ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನನ್ನ ಹುಡುಗನಿಗೆ ಅಡುಗೆ ಗೊತ್ತಿರಬೇಕು ಅಂತೇನಿಲ್ಲ’

Last Updated 12 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನಾನು 5–6ನೇ ತರಗತಿಯಲ್ಲಿದ್ದಾಗಲೇ ಅವಲಕ್ಕಿ, ಉಪ್ಪಿಟ್ಟು, ಕಾಫಿ, ಟೀ, ಪಲ್ಯಗಳನ್ನು ಮಾಡಲು ಕಲಿತಿದ್ದೆ. ಅಪ್ಪ ವೈದ್ಯರಾಗಿದ್ದರಿಂದ ಅವರು ಹಳ್ಳಿಯಲ್ಲೇ ಹೆಚ್ಚಾಗಿ ಸೇವೆ ಮಾಡುತ್ತಿದ್ದರು. ಹೀಗಾಗಿ ನಾನು 10ನೇ ತರಗತಿ ತನಕವೂ ಹಳ್ಳಿಯಲ್ಲೇ ಇದ್ದೆ. ಅಪ್ಪನಿಗೆ 2–3 ವರ್ಷಕ್ಕೊಮ್ಮೆ ವರ್ಗಾವಣೆ ಆಗುತ್ತಿತ್ತು. ಬೇರೆ ಬೇರೆ ಹಳ್ಳಿಗೆ ಹೋದಾಗ ನಾವು ಅಲ್ಲಿನ ಅಡುಗೆ ಕಲಿಯುತ್ತಿದ್ದೆವು. ಅಮ್ಮನೊಂದಿಗೆ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದೆ. ಹಾಗೇ ಆಸಕ್ತಿಯೂ ಬೆಳೆಯಿತು.

ಹಳ್ಳಿಲೇ ಇದ್ದಿದ್ದರಿಂದ ಹಪ್ಪಳ ಊದೋದು ಸೇರಿದಂತೆ ಬೇರೆ ಬೇರೆ ಕೆಲಸಗಳನ್ನು ಬೇಗ ಕಲಿತೆ. ಅಮ್ಮ ನನ್ನ ಕೈಲೀ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಈಗಲೂ ಸಣ್ಣ ಪುಟ್ಟ ಮನೆಕೆಲಸಗಳನ್ನು ಮಾಡಿಸು
ತ್ತಾರೆ. ಹಾಗಾಗಿ ನಾನು ಕೆಲಸಗಳನ್ನು ಬೇಗ ಕಲಿತೆ. ನನ್ನ ಕೈರುಚಿಯೇ ನನಗೆ ಇಷ್ಟ. ಶುದ್ಧ ಸಸ್ಯಾಹಾರಿ. ಎಲ್ಲಾ ರೀತಿಯ ಸಸ್ಯಾಹಾರಿ ಅಡುಗೆಗಳನ್ನು ಮಾಡುತ್ತೇನೆ. ಮನೆಯಲ್ಲಿ ಎಲ್ಲರಿಗೂ ಸಿಹಿ ಇಷ್ಟ. ಹೋಳಿಗೆ, ಕ್ಯಾರೆಟ್‌ ಹಲ್ವಾ ನನಗೆ ತುಂಬ ಇಷ್ಟ.ಗೋಬಿ ಮಂಚೂರಿ, ಸ್ಯಾಂಡ್‌ವಿಚ್‌, ಪಲಾವ್‌, ರೈಸ್‌ಐಟಂ ಎಲ್ಲವನ್ನೂ ಚೆನ್ನಾಗಿ ಮಾಡುತ್ತೇನೆ. ಆಗಾಗ ಮಾಡ್ಕೊಂಡು ತಿಂತೀನಿ.ತಮ್ಮನಿಗೆ ನನ್ನ ಅಡುಗೆ ಇಷ್ಟ. ಹಬ್ಬಕ್ಕೆ ಊರಿಗೆ ಬಂದಿದ್ದೀನಿ. ವಿಶೇಷ ಅಡುಗೆ ಮಾಡು ಅಂತ ಕುತ್ಕೊಂಡಿದ್ದಾನೆ. ಹಬ್ಬಕ್ಕೆ ಹೋಳಿಗೆ ಫಿಕ್ಸ್‌.

ಅಡುಗೆ ಕಲಿಯು
ವಾಗ ಎಡವಟ್ಟೂ ಮಾಡಿ
ದ್ದೀನಿ. ಒಗ್ಗರಣೆಗೆ ಶೇಂಗಾ ಕಾಳು ಹಾಕಿದರೆ ಇಷ್ಟು ರುಚಿಯಾಗಬೇಕಾದರೆ, ಇನ್ನು ಶೇಂಗಾವನ್ನು ಹುಡಿ ಮಾಡಿ ಹಾಕಿದರೆ ಎಷ್ಟು ರುಚಿಯಾಗಬಹುದು ಎಂದು ಒಂದು ಬಾರಿ ಅನಿಸಿತ್ತು. ಅದನ್ನು ಪ್ರಯೋಗ ಮಾಡಿಯೇ ಬಿಟ್ಟೆ. ಒಗ್ಗರಣೆಗೆ ಇಟ್ಟ ಎಣ್ಣೆಯು ಅರ್ಧಂಬರ್ಧ ಕುದಿಸಿತ್ತು. ಒಗ್ಗರಣೆ ರುಚಿ ಮಾತ್ರ ಕೆಟ್ಟದಾಗಿತ್ತು. ಆಗ ಅಡುಗೆ ಬಗ್ಗೆ ನನ್ನ ಆಸಕ್ತಿಯನ್ನು ನೋಡಿ ಅಮ್ಮನೇ ನನಗೇ ಯಾವ ಯಾವ ಅಡುಗೆ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟರು.

ಹೊಸರುಚಿ ಪ್ರಯೋಗ ಮಾಡುತ್ತಿರುತ್ತೇನೆ. ಉತ್ತರ ಭಾರತದ ಅಡುಗೆ ಇಷ್ಟ. ಇತ್ತೀಚೆಗೆ ಬಟರ್‌ ನಾನ್‌ ಟ್ರೈ ಮಾಡಿದ್ದೆ. ಚೆನ್ನಾಗೇ ಬಂದಿತ್ತು.

ಎಷ್ಟು ತಿಂತೀನೋ, ಅಷ್ಟೇ ವರ್ಕೌಟ್‌ ಮಾಡುತ್ತೇನೆ. ಬೆಲ್ಲದಿಂದ ಮಾಡಿರುವ ಸಿಹಿಗಳನ್ನೇ ತಿನ್ನೋದು. ಪ್ರತಿದಿನ ನಾನು ಬೆಳಿಗ್ಗೆ ಎದ್ದ ತಕ್ಷಣ ಎಳನೀರು ಅಥವಾ ಬೀಟ್‌ರೂಟ್‌ ಕ್ಯಾರೆಟ್‌ ಜ್ಯೂಸ್‌ ಕುಡಿಯುತ್ತೇನೆ. ಎಂಟೂವರೆಗೆ ಒಂದು ಬೌಲ್‌ ಓಟ್ಸ್‌ ತಿನ್ನುತ್ತೇನೆ. ಶೂಟಿಂಗ್‌ ಸಮಯದಲ್ಲಿ ಒಂದು ಬೌಲ್‌ ಪಪ್ಪಾಯ ಅಥವಾ ಹಣ್ಣುಗಳನ್ನು ತಿನ್ನುವೆ. ಮಧ್ಯಾಹ್ನ ಹೊಟ್ಟೆಗೆ ಮೋಸ ಮಾಡಲ್ಲ. ಏನೂ ಸಿಗುತ್ತೋ ಅದನ್ನೇ ತಿನ್ನುವೆ. ಸಂಜೆ 1 ಹಸಿ ಸೌತೆಕಾಯಿ ಅಥವಾ ಕ್ಯಾರೆಟ್‌ ತಿನ್ನುತ್ತೇನೆ. ರಾತ್ರಿ 2 ಚಪಾತಿ. ಇದು ನನ್ನ ದಿನದ ಡಯೆಟ್‌.

ಶೂಟಿಂಗ್‌ಗೆ ಮನೆಯಡುಗೆ ತೆಗೆದುಕೊಂಡು ಹೋಗುವೆ. ಬೆಳಿಗ್ಗೆ ಬೇಗ ಶೂಟಿಂಗ್‌ ಇದ್ದಾಗ, ಅಮ್ಮ ಓಟ್ಸ್‌ ಮಾಡಿಕೊಟ್ಟರೆ, ಹಣ್ಣುಗಳನ್ನು ಕಟ್‌ ಮಾಡಿ ಬಾಕ್ಸಿಗೆ ಹಾಕಿಕೊಳ್ಳುವೆ. ಲೇಟಾಗಿ ಅಥವಾ ಮನೆ ಪಕ್ಕನೇ ಇದ್ರೆ ನಾನೇ ಮಾಡ್ಕೊಂಡು ಬಾಕ್ಸಿಗೆ ಹಾಕಿಕೊಂಡು ಹೋಗುತ್ತೇನೆ.

ಮದುವೆಯಾದ್ಮೇಲೂ ನಾನೇ ಅಡುಗೆ ಮಾಡುತ್ತೇನೆ. ನನ್ನ ಹುಡುಗನಿಗೆ ಅಡುಗೆ ಗೊತ್ತಿರಬೇಕು ಎಂಬ ಕಂಡೀಷನ್‌ ನನ್ನದಲ್ಲ. ನನ್ನ ಅಡುಗೆಯನ್ನು ಹೊಗಳಿಕೊಂಡು ತಿಂದರೆ ಸಾಕು.

ಗಾರ್ಗೆ

ಬೇಕಾಗುವ ಸಾಮಗ್ರಿಗಳು: ಅರ್ಧ ಕುಂಬಳಕಾಯಿ, ಉಂಡೆ ಬೆಲ್ಲ, ಗೋಧಿ ಹಿಟ್ಟು, ಚಿಕಿಕೆ ಸೋಡಾ, ಉಪ್ಪು, ಅರಿಶಿನ, ಏಲಕ್ಕಿ ಪುಡಿ

ಮಾಡುವ ವಿಧಾನ: ಕುಂಬಳಕಾಯಿಯ ಸಿಪ್ಪೆ ಸುಲಿದು, ಬೀಜ ತೆಗೆದು, ಅದರ ತಿರುಳನ್ನು 2 ಇಂಚಿನಷ್ಟು ದೊಡ್ಡಾದಾಗಿ ಕತ್ತರಿಸಿಕೊಂಡು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿಬೇಯಿಸಕೊಳ್ಳಬೇಕು. ಅದು ಹದವಾಗಿ ಬೇಯಬೇಕು. ನಂತರ ಅದಕ್ಕೆ ಉಂಡೆಬೆಲ್ಲ ಜಜ್ಜಿ ಹಾಕಿ, ಚೆನ್ನಾಗಿ ಕುದಿಸಬೇಕು. ಅದರ ನಿರು ಆವಿಯಾಗಿ, ಹಿಟ್ಟಿನ ಹದಕ್ಕೆ ಬರಬೇಕು. ನಂತರ ಆ ಹಿಟ್ಟನ್ನು ಕೆಳಗಿಳಿಸಿ ಅದಕ್ಕೆ ಗೋಧಿಹಿಟ್ಟು, ಚಿಟಿಕೆ ಸೋಡಾ, ಉಪ್ಪು, ಅರಿಶಿನ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ,4 ಗಂಟೆ ಇಡಬೇಕು. ಬಳಿಕ ಹಿಟ್ಟನ್ನುತೂತಿನ ವಡೆಯಂತೆ ಲಟ್ಟಿಸಬೇಕು. ನಂತರ ಎಣ್ಣೆಗೆ ಹಾಕಿದರೆ ಕರಿದರೆ ರುಚಿಯಾದ ಗಾರ್ಗೆ ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT