ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕಾಲದಲ್ಲಿ ಕಾಮ ಶಮನ: ಲೈಂಗಿಕ ಆಟಿಕೆಗಳ ಮಾರಾಟದಲ್ಲಿ ಶೇ 65ರಷ್ಟು ಹೆಚ್ಚಳ

ಅಕ್ಷರ ಗಾತ್ರ
ADVERTISEMENT
""
""
""
""
""
""
""

ಕೊರೊನಾ ಕಾಲದಲ್ಲಿ ಮಾಸ್ಕ್‌, ಸ್ಯಾನಿಟೈಜರ್‌ ಮುಂತಾದ ವಸ್ತುಗಳ ಮಾರಾಟ ಏರಿಕೆಯಾಗಿದ್ದು ತಿಳಿದಿದೆ. ಆದರೆ ದೇಶದಲ್ಲಿ ‘ಲೈಂಗಿಕ ಆಟಿಕೆ’ಗಳ (ಸೆಕ್ಸ್‌ ಟಾಯ್ಸ್‌) ಮಾರಾಟವೂ ಶೇ 65ರಷ್ಟು ಹೆಚ್ಚಾಗಿದೆ ಎಂಬ ವಿಚಾರ ಬಹಳಷ್ಟು ಜನರಿಗೆ ತಿಳಿದಿರಲಾರದು.

ಭಾರತದಲ್ಲಿ ಇಂಥ ಲೈಂಗಿಕ ಆಟಿಕೆಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದು ಮುಂಬೈಯಲ್ಲಿ, ಎರಡನೇ ಸ್ಥಾನದಲ್ಲಿ ಬೆಂಗಳೂರು ಇದೆ.

2018ರಲ್ಲಿ ಹಿಂದಿಯಲ್ಲಿ ‘ಲಸ್ಟ್‌ ಸ್ಟೋರೀಸ್‌’ ಎಂಬ ಸಿನಿಮಾ ತೆರೆ ಕಂಡಿತ್ತು. ಮಹಿಳೆಯೊಬ್ಬರು ಲೈಂಗಿಕ ಕಾಮನೆ ಈಡೇರಿಸಿಕೊಳ್ಳಲು ರಿಮೋಟ್‌ ಕಂಟ್ರೋಲ್ಡ್‌ ವೈಬ್ರೇಟರ್‌ ಅನ್ನು ಬಳಸುತ್ತಿರುವುದನ್ನು ಇದರಲ್ಲಿ ತೋರಿಸಲಾಗಿತ್ತು. ಇದಾದ ನಂತರ ಮಹಿಳೆಯರಿಗಾಗಿ ಇರುವ ಲೈಂಗಿಕ ಆಟಿಕೆಗಳಿಗಾಗಿ ಇಂಟರ್‌ನೆಟ್‌ನಲ್ಲಿ ಶೋಧ ನಡೆಸುವವರ ಸಂಖ್ಯೆ ಒಮ್ಮೆಲೇ ಏರಿಕೆ ಕಂಡಿತ್ತು. ಲಾಕ್‌ಡೌನ್‌ ನಂತರ ಇಂಥ ಆಟಿಕೆಗಳ ಖರೀದಿ ಪ್ರಮಾಣವು ಶೇ 65ರಷ್ಟು ಏರಿಕೆಯಾಗಿದೆ ಎಂದು ‘ದಾಟ್ಸ್‌ ಪರ್ಸನಲ್‌ ಡಾಟ್‌ ಕಾಂ’ ಸಂಸ್ಥೆಯ ವರದಿ ಹೇಳಿದೆ. ಇಂಥ ವಸ್ತುಗಳನ್ನು ಖರೀದಿಸಿದ ಮಹಿಳೆಯರಲ್ಲಿ ಹೆಚ್ಚಿನವರು ಬೆಂಗಳೂರು ಮತ್ತು ತೆಲಂಗಾಣದವರು ಎಂದು ವರದಿ ಉಲ್ಲೇಖಿಸಿದೆ.

‘ಲಾಕ್‌ಡೌನ್‌ ಅವಧಿಯು ಅನೇಕರು ತಮ್ಮ ಜೀವನ ಮತ್ತು ಲೈಂಗಿಕ ಯೋಗಕ್ಷೇಮದತ್ತ ವಿಶೇಷ ಗಮನ ಹರಿಸುವಂತೆ ಮಾಡಿದೆ. ಲೈಂಗಿಕ ಆಟಿಕೆಗಳು ಶರೀರದ ಮೂಲಭೂತ ಅಗತ್ಯಗಳನ್ನು ಈಡೇರಿಸುತ್ತವೆ. ಜತೆಗೆ ಅವು ಬದುಕಿನ ವಾಸ್ತವಗಳಿಂದ ಗಮನವನ್ನು ಬೇರೆಡೆಗೆ ಹರಿಸಲು ನೆರವಾಗಬಲ್ಲವು’ ಎಂದು ಗೆಟ್‌ಸೆಟ್‌ವೈಲ್ಡ್‌ ಡಾಟ್‌ ಕಾಂನ ಸಹ ಸಂಸ್ಥಾಪಕ ಬಾಬಿ ಎಲ್‌. ಹೇಳಿದ್ದಾರೆ.

‘ಲಾಕ್‌ಡೌನ್‌ ಅವಧಿಯಲ್ಲಿ ಜನರು ತಮ್ಮ ಆದ್ಯತೆಗಳನ್ನು ಬದಲಿಸಿದರು. ಇದು ಸಹ ಲೈಂಗಿಕ ಆಟಿಕೆಗಳ ಮಾರಾಟ ಹೆಚ್ಚಲು ಕಾರಣ’ ಎಂದು ದಾಟ್ಸ್‌ ಪರ್ಸನಲ್‌ ಡಾಟ್‌ ಕಾಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್‌ ಸರಯ್ಯಾ ಹೇಳುತ್ತಾರೆ.

‘ಎಲ್ಲಾ ಆದಾಯ ವರ್ಗದವರೂ ಈಗ ತಮ್ಮ ಮನೆ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಅಲಂಕಾರ ವಸ್ತುಗಳು, ಅಡುಗೆಯ ಪಾತ್ರೆ, ಮನೆಯ ಅಗತ್ಯ ವಸ್ತುಗಳು ಹಾಗೂ ಲೈಂಗಿಕ ಆರೋಗ್ಯಕ್ಕೆ ಅಗತ್ಯವಿರುವ ವಸ್ತುಗಳತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ’ ಎಂದು ಸರಯ್ಯಾ ಹೇಳುತ್ತಾರೆ.

‘ಇದು ಲಾಕ್‌ಡೌನ್‌ಗಷ್ಟೇ ಸೀಮಿತ ಆಗದು, ವರ್ಷಾಂತ್ಯದವರೆಗೂ ಈ ಪ್ರವೃತ್ತಿ ಮುಂದುವರಿ ಯಲಿದೆ. ಅನೇಕ ವ್ಯಕ್ತಿಗಳು ಮತ್ತು ದಂಪತಿಗಳು ಹೆಚ್ಚು ಹೆಚ್ಚು ಆತ್ಮೀಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇಂಟರ್‌ನೆಟ್‌ ಮೂಲಕ ಅಶ್ಲೀಲ ಸಿನಿಮಾಗಳನ್ನು ನೋಡುವವರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿದೆ. ಆ ಮೂಲಕ ಲೈಂಗಿಕ ಆಟಿಕೆಗಳನ್ನು ಕುರಿತ ಮಾಹಿತಿಯು ಹೆಚ್ಚು ಜನರಿಗೆ ತಲುಪಿದೆ’ ಎಂದು ಐಎಂಬೇಷರಮ್‌ ಡಾಟ್‌ ಕಾಂನ ಸಹ ಸಂಸ್ಥಾಪಕ ರಾಜ್‌ ಅರ್ಮಾನಿ ಹೇಳಿದ್ದಾರೆ.

'ಲಸ್ಟ್ ಸ್ಟೋರಿಸ್' ಚಿತ್ರದಲ್ಲಿ ಕೈರಾ ಅಡ್ವಾಣಿ

ಸಮೀಕ್ಷೆ ಹೇಗೆ?

ಮೇ 18ರಿಂದ ಜೂನ್‌ 30ರೊಳಗಿನ 43 ದಿನಗಳಲ್ಲಿ ಮಾರಾಟವಾಗಿರುವ ಲೈಂಗಿಕ ಆಟಿಕೆಗಳ ಪ್ರಮಾಣವನ್ನು ಜನವರಿ 1ರಿಂದ ಫೆಬ್ರುವರಿ 12ರವರೆಗಿನ ಅವಧಿಯಲ್ಲಿ ನಡೆದ ಮಾರಾಟಕ್ಕೆ ಹೋಲಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಮಾರ್ಚ್‌ 20ರಿಂದ ಮೇ 18ರವರೆಗೆ ವಸ್ತುಗಳ ಮಾರಾಟ ಇರಲಿಲ್ಲ.

ವೈಬ್ರೇಟರ್‌ ರೂಪದಲ್ಲಿ ಫೋನ್‌

ಒಂದು ಕಾಲದಲ್ಲಿ ಸೆಕ್ಸ್ಟಿಂಗ್‌ಗೆ (ಲೈಂಗಿಕ ಸಂದೇಶ) ಫೋನ್‌ಗಳು ಹೆಚ್ಚು ಬಳಕೆಯಾಗುತ್ತಿದ್ದವು. ಆದರೆ, ಗ್ರಾಮೀಣ ಭಾರತದ
ಅನೇಕ ಮಹಿಳೆಯರು ಹಸ್ತಮೈಥುನಕ್ಕೂ ಫೋನ್‌ಗಳನ್ನು ಬಳಸುತ್ತಾರೆ. ಲೈಂಗಿಕ ಆಟಿಕೆಗಳು ದುಬಾರಿಯಾದ ಕಾರಣಕ್ಕೆ ಅನೇಕ
ಮಹಿಳೆಯರು ಈ ತಂತ್ರ ಅನುಸರಿಸುತ್ತಿದ್ದರು ಎಂಬುದು ಏಜೆಂಟ್ಸ್‌ ಆಫ್‌ ಇಷ್ಕ್‌ ಸಂಸ್ಥೆಯವರು 2017ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ತಿಳಿದುಬಂದಿತ್ತು.

ಇದಕ್ಕಾಗಿ ನೋಕಿಯಾ 3310 ಫೋನ್‌ ಮಹಿಳೆಯರ ನೆಚ್ಚಿನ ಆಯ್ಕೆಯಾಗಿತ್ತು. ಟೂತ್‌ ಬ್ರಷ್‌, ಷವರ್‌ ಜೆಟ್‌, ತಲೆದಿಂಬು, ಐಸ್‌ಕ್ಯೂಬ್‌ ಹಾಗೂ ಕೆಲವು ತರಕಾರಿಗಳೂ ಈ ಉದ್ದೇಶಕ್ಕೆ ಬಳಕೆಯಾಗುತ್ತಿದ್ದವು ಎಂದು ವರದಿ ಉಲ್ಲೇಖಿಸಿತ್ತು.

ಯಾರು ಏನು ಖರೀದಿಸಿದ್ದಾರೆ?

ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲಾ ವರ್ಗದ ಉತ್ಪನ್ನಗಳ ಮಾರಾಟ ಏರಿಕೆಯಾಗಿದ್ದರೂ, ಸುಲಭವಾಗಿ ಬಳಸಬಹುದಾದಂಥ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಕುದುರಿದೆ ಎಂದು ಆನ್‌ಲೈನ್‌ ಸಂಸ್ಥೆಗಳು ಹೇಳಿವೆ.

‘ಒಟ್ಟಾರೆ ಲೈಂಗಿಕ ಆಟಿಕೆಗಳ ಮಾರಾಟದಲ್ಲಿ ಮಸಾಜರ್‌ಗಳು ಹಾಗೂ ಪುರುಷರಿಗೆ ಶಿಶ್ನ ಪಂಪ್‌ಗಳು ಕ್ರಮವಾಗಿ ಶೇ 19 ಹಾಗೂ ಶೇ 16ರಷ್ಟು ಪಾಲು ಹೊಂದಿವೆ’ ಎಂದು ದಾಟ್ಸ್‌ಪರ್ಸನಲ್‌ಡಾಟ್ ಕಾಂ ಸಂಸ್ಥೆ ಹೇಳಿದೆ.

ಗೆಟ್‌ಸೆಟ್‌ವೈಲ್ಡ್ ಸಂಸ್ಥೆಯು ಡಿಲ್ಡೊ, ವೈಬ್ರೇಟರ್‌ ಹಾಗೂ ಹಸ್ತಮೈಥುನದ ಇತರ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿದೆ. ಐಎಂಬೇಷರಮ್‌ ಸಂಸ್ಥೆಯು ಪುರುಷರು ಬಳಸುವ ಫ್ಲೆಷ್‌ಲೈಟ್‌, ಲೈಂಗಿಕ ಕಾರ್ಯಕ್ಷಮತೆ ಹೆಚ್ಚಿಸುವ ಉತ್ಪನ್ನಗಳು ಹಾಗೂ ಪ್ಲೆಷರ್‌ ರಿಂಗ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿವೆ.

ಬೆಂಗಳೂರಿನ ಒಟ್ಟು ಖರೀದಿದಾರರಲ್ಲಿ ಶೇ 67ರಷ್ಟು ಪುರುಷರು ಹಾಗೂ ಶೇ 33ರಷ್ಟು ಮಹಿಳೆಯರು. ಇಂಥ ಆಟಿಕೆಗಳ ಖರೀದಿ ನಡೆಸುವ ಮಹಿಳೆಯರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿರುವುದು 2014ರ ನಂತರದ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅನೇಕ ಮಹಿಳೆಯರು ತಮ್ಮ ಪತಿ ಅಥವಾ ಪುರುಷ ಸ್ನೇಹಿತರ ಹೆಸರು, ವಿಳಾಸ ನೀಡಿ ಇಂಥ ಉತ್ಪನ್ನಗಳನ್ನು ತರಿಸುತ್ತಾರೆ.

ಮೊದಲ ಶ್ರೇಣಿಯ ನಗರಗಳಲ್ಲೇ ಇಂಥ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ‘ಸಣ್ಣ ನಗರಗಳಲ್ಲಿ ಜನರ ಸುತ್ತ ‘ನಿಷೇಧಗಳ’ ಮೋಡವಿರುತ್ತದೆ. ಆದ್ದರಿಂದ ತಮ್ಮ ದೈಹಿಕ ಆಸೆಗಳ ಬಗ್ಗೆ ಹುಡುಕಾಟ ನಡೆಸುವವರು, ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇರುತ್ತದೆ’ ಎನ್ನುತ್ತಾರೆ ಅರ್ಮಾನಿ.

‘ಸಣ್ಣ ನಗರಗಳ ಶ್ರೀಮಂತರು ಇಂಥ ವಸ್ತುಗಳನ್ನು ಖರೀದಿಸುವ ಸಾಹಸ ಮಾಡುತ್ತಾರೆ. ಇಂಥವರು ವಿಶಿಷ್ಟ ಉತ್ಪನ್ನಗಳನ್ನು ಖರೀದಿಸುತ್ತಾರೆ. ಉದಾಹರಣೆಗೆ, ಮಹಿಳೆಯರು ಹಸ್ತಮೈಥುನಕ್ಕೆ ಬಳಸುವ ನಾಲ್ಕು ‘ಸೈಬಿಯನ್‌ ಸೆಕ್ಸ್‌ ಮಷೀನ್‌’ಗಳನ್ನು ಕಳೆದ ವರ್ಷ ನಾವು ಮಾರಾಟ ಮಾಡಿದ್ದೆವು. ಈ ಒಂದು ಮಷೀನ್‌ಗೆ ಸುಮಾರು ₹4 ಲಕ್ಷ ದರ ಇದೆ. ಈ ನಾಲ್ಕೂ ಯಂತ್ರಗಳನ್ನು ಎರಡನೇ ಶ್ರೇಣಿಯ ನಗರದ ಜನರು ಖರೀದಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇಂತಹ ಸಾಧನಗಳನ್ನು ಹೆಚ್ಚಾಗಿ 18–24 ವಯೋಮಾನದವರು ಇಷ್ಟಪಡುತ್ತಾರೆ. ದೇಹಕ್ಕೆ ಹಚ್ಚಿಕೊಳ್ಳುವ ತಿನ್ನಬಹುದಾದ ಪೇಂಟ್‌ ಮತ್ತು ಮಸಾಜ್‌ ತೈಲಗಳು ಯುವ ಸಮುದಾಯದಲ್ಲಿ ಹೆಚ್ಚು ಜನಪ್ರಿಯ. 40 ವರ್ಷ ವಯಸ್ಸಿಗೆ ಮೇಲ್ಪಟ್ಟವರು ವೈದ್ಯಕೀಯವಾಗಿ ಲೈಂಗಿಕತೆಗೆ ಉತ್ತೇಜನ ನೀಡುವ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಾರೆ ಎಂದು ವರದಿ ಹೇಳಿದೆ.

ಕಾನೂನು ಏನು ಹೇಳುತ್ತದೆ?

ದೇಶದಲ್ಲಿ ಲೈಂಗಿಕ ಆಟಿಕೆಗಳ ಮಾರಾಟ ಹೆಚ್ಚುತ್ತಿದೆಯಾದರೂ ಈ ವ್ಯಾಪಾರದ ಕಾನೂನುಬದ್ಧತೆಯ ಬಗ್ಗೆ ಅಸ್ಪಷ್ಟತೆ ಇದೆ. ನಮ್ಮ ಕಾನೂನು ಅಶ್ಲೀಲತೆಯನ್ನು ಅಪರಾಧ ಎನ್ನುತ್ತಿದೆ. ಆದರೆ ‘ಅಶ್ಲೀಲತೆ ಎಂದರೇನು’ ಎಂಬ ಬಗ್ಗೆ ಸ್ಪಷ್ಟ ವ್ಯಾಖ್ಯಾನ ಇಲ್ಲ.

‘ಜನರನ್ನು ವಂಚಿಸುವ ಮತ್ತು ಭ್ರಷ್ಟಗೊಳಿಸುವುದಕ್ಕೆ ಕಾರಣವಾಗಬಲ್ಲ, ಕಾಮಪ್ರಚೋದಕವಾದ ಯಾವುದೇ ನಡೆಯು ಅಶ್ಲೀಲತೆಯಾಗುತ್ತದೆ’ ಎಂದು ಐಪಿಸಿ ಸೆಕ್ಷನ್‌ 292 ಹಾಗೂ ಐಟಿ ಕಾಯ್ದೆಯ ಸೆಕ್ಷನ್‌ 67 ಹೇಳುತ್ತದೆ. ಭಾರತದಲ್ಲಿ ಲೈಂಗಿಕ ಆಟಿಕೆಗಳ ಮಾರಾಟವನ್ನು ನಿಯಂತ್ರಿಸುವ ಅಥವಾ ನಿಷೇಧಿಸುವ ಕಾನೂನು ಇಲ್ಲ. ಆದರೆ, ಮನುಷ್ಯನ ದೇಹದ ಭಾಗವನ್ನು ಯಥಾವತ್‌ ಪ್ರತಿನಿಧಿಸುವ ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂಬ ನಿಯಮವಿದೆ.

ಡಾ.ಗಿರೀಶ್ ಕುಮಾರ್‌ ಎಂ.ಎನ್., ಡಾ.ಪದ್ಮಿನಿ ಪ್ರಸಾದ್ ಮತ್ತು ಡಾ.ವಿನೋದ್ ಛೆಬ್ಬಿ

ತಜ್ಞರ ಪ್ರತಿಕ್ರಿಯೆ

ಲೈಂಗಿಕ ಸಂಬಂಧಕ್ಕೆ ಹೊಸ ಸ್ವರೂಪ: ಡಾ.ಪದ್ಮಿನಿ ಪ್ರಸಾದ್

ವಿಕೃತ ಮನಸ್ಸಿನ ಸಂಗಾತಿಗಳ ಲೈಂಗಿಕ ದೌರ್ಜನ್ಯಗಳಿಂದ ಪಾರಾಗಲು ಇಂಥ ಸಾಧನಗಳ ಬಳಕೆ ಹೆಚ್ಚಾಗುತ್ತಿದೆ. ವಿಭಿನ್ನ ಲೈಂಗಿಕ ತೃಪ್ತಿ ಮತ್ತು ಹೊಸತನ ಬಯಸುವ ದಂಪತಿಗಳು ಪರಸ್ಪರ ಒಪ್ಪಿಗೆಯಿಂದಲೇ ಈ ಸಾಧನಗಳ ಪ್ರಯೋಗಕ್ಕೆ
ಮುಂದಾಗುತ್ತಿದ್ದಾರೆ. ದೈಹಿಕ ಸಂಬಂಧಗಳಿಗೆ ಹೊಸ ಸ್ವರೂಪ ನೀಡುವ ಮಾರ್ಗವಿದು.

ಚಿಕಿತ್ಸೆ ಭಾಗವಾಗಿಯೂ ಈ ಸಾಧನಗಳ ಬಳಕೆಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಲಾಕ್‌ಡೌನ್‌ ಅವಧಿಯಲ್ಲಿ ಲೈಂಗಿಕ ಕ್ರಿಯೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಕಾಂಡೋಮ್‌ಗಳ ಕೊರತೆ ಎದುರಾಗಿದೆ. ರಬ್ಬರ್‌ ಕೊರತೆಯಿಂದ ಇವುಗಳ ತಯಾರಿಕೆ ಕಡಿಮೆಯಾಗಿದೆ. ಆದರೆ, ಲೈಂಗಿಕ ಸಾಧನಗಳ ಮಾರಾಟ ಅಧಿಕವಾಗಿದೆ.

(ಸ್ತ್ರೀರೋಗ ಮತ್ತು ಲೈಂಗಿಕ ತಜ್ಞರು)

ಭಾರತೀಯರಿಗೆ ಲೈಂಗಿಕ ಆಟಿಕೆಗಳು ಹೊಸತಲ್ಲ: ಡಾ.ವಿನೋದ್ ಛಬ್ಬಿ

ಕಾಮತೃಷೆ ತೀರಿಸುವ ಲೈಂಗಿಕ ಆಟಿಕೆಗಳು ಭಾರತೀಯರಿಗೆ ಹೊಸತಲ್ಲ. ಪುರಾತನ ಕಾಲದಿಂದಲೂ ಬಳಕೆಯಲ್ಲಿವೆ. ಮುಂಬೈನ ಖ್ಯಾತ ಲೈಂಗಿಕ ತಜ್ಞ ಡಾ. ಪ್ರಕಾಶ ಕೊಠಾರಿ ಅವರ ‘ಸೆಕ್ಸ್‌‌ ಮ್ಯೂಸಿಯಂ’ನಲ್ಲಿರುವ 16ನೇ ಶತಮಾನದ ಆನೆಯ ದಂತದ ಪುರುಷ ಜನನಾಂಗದ ಆಟಿಕೆ ಎಲ್ಲರ ಗಮನ ಸೆಳೆಯುತ್ತದೆ. ಮರದಿಂದ ತಯಾರಿಸಲಾದ ಲೈಂಗಿಕ ಆಟಿಕೆಗಳೂ ಇಲ್ಲಿವೆ. ಖಜುರಾಹೊ, ಕೋನಾರ್ಕ್‌ ಪುರಾತನ ದೇವಸ್ಥಾನಗಳಲ್ಲಿ ಮೈಥುನ ಶಿಲ್ಪಗಳು ಭಾರತೀಯರ ವೈವಿಧ್ಯಮಯ ಲೈಂಗಿಕ ಜೀವನವನ್ನು ತೆರೆದಿಡುತ್ತವೆ. ವಾತ್ಸಾಯನ ಕಾಮಸೂತ್ರ ಸೇರಿದಂತೆ ಅನೇಕ ಶೃಂಗಾರಕಾವ್ಯಗಳಲ್ಲಿ ಎಲ್ಲ ಬಗೆಯ ಮೈಥುನಗಳ ಬಗ್ಗೆ ಪ್ರಸ್ತಾಪವಿದೆ. ಈಗ ಅದಕ್ಕೊಂದು ಉದ್ಯಮದ ಸ್ವರೂಪ ಬಂದಿದೆ ಅಷ್ಟೇ.

ಹಸ್ತಮೈಥುನ, ಮುಖಮೈಥುನದಂತೆ ಇದೊಂದು ಬಗೆಯ ಮೈಥುನ. ಇದು ಸಹಜ ಕ್ರಿಯೆಯೇ ಹೊರತು ವ್ಯಸನವಲ್ಲ. ಈ ಆಟಿಕೆಗಳು ಆರಂಭದಲ್ಲಿ ಆಸಕ್ತಿ ಕೆರಳಿಸಿದರೂ ನಂತರ ಬೇಸರ ಹುಟ್ಟಿಸುತ್ತವೆ ಎಂದು ನನ್ನಲ್ಲಿ ಸಮಾಲೋಚನೆಗೆ ಬರುವ ಅನೇಕರು ಹೇಳಿಕೊಂಡಿದ್ದಾರೆ. ಎರಡು ಮನಸ್ಸು ಬೆರೆತಾಗ ದಾಂಪತ್ಯ ಮತ್ತು ಲೈಂಗಿಕ ಜೀವನ ಸುಖವಾಗಿರುತ್ತದೆ. ಗಂಡು, ಹೆಣ್ಣಿನ ಮಿಲನಕೂಟದಲ್ಲಿ ಸ್ವಂತಿಕೆ, ಅಸ್ಮಿತೆಗೆ ಧಕ್ಕೆಯಾದಾಗ ಇಂಥ ಕೃತಕ ಸಲಕರಣೆಗಳು ಸಂಗಾತಿಯ ಸ್ಥಾನ ಪಡೆಯುತ್ತವೆ. ಆದರೆ, ಎಲ್ಲರಿಗೂ ಈ ಸಾಧನಗಳನ್ನು ಖರೀದಿಸುವ ಶಕ್ತಿ ಇಲ್ಲ ಎಂಬುವುದು ಗಮನಾರ್ಹ.

ಸಂತೃಪ್ತ ಮತ್ತು ಅತೃಪ್ತ ಲೈಂಗಿಕ ಜೀವನಕ್ಕೆ ನಾನಾ ಆಯಾಮಗಳಿವೆ. ಯಾವುದೋ ಒಂದೆರಡು ಲೆಕ್ಕಾಚಾರ ಮತ್ತು ಸಮೀಕ್ಷೆಗಳಿಂದ ಮಾನವರ ಲೈಂಗಿಕ ವರ್ತನೆಯಲ್ಲಿ ಬದಲಾವಣೆಯಾಗಿದೆ ಎಂದು ಭಾವಿಸಬೇಕಾಗಿಲ್ಲ. ಇಂಥ ಸಮೀಕ್ಷೆಗಳು ಸಂಪೂರ್ಣ ಅಸಂಬದ್ಧ ಮತ್ತು ಅತಾರ್ಕಿಕ. ಈ ಅಂಕಿ, ಅಂಶಗಳು ಲೈಂಗಿಕ ಆಟಿಕೆಗಳ ಮಾರಾಟ ಕಂಪನಿಗಳ ವಹಿವಾಟು ಹೆಚ್ಚಳವನ್ನು ಬಿಂಬಿಸುತ್ತವೆಯ ಹೊರತು ಸಮಗ್ರ ಲೈಂಗಿಕ ವರ್ತನೆಗಳಲ್ಲ. ಹಲವು ಆಯಾಮಗಳ ಲೈಂಗಿಕ ಚಟುವಟಿಕೆಗಳನ್ನು ಏಕಪಕ್ಷೀಯ ಮತ್ತು ಸಂಕುಚಿತ ಸಮೀಕ್ಷೆಗಳಿಂದ ಕಟ್ಟಿಕೊಡಲು ಸಾಧ್ಯವಿಲ್ಲ.

(ದಾಂಪತ್ಯ ಮತ್ತು ಲೈಂಗಿಕ ತಜ್ಞರು, ಬೆಂಗಳೂರು)

ಈ ಪ್ರವೃತ್ತಿ ಮುಂದುವರಿದರೆ ಆತಂಕ‌: ಡಾ.ಗಿರೀಶ್‌ ಕುಮಾರ್ ಎಂ.ಎನ್.

ಲಾಕ್‌ಡೌನ್‌ ಅವಧಿಯಲ್ಲಿ ಲೈಂಗಿಕ ಸಾಧನಗಳ ಮಾರಾಟ ಹೆಚ್ಚಳ ತಾತ್ಕಾಲಿಕ ಬೆಳವಣಿಗೆ. ಒಂದು ವೇಳೆ ಕೊರೊನಾ ನಂತರವೂ ಇದೇ ಪ್ರವೃತ್ತಿ‌ ಮುಂದುವರಿದರೆ ಅದು ಅಸಹಜ ವಿದ್ಯಮಾನ. ಆ ಬಗ್ಗೆ ಗಂಭೀರ ಚಿಂತನೆ ಮತ್ತು ಅಧ್ಯಯನ ನಡೆಸಬೇಕಾಗುತ್ತದೆ.

ಲಾಕ್‌ಡೌನ್‌ ಅವಧಿಯಲ್ಲಿ ಅಂತರ್ಜಾಲ ತಾಣಗಳಲ್ಲಿ ಅಶ್ಲೀಲಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಶೇ 11.5ರಿಂದ ಶೇ 60ಕ್ಕೆ ಜಿಗಿದಿದೆ. ಇದು ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಸಂಗಾತಿಗಳಿಲ್ಲದವರು ಆನ್‌ಲೈನ್‌ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ವೈಬ್ರೇಟರ್‌, ಫ್ಲೆಷ್‌ಲೈಟ್ ಸೇರಿದಂತೆ ಇತರ ಸಾಧನಗಳ ಮೊರೆ ಹೋಗುತ್ತಿದ್ದಾರೆ.

ಊಟ, ನಿದ್ದೆ, ಹಸಿವಿನಂತೆ ಮೈಥುನ ಕೂಡ ಮನುಷ್ಯ ಸಹಜ ಗುಣ ಮತ್ತು ನೈಸರ್ಗಿಕ ಕ್ರಿಯೆ. ಕುತೂಹಲಕ್ಕೆ ಆರಂಭವಾದ ಲೈಂಗಿಕ ಸಾಧನಗಳ ಬಳಕೆಯು ಗೀಳು ಅಥವಾ ವ್ಯಸನವಾಗಿ ಪರಿವರ್ತನೆಯಾದರೆ ಕಷ್ಟ. ನಿಂಫೊಮೇನಿಯಾ ಎಂದು ಗುರುತಿಸಲಾಗುವ ಈ ಅಸಹಜ ನಡವಳಿಕೆಗೆ ಮಾನಸಿಕ ಮತ್ತು ಲೈಂಗಿಕ ತಜ್ಞರ ಬಳಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಲಾಕ್‌ಡೌನ್‌ ಅವಧಿಯ ನಂತರ ಇಂಥ ಸಾಧನಗಳ ಮಾರಾಟ ಕುರಿತು ಅಧ್ಯಯನ ಅಗತ್ಯ.

(ಮನೋರೋಗ ವೈದ್ಯರು, ಕೆ.ಸಿ. ಜನರಲ್‌ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT