ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ ಕಾಪಾಡುವ ಭಾಂಗ್ರಾ ನೃತ್ಯ

Last Updated 2 ಜೂನ್ 2019, 19:30 IST
ಅಕ್ಷರ ಗಾತ್ರ

ಭಾಂಗ್ರಾಬೀಟ್ಸ್ ಎಂದೇ ಜಿಮ್‌ ಕೇಂದ್ರಗಳಲ್ಲಿ ಜನಪ್ರಿಯತೆ ಗಳಿಸುತ್ತಿರುವ ಭಾಂಗ್ರಾ ನೃತ್ಯ ಫಿಟ್‌ನೆಸ್‌ ಪ್ರಿಯರ ನೆಚ್ಚಿನ ನೃತ್ಯವಾಗಿ ಗಮನ ಸೆಳೆಯುತ್ತಿದೆ. ದೇಹದ ಎಲ್ಲ ಅಂಗಾಂಗಳಿಗೂ ಕಸರತ್ತು ನೀಡುವಂತಹ ಇದರ ಜಾನಪದ ನೃತ್ಯದ ಸೊಬಗು ಆಕರ್ಷಣೀಯ.

ದೇಶ ಮತ್ತು ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳು ವಿಶ್ವದಾದ್ಯಂತ ಹಲವು ಇವೆ. ನಮ್ಮ ದೇಶದಲ್ಲೂ ಆಯಾ ರಾಜ್ಯದ ಸಂಸ್ಕೃತಿಗೆ ಪ್ರತೀಕವಾದ ನೃತ್ಯಗಳು ಇವೆ. ಇವುಗಳಲ್ಲಿ ಭಾಂಗ್ರಾ ನೃತ್ಯ ಕೂಡ ಒಂದು. ಈ ನೃತ್ಯವನ್ನು ಅಭ್ಯಸಿಸುವುದರಿಂದ ಆರೋಗ್ಯ ಸ್ಥಿರವಾಗಿಟ್ಟುಕೊಳ್ಳುವುದರ ಜತೆಗೆ ಫಿಟ್‌ನೆಸ್ ಕೂಡ ಹೆಚ್ಚಿಸಿಕೊಳ್ಳಬಹುದು. ಹಲವು ಜಿಮ್‌ ಕೇಂದ್ರಗಳಲ್ಲಿ ಈ ನೃತ್ಯವನ್ನು ಕಲಿಸುತ್ತಿರುವುದೇ ಇದಕ್ಕೆ ಸಾಕ್ಷಿ.

ಕೈ–ಕಾಲುಗಳು, ಸೊಂಟ, ಕತ್ತು, ಕುತ್ತಿಗೆ, ಬೆನ್ನು, ಪಾದಗಳು ಹೀಗೆ ದೇಹದ ಎಲ್ಲ ಅಂಗಾಂಗಳಿಗೆ ಕಸರತ್ತು ನೀಡುವಂತಹ ಭಾಂಗ್ರಾ ನೃತ್ಯವನ್ನು ಅಭ್ಯಸಿಸುತ್ತಾ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು ಎಂಬ ಸತ್ಯ ಪಾಶ್ಚತ್ಯ ರಾಷ್ಟ್ರಗಳಿಗೂ ಹರಡಿದೆ. ಅಮೆರಿಕ ನ್ಯೂಯಾರ್ಕ್‌ ನಗರದ ಹಲವು ಜಿಮ್‌ ಕೇಂದ್ರಗಳಲ್ಲಿ ಭಾಂಗ್ರಾ ನೃತ್ಯವನ್ನು ಫಿಟ್‌ನೆಸ್‌ ಕಾಪಾಡುವ ಸಾಧನವಾಗಿಯೇ ಕಲಿಸಲಾಗುತ್ತಿದೆ.

ಹೇಗಿರುತ್ತದೆ ಈ ನೃತ್ಯ?

ಫಿಟ್‌ನೆಸ್‌ ಪ್ರಿಯರ ನೆಚ್ಚಿನ ವ್ಯಾಯಾಮಗಳಲ್ಲಿ ಏರೊಬಿಕ್ಸ್ ಕೂಡ ಒಂದು. ಭಾಂಗ್ರಾ ನೃತ್ಯವನ್ನೂ ಏರೊಬಿಕ್ಸ್‌ನಂತೆಯೇ ಅಭ್ಯಸಿಸಬಹುದು. ಇದರ ವಿಶೇಷವೆಂದರೆ ದೇಹವನ್ನು ವಿವಿಧ ಬಗೆಯ ಕೆಲಸ, ಆಟಗಳಿಗೆ ಒಗ್ಗಿಕೊಳ್ಳುವುದಕ್ಕೆ ನೆರವಾಗುವುದು. ಸ್ವಾರಸ್ಯವೆಂದರೆ ಈ ಜನಪದ ನೃತ್ಯವನ್ನು ಬಾಲಿವುಡ್‌ನ ಚಿತ್ರ ಗೀತೆಗಳಿಗೆ ತಕ್ಕಂತೆ ಕುಣಿಯಬಹುದು. ಹೀಗಾಗಿಯೇ ಅಮೆರಿಕದಂತಹ ರಾಷ್ಟ್ರಗಳಲ್ಲಿ ಈ ನೃತ್ಯದ ಜನಪ್ರಿಯತೆ ಹೆಚ್ಚಾಗುತ್ತಿದೆ.

ಎಲ್ಲರೂ ಮಾಡಬಹುದಾದ ನೃತ್ಯ

ಫಿಟ್‌ನೆಸ್‌ ಕಾಪಾಡಿಕೊಳ್ಳಬೇಕು ಎಂಬ ಆಸೆ ಇರುವಂತಹ ಎಲ್ಲ ವಯೋಮಾನದವರೂ ಸುಲಭವಾಗಿ ಅಭ್ಯಸಿಸಬಹುದಾದಂತಹ ನೃತ್ಯ ಇದು. ಜಿಮ್‌ ತರಬೇತುದಾರರು ಹೇಳಿಕೊಡುವ ನಿಯಮಗಳನ್ನು ಮತ್ತು ಆಹಾರ ಪಥ್ಯವನ್ನು ಪಾಲಿಸುತ್ತಾ ಕಲಿಯುತ್ತಾ ಹೋದರೆ ದೇಹದ ಆಕೃತಿಯೂ ಬದಲಾಗುತ್ತದೆ.

ಜಾನಪದ ನೃತ್ಯವಾಗಿರುವುದರಿಂದ ಅಭ್ಯಸಿಸುವ ವಿಧಾನವೂ ಸುಲಭ. ಜಿಮ್‌ ಕೇಂದ್ರಗಳಲ್ಲಿ ಈ ನೃತ್ಯವನ್ನು, ವಿವಿಧ ವಯೋಮಾನದವರು ಅಭ್ಯಸಿಸಲು ನೆರವಾಗುವಂತೆ ಪ್ರತ್ಯೇಕವಾಗಿ ರಚಿಸಲಾಗಿರುತ್ತದೆ. ಹೀಗಾಗಿ ಕಲಿಯುವುದೂ ಸುಲಭ. ನಿತ್ಯ ಮುಂಜಾನೆ ಅಭ್ಯಸಿಸುವುದರಿಂದ ದಿನವಿಡೀ ಲವಲಿವಿಕೆಯಿಂದ ಇರಬಹುದು ಎನ್ನುತ್ತಾರೆ ಫಿಟ್‌ನೆಸ್ ಪ್ರಿಯರು.

ಉಪಯೋಗಗಳೇನು?

ನೃತ್ಯ ಅಭ್ಯಸಿಸುವುದಕ್ಕೆ ಕೈ–ಕಾಲುಗಳನ್ನು ಅಲುಗಾಡಿಸಲೇಬೇಕು. ಇದರಿಂದ ಪಾದಗಳು ದೃಢವಾಗುತ್ತಾ ಹೋಗುತ್ತವೆ. ಆಗಾಗ್ಗೆ ಚಪ್ಪಾಳೆ ತಟ್ಟುವುದು ಈ ನೃತ್ಯದ ಲಕ್ಷಣ. ಇದರಿಂದ ಭುಜಗಳ ಮಾಂಸಖಂಡಗಳು ದೃಢವಾಗುತ್ತಾ ನೋವುಗಳು ಕಾಡದಂತೆ ನೆರವಾಗುತ್ತದೆ.

ನೃತ್ಯ ಅಭ್ಯಸಿಸುವಾಗ ಉರಿರಾಟದ ವೇಗ ಮತ್ತು ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಹೃದಯ ಮತ್ತು ಶ್ವಾಸಕೋಶಗಳ ಕಾರ್ಯವೈಖರಿ ಚುರುಕಾಗುತ್ತದೆ. ಹೀಗಾಗಿ ಈ ನೃತ್ಯ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಈ ನೃತ್ಯವನ್ನು ಅಭ್ಯಸಿಸುವುದಕ್ಕೆ ಹಾಡುಗಳನ್ನು ಬಳಸಿಕೊಳ್ಳುವುದು ಅನಿವಾರ್ಯ ಹೀಗಾಗಿ, ಅಭ್ಯಸಿಸುವಾಗ ಉಲ್ಲಾಸಮಯ ಎನಿಸುತ್ತದೆ. ಇದರಿಂದ ಮಾನಸಿಕ ಒತ್ತಡದಂತಹ ಸಮಸ್ಯೆಗಳೂ ದೂರವಾಗುತ್ತವೆ.

ಈ ನೃತ್ಯವನ್ನು 45 ನಿಮಿಷ ಅಭ್ಯಾಸ ಮಾಡಿದರೆ 500 ಕ್ಯಾಲರಿಗಳು ಖರ್ಚಾಗುತ್ತವೆ. ಹೀಗಾಗಿ ಬೊಜ್ಜು ಇಳಿಸಿಕೊಳ್ಳುವುದಕ್ಕೆ ಉತ್ತಮ ವ್ಯಾಯಾಮ.

ಮಾಂಸಖಂಡಗಳನ್ನು ದೃಢವಾಗಿಸುವ ಮೂಲಕ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹದ ಕಾರ್ಯವೈಖರಿಯಲ್ಲಿ ಬದಲಾವಣೆ ತಂದು, ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

ಬಹುತೇಕರು ಮಾಡುತ್ತಿರುವ ವ್ಯಾಯಾಮಗಳನ್ನು ಕಲಿಯುವ ಬದಲು ಭಿನ್ನವಾಗಿ ಯೋಚಿಸುವ ಮನಸ್ಸಿದ್ದರೆ ಅಥವಾ ನೃತ್ಯ ಕಲಿಯಬೇಕೆಂಬ ಆಸೆ ಇರುವವರು ಈ ನೃತ್ಯವನ್ನು ಅಭ್ಯಸಿಸಿದರೆ ಫಿಟ್‌ನೆಸ್ ಕಾಪಾಡಿಕೊಳ್ಳುವುದರ ಜತೆಗೆ ಉತ್ತಮ ಹವ್ಯಾಸವನ್ನೂ ರೂಢಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT