ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ ಬಿರಿಯಾನಿ, ಕ್ಯಾಪ್ಸಿಕಂ ಮೊಟ್ಟೆ ಫ್ರೈ

Last Updated 26 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಮೊಟ್ಟೆ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ–5, ಟೊಮೆಟೊ–1, ಹಸಿಮೆಣಸು – 4ರಿಂದ 5, ಪುದಿನ – ಸ್ವಲ್ಪ, ಮೊಸರು – 1/4 ಕಪ್‌, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಟೀ ಚಮಚ, ಅರಿಸಿನ – 4 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ– 1 ಚಮಚ, ಗರಂಮಸಾಲ – 1 ಚಮಚ, ಕಸೂರಿಮೇಥಿ – 2 ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಅಕ್ಕಿ– 250 ಗ್ರಾಂ, ಎಣ್ಣೆ – 4ರಿಂದ 5 ಚಮಚ, ಮಸಾಲೆ ಸಾಮಾನುಗಳು (ಚಕ್ಕೆ, ಲವಂಗ, ಏಲಕ್ಕಿ– 2, ಪಲಾವ್‌ ಎಲೆ – 2, ಮರಾಠಿ ಮೊ‌ಗ್ಗು – 2, ಅನಾನಸ್‌ ಹೂ – 1)

ತಯಾರಿಸುವ ವಿಧಾನ: ಕುಕರ್‌ಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಮಸಾಲೆ ಸಾಮಾನುಗಳನ್ನು ಹಾಕಿ ಒಂದು ನಿಮಿಷ ಹುರಿಯಿರಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ, ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಹೆಚ್ಚಿದ ಟೊಮೊಟೊ, ಪುದಿನ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಕಿ, ಟೊಮೆಟೊ ಮೆತ್ತಗಾಗುವವರೆಗೂ ಬಾಡಿಸಿಕೊಳ್ಳಿ. ಅರಿಸಿನ, ಖಾರದಪುಡಿ, ಕೊತ್ತಂಬರಿ ಪುಡಿ, ಗರಂಮಸಾಲೆ, ಕಸೂರಿಮೇಥಿ, ಉಪ್ಪು ಹಾಕಿ ಕೈಯಾಡಿಸಿ. ಈಗ ಮೊಸರು ಹಾಕಿ ತಿರುಗಿಸಿ, ಎಣ್ಣೆ ಬಿಡುವವರೆಗೂ ತಿರುವುತ್ತಿರಬೇಕು. ಎಣ್ಣೆ ಬಿಟ್ಟ ನಂತರ ಅರ್ಧ ಲೋಟ ನೀರು ಹಾಕಿ ಕುದಿಸಿ. ಕುದಿ ಬಂದ ನಂತರ ಒಂದೊಂದೇ ಮೊಟ್ಟೆಯನ್ನು ಒಡೆದು ಒಂದರ ಪಕ್ಕ ಒಂದರಂತೆ ಬಿಡಬೇಕು. ಮೊಟ್ಟೆ ಬೇಯುವವರೆಗೂ ಯಾವುದೇ ಕಾರಣಕ್ಕೂ ಕೈ ಆಡಿಸಬಾರದು. ಮೊಟ್ಟೆ ಬೆಂದ ನಂತರ 2 ಲೋಟ ನೀರು ಹಾಕಿ, ನೀರು ಕುದಿ ಬಂದ ನಂತರ ನೆನೆಸಿಟ್ಟ ಅಕ್ಕಿಯನ್ನು ಹಾಕಿ, ಕುಕರ್‌ ಮುಚ್ಚಳ ಮುಚ್ಚಿ ಎರಡು ವಿಷಲ್‌ ಕೂಗಿಸಿ. ಈಗ ಬಿಸಿಬಿಸಿಯಾದ ರುಚಿಕರ ಮೊಟ್ಟೆ ಬಿರಿಯಾನಿ ಸವಿಯಲು ಸಿದ್ಧ. ಇದನ್ನು ಮೊಸರುಬಜ್ಜಿಯೊಂದಿಗೆ ಸೇವಿಸಬಹುದು.

***

ಕ್ಯಾಪ್ಸಿಕಂ ಮೊಟ್ಟೆ ಫ್ರೈ

ಬೇಕಾಗುವ ಸಾಮಗ್ರಿಗಳು: ಕ್ಯಾಪ್ಸಿಕಂ – 1, ಮೊಟ್ಟೆ – 5, ಈರುಳ್ಳಿ – 1, ಟೊಮೆಟೊ – 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ – 1 ಚಮಚ, ಗರಂ ಮಸಾಲ – 1 ಚಮಚ, ಅರಿಸಿನ – 1/4 ಚಮಚ, ಕಾಳುಮೆಣಸಿನ ಪುಡಿ – 1/2 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 2 ಚಮಚ

ಕ್ಯಾಪ್ಸಿಕಂ ಮೊಟ್ಟೆ ಫ್ರೈ
ಕ್ಯಾಪ್ಸಿಕಂ ಮೊಟ್ಟೆ ಫ್ರೈ

ತಯಾರಿಸುವ ವಿಧಾನ: ಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹುರಿದುಕೊಳ್ಳಿ. ನಂತರ ಟೊಮೆಟೊ ಮತ್ತು ಕ್ಯಾಪ್ಸಿಕಂ ಹಾಕಿ ಟೊಮೆಟೊ ಮೆತ್ತಗಾಗುವವರೆಗೂ ಕೈಯಾಡಿಸಿ. ಅದಕ್ಕೆ ಖಾರದಪುಡಿ, ಕೊತ್ತಂಬರಿ ಪುಡಿ, ಗರಂಮಸಾಲ, ಅರಿಸಿನ, ಮೆಣಸಿನ ಪುಡಿ ಹಾಕಿ ಹಸಿವಾಸನೆ ಹೋಗುವವರೆಗೂ ಹುರಿದುಕೊಳ್ಳಿ. ಈಗ ಹೆಚ್ಚಿಕೊಂಡ ಮೊಟ್ಟೆಯನ್ನು ಸೇರಿಸಿ 2 ನಿಮಿಷ ಮಿಶ್ರಣ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕ್ಯಾಪ್ಸಿಕಂ ಮೊಟ್ಟೆ ಫ್ರೈ ರೆಡಿ.

***

ಮೊಟ್ಟೆ ಮಸಾಲೆ

ಬೇಕಾಗುವ ಸಾಮಗ್ರಿಗಳು: ಮೊಟ್ಟೆ – 6, ಈರುಳ್ಳಿ – 1, ಟೊಮೆಟೊ – 2, ಬೆಳ್ಳುಳ್ಳಿ – 20 ಎಸಳು, ಶುಂಠಿ – 1 ಇಂಚು, ಗೋಡಂಬಿ – 20, ಖಾರದಪುಡಿ – 1 ಚಮಚ, ಕೊತ್ತಂಬರಿ ಪುಡಿ – 1 ಚಮಚ, ಗರಂ ಮಸಾಲೆ – 1 ಚಮಚ, ಜೀರಿಗೆ ಪುಡಿ – 1/2 ಚಮಚ, ಅರಿಸಿನ – 1/4 ಚಮಚ, ಕಸೂರಿಮೇಥಿ – 1 ಚಮಚ, ಎಣ್ಣೆ – 3 ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – ಸ್ವಲ್ಪ

ಮೊಟ್ಟೆ ಮಸಾಲೆ
ಮೊಟ್ಟೆ ಮಸಾಲೆ

ತಯಾರಿಸುವ ವಿಧಾನ: ಮೊಟ್ಟೆಯನ್ನು ಬೇಯಿಸಿಕೊಂಡು ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ, ಕಾದನಂತರ ಹೆಚ್ಚಿದ ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಗೋಡಂಬಿ ಹಾಕಿ ಎಲ್ಲವನ್ನೂ ಹುರಿದುಕೊಂಡು, ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲಿಗೆ ಉಳಿದ ಎಣ್ಣೆ ಹಾಕಿ, ಬಿಸಿಯಾದ ನಂತರ ಖಾರದಪುಡಿ, ಗರಂಮಸಾಲೆ, ಕೊತ್ತಂಬರಿ ಪುಡಿ, ಅರಿಸಿನ, ಜೀರಿಗೆ ಪುಡಿ ಹಾಕಿ ಫ್ರೈ ಮಾಡಿ, ರುಬ್ಬಿದ ಮಸಾಲೆಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎಣ್ಣೆ ಬಿಡುವವರೆಗೂ ಕುದಿಸಿ. ನಂತರ ಬೇಕಾಗುವಷ್ಟು ನೀರು ಬೆರೆಸಿ ಕುದಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಅರ್ಧ ಹೋಳುಗಳಾಗಿ ಮಾಡಿ ಮಸಾಲೆಗೆ ಹಾಕಿ ಐದು ನಿಮಿಷ ಕುದಿಸಿ. ಕೊನೆಯಲ್ಲಿ ಕಸೂರಿಮೇಥಿ, ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ರುಚಿಕರ ಮೊಟ್ಟೆ ಮಸಾಲೆ ಸಿದ್ಧ. ಇದನ್ನು ಚಪಾತಿ, ರೊಟ್ಟಿ, ದೋಸೆಗಳೊಂದಿಗೆ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT