ಸೋಮವಾರ, ಮಾರ್ಚ್ 20, 2023
30 °C

ನಳಪಾಕ: ಹಣ್ಣು, ತರಕಾರಿಗಳ ‘ದೇಸಿ ರುಚಿ’

ಮಾಲತಿ ಹೆಗಡೆ Updated:

ಅಕ್ಷರ ಗಾತ್ರ : | |

ತರಕಾರಿ, ಹಣ್ಣುಗಳನ್ನು ಬಳಸಿ ಮಾಡುವ ದೇಸಿ ರುಚಿ ಖಾದ್ಯಗಳು ವಿಶಿಷ್ಟವಾಗಿರುತ್ತವೆ. ಹೀಗೆ ಸರಳವಾಗಿ, ತ್ವರಿತವಾಗಿ ತಯಾರಿಸುವ ದೇಸಿ ಖಾದ್ಯಗಳ ರೆಸಿಪಿಯನ್ನು ಪರಿಚಯಸುತ್ತಿದ್ದಾರೆ ಮಾಲತಿ ಹೆಗಡೆ. 

ಗೋಧಿ–ಕಡ್ಲೆ ಲಡ್ಡು

ಬೇಕಾಗುವ ಸಾಮಗ್ರಿಗಳು

ನೂರು ಗ್ರಾಂ ಗೋಧಿ ಹಿಟ್ಟು, ನೂರು ಗ್ರಾಂ ಕಡಲೆಹಿಟ್ಟು, ಎರಡುನೂರು ಗ್ರಾಂ ಸಕ್ಕರೆ, ನೂರೈವತ್ತು ಗ್ರಾಂ ತುಪ್ಪ, ಒಂದು ಬಟ್ಟಲು ಪೇಪರ್ ಅವಲಕ್ಕಿ, ಎರಡು ಬಟ್ಟಲು ಎಣ್ಣೆ, ಮೂರು ಬಟ್ಟಲು ಸಕ್ಕರೆ, ಅರ್ಧ ಚಮಚ ಏಲಕ್ಕಿಪುಡಿ. ಅರ್ಧ ಗ್ರಾಂ ಕೇಸರಿ.

ತಯಾರಿಸುವ ವಿಧಾನ 

ಹಿಟ್ಟುಗಳನ್ನು ತುಪ್ಪದಲ್ಲಿ ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಹುರಿಯಬೇಕು. ಎಣ್ಣೆಯಲ್ಲಿ ಅವಲಕ್ಕಿಯನ್ನು ಕರಿದಿಡಬೇಕು. ಸಕ್ಕರೆಗೆ ಅರ್ಧ ಕಪ್ ನೀರು ಸೇರಿಸಿ ಉಂಡೆ ಪಾಕವಾಗುವವರೆಗೆ ಕುದಿಸಿ. ಹಿಟ್ಟುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ತಯಾರಿಸಿ ನಂತರ ಕರಿದ ಅವಲಕ್ಕಿಯನ್ನು ಏಲಕ್ಕಿಪುಡಿಯನ್ನು, ಕೇಸರಿ ಎಸಳುಗಳನ್ನೂ ಹಾಕಿ ಕೊಂಚ ಬಿಸಿ ಇರುವಾಗಲೇ ಉಂಡೆ ಕಟ್ಟಬೇಕು. ಗೋಧಿ–ಕಡ್ಲೆಹಿಟ್ಟಿನ ಲಡ್ಡು ಸಿದ್ಧ.

**
 

ಬೀಟ್ರೂಟ್‌ ಹೋಳಿಗೆ 

ಬೇಕಾಗುವ ಸಾಮಗ್ರಿಗಳು: ಅರ್ಧ ಕೆ.ಜಿ ಬೀಟ್ರೂಟ್‌, ಕಾಲು ಕೆ.ಜಿ. ಸಕ್ಕರೆ, ಅರ್ಧ ಚಮಚ ಏಲಕ್ಕಿ ಪುಡಿ, ಅರ್ಧ ಕೆ.ಜಿ ಮೈದಾ ಹಿಟ್ಟು, ಕಾಲು ಚಮಚ ಅರಿಸಿನ, ನೂರು ಗ್ರಾಂ. ಶೇಂಗಾ ಎಣ್ಣೆ.

ತಯಾರಿಸುವ ವಿಧಾನ: ಬೀಟ್ರೂಟ್‌ ಅನ್ನು ಸಿಪ್ಪೆ ತೆಗೆದು ತುರಿದುಕೊಳ್ಳಬೇಕು. ಸಕ್ಕರೆ ಬೆರೆಸಿದ ಬೀಟ್ರೂಟ್ ತುರಿಯನ್ನು ದಪ್ಪ ತಳದ ಪಾತ್ರೆಗೆ ಹಾಕಿ ನೀರು ಇಂಗುವವರೆಗೆ ಗೊಟಕಾಯಿಸಿ ಹೂರಣ ತಯಾರಿಸಬೇಕು.

ಮೈದಾ ಹಿಟ್ಟಿಗೆ ಅರಿಶಿನ ಪುಡಿ ಹಾಕಿ ನೀರು ಸೇರಿಸಿ ಮೆತ್ತಗೆ ಕಲೆಸಿ ಎಣ್ಣೆಹಾಕಿ ನಾದಿ ಕಣಕ ತಯಾರಿಸಿಟ್ಟು ಒಂದು ತಾಸು ಮುಚ್ಚಿಡಬೇಕು. ಕಣಕವನ್ನು ಅಂಗೈಯಲ್ಲಿ ತಟ್ಟಿ ಹೂರಣವನ್ನಿಟ್ಟು ಮುಚ್ಚಿ ಪ್ಲಾಸ್ಟಿಕ್ ಹಾಳೆಯ ಮೇಲಿಟ್ಟು ಲಟ್ಟಿಸಿ ಸಣ್ಣ ಉರಿಯಲ್ಲಿ ಎರಡೂ ಕಡೆ ಬೇಯಿಸಬೇಕು. ಬೀಟ್ರೂಟ್‌ ಹೋಳಿಗೆ ಸಿದ್ಧವಾಯಿತು. ಬಿಸಿ ಇರುವಾಗಲೆ ತುಪ್ಪ ಹಾಕಿಕೊಂಡು ಸವಿಯಿರಿ.  

**
 

ಹಣ್ಣಿನ ಸಿಹಿಗಡುಬು

ಬೇಕಾಗುವ ಸಾಮಗ್ರಿ: ಕಳಿತ ಆರು ಬಾಳೆಹಣ್ಣು, ಒಂದು ಕಪ್ ಬೆಲ್ಲ, ಕಾಲು ಚಮಚ ಉಪ್ಪು, ಚಿಟಿಕೆ ಅಡುಗೆಸೋಡಾ, ಒಂದು ಕಪ್ ಇಡ್ಲಿ ತರಿ, ಅರ್ಧ ಕಪ್ ತೆಂಗಿನತುರಿ, ನಾಲ್ಕು ಏಲಕ್ಕಿ.

ತಯಾರಿಸುವ ವಿಧಾನ: ಬಾಳೆಹಣ್ಣು, ಬೆಲ್ಲ, ಉಪ್ಪು, ಏಲಕ್ಕಿಪುಡಿ, ಎಲ್ಲವನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ತೆಂಗಿನ ತುರಿ ಸೇರಿಸಿ. ಇಡ್ಲಿರವೆಯನ್ನು ತೊಳೆದು ಸೇರಿಸಿ. ಇಡ್ಲಿ ತಟ್ಟೆಗೆ ತುಪ್ಪ ಸವರಿ ಅರ್ಧ ಗಂಟೆ ಬೇಯಿಸಬೇಕು.

ಹಲಸಿನ ಹಣ್ಣಿನ ಕಾಲದಲ್ಲಿ, ಬಾಳೆ ಹಣ್ಣಿನ ಬದಲಿಗೆ ಇಪ್ಪತ್ತೈದು ಹಲಸಿನ ತೊಳೆಗಳನ್ನು ಬಳಸಿ ಈ ಸಿಹಿ ಕಡುಬನ್ನು ತಯಾರಿಸಬಹುದು. ಬಾಳೆಹಣ್ಣು, ಹಲಸಿನ ಹಣ್ಣು ಇಲ್ಲದಿದ್ದಾಗ, ತಿರುಳು ತೆಗೆದ ಸೌತೆಕಾಯಿಯನ್ನು ಬಳಸಿ, ಇದೇ ಬಗೆಯ ಸಿಹಿಕಡುಬು ತಯಾರಿಸಬಹುದು.

**

ದೀಗುಜ್ಜೆ ಪೋಡಿ

ಬೇಕಾಗುವ ಸಾಮಗ್ರಿಗಳು: ಬಲಿತ ಬೇರು ಹಲಸು(ದೀಗುಜ್ಜೆ), ನೂರು ಗ್ರಾಂ ಚಿರೋಟಿ ರವೆ, ಎರಡು ಚಮಚ ಮೆಣಸಿನಪುಡಿ, ನೂರು ಗ್ರಾಂ ಶೇಂಗಾ ಎಣ್ಣೆ, ಒಂದು ಚಮಚ ಪುಡಿ ಉಪ್ಪು.

ತಯಾರಿಸುವ ವಿಧಾನ: ಬೇರು ಹಲಸಿನ ಕಾಯಿಯ ಸಿಪ್ಪೆ ತೆಗೆದು ಕಾಯಿಯ ಒಳಗಿನ ಮೂಗು ಕತ್ತರಿಸಿ, ಉದ್ದವಾಗಿ ತೆಳುವಾಗಿ ಕತ್ತರಿಸಿಕೊಳ್ಳಬೇಕು. ರವೆಗೆ ಉಪ್ಪು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ತಯಾರಿಸಿ ಅದರಲ್ಲಿ ಬೇರು ಹಲಸಿನ ಚೂರುಗಳನ್ನು ಹೊರಳಾಡಿಸಿ ತವಾದ ಮೇಲೆ ಸ್ವಲ್ಪ ಸ್ವಲ್ಪ ಎಣ್ಣೆ ಹಾಕಿ ಎರಡೂ ಪಕ್ಕ ಚೆನ್ನಾಗಿ ಬೇಯಿಸಬೇಕು. ಇದನ್ನೇ ಪೋಡಿ ಎನ್ನುವುದು. ಈ ಪೋಡಿಯನ್ನು ಬಿಸಿ ಇರುವಾಗಲೇ ತಿನ್ನಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು