ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರಾವಳಿಯ ಒಣಮೀನು

Last Updated 2 ಜುಲೈ 2018, 20:26 IST
ಅಕ್ಷರ ಗಾತ್ರ

ಕಡಲ ತಡಿಯಲ್ಲಿರುವ ಕಪ್ಪು ಬಂಡೆಗಳ ಮೇಲೆ ಮೇಲೆ ‌ಮಹಿಳೆಯರಿಬ್ಬರು ಚುಕ್ಕೆ ರಂಗೋಲಿ ಬರೆಯುತ್ತಿದ್ದಾರೆ. ಅದನ್ನು ಮಕ್ಕಳಿಬ್ಬರು ಕುತೂಹಲದಿಂದ ನೋಡುತ್ತಿದ್ದಾರೆ. ಈ ಜಾಗದಲ್ಲಿ ಗಿಡುಗಗಳು ಹಾರಾಡುತ್ತಾ ರಂಗೋಲಿಯ ಚುಕ್ಕಿಗಳನ್ನೇ ಕಚ್ಚಿಕೊಂಡು ಹೋಗುವಂಥ ಸನ್ನಿವೇಶ ಗೋಚರಿಸುತ್ತಿದೆ. ಈ ಬಂಡೆ ಮೇಲೆ ಯಾಕೆ ರಂಗೋಲಿ ಹಾಕ್ತಾ ಇದ್ದಾರೆ ಎಂದು ಹತ್ತಿರ ಹೋದೆ. ಅರೆ, ಅದು ರಂಗೋಲಿಯ ಚುಕ್ಕಿಯಲ್ಲ. ಕರಾವಳಿಯ ಜನರ ದೈನಂದಿನ ಆಹಾರದ ಅವಿಭಾಜ್ಯ ಭಾಗ ಮೀನನ್ನು ಒಣಗಲು ಹಾಕುತ್ತಿರುವ ದೃಶ್ಯ..!

ಕಾರವಾರ ಕಡಲತೀರದಲ್ಲಿ ಮೀನು ಒಣಗಿಸುವುದು ಹೀಗೆ. ಇದು ಇಲ್ಲಿಯ ಸಂಪ್ರದಾಯ. ಇಲ್ಲಿನ ಸಾವಿರಾರು ಮೀನುಗಾರರ ಕುಟುಂಬಗಳು ಸೂರ್ಯೋದಯಕ್ಕೂ ಮೊದಲೇ ನಾಡದೋಣಿಗಳೊಂದಿಗೆ ಮತ್ಸ್ಯಬೇಟೆಗೆ ಸಮುದ್ರಕ್ಕಿಳಿಯುತ್ತಾರೆ. ಬಲೆ ಬೀಸಿ ಮೀನುಗಳನ್ನು ಹಿಡಿದು ದೋಣಿ ಭರ್ತಿಯಾದ ಮೇಲೆಯೇ ದಡಕ್ಕೆ ಮರಳುತ್ತಾರೆ. ಒಟ್ಟಾದ ಮೀನನ್ನು ತಮ್ಮ ಮನೆಯಲ್ಲಿನ ಮಹಿಳೆಯರಿಗೆ ಒಪ್ಪಿಸಿದರೆ, ಒಂದು ಹಂತಕ್ಕೆ ಅವರ ಕೆಲಸ ಮುಗಿದಂತೆ.

ಒಣಗಿಸುವುದು ಹೇಗೆ?

ಮೀನುಗಳನ್ನು 8ರಿಂದ 10 ತಾಸು ಉಪ್ಪಿನಲ್ಲಿ ಮುಚ್ಚಿಡುತ್ತಾರೆ. ಅಪ್ಪೆ ಮಾವಿನ ಮಿಡಿಯನ್ನು ಉಪ್ಪಿನಕಾಯಿ ಹಾಕುವ ಮೊದಲು ಇಡುತ್ತಾರಲ್ಲ ಹಾಗೆ. ನಂತರ ಮೀನನ್ನು ಸಮುದ್ರದ ನೀರಿನಲ್ಲೇ ಚೆನ್ನಾಗಿ ತೊಳೆದು ಚಟಾಯಿ (ಮೀನನ್ನು ಒಣಗಿಸಲು ಬಳಸುವ ಕಬ್ಬಿಣದ ಸಾಧನ) ಅಥವಾ ಬಂಡೆಗಲ್ಲುಗಳ ಮೇಲೆ ಹಪ್ಪಳ, ಸಂಡಿಗೆ ಒಣಗಿಸುವ ಹಾಗೆ ಒಣಗಲು ಬಿಡುತ್ತಾರೆ. ’ಈ ಪ್ರಕ್ರಿಯೆ ಸರಿಯಾಗಿ ನಡೆದರೆ ಒಣಮೀನು 4–5 ತಿಂಗಳು ಕೆಡುವುದಿಲ್ಲ’ ಎನ್ನುತ್ತಾರೆ ಮೀನುಗಾರ ಕುಟುಂಬದ ಮಹಿಳೆ ಸುಶೀಲಾ.

ಒಣಮೀನಿನ ಕಾರ್ಯ ಶುರುವಾದರೆ ಮೀನುಗಾರರ ಕುಟುಂಬಗಳ ಮಹಿಳೆಯರಿಗೆ ಕೈತುಂಬ ಕೆಲಸ. ಮಳೆ ಆರಂಭಕ್ಕೆ ಮುನ್ನ ಮೀನುಗಳನ್ನು ಒಣಗಿಸಿ ಕಾರವಾರದ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡುತ್ತಾರೆ. ಮಾರಾಟದ ಜಾಗ ಹಿಡಿಯಲು ತುರುಸಿನ ಸ್ಪರ್ಧೆಯೇ ಇರುತ್ತದೆ. ಗ್ರಾಹಕರಿಗೆ ಮೀನಿನ ಬುಟ್ಟಿ ಕಾಣಬೇಕೆಂದು ಆಯಕಟ್ಟಿನ ಸ್ಥಳಗಳನ್ನು ಹುಡುಕುತ್ತಾರೆ. ಹೀಗಾಗಿ ಧಾವಂತದಲ್ಲೇ ಅವರ ದಿನಚರಿಯಿರುತ್ತದೆ.

ಒಣ ಮೀನಿಗೆ ಭಾರಿ ಬೇಡಿಕೆ

ಕರಾವಳಿಯ ಬಹುಪಾಲು ಜನರಿಗೆ ಊಟದಲ್ಲಿ ಮೀನಿನ ಖಾದ್ಯ ಇಲ್ಲದಿದ್ದರೆ ಊಟ ಪರಿಪೂರ್ಣವಾಗಲ್ಲ. ಇಲ್ಲಿನ ಕರಾವಳಿ ಮಾತ್ರವಲ್ಲ, ಸಮೀಪದ ಗೋವಾ, ಮಹಾರಾಷ್ಟ್ರದಿಂದಲೂ ಒಣಮೀನಿಗೆ ಬೇಡಿಕೆಯಿದೆ. ಮುಂಬೈ, ಪಣಜಿಯಂತಹ ನಗರಗಳಲ್ಲಿ ವಾಸ ಮಾಡುವ ಸಾವಿರಾರು ಕಾರವಾರಿಗರು ಇಲ್ಲಿಂದ ಕೆಜಿ ಗಟ್ಟಲೆ ಒಣಮೀನನ್ನು ತೆಗೆದುಕೊಂಡು ಹೋಗುತ್ತಾರೆ. ಮೀನುಗಾರಿಕೆ ನಿಷೇಧವಾಗುವ ಜೂನ್, ಜುಲೈ ತಿಂಗಳಿಗೆ ಬೇಕಾಗುವಷ್ಟು ಮೀನಿನ ಸಂಗ್ರಹವಾಗಿರುತ್ತದೆ. ಮೇ ಕೊನೆಯ ವಾರ ಮತ್ತು ಜೂನ್ ‌ಮೊದಲ ವಾರದಲ್ಲಿ ಮುಂಬೈ, ಪಣಜಿಗಳತ್ತ ಸಾಗುವ ಬಸ್, ರೈಲುಗಳ ತುಂಬ ಒಣ ಮೀನಿನದ್ದೇ ಘಮ.

ಯಾವುದು ಸೂಕ್ತ?

ಒಣಗಿಸಲು ಇಂಥದ್ದೇ ಮೀನು ಎಂಬುದಿಲ್ಲ. ಬಲೆಗೆ ಬಿದ್ದ ಎಲ್ಲ ಜಾತಿಯ ಮೀನುಗಳನ್ನೂ ಬಿಸಿಲಿಗೆ ಹಾಕಬಹುದು. ಕೊಬ್ಬಿನಂಶ ಕಡಿಮೆ ಇರುವ ಸಮ್ಮದಾಳೆ, ಸೊರ, ದೊಂಡಿ, ಸಟ್ಲೆ ಮುಂತಾದ ಮೀನುಗಳನ್ನು ಹೆಚ್ಚಾಗಿ ಒಣಗಿಸಲಾಗುತ್ತದೆ. ಗುರುಕು, ಬಾಂಗ್ಡೆ, ಬಾಳೆ, ಸೀಗಡಿಗಳನ್ನೂ ಒಣಮೀನುಗಳನ್ನಾಗಿ ಪರಿವರ್ತನೆ ಮಾಡಿ ಮಳೆಗಾಲಕ್ಕಾಗಿ ಸಂಗ್ರಹಿಸುತ್ತಾರೆ.

‘ಕಾರವಾರದ ಒಣಮೀನಿನೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ಹತ್ತಾರು ವರ್ಷಗಳಿಂದ ಮುಂಬೈನಲ್ಲಿ ವಾಸವಿರುವ ನಾವು ಪ್ರತಿ ಬೇಸಿಗೆ ರಜೆ ಮುಗಿದು ವಾಪಸ್ ಹೋಗುವಾಗ ಒಂದಷ್ಟು ಒಣಮೀನನ್ನು ಜತೆಗೆ ತೆಗೆದುಕೊಂದು ಹೋಗುತ್ತೇವೆ. ಅದು ಒಂದು ರೀತಿ ಸಂಪ್ರದಾಯವೇ ಆಗಿದೆ’ ಎನ್ನುತ್ತಾರೆ ಪಾಯಲ್.

ಯಾಂತ್ರೀಕೃತ ಮೀನುಗಾರಿಕೆ ಆತಂಕ

ಅರಬ್ಬಿ ಸಮುದ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬುಲ್‌ಟ್ರೋಲ್, ಲೈಟ್ ಫಿಶಿಂಗ್‌ನಿಂದ ಮತ್ಸ್ಯ ಸಂಕುಲ ವಿನಾಶದತ್ತ ತಲುಪಿದೆ ಎಂಬ ಆತಂಕ ಹಲವಾರು ಮೀನುಗಾರರದ್ದು. ಇದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಸಿಗುತ್ತದೆ ಎಂಬ ವಿಶ್ವಾಸವಿರುವುದಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಒಣಮೀನು ಸಿಗದೇ ಹೋಗುವ ಆತಂಕವನ್ನೂ ಅಲ್ಲಗಳೆಯುವಂತಿಲ್ಲ’ ಎನ್ನುತ್ತಾರೆ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ಸದಾನಂದ ಹರಿಕಂತ್ರ.

‘ಬೇಲೇಕೇರಿ ಮತ್ತು ತದಡಿ ಬಂದರಿನಲ್ಲಿ ಈ ಮೊದಲು 300– 400 ಮಹಿಳೆಯರು ಒಣಮೀನು ಮಾಡುತ್ತಿದ್ದರು. ಅದಿರು ಸಾಗಣೆ ಮುನ್ನೆಲೆಗೆ ಬಂದ ಮೇಲೆ ಮೀನುಗಾರಿಕೆಗೆ ಹೊಡೆತ ಬಿದ್ದಿದೆ. ಚಟಾಯಿಗಳ ಜಾಗವನ್ನು ಅದಿರಿನ ರಾಶಿ ಆಕ್ರಮಿಸಿತು. ಮತ್ಸ್ಯೋದ್ಯಮದಿಂದ ವಿಮುಕ್ತರಾದ ಮಂದಿ ಬೇರೆ ಉದ್ಯೋಗಗಳತ್ತ ಹೊರಳಿದರು’ ಎಂಬ ವಿಷಾದ ಅವರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT