ಸೋಮವಾರ, ಜನವರಿ 25, 2021
21 °C
ಲಸಿಕೆ ರಹಿತ ಪೂರ್ವಭಾವಿ ಅಭಿಯಾನಕ್ಕೆ ದೇಶ ಸಜ್ಜು

ಆಳ–ಅಗಲ: ಲಸಿಕೆ ಅಣಕು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇಶವು ಬೃಹತ್‌ ಲಸಿಕಾ ಕಾರ್ಯಕ್ರಮವೊಂದಕ್ಕೆ ಸನ್ನದ್ಧವಾಗುತ್ತಿದೆ. ಒಂದೊಂದು ವರ್ಗಕ್ಕೆ (ಗರ್ಭಿಣಿಯರು, ಮಕ್ಕಳು ಅಥವಾ ಬೇರೆಬೇರೆ ವಯೋಮಾನದವರಿಗೆ) ಕಾಲಕಾಲಕ್ಕೆ ಲಸಿಕೆಗಳನ್ನು ನೀಡುವ ಕಾರ್ಯಕ್ರಮವು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ಆದರೆ ಈಗ 125 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಿದ್ಧವಾಗಬೇಕಾಗಿದೆ. ಹಿಂದೆಂದೂ ಇಂಥ ಬೃಹತ್‌ ಅಭಿಯಾನ ನಡೆದಿಲ್ಲ. ಆ ಕಾರಣಕ್ಕಾಗಿಯೇ ದೇಶದ ಎಲ್ಲಾ ರಾಜ್ಯಗಳಲ್ಲಿ ಶನಿವಾರ (ಜ.2) ಡ್ರೈ ರನ್‌ (ತಾಲೀಮು ಅಥವಾ ಅಣಕು ಕಾರ್ಯಾಚರಣೆ) ನಡೆಸಲಾಗುತ್ತಿದೆ. ಇಂಥ ಒಂದು ತಾಲೀಮಿನ ಮಹತ್ವವೇನು? ಅದು ಎಷ್ಟು ಅಗತ್ಯ...?

2021ರ ಹೊಸವರ್ಷಕ್ಕೆ ನಾವು ಅಡಿಯಿಟ್ಟಾಗಿದೆ. ಜಗತ್ತನ್ನೇ ಕಾಡಿದ ಕೊರೊನಾ ವಿರುದ್ಧ ಜಯಿಸಬಲ್ಲ ಲಸಿಕೆಗೂ ಹತ್ತಿರವಾಗಿದ್ದೇವೆ. 2020ನೇ ವರ್ಷವು ಕೊರೊನಾ ಉಪಟಳದ ವರ್ಷವಾದರೆ, 2021 ಲಸಿಕೆಯ ವರ್ಷವಾಗಲಿದೆ. ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ತಯಾರಿ ಬೇಕಲ್ಲವೇ? ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಲಸಿಕೆ ನೀಡಿಕೆ ತಾಲೀಮು (ಡ್ರೈ ರನ್) ಇವುಗಳಲ್ಲಿ ಅತಿ ಮುಖ್ಯವಾದುದು.

ಲಸಿಕೆ ಬರುವುದಕ್ಕೂ ಮುನ್ನ ಪೂರ್ವಭಾವಿ ಯಾಗಿ ದೇಶದಾದ್ಯಂತ ದೊಡ್ಡಮಟ್ಟದಲ್ಲಿ ತಾಲೀಮು ಕೈಗೊಳ್ಳಲಾಗುತ್ತಿದೆ. ಜ.2ರಂದು ದೇಶದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ ನಡೆಯಲಿದೆ.

ಮೊದಲ ಹಂತದಲ್ಲಿ ದೇಶದ ವಯಸ್ಕರು ಹಾಗೂ ಕೋವಿಡ್‌ ಸೇನಾನಿಗಳನ್ನು ಲಸಿಕೆ ಕಾರ್ಯಕ್ರಮಕ್ಕೆ ಒಳಪಡಿಸಲು ತೀರ್ಮಾನಿಸ ಲಾಗಿದೆ. ಲಸಿಕೆಯನ್ನು ದಾಸ್ತಾನು ಮಾಡಲಾಗಿ ರುವ ಶೀತಲ ಕೇಂದ್ರಗಳಿಂದ ಪ್ರತಿಯೊಂದು ರಾಜ್ಯಗಳಲ್ಲಿನ ಲಸಿಕಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸುವ, ಲಸಿಕೆ ನೀಡುವ ಅಣಕು ಪ್ರಕ್ರಿಯೆ ಯನ್ನು ಶನಿವಾರ ನಡೆಸಲಾಗುತ್ತದೆ. ಅಂತೆಯೇ, ಲಸಿಕಾ ಕೇಂದ್ರಗಳಲ್ಲಿ ಯಾವ ರೀತಿಯ ಸಮಸ್ಯೆ ಗಳು ಉಂಟಾಗಬಹುದು ಎಂಬುದನ್ನು ಅರಿ ಯಲು ಪ್ರಯತ್ನಿಸಲಾಗುತ್ತದೆ. ನೈಜ ಲಸಿಕಾ ಅಭಿಯಾನದಲ್ಲಿ ಎದುರಾಗಬಹುದಾದ ಸಮಸ್ಯೆ ಗಳಿಗೆ ಈಗಲೇ ಪರಿಹಾರ ಹುಡುಕುವ ಯತ್ನವಿದು.

ಮೊದಲ ಹಂತದ ಪರೀಕ್ಷೆ
ಡಿ.28, 29ರಂದು ನಾಲ್ಕು ರಾಜ್ಯಗಳಲ್ಲಿ ಪರೀಕ್ಷಾರ್ಥ ಲಸಿಕೆ ಕಾರ್ಯಕ್ರಮ ನಡೆದಿದೆ. ಆಂಧ್ರಪ್ರದೇಶ, ಗುಜರಾತ್, ಅಸ್ಸಾಂ ಹಾಗೂ ಪಂಜಾಬ್‌ನ ತಲಾ ಎರಡು ಜಿಲ್ಲೆಗಳಲ್ಲಿ, ತಲಾ 25 ಫಲಾನುಭವಿಗಳನ್ನು ಗುರುತಿಸಿ ಅಣಕು ಕಾರ್ಯಾಚರಣೆ ನಡೆಸಲಾಗಿತ್ತು. ಈ ಡ್ರೈ ರನ್‌ನಲ್ಲಿ ಯಾವುದೇ ಪ್ರಮುಖ ಸಮಸ್ಯೆ ಕಂಡುಬಂದಿಲ್ಲ. ಇದೀಗ ಜ.2ರಂದು ದೇಶದಾದ್ಯಂತ ದೊಡ್ಡ ಪ್ರಮಾಣದ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವಾಲಯ ಸಜ್ಜುಗೊಂಡಿದೆ. 

ಲಸಿಕೆ ರಹಿತ ಅಭಿಯಾನ
‘ಕೋವಿಡ್ -19 ಲಸಿಕೆ ಇಲ್ಲದೆಯೇ ಡ್ರೈ ರನ್ ನಡೆಯುತ್ತಿದೆ. ಲಸಿಕೆ ಹಾಕಲು ಪೂರ್ವಸಿದ್ಧತೆ ಎಂದು ಇದನ್ನು ಪರಿಗಣಿಸಬೇಕು. 2021ರ ಜನವರಿ ತಿಂಗಳಲ್ಲಿ ಯಾವಾಗ ಬೇಕಾದರೂ ವ್ಯಾಕ್ಸಿನೇಷನ್ ಪ್ರಾರಂಭಿಸಬಹುದು’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕಳೆದ ವಾರ ಹೇಳಿದ್ದರು. ಹೀಗಾಗಿ ಈ ಅಭಿಯಾನ ಅತಿ ಮಹತ್ವ ಪಡೆದುಕೊಂಡಿದೆ.

ಎಲ್ಲೆಲ್ಲಿ ಅಭಿಯಾನ?
ಡಿ.2ರಂದು ಡ್ರೈ ರನ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಕರ್ನಾಟಕದ ಐದು ಜಿಲ್ಲೆಗಳನ್ನು ಪರೀಕ್ಷಾರ್ಥ ಲಸಿಕೆ ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಎಲ್ಲ ರಾಜ್ಯಗಳ ರಾಜಧಾನಿಗಳು ಮತ್ತು ಇತರೆ ದೊಡ್ಡ ಪಟ್ಟಣಗಳು ಹಾಗೂ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಮುಖ್ಯವಾಗಿ ಸಂಪರ್ಕ ಕಷ್ಟಸಾಧ್ಯವಾಗಿರುವ ಭೂಪ್ರದೇಶಗಳು ಮತ್ತು ಕಳಪೆ ಸಂಪರ್ಕ ವ್ಯವಸ್ಥೆ ಹೊಂದಿರುವ ಪ್ರದೇಶಗಳಲ್ಲಿ ಇದು ನಡೆಯಲಿದೆ.

ಫಲಾನುಭವಿಗಳು ಯಾರು?
ಪ್ರತಿ ವೈದ್ಯಕೀಯ ಅಧಿಕಾರಿ 25 ಮಂದಿ ಫಲಾನುಭವಿಗಳನ್ನು (ಆರೋಗ್ಯ ಕಾರ್ಯ ಕರ್ತರು) ಗುರುತಿಸಬೇಕು. ಈ ಫಲಾನುಭವಿಗಳ ಮಾಹಿತಿಯು ಕೋ–ವಿನ್ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಆಗಿರುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಲಾಗಿದೆ. ಕೋ-ವಿನ್ ಅಪ್ಲಿಕೇಷನ್‌ನಲ್ಲಿ ಬಳಕೆದಾರರನ್ನು ಸೇರಿಸುವುದರ ಮೂಲಕ ಕಾರ್ಯಕ್ರಮ ಶುರುವಾಗುತ್ತದೆ.

ಪರೀಕ್ಷಾರ್ಥ ಅಭಿಯಾನದಲ್ಲಿ ಲಸಿಕೆ ನೀಡಿಕೆಯ ನಂತರದ ಯಾವುದೇ ಪ್ರತಿಕೂಲ ಘಟನೆ ನಿರ್ವಹಣೆಯ ಮೇಲೆ ಗಮನ ನೀಡಲಾಗುತ್ತದೆ. ರೋಗ ಹರಡುವಿಕೆ ತಡೆಗಟ್ಟುವುದು, ಸೋಂಕು ನಿಯಂತ್ರಣ ಕ್ರಮಗಳ ಅನುಸರಣೆ ಮತ್ತು ನಿರ್ವಹಣೆಯನ್ನೂ ಇದು ಒಳಗೊಂಡಿದೆ. ಇದಕ್ಕಾಗಿ ಚೆಕ್‌ಲಿಸ್ಟ್ ಅನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ರಾಜ್ಯಗಳಿಗೆ ಕಳಿಹಿಸಿದೆ.

ಕೋಲ್ಡ್ ಚೈನ್ ಸಿದ್ಧತೆ
ಲಸಿಕೆಯನ್ನು ಸಂರಕ್ಷಿಸಲು ಅದನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು. ದೇಶದಾದ್ಯಂತ 28,947 ಕೋಲ್ಡ್ ಚೈನ್ ಪಾಯಿಂಟ್‌ಗಳಲ್ಲಿ ಲಸಿಕೆ ಸಂಗ್ರಹಕ್ಕಾಗಿ 85,634 ಉಪಕರಣಗಳಿವೆ. ಇದು ಕೋಲ್ಡ್ ಚೈನ್ ವ್ಯವಸ್ಥೆಯನ್ನು ರಚಿಸುತ್ತದೆ. ಹಾಲಿ ಲಸಿಕಾ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿರುವ ಕೋಲ್ಡ್ ಚೈನ್ ವ್ಯವಸ್ಥೆಯನ್ನು ಕೋವಿಡ್ ಲಸಿಕೆಗಾಗಿ ಬಳಸಲಾಗುತ್ತದೆ. ಈ ವ್ಯವಸ್ಥೆಯಡಿಯಲ್ಲಿ ಮೊದಲ 3 ಕೋಟಿ ಜನರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬಹುದು. ಇವರಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ನಿಯಂತ್ರಣದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವವರು ಇದ್ದಾರೆ.

ಹೇಗಿರಲಿದೆ ಲಸಿಕಾ ಕೇಂದ್ರ
ಮಾದರಿ ಲಸಿಕಾ ಕೇಂದ್ರ ಹೇಗಿರಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಲಸಿಕಾ ಕೇಂದ್ರದಲ್ಲಿ  ವಿಶಾಲವಾದ ಸ್ಥಳಾವಕಾಶ, ಲಸಿಕೆ ತಲುಪಿಸುವ ವಾಹನಗಳು ನಿಲ್ಲಲು ಸ್ಥಳಾವಕಾಶ, ಇಂಟರ್‌ನೆಟ್ ಸಂಪರ್ಕ, ವಿದ್ಯುತ್ ಸಂಪರ್ಕ್, ಭದ್ರತೆ ಮತ್ತು ಸುರಕ್ಷತೆ ಇರಬೇಕು.

ಲಸಿಕಾ ಕೇಂದ್ರವು ಮೂರು ಹಂತಗಳ ಕೊಠಡಿ ವ್ಯವಸ್ಥೆ ಹೊಂದಿರಬೇಕು. ಮೂರೂ ಕೋಣೆಗಳಿಗೆ ಸುಲಭವಾಗಿ ಹೋಗಿಬರಲು ಅವಕಾಶವಿರಬೇಕು. ಕೋವಿಡ್ ಹಾಗೂ ಲಸಿಕೆ ಬಗ್ಗೆ ಜಾಗೃತಿ ಚಟುವಟಿಕೆಗಳನ್ನು ನಡೆಸಲು ಬೇಕಾದಷ್ಟು ಸ್ಥಳಾವಕಾಶವಿರಬೇಕು.

ವರದಿ ನೀಡಬೇಕು
ಲಸಿಕೆ ಪರೀಕ್ಷೆ ಮುಗಿದ ಬಳಿಕ ಅಧಿಕಾರಿಗಳು ರಾಜ್ಯ ಕಾರ್ಯಪಡೆಗೆ (ಎಸ್‌ಟಿಎಫ್) ವರದಿ ನೀಡಬೇಕಿದೆ. ಈ ವರದಿಯ ಆಧಾರದ ಮೇಲೆ ಕಾರ್ಯಪಡೆಯು ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ. ಈ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.

ಏಕೆ ಡ್ರೈ ರನ್?
ಕೋವಿಡ್‌ ಲಸಿಕೆಯದ್ದು ಬೃಹತ್‌ ಅಭಿಯಾನ. ಏನೇನು ಸಮಸ್ಯೆಗಳು ಬರುವವೋ ಎಂಬುದು ಯಾರಿಗೂ ಗೊತ್ತಿಲ್ಲ. ಸಿದ್ಧತೆಗಳೇ ಇಲ್ಲದೆ ನೇರವಾಗಿ ಅಭಿಯಾನ ಶುರು ಮಾಡಿ ಸಂಕಷ್ಟಗಳನ್ನು ಮೇಲೆಳೆದುಕೊಳ್ಳುವುದಕ್ಕಿಂತ, ಕ್ರಮಬದ್ಧ ಯೋಜನೆಯನ್ನು ರೂಪಿಸಿಕೊಳ್ಳುವುದು, ಎದುರಾಗಬಹುದಾದ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದು ಈ ಡ್ರೈ ರನ್ ಮುಖ್ಯ ಉದ್ದೇಶ.

ಡ್ರೈ ರನ್‌ನಲ್ಲಿ ಯೋಜನೆ ಮತ್ತು ಅನುಷ್ಠಾನದ ನಡುವಿನ ಹೊಂದಾಣಿಕೆಯನ್ನು ಪರೀಕ್ಷಿಸುವುದು ಮತ್ತು ಸವಾಲುಗಳನ್ನು ಗುರುತಿಸುವ ಕೆಲಸ ಆಗಲಿದೆ. ಗೊತ್ತುಪಡಿಸಿದ ಸ್ಥಳದಲ್ಲಿ ಕೋ-ವಿನ್ ಅಪ್ಲಿಕೇಶನ್‌ನ ಬಳಕೆಯಲ್ಲಿನ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲಾಗುತ್ತದೆ. ಅಭಿಯಾನ ಜಾರಿಗೂ ಮೊದಲು, ವಾಸ್ತವ ಸ್ಥಿತಿಯ ಸ್ಪಷ್ಟತೆ ಸಿಕ್ಕು, ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ವಿವಿಧ ಹಂತಗಳಲ್ಲಿ ಕಾರ್ಯಕ್ರಮ ವ್ಯವಸ್ಥಾಪಕರಿಗೆ ಇದು ವಿಶ್ವಾಸ ತುಂಬುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಯಾರಿಗೆ ತರಬೇತಿ
ಲಸಿಕೆ ಹಾಕುವವರಿಗೆ ಸರ್ಕಾರ ಈಗಾಗಲೇ ತರಬೇತಿ ನೀಡಿದೆ. ಲಸಿಕೆ ನೀಡುವವರು ಮತ್ತು ಲಸಿಕಾ ಕೇಂದ್ರವನ್ನು  ನಿರ್ವಹಿಸುವವರಿಗೆ ವಿವರವಾದ ಸೂಚನೆಗಳನ್ನು ನೀಡಲಾಗಿದೆ. ವೈದ್ಯಕೀಯ ಅಧಿಕಾರಿಗಳು, ವ್ಯಾಕ್ಸಿನೇಟರ್‌, ಹೆಚ್ಚುವರಿ ವ್ಯಾಕ್ಸಿನೇಟರ್‌, ಲಸಿಕೆ ತಲುಪಿಸುವವರು (ಕೋಲ್ಡ್ ಚೈನ್ ಹ್ಯಾಂಡ್ಲರ್‌), ಮೇಲ್ವಿಚಾರಕರು, ಡೇಟಾ ವ್ಯವಸ್ಥಾಪಕರು, ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕೊಡಲಾಗಿದೆ.

ರಾಷ್ಟ್ರೀಯ ಮಟ್ಟದಲ್ಲಿ 2,360 ಜನರು ತರಬೇತಿ ಪಡೆದಿದ್ದಾರೆ. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 719 ಜಿಲ್ಲೆಗಳಲ್ಲಿ 57,000 ಮಂದಿಗೆ ಚುಚ್ಚುಮದ್ದು ನೀಡುವ ತರಬೇತಿ ಕೊಡಲಾಗಿದೆ. ಒಟ್ಟಾರೆ ದೇಶದಾದ್ಯಂತ 96 ಸಾವಿರ ಮಂದಿಗೆ ತರಬೇತಿ ಸಿಕ್ಕಿದೆ. ಲಸಿಕೆ ಅಭಿಯಾನಕ್ಕೆ ಸಂಬಂಧಿಸಿದ ಗೊಂದಲಗಳಿದ್ದರೆ 104 ಸಹಾಯವಾಣಿಗೆ ಕರೆ ಮಾಡಬಹುದು.

ಆಧಾರ: ಪಿಟಿಐ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು