ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಪರಿಹಾರ ನಿಧಿಗೆ ವಿವೇಕ್ ಅಗ್ನಿಹೋತ್ರಿ ₹200 ಕೋಟಿ ಕೊಟ್ಟಿರುವುದು ನಿಜವೇ?

Last Updated 13 ಏಪ್ರಿಲ್ 2022, 11:24 IST
ಅಕ್ಷರ ಗಾತ್ರ

ಕ್ಲೇಮ್ ಏನು?
ದೇಶಾದ್ಯಂತ ರಾಜಕೀಯ ಸಂಚಲನ ಮೂಡಿಸಿದ್ದ, 'ದಿ ಕಾಶ್ಮೀರ್ ಫೈಲ್ಸ್' ಚಲನಚಿತ್ರವು ಮೊದಲ ದಿನವೇ ಭರ್ಜರಿ ಗಳಿಕೆ ದಾಖಲಿಸಿತ್ತು. ಹೀಗಾಗಿ ಚಿತ್ರದ ತಂಡವು ಪ್ರಧಾನಿ ಪರಿಹಾರ ನಿಧಿಗೆ ₹200 ಕೋಟಿ ರೂ. ದೇಣಿಗೆಯಾಗಿ ನೀಡಿದೆ ಎಂಬ ಅಡಿಬರಹದೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಚಿತ್ರ ತಂಡವಿದ್ದ ಫೊಟೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಇದರ ಸತ್ಯಾಸತ್ಯತೆಯನ್ನು ಪ್ರಜಾವಾಣಿ ಪರಿಶೀಲಿಸಿದೆ.

ಸತ್ಯಾಸತ್ಯತೆ ಪರಿಶೀಲನೆ
ಕಾಶ್ಮೀರ ಕಣಿವೆಯಲ್ಲಿ ಉಗ್ರವಾದ ತೀವ್ರಗೊಳ್ಳಲು ಕಾರಣವಾದ 90ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಭಯೋತ್ಪಾದಕರಿಂದ ನಡೆದ ಹಿಂಸಾಚಾರ, ವಲಸೆಯನ್ನು ಬಿಂಬಿಸಿದ ಈ ಚಿತ್ರವನ್ನು ನಿರ್ಮಿಸಿದವರು ಅಭಿಷೇಕ್ ಅಗರ್‌ವಾಲ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಇದು ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ತೆರೆ ಕಂಡು ಭಾರಿ ಸಂಚಲನವನ್ನು ಸೃಷ್ಟಿಸಿದ್ದು, ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.

ಅದು ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಕಂಡಿದ್ದು, ಚಿತ್ರ ತಂಡವು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿತ್ತು. ಮಾ.12ರಂದು ಚಿತ್ರದ ನಿರ್ಮಾಪಕ ಅಭಿಷೇಕ್ ಅಗರ್‌ವಾಲ್, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ಪತ್ನಿ ಪಲ್ಲವಿ ಜೋಶಿ ಅವರು ಪ್ರಧಾನಿಯನ್ನು ಭೇಟಿಯಾದ ಫೋಟೋವನ್ನು ವಿವಿಧೆಡೆ ಶೇರ್ ಮಾಡಲಾಗಿತ್ತು. ಆದರೆ ಅದರ ಮೇಲೆ, ಚಿತ್ರ ತಂಡವು ಪ್ರಧಾನಿ ಪರಿಹಾರ ನಿಧಿಗೆ 200 ಕೋಟಿ ರೂ. ನೀಡಿದ್ದಾಗಿಯೂ ಪಠ್ಯರೂಪದಲ್ಲಿ ಬರೆದು ಪೋಸ್ಟ್ ಮಾಡಲಾಗಿತ್ತು.

ಇಂತಹ ಒಂದು ಫೇಸ್‌ಬುಕ್ಪೋಸ್ಟ್ ಇಲ್ಲಿದೆ:

ಈ ಬಗ್ಗೆ ಪ್ರಜಾವಾಣಿ, ಸರಳವಾದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿ ನೋಡಿತು. ಜೊತೆಗೆ ಪ್ರಧಾನಿ ಪರಿಹಾರ ನಿಧಿಗೆ ಚಿತ್ರ ತಂಡ ₹200 ಕೋಟಿ ರೂ. ಪರಿಹಾರ ನೀಡಿರುವ ಅಂಶಗಳನ್ನುಳ್ಳ ಪದಗಳೊಂದಿಗೆ ಪಠ್ಯದ ಮೂಲಕವೂ ಗೂಗಲ್‌ನಲ್ಲಿ ಹುಡುಕಾಟ ನಡೆಸಿತು.

ಈ ಸಂದರ್ಭ ದೊರೆತ ಮಾಹಿತಿಯೆಂದರೆ, ಸಾಕಷ್ಟು ಮಂದಿ ಈ ಫೋಟೊವನ್ನು ಫೇಸ್‌ಬುಕ್, ಟ್ವಿಟರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಹುಡುಕಾಡಿದಾಗ, ಚಿತ್ರ ನಿರ್ಮಾಪಕ ಅಭಿಷೇಕ್ ಅಗರ್‌ವಾಲ್ ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡ ಫೊಟೊವನ್ನು ಪರಿಶೀಲಿಸಲಾಯಿತು.

ಅದರಲ್ಲಿ ಬರೆದುಕೊಂಡಿರುವ ಪ್ರಕಾರ, ಈ ಚಿತ್ರ ತಂಡವು ಪ್ರಧಾನಿಯನ್ನು ಭೇಟಿಯಾಗಿದ್ದು ಹೌದು ಮತ್ತು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ಹೌದು ಎಂಬುದು ಖಚಿತವಾಯಿತು. ಆದರೆ, ₹200 ಕೋಟಿ ಎಂಬುದು ದೊಡ್ಡ ಮೊತ್ತವೇ ಆಗಿರುವುದರಿಂದ, ಅವರಾದರೂ ಈ ಟ್ವೀಟ್‌ನಲ್ಲಿ ಉಲ್ಲೇಖಿಸಬೇಕಾಗಿತ್ತು.

ಗೂಗಲ್ ಸರ್ಚ್ ಎಂಜಿನ್ ಮೂಲಕ ಪಠ್ಯದ ಹುಡುಕಾಟ ನಡೆಸಿದಾಗಲೂ, ದೇಶದ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳ ಜಾಲತಾಣಗಳಲ್ಲಿ ಕೂಡ ಈ ವಿಷಯ ಪ್ರಕಟವಾಗಿಲ್ಲ ಎಂಬುದು ಖಚಿತವಾಯಿತು. ವಿವೇಕ್ ಅಗ್ನಿಹೋತ್ರಿ ಮತ್ತವರ ತಂಡವು ಪ್ರಧಾನಿಯನ್ನು ಭೇಟಿಯಾದ ಸುದ್ದಿ ಪ್ರಕಟವಾಗಿತ್ತು, ಆದರೆ ಎಲ್ಲೂ ಕೂಡ ದೇಣಿಗೆಯ ವಿಷಯದ ಉಲ್ಲೇಖವಿಲ್ಲ.

ಜಾಗರಣ್ ಸುದ್ದಿ ಸಂಸ್ಥೆ ಪ್ರಕಟಿಸಿದ ಲಿಂಕ್ ಇಲ್ಲಿದೆ.ಹಲವಾರು ಅಧಿಕೃತ ಸುದ್ದಿ ಜಾಲತಾಣಗಳಲ್ಲಿಯೂ ಈ ಮಾಹಿತಿ ಇದೆ.

₹200 ಕೋಟಿ ಎಂಬುದು ದೊಡ್ಡ ಮೊತ್ತವೇ ಆಗಿರುವುದರಿಂದ ಇದು ದೊಡ್ಡ ಮಟ್ಟದ ಸುದ್ದಿಯೂ ಆಗಬೇಕಿತ್ತು. ಆದರೆ, ಅಂಥ ಸುದ್ದಿ ಎಲ್ಲೂ ಪ್ರಕಟವಾಗಿಲ್ಲ. ಅಲ್ಲದೆ ಚಿತ್ರವಿಮರ್ಶಕ ತರಣ್ ಆದರ್ಶ್ ಅವರ ವೆರಿಫೈಡ್ ಟ್ವಿಟರ್ ಖಾತೆಯಲ್ಲಿ ಹಂಚಲಾದ ವಿಷಯದಲ್ಲಿ ಕೂಡ ದೇಣಿಗೆಯ ವಿಚಾರ ಇರಲಿಲ್ಲ. ಅವರ ಟ್ವಿಟರ್ ಪೋಸ್ಟ್‌ಗಳನ್ನು ಪರಿಶೀಲಿಸಿದಾಗಲೂ ಈ ವಿಷಯದ ಪೋಸ್ಟ್ ಕಂಡುಬರಲಿಲ್ಲ.

ಮತ್ತಷ್ಟು ಖಚಿತಪಡಿಸಿಕೊಳ್ಳಲೆಂದು, ಗೂಗಲ್‌ನಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರ ತಂಡದ ದೇಣಿಗೆಯ ಕುರಿತು ಹುಡುಕಾಡಿದಾಗ, ವಿವೇಕ್ ಅಗ್ನಿಹೋತ್ರಿ ಹಾಗೂ ಪಲ್ಲವಿ ಜೋಶಿ ಅವರ ಸಂದರ್ಶನದ ಲಿಂಕ್ ಒಂದು ದೊರೆಯಿತು. ಇದು ಬಾಲಿವುಡ್ ಚಿತ್ರಗಳ ಕುರಿತು ಮಾಹಿತಿ ನೀಡುವ ಗೇಮ್ಸ್2ವಿನ್ ಎಂಬ ಸಮೂಹದ ಜಾಲತಾಣ.

ಚಲನಚಿತ್ರ ನಟರ ಕುರಿತು ಸಂದರ್ಶನಗಳಿಗೆ ಪ್ರಸಿದ್ಧವಾಗಿರುವ ಸಿದ್ಧಾರ್ಥ್ ಕಣ್ಣನ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ಸಂದರ್ಶನದ ತುಣುಕು ದೊರೆಯಿತು.

ಈ ಎರಡೂ ಕಡೆ, ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಇಬ್ಬರೂ ಕೂಡ, ದೇಣಿಗೆಯ ಕುರಿತು ಮಾತನಾಡುತ್ತಾ ಚಿತ್ರವು ಗಳಿಸಿದ ಹಣವನ್ನು ದೇಣಿಗೆಯಾಗಿ ನೀಡುವ ಪ್ರಶ್ನೆ ಇಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಈಗಾಗಲೇ ಕಾಶ್ಮೀರಿ ಪಂಡಿತರ ಏಳಿಗೆಗಾಗಿ ಸಾಕಷ್ಟು ನೆರವು ನೀಡಿದ್ದೇವೆ, ಮುಂದೆಯೂ ನೀಡುತ್ತೇವೆ ಎಂದಿರುವ ಅವರು, ಚಿತ್ರವು ಗಳಿಸಿದ ಹಣವನ್ನು ಮತ್ತಷ್ಟು ಹೊಸ ಚಿತ್ರಗಳಲ್ಲಿ ತೊಡಗಿಸುತ್ತೇವೆ ಎಂದು ಹೇಳಿದ್ದಾರೆ. ಒಂದು ಹಂತದಲ್ಲಿ ಪಲ್ಲವಿ ಜೋಶಿ ಅವರಂತೂ, ಕಾಶ್ಮೀರಿ ಪಂಡಿತರಿಗೆ ಹಣ ನೀಡಬೇಕು ಎಂದು ಹೇಳುವುದು ಒಂದು ರೀತಿಯಲ್ಲಿ ಅಸಭ್ಯವಾದ ವಿಷಯ ಎಂದೂ ಹೇಳಿದ್ದಾರೆ.

ಅಲ್ಲದೆ, ಕಾಶ್ಮೀರಿ ಫೈಲ್ಸ್ ಚಿತ್ರದಿಂದ ಗಳಿಸಿದ ದುಡ್ಡನ್ನು ಕಾಶ್ಮೀರಿ ಪಂಡಿತರ ಕುಟುಂಬಿಕರಿಗೆ ನೀಡಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ ಭೋಪಾಲದ ಐಎಎಸ್ ಅಧಿಕಾರಿ ಮತ್ತುಕಾದಂಬರಿಕಾರರೊಬ್ಬರಿಗೆ ವಿವೇಕ್ ಅಗ್ನಿಹೋತ್ರಿ ನೀಡಿದ ಉತ್ತರವೂ ದೊರೆಯಿತು. ಅಲ್ಲಿ ಕೂಡ ದೇಣಿಗೆ ನೀಡಿದ ವಿಷಯದ ಉಲ್ಲೇಖ ಇಲ್ಲ.

ಅಂತಿಮ ತೀರ್ಮಾನ
ಹೀಗಾಗಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರ ತಂಡವು ಪ್ರಧಾನಿಯನ್ನು ಭೇಟಿಯಾದ ಚಿತ್ರವು ನಿಜವಾದರೂ, ಅದರ ಜೊತೆಗೆ ಹಂಚಿಕೊಂಡ ವಿಷಯ (ಪ್ರಧಾನಿ ಪರಿಹಾರ ನಿಧಿಗೆ ₹200 ಕೋಟಿ ರೂ. ದೇಣಿಗೆ ನೀಡಲಾಗಿದೆ ಎಂಬುದು) ಸುಳ್ಳು ಎಂಬುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT