ಬುಧವಾರ, ಅಕ್ಟೋಬರ್ 21, 2020
21 °C

ಆಳ–ಅಗಲ: ವೇತನರಹಿತ ದುಡಿಮೆ, ಮಹಿಳೆಯರ ಭಾಗವಹಿಸುವಿಕೆ ಹೆಚ್ಚು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ದೇಶದಲ್ಲಿ ಮೊದಲ ಬಾರಿಗೆ ‘ಭಾರತದಲ್ಲಿ ಸಮಯದ ಬಳಕೆ–2019’ ಎಂಬ ಸಮೀಕ್ಷೆ ನಡೆಸಿದೆ. ಜನವರಿಯಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ‌. ಮನೆಗೆಲಸಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಸಮಯ ತೊಡಗಿಸಿಕೊಂಡಿದ್ದಾರೆ ಎಂದು ವರದಿ ಧೃಡಪಡಿಸಿದೆ

ಅಡುಗೆ ಮಾಡುವುದು, ಮನೆಯನ್ನು ಗುಡಿಸಿ ಸಾರಿಸಿ ಸ್ವಚ್ಛವಾಗಿಟ್ಟುಕೊಳ್ಳುವುದು, ಪಾತ್ರೆ ಬಳಿಯುವುದು, ಬಟ್ಟೆ ಒಗೆಯುವುದು... ಇವೆಲ್ಲವುಗಳ ಜತೆಗೆ ಮನೆಯವರ ಯೋಗಕ್ಷೇಮ ನೋಡಿಕೊಳ್ಳುವುದು. ಭಾರತೀಯ ಪ್ರತಿ ಕುಟುಂಬದಲ್ಲೂ ವೇತನ ಪಡೆಯದೆ ಈ ಎಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಮಹಿಳೆಯೇ. ಇದು ಗೊತ್ತಿರುವ ವಿಚಾರವೇ ಆಗಿದ್ದರೂ ಈಚೆಗೆ ಭಾರತೀಯ ಅಂಕಿಸಂಖ್ಯೆಗಳ ಸಚಿವಾಲಯವು ಇದನ್ನು ಸಮೀಕ್ಷೆಯ ಮೂಲಕ ದೃಢೀಕರಿಸಿದೆ.

ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ದೇಶದಲ್ಲಿ ಮೊದಲ ಬಾರಿಗೆ ‘ಭಾರತದಲ್ಲಿ ಸಮಯದ ಬಳಕೆ–2019’ ಎಂಬ ಸಮೀಕ್ಷೆ ನಡೆಸಿದೆ. ಜನವರಿಯಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ಈ ಸಮೀಕ್ಷೆ ನಡೆದಿದೆ‌. ಮನೆಗೆಲಸಗಳಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಸಮಯ ತೊಡಗಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಸಮೀಕ್ಷೆಯ ಉದ್ದೇಶ

ವೇತನಸಹಿತ ಮತ್ತು ವೇತನರಹಿತ ಚಟುವಟಿಕೆಗಳಲ್ಲಿ ಪುರುಷರು ಮತ್ತು ಮಹಿಳೆಯರ ಭಾಗವಹಿಸುವಿಕೆಯನ್ನು ಅಳೆಯುವುದು ಸಮೀಕ್ಷೆಯ ಪ್ರಾಥಮಿಕ ಉದ್ದೇಶವಾಗಿದೆ. ದಿನದ 24 ಗಂಟೆಯ ಅವಧಿಯಲ್ಲಿ, ವ್ಯಕ್ತಿಯೊಬ್ಬ ಯಾವ ಕೆಲಸಕ್ಕೆ ಎಷ್ಟು ಸಮಯ  ವ್ಯಯಿಸುತ್ತಾನೆ ಎಂಬುದನ್ನು ಲೆಕ್ಕಹಾಕಲಾಗಿದೆ. ವೇತನರಹಿತ ಆರೈಕೆ ಚಟುವಟಿಕೆಗಳು, ಸ್ವಯಂಸೇವೆ ಕೆಲಸ, ಕಲಿಕೆ, ಸಾಮಾಜೀಕರಣ, ವಿರಾಮ, ಸ್ವಯಂ ಆರೈಕೆ ಮೊದಲಾದ ಚಟುವಟಿಕೆಗಳನ್ನೂ ಇದು ಒಳಗೊಂಡಿದೆ.

ವೇತನ ಅಥವಾ ಆದಾಯ ಇಲ್ಲದ ಯಾವುದೇ ಕೆಲಸಗಳಲ್ಲಿ ತೊಡಗಿಕೊಳ್ಳಲು ಭಾರತೀಯರು ಬಯಸುವುದಿಲ್ಲ ಎಂಬುದನ್ನೂ ವರದಿ ಬಹಿರಂಗಪಡಿಸಿದೆ. ಸ್ವಯಂಸೇವಕರಾಗಿ ಕೆಲಸ ಮಾಡುವುದನ್ನಾಗಲಿ ಅಥವಾ ವೇತನ ಇಲ್ಲದೆ ಯಾವುದೇ ತರಬೇತಿಯನ್ನು ಪಡೆಯುವುದನ್ನಾಗಲಿ ಭಾರತೀಯರು ಇಚ್ಛಿಸುವುದಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ 2.4ರಷ್ಟು ಮಂದಿ ಮಾತ್ರ ಫಲಾಪೇಕ್ಷೆ ಇಲ್ಲದೆ ಸ್ವಯಂ ಸೇವಕರಾಗಿ ಕೆಲಸಮಾಡುತ್ತಿರುವುದಾಗಿ ಹೇಳಿದ್ದಾರೆ. ಇಂಥವರು ಪ್ರತಿನಿತ್ಯ ಸರಾಸರಿ ಸುಮಾರು 101 ನಿಮಿಷಗಳನ್ನು ಇಂಥ ಕೆಲಸದಲ್ಲಿ ವ್ಯಯಿಸುತ್ತಾರೆ ಎಂದು ವರದಿ ಹೇಳಿದೆ. ಆದರೆ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವುದು, ಚಾಟಿಂಗ್‌, ಸಂಭಾಷಣೆ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಶೇ 92ರಷ್ಟು ಮಂದಿ ಇಷ್ಟಪಡುತ್ತಾರೆ. ಇಂಥ ಕೆಲಸಗಳಿಗಾಗಿ ಪ್ರತಿನಿತ್ಯ 143 ನಿಮಿಷ ವ್ಯಯಿಸುತ್ತಾರೆ ಎಂದು ವರದಿ ಹೇಳುತ್ತದೆ.

ಒಂಬತ್ತು ತಾಸು ನಿದ್ದೆ

ಊಟ, ತಿಂಡಿ, ಸ್ನಾನ, ನಿದ್ದೆ ಮುಂತಾದ ವೈಯಕ್ತಿಕ ಕಾಳಜಿಯ ವಿಚಾರಗಳಿಗೂ ಮಹಿಳೆಯರು ಪುರುಷರಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ ಎಂದು ವರದಿ ಹೇಳಿದೆ.

ಒಟ್ಟಾರೆಯಾಗಿ ಭಾರತೀಯರು ದಿನಕ್ಕೆ 552 ನಿಮಿಷ (9 ಗಂಟೆ 12 ನಿಮಿಷ)ನಿದ್ದೆ ಮಾಡುತ್ತಾರೆ. ಪುರುಷರು 556 ನಿಮಿಷ ನಿದ್ದೆ ಮಾಡಿದರೆ, ಮಹಿಳಯರು 548 ನಿಮಿಷ ನಿದ್ದೆ ಮಾಡುತ್ತಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ದೈನಂದಿನ ಚಟುವಟಿಕೆ ಮಹಿಳೆಯರ ಉತ್ಸಾಹ

ದಿನದ 24 ಗಂಟೆಗಳ ಪೈಕಿ ಮನೆಗೆಲಸಗಳಲ್ಲಿ ದೇಶದ ಪ್ರತಿ ಮಹಿಳೆಯು ಸರಾಸರಿ 243 ನಿಮಿಷ (4 ಗಂಟೆಗೂ ಹೆಚ್ಚು) ತೊಡಗಿಸಿಕೊಳ್ಳುತ್ತಾರೆ. ಆದರೆ ಪುರುಷರು ಮನೆಗೆಲಸಗಳಲ್ಲಿ ಕೇವಲ 25 ನಿಮಿಷ ತೊಡಗಿಸಿಕೊಳ್ಳುತ್ತಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು 8 ಪಟ್ಟು ಹೆಚ್ಚು ಸಮಯ ಮನೆಗೆಲಸದ ಹೊರೆ ಹೊತ್ತಿದ್ದಾರೆ. ಉದ್ಯೋಗ, ಕಲಿಕೆ ಹಾಗೂ ತಮ್ಮ ವೈಯಕ್ತಿಕ ಕೆಲಸಗಳಿಗೆ ಪುರುಷರು ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಈ ಸಮೀಕ್ಷೆಯು ಪುರುಷ ಹಾಗೂ ಮಹಿಳೆಯರ ನಡುವೆ ಕೆಲಸದ ಅಸಮಾನ ಹಂಚಿಕೆಯ ಮೇಲೆ ಬೆಳಕು ಚೆಲ್ಲಿದೆ.

ದಿನದ ಚಟುವಟಿಕೆಗೆ ಸಮಯದ ಹಂಚಿಕೆ 

60 ದಾಟಿದ ಮೇಲೆ ಪುರುಷರಿಂದ ಮನೆಗೆಲಸ

ಮನೆಗೆಲಸದಲ್ಲಿ ತೊಡಗುವ ಮಹಿಳೆಯರ ವಯಸ್ಸು ಹಾಗೂ ಪುರುಷರ ವಯಸ್ಸುಗಳನ್ನು ಹೋಲಿಸಿದಾಗ ಅಚ್ಚರಿಯ ಅಂಕಿ–ಅಂಶಗಳು ದೊರೆತಿವೆ. 60 ವರ್ಷದವರೆಗೂ ಮನೆಗೆಲಸದ ಹೊರೆ ಹೊರುವ ಮಹಿಳೆಯರು 60 ಮೀರಿದ ಬಳಿಕ ಕೊಂಚ ಬಿಡುವು ಪಡೆಯುತ್ತಾರೆ. ಆದರೆ ಪುರುಷರ ವಿಚಾರದಲ್ಲಿ ಇದು ಬೇರೆಯಿದೆ. ಪುರುಷರು 60 ವರ್ಷ ದಾಟಿದ ಮೇಲೆ ಮನೆಗೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಕೂಡು ಕುಟುಂಬಗಳಲ್ಲಿ ಹಿರಿಯ ವಯಸ್ಸಿನ ಮಹಿಳೆಯ ಮನೆ ಜವಾಬ್ದಾರಿಗಳನ್ನು ಸೊಸೆಯಂದಿರಿಗೆ ಹಸ್ತಾಂತರಿಸಿ ವಿಶ್ರಾಂತಿ ಪಡೆಯುತ್ತಾರೆ.

ರಾಜ್ಯದಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ

ಕರ್ನಾಟಕದಲ್ಲಿ ಜನರು ದಿನದಲ್ಲಿ ಯಾವೆಲ್ಲಾ ಚಟುವಟಿಕೆಗಳಿಗೆ ಎಷ್ಟು ಸಮಯ ಮೀಸಲಿಡುತ್ತಾರೆ ಎಂಬುದನ್ನು ಈ ಸಮೀಕ್ಷೆಯ ವರದಿಯಲ್ಲಿ ವಿವರಿಸಲಾಗಿದೆ. ದೈನಂದಿನ ಚಟುವಟಿಕೆಗಳಲ್ಲಿ ಎಲ್ಲಾ ವಯಸ್ಸಿನ ಪುರುಷರು ಉದ್ಯೋಗಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಮಹಿಳೆಯರೂ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ಪ್ರತಿ ಚಟುವಟಿಕೆಗೆ ಪುರುಷರು ಮತ್ತು ಮಹಿಳೆಯರು ಮೀಸಲಿಡುವ ಸಮಯದಲ್ಲಿ ಭಾರಿ ಅಂತರವಿದೆ.

ರಾಜ್ಯದಲ್ಲಿ ಪುರುಷರು ನಿದ್ರೆ, ವಿಶ್ರಾಂತಿ, ವ್ಯಾಯಾಮ ಮತ್ತು ವೈಯಕ್ತಿಕ ಆರೈಕೆಗೆ ಮಹಿಳೆಯರಿಗಿಂತಲೂ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಪುರುಷರು ಈ ಚಟುವಟಿಕೆಗಳಿಗೆ ದಿನದಲ್ಲಿ 724 ನಿಮಿಷ ಬಳಸುತ್ತಾರೆ. ಮಹಿಳೆಯರು 712 ನಿಮಿಷ ಮೀಸಲಿಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಚಟುವಟಿಕೆಗಳಿಗೆ ಪುರುಷರಿಗೆ 740 ನಿಮಿಷ ಲಭ್ಯವಿದ್ದರೆ, ಮಹಿಳೆಯರಿಗೆ 714 ನಿಮಿಷ ಮಾತ್ರ ಲಭ್ಯವಿದೆ. ಮಹಿಳೆಯರಿಗೆ ಲಭ್ಯವಿರುವ ಸಮಯವು ಪುರುಷರಿಗೆ ಲಭ್ಯವಿರುವ ಸಮಯಕ್ಕಿಂತ 26 ನಿಮಿಷಗಳಷ್ಟು ಕಡಿಮೆ. ನಗರ ಪ್ರದೇಶದಲ್ಲಿ ಈ ಚಟುವಟಿಕೆಗಳಿಗಾಗಿ ಪುರುಷರು 703 ನಿಮಿಷ ವಿನಿಯೋಗಿಸಿದರೆ, ಮಹಿಳೆಯರು 710 ನಿಮಿಷ ವಿನಿಯೋಗಿಸುತ್ತಾರೆ. 

ಕುಟುಂಬದ ಇತರ ಸದಸ್ಯರಿಗಾಗಿ, ಯಾವುದೇ ವೇತನ ಪಡೆಯದೆ ಮಾಡುವ ಆರೈಕೆಗೆ ರಾಜ್ಯದ ಪುರುಷರು 69 ನಿಮಿಷ ಬಳಸುತ್ತಾರೆ. ಆದರೆ, ಇದೇ ಚಟುವಟಿಕೆಗಳಿಗೆ ರಾಜ್ಯದ ಮಹಿಳೆಯರು 135 ನಿಮಿಷಗಳನ್ನು ವಿನಿಯೋಗಿಸುತ್ತಾರೆ. ಈ ಚಟುವಟಿಕೆಗಳಿಗೆ ಮಹಿಳೆಯರು ಹೆಚ್ಚುವರಿಯಾಗಿ 61 ನಿಮಿಷಗಳನ್ನು ವಿನಿಯೋಗ ಮಾಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಚಟುವಟಿಕೆಗಳಿಗೆ ಮಹಿಳೆಯರು ಹೆಚ್ಚುವರಿಯಾಗಿ 58 ನಿಮಿಷಗಳನ್ನು ವಿನಿಯೋಗಿಸಬೇಕಿದೆ. ನಗರ ಪ್ರದೇಶದಲ್ಲಿ ಮಹಿಳೆಯರು ಹೆಚ್ಚುವರಿಯಾಗಿ 75 ನಿಮಿಷಗಳನ್ನು ವಿನಿಯೋಗಿಸಬೇಕಿದೆ.

ವೇತನವಿಲ್ಲದೆ ಅಡುಗೆ, ಪಾತ್ರೆ ತೊಳೆಯುವುದು, ಮನೆಸ್ವಚ್ಛತೆ, ಬಟ್ಟೆ ತೊಳೆಯುವಂತಹ ಮನೆಗೆಲಸಗಳಿಗೆ ರಾಜ್ಯದ ಮಹಿಳೆಯರು ಪ್ರತಿದಿನ 338 ನಿಮಿಷ ವಿನಿಯೋಗಿಸುತ್ತಾರೆ. ಪುರುಷರು 90 ನಿಮಿಷ ವಿನಿಯೋಗಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು 341 ಮತ್ತು ಪುರುಷರು 85 ನಿಮಿಷ ವಿನಿಯೋಗಿಸುತ್ತಾರೆ. ನಗರ ಪ್ರದೇಶದಲ್ಲಿ ಮಹಿಳೆಯರು 332 ಮತ್ತು ಪುರುಷರು 100 ನಿಮಿಷ ವಿನಿಯೋಗಿಸಬೇಕಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಮಹಿಳೆಯರು ಈ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸಬೇಕಿದೆ. ಈ ಚಟುವಟಿಕೆಗಳಿಗೆ ಪುರುಷರಾಗಲೀ, ಮಹಿಳೆಯರಾಗಲೀ ವೇತನ ಪಡೆಯುವುದಿಲ್ಲ. ಆದರೆ, ಪುರುಷರು ತಮ್ಮ ದಿನದ ಒಟ್ಟು ಸಮಯದಲ್ಲಿ ಈ ಚಟುವಟಿಕೆಗಳಿಗೆ ಶೇ 6.2ರಷ್ಟು ಸಮಯವನ್ನು ಮಾತ್ರ ವಿನಿಯೋಗಿಸುತ್ತಾರೆ. ಮಹಿಳೆಯರು ಶೇ 23.5ರಷ್ಟು ಸಮಯವನ್ನು ವಿನಿಯೋಗಿಸುತ್ತಾರೆ.

ರಾಜ್ಯದ ಅರ್ಧದಷ್ಟು ಮಂದಿ ದುಡಿಮೆಯಲ್ಲಿ ತೊಡಗಿಸಿಕೊಂಡಿಲ್ಲ

* ರಾಜ್ಯದಲ್ಲಿ ಅರ್ಧಕ್ಕೂ ಹೆಚ್ಚು ಜನರು ಯಾವುದೇ ರೀತಿಯ ಉದ್ಯೋಗ/ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಇರುವವರ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸ ಇಲ್ಲ

* ಗ್ರಾಮೀಣ ಪ್ರದೇಶದಲ್ಲಿ ಶೇ 28.8ರಷ್ಟು ಪುರುಷರು ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಮಹಿಳೆಯರಲ್ಲಿ ಈ ಪ್ರಮಾಣ ಶೇ 70.7ರಷ್ಟಿದೆ

* ನಗರ ಪ್ರದೇಶದಲ್ಲಿ ಶೇ 22.3ರಷ್ಟು ಪುರುಷರು ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಮಹಿಳೆಯರಲ್ಲಿ ಈ ಪ್ರಮಾಣ ಶೇ 78ರಷ್ಟಿದೆ

* ರಾಜ್ಯದಲ್ಲಿ ಒಟ್ಟಾರೆ ಶೇ 25.9ರಷ್ಟು ಪುರುಷರು ಯಾವುದೇ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಹೀಗೆ ಹೇಳಿಕೆ ನೀಡಿರುವ ಮಹಿಳೆಯರ ಪ್ರಮಾಣ ಶೇ 74.7ರಷ್ಟಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು