ಗುರುವಾರ , ಜೂನ್ 24, 2021
22 °C

ಬೆಳಗಾವಿ ಯುವಕನ ಸಾವು ಬಗ್ಗೆ 'ತಪ್ಪಾದ ಮಾಹಿತಿ' ಟ್ವೀಟ್ ಮಾಡಿದ ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವು ಉಪ್ಪಾರ್, 19 ವರ್ಷದ ಹುಡುಗನನ್ನು ಹತ್ಯೆ ಮಾಡಿ ಬೆಳಗಾವಿಯ ಬಾಗೇವಾಡಿ ಬಸ್ ನಿಲ್ದಾಣದಲ್ಲಿ ನೇಣು ಬಿಗಿಯಲಾಗಿದೆ. ಹಸು ಕಳ್ಳಸಾಗಾಣಿಕೆ ಮಾಡುವವರಿಂದ ಹಸುಗಳನ್ನು ರಕ್ಷಿಸಲು ಹೋಗಿದ್ದಕ್ಕೆ ಆತನನ್ನು ಹತ್ಯೆ ಮಾಡಲಾಗಿದೆ. ಅವನು  ಮಾಡಿದ ಏಕೈಕ ತಪ್ಪು ಅದು.  ಈ ನಿಷ್ಠುರ ಕೃತ್ಯವೆಸಗಿದವರನ್ನು ಬಂಧಿಸಬೇಕೆಂದು ನಾನು ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇನೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟಿಸಿದ್ದಾರೆ.

ಶೋಭಾ ಅವರು ಮೇ 26ರಂದು ಮಾಡಿದ ಟ್ವೀಟ್‌ 2300 ಬಾರಿ ರೀಟ್ವೀಟ್ ಆಗಿದೆ. 3300 ಜನರು ಇದಕ್ಕೆ ಲೈಕ್ ಒತ್ತಿದ್ದು  309 ಕಾಮೆಂಟ್ ಇದೆ. ಅವರ ಈ ಟ್ವೀಟ್‌ನಲ್ಲಿ ಹುಡುಗ ನೇಣು ಹಾಕಿರುವ ಚಿತ್ರವೂ ಇದೆ.

ಹಲವಾರು ಟ್ವೀಟಿಗರು ಶಿವು ಉಪ್ಪಾರ್ ಎಂಬ ಹುಡುಗನನ್ನು ಹಸು ಕಳ್ಳಸಾಗಾಣಿಕೆದಾರರೇ ಹತ್ಯೆ ಮಾಡಿದ್ದಾರೆ ಎಂದು ಟ್ವೀಟಿಸಿದ್ದಾರೆ. ಈ ರೀತಿಯ ಆರೋಪಗಳು ಮತೀಯ ದ್ವೇಷವನ್ನೂ ಹುಟ್ಟು ಹಾಕಿದೆ.

ಮೀರಾ ಸಿಂಗ್ ಎಂಬವರು ಕೂಡಾ ಇದೇ ರೀತಿಯ ಟ್ವೀಟ್ ಮಾಡಿದ್ದು ಈ ಟ್ವೀಟ್  2,111 ಬಾರಿ ರೀಟ್ವೀಟ್  ಆಗಿದೆ.

Justice For Hindus ಎಂಬ ಫೇಸ್‌ಬುಕ್ ಪೇಜ್‌ನಲ್ಲಿಯೂ ಫೇಕ್ ನ್ಯೂಸ್ ವೆಬ್‌ಸೈಟ್ ದೈನಿಕ್ ಭಾರತ್‌ನಲ್ಲಿಯೂ  ಇದೇ ಸುದ್ದಿ ಪ್ರಕಟವಾಗಿದೆ.

ಶೋಭಾ ಅವರ ಟ್ವೀಟ್ ಬಗ್ಗೆ ಫ್ಯಾಕ್ಟ್‌ಚೆಕ್  ಮಾಡಿದ ಆಲ್ಟ್ ನ್ಯೂಸ್, ಶಿವು ಉಪ್ಪಾರ್ ಎಂಬ ಯುವಕನ್ನು ಹಸು ಕಳ್ಳ ಸಾಗಾಣಿಕೆದಾರರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಹೇಳಿದೆ.

ಫ್ಯಾಕ್ಟ್‌ಚೆಕ್
19ರ ಯುವಕ ಶಿವು ಉಪ್ಪಾರ್‌ನ್ನು ಹಸು ಕಳ್ಳಸಾಗಾಣಿಕೆದಾರರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಸುಳ್ಳು ಎಂದು  ಬೆಳಗಾವಿಯ ಪೊಲೀಸ್ ಕಮಿಷನರ್ ಬಿ.ಎಸ್ ಲೋಕೇಶ್ ಕುಮಾರ್ ಹೇಳಿದ್ದಾರೆ. ಆಲ್ಟ್ ನ್ಯೂಸ್ ತಂಡ ಲೋಕೇಶ್ ಕುಮಾರ್ ಅವರನ್ನು ಸಂಪರ್ಕಿಸಿ ಶಿವು ಉಪ್ಪಾರ್ ಪ್ರಕರಣದ ಬಗ್ಗೆ ಕೇಳಿದಾಗ ಅವರು ಹೇಳಿದ್ದು ಹೀಗೆ-

'ಅದು ಆತ್ಮಹತ್ಯೆ, ನಮಗೆ ಮರಣೋತ್ತರ ಪರೀಕ್ಷೆ ವರದಿ ಸಿಕ್ಕಿದೆ. ನೇಣು ಬಿಗಿದು ಆತ್ಮಹತ್ಯೆ ಮಾಡಲಾಗಿದೆ ಎಂಬುದು ಅದರಲ್ಲಿದೆ. ಅಷ್ಟೇ ಅಲ್ಲದೆ ಆ ಯುವಕನ ದೇಹದಲ್ಲಿ  ಬೇರೆ ಯಾವುದೇ ಗಾಯದ ಕಲೆಗಳೂ ಇಲ್ಲ ಎಂದು ವರದಿಯಲ್ಲಿ ಇದೆ. ಯುವಕ ಅವರ ಕುಟುಂಬದವರೊಂದಿಗೆ ಜಗಳವಾಡಿದ್ದ. ಆತ ಆತ್ಮಹತ್ಯೆ ಮಾಡಿದ್ದಾನೆ ಎಂದು ಕುಟುಂಬದವರು ದೂರು ನೀಡಿದ್ದಾರೆ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ಬಗ್ಗೆ ಬೆಳಗಾವಿ ಎಸ್‌ಪಿ ಕ್ರಮ ತೆಗೆದುಕೊಳ್ಳಲಿದ್ದಾರೆ.'

ಬೆಳಗಾವಿ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಆಲ್ಟ್ ನ್ಯೂಸ್ ಸಂಪರ್ಕಿಸಿದಾಗ, ಶಿವು ಪ್ರಕರಣದ ಬಗ್ಗೆ ಸುಳ್ಳು ಸುದ್ದಿ ಹರಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದಿದ್ದಾರೆ. ಈ ಸುದ್ದಿಯನ್ನು ನ್ಯೂಸ್ 18 ವರದಿ ಮಾಡಿದೆ.

ಶೋಭಾ ಕರಂದ್ಲಾಜೆಯವರು 2017 ಡಿಸೆಂಬರ್‌ನಲ್ಲಿ ಪರೇಶ್ ಮೇಸ್ತ ಪ್ರಕರಣದ ಬಗ್ಗೆಯೂ ಈ ರೀತಿ ತಪ್ಪಾದ ಮಾಹಿತಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿಶಿವು ಉಪ್ಪಾರ್‌ದ್ದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಟ್ವೀಟಿಸಿದ ಶೋಭಾ ಕರಂದ್ಲಾಜೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು