೇನೆ ಎಂದೇ ನನ್ನನ್ನು ಅವರು ಗುರಿ ಮಾಡುತ್ತಿದ್ದಾರೆ. ಇದರ ಮ‌ಧ್ಯೆ ಸರ್ಕಾರ ನೀಡುವ ಪುರಸ್ಕಾರವನ್ನು ಸ್ವೀಕರಿಸಿದರೆ ನನ್ನ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಅದು ಬಾಧಿಸುತ್ತದೆ’ ಎಂದು ಜಯಮೋಹನ್ ಕಾರಣವನ್ನು ನೀಡಿದ್ದರು.

ಆಧಾರ: ಪದ್ಮ ಪ್ರಶಸ್ತಿ ಜಾಲತಾಣ, ಕೇಂದ್ರ ಗೃಹ ಸಚಿವಾಲಯ, ಪಿಟಿಐ, ಡಿಎನ್‌ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT