ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer: ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಲೇ ಇರುವುದು ಏಕೆ?

Last Updated 6 ಫೆಬ್ರುವರಿ 2021, 11:22 IST
ಅಕ್ಷರ ಗಾತ್ರ

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಫೆಬ್ರುವರಿ 6ರಂದು ನವದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹86.95 ತಲುಪಿದ್ದರೆ, ಮುಂಬೈನಲ್ಲಿ ₹93.49, ಬೆಂಗಳೂರಿನಲ್ಲಿ ₹89.85 ಹಾಗೂ ಚೆನ್ನೈನಲ್ಲಿ ₹89.39 ಆಗಿದೆ.

ದರ ಇಳಿಕೆ ಮಾಡಬೇಕಾದರೆ ಸರ್ಕಾರ ಸಹಾಯದಿಂದ ಮಾತ್ರ ಸಾಧ್ಯ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟಗಾರರು ಹೇಳಿದ್ದಾರೆ. ಇಂಧನ ದರ ಏರಿಕೆಯ ಮುಖ್ಯ ಕಾರಣಗಳೇನು? ಇಂಧನ ದರದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಕೆಲವು ಅಂಶಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.

ಬ್ರೆಂಟ್ ಕಚ್ಚಾ ತೈಲದ ವೆಚ್ಚ ಮತ್ತು ಬೇಡಿಕೆ ಹೆಚ್ಚಳ

ದೇಶದ ಕಚ್ಚಾ ತೈಲ ಬೇಡಿಕೆಯ ಶೇ 84ರಷ್ಟನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಬ್ರೆಂಟ್ ಕಚ್ಚಾ ತೈಲ ಬೆಲೆ ದೇಶದ ಇಂಧನ ದರದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತರರಾಷ್ಟ್ರೀಯ ದರಗಳಿಗೆ ಅನುಗುಣವಾಗಿ ದೇಶದ ತೈಲ ಮಾರುಕಟ್ಟೆ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತವೆ. ಕೋವಿಡ್–19 ಲಾಕ್‌ಡೌನ್ ಘೋಷಣೆಯಾದ ಬಳಿಕ ದೇಶದ ತೈಲ ಮಾರುಕಟ್ಟೆ ಕಂಪನಿಗಳು ಸುಮಾರು 2 ತಿಂಗಳ ಕಾಲ ದರ ಪರಿಷ್ಕರಣೆ ನಿಲ್ಲಿಸಿದ್ದವು.

ಕೋವಿಡ್–19 ಸಾಂಕ್ರಾಮಿಕ ಪರಿಣಾಮದಿಂದ ವಿಶ್ವ ಆರ್ಥಿಕತೆಗಳು ಚೇತರಿಸಿಕೊಳ್ಳುತ್ತಿದ್ದಂತೆ, ಬ್ರೆಂಟ್ ಕಚ್ಚಾ ಬೆಲೆಗಳು ಗಗನಕ್ಕೇರುತ್ತಿವೆ. ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆಯೂ ಹೆಚ್ಚಾಗಿದೆ.

2019ರ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 66 ಡಾಲರ್ ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಲಾಕ್‌ಡೌನ್, ಸಂಚಾರ ನಿರ್ಬಂಧ ಕಾರಣಗಳಿಂದ 2020ರ ಏಪ್ರಿಲ್‌ ವೇಳೆಗೆ 19 ಡಾಲರ್‌ಗೆ ಇಳಿಕೆಯಾಗಿತ್ತು. ಈಗ ಮರಳಿ 50 ಡಾಲರ್ ಸನಿಹ ತಲುಪಿದೆ.

‘ಮಧ್ಯಮಾವಧಿಯಲ್ಲಿತೈಲ ಬೆಲೆಯಲ್ಲಿ ಗಣನೀಯ ಏರಿಕೆ ಕಾಣುವುದಿಲ್ಲ. ಪ್ರತಿ ಬ್ಯಾರಲ್‌‌ಗೆ 50ರಿಂದ 60 ಡಾಲರ್‌ ವ್ಯಾಪ್ತಿಯಲ್ಲಿ ಇರಬಹುದು’ ಎಂದು ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಸಂಸತ್‌ನಲ್ಲಿ ತಿಳಿಸಿದ್ದಾರೆ. ಬೇಡಿಕೆ–ಪೂರೈಕೆಯೂ ಮತ್ತೆ ಸಮತೋಲನಗೊಳ್ಳುತ್ತಿವೆ ಎಂದು ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್) ಹೇಳಿರುವುದಾಗಿಯೂ ಅವರು ತಿಳಿಸಿದ್ದಾರೆ.

ಸರ್ಕಾರದ ತೆರಿಗೆಗಳು

ದೇಶದಲ್ಲಿ ತೈಲ ದರ ನಿರ್ಧರಿಸುವಲ್ಲಿ ತೆರಿಗೆಗಳು ಮಹತ್ತರ ಪಾತ್ರವಹಿಸುತ್ತವೆ. ಅಬಕಾರಿ ಸುಂಕ ಮತ್ತು ವ್ಯಾಟ್‌ (ಮೌಲ್ಯ ವರ್ಧಿತ ತೆರಿಗೆ) ಸೇರಿ ಪೆಟ್ರೋಲ್‌ ದರದ ಮೇಲೆ ಶೇ 63ರಷ್ಟು ತೆರಿಗೆ ವಿಧಿಸಬೇಕಾಗುತ್ತದೆ. ಇದು ಡೀಸೆಲ್‌ ದರದ ಮೇಲೆ ಶೇ 60ರಷ್ಟಾಗುತ್ತದೆ.

ಪೆಟ್ರೋಲ್, ಡೀಸೆಲ್ ಮೇಲೆ ಸರ್ಕಾರವು ವಿಧಿಸುತ್ತಿರುವ ಸುಂಕಕ್ಕೆ ಸಂಬಂಧಿಸಿ ಧರ್ಮೇಂದ್ರ ಪ್ರಧಾನ್ ಅವರು ರಾಜ್ಯಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ; ‘ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಅಬಕಾರಿ ಸುಂಕ ₹32.98 ಹಾಗೂ ಮಾರಾಟ ತೆರಿಗೆ, ವ್ಯಾಟ್ ₹19.55ರಷ್ಟಾಗುತ್ತದೆ. ಡೀಸೆಲ್‌ಗೆ ಅಬಕಾರಿ ಸುಂಕ ₹31.83 ಮತ್ತು ವ್ಯಾಟ್ ₹10.99ರಷ್ಟಾಗುತ್ತದೆ.’

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿರುವುದರ ಲಾಭ ಪಡೆಯಲು 2020ರ ಮಾರ್ಚ್‌ ವೇಳೆಗೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸಿತ್ತು. ಆ ಬಳಿಕ ಪೆಟ್ರೋಲ್ ಚಿಲ್ಲರೆ ಮಾರಾಟ ದರದಲ್ಲಿ ₹17.11ರಷ್ಟು ಏರಿಕೆಯಾಗಿದೆ. ಡೀಸೆಲ್ ದರದಲ್ಲಿ ₹14.54ರಷ್ಟು ಹೆಚ್ಚಾಗಿದೆ.

ರೂಪಾಯಿ–ಡಾಲರ್ ವಿನಿಮಯ ದರ

ಜಾಗತಿಕ ಮಾರುಕಟ್ಟೆಯಿಂದ ಭಾರತವು ಖರೀದಿಸಬಹುದಾದ ತೈಲದ ಮೇಲೆ ವಿನಿಮಯ ದರಗಳು ಪ್ರಮುಖ ಪರಿಣಾಮ ಬೀರುತ್ತವೆ. ಭಾರತೀಯ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಡಾಲರ್ ಲೆಕ್ಕದಲ್ಲಿ ತೈಲ ಖರೀದಿಸುತ್ತವೆ. ಆದರೆ, ಈ ಕಂಪನಿಗಳ ವೆಚ್ಚದ ಲೆಕ್ಕಾಚಾರ ರೂಪಾಯಿ ಲೆಕ್ಕದಲ್ಲಿರುತ್ತವೆ. ಹೀಗಾಗಿ, ಡಾಲರ್ ಎದುರು ರೂಪಾಯಿ ಮೌಲ್ಯ ಪ್ರಬಲವಾಗಿದ್ದರೆ ಮಾತ್ರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ತೈಲ ಬೆಲೆ ಕುಸಿತದ ಲಾಭವನ್ನು ಭಾರತೀಯ ಕಂಪನಿಗಳು ಪಡೆಯಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT