ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಬೊಂಬಾಟ್ ಮಿರ್ಚಿ ಮಸಾಲ

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ಈ ‘ದಾವಣಗೆರೆ ಬೊಂಬಾಟ್ ಮಿರ್ಚಿ ಮಸಾಲ’ದ ಮುಂದೆ ನಿಂತರೆ ನಮ್ಮ ನ್ಯೂ ಇಯರ್ ರೆಸಲ್ಯುಶನ್ಸ್ ಬಿಸಿ ಬಿಸಿ ಮಿರ್ಚಿ ಬೋಂಡಾದ ಎದುರು ಶರಣಾಗಿ ಬಿಡುತ್ತದೆ. ಇಲ್ಲಿನ ಮಸಾಲ ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ ತಿಂದವರಿಗೇ ಗೊತ್ತು ಬಿಡಿ ಅದರ ರುಚಿ.

ಅತಿಯಾದ ಖಾರವಲ್ಲದ, ತೆಳ್ಳನೆ ಸಿಪ್ಪೆಯ, ಮೆಣಸಿನಕಾಯಿ ದಾವಣಗೆರೆಯಲ್ಲಿ ಮಾತ್ರ ಸಿಗುವಂಥದು. ಹಾಗೆ ದಾವಣಗೆರೆಯಿಂದಲೇ ನಿತ್ಯವೂ ಮೆಣಸಿನಕಾಯಿ ತರಿಸಿ, ನಗರದ ಜನಕ್ಕೆ ದಾವಣಗೆರೆಯ ಬೋಂಡಾ ರುಚಿಯನ್ನು ರಾಜರಾಜೇಶ್ವರಿ ನಗರದ ಶಿವಣ್ಣ ಕುಟುಂಬ ಪರಿಚಯಿಸುತ್ತಿದೆ. ಬಿಇ ಓದಿರುವ ಮಗನೂ ಶಿವಣ್ಣನವರ ಸಹಾಯಕ್ಕೆ ನಿಂತಿರುವುದು ಶ್ಲಾಘನೀಯ!

ಸಂಜೆ ನಾಲ್ಕು ಗಂಟೆಯಾಗುತ್ತಿದಂತೆ, ಶಿವಣ್ಣನವರು ಬಾಣಲೆಗೆ ಎಣ್ಣೆ ಸುರಿದು, ಹದವಾಗಿ ಕಡಲೇ ಹಿಟ್ಟು ಕಲಿಸಲು ಶುರು ಮಾಡುತ್ತಾರೆ. ಬಿಸಿಯಾದ ಎಣ್ಣೆಯಲ್ಲಿ ಗರಿಗರಿಯಾದ ಚಕ್ಕುಲಿ, ಸೇವು-ಖಾರ, ಗುಳಿಗೆಗಳು, ಒಂದಾದ ಮೇಲೆ ಒಂದರಂತೆ ರೆಡಿಯಾಗಿ ಗಾಜಿನ ಪೆಟ್ಟಿಗೆ ಏರಿ ಕೂತುಬಿಡುತ್ತವೆ. ನಂತರದಲ್ಲಿ, ಮಸಾಲ ವಡ, ಆಲೂ ಬೋಂಡಾ, ಕ್ಯಾಪ್ಸಿಕಂ ಬೋಂಡಾ, ದಾವಣಗೆರೆಯ ಮಿರ್ಚಿ ಬೋಂಡಾದ ಜೊತೆಗೆ ಸಿದ್ದವಾಗಿ ಬಿಡುತ್ತವೆ. ಅವುಗಳಿಗೆ ಸಾಥ್ ಕೊಡಲು ನರ್ಗೀಸ್ ಮಂಡಕ್ಕಿ, ಮಸಾಲ ಮಂಡಕ್ಕಿಗಳು ದೊಡ್ಡ ದೊಡ್ಡ ಗಾಜಿನ ಭರಣಿ ಹೊಕ್ಕು ತಿಂಡಿ ಪೋತರನ್ನು ಕೂಗಿ ಕರೆಯುತ್ತವೆ. ಇವೆಲ್ಲ ಸಂಜೆ ತಿಂಡಿಗಳು.

ಕೆಂಪು ಚಟ್ನಿ ಮತ್ತು ಕಾಯಿ ಚಟ್ನಿಯೊಂದಿಗೆ ಬಿಸಿ ಬಿಸಿಯಾದ ಪಡ್ದು, ಇಲ್ಲಿನ ಮತ್ತೊಂದು ಆಕರ್ಷಣೆ. ನಿಮಗಿಷ್ಟವಾದ ಎರಡು ಮೂರು ತಿಂಡಿ ತಿಂದರೂ, ಒಬ್ಬರಿಗೆ ನೂರು ರೂಪಾಯಿ ದಾಟಲ್ಲ.

ಇಲ್ಲಿ ಸಿಗುವ, ನರ್ಗೀಸ್ ಮಂಡಕ್ಕಿ ಮೇಲೆ, ಸ್ವಲ್ಪ ಬೆಳ್ಳುಳ್ಳಿ ಖಾರ, ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಕೊತ್ತಂಬರಿ ಸೊಪ್ಪು ಉದುರಿಸಿ ಎರಡು ಮಿರ್ಚಿ ಇಟ್ಟು ಕೊಡುವ ಮಸಾಲ ಮಂಡಕ್ಕಿ ಸವಿಯುವುದೇ ಒಂದು ಮಜ. ಈ‘ದಾವಣಗೆರೆ ಬೊಂಬಾಟ್ ಮಿರ್ಚಿ ಮಸಾಲ’ ಡಬಲ್ ರೋಡ್, ಬಿಇಎಂಎಲ್ ಲೇಔಟ್, 5ನೇ ಸ್ಟೇಜ್, ರಾಜರಾಜೇಶ್ವರಿ ನಗರದಲ್ಲಿದೆ. ಸಂಜೆ ನಾಲ್ಕರಿಂದ ಹತ್ತು ಗಂಟೆತನಕ ತೆರೆದಿರುತ್ತದೆ.

-ಗಾಯತ್ರಿ ರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT