‘ಭೂಕಂಪಪೀಡಿತ ಟರ್ಕಿಗೆ ಭಾರತವು ವಿಮಾನಗಳ ಮೂಲಕ ಅತ್ಯಗತ್ಯ ಸಾಮಗ್ರಿಗಳನ್ನು ಪೂರೈಸಿದೆ. ಆದರೆ, ಇಂತಹ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಸಿ–17 ವಿಮಾನಗಳು ತನ್ನ ವಾಯುಗಡಿ ಹಾದುಹೋಗಲು ಪಾಕಿಸ್ತಾನ ಅನುಮತಿ ನಿರಾಕರಿಸಿದೆ. ಹೀಗಾಗಿ ಭಾರತದ ವಿಮಾನಗಳು ಇರಾನ್ ವಾಯುಗಡಿಯ ಮೂಲಕ ಟರ್ಕಿಯತ್ತ ಸಾಗಿವೆ. ಮುಸ್ಲಿಮರದ್ದೇ ದೇಶವಾದ ಟರ್ಕಿಗೆ ನೆರವು ನೀಡಲೂ ಪಾಕಿಸ್ತಾನವು ಅಡ್ಡಗಾಲು ಹಾಕುತ್ತಿದೆ’ ಎಂಬ ವಿವರ ಇರುವ ಪೋಸ್ಟ್‌ಗಳು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡಿವೆ. ಕೆಲವು ಮಾಧ್ಯಮ ಸಂಸ್ಥೆಗಳೂ ಇಂತಹ ಸುದ್ದಿ ಪ್ರಕಟಿಸಿವೆ. ಆದರೆ, ಇದು ಸುಳ್ಳು ಸುದ್ದಿ.
‘ಪರಿಹಾರ ಸಾಮಗ್ರಿ ಹೊತ್ತು ಟರ್ಕಿಯತ್ತ ಹೋದ ಭಾರತದ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ವಾಯುಗಡಿಯನ್ನು ಪ್ರವೇಶಿಲ್ಲ ಎಂಬುದು ನಿಜ. ಈ ವಿಮಾನಗಳು ಅರಬ್ಬಿ ಸಮುದ್ರದ ಮೇಲಿನ ವಾಯುಮಾರ್ಗದ ಮೂಲಕ, ಇರಾನ್ ವಾಯುಗಡಿಯನ್ನು ಪ್ರವೇಶಿಸಿವೆ. ನಂತರ ಟರ್ಕಿಯತ್ತ ಪ್ರಯಾಣ ಬೆಳೆಸಿವೆ. ಪಾಕಿಸ್ತಾನದ ವಾಯುಗಡಿಯನ್ನು ಪ್ರವೇಶಿಸಲು ಅನುಮತಿ ಕೋರಿದ್ದರ ಬಗ್ಗೆ ಮತ್ತು ಪಾಕಿಸ್ತಾನವು ಅನುಮತಿಯನ್ನು ನಿರಾಕರಿಸಿದ್ದರ ಬಗ್ಗೆ ವಾಯುಪಡೆಯು ಯಾವುದೇ ಮಾಹಿತಿ ನೀಡಿಲ್ಲ. ವಾಸ್ತವದಲ್ಲಿ ಭಾರತದ ಸೇನಾಪಡೆಗಳ ವಿಮಾನಗಳು ಪಾಕಿಸ್ತಾನದ ವಾಯುಗಡಿಯನ್ನು ಪ್ರವೇಶಿಸುವುದಿಲ್ಲ. ತಾಲಿಬಾನ್ ಅತಿಕ್ರಮಣದ ನಂತರ ಅಫ್ಗಾನಿಸ್ತಾನದಿಂದ ಭಾರತೀಯರನ್ನು ತೆರವು ಮಾಡುವಾಗಲೂ ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಿರಲಿಲ್ಲ’ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.