ಬುಧವಾರ, ಏಪ್ರಿಲ್ 21, 2021
23 °C

ಪೌಷ್ಟಿಕಾಂಶ ಎಷ್ಟು ಪೂರಕ?

ಪ್ರದೀಪ ಟಿ.ಕೆ Updated:

ಅಕ್ಷರ ಗಾತ್ರ : | |

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪೋಷಕಾಂಶಗಳ ಮಹತ್ವವೇನು?

ಕ್ಯಾನ್ಸರ್ ಚಿಕಿತ್ಸೆಗಾಗಿ ದೇಹವನ್ನು ಸಿದ್ಧಗೊಳಿಸಬೇಕಾಗುತ್ತದೆ. ಚಿಕಿತ್ಸೆಗೆ ಮುನ್ನ, ಚಿಕಿತ್ಸೆ ವೇಳೆ ಮತ್ತು ಚಿಕಿತ್ಸೆ ನಂತರದ ಚೇತರಿಕೆ ಹಂತಗಳಲ್ಲಿ ಇದರ ಅಗತ್ಯವಿರುತ್ತದೆ. ಎಲ್ಲ ಮೂರು ಹಂತಗಳಲ್ಲಿ ಬೇರೆ ಬೇರೆ ರೀತಿಯ ಪೋಷಕಾಂಶ, ಆರೈಕೆಯ ಅಗತ್ಯವಿರುತ್ತದೆ. ಚಿಕಿತ್ಸೆ ಸಂದರ್ಭ ಮತ್ತು ನಂತರ ರೋಗಿಯು ಪೋಷಕಾಂಶ ಮತ್ತು ಆಹಾರದಲ್ಲಿ ಸಮತೋಲನ ಉಳಿಸಿಕೊಂಡು ಹೋಗಬೇಕಾಗುತ್ತದೆ. ಇದಕ್ಕೆ ಪರಿಣಾಮಕಾರಿ ಆರೋಗ್ಯಕರ ಆಹಾರ ಪದಾರ್ಥಗಳ ಅವಶ್ಯಕತೆ ಇರುತ್ತದೆ.

* ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕಷಾಯ ಸಹಕಾರಿಯೇ?

ಹೌದು, ಯಾವುದೇ ರೀತಿಯ ಕ್ಯಾನ್ಸರ್‌ಗೆ ಪಾರಿಜಾತ, ಅರಳಿ ಹಾಗೂ ಸೀಬೆ ಎಲೆಯಿಂದ ತಯಾರಿಸಿದ ಕಷಾಯ ಒಳ್ಳೆಯದು. ಮೊದಲ ವಾರ ಪಾರಿಜಾತ, ಎರಡನೇ ವಾರ ಅರಳಿ ಹಾಗೂ ಮೂರನೇ ವಾರ ಸೀಬೆ ಎಲೆಯ ಕಷಾಯವನ್ನು ನಿಯಮಿತವಾಗಿ ಮೂರು– ನಾಲ್ಕು ತಿಂಗಳು ಮುಂಜಾನೆ, ಸಂಜೆ ವೇಳೆ ಸೇವಿಸಬೇಕು. ವಾರಕ್ಕೊಮ್ಮೆ ಎಳ್ಳುಂಡೆಯೂ ಕಾಯಂ ಆಹಾರವಾಗಿರಲಿ.

* ಬಾಯಿ ಕ್ಯಾನ್ಸರ್ ಚಿಕಿತ್ಸೆಗೆ ಯಾವ ಆಹಾರ ಪೂರಕ? 

ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ನವಣೆ ಮತ್ತು ಸಾಮೆ ಅಕ್ಕಿಯಿಂದ ತಯಾರಿಸಿದ ಆಹಾರವನ್ನು ಬಳಸಬೇಕು. ಜತೆಗೆ ಪುದಿನ ಹಾಗೂ ಶುಂಠಿ ಕಷಾಯವನ್ನು ಪ್ರತಿದಿನ ಮಧ್ಯಾಹ್ನ ಸೇವಿಸಬೇಕು. ಬಾಯಿ ಕ್ಯಾನ್ಸರ್‌ಗೆ ತಂಬಾಕು ಪದಾರ್ಥಗಳ ಸೇವನೆಯೇ ಪ್ರಮುಖ ಕಾರಣವಾಗಿರುವುದರಿಂದ ಧೂಮಪಾನ, ಮದ್ಯಪಾನ, ಗುಟ್ಕಾ ಮುಂತಾದವುಗಳಿಂದ ದೂರವಿರಬೇಕು.

* ಥೈರಾಯ್ಡ್‌ ಹಾಗೂ ಜಠರದ ಕ್ಯಾನ್ಸರ್‌ಗೆ ಯಾವ ಆಹಾರ ಮದ್ದು?

ಥೈರಾಯ್ಡ್‌ ಇಲ್ಲವೇ ಮೇದೊಜೀರಕ (ಪ್ಯಾಂಕ್ರಿಯಾಸ್) ಕ್ಯಾನ್ಸರ್‌ಗೆ ತುತ್ತಾಗಿರುವವರು ಅತಿ ಮುಖ್ಯವಾಗಿ ಸಾಮೆ, ಹಾರಕದಿಂದ ತಯಾರಿಸಿದ ಆಹಾರಗಳನ್ನು ಬಳಸಬೇಕು. ಚೆಂಡು ಹೂವು ಹಾಗೂ ಹುಣಸೇ ಚಿಗುರಿನಿಂದ ಮಾಡಿದ ಕಷಾಯವನ್ನು ನಿಯಮಿತವಾಗಿ ಸೇವಿಸಬೇಕು. ಹುಣಸೇ ಚಿಗುರು ಎಲ್ಲ ಕಾಲದಲ್ಲೂ ಸಿಗುವುದಿಲ್ಲ. ಆಗ ನುಗ್ಗೆ ಹೂವಿನ ಕಷಾಯ ಪರಿಣಾಮಕಾರಿ. ಜಠರದ ಕ್ಯಾನ್ಸರ್‌ ಇರುವವರು ಕೊರಲೆ ಮತ್ತು ನವಣೆ ಪ್ರಮುಖವಾಗಿ ಬಳಸಬೇಕು. ಚರ್ಮದ ಕ್ಯಾನ್ಸರ್‌ಗೆ ಇವುಗಳಿಂದ ತಯಾರಿಸಿದ ಊಟ ಸೂಕ್ತ. ಬಾಳೆದಿಂಡಿನ ಹಾಗೂ ಮೆಂತ್ಯದ ಕಷಾಯಗಳು ದೇಹಕ್ಕೆ ಶಕ್ತಿ ತುಂಬುತ್ತವೆ. ಹಸಿ ಈರುಳ್ಳಿ ಮತ್ತು ಲೋಳೆಸರದ ಕಷಾಯದ ನಿಯಮಿತ ಸೇವನೆ ಇದಕ್ಕೆ ರಾಮಬಾಣ.

* ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಧಾನ್ಯಗಳ ಪ್ರಾಮುಖ್ಯತೆಯೇನು?

ಯಾವುದಾದರೂ ಕಾಳನ್ನು ಮೊಳಕೆ ಕಟ್ಟಿ ನಿತ್ಯ ಒಂದು ಹಿಡಿಯಷ್ಟು ತಿನ್ನಬೇಕು. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ನಾರಿನಾಂಶ, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳನ್ನು ಒಳಗೊಂಡಿರುತ್ತವೆ. ಇವುಗಳ ಸೇವನೆ ಚಿಕಿತ್ಸೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುತ್ತದೆ. ಅಲ್ಲದೆ ದ್ವಿದಳ ಧಾನ್ಯಗಳ ನಿರಂತರ ಸೇವನೆ ಅವಶ್ಯಕ. 

* ಪೋಷಕಾಂಶ ಕೊರತೆ ನೀಗುವಲ್ಲಿ ಯಾವೆಲ್ಲ ತರಕಾರಿ, ಹಣ್ಣು ಉಪಯುಕ್ತ?

ತಾಜಾ ತರಕಾರಿ ಮತ್ತು ಹಣ್ಣುಗಳನ್ನು ದಿನನಿತ್ಯದ ಆಹಾರ ಕ್ರಮದಲ್ಲಿ ಸೇವಿಸುವುದರ ಮೂಲಕ ಶರೀರಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಮತ್ತು ವಿಟಮಿನ್‌ಗಳನ್ನು ಒದಗಿಸಬಹುದು. ಇವು ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಿಸುವುವಲ್ಲದೇ ಸೋಂಕು ಮತ್ತು ಕ್ಯಾನ್ಸರ್‌ ವಿರುದ್ಧ ಹೋರಾಡಲು ಸಹಕಾರಿಯಾಗಿವೆ. ದಾಳಿಂಬೆ ಹಣ್ಣಿನಲ್ಲಿರುವ ಫಾಲಿಫಿಲೋನ್, ಐಸೋ ಫ್ಲವೋನ್ ಮತ್ತು ಎಲೆಜಿಕ್ ಆಮ್ಲ ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿ. ಜೊತೆಗೆ ನೇರಳೆ, ಕಿತ್ತಳೆ, ಸೀಬೆ, ಸೇಬು, ದ್ರಾಕ್ಷಿ, ಪಪ್ಪಾಯವನ್ನು ಸೇವಿಸುವುದು ಒಳಿತು.

ಈರುಳ್ಳಿ, ಬೆಳ್ಳುಳ್ಳಿಯಲ್ಲಿರುವ ಆ್ಯಂಟಿಆ್ಯಕ್ಸಿಡೆಂಟ್‌ಗಳು ಡಿಎನ್‌ಎ ಕೋಶಗಳಿಗೆ ಹಾನಿಯುಂಟು ಮಾಡುವ ಫ್ರೀ ರ‍್ಯಾಡಿಕಲ್ ಅನ್ನು ತಡೆಯುತ್ತವೆ. ಎಲೆಕೋಸಿನಲ್ಲಿರುವ ಸಲ್ಫೋರಫನೆ ಎಂಬ ಅಂಶ ಕ್ಯಾನ್ಸರ್‌ ತಡೆಗೆ ಸಹಕಾರಿ. ಇದರಲ್ಲಿ ನೀರಿನಾಂಶವಿದ್ದು ಕರುಳು ಮತ್ತು ಹೊಟ್ಟೆ ಕ್ಯಾನ್ಸರ್ ಬೆಳೆಯದಂತೆ ತಡೆಯುತ್ತದೆ. ಹಸಿರು ಬಟಾಣಿಯಲ್ಲಿ ಪೊಟ್ಯಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‌ಗಳು ಯಥೇಚ್ಛವಾಗಿದ್ದು ಜಠರದ ಕ್ಯಾನ್ಸರ್‌ ನಿವಾರಣೆಗೂ ಇದು ಸಹಕಾರಿ.

ಪಾಲಕ್ ಸೊಪ್ಪಿನಲ್ಲಿ ಪೊಟ್ಯಾಶಿಯಂ, ಸತು, ವಿಟಮಿನ್ ಕೆ, ಇ ಮತ್ತು ಎ ಅಧಿಕ ಪ್ರಮಾಣದಲ್ಲಿದ್ದು ಕ್ಯಾನ್ಸರ್‌ ನಿಯಂತ್ರಿಸಲು ಸ್ವಾಭಾವಿಕವಾಗಿ ನೆರವಾಗುತ್ತವೆ. ಬೀಟ್‌ರೂಟ್ ರಕ್ತಪರಿಚಲನೆ ಸರಾಗಗೊಳಿಸುವುದರ ಜೊತೆಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡುವ ಮೂಲಕ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿ. 

* ಕ್ಯಾನ್ಸರ್‌ ಇರುವವರಿಗೆ ಹಾಲು ಮತ್ತಿತರ ಕೆಲವು ಆಹಾರಗಳು ನಿಷಿದ್ಧ ಎನ್ನುವ ಮಾತಿದೆ. ಇದು ನಿಜವೇ?

ಇಲ್ಲ, ತಾಜಾ ಮತ್ತು ಪೋಷಕಾಂಶಯುಕ್ತವಾದ ಎಲ್ಲ ಆಹಾರಗಳನ್ನು ಸೇವಿಸಬಹುದು. ಹಾಲಿನಲ್ಲಿ ಕ್ಯಾಲ್ಸಿಯಂ ಅಂಶವಿರುವುದರಿಂದ ಇದು ಮೂಳೆಗಳು ಬಲಗೊಳ್ಳಲು ನೆರವಾಗುತ್ತದೆ. ಹೀಗಾಗಿ ಯಾವುದೇ ಸಮತೋಲಿತ ಆಹಾರ ಸೇವಿಸಬಹುದು. ಪಥ್ಯ ಮಾಡುವ ಅವಶ್ಯಕತೆ ಇರುವುದಿಲ್ಲ.

**

ನಡಿಗೆ, ಪ್ರಾಣಾಯಾಮ ಮಾಡಿ

ಕಿಮೋಥೆರಪಿ ಪಡೆಯುತ್ತಿರುವವರು/ಪಡೆದವರು ನೆಗಡಿ, ಜ್ವರದಂತಹ ಸೋಂಕು ಇರುವವರಿಂದ ದೂರ ಇರಬೇಕು. ಏಕೆಂದರೆ ಅದು ಇವರಿಗೂ ತಗಲಿ ರೋಗ ಉಲ್ಭಣವಾಗುವ ಸಾಧ್ಯತೆ ಇರುತ್ತದೆ. ದೇಹದಲ್ಲಿನ ರಕ್ತ ಶುದ್ಧೀಕರಣಕ್ಕೆ ಪ್ರತಿದಿನ ಒಂದೂವರೆ ತಾಸು ಕಾಲ್ನಡಿಗೆ ಅವಶ್ಯಕ. ನಿತ್ಯ ಮುಂಜಾನೆ 15 ನಿಮಿಷ ಧ್ಯಾನ, ಪ್ರಾಣಾಯಾಮಕ್ಕೆ ಮೀಸಲಿಡಿ. ಕ್ಯಾನ್ಸರ್ ಅನ್ನು ಪ್ರಾರಂಭದ ಹಂತದಲ್ಲೇ ಗುರುತಿಸಿದರೆ ಅದನ್ನು ಸಂಪೂರ್ಣ ಗುಣಪಡಿಸಬಹುದು. ಕಾಯಿಲೆಯ ಸಂದರ್ಭದಲ್ಲಿ ಮಾನಸಿಕ ಖಿನ್ನತೆ ಆವರಿಸುವ ಸಾಧ್ಯತೆ ಇರುತ್ತದೆ. ಮೊದಲು ಅದರಿಂದ ಹೊರಬನ್ನಿ. ಸ್ವಾನುಕಂಪದ ಕೂಪಕ್ಕೆ ಬಲಿಯಾಗದೆ, ಸದಾ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ರಾಸಾಯನಿಕ ರಹಿತ ತರಕಾರಿ, ಹಣ್ಣುಗಳನ್ನು ಯಥೇಚ್ಚವಾಗಿ ತಿನ್ನಿ. ಪ್ರತಿವರ್ಷ ಕಡ್ಡಾಯ ಪರೀಕ್ಷೆ ಮಾಡಿಸಿಕೊಳ್ಳಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು