ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಗುಜರಾತ್‌ ಅಸಹಕಾರ– ಜಾರಿಗೆ ಬಾರದ ಸಿಂಹ ಸ್ಥಳಾಂತರ

Last Updated 19 ಸೆಪ್ಟೆಂಬರ್ 2022, 19:45 IST
ಅಕ್ಷರ ಗಾತ್ರ

ಗುಜರಾತ್‌ನ ಗಿರ್‌ ಪ್ರದೇಶದಲ್ಲಿ ಇರುವ ಏಷ್ಯಾ ಸಿಂಹಗಳನ್ನು ಮಧ್ಯ ಪ್ರದೇಶದ ಕುನೊ ಅಭಯಾರಣ್ಯಕ್ಕೆ (ಈಗಿನ ಕುನೊ ರಾಷ್ಟ್ರೀಯ ಉದ್ಯಾನ) ಮರುಪರಿಚಯಿಸುವ ಯೋಜನೆ 1986ರಲ್ಲೇ ಆರಂಭವಾಗಿತ್ತು. ಯೋಜನೆ ಪ್ರಕಾರ ಸಿಂಹಗಳ ಮರುಪರಿಚಯಕ್ಕೆ ಕುನೊ ಅಭಯಾರಣ್ಯವನ್ನು ಸಿದ್ಧಪಡಿಸುವ ಕಾರ್ಯವೂ ಪೂರ್ಣಗೊಂಡಿತ್ತು. ಈ ಯೋಜನೆಗೆ ಆರಂಭದಿಂದಲೂ ಗುಜರಾತ್ ಸರ್ಕಾರ ಪ್ರಬಲ ಆಕ್ಷೇಪ ತೋರಿತ್ತು. ಅಂದು ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರವು ಸಿಂಹಗಳನ್ನು ಮಧ್ಯ ಪ್ರದೇಶಕ್ಕೆ ಕಳುಹಿಸಲು ಸಾಧ್ಯವೇ ಇಲ್ಲ ಎಂದು ಹೇಳಿತ್ತು. ಆದರೆ, ಸಿಂಹಗಳನ್ನು ಮಧ್ಯ ಪ್ರದೇಶಕ್ಕೆ ಕಳುಹಿಸಿ ಎಂದು ಸುಪ್ರೀಂ ಕೋರ್ಟ್‌ 2013ರಲ್ಲಿ ಆದೇಶಿಸಿತ್ತು. 2022ರಲ್ಲಿಯೂ ಗುಜರಾತ್‌ ಸರ್ಕಾರವು ಸಿಂಹಗಳನ್ನು ಕಳುಹಿಸಲು ಮನಸ್ಸು ಮಾಡುತ್ತಿಲ್ಲ. ಇದರ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ 2020ರ ಆಗಸ್ಟ್‌ನಲ್ಲಿ ‘ಪ್ರಾಜೆಕ್ಟ್‌ ಲಯನ್‌’ಗೆ ಚಾಲನೆ ನೀಡಿದರು. ಮಧ್ಯಪ್ರದೇಶಕ್ಕೆ ಸಿಂಹಗಳನ್ನು ಕಳುಹಿಸುವ ಪ್ರಸ್ತಾವದ ಉಲ್ಲೇಖವೇ ಈ ಯೋಜನೆಯಲ್ಲಿ ಇಲ್ಲ. ಕೆಲವು ಸಿಂಹಗಳನ್ನು ಗುಜರಾತ್‌ನಿಂದ ಹೊರಗೆ ಕಳುಹಿಸುವುದಕ್ಕೆ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಸಿದ್ಧವಿರಲಿಲ್ಲ. ಈಗ ಅದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಪ್ರಾಜೆಕ್ಟ್‌ ಲಯನ್‌ ಯೋಜನೆ ಆರಂಭಿಸುವ ಮೂಲಕ, 35 ವರ್ಷಗಳ ಮೂಲ ಯೋಜನೆಯನ್ನು ಕಡೆಗಣಿಸಿದೆ.

ದಶಕಗಳ ಪ್ರಗತಿ ಕಡೆಗಣನೆ

1957: 18ನೇ ಶತಮಾನದವರೆಗೂ ಮಧ್ಯಪ್ರದೇಶದ ಕುನೊ ಪ್ರದೇಶದಲ್ಲಿ ಏಷ್ಯಾ ಸಿಂಹಗಳಿದ್ದವು ಎನ್ನುತ್ತದೆ ಗುಜರಾತ್‌ ಅರಣ್ಯ ಇಲಾಖೆಯ ದಾಖಲೆಗಳು. ಆನಂತರದಲ್ಲಿ ವಿವಿಧ ಕಾರಣಗಳಿಂದ ಮಧ್ಯಪ್ರದೇಶದಿಂದ ಏಷ್ಯಾ ಸಿಂಹಗಳು ನಾಮಾವಶೇಷವಾಗಿವೆ. ಹೀಗಾಗಿ ಸಿಂಹಗಳನ್ನು ಮರುಪರಿಚಯಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಲೇ ಇದ್ದವು. 1957ರಲ್ಲಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಗುಜರಾತ್‌ನ ಗಿರ್ ಪ್ರದೇಶದಿಂದ ಹಲವು ಸಿಂಹಗಳನ್ನು ಮರುಪರಿಚಯಿಸಲಾಗಿತ್ತು. ಆದರೆ ಬೇಟೆಯಾಡಿ
ಅವನ್ನೆಲ್ಲ ಕೊಲ್ಲಲಾಗಿತ್ತು.

1986: ಗುಜರಾತ್‌ನ ಸೀಮಿತ ಪ್ರದೇಶದಲ್ಲಿ ಮಾತ್ರ ಏಷ್ಯಾ ಸಿಂಹಗಳು ಉಳಿದಿವೆ. ಯಾವುದಾದರೂ ಸಾಂಕ್ರಾಮಿಕ, ನೈಸರ್ಗಿಕ ವಿಕೋಪ ನಡೆದರೆ ಎಲ್ಲಾ ಸಿಂಹಗಳೂ ನಾಶವಾಗುವ ಅಪಾಯವಿದೆ ಎಂದು 1986ರಲ್ಲಿ ಕೇಂದ್ರ ಅರಣ್ಯ ಸಚಿವಾಲಯದ ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ) ಕಳವಳ ವ್ಯಕ್ತಪಡಿಸಿತ್ತು. ಅಂತಹ ಸಂದರ್ಭಗಳು ಎದುರಾದರೆ ಏಷ್ಯಾ ಸಿಂಹಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಅಂತಹ ಅಪಾಯವನ್ನು ತಪ್ಪಿಸುವ ಸಲುವಾಗಿ, ಗಿರ್ ಮತ್ತು ಗುಜರಾತ್‌ನ ಹೊರವಲಯದಲ್ಲಿ ಸಿಂಹಗಳಿಗೆ ಮತ್ತೊಂದು ನೈಸರ್ಗಿಕ ಆವಾಸವನ್ನು ಸಿದ್ಧಪಡಿಸಬೇಕು ಎಂದು
ಡಬ್ಲ್ಯುಐಐ ಹೇಳಿತ್ತು.

1993: ಸಿಂಹಗಳಿಗೆ ಎರಡನೇ ಆವಾಸವನ್ನು ಸಿದ್ಧಪಡಿಸುವ ಮತ್ತು ಸಿಂಹಗಳನ್ನು ಅಲ್ಲಿಗೆ ಬಿಡುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನಗಳು ನಡೆದಿದ್ದವು.ಡಬ್ಲ್ಯುಐಐ ಅಧೀನದಲ್ಲಿ ನಡೆದಿದ್ದ ಅಂತಹ ಅಧ್ಯಯನದ ವರದಿಯನ್ನು 1993ರ ಅಕ್ಟೋಬರ್‌ನಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು. ಆ ಪ್ರಕಾರ ಸಿಂಹಗಳನ್ನು ಎರಡನೇ ಆವಾಸಕ್ಕೆ ಬಿಡುವ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು.ಯೋಜನೆಯು ಒಟ್ಟು 20 ವರ್ಷಗಳದ್ದಾಗಿತ್ತು. ಮೂರು ಹಂತದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಲಾಗಿತ್ತು.

l1995–2000: ಸಂಭಾವ್ಯ ಎರಡನೇ ಆವಾಸದ ಪ್ರದೇಶದಲ್ಲಿರುವ ಹಳ್ಳಿಗಳ ಸ್ಥಳಾಂತರ

l2000–2005: ಅರಣ್ಯ ಪ್ರದೇಶಕ್ಕೆ ಬೇಲಿ ನಿರ್ಮಿಸುವುದು, ಸಿಂಹಗಳನ್ನು ಅರಣ್ಯಕ್ಕೆ ಬಿಡುವುದು ಮತ್ತು ಮೇಲ್ವಿಚಾರಣೆ. ಅಧ್ಯಯನ

l2005–2015: ಸಿಂಹಗಳನ್ನು ಒಳಗೊಂಡು, ಸಿಂಹದ ಆವಾಸ ಸ್ಥಾನದ ಪರಿಸರ ಅಭಿವೃದ್ಧಿ

1995–2005: ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲಾಯಿತು.ಡಬ್ಲ್ಯುಐಐ ಸೂಚಿಸಿದ್ದ ಕುನೊ ಅಭಯಾರಣ್ಯ ಪ್ರದೇಶದಲ್ಲಿದ್ದ 24 ಹಳ್ಳಿಗಳ ಸ್ಥಳಾಂತರ. 1,554 ಕುಟುಂಬಗಳಿಗೆ ಪರಿಹಾರ ನೀಡಿ, ಅರಣ್ಯ ಪ್ರದೇಶದ ಹೊರವಲಯದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಆದರೆ, ಸಿಂಹಗಳನ್ನು ಸ್ಥಳಾಂತರಿಸಲು ಗುಜರಾತ್ ಸರ್ಕಾರದಿಂದ ನಕಾರ. ಇದರಿಂದ ಯೋಜನೆ ನನೆಗುದಿಗೆ ಬಿದ್ದಿತು.

2006: ಗುಜರಾತ್ ಸರ್ಕಾರವು ಸಿಂಹಗಳನ್ನು ನೀಡದೇ ಇರುವ ಬಗ್ಗೆ ಕೇಂದ್ರ ಅರಣ್ಯ ಸಚಿವಾಲಯವು, ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ‘ಸಂಬಂಧಿತ ಇಲಾಖೆಯಲ್ಲಿ ಈ ಕಾರ್ಯ ಪ್ರಗತಿಯಲ್ಲಿದೆ’ ಎಂದಷ್ಟೇ ಮುಖ್ಯಮಂತ್ರಿಗಳ ಕಚೇರಿಯು ಉತ್ತರ ಬರೆದಿತ್ತು. ಅದರ ಬೆನ್ನಲ್ಲೇ ಡಬ್ಲ್ಯುಡಬ್ಲ್ಯುಎಫ್‌ (ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌), ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತು. ಯೋಜನೆ ತ್ವರಿತ ಜಾರಿಗೆ ಸೂಚನೆ ನೀಡಿ ಎಂದುಡಬ್ಲ್ಯುಡಬ್ಲ್ಯುಎಫ್‌ ಮನವಿ ಸಲ್ಲಿಸಿತ್ತು.

2007: ಅರ್ಜಿಯ ವಿಚಾರಣೆ ಆರಂಭ. ‘ಗುಜರಾತ್ ಸರ್ಕಾರ ಒಪ್ಪುತ್ತಿಲ್ಲವಾದ ಕಾರಣ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತಿಲ್ಲ’ ಎಂದು ಕೇಂದ್ರ ಅರಣ್ಯ ಸಚಿವಾಲಯದಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ. ಗುಜರಾತ್ ಸರ್ಕಾರದ ಆಕ್ಷೇ‍ಪಗಳನ್ನೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಕೇಂದ್ರ ಸರ್ಕಾರ. ಗುಜರಾತ್ ಸರ್ಕಾರದ ಆಕ್ಷೇಪಗಳು ಮತ್ತು ಸಿಂಹಗಳನ್ನು ಕುನೊಗೆ ಬಿಡುವ ಯೋಜನೆಯ ಬಗ್ಗೆ ಸಮಾಲೋಚನೆ ನಡೆಸಿ ವರದಿ ನೀಡಿ ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಸುಪ್ರೀಂ ಕೋರ್ಟ್‌ನಿಂದ ಸೂಚನೆ. 2008ರಲ್ಲಿ ಎಲ್ಲರ ವಾದಗಳನ್ನು ಆಲಿಸಿ ಹೊಸದಾಗಿ ವರದಿ ಸಿದ್ಧಪಡಿಸಲು ವನ್ಯಜೀವಿ ಮಂಡಳಿಗೆ ಮತ್ತೆ ಸೂಚನೆ ನೀಡಿದ ಸುಪ್ರೀಂ ಕೋರ್ಟ್‌.

2009–10: ವನ್ಯಜೀವಿ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಸಿತ್ತು. ಗುಜರಾತ್ ಸರ್ಕಾರವು ಎತ್ತಿರುವ ಆಕ್ಷೇಪಗಳಿಗೆ ಆಧಾರವಿಲ್ಲ. ಸಿಂಹಗಳಿಗೆ ಗುಜರಾತ್‌ನಿಂದ ಹೊರಗೆ ಎರಡನೇ ಆವಾಸವನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಅಲ್ಲಿಗೆ ಬಿಡುವುದು ಅತ್ಯಗತ್ಯ ಎಂದು ಮಂಡಳಿಯು ಶಿಫಾರಸು ಮಾಡಿತ್ತು. ಅದರ ಬೆನ್ನಲ್ಲೇ ಕೇಂದ್ರ ಅರಣ್ಯ ಸಚಿವಾಲಯವೂ ಸಿಂಹಗಳನ್ನು ಕುನೊಗೆ ಬಿಡಬೇಕು ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಆದರೆ, ಗುಜರಾತ್ ಸರ್ಕಾರ ಮತ್ತೆ ಆಕ್ಷೇಪ ಸಲ್ಲಿಸಿತು. ‘ರಾಜ್ಯ ವನ್ಯಜೀವಿ ಮಂಡಳಿ ಎದುರು ಈ ಪ್ರಸ್ತಾಪವನ್ನು ಇರಿಸಿಲ್ಲ’ ಎಂದು ಹೇಳಿತು. ಗುಜರಾತ್ ಸರ್ಕಾರದ ಆಕ್ಷೇಪವನ್ನು ಸುಪ್ರೀಂ ಕೋರ್ಟ್‌ಮಾನ್ಯ ಮಾಡಿತು.

2012: ಗುಜರಾತ್ ವನ್ಯಜೀವಿ ಮಂಡಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ವರದಿಯನ್ನು ನೀಡಲಾಯಿತು. ವರದಿಯ ಶಿಫಾರಸುಗಳನ್ನು ಗುಜರಾತ್ ವನ್ಯಜೀವಿ ಮಂಡಳಿ ನಿರಾಕರಿಸಿತು. ಸಿಂಹಗಳನ್ನು ಕುನೊಗೆ ಕಳುಹಿಸುವ ಯೋಜನೆ ಕಾರ್ಯಸಾಧುವಲ್ಲ ಎಂದು ಹೇಳಿತು.

2013: ಏಪ್ರಿಲ್‌ 15ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು. ಗುಜರಾತ್ ಸರ್ಕಾರ ಮತ್ತು ಗುಜರಾತ್ ವನ್ಯಜೀವಿ ಮಂಡಳಿಯ ಆಕ್ಷೇಪಗಳನ್ನು ಸುಪ್ರೀಂ ಕೋರ್ಟ್‌ ಸಾರಾಸಗಟಾಗಿ ತಳ್ಳಿಹಾಕಿತು. ‘ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಶಿಫಾರಸುಗಳನ್ನು ಮತ್ತು ಸಿಂಹಗಳಿಗೆ ಎರಡನೇ ಆವಾಸವನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಪೂರ್ಣ ಜಾರಿಗೆ ತನ್ನಿ’ ಎಂದು ಆದೇಶಿಸಿತು. ಮುಂದಿನ ಆರು ತಿಂಗಳಲ್ಲಿ ಸಿಂಹಗಳನ್ನು ಕುನೊಗೆ ಬಿಡಬೇಕು ಎಂದು ಗುಜರಾತ್ ಸರ್ಕಾರಕ್ಕೆ ಸೂಚಿಸಿತು. ಈ ಆದೇಶವನ್ನು ಮರುಪರಿಗಣಿಸಿ ಎಂದು ಗುಜರಾತ್ ಸರ್ಕಾರ ಅರ್ಜಿ ಸಲ್ಲಿಸಿತು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಮಾಡಿತು. ಆದೇಶವನ್ನು ಯಥಾವತ್ ಜಾರಿಗೆ ತನ್ನಿ ಎಂದು ಆದೇಶಿಸಿತು.

ಚೀತಾಗಿಂತ ಮೊದಲು ಸಿಂಹ ಬರಲಿ ಎಂದಿತ್ತು ಸುಪ್ರೀಂ ಕೋರ್ಟ್‌

ಕುನೊ ಪ್ರದೇಶಕ್ಕೆ ಸಿಂಹಗಳನ್ನು ಬಿಡುವುದಕ್ಕೂ ಮುನ್ನ ಚೀತಾಗಳನ್ನು ಬಿಡುವುದಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ‘ಆಫ್ರಿಕಾ ಚೀತಾಗಳಿಗೆ ಕುನೊ ಪ್ರದೇಶ ಯಾವತ್ತೂ ಆವಾಸವಾಗಿರಲಿಲ್ಲ. ಇಲ್ಲಿನ ಚೀತಾ ನಾಶವಾಗಿದೆ. ಆದರೆ ಗಿರ್‌ನಲ್ಲಿರುವ ಏಷ್ಯಾ ಸಿಂಹಗಳು ಈ ಹಿಂದೆ ಕುನೊ ಪ್ರದೇಶದಲ್ಲೂ ಇದ್ದವು ಎಂಬುದು ಸಾಬೀತಾಗಿದೆ. ಸಿಂಹಗಳನ್ನು ರಕ್ಷಿಸುವುದು ಆದ್ಯತೆಯಾಗಬೇಕು. ಮೊದಲು ಸಿಂಹಗಳನ್ನು ಅಲ್ಲಿಗೆ ಬಿಡಿ’ ಎಂದು ಸುಪ್ರೀಂ ಕೋರ್ಟ್‌ 2013ರ ಏಪ್ರಿಲ್‌ನಲ್ಲಿ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿತ್ತು.ಆದರೆ, ಕೇಂದ್ರ ಸರ್ಕಾರವು ಸಿಂಹಗಳನ್ನು ಕುನೊಗೆ ಬಿಡುವ ಯೋಜನೆಯನ್ನು ಕಡೆಗಣಿಸಿತು ಮತ್ತು ಚೀತಾಗಳನ್ನೇ ಮೊದಲು ಕುನೊಗೆ ಬಿಟ್ಟಿತು.

ಸಿಂಹಗಳನ್ನು ಬಿಟ್ಟುಕೊಡಲು ನರೇಂದ್ರ ಮೋದಿ ಅವರಿಗೆ ಮನಸ್ಸಿಲ್ಲ. ಅದನ್ನು ಮರೆಮಾಚುವ ಉದ್ದೇಶದಿಂದಲೇ ಚೀತಾಗಳನ್ನು ತಂದು ಕುನೊಗೆ ಬಿಡಲಾಗಿದೆ ಎಂದು ಸಮಾಜವಾದಿ ಪಕ್ಷ, ಕಾಂಗ್ರೆಸ್‌ ಟೀಕಿಸಿವೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್‌, ‘ಕುನೊದಲ್ಲಿ ಸಿಂಹಗಳು ಗರ್ಜಿಸುತ್ತವೆ ಎಂದುಕೊಂಡರೆ, ಚೀತಾಗಳು ಮಿಯಾಮ್‌ ಎಂದವು’ ಎಂದುಲೇವಡಿ ಮಾಡಿದ್ದಾರೆ.

ಸಿಂಹಗಳು ನಡೆದುಕೊಂಡು ಹೋಗಲಿ: ಪ್ರಾಜೆಕ್ಟ್‌ ಲಯನ್‌

ಸಿಂಹಗಳನ್ನು ಸಂರಕ್ಷಿಸುವ ಸಂಬಂಧ 2020ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಅವಧಿಯ ‘ಪ್ರಾಜೆಕ್ಟ್‌ ಲಯನ್‌’ಗೆ ಚಾಲನೆ ನೀಡಿದ್ದಾರೆ. ಸಿಂಹಗಳ ಆವಾಸವನ್ನು ವಿಸ್ತರಿಸುವ ಉಲ್ಲೇಖಗಳು ಈ ಯೋಜನಾ ವರದಿಯಲ್ಲಿ ಇದೆ. ಇದಕ್ಕಾಗಿ ಸಂಭಾವ್ಯ ಆರು ಪ್ರದೇಶಗಳನ್ನು ಗುರುತಿಸಲಾಗಿದೆ. ಆದರೆ ಕುನೊಗೆ ಸಿಂಹಗಳನ್ನು ಬಿಡುವ ಪ್ರಸ್ತಾವವೇ ಈ ಯೋಜನೆಯಲ್ಲಿ ಇಲ್ಲ. ಬದಲಿಗೆ, ‘ಸಿಂಹಗಳು ತಾವೇ ಸಹಜವಾಗಿ ನಡೆದುಕೊಂಡು ಹೋಗಿ, ಹೊಸ ಆವಾಸಗಳಲ್ಲಿ ನೆಲೆಯಾಗಬೇಕು’ ಎಂದು ವರದಿಯಲ್ಲಿ ಹೇಳಲಾಗಿದೆ.

ಗುಜರಾತ್–ಮಧ್ಯಪ್ರದೇಶ ನಡುವೆ ರಾಜಕೀಯ ಜಟಾಪಟಿ

ಗುಜರಾತ್‌ನ ಗಿರ್ ಪ್ರದೇಶದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಏಷ್ಯಾ ಸಿಂಹಗಳನ್ನು ಒಯ್ದು ಬಿಡುವ ಯೋಜನೆಯಲ್ಲಿ ಕಳೆದ 25 ವರ್ಷಗಳಿಂದ ರಾಜಕೀಯ ಮೇಲಾಟ ನಡೆದಿದೆ. ಹೀಗಾಗಿ, ಬೇರೊಂದು ರಾಜ್ಯದಲ್ಲಿ ಸಿಂಹಗಳಿಗೆ ಎರಡನೇ ಆವಾಸ ಸ್ಥಾನ ಕಲ್ಪಿಸುವ ಯೋಜನೆ ಕುಂಟುತ್ತಿದೆ.

ಗಿರ್ ಪ್ರದೇಶದಿಂದ ಸಿಂಹಗಳನ್ನು ಕುನೊ ಉದ್ಯಾನಕ್ಕೆ ಕಳುಹಿಸಬೇಕು ಎಂದು 2013ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ಆದೇಶವು ಎರಡೂ ರಾಜ್ಯಗಳ ನಡುವೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಂದು, ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಈಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಅಂದೂ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿದ್ದರೂ, ಸಿಂಹಗಳನ್ನು ಸ್ಥಳಾಂತರ ಮಾಡುವ ಯೋಜನೆ ವಿಚಾರದಲ್ಲಿ ಜಟಾಪಟಿಗೆ ಇಳಿದದ್ದು ಸೋಜಿಗ.

ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಿಂಹಗಳನ್ನು ಮಧ್ಯಪ್ರದೇಶಕ್ಕೆ ಗುಜರಾತ್ ಸರ್ಕಾರವು ಕಳಿಸಿಲ್ಲ. ಕಳುಹಿಸದೇ ಇರುವುದಕ್ಕೆ ಇರುವ ಆಕ್ಷೇಪಗಳನ್ನು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ರೂಪದಲ್ಲಿ ಗುಜರಾತ್‌ ಸಲ್ಲಿಸಿತ್ತು. ಗಿರ್ ಪ್ರದೇಶಕ್ಕೆ ಹೋಲಿಸಿದರೆ, ಕುನೊ ರಾಷ್ಟ್ರೀಯ ಉದ್ಯಾನವು ಸಿಂಹಗಳಿಗೆ ಸೂಕ್ತವಾದ ಆವಾಸ ಸ್ಥಾನವಲ್ಲ ಎಂಬುದು ಅದರ ಒಂದು ವಾದ. ಕುನೊ ಉದ್ಯಾನದಲ್ಲಿ ಸಿಂಹಗಳಿಗೆಂದು ಗುರುತಿಸಲಾಗಿರುವ ಪ್ರದೇಶದ ವ್ಯಾಪ್ತಿ ಕಡಿಮೆಯಿದ್ದು, ಅಲ್ಲಿ ಅವುಗಳ ಸಂತತಿ ಬೆಳೆಯಲು ಸಾಧ್ಯವಾಗುವ ವಾತಾವರಣ ಇಲ್ಲ ಎಂಬ ವಾದವನ್ನೂ ಗುಜರಾತ್ ಮುಂದಿಟ್ಟಿತ್ತು. ‘ಗಿರ್‌ ಪ್ರದೇಶದಲ್ಲಿ ಸಿಂಹಗಳ ಸಂತತಿ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಲು ಗುಜರಾತ್‌ ಜನರ ಬೆಂಬಲ, ವನ್ಯಜೀವಿಗಳ ಬಗೆಗಿನ ಕಾಳಜಿ ಹಾಗೂ ಅವುಗಳ ಬಗೆಗಿನ ಹೆಮ್ಮೆಯೂ ಕಾರಣ. ಆದರೆ, ಮಧ್ಯಪ್ರದೇಶದಲ್ಲಿ ಸಿಂಹಗಳು ಬದುಕುಳಿಯಲು ಇಂತಹ ಯಾವುದೇ ವಾತಾವರಣ ಇಲ್ಲ. ಹುಲಿಗಳ ಆವಾಸ ಸ್ಥಾನವಾಗಿರುವ ಮಧ್ಯಪ್ರದೇಶದಲ್ಲಿ ಪ್ರಾಣಿಬೇಟೆ ಅವ್ಯಾಹತವಾಗಿ ನಡೆಯುತ್ತಿದೆ. ನೂರಾರು ಹುಲಿಗಳು ಬೇಟೆಗೆ ಬಲಿಯಾಗಿವೆ. ಹೀಗಿರುವಾಗ ಸಿಂಹಗಳೂ ಬೇಟೆಗೆ ಬಲಿಯಾಗುವುದಿಲ್ಲ ಎಂದು
ಹೇಳಲಾಗದು’ ಎಂಬ ವಾದವನ್ನೂ ಗುಜರಾತ್ ಮುಂದಿಟ್ಟಿತ್ತು. ಗುಜರಾತ್‌ನ ಬರಡಾ ಅಭಯಾರಣ್ಯದ ಪರಿಸರವು ಗಿರ್ ವ್ಯಾಪ್ತಿಯಲ್ಲಿದ್ದು, ಅಲ್ಲಿಗೆ ಸಿಂಹಗಳನ್ನು ಬಿಡುವುದರ ಪರವಾಗಿ ಗುಜರಾತ್ ಇದೆಯೇ ಹೊರತು ಬೇರೆ ಯಾವ ರಾಜ್ಯಕ್ಕೂ ಅವುಗಳನ್ನು ಕಳುಹಿಸುವ ಉದ್ದೇಶ ಇಲ್ಲ ಎಂಬುದು ರಾಜ್ಯ ಸರ್ಕಾರದ ವಾದದಿಂದ ತಿಳಿಯುತ್ತದೆ.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಚೀತಾ ಹಾಗೂ ಸಿಂಹಗಳನ್ನು ಬಿಡುವ ಎರಡೂ ಯೋಜನೆಗಳಿವೆ. ಸಿಂಹಗಳನ್ನು ಬಿಡುವ ಉದ್ದೇಶದಿಂದ ಕುನೊ ಉದ್ಯಾನದ ಗಡಿಯಲ್ಲಿದ್ದ ಗ್ರಾಮಸ್ಥರನ್ನು ತೆರವು ಮಾಡಿ, ಅವರಿಗೆ ಪರಿಹಾರವನ್ನೂ ನೀಡಲಾಗಿತ್ತು. ಸಿಂಹಗಳ ಬರುವಿಕೆಗೆ ಕಾಯುತ್ತಿದ್ದ ಕುನೊ ಉದ್ಯಾನಕ್ಕೆ ಸೆ.17ರಂದು ಚೀತಾಗಳು ಪ್ರವೇಶ ಪಡೆದವು. ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಚೀತಾಗಳನ್ನು ಭಾರತಕ್ಕೆ ಮರಳಿ ತಂದರು. ಸಿಂಹಗಳಿಗಿಂತ ಮೊದಲು ಚೀತಾಗಳು ಕುನೊ ಉದ್ಯಾನ ಪ್ರವೇಶಿಸಿದವು. ‘ಪ್ರಧಾನಿ ಜನ್ಮದಿನದಂದೇ ಚೀತಾಗಳು ರಾಜ್ಯದ ಅರಣ್ಯ ಪ್ರವೇಶಿಸಿವೆ. ಮಧ್ಯಪ್ರದೇಶಕ್ಕೆ ಇದಕ್ಕಿಂತ ದೊಡ್ಡ ಉಡುಗೊರೆ ಬೇರೆ ಏನಿರಲು ಸಾಧ್ಯ’ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಮುಖ್ಯಮಂತ್ರಿ ಮೋದಿ ಜೊತೆ ಸಿಂಹಗಳ ಸ್ಥಳಾಂತರ ವಿಚಾರವಾಗಿ ಅಂದು ಜಟಾಪಟಿಗೆ ಇಳಿದಿದ್ದ ಚೌಹಾಣ್, ಈಗ ಪ್ರಧಾನಿ ಹುದ್ದೆಯಲ್ಲಿರುವ ಮೋದಿ ಅವರು ಚೀತಾಗಳನ್ನು ಕರೆತಂದಿದ್ದನ್ನು ಪ್ರಶಂಸಿಸಿದರು.

ಆಧಾರ: ಏಷ್ಯಾ ಸಿಂಹಗಳಿಗೆ ಎರಡನೇ ಆವಾಸ ಅಭಿವೃದ್ಧಿ ಕಾರ್ಯಯೋಜನೆ ವರದಿ, ಪ್ರಾಜೆಕ್ಟ್‌ ಲಯನ್‌, ಸುಪ್ರೀಂ ಕೋರ್ಟ್‌ ಆದೇಶ, ಪಿಟಿಐ, ಗುಜರಾತ್ ಸರ್ಕಾರದ ‘ಏಷಿಯಾಟಿಕ್ ಲಯನ್’ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT