ಬುಧವಾರ, ಸೆಪ್ಟೆಂಬರ್ 23, 2020
19 °C

ವಿಡಿಯೊ ಲೇಖನ: ಅಡಿಗರ ಹೊಸ ಅವತಾರ ‘ಪಾಕಶಾಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಡಿಗಾಸ್‌ ಹೋಟೆಲ್‌ ಸಾಮ್ರಾಜ್ಯ ಸ್ಥಾಪಿಸುವ ಮೂಲಕ ಹೋಟೆಲ್‌ ಉದ್ಯಮದಲ್ಲಿ ಹೊಸ ಸಾಧ್ಯತೆಗಳನ್ನು ಪರಿಚಯಿಸಿದ ವಾಸುದೇವ ಅಡಿಗ ಅವರು ಎರಡು ವರ್ಷಗಳ ಬ್ರೇಕ್‌ ನಂತರ ‘ಪಾಕಶಾಲ’ ಹೋಟೆಲ್‌ಗಳೊಂದಿಗೆ ಮರಳಿ ಬಂದಿದ್ದಾರೆ. ರುಚಿ,ಶುಚಿ,ಗುಣಮಟ್ಟ ಮತ್ತು ಸೇವೆ ಎಂಬ ಸಿದ್ಧಾಂತಗಳಿಗೆ ಈ ಬಾರಿ ಕಾರ್ಪೊರೇಟ್‌ ಸ್ಪರ್ಷ ನೀಡಿದ್ದಾರೆ. ಬೆಂಗಳೂರಿನ ಆಹಾರಪ್ರಿಯರಿಗೆ ಹೊಸರುಚಿ ಉಣಬಡಿಸುತ್ತಿರುವ ಅವರಿಗೆ ಹೋಟೆಲ್‌ ಉದ್ಯಮವನ್ನು  ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಕಲೆ ಕರಗತ. 22 ವರ್ಷಗಳ ಸುದೀರ್ಘ ಹೋಟೆಲ್‌ ಉದ್ಯಮದ ಪಯಣ,ಏಳು,ಬೀಳು ಮತ್ತು ಸವಾಲುಗಳ ಕುರಿತು ಅವರು‘ಮೆಟ್ರೊ’ಜತೆ ಲೋಕಾಭಿರಾಮವಾಗಿ ಹರಟೆ ಹೊಡೆದಿದ್ದಾರೆ.

***

ಶಂಕರಪುರಂನ ಬ್ರಾಹ್ಮಣರ ಕಾಫಿ ಬಾರ್‌ ಎಂಬ ಇಡ್ಲಿ ಹೋಟೆಲ್‌ನಿಂದ ಆರಂಭವಾದ ಕೆ.ಎನ್‌. ವಾಸುದೇವ ಅಡಿಗ ಅವರ ಬದುಕು ‘ಪಾಕಶಾಲ‘ ಸರಣಿ ಹೋಟೆಲ್‌ಗಳವರೆಗೆ ಬೆಳೆದು ಬಂದ ಕತೆಯೇ ರೋಚಕ. 

ಕುಂದಾಪುರ ಬಳಿಯ ಹಳ್ಳಿಯಿಂದ ಬೆಂಗಳೂರಿಗೆ ವಲಸೆ ಬಂದ ವಾಸುದೇವ್‌ ಅಡಿಗರ ತಂದೆ ನಾಗೇಶ್ವರ, ಎಂಟಿಆರ್ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದರು. 1965ರಲ್ಲಿ ಶಂಕರಪುರಂನಲ್ಲಿ ‘ಬ್ರಾಹ್ಮಣರ ಕಾಫಿ ಬಾರ್‌‘ ಎಂಬ ಪುಟ್ಟದಾದ ಸ್ವಂತ ಹೋಟೆಲ್‌ ಆರಂಭಿಸಿದರು. ಇದು ಆ ಕಾಲಕ್ಕೆ  ವಿದ್ಯಾರ್ಥಿಗಳ ಹ್ಯಾಂಗೌಟ್‌ ತಾಣವಾಗಿತ್ತು.

ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿ ಎಂ.ಎಸ್‌. ಮಾಡಲು ಅಮೆರಿಕಕ್ಕೆ ಹೊರಟು ನಿಂತ ವಾಸುದೇವ್‌ ಅವರು ಹೋಟೆಲ್‌ ಉದ್ಯಮಕ್ಕೆ ಎಂಟ್ರಿ ಕೊಟ್ಟಿದ್ದೇ ಆಕಸ್ಮಿಕ. ವೀಸಾ ಕೈತಪ್ಪಿದ ಕಾರಣ ಅನಿವಾರ್ಯವಾಗಿ ತಂದೆ ನಡೆಸುತ್ತಿದ್ದ ಹೋಟೆಲ್‌ ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತರು. ಅಲ್ಲಿಂದ ಆರಂಭವಾದ ಅವರ ಹೋಟೆಲ್‌ ನಂಟು ಮತ್ತೆಂದೂ ಬಿಡಲಿಲ್ಲ. 

ತಂದೆಯಿಂದ ಸಾಲ ಪಡೆದ ಹಣದಲ್ಲಿ ಬಸವನಗುಡಿಯಲ್ಲಿ ಎಸ್‌ಎಲ್‌ವಿ ಫಾಸ್ಟ್‌ಫುಡ್‌ ಹೋಟೆಲ್‌ ಆರಂಭಿಸಿದರು. ಅಲ್ಲಿ ಸಿಕ್ಕ ಯಶಸ್ಸಿನ ಫಲವೇ 1993ರಲ್ಲಿ ಗಾಂಧಿ ಬಜಾರ್‌ನಲ್ಲಿ ‘ವಾಸುದೇವ ಅಡಿಗಾಸ್‌’ ರೆಸ್ಟೋರೆಂಟ್‌ ಆರಂಭಕ್ಕೆ ನಾಂದಿ ಹಾಡಿತು. ಬೆಂಗಳೂರಿನಲ್ಲಿ 13 ಹೋಟೆಲ್‌ ತಲೆ ಎತ್ತಿದವು. 

‘90ರ ದಶಕದಲ್ಲಿ ಹೋಟೆಲ್‌ ಉದ್ಯಮಿ ಪ್ರಭಾಕರ್‌ ರಾವ್‌ ಬೆಂಗಳೂರಿಗೆ ‘ದರ್ಶಿನಿ’ ಹೋಟೆಲ್‌ ಸಂಸ್ಕೃತಿ ಪರಿಚಯಿಸಿದರು. ಆ ಪರಿಕಲ್ಪನೆ ಜನಪ್ರಿಯಗೊಳಿಸಿದ ಕೀರ್ತಿ ನನ್ನದು‘ ಎನ್ನುವುದು ಅಡಿಗರ ವಾದ.

ವಾಸುದೇವ್‌, 2012ರಲ್ಲಿ ಶೇ 51ರಷ್ಟು ಪಾಲನ್ನು ಬೇರೆಯವರಿಗೆ ಬಿಟ್ಟುಕೊಟ್ಟರು. ಹೋಟೆಲ್‌ಗಳ ಸಂಖ್ಯೆ 30ಕ್ಕೆ ಏರಿತ್ತು. ಪಾಲುದಾರರೊಂದಿಗೆ ಹೊಂದಾಣಿಕೆಯಾಗಲಿಲ್ಲ. ಆಗಲೇ ಅವರ ವಹಿವಾಟು ಅನಿರೀಕ್ಷಿತ ತಿರುವು ಪಡೆಯಿತು.  2017ರಲ್ಲಿ ಅಡಿಗಾಸ್‌ ಫಾಸ್ಟ್‌ಫುಡ್‌ ಪ್ರೈವೇಟ್‌ ಲಿಮಿಟೆಡ್‌ನ ಒಡೆತನವನ್ನು ಪಾಲುದಾರರಿಗೆ ಬಿಟ್ಟುಕೊಡಬೇಕಾಯಿತು. 

ತಮ್ಮ 58ನೇ ವಯಸ್ಸಿನಲ್ಲಿ ಮರಳಿ ಹೋಟೆಲ್‌ಗಳ ಸರಣಿ ಆರಂಭಿಸುವ ಮತ್ತೊಂದು ಪ್ರಯೋಗಕ್ಕೆ ಸಜ್ಜಾಗಿ ಶ್ರೀ ಅನಂತೇಶ್ವರ ಫುಡ್ಸ್‌ ಕಂಪನಿ ಹುಟ್ಟು ಹಾಕಿದರು. 2018ರಲ್ಲಿ ಆರು ಪಾಕಶಾಲ ಹೋಟೆಲ್ ಆರಂಭಿಸಿದರು. ಆರ್‌.ಆರ್.ನಗರ, ಜೆ.ಪಿ. ನಗರ, ವಿದ್ಯಾರಣ್ಯಪುರ, ಚಂದ್ರಾ ಲೇಔಟ್‌, ಮಲ್ಲೇಶ್ವರ ಮತ್ತು ಎಂ.ಜಿ. ರಸ್ತೆ ಹೀಗೆ ನಗರದ ಆರು ಪ್ರಮುಖ ಸ್ಥಳಗಳಲ್ಲಿ ಪಾಕಶಾಲಗಳು ತಲೆ ಎತ್ತಿವೆ. ವಿಮಾನ ನಿಲ್ದಾಣದ ಬಿಎಂಟಿಸಿ ಬಸ್‌ಸ್ಟಾಪ್‌ ಮತ್ತು ದೇವನಹಳ್ಳಿಯ ಬಿ.ಬಿ. ರಸ್ತೆಯ ರಾಣಿ ಸರ್ಕಲ್‌ನಲ್ಲಿ ನಂದಿ ಉಪಚಾರ್‌ ಹೋಟೆಲ್‌ಗಳನ್ನು ತೆಕ್ಕೆಗೆ ತೆಗೆದುಕೊಂಡರು.


ಕೆ.ಎನ್‌. ವಾಸುದೇವ ಅಡಿಗ

ಯೆಲಚೇನಹಳ್ಳಿ ಮೆಟ್ರೊ ಸ್ಟೇಷನ್‌, ಕುಣಿಗಲ್‌–ಯಡಿಯೂರು ಬಳಿ ಎನ್‌ಎಚ್‌–75 ಹೆದ್ದಾರಿ ಮತ್ತು ಮಂಗಳೂರು–ಮುಂಬೈ ಹೆದ್ದಾರಿ ಎನ್‌ಎಚ್‌–66ನಲ್ಲಿ ಕುಂದಾಪುರ ಬಳಿಯ ಕುಂಭಾಸಿ ಗ್ರಾಮದಲ್ಲಿ ಪಾಕಶಾಲ ರುಚಿ ಉಣಬಡಿಸಲು ಸಜ್ಜಾಗಲಿದೆ.

ಅಮೆರಿಕದಲ್ಲೂ ಪಾಕಶಾಲ!

ಈ ಹಿಂದೆ ಅರಬ್‌ ರಾಷ್ಟ್ರದಲ್ಲಿ ಅಡಿಗಾಸ್‌ ಹೋಟೆಲ್‌ ಆರಂಭಿಸಿದ್ದ ವಾಸುದೇವ್‌ ಅವರು, ಈ ಬಾರಿ ಅಮೆರಿಕದಲ್ಲಿ ಹೋಟೆಲ್‌ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಈಗಾಗಲೇ ಸ್ಥಳವನ್ನೂ ಗುರುತಿಸಿದ್ದಾರೆ. 2020ರ ಒಳಗಾಗಿ ಕ್ಯಾಲಿಫೋರ್ನಿಯಾದಲ್ಲಿ ಪಾಕಶಾಲ ರುಚಿಯನ್ನು ಉಣಬಡಿಸುವ ಇರಾದೆ ಅವರದು.

ಕಾರ್ಪೊರೇಟ್‌ ಸ್ಪರ್ಷ

ಸಾಂಪ್ರದಾಯಿಕ ಹೋಟೆಲ್‌ ಉದ್ಯಮಕ್ಕೆ ಅಡಿಗರು ಕಾರ್ಪೊರೇಟ್‌ ಸ್ಪರ್ಷ ನೀಡಿದ್ದಾರೆ. ಪ್ರತಿಯೊಂದು ವಿಭಾಗಕ್ಕೂ ಪರಿಣತ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ಒಂದು ಕಾರ್ಪೊರೇಟ್‌ ಸಂಸ್ಥೆಗೆ ಬೇಕಾದ ವ್ಯವಸ್ಥೆ ರೂಪಿಸಿದ್ದಾರೆ. ಜಯನಗರದಲ್ಲಿ ಕಾರ್ಪೊರೇಟ್‌ ಕಚೇರಿ ಇದೆ. ಸದ್ಯದಲ್ಲಿಯೇ ಸಂಸ್ಥೆಗೆ ಸಿಇಒ ನೇಮಕ ಮಾಡುತ್ತಿದ್ದಾರೆ.

ಹೋಟೆಲ್‌ ನನ್ನ ದೇವಸ್ಥಾನ

ನನ್ನ ಹೋಟೆಲ್‌ ನನಗೆ ದೇವಸ್ಥಾನ. ಪ್ರತಿದಿನ ಎಲ್ಲ ಹೋಟೆಲ್‌ಗಳಿಗೂ ಭೇಟಿ ನೀಡುತ್ತೇನೆ.ಎಂದಿಗೂ ಗಲ್ಲಾಪೆಟ್ಟಿಗೆ ಬಳಿಯಾಗಲಿ ಅಥವಾ ಲೆಕ್ಕದ ಪುಸ್ತಕ ನೋಡುವ ಗೊಡವೆಗೆ ಹೋಗುವುದಿಲ್ಲ. ಮಾಲೀಕನಾದರೂ ಅಡುಗೆ ಮಾಡಲು, ಟೇಬಲ್‌ ಸ್ವಚ್ಛಗೊಳಿಸಲು ಮುಜುಗರ ಪಡುವುದಿಲ್ಲ. ಅಡುಗೆ ಮನೆಗೆ ಹೋಗಿ ಊಟ, ತಿಂಡಿಯ ರುಚಿ ಪರಿಶೀಲಿಸುತ್ತೇನೆ. ಶುಚಿ, ರುಚಿಯಲ್ಲಿ ರಾಜಿ ಇಲ್ಲ. ತಂದೆಯಿಂದ ಕಲಿತ ಪಾಠವಿದು.ಗ್ರಾಹಕರ ಜತೆ ಮಾತನಾಡುತ್ತೇನೆ. ಅವರ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ.

–ವಾಸುದೇವ್‌ ಅಡಿಗ, ಪಾಕಶಾಲ ಹೋಟೆಲ್‌ಗಳ ಮಾಲೀಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು