ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಪಂಜಾಬ್‌ ಅಖಾಡದಲ್ಲಿ ಕಾಂಗ್ರೆಸ್‌ಗೆ ಎಎಪಿ ಸವಾಲು

Last Updated 19 ಜನವರಿ 2022, 19:30 IST
ಅಕ್ಷರ ಗಾತ್ರ

ಉತ್ತರ ಪ್ರದೇಶ ಮತ್ತು ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯತಂತ್ರವು ಜೂಜಾಟವನ್ನು ನೆನಪಿಸುವಂತಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರನ್ನೇ ಕೇಂದ್ರವಾಗಿ ಇರಿಸಿಕೊಂಡು ಪಕ್ಷವು ಚುನಾವಣಾ ರಣತಂತ್ರ ಹೆಣೆದಿದೆ. ಪಂಜಾಬ್‌ನಲ್ಲಿ ಒಂದೇ ಜಾತಿಯನ್ನು ನೆಚ್ಚಿಕೊಂಡು ಚುನಾವಣೆ ಗೆಲ್ಲುವ ಲೆಕ್ಕಾಚಾರ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ, ಬಂದದ್ದೆಲ್ಲವೂ ಲಾಭ ಎಂಬ ಪರಿಸ್ಥಿತಿ ಇದೆ. ಆದರೆ, ಪಂಜಾಬ್‌ನ ಸನ್ನಿವೇಶ ಹಾಗೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿ ಇರುವ ಮೂರು ರಾಜ್ಯಗಳಲ್ಲಿ ಪಂಜಾಬ್‌ ಕೂಡ ಒಂದು. ಈ ರಾಜ್ಯವನ್ನೂ ಕಳೆದುಕೊಂಡರೆ, ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ವಿರೋಧ ಪಕ್ಷಗಳ ಒಕ್ಕೂಟವೇನಾದರೂ ರೂಪುಗೊಂಡರೆ ಅದರ ನಾಯಕತ್ವದ ಅವಕಾಶಕ್ಕೆ ಹಕ್ಕು ಮಂಡಿಸುವುದೇ ಕಾಂಗ್ರೆಸ್‌ಗೆ ಕಷ್ಟವಾಗಲಿದೆ.

ಪಂಜಾಬ್ ಮುಖ್ಯಮಂತ್ರಿ ಹುದ್ದೆಯಿಂದ ಕ್ಯಾಪ್ಟನ್‌ ಅಮರಿಂದರ್ ಸಿಂಗ್‌ ಅವರನ್ನು ಚುನಾವಣೆಗೆ ಆರು ತಿಂಗಳಿರುವಾಗ ಕೆಳಗಿಳಿಸಲಾಗಿದೆ. ಅವರ ಸ್ಥಾನಕ್ಕೆ ದಲಿತ ಸಮುದಾಯದ ನಾಯಕ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ತರಲಾಗಿದೆ. ಪಂಜಾಬ್‌ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳು ಅತ್ಯಂತ ದೊಡ್ಡ ಘಟಕ. ಈ ಸಮುದಾಯದ ಜನಸಂಖ್ಯೆ ಶೇ 32ರಷ್ಟು. ಆದರೆ, ಈ ಸಮುದಾಯದಿಂದ ಮುಖ್ಯಮಂತ್ರಿ ಹುದ್ದೆಗೇರಿದ ಮೊದಲ ವ್ಯಕ್ತಿ ಚನ್ನಿ. ಅಂದರೆ, ಈ ಸಮುದಾಯವು ಸಂಖ್ಯೆಯಲ್ಲಿ ದೊಡ್ಡದಾದರೂ ರಾಜಕೀಯವಾಗಿ ಪ್ರಭಾವಿ ಆಗಿಲ್ಲ ಎಂಬುದು ಇದರ ಅರ್ಥ. ಈ ವರ್ಗವನ್ನು ರಾಜಕೀಯವಾಗಿ ಮುನ್ನೆಲೆಗೆ ತರುವ ಮೂಲಕ ಚುನಾವಣೆ ಗೆಲ್ಲವುದು ಕಾಂಗ್ರೆಸ್‌ನ ಕಾರ್ಯತಂತ್ರ.

ಪಂಜಾಬ್‌ ರಾಜ್ಯದ ಮುಖ್ಯಮಂತ್ರಿ ಹುದ್ದೆ ಎಂಬುದು ಜಾಟ್‌ ಸಿಖ್‌ ಸಮುದಾಯಕ್ಕೆ ಮೀಸಲು ಎಂಬಂತಹ ಪರಿಸ್ಥಿತಿ ಈವರೆಗೆ ಇತ್ತು. 1972–77ರ ಅವಧಿಯಲ್ಲಿ ಗ್ಯಾನಿ ಜೈಲ್‌ ಸಿಂಗ್‌ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಇವರು ಜಾಟ್‌ಯೇತರ ಸಿಖ್‌ ಸಮುದಾಯದವರಾಗಿದ್ದರು. ಅವರ ಬಳಿಕ, ಜಾಟ್‌ ಸಿಖ್‌ ಅಲ್ಲದ ಸಮುದಾಯದಿಂದ ಮುಖ್ಯಮಂತ್ರಿ ಆದವರು ಚನ್ನಿ ಮಾತ್ರ.

ಅಮರಿಂದರ್‌ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಕ್ಕೆ ಇಳಿಸಲು ಮುಖ್ಯ ಕಾರಣ ಆಗಿದ್ದವರು ನವಜೋತ್ ಸಿಂಗ್ ಸಿಧು. ಸಿಧು ಜಾಟ್‌ ಸಿಖ್‌ ಸಮುದಾಯದವರು. ಅಮರಿಂದರ್‌ ಕೆಳಗಿಳಿದರೆ ಮುಖ್ಯಮಂತ್ರಿ ಹುದ್ದೆಯು ತಮಗೇ ದಕ್ಕಬಹುದು ಎಂಬ ಲೆಕ್ಕಾಚಾರದಲ್ಲಿ ಸಿಧು ಇದ್ದರು. ಆದರೆ, ಅಮರಿಂದರ್‌ ಅವರ ಪದಚ್ಯುತಿಯಿಂದ ಜಾಟ್‌ ಸಿಖ್‌ ಸಮುದಾಯವು ಪಕ್ಷದ ವಿರುದ್ಧ ತಿರುಗಿ ಬೀಳಬಹುದು ಎಂಬ ಅನುಮಾನ ಕಾಂಗ್ರೆಸ್ ಹೈಕಮಾಂಡ್‌ಗೆ ಇತ್ತು. ಹಾಗಾಗಿಯೇ ದಲಿತ ಸಮುದಾಯದ ಮೊರೆ ಹೋಗುವ ಕಾರ್ಯತಂತ್ರವನ್ನು ಪಕ್ಷವು ಅನುಸರಿಸಿದೆ.

ಮುಖ್ಯಮಂತ್ರಿ ಹುದ್ದೆಗೆ ಏರುವವರೆಗೆ ಚನ್ನಿ ಅವರು ಪ್ರಭಾವಿ ನಾಯಕ ಎಂದು ಗುರುತಿಸಿಕೊಂಡವರೇನೂ ಅಲ್ಲ. ಆದರೆ, ಮುಖ್ಯಮಂತ್ರಿಯಾದ ಬಳಿಕ, ಸಾಮಾನ್ಯ ಜನರಲ್ಲಿ ತಾವೂ ಒಬ್ಬ ಎಂದು ತಮ್ಮನ್ನು ಬಿಂಬಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷವು ಕೂಡ ಅವರಿಗೆ ಅಗತ್ಯ ಸ್ವಾತಂತ್ರ್ಯ ಕೊಟ್ಟಿದೆ. ‘ಮಹಾರಾಜ’ ಎಂದು ಕರೆಸಿಕೊಳ್ಳುತ್ತಿದ್ದ ಅಮರಿಂದರ್ ಅವರು ರಾಜ ಕುಟುಂಬಕ್ಕೆ ಸೇರಿದವರು. ಜಾಟ್‌ ಸಿಖ್‌ ಸಮುದಾಯ ಎಂದರೆ ಪಂಜಾಬ್‌ನ ಜಮೀನ್ದಾರಿ ವರ್ಗ. ಹೀಗಾಗಿಯೇ ಚನ್ನಿ ಅವರು ‘ಸಾಮಾನ್ಯ ವ್ಯಕ್ತಿ’ ಎಂದು ಗುರುತಿಸಿಕೊಂಡಿರುವುದು ಲಾಭದಾಯಕ.

ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಘೋಷಿಸಿದರೆ ಅದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣ ಆಗಬಹುದು. ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಇಚ್ಛೆ ಸಿಧು ಅವರಿಗೂ ಇದೆ. ಮುಖ್ಯಮಂತ್ರಿ ಎಂಬ ಕಾರಣಕ್ಕೆ ಚನ್ನಿ ಅವರ ನೇತೃತ್ವದಲ್ಲಿಯೇ ಪಕ್ಷವು ಚುನಾವಣೆ ಎದುರಿಸುತ್ತಿದೆ ಎಂಬುದು ಸಾಮಾನ್ಯವಾಗಿ ಇರುವ ಭಾವನೆ. ಚನ್ನಿ ಅವರ ಪರಿಶಿಷ್ಟ ಜಾತಿಯ ಹಿನ್ನೆಲೆ, ‘ಸಾಮಾನ್ಯ ವ್ಯಕ್ತಿ’ ಎಂಬ ವರ್ಚಸ್ಸು ಚುನಾವಣೆಯಲ್ಲಿ ಪಕ್ಷಕ್ಕೆ ನೆರವಾಗಹುದು. ಆದರೆ, ಬಹು ಜಾತಿ, ಸಂಸ್ಕೃತಿಯ ಪಂಜಾಬ್‌ನಲ್ಲಿ ಒಂದು ಜಾತಿಯನ್ನು ನೆಚ್ಚಿಕೊಂಡು ಚುನಾವಣೆ ಗೆಲ್ಲುವುದು ಸುಲಭ ಏನಲ್ಲ.

ಎಎ‍ಪಿ ಎದುರು ಅವಕಾಶ, ಸವಾಲುಗಳ ಸಾಲು

2017ರ ಚುನಾವಣೆಯಲ್ಲೇ ಆಮ್ ಆದ್ಮಿ ಪಕ್ಷವು ಪಂಜಾಬ್‌ ಚುಕ್ಕಾಣಿ ಹಿಡಿಯಲಿದೆ ಎಂಬ ಮಾತು ಕೇಳಿ ಬಂದಿತ್ತು. 2022ರ ಚುನಾವಣೆಗೆ ಎಎಪಿ ಸರ್ವ ರೀತಿಯಲ್ಲಿ ಸಜ್ಜಾಗಿದ್ದರೂ, ಸವಾಲುಗಳು ಅಧಿಕವಾಗಿವೆ. ಕಳೆದ ಚುನಾವಣೆಯಲ್ಲಿ 20 ಕ್ಷೇತ್ರಗಳಲ್ಲಿ ಗೆದ್ದು, ಶಿರೋಮಣಿ ಅಕಾಲಿದಳ–ಬಿಜೆಪಿ ಮೈತ್ರಿಕೂಟವನ್ನು ಮೂರನೇ ಸ್ಥಾನಕ್ಕೆ ತಳ್ಳಿ ಅಚ್ಚರಿ ಮೂಡಿಸಿತ್ತು.2014ರ ಲೋಕಸಭಾ ಚುನಾವಣೆಯಲ್ಲೇ ರಾಜ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಎಎಪಿ, ಪಂಜಾಬ್‌ನ 4 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕೆಲವು ಕ್ಷೇತ್ರಗಳಲ್ಲಿ ಕೂದಲೆಳೆ ಅಂತರದಲ್ಲಿ ಗೆಲುವು ತಪ್ಪಿಸಿಕೊಂಡಿತ್ತು.

ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಎಎಪಿ, ಉತ್ಸಾಹ ಹೆಚ್ಚಿಸಿಕೊಂಡಿದೆ. ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ರಾಜ್ಯದಲ್ಲಿ ಮಾದಕವಸ್ತು ವಿರೋಧಿ ಹೋರಾಟವನ್ನು ದೊಡ್ಡ ಮಟ್ಟದಲ್ಲಿ ನಡೆಸಿದ್ದಾರೆ. ರಾಜ್ಯದಲ್ಲಿ ಎಎಪಿಯ ಜನಪ್ರಿಯ ನಾಯಕ ಎನಿಸಿರುವ ಭಗವಂತ ಮಾನ್ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಎಲ್ಲ ಪಕ್ಷಗಳಿಗಿಂತ ಒಂದು ಹೆ‌ಜ್ಜೆ ಮುಂದೆ ಸಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಆದರೆ, ಎಎಪಿ ಅಂದುಕೊಂಡಷ್ಟು ಈ ಬಾರಿ ಚುನಾವಣಾ ಕಣ ಸುಲಭವಾಗಿಲ್ಲ. ಕಾಂಗ್ರೆಸ್‌ ಜೊತೆ ಹಲವು ಪಕ್ಷಗಳನ್ನು ಎಎಪಿ ಎದುರಿಸಬೇಕಿದೆ. ಶಿರೋಮಣಿ ಅಕಾಲಿದಳ–ಬಿಎಸ್‌ಪಿ ಮೈತ್ರಿಕೂಟ, ಬಿಜೆಪಿ ಹಾಗೂ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟ, ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಅವರ ಸಂಯುಕ್ತ ಸಮಾಜ ಮೋರ್ಚಾ ಹಾಗೂ ಗುರುನಾಮ್ ಸಿಂಗ್ ಚದೂನಿ ಅವರ ಸಂಯುಕ್ತ ಸಂಘರ್ಷ ಪಕ್ಷಗಳನ್ನೂ ಎದುರಿಸಬೇಕಿದೆ.ಕೃಷಿ ಕಾಯ್ದೆಗಳನ್ನು ಖಂಡಿಸಿ ಬಿಜೆಪಿ ವಿರುದ್ಧ ಹೋರಾಟ ನಡೆಸಿದ್ದ ಪಂಜಾಬ್‌ನ ರೈತರ ಮತಗಳು ಎಎಪಿಗೆ ಬರುವ ನಿರೀಕ್ಷೆ ಪಕ್ಷಕ್ಕಿತ್ತು. ಆದರೆ ರೈತ ಮುಖಂಡರೇ ಪಕ್ಷಗಳನ್ನು ಸ್ಥಾಪಿಸಿರುವುದರಿಂದ ಆ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ.

ಉಚಿತ ವಿದ್ಯುತ್, ನೀರು, ಮಹಿಳೆಯರಿಗೆ ಹಣಕಾಸು ನೆರವು ಸೇರಿದಂತೆ ವಿವಿಧ ಜನಪ್ರಿಯ ಘೋಷಣೆಗಳನ್ನೂ ಪಕ್ಷ ಮಾಡಿದೆ. ನಿರುದ್ಯೋಗವು ರಾಜ್ಯದ ಪ್ರಮುಖ ಸಮಸ್ಯೆಯಾಗಿದ್ದು, ಕಾಂಗ್ರೆಸ್, ಅಕಾಲಿದಳ ಹಾಗೂ ಬಿಜೆಪಿ ಈ ಬಗ್ಗೆ ಗಮನ ಹರಿಸಿಲ್ಲ ಎಂಬ ಜನರ ಆಕ್ರೋಶವು ಅವರನ್ನು ಎಎಪಿಯತ್ತ ಕರೆತರುವ ಸಾಧ್ಯತೆಯಿದೆ. ಆಡಳಿತಾರೂಢ ಕಾಂಗ್ರೆಸ್‌ನ ಕಿತ್ತಾಟ, ಆಡಳಿತ ವಿರೋಧಿ ಅಲೆ ಹಾಗೂ ಶಿರೋಮಣಿ ಅಕಾಲಿದಳ ಶಕ್ತಿ ಕಳೆದುಕೊಂಡಿರುವ ಅಂಶಗಳು ಎಎಪಿ ಗೆಲುವನ್ನು ಸುಲಭಗೊಳಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಅಕಾಲಿದಳ ಹೇಗಿದೆ?:2017ರಲ್ಲಿ ಕಾಂಗ್ರೆಸ್‌ಗೆ ಅಧಿಕಾರವನ್ನು ಬಿಟ್ಟುಕೊಡುವ ಮುನ್ನ, ಎರಡು ಅವಧಿಗೆ ರಾಜ್ಯದಲ್ಲಿ ಆಡಳಿತ ನಡೆಸಿದ್ದ ಶಿರೋಮಣಿ ಅಕಾಲಿದಳದ ವರ್ಚಸ್ಸು ಈ ಬಾರಿ ಅಷ್ಟಾಗಿ ಇಲ್ಲ ಎನ್ನುತ್ತಾರೆ ವಿಶ್ಲೇಷಕರು. ಚುನಾವಣಾ ಸೋಲಿನ ಬಳಿಕಪ್ರಕಾಶ್‌ಸಿಂಗ್ ಬಾದಲ್ ಅವರು ತಮ್ಮ ರಾಜಕೀಯ ಚಟುವಟಿಕೆಗಳನ್ನು ಮಿತಗೊಳಿಸಿದ್ದರು. ಈಗ ಅವರು ಮತ್ತೆ ಸಕ್ರಿಯರಾಗಿದ್ದಾರೆ. 94 ವರ್ಷದ ಬಾದಲ್ ಅವರೇ ಈಗಲೂ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ಇಳಿವಯಸ್ಸಿನಲ್ಲೂ ಅವರು ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿ ಕಾಯ್ದೆ ವಿಚಾರವಾಗಿ ಬಿಜೆಪಿ ಜೊತೆಗಿದ್ದ ಮೈತ್ರಿ ಮುರಿದುಬಿದ್ದಿದ್ದು, ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ.

ಎಎಪಿಗೆ ಜೈ ಎಂದ ಸಮೀಕ್ಷೆಗಳು

ಪಂಜಾಬ್‌ ಚುನಾವಣಾ ಪೂರ್ವ ಸಮೀಕ್ಷೆಗಳು ಎಎಪಿ ಗೆಲುವಿಗೆ ಸಾಕಷ್ಟು ಅವಕಾಶಗಳಿವೆ ಎಂದು ಭವಿಷ್ಯ ನುಡಿದಿವೆ. ಎಎಪಿ 50–56 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದುರಿಪಬ್ಲಿಕ್–ಪಿಎಂಎಆರ್‌ಕ್ಯೂ ನಡೆಸಿದ ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಕಾಂಗ್ರೆಸ್‌ 42–48, ಅಕಾಲಿದಳ 13ರಿಂದ 17, ಬಿಜೆಪಿಗೆ ಒಂದರಿಂದ ಮೂರು ಹಾಗೂ ಪಕ್ಷೇತರರು 1ರಿಂದ 3 ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಎಬಿಪಿ–ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಆಮ್ ಆದ್ಮಿ ಪಕ್ಷವು ಅತಿಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.52–58 ಸೀಟುಗಳು ಸಿಗಲಿದ್ದು, ಪಕ್ಷವು ಬಹುಮತ ಪಡೆಯಲು ಕೆಲವು ಸೀಟುಗಳ ಕೊರತೆಯಾಗಬಹುದು ಎಂದು ಊಹಿಸಿದೆ. ಎರಡನೇ ಸ್ಥಾನ ಗಳಿಸಲಿರುವ ಕಾಂಗ್ರೆಸ್ 37ರಿಂದ 43 ಸ್ಥಾನಕ್ಕೆ ಕುಸಿಯಬಹುದು ಎಂದು ಅಂದಾಜಿಸಿದೆ.

ಬಿಜೆಪಿ ಮುಂಚೂಣಿಗೆ

ಪಂಜಾಬ್‌ನಲ್ಲಿ ಬಿಜೆಪಿಗೆ ಸ್ವಂತ ಅಸ್ತಿತ್ವ ಎಂಬುದು ಈವರೆಗೆ ಇರಲೇ ಇಲ್ಲ. ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಕಿರಿಯ ಪಾಲುದಾರ ಪಕ್ಷವಾಗಿ 1990ರ ದಶಕದಿಂದಲೂ ಬಿಜೆಪಿ ಇದೆ. ಬಿಜೆಪಿ ಗರಿಷ್ಠ ಎಂದರೆ 23 ಕ್ಷೇತ್ರಗಳಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಈವರೆಗಿನ ಯಾವ ಚುನಾವಣೆಯಲ್ಲಿಯೂ ಸ್ಪರ್ಧಿಸಿಲ್ಲ. ಆದರೆ, ಕೇಂದ್ರವು ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಬಿಜೆಪಿ ಜತೆಗಿನ ಮೈತ್ರಿಯನ್ನು ಎಸ್‌ಎಡಿ2020ರ ಸೆಪ್ಟೆಂಬರ್‌ನಲ್ಲಿಕಡಿದುಕೊಂಡಿತು. ಹಾಗಾಗಿ, ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಯಿತು.

ಅಮರಿಂದರ್‌ ಸಿಂಗ್ ಅವರು ‘ಪಂಜಾಬ್‌ ಲೋಕ ಕಾಂಗ್ರೆಸ್‘ ಪಕ್ಷ ಸ್ಥಾಪಿಸಿದ್ದಾರೆ. ಎಸ್‌ಎಡಿಯಿಂದ ಸಿಡಿದು ಬೇರೆ ಆಗಿರುವ ಸುಖದೇವ್‌ ಧಿಂಡ್ಸಾ ಅವರು ಶಿರೋಮಣಿ ಅಕಾಲಿ ದಳ (ಸಂಯುಕ್ತ) ಎಂಬ ಪಕ್ಷ ಸ್ಥಾಪಿಸಿದ್ದಾರೆ. ಈ ಪಕ್ಷಗಳ ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಕೂಟದಲ್ಲಿ ಬಿಜೆಪಿಯೇ ಪ್ರಮುಖ ಪಕ್ಷ. ಹಾಗಾಗಿ, ಈ ಪಕ್ಷವು ಇದೇ ಮೊದಲ ಬಾರಿಗೆ 70–80 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ.

ಬಿಜೆಪಿಗೆ ಪಂಜಾಬ್‌ನಲ್ಲಿ ಪ್ರಭಾವಿ ನಾಯಕರೂ ಇಲ್ಲ, ಗೆಲ್ಲಬಲ್ಲ ಅಭ್ಯರ್ಥಿಗಳೂ ಇಲ್ಲ. ಹೀಗಾಗಿಯೇ ಕಾಂಗ್ರೆಸ್‌ ಮತ್ತು ಎಸ್‌ಎಡಿಯ ‘ಅತೃಪ್ತ’ ಮುಖಂಡರನ್ನು ಬಿಜೆಪಿಗೆ ಸೆಳೆಯಲಾಗುತ್ತಿದೆ. ಮಂಜಿಂದರ್‌ ಸಿಂಗ್‌ ಸಿರ್ಸಾ, ಜಗದೀಪ್‌ ಸಿಂಗ್‌ ನಕೈ, ರಾಣಾ ಗುರ್ಮೀತ್ ಸಿಂಗ್ ಸೋಧಿ, ಫತೇಹ್‌ ಜಂಗ್‌ ಬಾಜ್ವಾ, ಹರ್ಜೋತ್‌ ಸಿಂಗ್ ಕಮಲ್‌ ಮುಂತಾದ ಹಲವು ಮುಖಂಡರು ಇತ್ತೀಚಿನ ವಾರಗಳಲ್ಲಿ ಬಿಜೆಪಿ ಸೇರಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಘೋಷಿಸಿಲ್ಲ.

ಅಮರಿಂದರ್‌ ಅವರೂ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು ಎಂಬ ಉಮೇದು ಹೊಂದಿರುವುದರಿಂದ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಕಡಿಮೆ.

ಪಕ್ಷಗಳ ಬಲಾಬಲ

ಕಾಂಗ್ರೆಸ್‌: 77

ಎಎಪಿ: 20

ಅಕಾಲಿದಳ: 15

ಬಿಜೆಪಿ: 3

ಇತರ: 2

ಒಟ್ಟು: 117

–ಮಾಹಿತಿ ಸಂಗ್ರಹ: ಹಮೀದ್‌. ಕೆ ಮತ್ತು ಅಮೃತ್‌ ಕಿರಣ್‌ ಬಿ.ಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT