ಬುಧವಾರ, ಜೂನ್ 3, 2020
27 °C
ಫಿಶ್ ಕರಿ, ಫಿಶ್ ಫ್ರೈ, ಜವಾರಿ ಕೋಳಿಯ ರುಚಿ ಅತ್ಯದ್ಭುತ; ವಿನಮ್ರ ಸೇವೆಗೆ ಹೆಸರಾದವರು ಮಕಾನದಾರ ಸಹೋದರರು

ಪ್ರೀತಮ್‌ನ ಮಾಂಸಹಾರಕ್ಕೆ ಮನಸೋಲದವರಿಲ್ಲ..!

ಮಹಾಬಲೇಶ್ವರ ಶಿ.ಗಡೇದ Updated:

ಅಕ್ಷರ ಗಾತ್ರ : | |

Prajavani

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ (ಐ.ಬಿ.ಎದುರಿಗೆ) ಪ್ರೀತಮ್ ಹೊಟೇಲ್‌ಗೆ ಒಮ್ಮೆ ಭೇಟಿ ಕೊಟ್ಟು, ಜವಾರಿ ಚಿಕನ್‌ನ ರುಚಿ ಸವಿದರೆ ಸಾಕು. ಮತ್ತೊಮ್ಮೆ ಬೇರೆಲ್ಲೂ ಹೋಗಲ್ಲ. ಹುಡುಕಿಕೊಡು ಇಲ್ಲಿಗೆ ಬರುವುದು ಸ್ವಾಭಾವಿಕ.

ಮೂರುವರೆ ದಶಕದಿಂದ ಜವಾರಿ ಚಿಕನ್‌ಗೆ ಈ ಹೋಟೆಲ್‌ ಭಾಳ ಫೇಮಸ್ಸು. ಇದೀಗ ಮೀನಿನ ಫ್ರೈ, ಕರಿಯೂ ಲಭ್ಯ. ಇದರ ರುಚಿಯೂ ಸೊಗಸು.

ತಾಲ್ಲೂಕಿನ ಹಂಡರಗಲ್ಲದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಖಾದಿರಶ್ಯಾ ಮಕಾನದಾರ, ಆಪ್ತಮಿತ್ರ ರೇವಣಸಿದ್ದಪ್ಪ ಕೆಂದೂಳಿಯ ಒತ್ತಾಯಕ್ಕೆ ಸೋತು, ಪಟ್ಟಣಕ್ಕೆ ಬಂದು ಸಣ್ಣ ಅಂಗಡಿಯಲ್ಲಿ ಪ್ರೀತಮ್ ಹೊಟೇಲ್ ಆರಂಭಿಸಿದರು.

ಆರಂಭದ ಆ ದಿನಗಳಿಂದಲೂ ಇಲ್ಲಿನ ಜವಾರಿ ಕೋಳಿಯ ರುಚಿ ಹೆಚ್ಚುತ್ತಿದೆ. ಐದು ವರ್ಷದ ಹಿಂದೆ ಖಾದಿರಶ್ಯಾ ಕಣ್ಮರೆಯಾಗಿದ್ದಾರೆ. ಆದರೆ ಅಪ್ಪನ ಹೆಸರಿಗೆ ಕೀರ್ತಿ ತರುವಂತೆ ನಜೀರ ಮಕಾನದಾರ ಹೊಟೇಲ್ಲಿನಲ್ಲಿ ಒಳಗಡೆ ಅಡುಗೆ ಮಾಡುವ ಉಸ್ತುವಾರಿ ಹೊತ್ತಿದ್ದರೆ, ಹೊರಗಡೆ ಕಿರಿಯ ಸಹೋದರ ಮೆಹಬೂಬ್ ಸ್ವತ: ಗಿರಾಕಿಗಳ ಕ್ಷೇಮ ವಿಚಾರಿಸಿಕೊಳ್ಳುತ್ತಾರೆ.

ಇಲ್ಲಿ ಪ್ರತಿಯೊಂದು ಅಚ್ಚುಕಟ್ಟು. ಅಡುಗೆಗೆ ಹಾಕಬೇಕಾದ ಮಸಾಲೆಯನ್ನು ಸಹ ನಿತ್ಯವೂ ಫ್ರೆಶ್ ಆಗಿಯೇ ತಯಾರಿಸಲಾಗುತ್ತದೆ. ಇದರೊಂದಿಗೆ ಅಲ್ಲದ (ಜಿಂಜರ್) ಪೇಸ್ಟ್‌, ಬಳ್ಳೊಳ್ಳಿ ಪೇಸ್ಟ್‌, ಗರಂ ಮಸಾಲೆಗಳನ್ನು ಅಡುಗೆ ಮಾಡುವ ಸಮಯದಲ್ಲಿಯೇ ತಯಾರಿಸುವುದರಿಂದ ರುಚಿ ಹೆಚ್ಚಿರುತ್ತದೆ.

ಅಡುಗೆಗೆ ಹಾಕುವ ಮೆಣಸಿನಕಾಯಿ ಖಾರದಿಂದ ಹಿಡಿದು ಕೊಬ್ಬರಿ, ಶೇಂಗಾ, ಗಸಗಸೆ, ದಾಲ್ಚಿನ್ನಿಯ ಖರೀದಿಯಲ್ಲಿ ಗುಣಮಟ್ಟದ ಪದಾರ್ಥಗಳನ್ನು ತಂದು ಸ್ವಚ್ಛಗೊಳಿಸಿ ಬಳಸಲಾಗುತ್ತದೆ. ಇಲ್ಲಿ ಜವಾರಿ ಚಿಕನ್, ಫಿಶ್ ಫ್ರೈ, ಫಿಶ್ ಕರಿ, ಫಿಶ್ ನೆಕೆಡ್ (ತವಾ ಫ್ರೈ) ಜತೆಗೆ ಎಗ್ ಸುಕ್ಕಾ, ಡಿಕೆ, ಎಗ್ ಜಾರ್, ಎಗ್ ಬುರ್ಜಿ, ಎಗ್ ಮಸಾಲಾ, ಚಿಕನ್ ಸುಕ್ಕಾ, ಚಿಕನ್ ಕರಿ, ಚಿಕನ್ ರೋಲ್, ಚಿಕನ್ ಕಬಾಬ್, ಮಟನ್ ಸುಕ್ಕಾ, ಮಟನ್ ಕೊಲ್ಹಾಪುರಿ ಎಲ್ಲವೂ ರುಚಿ ರುಚಿಯಾಗಿರುತ್ತದೆ.

ಶಾಖಾಹಾರಿ ಖಾಜು ಕುರ್ಮಾ, ಸೇವ್ ಬಾಜಿ, ದಾಲ್ ಫ್ರೈ, ಟೊಮೆಟೊ ಫ್ರೈ, ಗೋಬಿ ಮಸಾಲಾ ಸಹ ಇಲ್ಲಿ ಲಭ್ಯ.

ಮೆಲುದನಿಯಲ್ಲಿ ಹಳೆಯ ಹಿಂದಿ, ಕನ್ನಡ ಚಿತ್ರ ಗೀತೆಗಳನ್ನು ಕೇಳುತ್ತಾ ಇಲ್ಲಿ ಊಟ ಸವಿಯುವ ಸಂಭ್ರಮ ಮನಸ್ಸಿಗೆ ತೃಪ್ತಿ ನೀಡಲಿದೆ. ಸಂತೃಪ್ತರಾದ ಗ್ರಾಹಕರು ಮನೆಗೂ ಕಟ್ಟಿಸಿಕೊಂಡು ಹೋಗುವುದು ಇಲ್ಲಿನ ಮತ್ತೊಂದು ವಿಶೇಷ.

ಹೋಟೆಲ್‌ ತೆರೆಯುವ ಸಮಯ ಮಧ್ಯಾಹ್ನ 1.30 ರಿಂದ 3.30. ಸಂಜೆ 7.30ರಿಂದ ರಾತ್ರಿ 10 ಗಂಟೆ. ಸಂಪರ್ಕ ಸಂಖ್ಯೆ ನಜೀರ್‌–8951342199, ಮೆಹಬೂಬ–9900664337.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.