fact check: ಹೊಸ ನೋಟುಗಳ ಅಸಲಿಯತ್ತೇನು?

ಹೊಸ ನೋಟು ಹಾಗೂ ನಾಣ್ಯಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದ್ದು, ಚಲಾವಣೆಗೆ ಲಭ್ಯವಿವೆ ಎಂಬ ಸಂದೇಶಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ‘₹2, ₹5, ₹350, ₹500 ₹1,000 ಮುಖಬೆಲೆಯ ನೋಟುಗಳು ಹಾಗೂ ₹100, ₹125, ₹1,000 ಮುಖಬೆಲೆಯ ನಾಣ್ಯಗಳನ್ನು ಸರ್ಕಾರ ಪರಿಚಯಿಸಿದೆ’ ಎಂದು ಸಂದೇಶಗಳಲ್ಲಿ ಹೇಳಲಾಗಿದೆ. ನೋಟುಗಳು ಹಾಗೂ ನಾಣ್ಯಗಳ ಚಿತ್ರಗಳನ್ನೂ ಜನರು ಹಂಚಿಕೊಂಡಿದ್ದಾರೆ.
ಹೊಸ ನೋಟುಗಳು ಹಾಗೂ ನಾಣ್ಯಗಳ ಸಂದೇಶಗಳ ಅಸಲಿಯತ್ತನ್ನು ‘ಲಾಜಿಕಲ್ ಇಂಡಿಯನ್’ ವೆಬ್‌ಸೈಟ್ ಪರಿಶೀಲಿಸಿದ್ದು, ಈ ಸಂದೇಶಗಳು ದಾರಿತಪ್ಪಿಸುತ್ತಿವೆ ಎಂದು ತಿಳಿಸಿದೆ. ಹೊಸದಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುವ ನೋಟುಗಳ ಮುಖಬೆಲೆಯನ್ನು ತಿರುಚಲಾಗಿದೆ. ಐದು ರೂಪಾಯಿಯ ನೋಟಿನಲ್ಲಿ ₹5 ಎಂದು ಸಂಖ್ಯೆಯಲ್ಲಿ ಬರೆಯಲಾಗಿದ್ದು, ಅಕ್ಷರಗಳಲ್ಲಿ ಐವತ್ತು ರೂಪಾಯಿ ಎಂದಿದೆ. ಅಂದರೆ, 50 ರೂಪಾಯಿಯ ನೋಟನ್ನು ತಿರುಚಿ 5 ರೂಪಾಯಿಯ ನೋಟು ಎಂದು ಬಿಂಬಿಸಲಾಗಿದೆ. ಹಾಗೆಯೇ ₹1,000 ಮುಖಬೆಲೆಯ ನೋಟಿನ ಮೇಲೆ ಅಕ್ಷರಗಳಲ್ಲಿ ಎರಡು ಸಾವಿರ ರೂಪಾಯಿ ಎಂದಿದೆ. ಅಕ್ಷರಗಳನ್ನು ಹಾಗೆಯೇ ಉಳಿಸಿ, ಸಂಖ್ಯೆಯನ್ನು ಮಾತ್ರ ತಿರುಚಲಾಗಿದೆ. ₹100, ₹125, ₹1,000 ಮುಖಬೆಲೆಯ ನಾಣ್ಯಗಳನ್ನು ಸ್ವಾತಂತ್ರ್ಯ ಹೋರಾಟಗಾರರು, ಪ್ರಸಿದ್ಧ ವ್ಯಕ್ತಿಗಳ ಸ್ಮರಣಾರ್ಥ ಬಿಡುಗಡೆ ಮಾಡಲಾಗಿದ್ದು, ಇವು ಚಲಾವಣೆಯಲ್ಲಿ ಇಲ್ಲ ಎಂದು ವೆಬ್‌ಸೈಟ್ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.