ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಸುಮತಿ ಬಿರಿಯಾನಿ ಬಲುರುಚಿ

Last Updated 20 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಆಗಷ್ಟೇ ಕಚೇರಿಯಿಂದ ಆಚೆ ಬಂದಿದ್ದೆ. ಇಳಿಸಂಜೆಯಲ್ಲಿ ಸೂರ್ಯ ಮೆಲ್ಲನೆ ತೆರೆಹಿಂದಕ್ಕೆ ಸರಿಯುತ್ತಿದ್ದ. ಹಕ್ಕಿಗಳು ಗೂಡು ಸೇರುವ ಸಮಯ. ಕೆಲ ದಿನಗಳಿಂದ ಮಾಯವಾಗಿದ್ದ ಚಳಿ ಅವತ್ತು ಕಾಡತೊಡಗಿತ್ತು. ನಾಲಿಗೆಯೂ ಯಾಕೋ ಚಡಪಡಿಸುತ್ತಿತ್ತು. ಅದರರ್ಥ ಅದು ‘ಖಾರ’ದ ರುಚಿಯ ಬಯಸುತ್ತಿದೆ ಅನ್ನೋದು ಅರಿವಿಗೆ ಬಂತು. ಸ್ನೇಹಿತ ಪುರು ನಾಗವಾರದ ಬಿರಿಯಾನಿ ಹೌಸ್ ಬಗ್ಗೆ ಹೇಳಿದ್ದು ಆಗಲೇ ನೆನಪಿಗೂ ಬಂತು. ತಡಮಾಡದೇ ನನ್ನ ಬೈಕಿನ ಚಕ್ರಗಳು ಆ ಹೌಸ್ ನತ್ತ ಉರುಳಿದವು.

ಕೆಲಹೊತ್ತಿನಲ್ಲೇ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಬಳಿಯೇ ಇದ್ದ ಹೌಸ್ ತಲುಪಿದೆ. ಅದರ ಪಕ್ಕದಲೇ ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವ ಹೆಬ್ಬಾಳ ಬಳಿಯ ನಾಗವಾರದ ಹೊರವರ್ತುಲ ರಸ್ತೆಯೂ ಹಾದು ಹೋಗುತ್ತದೆ. ಹೋಟೆಲ್ ಪ್ರವೇಶಿಸಿಸುತ್ತಿದ್ದಂತೆ ಹೋಟೆಲ್‌ನ ಸ್ಪೆಷಲ್ ಖಾದ್ಯವಾದ ಸಾಂಪ್ರದಾಯಿಕ ಹೈದರಾಬಾದ್ ದಮ್ ಬಿರಿಯಾನಿ ತಾರಣ್ಣ ಅಂತ ಹೇಳಿ ಟೇಬಲ್ ಅಲಂಕರಿಸಿದೆ.

ಕೋಲಾರದಿಂದ ತರಿಸಿದ್ದ ಹುಣಸೇಮರದ ತುಂಡುಗಳಿಂದ ಒಲೆಯ ಮೇಲೆ ದಮ್ ಕಟ್ಟಿ ಮಾಡಿದ್ದ ಮಟನ್ ಬಿರಿಯಾನಿ ಅಲ್ಲಲ್ಲಿ ಕೆಂಪು (ಗ್ರೇವಿ) ಮಿಶ್ರಿತ ಬಿಳಿ ಬಣ್ಣದೊಂದಿಗೆ ಶ್ವೇತವರ್ಣದ ತಟ್ಟೆಯಲ್ಲಿ ಟೇಬಲ್‌ಗೆ ಬಂತು. ಬಾಸುಮತಿ ಅಕ್ಕಿಯಿಂದ ಮಾಡಿದ ಯಾವುದೇ ರೀತಿಯ ಆಹಾರವಾಗಲಿ ಅಷ್ಟಾಗಿ ನೆಚ್ಚಿಕೊಳ್ಳದ ನಾನು ಒಲ್ಲದ ಮನಸ್ಸಿನಲ್ಲೇ ನಾಲಿಗೆಯ ಚಡಪಡಿಕೆ ಈಡೇರಿಸುವ ಸಲುವಾಗಿ ಬಾಯಿಗೇರಿಸಿದೆ. ಕೈಸುಡುವಷ್ಟು ಬಿಸಿಯಿಲ್ಲದಿದ್ದರೂ ಬಿರಿಯಾನಿಯ ರೈಸ್ ಆಹಾ ಎನ್ನುವ ಉದ್ಘಾರ ತರಿಸಿತು. ಬಾಸುಮತಿ ಅಕ್ಕಿಯ ಆಹಾರವನ್ನು ಬೇಸರದಿಂದಲೇ ತಿನ್ನುತ್ತಿದ್ದ ನನಗೆ ಮೊದಲ ಬಾರಿಗೆ ಆಹಾ ಎಷ್ಟೊಂದು ರುಚಿಕರ ಈ ಬಿರಿಯಾನಿ ಎನಿಸತೊಡಗಿತು. ಬಹುಶಃ ಅದು ಹೈದರಾಬಾದ್ ದಮ್ ಬಿರಿಯಾನಿಯ ಗಮ್ಮತ್ತೇ ಹಾಗೇ ಇರಬೇಕು.

ಹಂತ ಹಂತವಾಗಿ ಹದವಾಗಿ ಬೆಂದಿದ್ದ ಅಕ್ಕಿ ಹಾಗೂ ಮಟನ್ ಬಲು ರುಚಿಯಾಗಿತ್ತು. ಮಟನ್ ಬಿರಿಯಾನಿ ಜೊತೆಗೇನೆ ತಂದಿದ್ದ ಚಿಕನ್ ಬಿರಿಯಾನಿಯೂ ಅಷ್ಟೇ ಸ್ವಾದಿಷ್ಟಕರವಾಗಿತ್ತು. ಮಟನ್ ಹಾಗೂ ಚಿಕನ್ ದಮ್ ಬಿರಿಯಾನಿಯ ರೈಸ್‌ನ ರುಚಿಯು ಒಂದೇ ರೀತಿಯಲ್ಲಿತ್ತು. ತುಸು ಖಾರವಾಯಿತು ಎನಿಸಿದರೂ ‘ಖಾರ’ ಬಲು ರುಚಿಯನ್ನೇ ನಾಲಿಗೆಗೆ ನೀಡಿತು. ಅಂತೆಯೇ ಚಿಕನ್ ತಂದೂರಿ ಹಾಗೂ ಲೆಮೆನ್ ಚಿಕನ್ ಸಹ ಚೆನ್ನಾಗಿತ್ತು.

ಬಿರಿಯಾನಿ ಹೌಸ್‌ನಲ್ಲಿ ಬಿರಿಯಾನಿ ರುಚಿಯಾಗಿರುವ ಗುಟ್ಟು ಅದಕ್ಕೆ ಬಳಸುವ ಮಸಾಲೆ ಪದಾರ್ಥಗಳು. ಒಲವಿನಿಂದಾಗಿಯೇ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ರಾಯಚೂರು ಮೂಲದ ಉದ್ಯಮಿ ಬ್ರಹ್ಮಾನಂದ ಕರ್ಕೂರಿ ಈ ಹೋಟೆಲ್ ಮಾಲೀಕ. ಕೆಲಸದ ನಿಮಿತ್ತ ಹೈದರಾಬಾದ್ ಗೆ ಹೆಚ್ಚಾಗಿ ಹೋಗುತ್ತಿದ್ದ ಅವರು ಅಲ್ಲಿ ಹೆಚ್ಚು ಸವಿಯುತ್ತಿದ್ದದ್ದು ಹೈದರಾಬಾದ್ ದಮ್ ಬಿರಿಯಾನಿಯಂತೆ. ಬೆಂಗಳೂರಿಗರು ಬೇಕೆಂದಾಗಲೆಲ್ಲ ಬಲುರುಚಿಯ ಹೈದರಾಬಾದ್ ದಮ್ ಬಿರಿಯಾನಿ ಸವಿಯಲಿ ಎಂಬ ಸಲುವಾಗಿ 2004ರಲ್ಲಿ ಈ ಬಿರಿಯಾನಿ ಹೌಸ್ ಶುರು ಮಾಡಿದರು.

ಹೈದರಾಬಾದ್ ನಲ್ಲಿ ಲಭ್ಯವಿರುವ ಬಿರಿಯಾನಿಯ ಸ್ವಾದ ಹಾಗೂ ರುಚಿಯನ್ನೇ ಥೇಟ್ ಅದೇ ರೀತಿ ಇಲ್ಲಿನವರಿಗೂ ನೀಡಬೇಕು ಎಂಬ ಸಲುವಾಗಿ ಬಿರಿಯಾನಿ ಮಸಾಲೆ ಪದಾರ್ಥಗಳನ್ನು ಪ್ರತಿತಿಂಗಳು ಅಲ್ಲಿಂದಲೇ ತರಿಸುತ್ತಾರೆ. ಬಿರಿಯಾನಿಯೂ ಮತ್ತಷ್ಟು ರುಚಿಯಾಗಿರಲೆಂಬ ಸಲುವಾಗಿಯೇ ಕೋಲಾರದಿಂದ ಹುಣಸೆಮರದ ಸೌದೆಯನ್ನು ತರಿಸಿ ಅವುಗಳಿಂದ ಪ್ರತಿ 40-50 ನಿಮಿಷಕ್ಕೊಮ್ಮೆ ಮಟನ್ ಹಾಗೂ ಚಿಕನ್‌ನ ಹೈದರಾಬಾದ್ ದಮ್ ಬಿರಿಯಾನಿಯನ್ನು ತಯಾರಿಸುತ್ತಾರೆ.

ಬಿರಿಯಾನಿ ಮಾಡುವ ವಿಧಾನವೂ ವಿಭಿನ್ನ
ಹೈದರಾಬಾದ್ ದಮ್ ಬಿರಿಯಾನಿಯಲ್ಲಿ ಕಚ್ಚಾ ದಮ್ ಹಾಗೂ ನೀರಿನ ದಮ್ ಎಂಬ ಎರಡು ವಿಧವಿದೆ. ಬಿರಿಯಾನಿ ಹೌಸ್‌ನಲ್ಲಿ ಸಿದ್ಧವಾಗುವುದು ಕಚ್ಚಾ ದಮ್ ಬಿರಿಯಾನಿ. ಇಲ್ಲಿ ಮಾಡುವ ಚಿಕನ್ ಹಾಗೂ ಮಟನ್‌ನ ಬಿರಿಯಾನಿಯ ಮತ್ತೊಂದು ವೈವಿದ್ಯತೆ ಎಂದರೆ ತಯಾರಿಕೆ ವಿಧಾನ. ಚಿಕನ್ ಅಥವಾ ಮಟನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಹೈದರಾಬಾದ್‌ನಿಂದಲೇ ತರಿಸಿದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ನೀರು ಹಾಕಿ ಮಿಶ್ರಣಮಾಡಿ ಅರ್ಧ ಗಂಟೆ ಹಾಗೆಯೇ ನೆನೆಸಿ ಇಡಲಾಗುತ್ತದೆ. ಆ ಅರ್ಧ ತಾಸಿನ ನಡುವೆ ಬಾಸುಮತಿ ಅಕ್ಕಿಯನ್ನು ಮೂರು ಪ್ಲೇವರ್‌ನಲ್ಲಿ (ಸ್ವಲ್ಪವೇ ಬೆಂದ, ಅರ್ಧ ಬೆಂದ ಹಾಗೂ ಮುಕ್ಕಾಲು ಬೆಂದ) ಬೇಯಿಸಿಕೊಳ್ಳಲಾಗುತ್ತದೆ.

ಬಿರಿಯಾನಿಗಾಗಿಯೇ ಪ್ರತ್ಯೇಕವಾಗಿ ತಯಾರಿಸಿದ ಪಾತ್ರೆಗಳನ್ನು ಒಲೆಯ ಮೇಲಿಟ್ಟು, ಮಸಾಲೆಯೊಂದಿಗೆ ನೆನೆಸಿಟ್ಟ ಚಿಕನ್ ಅಥವಾ ಮಟನ್ ಅನ್ನು ಅದರೊಳಗೆ ಹಾಕಲಾಗುತ್ತದೆ. ಬಳಿಕ ಮೂರು ಪ್ರಮಾಣದಲ್ಲಿ ಬೇಯಿಸಿಕೊಂಡು ಬಾಸುಮತಿ ಅನ್ನವನ್ನು ಏರಿಕೆ ಕ್ರಮದಲ್ಲಿ ಹಂತಹಂತವಾಗಿ ಬಳಸಿ ಆ ಪಾತ್ರೆಯ ಕಂಠದ ಸುತ್ತಲೂ ನೆನೆಸಿದ ಬಟ್ಟೆಯನ್ನು ಇಟ್ಟು ಅದರ ಮೇಲೆ ಪ್ಲೇಟ್ ಇಡಲಾಗುತ್ತದೆ. ಹಾಗೆ ಇಟ್ಟ ತಟ್ಟೆಯ ಮೇಲೆ ಹುಣಸೆಮರದ ಕೆಂಡಗಳನ್ನು ಹಾಕಲಾಗುತ್ತದೆ. ಒಲೆಯಲ್ಲಿ ಬೆಂಕಿ ಹೊತ್ತಿಸದೆಯೇ ಬರೀ ಕೆಂಡಗಳಿಂದ ಪಾತ್ರೆಗೆ ಬಿಸಿ ತಾಗಿಸಲಾಗುತ್ತದೆ. ಅದರಿಂದಲೇ ಪಾತ್ರೆಯ ಒಳಾಂಗಣದ ತಳಭಾಗದಲ್ಲಿರುವ ಮಟನ್ ಅಥವಾ ಚಿಕನ್ ಹದವಾಗಿ ಬೇಯುತ್ತದೆ. ಈ ವಿಧಾನವೇ ಇಲ್ಲಿನ ರುಚಿಕರ ಬಿರಿಯಾನಿಯ ಗುಟ್ಟು ಎನ್ನುವುದು ಬ್ರಹ್ಮಾನಂದ ಮಾತು.

ಹೈದರಾಬಾದ್ ಮೂಲದ ಆರು ಮಂದಿ ನುರಿತ ಶೆಫ್ ಗಳು ಇಲ್ಲಿ ಸಾಂಪ್ರದಾಯಿಕ ಹೈದರಾಬಾದ್ ಬಿರಿಯಾನಿ ಮಾಡುತ್ತಾರೆ. ಜೊತೆಗೆ ಉತ್ತರ ಭಾರತದ ಶೈಲಿಯ ಆಹಾರವೂ ಇಲ್ಲಿ ಲಭ್ಯವಿದ್ದು, ಅದಕ್ಕೆ ತಕ್ಕಂತೆ ಆ ಭಾಗದ ಶೆಫ್ ಗಳೂ ಇದ್ದಾರೆ. ಸಹಕಾರನಗರ ಹಾಗೂ ಬಾಣಸವಾಡಿಯಲ್ಲೂ ಬಿರಿಯಾನಿ ಹೌಸ್ ನ ಶಾಖೆಗಳಿವೆ. ಮೂರು ಕಿಲೋ ಮೀಟರ್ ಅಂತರದೊಳಗೆ ₹350ಕ್ಕೂ ಹೆಚ್ಚಿನ ಬೆಲೆಯ ಖಾದ್ಯಗಳನ್ನು ಆರ್ಡರ್ ಮಾಡಿದರೆ ಉಚಿತವಾಗಿ ಆಹಾರವನ್ನು ಸರಬರಾಜು ಮಾಡುವ ವ್ಯವಸ್ಥೆಯನ್ನೂ ಹೋಟೆಲ್ ಕಲ್ಪಿಸಿದೆ.

ಶಿವಣ್ಣ ಫೇವ್ರೆಟ್ ಬಿರಿಯಾನಿಯಂತೆ!
ಮಾನ್ಯತಾ ಟೆಕ್ ಪಾರ್ಕ ಬಳಿಯೇ ನಟ ಶಿವರಾಜ್ ಕುಮಾರ್ ಅವರ ಮನೆಯೂ ಇದೆ. ಬಿರಿಯಾನಿ ಹೌಸ್‌ನ ಬಿರಿಯಾನಿ ಎಂದರೆ ಶಿವಣ್ಣ ಅವರಿಗೆ ಬಲು ಇಷ್ಟ ಎನ್ನುವ ಹೋಟೆಲ್ ವ್ಯವಸ್ಥಾಪಕ ಸುರೇಶ್, ‘ಕಾರಿನ ಮೂಲಕ ಶಿವಣ್ಣ ನಮ್ಮ ಹೋಟೆಲ್‌ಗೆ ಆಗಾಗ ಬರುತ್ತಿರುತ್ತಾರೆ. ಹಾಗೇ ಬಂದಾಗ ಅವರು ಕಾರಿನಲ್ಲೇ ಕುಳಿತು ತಮ್ಮ ಸಿಬ್ಬಂದಿಯ ಮೂಲಕ ಬಿರಿಯಾನಿ ಪಾರ್ಸೆಲ್ ತರಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ವಾರಕ್ಕೆ ಮೂರು ಬಾರಿ ನಮ್ಮ ಹೋಟೆಲ್‌ನ ಬಿರಿಯಾನಿಯನ್ನೇ ಅವರು ಮನೆಗೆ ತರಿಸಿಕೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

ರೆಸ್ಟೊರೆಂಟ್: ಬಿರಿಯಾನಿ ಹೌಸ್
ವಿಶೇಷ: ಹೈದರಾಬಾದ್ ದಮ್ ಬಿರಿಯಾನಿ
ಸಮಯ: ಮಧ್ಯಾಹ್ನ 12ರಿಂದ 4, ರಾತ್ರಿ 7ರಿಂದ 11
ಸ್ಥಳ: ಬಿರಿಯಾನಿ ಹೌಸ್, ನಂ 10, ಮಾನ್ಯತಾ ಟೆಕ್ ಪಾರ್ಕ್ ಬಳಿ, ಹೊರವರ್ತುಲ ರಸ್ತೆ, ನಾಗವಾರ
ಟೇಬಲ್‌ ಕಾಯ್ದಿರಿಸಲು: 8050090055

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT