ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದ ಪರಿಪೂರ್ಣ ಆಕಾರಕ್ಕೆ...

Last Updated 16 ಜೂನ್ 2019, 19:30 IST
ಅಕ್ಷರ ಗಾತ್ರ

‘ಬೆಲ್ಲಿ ಡಾನ್ಸ್‌.... ಇದು ಮನರಂಜನೆಗಾಗಿ ಅಷ್ಟೇ ಅಲ್ಲದೇ ದೇಹದ ಫಿಟ್‌ನೆಸ್‌ ಕಾಯ್ದುಕೊಳ್ಳಲು ನೆರವಾಗುವ ವ್ಯಾಯಾಮ– ನೃತ್ಯ. ಇದರಿಂದ ದೇಹದ ಅಂಗಾಂಗಳನ್ನು ನಿಯಂತ್ರಿಸಬಹುದು. ಈ ಪ್ರಕ್ರಿಯೆಯಲ್ಲಿ ದೇಹಕ್ಕೊಂದು ಪರಿಪೂರ್ಣ ಆಕಾರ ಸಿಗುತ್ತದೆ. ಮನಸ್ಸಿಗೊಂದು ಆಹ್ಲಾದಕರ ಅನುಭವ ದೊರೆಯುತ್ತದೆ’.

ಮೈಸೂರಿನ ರಾಮಕೃಷ್ಟನಗರದ ಹಾರ್ಟ್‌ ಬೀಟ್ ಅಕಾಡೆಮಿಯಲ್ಲಿ ಯುವಕ, ಯುವತಿಯರಿಗೆ ಬೆಲ್ಲಿ ಡಾನ್ಸ್‌ ಹೇಳಿಕೊಡುತ್ತಿರುವ ತುಳಸಿ ಕುಶಾಲಪ್ಪ ಅವರು ಅದರ ಮಹತ್ವದ ಬಗ್ಗೆ ಮೇಲಿನಂತೆ ಹೇಳುತ್ತಾರೆ.

‘ಈಜಿಪ್ಟ್‌ ಮೂಲದ ಜಾನಪದ ನೃತ್ಯವೇ ಈ ಬೆಲ್ಲಿ ಡಾನ್ಸ್‌. ಇತ್ತೀಚೆಗೆ ಭಾರತೀಯ ಸಿನಿಮಾಗಳಲ್ಲಿ ‘ಸೆಕ್ಸಿ’, ‘ಐಟಂ’ ಡಾನ್ಸ್‌ ಎಂಬುದಾಗಿ ಬಿಂಬಿಸಲಾಗುತ್ತಿದೆ. ಇದೊಂದು ಕಲಾ ಪ್ರಕಾರ. ನಮ್ಮ ದೇಶದ ಜಾನಪದ ನೃತ್ಯಗಳಿಗೆ ಹೇಗೆ ಮಹತ್ವ ಕೊಡುತ್ತೇವೆಯೋ ಹಾಗೆ ಈಜಿಪ್ಟ್‌ ಮತ್ತು ಅರಬ್ ದೇಶಗಳಲ್ಲಿ ಬೆಲ್ಲಿ ಡಾನ್ಸ್‌ಗೆ ಮಹತ್ವ ನೀಡಲಾಗುತ್ತದೆ. ಬೆಲ್ಲಿ ಡಾನ್ಸ್‌ ಸಿನಿಮಾದಲ್ಲಿ ನೋಡುವಂತೆ ಇಲ್ಲ, ಜನರಿಗೆ ಇದರ ಬಗ್ಗೆ ಗೊತ್ತಾಗಬೇಕು ಎನ್ನುತ್ತಾರೆ ಅವರು.

ಬೆಲ್ಲಿ ಡಾನ್ಸ್‌ ಕಲಿಯಲು ಬಹಳಷ್ಟು ಯುವತಿಯರು ಬೆಂಗಳೂರಿಗೆ ಹೋಗುತ್ತಿದ್ದಾರೆ ಎಂಬುದು ಗೊತ್ತಾಯಿತು. ಆದ್ದರಿಂದ ನಗರದಲ್ಲಿ ಬೆಲ್ಲಿ ಡಾನ್ಸ್ ಕಲಿಸಲು ಮುಂದಾಗಿದ್ದೇನೆ. ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರತಿ ಭಾನುವಾರ ತರಗತಿ ಹೇಳಿಕೊಡುತ್ತಿದ್ದೇನೆ’ ಎಂದರು ತುಳಸಿ.

ನೃತ್ಯಕ್ಕೆ ಗೌರವ ಸಲ್ಲಿಸಿ

‘ಈಜಿಪ್ಟ್‌ನಲ್ಲಿ ಬೆಲ್ಲಿ ಡಾನ್ಸ್‌ ಅನ್ನು ಮೈಪೂರ್ತಿ ಬಟ್ಟೆ ಹಾಕಿಕೊಂಡೆ ಮಾಡುತ್ತಿದ್ದರು. ಇದರಲ್ಲಿ ಸೊಂಟದ ಭಾಗದ ಚಲನೆ ಹೆಚ್ಚಿರುವುದರಿಂದ ಕ್ರಮೇಣ ಜಾಕೆಟ್‌ ಮತ್ತು ಸ್ಕರ್ಟ್‌ ಹಾಕಿಕೊಂಡು ನೃತ್ಯ ಮಾಡಲು ಆರಂಭಿಸಿದರು. ಇಲ್ಲದಿದ್ದರೆ ಕುರ್ತಾವೇ ಉಡುಪಾಗಿರುತ್ತಿತ್ತು. ಸೊಂಟದ ಭಾಗ ತೋರಿಸುವ ಕಾರಣಕ್ಕೆ ನಮ್ಮ ಸಿನಿಮಾ ಮಂದಿ ಐಟಂ ಡಾನ್ಸ್‌ ಎಂದುಕೊಂಡಿದ್ದಾರೆ. ಈ ಜಾನಪದ ನೃತ್ಯಕ್ಕೆ ಅದರದ್ದೇ ಆದ ಗೌರವವಿದೆ’ ಎಂದು ವಿವರಿಸುತ್ತಾರೆ ತುಳಸಿ.

‘ಈ ಕಲೆಯನ್ನು ನೃತ್ಯ‍ಪಟುಗಳೇ ಕಲಿಯಬೇಕು ಎಂದೇನಿಲ್ಲ, ಆಸಕ್ತಿ ಇದ್ದರೆ ಯಾರಾದರೂ ಕರಗತ ಮಾಡಿಕೊಳ್ಳಬಹುದು. ಅಲ್ಲದೇ ತೆಳ್ಳಗಿದ್ದವರು, ದಪ್ಪಗಿದ್ದವರಿಗೆ ಬೆಲ್ಲಿ ನೃತ್ಯ ಕಲಿಯಲು ಆಗುವುದಿಲ್ಲ ಎಂಬ ಮನಸ್ಥಿತಿ ಬೇಡ. ಇತ್ತೀಚೆಗೆ ಹುಡುಗರು ಬೆಲ್ಲಿ ನೃತ್ಯ ಕಲಿಯಲು ಮುಂದೆ ಬರುತ್ತಿದ್ದಾರೆ. ಕೆಲ ಮಹಿಳೆಯರು ಹೆರಿಗೆಯ ನಂತರ ದೈಹಿಕವಾಗಿ ಒಂದಿಷ್ಟು ದುರ್ಬಲ ಆಗಿರುತ್ತಾರೆ. ಅಂಥವರಿಗೂ ಈ ನೃತ್ಯ ಲವಲವಿಕೆ ಹಾಗೂ ಕಾಯದ ಫಿಟ್‌ನೆಸ್‌ಗೆ ನೆರವಾಗುತ್ತದೆ. ದೇಹದ ಆಕಾರ ಹೇಗೇ ಇದ್ದರೂ ನೃತ್ಯದ ಮೂಲಕ ಹೊರ ಹಾಕಿದರೆ ಒತ್ತಡವೂ ನಿವಾರಣೆಯಾಗುತ್ತದೆ’ ಎಂಬುದು ನೃತ್ಯ ಗುರು ತುಳಸಿ ಅವರ ವಿಶ್ಲೇಷಣೆ.‌

ಬೆಲ್ಲಿ ಡಾನ್ಸ್‌ನಿಂದ ಬುದ್ಧಿಮತ್ತೆ, ಸಾಮರ್ಥ್ಯವೂ ಹೆಚ್ಚಾಗುತ್ತದೆ. ಮೊದಲ ತಿಂಗಳು ಮಾಂಸಖಂಡಗಳಿಗೆ ವರ್ಕೌಟ್‌ ಮಾಡಿಸಲಾಗುತ್ತದೆ. ನಂತರ ಬೀಟ್ಸ್‌ಗೆ ತಕ್ಕಂತೆ ಚಲನೆಗಳನ್ನು ಹೇಳಿಕೊಡಲಾಗುತ್ತದೆ. ಈ ಕೋರ್ಸ್‌ನಲ್ಲಿ ಬೇಸಿಕ್‌ ಫಂಡಮೆಂಟಲ್‌, ಬಾಡಿ ಐಸೊಲೇಷನ್ ಹಂತಗಳಿರುತ್ತವೆ.

ಬೇಸಿಕ್‌ ಫಂಡಮೆಂಟಲ್‌ನಲ್ಲಿ ಸ್ಟ್ರೆಚ್‌ಔಟ್ ಹೇಳಿಕೊಡಲಾಗುತ್ತದೆ. ಮಾಂಸಖಂಡಗಳಿಗೆ ಲಘು ವ್ಯಾಯಾಮ ಮಾಡಿಸಲಾಗುತ್ತದೆ. ಇಲ್ಲಿ ‘ಹಿಪ್‌ ಶಿಮಿ’ (ಹೊಟ್ಟೆ ಭಾಗದ ವ್ಯಾಯಾಮ) ಕಲಿಸಲಾಗುತ್ತದೆ.

ಅಡ್ವಾನ್ಸ್ಡ್‌ ಟೆಕ್ನಿಕ್ಸ್‌ನಲ್ಲಿ ಹಿಪ್‌ಶಿಮಿ, ಚೆಸ್ಟ್‌ಶಿಮಿ, ಹಿಪ್‌ರೋಲ್‌, ಚೆಸ್ಟ್‌ರೋಲ್‌, ಆಂಡಿಲೇಷನ್‌ ಹಾಗೂ ಓಮಿ ತಂತ್ರಗಳು ಮುಖ್ಯವಾಗಿವೆ. ತುಳಸಿ ಅವರು, ‘ಟಗರು’ ಚಿತ್ರದ ಟೈಟಲ್‌ ಹಾಡು ಹಾಗೂ ‘ಜಿಲಕಾ ಜಿಲಕಾ’ ಹಾಡಿಗೆ ಬೆಲ್ಲಿ ನೃತ್ಯ ಸಂಯೋಜಿಸಿದ್ದಾರೆ. ಇದುವರೆಗೂ 50ಕ್ಕೂ ಹೆಚ್ಚು ಜನರಿಗೆ ನೃತ್ಯ ಕಲಿಸಿದ್ದಾರೆ.

‘ನೃತ್ಯ ಅಭ್ಯಾಸದಿಂದ ದೇಹ ಹಗುರವಾಗುತ್ತದೆ, ಫ್ಲೆಕ್ಸಿಬಿಲಿಟಿ ಬರುತ್ತದೆ. ಗೊತ್ತಿಲ್ಲದಂತೆ ದೇಹದ ಮೇಲೆ ಆತ್ಮಸ್ಥೈರ್ಯ ಹೆಚ್ಚುತ್ತದೆ. ಯಾವುದೇ ಕೆಲಸ ಕೊಟ್ಟರೂ ಮಾಡಲು ಮನಸ್ಸಾಗುತ್ತದೆ’ ಎನ್ನುತ್ತಾರೆ ನೃತ್ಯಪಟುಗಳು.

‘ಇಲ್ಲಿ ನೃತ್ಯ ಫ್ಯೂಷನ್‌ ಮಾಡಲಾಗುತ್ತದೆ. ಈಜಿಪ್ಟ್‌ನ ಕೆಲವು ಹಾಡುಗಳು ನೃತ್ಯಕ್ಕೆ ಹೊಂದುವುದಿಲ್ಲ. ಹಾಗಾಗಿ ಬಾಲಿವುಡ್‌ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಮೂಲ ಬೀಟ್ಸ್‌ಗಳಿಂದಲೂ ಕೆಲವು ಸ್ಟೆಪ್‌ಗಳನ್ನು ಹೇಳಿಕೊಡಲಾಗುತ್ತದೆ’ ಎಂದು ವಿವರಿಸುತ್ತಾರೆ ತುಳಸಿ ಕುಶಾಲಪ್ಪ.

ನೃತ್ಯ ಪ್ರಚಾರಕ್ಕೆ ‘ಟಿಕೆಸಿ’

ನಾವು ಮೂಲತಃ ಕೊಡಗಿನ ಪೊನ್ನಂಪೇಟೆಯವರು. ಬೆಲ್ಲಿ ಡಾನ್ಸ್‌ಅನ್ನು ಪ್ರಚುರ ಪಡಿಸಲು ಮೈಸೂರಿನಲ್ಲಿ ತುಳಸಿ ಕುಶಾಲಪ್ಪ ಚಪ್ಪುಡೀರ (ಟಿಕೆಸಿ) ಕಂಪನಿ ಆರಂಭಿಸಿದ್ದೇವೆ. ವೇದಿಕೆ ಕಾರ್ಯಕ್ರಮಗಳನ್ನು ಕೂಡ ನೀಡುತ್ತೇವೆ. ನಮ್ಮ ತಂಡದಲ್ಲಿ ಕೋಮಲ್‌, ಸಂಹಿತ ನಾಡಿಗ್‌, ಸಂಜನಾ ಮುರಳಿ, ರಕ್ಷಿತಾ ಆನಂದ್ ಹಾಗೂ ದರ್ಶನಾ ರವೀಂದ್ರನ್‌ ಇದ್ದಾರೆ.

ಬೆಲ್ಲಿ ಡಾನ್ಸ್‌ ಮಾತ್ರವಲ್ಲ, ಸಮಕಾಲೀನ ನೃತ್ಯ, ಹಿಪ್‌ ಹಾಪ್‌, ಬಾಲಿವುಡ್‌ ವರ್ಕೌಟ್‌ ಹಾಗೂ ಮಹಿಳೆಯರಿಗೆ ಫಿಟ್‌ನೆಸ್‌ ತರಬೇತಿ ನೀಡಲಾಗುತ್ತದೆ.

‘ದೆಹಲಿಯ ಬಂಜಾರ ಸ್ಕೂಲ್‌ ಆಫ್‌ ಡಾನ್ಸ್‌ನ ಮೆಹರ್‌ ಮಲ್ಲಿಕ್‌ ಅವರು ನನ್ನ ಮೊದಲ ಗುರುಗಳು. ಅವರು ಕಾರ್ಯಾಗಾರಕ್ಕೆಂದು ಮೈಸೂರಿಗೆ ಬಂದಾಗ ನೃತ್ಯಕ್ಕೆ ಸಂಬಂಧಿಸಿದಂತೆ ಮೂರು ಸರ್ಟಿಫಿಕೆಟ್‌ ಪಡೆದೆ. ಬೆಂಗಳೂರಿನ ಟ್ರೈಬಲಿನಾ ಅಕಾಡೆಮಿಯ ಬಿಂದು ಬೋಳಾರ ಅವರ ಬಳಿ ಬೆಲ್ಲಿ ಡಾನ್ಸ್‌ ಪದವಿ ಪಡೆದೆ’ ಎಂದು ಹೇಳುತ್ತಾರೆ ತುಳಸಿ ಕುಶಾಲಪ್ಪ.

ಮಾಹಿತಿಗೆ: 96209 75370

***

ಸರಳ ಡಯೆಟ್‌ ಪಾಲಿಸಿ

ಬೆಲ್ಲಿ ಡಾನ್ಸ್ ಮಾಡುವವರಿಗೆ ಸರಳ ಡಯೆಟ್‌ ಪಾಲಿಸುವಂತೆ ಸಲಹೆ ನೀಡಲಾಗುತ್ತದೆ. ರಾಗಿ ಮುದ್ದೆ, ಅಂಬಲಿ ಕುಡಿಯಬೇಕು, ಅನ್ನ ಆದಷ್ಟು ಕಡಿಮೆ ತಿನ್ನಬೇಕು. ಸಕ್ಕರೆ, ಮಾಂಸಾಹಾರವನ್ನು ಹೆಚ್ಚಿಗೆ ತಿನ್ನುವಂತಿಲ್ಲ. ತರಕಾರಿ, ರಾಗಿ ಮಾಲ್ಟ್‌ ಡಯೆಟ್‌ನ ಪಟ್ಟಿಯಲ್ಲಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT