ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಳೆ ಮಕ್ಕಳಿಗೆ ಬಗೆಬಗೆ ತಿನಿಸು

Last Updated 27 ಮೇ 2022, 19:30 IST
ಅಕ್ಷರ ಗಾತ್ರ

ಜನಿಸಿದ ಆರು ತಿಂಗಳ ನಂತರ ಮಗುವಿಗೆ ಮೇಲಾಹಾರ ನೀಡಲು ಆರಂಭಿಸುವಾಗ ಏನು ಕೊಡಬೇಕು, ಏನು ಕೊಡಬಾರದು ಎಂಬ ಬಗ್ಗೆ ಕೆಲವು ಅಮ್ಮಂದಿರಿಗೆ ಗೊಂದಲವಿರುತ್ತದೆ. ಅಲ್ಲದೆ ಮಗುವಿನ ಬೆಳವಣಿಗೆಗೆ ಬೇಕಾದ ಪೂರಕ ಪೋಷಕಾಂಶಗಳು ಕೇವಲ ತಾಯಿಯ ಎದೆ ಹಾಲಿನಿಂದಲೇ ಸಿಗುವುದಿಲ್ಲ. ಹಾಗಾಗಿ ಯಾವ ಪದಾರ್ಥಗಳಿಂದ ಮಗುವಿಗೆ ಆಹಾರ ತಯಾರಿಸಬಹುದು? ಈ ಕುರಿತ ಮಾಹಿತಿ ಹಾಗೂ ಕೆಲವು ರೆಸಿಪಿಗಳು ಇಲ್ಲಿದೆ

ರಾಗಿ ಸರಿ

ಬೇಕಾಗುವ ಸಾಮಗ್ರಿಗಳು: ರಾಗಿ 1ಕೆ.ಜಿ, ಗೋಧಿ ಒಂದು ಬಟ್ಟಲು, ಅಕ್ಕಿ ಒಂದು ಬಟ್ಟಲು, ಕಡಲೆಬೇಳೆ, ಉದ್ದಿನಬೇಳೆ, ಹೆಸರುಬೇಳೆ, ಬಟಾಣಿ, ಮೆಂತ್ಯೆ, ಸೋಯಾಬೀನ್ ತಲಾ 2 ಚಮಚ, ಒಂದು ಕರಿಮೆಣಸಿನ ಕಾಳು, ಲವಂಗ ಒಂದು, ಒಂದು ಇಂಚು ಜಾಯಿಕಾಯಿ, ಒಂದು ಇಂಚು ಬಜೆ ಬೇರು.

ಮಾಡುವ ವಿಧಾನ: ರಾಗಿ ಮೊಳಕೆ ಬರಿಸಿ ನೆರಳಲ್ಲಿ ಒಣಗಿಸಿ, ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಉಳಿದ ಎಲ್ಲಾ ಸಾಮಗ್ರಿಗಳನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಎಲ್ಲವನ್ನು ಒಟ್ಟಿಗೆ ಸೇರಿಸಿ ಪುಡಿಮಾಡಿ, ತೆಳುವಾದ ಬಟ್ಟೆಯಿಂದ ಜರಡಿ ಹಿಡಿದಿಟ್ಟುಕೊಳ್ಳಬೇಕು. ಒಂದು ಚಮಚ ಪುಡಿಗೆ ನೀರು ಮಿಶ್ರಣ ಮಾಡಿ ಕುದಿಸಿಕೊಳ್ಳಬೇಕು.

ಮೊದಲ ಬಾರಿ ತಿನ್ನಿಸುವಾಗ ಗಂಜಿಯ ಹದಕ್ಕೆ ರಾಗಿ ಸರಿ ಮಾಡಿಕೊಳ್ಳಬೇಕು. ಇದನ್ನು ಸ್ವಲ್ಪ ಸ್ವಲ್ಪವೇ ಮಗುವಿಗೆ ತಿನ್ನಿಸಬೇಕು. ಇದು ಅಭ್ಯಾಸವಾದ ನಂತರ ಪ್ರತಿ ತಿಂಗಳೂ ಒಂದೊಂದು ಚಮಚ ಹೆಚ್ಚಿಸುತ್ತಾ ಗಟ್ಟಿ ಹದ ಬರುವಂತೆ ಮಾಡಿಕೊಳ್ಳಬಹುದು. ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ತಿನ್ನಿಸಬಹುದು. ರುಚಿಗೆ ಕಲ್ಲು ಸಕ್ಕರೆ ಅಥವ ಬೆಲ್ಲ ಸೇರಿಸಬಹುದು. ಒಂದು ವರ್ಷದ ನಂತರ ಒಂದು ಚಮಚ ಒಣಹಣ್ಣುಗಳು, ನಟ್ಸ್‌ ಪುಡಿ ಸೇರಿಸಿ ತಿನ್ನಿಸಬಹುದು.

ಕಿಚಡಿ

ಬೇಕಾಗುವ ಸಾಮಗ್ರಿಗಳು: ಒಂದು ಚಮಚ ಅಕ್ಕಿ, ಒಂದು ಚಮಚ ಬೇಳೆ, ಒಂದು ಚಮಚ ಹೆಸರು ಬೇಳೆ, ಸ್ವಲ್ಪ ಆಲೂಗೆಡ್ಡೆ, ಬೀಟ್‌ರೂಟ್, ಕ್ಯಾರೆಟ್ ಹಾಗೂ ಪಾಲಕ್, ನುಗ್ಗೆಸೊಪ್ಪು

ಮಾಡುವ ವಿಧಾನ: ಅಕ್ಕಿ, ಬೇಳೆಗಳೊಂದಿಗೆ ತರಕಾರಿ ಸೊಪ್ಪು ಸೇರಿಸಿ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ತರಿತರಿಯಾಗಿ ಬ್ಲೆಂಡ್‌ ಮಾಡಿಕೊಳ್ಳಬೇಕು. ಕೈಯಲ್ಲೇ ಚೆನ್ನಾಗಿ ಹಿಚುಕಿ ತಿನ್ನಿಸಬಹುದು. ಮಗುವಿಗೆ 7 ತಿಂಗಳಾದ ನಂತರ ಈ ಕಿಚಡಿ ನೀಡಬಹುದು. ಈ ಕಿಚಡಿಗೆ ಹೆಚ್ಚು ಉಪ್ಪು ಸೇರಿಸಬೇಡಿ.

ತರಕಾರಿ ಹಾಗೂ ಹಣ್ಣಿನ ಪ್ಯೂರಿ

ಗೆಣಸು, ಆಲೂಗೆಡ್ಡೆ, ಕ್ಯಾರೆಟ್‌, ಬೀಟ್‌ರೂಟ್‌, ಕುಂಬಳಕಾಯಿ ಹಾಗೂ ಬಾಳೆಹಣ್ಣು, ಪಪ್ಪಾಯ, ಸಪೋಟಾ, ದಾಳಿಂಬೆ, ಸೀಬೆಹಣ್ಣು, ಸೇಬು, ಬಟರ್‌ಫ್ರೂಟ್‌ನಲ್ಲಿ ಹೆಚ್ಚು ಪೋಷಕಾಂಶವಿರುವುದರಿಂದ ಮಕ್ಕಳಿಗೆ ನೀಡುವುದು ಒಳ್ಳೆಯದು. ಒಂದು ಬಾರಿ ಒಂದೇ ಹಣ್ಣಿನ ಅಥವಾ ತರಕಾರಿಯ ಪ್ಯೂರಿ ಮಾಡಿಕೊಡಬೇಕು.

ಹಣ್ಣುಗಳನ್ನು ಹಬೆಯಲ್ಲಿ ಬೇಯಿಸಿ ಸ್ಮ್ಯಾಶ್‌ ಮಾಡಿ ನೇರವಾಗಿ ಮಗುವಿಗೆ ನೀಡಬಹುದು. ಪ್ಯೂರಿ ಮಾಡಲು ಹಾಲು ಬಳಸಬಾರದು. ತೀರ ಗಟ್ಟಿ ಎನಿಸಿದರೆ ಸ್ವಲ್ಪ ಬಿಸಿ ನೀರು ಸೇರಿಸಿಕೊಳ್ಳಬಹುದು. ತರಕಾರಿಗಳನ್ನು ಕೂಡ ಇದೇ ರೀತಿ ಹಬೆಯಲ್ಲಿ ಬೇಯಿಸಿ ಸ್ಮ್ಯಾಶ್‌ ಮಾಡಿ ಕೊಡಬಹುದು.

ಒಣಹಣ್ಣುಗಳ ಪ್ಯೂರಿ

ಎಂಟು ತಿಂಗಳ ನಂತರ ಒಣಹಣ್ಣುಗಳ ಪ್ಯೂರಿ ನೀಡಬಹುದು. ಬಾದಾಮಿ, ಗೋಡಂಬಿ, ವಾಲ್‌ನಟ್‌, ಪಿಸ್ತಾ, ಕಡಲೇಕಾಯಿ, ಕುಂಬಳಕಾಯಿ ಬೀಜ, ಖರ್ಜೂರ, ಅಂಜೂರ, ಜರ್ದಾಳು (ಏಪ್ರಿಕಾಟ್), ಒಣ ದ್ರಾಕ್ಷಿಯನ್ನು ರಾತ್ರಿಯೇ ನೆನೆಹಾಕಿ ಬೆಳಿಗ್ಗೆ ಹಬ್ಬೆಯಲ್ಲಿ ಬೇಯಿಸಿ, ರುಬ್ಬಿ ಪೇಸ್ಟ್‌ ಮಾಡಿ ತಿನ್ನಿಸಬಹುದು. ಇದಕ್ಕೆ ಹಣ್ಣುಗಳನ್ನು ಸೇರಿಕೊಡಬಹುದು. ಹೆಚ್ಚು ಪೋಷಕಾಂಶವಿರುವ ಕಾರಣ ಕೆಲವು ಮಕ್ಕಳಿಗೆ ಜೀರ್ಣವಾಗುವುದಿಲ್ಲ. ಒಂದು ಚಮಚ ಪ್ಯೂರಿ ತಿನ್ನಿಸಲು ಆರಂಭಿಸಿ ನಂತರ ನಿಧಾನವಾಗಿ ಒಂದು ಬಟ್ಟಲವರೆಗೆ ಹೆಚ್ಚಿಸಿಕೊಳ್ಳಬಹುದು.

ಉಪ್ಪು, ಸಕ್ಕರೆ ತಪ್ಪಿಸಿ

ಎಳೆ ಮಕ್ಕಳಿಗೆ ಉಪ್ಪು ಸಕ್ಕರೆಯನ್ನು ಜೀರ್ಣಿಸಿಕೊಳ್ಳುಲು ಕಷ್ಟವಾಗುತ್ತೆ. ರುಚಿಗೆ ಎಂದು ನಾವು ಉಪ್ಪು ಅಥವಾ ಸಕ್ಕರೆ ಸೇರಿಸುವುದರಿಂದ ಮಕ್ಕಳ ಕಿಡ್ನಿಗೆ ಹೆಚ್ಚಿನ ಒತ್ತಡ ಬೀಳುತ್ತದೆ. ಎರಡು ವರ್ಷದವರೆಗೂ ಮಗುವಿನ ಅಂಗಾಂಗಗಳೂ ಅತಿ ಸೂಕ್ಷ್ಮವಾಗಿರುತ್ತವೆ. ಅದಕ್ಕೆ ಹೆಚ್ಚಿನ ಒತ್ತಡ ನೀಡಬಾರದು. ಸುಲಭವಾಗಿ ಜೀರ್ಣವಾಗುವ ಲಘು ಆಹಾರವನ್ನು ನೀಡಬೇಕು.

ಡಾ. ಅಶ್ವಿನಿ ಎಂ.ಜೆ., ಎಸ್‌ಡಿಎಂ ಆಯುರ್ವೇದ ಕಾಲೇಜಿನ ಶಾಲಾಖ್ಯ ತಂತ್ರ (ಇಎನ್‌ಟಿ) ವಿಭಾಗದ ಮುಖ್ಯಸ್ಥೆ, ಹಾಸನ

ಆರು ತಿಂಗಳವರೆಗೆ ತಾಯಿ ಹಾಲೇ ಅಮೃತ. ತಾಯಿ ಹಾಲು ಸಾಕಾಗದಿದ್ದರೆ ವೈದ್ಯರು ಸೂಚಿಸುವ ಫಾರ್ಮುಲಾ ಹಾಲು ಉಣಿಸಬಹುದು. ಆರು ತಿಂಗಳಿಗೆ ಮುಂಚೆ ಅನ್ನ ಅಥವಾ ಬೇರೆ ಆಹಾರ ಕೊಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ

–ಡಾ. ಅನಿಲ್ ಕುಮಾರ್, ಮಕ್ಕಳ ತಜ್ಞ, ಮಣಿಪಾಲ ಆಸ್ಪತ್ರೆ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT